ಜಾಗರ | ತೇಜಸ್ವಿ ಲೋಕದ ಅಪೂರ್ವ ಮನುಷ್ಯರು - ಸೂರಾಚಾರಿ ಮತ್ತು ಗೌರಿ

TEJASWI

ಆ ನಾಲ್ಕು ಹಳ್ಳಿಗಳು ರಾಜಕಾರಣಿಗಳ ಆಟಗಳಿಗೂ ಸವಾಲಾಗಿದ್ದವು. ‘ಹತ್ತಕ್ಕೆ ಏರದೆ ನಾಲ್ಕಕ್ಕೆ ಇಳಿಯದೆ ಲಾಭವಿಲ್ಲದೆ ನಷ್ಟವರಿಯದ ಜನ ಆ ಹಳ್ಳಿಗಳವರು. ಸುಮ್ಮನೆ ಕಾಲ ಕಳೆಯಲು ನಡೆಸುವ ವ್ಯವಹಾರಗಳಂತೆ, ಅವರವು.’ ಚುನಾವಣೆ ಕಾಲದಲ್ಲಿ ಅವರಿಗೆ ಏನು ‘ಪ್ರಲೋಭನೆ ಒಡ್ಡಿ ಓಟು ಕಸಿಯಬೇಕೆಂಬುದೇ ಅಭ್ಯರ್ಥಿಗಳಿಗೆ ಒಂದು ಸಮಸ್ಯೆಯಾಗಿತ್ತು!

‘ಅವನತಿ’ ಕತೆಯಲ್ಲಿನ ಸೂರಾಚಾರಿಯು, ಅಸಾಮಾನ್ಯ ಕಲೆಗಾರಿಕೆ, ಶ್ರೇಷ್ಠ ಕಲಾವಂತಿಕೆಯನ್ನು ತನ್ನ ಕೈಗಳಲ್ಲಿ ಸಿದ್ಧಿಸಿಕೊಂಡಿದ್ದವನು, ಕತೆಯ ಕೊನೆಯಲ್ಲಿ ಕ್ಷುದ್ರನಾಗಿಬಿಡುತ್ತಾನೆ. ಅದೂ ಮನಃಪೂರ್ವಕವಾಗಿ ಅಲ್ಲ. ಇಸ್ಲಾಪುರ, ಇತ್ತಾವರ, ಜೋಗತಿಪೇಟೆ ಹಾಗೂ ಮಾಲೂರುಗಳೆಂಬ ಒಂದೇ ಊರು ಎಂದು ಕರೆಯಬಹುದಾದ ನಾಲ್ಕು ಹಳ್ಳಿಗಳ ವಿಶಿಷ್ಟ ಗುಣಲಕ್ಷಣಗಳ ಸುಳಿಯಲ್ಲಿ ಸಿಕ್ಕಿ ಅನಿವಾರ್ಯವಾಗಿ, ಒಲ್ಲದ ಮನಸ್ಸಿನಿಂದಲೇ ಕ್ಷುದ್ರ ವ್ಯಕ್ತಿ ಆಗಿಬಿಡುತ್ತಾನೆ.

