ಮುರುಘಾ ಶ್ರೀ ಪ್ರಕರಣ | ಮಠಕ್ಕೆ ಆಡಳಿತಾಧಿಕಾರಿ ನೇಮಕವನ್ನು ಸಮರ್ಥಿಸಿಕೊಂಡ ರಾಜ್ಯ ಸರ್ಕಾರ

  • ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ 
  • ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ

ಚಿತ್ರದುರ್ಗದ ಮುರುಘ ಬೃಹನ್ಮಠಕ್ಕೆ ಸೇರಿದ ಕೋಟ್ಯಂತರ ಆಸ್ತಿ ಮತ್ತು ವಿದ್ಯಾಸಂಸ್ಥೆಗಳನ್ನು ನೊಡಿಕೊಳ್ಳಲು ಆಡಳಿತಾಧಿಕಾರಿ ನೇಮಕ ಮಾಡಿರುವ ತನ್ನ ಕ್ರಮವನ್ನು ಸರ್ಕಾರವು ಹೈಕೋರ್ಟ್‌ನಲ್ಲಿ ಸಮರ್ಥನೆ ಮಾಡಿಕೊಂಡಿದೆ.

ಅಪ್ರಾಪ್ತ ಬಾಲಕೀಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿ ಶಿವಮೂರ್ತಿ ಮುರುಘಾ ರಾಜೇಂದ್ರ ಶರಣರು ಜೈಲು ಸೇರಿದ್ದಾರೆ. ಹೀಗಾಗಿ, ಮಠದ ಆಡಳಿತವನ್ನು ನೋಡಿಕೊಳ್ಳಲು ಸರ್ಕಾರವು ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್ ವಸ್ತ್ರದ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿದೆ.

ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನ್ಯಾಯಪೀಠವು ವಿಚಾರಣೆ ನಡೆಸುತ್ತಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ, “ಆರೋಪಿ ಮುರುಘಾ ಶ್ರೀಗಳಿಂದ ನೇಮಕವಾಗಿದ್ದ ಬಸವಪ್ರಭು ಸ್ವಾಮೀಜಿ ಅವರು ಮಠಕ್ಕೆ ಸೇರಿದ ಲಕ್ಷಾಂತರ ರೂಪಾಯಿಯನ್ನು ಪಡೆದುಕೊಂಡಿದ್ದಾರೆ. ಆದರೆ, ಇದಕ್ಕೆ ಯಾವುದೇ ಲೆಕ್ಕ ಕೊಟ್ಟಿಲ್ಲ ಎಂಬ ಅಂಶ ಗೊತ್ತಾಗಿದೆ” ಎಂದು ಗಂಭೀರ ಆರೋಪ ಮಾಡಿದರು.

“ಇಂತಹ ಪ್ರಕರಣಗಳು ಮಠದಲ್ಲಿ ಮತ್ತೆ ಮತ್ತೆ ಸಂಭವಿಸಬಾರದು ಹಾಗೂ ಮಠದ ಆಸ್ತಿ ಬೇರೊಬ್ಬರ ಪಾಲಾಗಬಾರದು ಎನ್ನುವ ಉದ್ದೇಶದಿಂದ ಸರ್ಕಾರವು ಆಡಳಿತಾಧಿಕಾರಿಯನ್ನು ಸರ್ಕಾರ ನೇಮಿಸಿದೆ” ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

ಇದಕ್ಕೆ ದನಿಗೂಡಿಸಿದ ವಸ್ತ್ರದ ಪರ ಹಿರಿಯ ವಕೀಲ ಗಂಗಾಧರ ಗುರುಮಠ ಮಾತನಾಡಿ, "ಹೌದು ಸ್ವಾಮಿ, ಹಣಪಡೆದಿರುವ ಬಗ್ಗೆ ವಿವರಣೆ ನೀಡುವಂತೆ ಬಸವಪ್ರಭು ಅವರಿಗೆ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್ ವಸ್ತ್ರದ ಕೇಳಿದರೆ, 'ಈ ವಿಷಯ ಹೈಕೋರ್ಟ್‌ನಲ್ಲಿದೆ, ಅದನ್ನು ಕೇಳುವುದಕ್ಕೆ ನೀವು ಯಾರು’ ಎಂದು ಬಸವಪ್ರಭು ಕಠಿಣ ಉತ್ತರ ನೀಡಿದ್ದಾರೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? : ಮುರುಘಾ ಶ್ರೀ ಪ್ರಕರಣ | ಮಠಕ್ಕೆ ಉಸ್ತುವಾರಿ ಸ್ವಾಮಿ ನೇಮಿಸಲು ಶಿವಮೂರ್ತಿ ಸ್ವಾಮಿಗೆ ಏನು ಅಧಿಕಾರ? ಹೈಕೋರ್ಟ್ ಪ್ರಶ್ನೆ

ವಾದವನ್ನು ಆಲಿಸಿ ಸಿಟ್ಟಾದ ನ್ಯಾಯಮುರ್ತಿಗಳು, ‘ಯಾರು ಆ ಬಸವಪ್ರಭು? ಲಕ್ಷಾಂತರ ಹಣ ಹೇಗೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದಕ್ಕೆ ನಿಮ್ಮ ಬಳಿ ಏನು ಸಾಕ್ಷ್ಯವಿದೆ’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಅಡ್ವೊಕೇಟ್ ಜನರಲ್ ಮತ್ತು ಗಂಗಾಧರ ಗುರುಮಠ, “ದಾಖಲೆಗಳು ಸದ್ಯಕ್ಕೆ ನಮ್ಮ ಬಳಿ ಇಲ್ಲ, ಶೇಖರಿಸುವ ಪ್ರಯತ್ನ ಮಾಡುತ್ತಿದ್ದೇವೆ” ಎಂದರು. 

ನ್ಯಾಯಮೂರ್ತಿಗಳು, "ನಿವೃತ್ತ ಐಎಎಸ್ ಅಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ನೇಮಿಸಿದ್ದೀರಲ್ಲವೇ? ಅವರಿಗೆ ಇದರ ಬಗ್ಗೆ ಸಂಪೂರ್ಣ ವಿವರ ಸಂಗ್ರಹಿಸಲು ಸಾಧ್ಯವಾಗಿಲ್ಲವೇ? ನೀವು ಇಂತಹ ಗಂಭೀರ ಆರೋಪ ಮಾಡುವಾಗ ಮಾರುಕಟ್ಟೆಯಲ್ಲಿ ನಿಂತು ಆರೋಪಿಸಿದಂತೆ ಆಗಬಾರದು. ಸೂಕ್ತ ದಾಖಲೆ ಸಲ್ಲಿಸಿ ನಂತರ ವಾದ ಮಂಡಿಸಿ" ಎಂದು ಎಚ್ಚರಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app