ಹೊಸ ಓದು | ಕೆ ಪುಟ್ಟಸ್ವಾಮಿ ಅನುವಾದಿತ, ರ್‍ಯೂನೊಸುಕೆ ಅಕುತಗವ ಅವರ ಕತೆ 'ರಾಶೊಮಾನ್'

ಜಪಾನ್‍ನ ಆಧುನಿಕ ಕಥಾಸಾಹಿತ್ಯಕ್ಕೆ ನೂತನ ಶೈಲಿ, ನುಡಿಗಟ್ಟು ಪರಿಚಯಿಸಿದ ಮಹಾನ್ ಕತೆಗಾರ ರ್‍ಯೂನೊಸುಕೆ ಅಕುತಗವ (1892-1927). ಎರಡು ಮಹಾಯುದ್ಧಗಳ ಅವಧಿಯಲ್ಲಿ ತನ್ನ ಸಾಹಿತ್ಯ ಕೃಷಿಯ ಬೆಳೆ ತೆಗೆದ ಅಕುತಗವ, ಆವರೆಗೆ ಕಲ್ಪನಾಲೋಕದ ಅವಾಸ್ತವ ನಿರೂಪಣೆಯಲ್ಲಿ ಬಳಲಿದ್ದ ಜಪಾನಿನ ಕಥನ ಸಾಹಿತ್ಯಕ್ಕೆ ಹೊಸ ತಿರುವು ನೀಡಿದಾತ

ರಾಶೊಮಾನ್

ಜಪಾನ್‍ನ ಪುರಾತನ ರಾಜಧಾನಿಯಾದ ಕಿಯೊಟೊದ ದೊಡ್ಡ ದಿಡ್ಡೀಬಾಗಿಲು-ರಾಶೊಮಾನ್ (ರ್ಯಾಶೊಮಾನ್). ಅದು 106 ಅಡಿ ಅಗಲ 26 ಅಡಿ ಉದ್ದ. ಮೇಲೆ ಅಡ್ಡ ಕಂಬ. ಅದರ ಕಲ್ಲಿನ ಗೋಡೆ 75 ಅಡಿ ಎತ್ತರ. ಅಂದಿನ ಜಪಾನ್‍ನ ರಾಜಧಾನಿಯು ಕಿಯೊಟೊಗೆ ಸ್ಥಳಾಂತರಗೊಂಡಾಗ ಕ್ರಿ. ಶ. 789ರಲ್ಲಿ ಈ ದ್ವಾರವು ನಿರ್ಮಾಣವಾಯಿತು. ಪಶ್ಚಿಮ ಕಿಯೊಟೊ ಪ್ರದೇಶದ ಆಡಳಿತ ಕುಗ್ಗಿದ ಮೇಲೆ ಈ ದಿಡ್ಡೀಬಾಗಿಲು ಶಿಥಿಲವಾಯಿತು. ಅನೇಕ ಕಡೆ ಬಿರುಕು ಬಿಟ್ಟಿತು. ಅನಂತರ ಕಳ್ಳರು ಡಕಾಯಿತರಿಗೆ ಅಡಗುದಾಣವಾಯಿತು. ಅನಾಥ ಹೆಣಗಳಿಗೆ ಆಶ್ರಯ ನೀಡಿತು.

ಅದೊಂದು ಕೊರೆಯುವ ಸಂಜೆ. ಮಳೆ ನಿಲ್ಲುವುದನ್ನೇ ಕಾಯುತ್ತಾ ಸಮುರಾಯ್‍ನ ಸೇವಕನೊಬ್ಬ ರಾಶೊಮಾನ್ ದಿಡ್ಡೀ ಬಾಗಿಲ ಕೆಳಗೆ ನಿಂತಿದ್ದ.

ಆ ವಿಶಾಲವಾದ ದಿಡ್ಡಿ ಬಾಗಿಲಿನ ಚಾವಣಿಯಡಿ ಬೇರೆ ಯಾರೂ ಇರಲಿಲ್ಲ. ಅದರ ದೊಡ್ಡ ಕಂಬಕ್ಕೆ ಲೇಪಿಸಿದ್ದ ಕಡುಗೆಂಪು ಬಣ್ಣದ ಅರಗಿನ ಮೆರಗು ಅಲ್ಲಲ್ಲಿ ಕಿತ್ತು ಬಂದಿತ್ತು. ಅದೇ ಕಂಬದಲ್ಲಿ ಜೀರುಂಡೆಯೊಂದು ಕುಳಿತಿತ್ತು. ರಾಶೊಮಾನ್ ಬಾಗಿಲು ಸಜುಕು ರಸ್ತೆಯಲ್ಲಿರುವುದರಿಂದ, ನಾರಿನ ಟೋಪಿ ಧರಿಸಿದ ಅಥವಾ ರಾಜಮನೆತನಕ್ಕೆ ಸೇರಿದವರು ತೊಡುವ ಪೇಟಗಳನ್ನು ಧರಿಸಿದ ಅಥವಾ ಇತರೆ ಸಾಮಾನ್ಯ ಜನರೂ ಮಳೆಯಿಂದ ರಕ್ಷಿಸಿಕೊಳ್ಳಲು ಅದು ನಿಲ್ಲುವವರೆಗೆ ಆ ಚಾವಣಿಯಡಿಯಲ್ಲಿ ಆಶ್ರಯಪಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿರಲಿಲ್ಲ. ಆದರೆ ಆ ಸಂಜೆ ಅದರ ಹತ್ತಿರ ಈ ವ್ಯಕ್ತಿಯೊಬ್ಬನ ಹೊರತು ಬೇರೆ ಯಾರ ಸುಳಿವೂ ಇರಲಿಲ್ಲ.