Eedina App

ಆ ನಾಲ್ಕು ಹಳ್ಳಿಗಳು ರಾಜಕಾರಣಿಗಳ ಆಟಗಳಿಗೂ ಸವಾಲಾಗಿದ್ದವು. ‘ಹತ್ತಕ್ಕೆ ಏರದೆ ನಾಲ್ಕಕ್ಕೆ ಇಳಿಯದೆ ಲಾಭವಿಲ್ಲದೆ ನಷ್ಟವರಿಯದ ಜನ ಆ ಹಳ್ಳಿಗಳವರು. ಸುಮ್ಮನೆ ಕಾಲ ಕಳೆಯಲು ನಡೆಸುವ ವ್ಯವಹಾರಗಳಂತೆ, ಅವರವು. ಹೋಗೋದು, ಬರೋದು, ಕೂಡೋದು, ನಿಲ್ಲೋದು, ಈ ಥರ ಬದುಕುತ್ತಿದ್ದರು.’ ಚುನಾವಣೆ ಕಾಲದಲ್ಲಿ ಅವರಿಗೆ ಏನು ‘ಪ್ರಲೋಭನೆ ಒಡ್ಡಿ ಓಟು ಕಸಿಯಬೇಕೆಂಬುದೇ ಅಭ್ಯರ್ಥಿಗಳಿಗೆ ಒಂದು ಸಮಸ್ಯೆಯಾಗಿತ್ತು. ಹಿಂದೂ-ಮುಸ್ಲಿಂ ಸಮಸ್ಯೆಯನ್ನು ಎತ್ತುವಂತಿರಲಿಲ್ಲ. ಏಕೆಂದರೆ, ಭೂತ ಪ್ರೇತ ಮಾರಿ ಮಸಣಿಗಳ ತಾಪತ್ರಯದಲ್ಲಿ ಅಲ್ಲಿಯ ಮುಸಲ್ಮಾನರಿಗೂ ಹಿಂದೂಗಳಿಗೂ ತಮ್ಮ ಮೂಲ ಧರ್ಮದ ಪ್ರಜ್ಞೆ ಇರಲಿಲ್ಲ. ಶ್ರೀಮಂತಿಕೆ ಮತ್ತು ಬಡತನದ ಪ್ರಶ್ನೆಯನ್ನೇ ಎತ್ತುವಂತಿರಲಿಲ್ಲ. ಶ್ರೀಮಂತರು ವಸೂಲಿಗಾಗಿ ತಿರುಗುತ್ತ ಸಾಲ ತೆಗೆದುಕೊಂಡವರ ಬಳಿ ಗೋಳಾಡುತ್ತ, ವಸೂಲಿ ಸಾಬರಿಗೆ ಸಲಾಮು ಹೊಡೆದು ಸಹಾಯಕ್ಕೆ ಅಂಗಲಾಚುತ್ತಿದ್ದರು.'

ಸೂರಾಚಾರಿಯ ಮೂಲ ಕಸುಬು ಕಲ್ಲಿನ ಕೆತ್ತನೆಯ ಕೆಲಸ. ಹೊಯ್ಸಳರ ಕಾಲದಿಂದ ಶಿಲ್ಪಿಗಳಾಗಿದ್ದ ಮನೆತನ ಅವನದು. ದೇವಸ್ಥಾನದ ಕಂಬ, ಮಾಡು, ತುಳಸೀಕಟ್ಟೆ, ದೇವರ ಸುಂದರ ವಿಗ್ರಹಗಳು ಇತ್ಯಾದಿಗಳನ್ನು ಮಾಡುತ್ತಿದ್ದನು. ಸೂರಾಚಾರಿ, ಕತೆಯ ಕಾಲಕ್ಕೆ ಇಸ್ಲಾಪುರ ವಾಸಿಯೇ ಆದರೂ, ಹಳೇಬೀಡಿನ ಹತ್ತಿರಿದ್ದ ಪನ್ನಾಥಪುರದಿಂದ ಬಂದಿದ್ದವನು. ಇಸ್ಲಾಪುರದ ಹತ್ತಿರ ಈಶ್ವರ ದೇವಸ್ಥಾನ ಕಟ್ಟುತ್ತಾರೆಂದೂ, ಅದರ ಕಲ್ಲಿನ ಕೆಲಸ, ಚಿತ್ತಾರದ ಕೆಲಸ, ಕುಸುರಿ ಕೆಲಸಗಳನ್ನು ತಾನು ವಹಿಸಿಕೊಳ್ಳಬೇಕೆಂದೂ ಆಲೋಚಿಸಿ ಇಸ್ಲಾಪುರಕ್ಕೆ ಬಂದವನು. ಆದರೆ, ಈಶ್ವರ ದೇವಸ್ಥಾನ ಕಟ್ಟುವ ಕಾರ್ಯಕ್ರಮ ರದ್ದಾಗಿಹೋಯಿತು. ಏಕೆಂದರೆ, ಅದಕ್ಕಾಗಿ ಶೇಖರಿಸಿದ ಹಣವನ್ನು ಅಲ್ಲಿನ ಪೂಜಾರಿಗಳಾಗಬೇಕಿದ್ದ ಶಂಕರ ಭಟ್ಟರು ಮಗಳ ಮದುವೆ ಇತ್ಯಾದಿಗಳಿಗೆ ಉಪಯೋಗಿಸಿ ಉಡುಪಿಗೆ ಓಡಿಹೋದರು.

