ಬಿಜೆಪಿ ಬೆಂಬಲಿಸಿದ್ದಕ್ಕೆ ಮುಸ್ಲಿಂ ಕುಟುಂಬದ ಮೇಲೆ ಹಲ್ಲೆ

  • ಕುಟುಂಬದೊಂದಿಗೆ ಬಿಜೆಪಿ ಸೇರಲು ಮುಂದಾಗಿದ್ದ ಯುವಕ
  • ಘಟನೆಯಲ್ಲಿ ನಾಲ್ವರಿಗೆ ಗಾಯ - ಐವರ ಬಂಧನ

ಬಿಜೆಪಿಯನ್ನು ಬೆಂಬಲಿಸಿದ್ದಕ್ಕಾಗಿ ಮುಸ್ಲಿಂ ಕುಟುಂಬವೊಂದಕ್ಕೆ ಸ್ಥಳೀಯರು ಅಮಾನುಷವಾಗಿ ಥಳಿಸಿರುವ ಘಟನೆ ಉತ್ತರಾಖಂಡದ ಉಧಮ್‌ಸಿಂಗ್‌ ನಗರ ಜಿಲ್ಲೆಯಲ್ಲಿ ನಡೆದಿದೆ. 

ಜಿಲ್ಲೆಯ ರುದ್ರಪುರನಗರದಲ್ಲಿ ಏಪ್ರಿಲ್‌ 5 ರಂದು ಘಟನೆ ನಡೆದಿದ್ದು, ಏಪ್ರಿಲ್‌ 7 ರಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಮುಸ್ಲಿಂ ಸಮುದಾಯದ ಯುವಕ ಅನೀಸ್‌ ಮಿಯಾನ್‌ ಎಂಬುವವರು ಬಿಜೆಪಿ ಕಾರ್ಯಕರ್ತರಾಗಿದ್ದಾರೆ. ಅವರು ತಮ್ಮ  ಇಡೀ ಕುಟುಂಬದ ಸದಸ್ಯರನ್ನು ಏಪ್ರಿಲ್‌ 5 ರಂದು ಬಿಜೆಪಿಗೆ ಸೇರಿಸಲು ಮುಂದಾಗಿದ್ದರು. ಇದನ್ನು ವಿರೋಧಿಸಿದ ಅಕ್ಕಪಕ್ಕದ ಮನೆಯವರು ಅವರಿಗೆ ಥಳಿಸಿದ್ದಾರೆ ಎನ್ನಲಾಗಿದೆ.

ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ. ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸ್‌ ಅಧಿಕಾರಿ ಸತೀಶ್‌ ಕಪ್ರಿ, ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ತಲೆ ಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. 

ಮಿಯಾನ್‌ ಅವರು ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದ್ದರು. ಆ ಸಂದರ್ಭದಲ್ಲಿಯೂ ನೆರೆಹೊರೆಯವರು ಆತನಿಗೆ ಬೆದರಿಕೆ ಹಾಕಿದ್ದಾಗಿ ಮಿಯಾನ್ ಕುಟುಂಬವು ದೂರಿದೆ ಎಂದು ಪೊಲೀಸರು ಹೇಳಿದ್ದಾರೆ.  

ಇದನ್ನು ಓದಿದಿರಾ?: ತಜ್ಞರಿಗೆ 5 ಪ್ರಶ್ನೆ | ತಲೆಗೂದಲು ಉದುರುವ ಸಮಸ್ಯೆ 'ಅಲೋಪೇಸಿಯ ಏರಿಯೇಟ'

ಕಳೆದ ತಿಂಗಳು ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರ ನಡೆಸಿ, ವಿಜಯೋತ್ಸವ ಆಚರಿಸಿದ್ದಕ್ಕಾಗಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಆತನ ನೆರೆಹೊರೆಯವರೇ ಹೊಡೆದು ಕೊಂದಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180