ಕಳೆದ ಕೆಲ ವರ್ಷಗಳಿಂದ ಕಿಯೊಟೊ ನಗರವು ಅನೇಕ ಅವಘಡಗಳಿಗೆ ತುತ್ತಾಗಿತ್ತು. ಭೂಕಂಪ, ಬಿರುಗಾಳಿ, ಬೆಂಕಿ... ಹೀಗೆ. ಇವುಗಳಿಂದ ಕಿಯೊಟೊ ಅಪಾರವಾಗಿ ಧ್ವಂಸವಾಗಿತ್ತು. ಹಿರಿಯರು ಹೇಳುವ ಕತೆಗಳ ಪ್ರಕಾರ ಚಿನ್ನ, ಬೆಳ್ಳಿ ಅಥವಾ ಅರಗಿನ ಎಲೆಗಳು ಕಿತ್ತು ಬಂದಿದ್ದ ಬುದ್ಧನ ಮತ್ತು ಬೌದ್ಧರ ಇತರೆ ಮೂರ್ತಿಗಳನ್ನು ರಸ್ತೆ ಬದಿಯಲ್ಲಿ ರಾಶಿ ಹಾಕಿ ಸೌದೆಯಾಗಿ ಮಾರುತ್ತಿದ್ದರು. ಕಿಯೊಟೊದಲ್ಲಿ ಇಂಥ ಪರಿಸ್ಥಿತಿ ಇರುವಾಗ ರಾಶೊಮಾನ್ ದಿಡ್ಡೀ ಬಾಗಿಲನ್ನು ದುರಸ್ತಿ ಮಾಡುವುದು ಸಾಧ್ಯವಾಗದ ಕಾರ್ಯವಾಗಿತ್ತು. ಈ ವಿನಾಶದ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ನರಿಗಳು ಮತ್ತು ಇತರ ಕಾಡುಪ್ರಾಣಿಗಳು ದಿಡ್ಡೀಬಾಗಿಲಿನ ಅವಶೇಷಗಳಲ್ಲಿ ಮನೆ ಮಾಡಿಕೊಂಡಿದ್ದವು. ಕಳ್ಳರು, ದರೋಡೆಕೋರರಿಗೂ ಅಲ್ಲಿ ಆಶ್ರಯ ಸಿಕ್ಕಿತು. ಕ್ರಮೇಣ ಅನಾಥಶವಗಳನ್ನು ತಂದು ಅಲ್ಲಿ ಎಸೆದುಹೋಗುವುದು ಪದ್ಧತಿಯಾಯಿತು. ಕತ್ತಲಾದ ಮೇಲೆ ಭೂತ ಸಂಚಾರದ ಜಾಗದಂತಿದ್ದ ಆ ಪ್ರದೇಶದ ಹತ್ತಿರ ಹೋಗಲು ಯಾರಿಗೂ ಧೈರ್ಯವಿರಲಿಲ್ಲ.

ಎಲ್ಲಿಂದಲೋ ಕಾಗೆಗಳು ಹಿಂಡು ಹಿಂಡಾಗಿ ಇಲ್ಲಿಗೆ ಬರುತ್ತವೆ. ಹಗಲು ಹೊತ್ತಿನಲ್ಲಿ ದಿಡ್ಡೀಬಾಗಿಲಿನ ತುದಿಯ ಅಡ್ಡಕಂಬದ ಸುತ್ತಲೂ ಕರ್ಕಶವಾಗಿ ಕೂಗುತ್ತಾ ಕಾಗೆ ಹಿಂಡು ಸುತ್ತು ಹೊಡೆಯುತ್ತದೆ. ಸೂರ್ಯ ಮುಳುಗಿದ ನಂತರ ದಿಗಂತದ ಆಕಾಶವು ಕೆಂಪಾದಾಗ ಆ ಹಿನ್ನೆಲೆಯಲ್ಲಿ ಕಾಗೆಗಳ ಹಾರಾಟವು ಸಾಸಿವೆ ಬೀಜಗಳನ್ನು ಆಕಾಶಕ್ಕೆ ಎರಚಿದಂತೆ ದೂರಕ್ಕೆ ಕಾಣಿಸುತ್ತದೆ. ಆದರೆ ಆ ದಿನ ಒಂದು ಕಾಗೆಯೂ ಕಾಣಿಸಲಿಲ್ಲ. ಪ್ರಾಯಶಃ ಸೂರ್ಯ ಮುಳುಗಿ ಹೆಚ್ಚು ಹೊತ್ತಾಗಿರಬಹುದು. ಅಲ್ಲಲ್ಲಿ ಕಲ್ಲು ಪಾವಟಿಗೆಗಳು ಕಿತ್ತುಬರಲು ಆರಂಭಿಸಿದ್ದವು. ಕಲ್ಲು ಸಂದಿಯಲ್ಲಿ ಹುಲ್ಲು ತಲೆಯೆತ್ತಿತ್ತು. ನೀಲಿ ಕಿಮೋನೋ ಧರಿಸಿದ ಆ ಸೇವಕ ಏಳನೆಯ ಹಾಗೂ ಕೊನೆಯ ಪಾವಟಿಗೆಯ ಮೇಲೆ ಕುಳಿತು ಬೀಳುತ್ತಿದ್ದ ಮಳೆಯನ್ನು ನೋಡುತ್ತಿದ್ದ. ಬಲ ಕೆನ್ನೆಯ ಮೇಲೆ ನೋವು ಕೊಡುತ್ತಿದ್ದ ಮೊಡವೆಯತ್ತ ಅವನ ಗಮನ ಹರಿಯಿತು.

ಆಗಲೇ ಹೇಳಿದಂತೆ ಆ ಸೇವಕ ಮಳೆ ನಿಲ್ಲುವುದನ್ನು ಕಾಯುತ್ತಾ ಕುಳಿತಿದ್ದ. ಆದರೆ ಮಳೆ ನಿಂತ ಮೇಲೆ ಯಾವ ಕೆಲಸ ಮಾಡಬೇಕೆಂಬ ನಿರ್ದಿಷ್ಟ ಉದ್ದೇಶವೇನೂ ಇರಲಿಲ್ಲ. ಸಾಮಾನ್ಯವಾಗಿ ಮಳೆ ನಿಂತ ನಂತರ ತನ್ನ ಯಜಮಾನನ ಮನೆಗೆ ಹೋಗಬೇಕಿರುವುದು ರೂಢಿ. ಆದರೆ ಇಲ್ಲಿಗೆ ಬರುವ ಮುನ್ನ ಯಜಮಾನ ಅವನನ್ನು ಕೆಲಸದಿಂದ ಬಿಡಿಸಿದ್ದ. ಕಿಯೊಟೊ ನಗರದ ಶ್ರೀಮಂತಿಕೆಯು ಕ್ರಮೇಣ ಇಳಿಮುಖ ಕಂಡಿತ್ತು. ಇದರ ಪರಿಣಾಮವಾಗಿ ಅವನ ಯಜಮಾನ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಆ ಸೇವಕನನ್ನು ಬಿಡುಗಡೆ ಮಾಡಿದ್ದ. ಹಾಗಾಗಿ ಮಳೆಯಿಂದ ಸುತ್ತುವರೆದಿದ್ದ ಆತನಿಗೆ ಮುಂದೆನು ಮಾಡಬೇಕೆಂಬ ಕಲ್ಪನೆಯಿರಲಿಲ್ಲ. ಹೀಯಿನ್ ಶಕೆಯ ಈ ಸೇವಕನ ಖಿನ್ನತೆಗೆ ವಾತಾವರಣದ ಕೊಡುಗೆಯೂ ಇತ್ತು. ಎಡ ಹಗಲಿನಿಂದ ಬೀಳುತ್ತಲೇ ಇದ್ದ ಮಳೆಯು ನಿಲ್ಲುವ ಸೂಚನೆಗಳೇನೂ ಇರಲಿಲ್ಲ. ನಾಳೆಯಿಂದ ಬದುಕನ್ನು ಹೇಗೆ ಕಟ್ಟಿಕೊಳ್ಳುವುದು ಎಂಬ ಆಲೋಚನೆಯಲ್ಲಿ ಮುಳುಗಿ ಹೋಗಿದ್ದ. ಅವನ ನಿಷ್ಕರುಣ ಹಣೆ ಬರಹದ ವಿರುದ್ಧ ಅಸಹಾಯಕತೆ, ಅಸ್ಪಷ್ಟ ಯೋಚನೆಗಳು ಪ್ರತಿಭಟನೆ ಮಾಡುತ್ತಿದ್ದವು. ಗೊತ್ತು ಗುರಿಯಿಲ್ಲದ ಆತ ಸುಜಕು ರಸ್ತೆಯಲ್ಲಿ ಮಳೆಯ ಹನಿಗಳು ಮೂಡಿಸುತ್ತಿದ್ದ ಟಪಟಪ ಶಬ್ದವನ್ನು ಆಲಿಸುತ್ತಿದ್ದ.