AV Eye Hospital ad

ಸೂರಾಚಾರಿಯು ಇಸ್ಲಾಪುರದಲ್ಲಿ ತನ್ನ ದೂರದ ಸಂಬಂಧಿ ವಾಸಾಚಾರಿಯ ಮನೆಯಲ್ಲೇ ಉಳಿದುಕೊಂಡು, ಊರಿನ ನಾಲ್ಕಾರು ಜನರಿಗೆ ತುಳಸಿ ಕಟ್ಟೆ ಇತ್ಯಾದಿಗಳನ್ನು ಮಾಡಿಕೊಟ್ಟು ಕೆಲವು ಕಾಲದ ನಂತರ ಹಿಂದಿರುಗುವವನಿದ್ದನು. ಆದರೆ, ವಾಸಾಚಾರಿಯು ಸೂರಾಚಾರಿಯನ್ನು ಬಹಳ ಪುಸಲಾಯಿಸಿ, ತನ್ನ ಒಬ್ಬಳೇ ಮಗಳು ಯಶೋದಳನ್ನು ಮದುವೆ ಮಾಡಿಕೊಡುತ್ತಾನೆ. ಒಂದು ಕರಾರು ಏನೆಂದರೆ, ವಾಸಾಚಾರಿ ಸಾಯುವವರೆಗೆ ಸೂರಾಚಾರಿ ಇಸ್ಲಾಪುರದಲ್ಲೇ ಇರಬೇಕು. ನಂತರ ಎಲ್ಲಿಗೆ ಬೇಕಾದರೂ ತನ್ನ ಹೆಂಡತಿಯನ್ನು ಕರೆದುಕೊಂಡು ಹೋಗಬಹುದು.

Soorachari
ಕಲಾಕೃತಿ ಕೃಪೆ: ರೌಲ್ ವಿನಿಷಿಯಸ್

ವಾಸಾಚಾರಿ ಪ್ರಾಣ ಬಿಟ್ಟ ನಂತರ ಸೂರಾಚಾರಿ ಯಶೋದಳನ್ನು ಕರೆದುಕೊಂಡು ತನ್ನ ಊರ ಕಡೆಗೆ ಹೋಗುತ್ತಿರಬೇಕಾದರೆ, ಮಲೆಸೀಮೆ ಗಡಿ ದಾಟುವಲ್ಲಿ ದಿಡ್ಡಿ ಎಂಬ ಹಳ್ಳಿ ದಾಟಿದೊಡನೆಯೇ, ಯಾವುದೋ ಒಂದು ಪಿಶಾಚಿಯೋ ದೆವ್ವವೋ ಯಶೋದಳ ಮೈಮೇಲೆ ಬಂದು ಕಾಟ ಕೊಡತೊಡಗಿತು. ನಿರುಪಾಯವಾಗಿ ಅವರು ಇಸ್ಲಾಪುರಕ್ಕೆ ಹಿಂದಿರುಗಬೇಕಾಗುತ್ತದೆ. ತನ್ನ ಪರಿಣತಿಯ ಕುಲಕಸುಬೊಂದನ್ನು ಬಿಟ್ಟು ಎಲ್ಲ ರೀತಿಯ ಊರ ವ್ಯವಹಾರಗಳಲ್ಲಿ ತೊಡಗಿಕೊಳ್ಳುತ್ತಾನೆ. ಆದರೆ, ಯಾವುದರಲ್ಲೂ ಬರಕತ್ತಾಗುವುದಿಲ್ಲ. ಊರು ಬಿಟ್ಟು ಹೋಗುವುದೊಂದೇ ಆ ಕರ್ಮಜಾಲದಿಂದ ವಿಮುಕ್ತನಾಗುವ ಏಕಮಾತ್ರ ಮಾರ್ಗ ಎಂದುಕೊಳ್ಳುತ್ತಾನೆ ಸೂರಾಚಾರಿ. ಆದರೆ, ಅವನ 'ಶನಿ' ಹೆಂಡತಿಯೊಬ್ಬಳು ದಿಡ್ಡಿ ಗಡಿ ದಾಟುವ ಹಾಗಿರಲಿಲ್ಲ. ಆ ವಯಸ್ಸಿನಲ್ಲಿ ಮತ್ತೆ ಒಬ್ಬನೇ ಜೀವನವನ್ನು ಎದುರಿಸುವಷ್ಟು ಚೈತನ್ಯ ಅವನಿಗಿರಲಿಲ್ಲ. ಅವನನ್ನು ನಿಧಾನಕ್ಕೆ ಕ್ಷುದ್ರನನ್ನಾಗಿಸುತ್ತಿದ್ದ ಇಸ್ಲಾಪುರದ ವಿಚಿತ್ರ ವ್ಯಾವಹಾರಿಕತೆ ಅವನನ್ನು ಹೆಬ್ಬಾವಿನಂತೆ ಅಮರಿಕೊಂಡುಬಿಟ್ಟಿತ್ತು.

ಸುಂದರವಾದ ಶಿಲಾಬಾಲಿಕೆಯರನ್ನು ಕಡೆಯಬೇಕಿದ್ದ ಸೂರಾಚಾರಿ, 'ಮಾರಿಗೊಂಬೆ'ಗಳನ್ನು ಮಾಡಿಕೊಡಬೇಕಾಗಿ ಬರುತ್ತದೆ. ಅಲ್ಲಿಯೂ ಅವನ ಕುಸರಿ, ಕೌಶಲ, ಕಸುಬುದಾರಿಕೆಗಳು, “ಅಲ್ಲಾ, ಆಚಾರೆ... ಪೊರಕೆಯಲ್ಲಿ ಮೊರ, ಮೆಟ್ಟಿನಲ್ಲಿ ಸೇವೆ ಮಾಡಿ ಊರಾಚೆಗೆ ದೂಡಿ ಬರ್ತೀವಿ. ಅಂಥದಕ್ಕೆ ಯಾಕೆ ಇಷ್ಟೊಂದು ವೈಯಾರ ಮಾಡ್ತೀರಿ!” ಎಂಬ ಗೊಣಗಾಟಗಳಿಂದಾಗಿ ಹಿಂದೆ ಸರಿದು, ‘ಕೊಕ್ಕರೆ ಮೂಗು ಬಿಡುಗಣ್ಣಿನ ಕಿಸುಬಾಯಿಯ ಮಡಕೆ ಮೊಲೆಗಳ ಮಾರಿಗೊಂಬೆ’ಗಳಿಗೆ ದಾರಿ ಬಿಟ್ಟುಕೊಡುತ್ತವೆ.