Image

ರಾಶೊಮಾನ್ ದಿಡ್ಡೀಬಾಗಿಲನ್ನು ತನ್ನ ಹೊದಿಕೆಯಲ್ಲಿ ಅವುಚಿಕೊಂಡ ಮಳೆಯು ನಿಧಾನವಾಗಿ ತೀವ್ರವಾಗುತ್ತಾ ಒನಕೆಯ ಏಟಿನಂತೆ ಕುಟ್ಟತೊಡಗಿತು. ಮಳೆಯ ಆ ಶಬ್ದ ಅನತಿ ದೂರದವರೆಗೆ ಕೇಳಿಸುತ್ತಿತ್ತು. ಆತ ತಲೆಯೆತ್ತಿ ಮೇಲೆ ನೋಡಿದ. ದಿಡ್ಡೀ ಬಾಗಿಲಿನ ಚಾವಣಿಯಿಂದ ಹೊರಚಾಚಿದ್ದ ಹೆಂಚುಗಳ ತುದಿಯಲ್ಲಿ ಒಂದು ಮೋಡದ ಮೆದೆಯು ತಾನಾಗಿಯೇ ಇಳಿದು ಬರುತ್ತಿರುವುದನ್ನು ಕಂಡ.

ಈಗ ಅವನ ಮುಂದೆ ಹೆಚ್ಚು ಆಯ್ಕೆಗಳಿರಲಿಲ್ಲ. ತನ್ನ ಅಸಹಾಯಕ ಪರಿಸ್ಥಿತಿಯಿಂದಾಗಿ ನ್ಯಾಯದ ಮಾರ್ಗ ಇಲ್ಲವೇ ಅನ್ಯಾಯದ ಮಾರ್ಗವನ್ನು ಹಿಡಿಯಬೇಕಿತ್ತು. ಪ್ರಾಮಾಣಿಕ ದಾರಿಯನ್ನು ಹಿಡಿದರೆ, ಅಲ್ಲೇ ಆ ಗೋಡೆಯ ಬದಿಯಲ್ಲಿ ಅಥವಾ ಸಜುಕು ಗಟಾರದಲ್ಲಿ ಹಸಿವಿನಿಂದ ಸಾಯುವುದು ನಿಶ್ಚಿತವಾಗಿತ್ತು. ಅವನ ಹೆಣವನ್ನು ಬೀದಿ ನಾಯಿಯ ಹೆಣದಂತೆ ಎಳೆ ತಂದು ಇದೇ ಸ್ಥಳದಲ್ಲಿ ಎಸೆಯುತ್ತಿದ್ದರು. ಕದಿಯಲು ನಿರ್ಧರಿಸಿದರೆ... ಈ ಅಡ್ಡಹಾದಿಯ ಬಗ್ಗೆ ಅವನ ಮನಸ್ಸು ಪದೇ ಪದೇ ನಿರ್ಧರಿಸುತ್ತಿತ್ತು. ಅಂತಿಮವಾಗಿ ತಾನೊಬ್ಬ ಕಳ್ಳನಾಗಬೇಕೆಂದು ತೀರ್ಮಾನಿಸಿದ.

ಆದರೆ ಮತ್ತೆ ಮತ್ತೆ ಅಳುಕುಂಟಾಯಿತು. ಬೇರೆ ಆಯ್ಕೆಯೇ ತನಗಿಲ್ಲದಿರುವುದರಿಂದ ಕಳ್ಳನಾಗಲು ತೀರ್ಮಾನಿಸಿದರೂ, ತನ್ನ ತೀರ್ಮಾನವನ್ನು ಸಮರ್ಥಿಸಿಕೊಳ್ಳಲು ಅವನಲ್ಲಿ ಸಾಕಷ್ಟು ಧೈರ್ಯವಿರಲಿಲ್ಲ.

ಒಮ್ಮೆ ಭಯಂಕರವಾಗಿ ಸೀನಿದ ನಂತರ ಮೇಲೆದ್ದ. ಕಿಯೊಟೊದ ಸಂಜೆಯ ಚಳಿಗೆ ನಡುಗಿದ ಅವನ ದೇಹಕ್ಕೆ ಬೆಚ್ಚಗಿನ ಉಡುಪಿನ ಹಂಬಲವುಂಟಾಯಿತು. ಬಾಗಿಲಿನ ಕಂಬಗಳ ನಡುವೆ ಸಂಜೆಯ ಗಾಳಿ ಹುಯಿಲಿಡಿದು ನುಗ್ಗುತ್ತಿತ್ತು. ಬಾಗಿಲ ಕಂಬಕ್ಕೆ ಬಳಿದಿದ್ದ ಕಡುಗೆಂಪು ಬಣ್ಣದ ಅರಗಿನ ಲೇಪದ ಮೇಲೆ ಕುಳಿತಿದ್ದ ಜೀರುಂಡೆ ಅದಾಗಲೇ ಹಾರಿಹೋಗಿತ್ತು.

ಕತ್ತನ್ನು ಮುಂದೆ ಚಾಚಿ ಆತ ಬಾಗಿಲಿನ ಸುತ್ತಲೂ ನೋಡಿದ. ತೆಳುವಾದ ಒಳ ಉಡುಪಿನ ಮೇಲೆ ತೊಟ್ಟಿದ್ದ ತನ್ನ ಕಿಮೋನೋನಿನ ತೋಳುಗಳನ್ನು ಹಿಂದಕ್ಕೆ ಎಳೆದುಕೊಂಡ. ಗಾಳಿ ಮತ್ತು ಚಳಿಯಿಂದ ರಕ್ಷಣೆ ನೀಡಬಹುದಾದ ಮೂಲೆಯೊಂದರಲ್ಲಿ ಜಾಗ ದೊರೆತರೆ, ರಾತ್ರಿಯನ್ನು ಅಲ್ಲೇ ಕಳೆಯಬೇಕೆಂದು ನಿರ್ಧರಿಸಿದ. ದಿಡ್ಡೀಬಾಗಿಲಿನ ಮೇಲಕ್ಕೆ ಇರುವ ಗೋಪುರಕ್ಕೆ ಹೋಗುವ ಅರಗು ಲೇಪಿಸಿದ್ದ ಅಗಲವಾದ ಸೋಪಾನ ಪಂಕ್ತಿಯನ್ನು ಕಂಡ. ಅಲ್ಲಿ ಯಾರೂ ಇರುವುದಿಲ್ಲ. ಇದ್ದರೆ ಸತ್ತವರ ಹೆಣಗಳಿರಬೇಕು. ತನ್ನ ಖಡ್ಗವು ಒರೆಯಿಂದ ಜಾರಿಬೀಳದಂತೆ ಎಚ್ಚರಿಕೆ ವಹಿಸಿ ಸೋಪಾನ ಪಂಕ್ತಿಯ ಮೊದಲ ಪಾವಟಿಗೆಯ ಮೇಲೆ ಕಾಲಿರಿಸಿದ.