ದಿಡ್ಡಿ ಗಡಿಯನ್ನು ದಾಟದಂತೆ ಕಾಟ ಕೊಡುತ್ತಿದ್ದ ತನ್ನ ಹೆಂಡತಿಯ ಮೈಮೇಲೆ ಬರುವ ದೆವ್ವವನ್ನು ಬಿಡಿಸುವುದಕ್ಕೆಂದು ಸೂರಾಚಾರಿಯು ಅವಳಿಗೆ ಕಸಬರಿಗೆ ತೆಗೆದುಕೊಂಡು ಹೊಡೆಯುವುದು, ಮೆಟ್ಟಿನಲ್ಲಿ ಹೊಡೆಯುವುದು, ಇತ್ಯಾದಿಗಳನ್ನು ಮಾಡಿ ಮುಗಿಸಿದ. ಅವಳ ನಡತೆಯ ಬಗ್ಗೆ ಊರವರು ಯಾರು ಯಾರೋ ಮಾತನಾಡಿದ್ದನ್ನು ನೆನಪಿಸಿಕೊಂಡು ಅವಳೇ ದೆವ್ವವೆಂದು ತಿಳಿದು ಜಪ್ಪಿ ಹಾಕಿದ್ದ. ಏನೇ ಆದರೂ, ಸೂರಾಚಾರಿ ಹೆಂಡತಿ ಯಶೋದೆಯನ್ನು ದಿಡ್ಡಿ ಗಡಿ ದಾಟಿಸಲು ಸಾಧ್ಯವಾಗಲಿಲ್ಲ. ಬದಲಿಗೆ, ಮಸೀದಿಯಲ್ಲಿ ಇರುತ್ತಿದ್ದ ಭೂತ ವೈದ್ಯ, ಅಜಮೀರಿನ ಫಕೀರಪ್ಪನ ಜೊತೆಗೆ ಸಮಾಲೋಚಿಸಿ ಇಬ್ಬರೂ ಸೇರಿ ಕೈಗೊಂಡ ಭೂತೋಚ್ಛಾಟನಾ ವಿಧಾನಗಳಿಂದ ಯಶೋದೆ ನವೆದುಹೋದಳು. ಜೋಲುಮೊಲೆಯ ಗುಳಿಗಣ್ಣಿನ ಯಶೋದೆಯ ಕೈಗೆ ಒಂದು ಖಡ್ಗವನ್ನೋ ತ್ರಿಶೂಲವನ್ನೋ ಕೊಟ್ಟರೆ ಮಾರಿಗೊಂಬೆಯಂತೆಯೇ ಕಾಣಬಹುದಾದ ಸ್ಥಿತಿಗೆ ತಲುಪಿದ್ದಳು.

ಈ ಲೇಖನ ಓದಿದ್ದೀರಾ?: ಜಾಗರ | ಸಿನಿಮಾಧ್ಯಮಕ್ಕೆ ಜೀವ ತುಂಬಿದ ಅಪೂರ್ವ ಮಾನವತಾವಾದಿ ಗ್ರಿಫಿ಼ತ್

ಯಶೋದೆ ತಲುಪುವ ಈ ಸ್ಥಿತಿ, ಸೂರಾಚಾರಿಯ ಶಿಲ್ಪಕೌಶಲದ ಅಧೋಗತಿಯನ್ನೂ ಸಾಂಕೇತಿಸುತ್ತದೆ. ಸಾಮಾಜಿಕ ಮನೋಭಾವ, ಸಾಮುದಾಯಿಕ ಕುವರ್ತನೆಗಳು ಹಾಗೂ ಸಾಮೂಹಿಕ ಮನಸ್ಥಿತಿಗಳು ಕಥಾಹಂದರದ ಭಿತ್ತಿಯಾಗಿದ್ದುಕೊಂಡು, ವ್ಯಕ್ತಿಗಳ ಮೇಲೆ ಅವು ಬೀರುವ ಪರಿಣಾಮಗಳನ್ನು ಮತ್ತು ವ್ಯಕ್ತಿತ್ವಗಳನ್ನು ಅವು ರೂಪಿಸುವುದನ್ನು ಢಾಳಾಗಿಸದೆ, ಸೂಕ್ಷ್ಮವಾದ ಪದಕುಸುರಿಯ ಮೂಲಕ ಒಳಹರಿವಿನ ರೀತಿಯಲ್ಲಿ ತೇಜಸ್ವಿಯವರು ‘ಅಬಚೂರಿನ ಪೋಸ್ಟಾಫೀಸು’ ಕಥಾಸಂಕಲನದಿಂದ ಮುಂದಿನ ತಮ್ಮ ಸೃಜನಾತ್ಮಕ ಕೃತಿಗಳಲ್ಲೆಲ್ಲ ಕಟ್ಟಿಕೊಟ್ಟಿದ್ದಾರೆ.

‘ಅವನತಿ’ ಕತೆಯ ಮತ್ತೊಂದು ಮುಖ್ಯ ಪಾತ್ರ ಗೌರಿ. ಇಸ್ಲಾಪುರದಲ್ಲಿ ಸುತ್ತಮುತ್ತಲ ‘ಪ್ರದೇಶದಲ್ಲಿದ್ದ ಎರಡು ಮಹತ್ವವಾದುದು ಎನ್ನಬಹುದಾದುದರಲ್ಲಿ ಸೂರಾಚಾರಿ ಒಬ್ಬನಾಗಿದ್ದ. ಇನ್ನೊಂದು ಎಂದರೆ ಇತ್ತಾವರದ ಸುಬ್ಬಯ್ಯನ ಹೆಂಡತಿ’ ಎನ್ನುವ ಕತೆಗಾರರು, ಗೌರಿಯನ್ನು ಮುಕ್ತವಾಗಿ ವರ್ಣಿಸಿರುವುದು ಹೀಗೆ:

‘ಅಲ್ಲಿ ಗೌರಿ ಒಂದು ಆಶ್ಚರ್ಯಾದ್ಭುತವಾಗಿದ್ದಳು. ಸೌಂದರ್ಯದಲ್ಲಿ ಸಕಲ ಶಿಲ್ಪ ಶಾಸ್ತ್ರ ಲಕ್ಷಣಗಳ ಅವತಾರದಂತೆ ಕಾಣುತ್ತಿದ್ದಳು. ಮೂಗು, ಕಣ್ಣು, ಹುಬ್ಬು, ಕೂದಲು, ತುಟಿ ರೇಖೆಗಳು, ಕತ್ತು, ಸ್ತನಗಳು ನಡು, ಕಾಲು, ಎಲ್ಲ ಇನ್ನೇನು ಮಾಡಿಯೂ ಅವಳ ಸೌಂದರ್ಯವನ್ನು ಹೆಚ್ಚಿಸದಷ್ಟು ಅದ್ಭುತ ಸಾಮರಸ್ಯದಲ್ಲಿ ಮಿಳಿತವಾಗಿದ್ದುವು. ಅದಕ್ಕಿಂತ ಮಿಗಿಲಾಗಿ ಆಕೆಯ ನಡೆ, ಚರ್ಯೆ, ನಿಲ್ಲುವ-ನಡೆಯುವ ಭಂಗಿ ಇವುಗಳ ವಿನ್ಯಾಸವಂತೂ ಸೌಂದರ್ಯವೇ ಛಂದೋಬದ್ಧವಾದಂತೆ ಕಾಣುತ್ತಿತ್ತು. ಕುಳಿತರೆ, ನಿಂತರೆ, ನಕ್ಕರೆ ಒಂದೊಂದು ಸಾರಿಯೂ ಒಂದೊಂದು ಸಾಕ್ಷಾತ್ಕಾರವಾದಂತಾಗುತ್ತಿತ್ತು.’ ಇಷ್ಟು ವರ್ಣಿಸಿ, ನಂತರ ಆ ಪ್ರದೇಶದ ಜನರ ಬಗ್ಗೆ ಒಂದು ಟೀಕೆಯನ್ನು, ‘ಆದರೆ ಯಾರಿಗೆ (ಸಾಕ್ಷಾತ್ಕಾರ) ಆಗುತ್ತಿತ್ತು ಎನ್ನುವುದು ಮಾತ್ರ ಸಂಶಯಾಸ್ಪದ ಪ್ರಶ್ನೆ. ಏಕೆಂದರೆ ಯಾರಿಗೂ ಅದರತ್ತ ಗಮನವಿರಲಿಲ್ಲ’ ಎಂದು ಸೇರಿಸುತ್ತಾರೆ.