ಕೆಲವೇ ಸೆಕೆಂಡುಗಳಲ್ಲಿ ಆತ ಅರ್ಧದಷ್ಟು ಪಾವಟಿಕೆಗಳನ್ನು ಕ್ರಮಿಸಿದ್ದ. ಗೋಪುರದ ಮೇಲೆ ಏನೋ ಚಲಿಸಿದಂತಾಯಿತು. ಗೋಪುರದ ಮೇಲಕ್ಕೆ ಕರೆದೊಯ್ಯುವ ಆ ವಿಶಾಲ ಮೆಟ್ಟಿಲುಗಳ ಮೇಲೆ ಬೆಕ್ಕಿನಂತೆ ಮುದುರಿ ಆತ ಮತ್ತೊಂದು ಚಲನೆಯ ಸೂಚನೆಗಾಗಿ ಕಾಯುತ್ತಾ ನೋಡತೊಡಗಿದ. ಗೋಪುರದ ಮೇಲುಭಾಗದಿಂದ ಬರುತ್ತಿದ್ದ ಮಂದ ಬೆಳಕು ಆತನ ಬಲಗೆನ್ನೆಯ ಮೇಲೆ ಮಂಕಾಗಿ ಪ್ರತಿಫಲಿಸಿತು. ಕಪೋಲಕೇಶದ ಒರಟು ಕೂದಲಿನ ಅಡಿಯಲ್ಲಿ ಅವನಿಗೆ ಹಿಂಸೆ ಕೊಡುತ್ತಿದ್ದ ಮೊಡವೆ ಇದ್ದ ಕೆನ್ನೆ ಅದು. ಗೋಪುರದಲ್ಲಿ ಹೆಣಗಳು ಮಾತ್ರ ಇರಬಹುದೆಂದು ಆತ ನಿರೀಕ್ಷಿಸಿದ್ದ. ಅವನು ಕೆಲವೇ ಮೆಟ್ಟಿಲುಗಳನ್ನು ಏರಿದ್ದ, ಅಷ್ಟರಲ್ಲಿ ಮೇಲೆ ಬೆಂಕಿಯ ಬೆಳಕನ್ನು ಮತ್ತು ಯಾರೋ ಒಬ್ಬರು ನಡೆದಾಡಿದ್ದನ್ನು ಗಮನಿಸಿದ. ಕಂಪಿಸುವ ಸಣ್ಣ ಜ್ವಾಲೆಯ ಮಂದವಾದ, ಹಳದಿ ಬಣ್ಣದ ಬೆಳಕು ಚಾವಣಿಯಿಂದ ಇಳಿಬಿದ್ದಿದ್ದ ಜೇಡರಬಲೆಯ ಮೇಲೆ ಬಿದ್ದು ಅದು ಭಯಾನಕವಾಗಿ ಮಿನುಗುತ್ತಿತ್ತು. ರಶೋಮನ್ ಗೋಪುರದಲ್ಲಿ ಬೆಂಕಿ ಹೊತ್ತಿಸಿರುವ ಮನುಷ್ಯ ಎಂಥವನಿರಬಹುದು... ಅದೂ ಈ ಬಿರುಮಳೆಯಲ್ಲಿ? ಆ ಅಪರಿಚಿತ, ಭೂತ... ಅವನಲ್ಲಿ ನಡುಕ ತರಿಸಿತು.

ಈ ಪುಸ್ತಕ ಓದಿದ್ದೀರಾ?: ಹೊಸ ಓದು | ಜಿ ಎನ್ ರಂಗನಾಥ ರಾವ್ ಅವರ 'ಆ ಪತ್ರಿಕೋದ್ಯಮ' ಪುಸ್ತಕದ ಆಯ್ದ ಭಾಗ

ಉಡದಂತೆ ಸದ್ದು ಮಾಡದೇ, ಆ ಸೇವಕ ಆ ಕಡಿದಾದ ಪಾವಟಿಗೆಗಳನ್ನು ತೆವಳುತ್ತಾ ಏರಿ ಗೋಪುರದ ಉಪ್ಪರಿಗೆ ತಲುಪಿದ. ಕಾಲು ಮತ್ತು ಕೈಗಳನ್ನು ಊರಿ ಸಾಧ್ಯವಾದಷ್ಟು ಕುತ್ತಿಗೆಯನ್ನು ಮುಂದಕ್ಕೆ ಚಾಚಿ ಹೆದರಿಕೆಯಿಂದ ಗೋಪುರದೊಳಕ್ಕೆ ಇಣುಕಿದ.

ಜನರು ಮಾತನಾಡಿಕೊಳ್ಳುತ್ತಿದ್ದಂತೆ ಅಲ್ಲಿನ ನೆಲದ ಮೇಲೆ ಅನೇಕ ಹೆಣಗಳು ಅಡ್ಡಾದಿಡ್ಡಿಯಾಗಿ ಬಿದ್ದಿದ್ದವು. ಬೆಂಕಿಯ ಬೆಳಕು ತುಂಬಾ ಮಂಕಾಗಿದ್ದರಿಂದ, ಆ ಹೆಣಗಳ ಸಂಖ್ಯೆಯನ್ನು ಎಣಿಸಲು ಅವನಿಗಾಗಲಿಲ್ಲ. ಕೆಲವು ಹೆಣಗಳಿಗೆ ಉಡುಪಿದ್ದು, ಹಲವು ಬೆತ್ತಲೆಯಾಗಿ ಬಿದ್ದಿರುವುದನ್ನು ಮಾತ್ರ ಗುರುತಿಸಿದ. ಅವುಗಳಲ್ಲಿ ಕೆಲವು ಮಹಿಳೆಯರ ಹೆಣಗಳಿದ್ದವು. ಎಲ್ಲ ಹೆಣಗಳು ಬಾಯಿ ತೆರೆದು ಸೋಮಾರಿಗಳಂತೆ ಆಲಸಿಯಾಗಿ ಬಿದ್ದಿದ್ದವು. ಅಥವಾ ಕೈಗಳನ್ನು ಅಗಲವಾಗಿ ಚಾಚಿ ಮಣ್ಣಿನ ಬೊಂಬೆಗಳಂತೆ ನಿಶ್ಚಲವಾಗಿದ್ದವು. ಅವು ಎಂದಾದರೂ ಬದುಕಿದ್ದಿರಬಹುದೇ ಎಂದು ಸಂದೇಹಪಡುವಷ್ಟು ನಿಶ್ಚಲ ಮತ್ತು ಪ್ರಶಾಂತವಾಗಿ ಅವೆಲ್ಲ ಮಲಗಿದ್ದವು. ಅವುಗಳ ಭುಜ, ಎದೆ ಮತ್ತು ಮುಂಡಭಾಗ ಮಾತ್ರ ಆ ಮಂದ ಬೆಳಕಿನಲ್ಲಿ ಎದ್ದು ಕಾಣುತ್ತಿದ್ದವು. ಕೊಳೆತಿದ್ದ ಹೆಣಗಳ ದುರ್ವಾಸನೆಯು ಅವನ ಕೈಯನ್ನು ಮೂಗಿನ ಹತ್ತಿರ ದೂಡಿತ್ತು.

ಅವನು ತಲೆ ಎತ್ತಿದ ಮರುಕ್ಷಣವೇ ಅವನ ಕೈಗಳು ಜಾರಿದ್ದವು. ಹೆಣ ತಿನ್ನುವ ಪಿಶಾಚಿಯಂತಿದ್ದ ಒಂದು ಜೀವಂತ ರೂಪವು ಒಂದು ಹೆಣದ ಮುಂದೆ ಬಾಗಿ ನೋಡುತ್ತಿರುವ ದೃಶ್ಯ ಗೋಚರಿಸಿತ್ತು. ಆ ರೂಪವು ಕೃಶವಾದ, ಬಿಳಿಗೂದಲಿನ, ಸನ್ಯಾಸಿಯಂತಹ ಮುದುಕಿಯಂತೆ ಕಂಡಿತು. ಬಲ ಕೈಯಲ್ಲಿ ಪೈನ್ ಮರದ ದೊಂದಿಯನ್ನು ಹಿಡಿದು ಆಕೆ ಕಪ್ಪು ಬಣ್ಣದ ಉದ್ದಗೂದಲಿನ ಹೆಣದ ಮುಖವನ್ನು ದಿಟ್ಟಿಸಿ ನೋಡುತ್ತಿದ್ದಳು.

ಕುತೂಹಲಕ್ಕಿಂತ ಹೆಚ್ಚಾಗಿ ಭೀತಿ ಅವನನ್ನು ಆವರಿಸಿಕೊಂಡಿತ್ತು. ಒಂದು ಕ್ಷಣ ಉಸಿರಾಡುವುದನ್ನೇ ಮರೆತ. ಅವನ ತಲೆಗೂದಲು, ದೇಹದ ರೋಮ ರೋಮಗಳೆಲ್ಲ ಸೆಟೆದು ನಿಂತಂತಾಯಿತು. ಭೀತಿಯಿಂದ ಅವನು ನೋಡುತ್ತಿದ್ದಂತೆ ಮುದುಕಿಯು ಬೆಂಕಿಯ ದೊಂದಿಯನ್ನು ನೆಲದ ಹಲಗೆಯ ಮೇಲಿಟ್ಟ ಕೋತಿಯೊಂದು ತನ್ನ ಮಗುವಿನ ತಲೆಯಲ್ಲಿ ಹೇನು ಹೆಕ್ಕುವ ರೀತಿಯಲ್ಲಿ ಹೆಣದ ತಲೆಯಿಂದ ಉದ್ದ ಕೂದಲನ್ನು ಒಂದೊಂದಾಗಿ ಕೀಳತೊಡಗಿತು. ಆಕೆಯ ಕೈಗಳ ಚಲನೆಯ ಜೊತೆಯಲ್ಲಿಯೇ ಸರಾಗವಾಗಿ ಕೂದಲುಗಳು ಹೊರಬರತೊಡಗಿದವು.

ಒಂದೊಂದು ಬಾರಿ ಕೂದಲನ್ನು ಕಿತ್ತನಂತರ ಹಾಗೆಯೇ ಅವನ ಎದೆಯಲ್ಲಿನ ಭಯ ಕರಗತೊಡಗಿತು. ಆ ಮುದುಕಿಯ ಬಗೆಗಿನ ದ್ವೇಷ ಹೆಚ್ಚಾಗತೊಡಗಿತು. ಅದು ದ್ವೇಷವನ್ನು ಮೀರಿ ಎಲ್ಲ ಕೆಡುಕುಗಳ ವಿರುದ್ಧದ ವೈರತ್ವವಾಗಿ ಘನವಾಯಿತು. ಆ ಕ್ಷಣದಲ್ಲಿ ಯಾರಾದರೂ ನೀನು ಹಸಿವಿನಿಂದ ಸಾಯಲು ಬಯಸುತ್ತೀಯೋ ಅಥವಾ ಕಳ್ಳನಾಗಬಯಸುವೆಯೋ ಎಂದು ಪ್ರಶ್ನಿಸಿದ್ದರೆ (ಇದೇ ಪ್ರಶ್ನೆ ಕೆಲ ಸಮಯದ ಹಿಂದಷ್ಟೆ ಅವನ ಮುಂದೆ ಬಂದಿತ್ತು) ಆತ ಸಾವನ್ನು ಆಯ್ಕೆ ಮಾಡಿಕೊಳ್ಳಲು ಹಿಂದುಮುಂದು ನೋಡುತ್ತಿರಲಿಲ್ಲ. ಕೆಡುಕಿನ ಬಗೆಗಿನ ಅವನ ದ್ವೇಷವು ಆ ಮುದುಕಿಯು ನೆಲದ ಮೇಲೆ ಹಾಕಿದ್ದ ಪೈನ್ ದೊಣ್ಣೆಯ ದೊಂದಿಯಂತೆ ಜ್ವಾಲೆ ಸೂಸತೊಡಗಿತು. ಹಾಗಾಗಿ ಈಗ ಸ್ವಲ್ಪ ಹೊತ್ತಿಗೆ ಮೊದಲು ತಾನು ಕಳ್ಳನಾಗಲು ನಿರ್ಧರಿಸಿದ ವಿಷಯ ಮರೆತುಹೋಗಿತ್ತು

Image

ಆ ಹೆಣದ ಕೂದಲನ್ನು ಹಣ್ಣು ಹಣ್ಣು ಮುದುಕಿ ಯಾಕೆ ಕೀಳುತ್ತಿರಬಹುದೆಂದು ಆತನಿಗೆ ಸ್ಪಷ್ಟವಾಗಲಿಲ್ಲ. ಹಾಗಾಗಿ ಆಕೆಯ ಕೃತ್ಯ ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂದು ನಿರ್ಧರಿಸಲು ಸಹ ಅವನಿಗಾಗಲಿಲ್ಲ. ಆದರೆ ಅವನ ದೃಷ್ಟಿಯಲ್ಲಿ ಈ ಬಿರುಮಳೆಯ ರಾತ್ರಿಯಲ್ಲಿ, ರಾಶೊಮಾನ್ ದಿಡ್ಡೀಬಾಗಿಲಿನ ಗೋಪುರದಲ್ಲಿ, ಹೆಣದ ತಲೆಯಿಂದ ಕೂದಲನ್ನು ಕೀಳುವ ಕಾಯಕ ಮನ್ನಿಸಲಾಗದ ಕೃತ್ಯವಾಗಿತ್ತು.