ಈ ಗೌರಿ ಮತ್ತು ಅವಳ ಗಂಡ ಕೆಳಮನೆ ಸುಬ್ಬಯ್ಯರ ದಾಂಪತ್ಯದಲ್ಲೊಂದು ಸಮಸ್ಯೆ. ಏನೆಂದರೆ, ಹುಟ್ಟಿದ ಮೂರೂ ಮಕ್ಕಳು ಹುಟ್ಟಿದ ಕೆಲ ದಿನಗಳಲ್ಲೇ ಸತ್ತುಹೋಗಿವೆ. ಕೆಲ ಜನ ಹೀಗೆ ಎಳೆ ಮಕ್ಕಳು ಸಾಯುವುದರಲ್ಲಿ ಸುಬ್ಬಯ್ಯನದೇ ದೋಷ ಇರಬಹುದೆಂದು ಮಾತಾಡಿಕೊಳ್ಳುವುದು ಸುಬ್ಬಯ್ಯನಿಗೂ ತಿಳಿದಿತ್ತು. ಈ ಸುಬ್ಬಯ್ಯನ ಬಳಿಗೆ ಇವನ ಎತ್ತೊಂದನ್ನು ಖರೀದಿ ಮಾಡಲು ಸೂರಾಚಾರಿಯನ್ನು ಕರೆದುಕೊಂಡು ಬರುವ ಈರೇಗೌಡನೂ ದಾರಿಯಲ್ಲಿ, “ಸುಬ್ಬಯ್ಯನಾಗೆ ಏನಾದರೂ ಒಳರೋಗ ದೋಸ ಉಂಟ?” ಎಂದು ಕೇಳಿದವನೇ.

Gowri
ಕಲಾಕೃತಿ ಕೃಪೆ: ಪಿಕ್ಸ್ ಬೇ ಜಾಲತಾಣ

ಎಂದಿನ ರಿವಾಜಿನಂತೆ ಟವಲ್ ಒಳಗೆ ಬೆರಳುಗಳಲ್ಲಿ ಬೆಲೆ ಚೌಕಾಸಿ ನಡೆಯುತ್ತಿರುವಾಗ, ಸುಬ್ಬಯ್ಯನ ಅಪ್ಪ ಬಂದು, ಸಂತೆಗೆ ಹೋಗಿರುವ ಗೌರಿಯಿಂದ ತನ್ನ ಕಣ್ಣಿನ ಸಮಸ್ಯೆಗೆ ಔಷಧಿಯಾಗಿ ಒಂದು ಒಳಲೆ ಮೊಲೆಹಾಲನ್ನು ಇಸಗೊಂಡು ಬರಲು ತನ್ನ ತಮ್ಮನ ಮಗನನ್ನು ಅಟ್ಟುತ್ತಾನೆ. ಸುಬ್ಬಯ್ಯನಿಗೆ ಅವನ ಹೆಂಡತಿ ಗೌರಿ ಮಕ್ಕಳನ್ನು ಹೆತ್ತುಕೊಡುವ ಯಂತ್ರವಾದರೆ ಅವನಪ್ಪ, ವಯಸ್ಸಾದ ಬೈರಪ್ಪನಿಗೆ, ಸೊಸೆ ಹೆತ್ತ ಮೂರೂ ಮಕ್ಕಳು ಹುಟ್ಟಿದ ಸ್ವಲ್ಪ ದಿನಕ್ಕೇ ಸತ್ತುಹೋಗುವುದರ ಬಗ್ಗೆ ಚಿಂತೆಯೇ ಇಲ್ಲ. ಅವಳ ಮೊಲೆಯಲ್ಲಿರುವ ಹಾಲು ಅವನ ಕಣ್ಣಿಗೆ ಬೇಕಾದ ಔಷಧಿ, ಅಷ್ಟೆ.