ಆಗ, ಕಾಲಿಗೆ ಶಕ್ತಿಯನ್ನು ತುಂಬಿಕೊಂಡು, ಪಾವಟಿಗೆಯಿಂದ ಮೇಲೆದ್ದ. ಖಡ್ಗವನ್ನು ಕೈಯಲ್ಲಿ ಹಿಡಿದು ಮುನ್ನುಗ್ಗಿ ಆ ಮುದುಕಿಯ ಮುಂದೆ ನಿಂತ. ಅವನನ್ನು ತಿರುಗಿ ನೋಡಿದ ಆ ಮುದಿಗೊಡ್ಡು ನೆಲದಿಂದ ಪುಟಿದೆದ್ದು ನಿಂತಿತು. ಕಣ್ಣಿನಲ್ಲಿ ಭೀತಿ ತುಂಬಿ ತುಳುಕಿತ್ತು. ಒಂದು ಕ್ಷಣ ನಿಶ್ಚಲಳಾದಳು. ಬಳಿಕ ಇಳಿದು ಹೋಗಲು ಪಾವಟಿಗೆಯತ್ತ ಕಿರುಚುತ್ತಾ ಧಾವಿಸಿದಳು.

"ಏ ಪಾಪಿ! ಎಲ್ಲಿಗೆ ಹೋಗುತ್ತಿದ್ದೀಯಾ?" ಎಂದು ಕಿರುಚಿ ತನ್ನಿಂದ ತಪ್ಪಿಸಿಕೊಂಡು ಹೋಗುತ್ತಿದ್ದ, ಮುದುಕಿಗೆ ಅಡ್ಡವಾಗಿ ನಿಂತ. ಆಕೆ ಭಯದಿಂದ ನಡುಗುತ್ತಿದ್ದಳು. ಆದರೂ ತಪ್ಪಿಸಿಕೊಳ್ಳಲು ಆಕೆ ಪ್ರಯತ್ನಿಸಿದಳು. ಅವಳು ಹೋಗದಂತೆ ತಡೆಯಲು ಆತ ಅವಳನ್ನು ನೂಕಿದ. ಇಬ್ಬರೂ ಸೆಣೆಸಿದರು. ಹೆಣಗಳ ಮೇಲೆ ಬಿದ್ದರು. ಕೈಗಳನ್ನು ಪರಸ್ಪರ ಬಿಗಿಯಾಗಿ ಹಿಡಿದಿದ್ದರು. ಆದರೆ ಜಯಾಪಜಯ ನಿರ್ಧರಿಸಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಕ್ಷಣಮಾತ್ರದಲ್ಲಿ ಅವಳ ಕೈಯನ್ನು ತಿರುಚಿ ನೆಲಕ್ಕೆ ಕೂರುವಂತೆ ಮಾಡಿದ. ಅವಳ ಕೈಯೆಂದರೆ ಮೂಳೆ-ಚಕ್ಕಳ ಮಾತ್ರ. ಆ ಕೈಯಲ್ಲಿ ಕೋಳಿಯ ಕಾಲಿನಲ್ಲಿರುವ ಮಾಂಸಕ್ಕಿಂತ ಹೆಚ್ಚೇನೂ ಇರಲಿಲ್ಲ. ಆಕೆ ನೆಲದ ಮೂಲೆ ಕುಳಿತಾಗ ತಕ್ಷಣ ಅವನು ತನ್ನ ಖಡ್ಗವನ್ನು ತೆರೆದು ಬೆಳ್ಳಿ ಬಣ್ಣದ ಅಲುಗನ್ನು ಆಕೆಯ ಮೂಗಿಗೆ ಒತ್ತಿ ಹಿಡಿದ.

"ಈಗ ಹೇಳು, ಅಲ್ಲೇನು ಮಾಡುತ್ತಿದ್ದೆ? ಹೇಳದಿದ್ದರೆ ಈ ಖಡ್ಗ ಪ್ರಯೋಗಿಸಬೇಕಾಗುತ್ತೆ,” ಎಂದು ಒತ್ತಾಯಿಸಿದ.

ಆಕೆ ಮೌನವಾಗಿದ್ದಳು. ಅಪಸ್ಮಾರ ಬಡಿದವಳಂತೆ ನಡುಗುತ್ತಿದ್ದಳು. ಕಣ್ಣು ಗುಳಿಯಿಂದ ಹೊರಗೆ ಬಿದ್ದಂತೆ ಅವಳ ಕಣ್ಣುಗುಡ್ಡೆಗಳು ಮೆಡ್ಡರಿಸಿದವು. ತಿದಿಯೊತ್ತಿದಂತೆ ಏದುಸಿರು ಬಿಡುತ್ತಿದ್ದಳು. ಆ ಮುದುಕಿಯ ಪ್ರಾಣವೀಗ ಅವನ ಕೈಯಲ್ಲಿತ್ತು. ಒಂದು ಜೀವವನ್ನು ವಶಪಡಿಸಿಕೊಂಡ ಭಾವವೇ ಅವನ ಕುದಿಯುವ ಸಿಟ್ಟನ್ನು ತಣ್ಣಗಾಗಿಸಿತು. ಒಂದು ತಣ್ಣನೆಯ ಹೆಮ್ಮೆ ಮತ್ತು ತೃಪ್ತಿ ಮೂಡಿತು. ಆಕೆಯನ್ನು ದಿಟ್ಟಿಸಿ ಶಾಂತವಾದ ದನಿಯಲ್ಲಿ ಮಾತನಾಡಿದ.

“ನೋಡಿಲ್ಲಿ... ನಾನು ಉನ್ನತ ಪೊಲೀಸ್ ಅಧಿಕಾರಿಯಲ್ಲ. ಈ ಬಾಗಿಲನ್ನು ಹಾಯ್ದುಹೋಗುತ್ತಿದ್ದ ಹಾದಿಹೋಕ, ಅಷ್ಟೆ. ನಾನು ನಿನ್ನನ್ನು ಕಟ್ಟಿಹಾಕುವುದಿಲ್ಲ ಅಥವಾ ನಿನಗೇನೂ ಮಾಡುವುದಿಲ್ಲ. ಆದರೆ ನೀನು ಇಲ್ಲೇನು ಮಾಡುತ್ತಿದ್ದೆ ಎಂದು ಹೇಳಬೇಕು.”

ಈ ಪುಸ್ತಕ ಓದಿದ್ದೀರಾ?: ನ್ಯಾಯಮೂರ್ತಿ ಕೆ ಚಂದ್ರು ಅವರ 'ನನ್ನ ದೂರು ಕೇಳಿ' ಪುಸ್ತಕದ ಆಯ್ದ ಭಾಗ | ಪೊದುಂಬು ಹುಡುಗಿಯರು

ಆಗ ಆ ಮುದುಕಿಯು ತನ್ನ ಕಣ್ಣುಗಳನ್ನು ಇನ್ನೂ ಅಗಲಗೊಳಿಸಿದಳು. ಗಿಡುಗನ ಕೆಂಪುಕಣ್ಣಿನ ತೀಕ್ಷ್ಣ ದೃಷ್ಟಿಯಿಂದ ಅವನನ್ನು ದಿಟ್ಟಿಸಿದಳು. ಅವಳ ಮೂಗಿಗೆ ಸುರುಳಿ ಸುತ್ತುಕೊಂಡಿದ್ದ ತುಟಿಗಳನ್ನು ಚಲಿಸಿದಳು. ಆ ಚಲನೆ ಆಕೆ ಏನೋ ಅಗಿಯುತ್ತಿರುವಂತೆ ತೋರುತ್ತಿತ್ತು. ಚೂಪಾಗಿ ಮುಂಚಾಚಿದ್ದ ಅವಳ ಗೋಮಾಳೆಯು ಗಂಟಲಿನಲ್ಲಿ ಮೇಲಕ್ಕೂ ಕೆಳಕ್ಕೂ ಚಲಿಸಿತು. ಅನಂತರ ಕಾಗೆಯ ಕೂಗಿನಂತಹ ಕರ್ಕಶ ಶಬ್ದವು ಅವಳ ಗಂಟಲಿನಿಂದ ಹೊರಟಿತು.

"ನಾನು ಕೂದಲನ್ನು... ಕೂದಲನ್ನು... ಯಾಕೆ ಕೀಳುತ್ತಿದ್ದೆ ಅಂದ್ರೆ... ಚೌರಿ ಮಾಡಲು...”

ಆಕೆಯ ಉತ್ತರ ಅವನ ಮುಖಾಮುಖಿಯಲ್ಲಿ ಉದ್ಭವವಾಗಿದ್ದ ಎಲ್ಲ ಸಂದೇಹಗಳನ್ನು ನಿವಾರಿಸಿತು. ಒಂದು ಬಗೆಯ ನಿರಾಶೆಯನ್ನು ಮೂಡಿಸಿತು. ಇದ್ದಕ್ಕಿದ್ದಂತೆ ಅವಳೀಗ ಅವನ ಕಾಲಬುಡದಲ್ಲಿ ನಡುಗುತ್ತಿರುವ ಮುದುಕಿ ಮಾತ್ರವಾಗಿದ್ದಳು. ಹೆಣ ತಿನ್ನುವ ಪಿಶಾಚಿಯಲ್ಲ. ಒಂದಿಷ್ಟು ಕೂಳು ಸಂಪಾದನೆಗೆ ಹೆಣದ ಕೂದಲನ್ನು ಕಿತ್ತು ಚೌರಿ ಮಾಡಿ, ಮಾರಿ ಬದುಕುವ ಮುದುಕಿ ಮಾತ್ರ. ತಿರಸ್ಕಾರ ಭಾವವೊಂದು ಅವನನ್ನು ಆವರಿಸಿತು. ಭೀತಿ ಅವನ ಹೃದಯವನ್ನು ತೊರೆದಿತ್ತು. ಹಿಂದೆ ಇದ್ದ ದ್ವೇಷ ಹೃದಯವನ್ನು ಪ್ರವೇಶಿಸಿತು. ಅವನಲ್ಲಾಗುತ್ತಿದ್ದ ಬದಲಾವಣೆಯನ್ನು, ಭಾವನೆಗಳನ್ನು ಮುದುಕಿ ಗ್ರಹಿಸಿದಳು. ಹೆಣದಿಂದ ಕಿತ್ತಿದ್ದ ಕೂದಲನ್ನು ಇನ್ನೂ ಕೈಯಲ್ಲಿಯೇ ಹಿಡಿದುಕೊಂಡಿದ್ದ ಮುದುಕಿಯು ತನ್ನ ಅಸ್ಪಷ್ಟ ಗೊಗ್ಗರು ಧ್ವನಿಯಲ್ಲಿ ಹೇಳತೊಡಗಿದಳು.

"ಹೆಣಗಳ ಕೂದಲನ್ನು ಕಿತ್ತು ಚೌರಿಯನ್ನು ಮಾಡುವುದು ಅತ್ಯಂತ ನೀಚಕಾರ್ಯ ಎಂದು ನಿನಗನಿಸಬಹುದು. ಆದರೆ ಈ ಹೆಣಗಳಿಗೆ ಇದಕ್ಕಿಂತ ಒಳ್ಳೆಯ ಗತಿ ಬರುವುದು ಸಾಧ್ಯವಿಲ್ಲ. ಈ ಸುಂದರ ಕಪ್ಪು ಕೂದಲನ್ನು ಕೀಳುತ್ತಿದ್ದೆನಲ್ಲ, ಈ ಹೆಂಗಸು ಕತ್ತರಿಸಿ ಒಣಗಿಸಿದ ಹಾವಿನ ಮಾಂಸವನ್ನು ಸೈನಿಕರ ಬ್ಯಾರಾಕಿನ ಹತ್ತಿರ ಒಣಮೀನು ಎಂದು ಮಾರುತ್ತಿದ್ದಳು. ಅವಳು ಪ್ಲೇಗಿನಿಂದ ಸಾಯದಿದ್ದರೆ ಈಗಲೂ ಅದನ್ನೇ ಮಾರುತ್ತಿದ್ದಳು. ಸೈನಿಕರು ಅವಳಿಂದ ಇಷ್ಟಪಟ್ಟು ಕೊಳ್ಳುತ್ತಿದ್ದರು. ಮತ್ತೆ ಆ ಮಾಂಸ ತುಂಬಾ ರುಚಿಯೆಂದು ಹೇಳುತ್ತಿದ್ದರು. ಆಕೆ ಮಾಡುತ್ತಿದ್ದದ್ದು ತಪ್ಪಲ್ಲ. ಯಾಕೆಂದರೆ ಹಾಗೆ ಮಾಡದಿದ್ದರೆ, ಅವಳು ಹಸಿವಿನಿಂದ ಸಾಯಬೇಕಿತ್ತು. ಬೇರೆ ದಾರಿಯೇ ಇರಲಿಲ್ಲ. ಬದುಕಲು ನಾನು ಈ ಕೆಲಸ ಮಾಡುತ್ತೇನೆಂದು ಅವಳಿಗೆ ತಿಳಿದಿದ್ದರೆ, ಆಕೆಯೇನೂ ಬೇಸರ ಮಾಡಿಕೊಳ್ಳುತ್ತಿರಲಿಲ್ಲ."

Image

ಅವನು ಖಡ್ಗವನ್ನು ಒರೆಗೆ ಸೇರಿಸಿದ. ಎಡಗೈಯಲ್ಲಿ ಹಿಡಿಯನ್ನು ಹಿಡಿದುಕೊಂಡೇ ಆಕೆಯ ಮಾತುಗಳನ್ನು ಗಮನವಿಟ್ಟು ಕೇಳಿಸಿಕೊಂಡ. ಅವನ ಬಲಗೈ ತನ್ನ ಬಲ ಕೆನ್ನೆಯ ಮೇಲಿದ್ದ ಮೊಡವೆಯನ್ನು ಸವರಿತು. ಆಕೆಯ ಮಾತುಗಳನ್ನು ಕೇಳುತ್ತಿದ್ದಂತೆ ಒಂದು ಬಗೆಯ ಧೈರ್ಯ ಅವನ ಎದೆಯಲ್ಲಿ ಉದ್ಭವವಾಯಿತು. ಸ್ವಲ್ಪ ಸಮಯದ ಕೆಳಗೆ ದಿಡ್ಡೀಬಾಗಿಲಿನ ಹತ್ತಿರ ಕುಳಿತಿದ್ದಾಗ ಇರದಂತಹ ಧೈರ್ಯವದು. ಆ ಮುದುಕಿಯನ್ನು ಹಿಡಿದುಕೊಂಡಾಗ ಅವನ ಎದೆಯಲ್ಲಿದ್ದ ಧೈರ್ಯದ ವಿರುದ್ಧ ದಿಕ್ಕಿಗೆ ಒಂದು ವಿಚಿತ್ರ ಶಕ್ತಿ ಅವನನ್ನು ನೂಕುತ್ತಿತ್ತು. ಹಸಿವಿನಿಂದ ಸಾಯಬೇಕೇ ಅಥವಾ ಕಳ್ಳನಾಗಬೇಕೇ ಎಂಬ ಗೊಂದಲ ಈಗ ಉಳಿದಿರಲಿಲ್ಲ. ಹಸಿವಿನಿಂದ ಸಾಯುವುದು ಅವನ ಮನಸ್ಸಿನಿಂದ ದೂರವಾಗಿತ್ತು. ಅಂಥ ಸಾವು ಅವನ ಕಟ್ಟಕಡೆಯ ಆಯ್ಕೆ ಮಾತ್ರವಾಗಿತ್ತು.

ಅವಳು ತನ್ನ ಮಾತನ್ನು ನಿಲ್ಲಿಸಿದ ಮೇಲೆ, "ನೀನು ಹೇಳುತ್ತಿರುವುದು ನಿಜವಾ? ಆ ಹೆಂಗಸಿಗೆ ಬೇಸರವಾಗುತ್ತಿರಲಿಲ್ಲವಾ?” ಎಂದು ವ್ಯಂಗ್ಯವಾಗಿ ಕೇಳಿದ. ಮೊಡವೆಯನ್ನು ಸವರುವುದನ್ನು ನಿಲ್ಲಿಸಿ ಆಕೆಯತ್ತ ಬಾಗಿ ಬಲಗೈಯಿಂದ ಆಕೆಯ ಕುತ್ತಿಗೆಯನ್ನು ಬಲವಾಗಿ ಹಿಡಿದು ಕಟುವಾಗಿ ಹೇಳಿದ: "ಹಾಗಾದರೆ ನಿನ್ನನ್ನು ಸುಲಿಯುವುದೇ ಸರಿಯಾದ ಕೆಲಸ. ಇಲ್ಲದಿದ್ದರೆ ನಾನು ಹಸಿವಿನಿಂದ ಸಾಯಬೇಕಾಗುತ್ತದೆ."

ಆತ ಅವಳ ದೇಹದಿಂದ ಉಡುಪನ್ನು ಹರಿದು ಕಿತ್ತುಕೊಂಡ. ಅವನ ಕಾಲುಗಳನ್ನು ಹಿಡಿದು ಹೆಣಗಾಡುತ್ತಿದ್ದ ಅವಳು ಹೆಣಗಳ ಮೇಲೆ ಬೀಳುವಂತೆ ಝಾಡಿಸಿ ಒದ್ದ. ಐದು ಹೆಜ್ಜೆಯಲ್ಲಿ ಆತ ಪಾವಟಿಗೆಯ ಹತ್ತಿರ ಬಂದಿದ್ದ. ಅವಳಿಂದ ಕಸಿದುಕೊಂಡ ಹಳದಿ ಬಟ್ಟೆಗಳನ್ನು ಕಂಕುಳಲ್ಲಿ ಇರುಕಿಕೊಂಡು ಮಿಂಚಿನಂತೆ ಆ ಕಡಿದಾದ ಪಾವಟಿಗೆಗಳನ್ನು ಇಳಿದು ಕತ್ತಲ ಗಹ್ವರದಲ್ಲಿ ಕರಗಿಹೋದ. ಅವನು ಇಳಿಯುತ್ತಿದ್ದಾಗ ಉಂಟಾದ ಗುಡುಗಿನಂಥ ಶಬ್ದ ಟೊಳ್ಳು ಗೋಪುರದಲ್ಲಿ ಪ್ರತಿಧ್ವನಿಸಿ ಅನಂತರ ಸ್ತಬ್ಧವಾಯಿತು.

ತುಸು ಸಮಯದ ನಂತರ ಆ ಮುದುಕಿ ಹೆಣಗಳ ನಡುವಿನಿಂದ ಎದ್ದಳು. ನರಳುತ್ತಾ, ಗೊಣಗುತ್ತಾ, ಕಂಪಿಸುತ್ತಿದ್ದ ದೊಂದಿಯ ಬೆಳಕಿನಲ್ಲಿ ಪಾವಟಿಗೆಯ ಹತ್ತಿರಕ್ಕೆ ತೆವಳಿದಳು. ಮುಖದ ಮೇಲೆ ಇಳಿಬಿದ್ದಿದ್ದ ಅವಳ ಬಿಳಿಗೂದಲಿನ ಮೂಲಕ ಆ ದೊಂದಿಯ ಬೆಳಕಿನಲ್ಲಿ ಕಾಣುತ್ತಿದ್ದ ಕೊನೆಯ ಪಾವಟಿಗೆಯನ್ನು ದಿಟ್ಟಿಸಿದಳು. ಅದರಾಚೆಗೆ ಇದ್ದದ್ದು ಗವ್ವೆನ್ನುವ ಕತ್ತಲು... ಅರಿವಿಗೆ ನಿಲುಕದ ಕತ್ತಲು.

ಅನಂತರ ಆ ಸೇವಕನಿಗೆ ಏನಾಯಿತು ಎಂಬುದು ಯಾರಿಗೂ ಗೊತ್ತಿಲ್ಲ.

(1915)

ಪುಸ್ತಕ: ರಾಶೊಮಾನ್ (ಕಥಾ ಸಂಕಲನ) | ಲೇಖಕರು: ರ್‍ಯೂನೊಸುಕೆ ಅಕುತಗವ | ಕನ್ನಡಕ್ಕೆ: ಕೆ ಪುಟ್ಟಸ್ವಾಮಿ | ಪ್ರಕಾಶನ: ಅಭಿನವ | ಪುಟ: 200 | ಬೆಲೆ: ₹ 200 | ಸಂಪರ್ಕ ಸಂಖ್ಯೆ: +91 94488 04905

ಮುಖ್ಯ ಚಿತ್ರ: ಅಕಿರಾ ಕುರೊಸಾವಾ ಅವರ 'ರಾಶೊಮಾನ್' ಸಿನಿಮಾದ ದೃಶ್ಯ
ನಿಮಗೆ ಏನು ಅನ್ನಿಸ್ತು?
3 ವೋಟ್