ಹೀಗೇ ಮಾತುಗಳು, ಹುಟ್ಟಿ ಸಾಯುತ್ತಿರುವ ಸುಬ್ಬಯ್ಯನ ಮಕ್ಕಳ ವಿಷಯಕ್ಕೆ ಬರುತ್ತವೆ. ಸೂರಾಚಾರಿ ವಿಚಾರಣೆ ನಡೆಸಿ, “ಸೈ ಬಿಡು, ಇದು ಮಲೆ ದೋಸಾನೆ. ನೀ ಬೇರೆ ಯೋಚನೆ ಮಾಡೋದೇ ಬೇಡ. ಮಲೇಲಿ ಮೇಲುಗಡೆ ಒಂದು ನೀಲಿ ನರ ಇರ್ತದೆ. ಅದರೊಳಗಿರ್ತದೆ ನೋಡು ಹುಳ. ಅರಿಷಿನ ಕೊಂಬಿನ ಕೆಂಡ ಮಾಡಿ ಅದನ್ನು ಸುಟ್ಟು ತಗೀಬೇಕು. ಇಲ್ಲದಿದ್ದರೆ ಒಂದಲ್ಲಾ ಮೂರಲ್ಲಾ ನೂರು ಮಕ್ಕಳಾದರೂ ಒಂದೂ ಉಳಿಯಕಿಲ್ಲ,” ಅನ್ನುತ್ತಾನೆ. ಆ ಚಿಕಿತ್ಸೆಯನ್ನು ಮಾಡಿಕೊಡಿ ಎಂಬಂತೆ ಸುಬ್ಬಯ್ಯನು ಸೂರಾಚಾರಿಯನ್ನು ಆರ್ತದೃಷ್ಟಿಯಿಂದ ಅಂಗಲಾಚಿದಾಗ ಸೂರಾಚಾರಿ ತನ್ನ ವಿಧಿಯನ್ನು ತಾನೇ ಶಪಿಸಿಕೊಳ್ಳುತ್ತಾನೆ. ಬಹುಶಃ ಚಿಕಿತ್ಸೆ ಹೇಳುವುದಷ್ಟೇ ತನ್ನ ಕೆಲಸ, ಚಿಕಿತ್ಸೆಯನ್ನು ಯಾರಾದರೂ ಹೆಂಗಸರು ಮಾಡುತ್ತಾರೆ ಅಂದುಕೊಂಡಿದ್ದನೇನೊ. ಸೂರಾಚಾರಿ ಹೇಳುವ ದಿನ ಹೆಂಡತಿಯನ್ನು ಕರೆದುಕೊಂಡು ಬರುತ್ತೇನೆ ಎಂದು ಸುಬ್ಬಯ್ಯ ಹೇಳಿದ್ದಕ್ಕೆ ಸೂರಾಚಾರಿ, “ಸರಿಯಪ್ಪ, ಇರಾತನಕ ಮಾಡದೇ ನನ್ನ ಕರ್ಮ,” ಎಂದು ಭಾರದ ದನಿಯಲ್ಲಿ ಹೇಳುತ್ತಾನೆ. “ನಾಳಿದ್ದಿನ ಅಮಾಸೆ ಕಳಕುಂಡು ಹೆಂಗ್ಸು ಕರಕೊಂಡು ಬಾ. ಏನಾರು ಒಂದು ಮಾಡನ,” ಎಂಬ ಸೂರಾಚಾರಿಯ ಮಾತುಗಳೊಂದಿಗೆ ಕತೆ ಮುಗಿಯುತ್ತದೆ.

ಹೀಗೆ, ಸೂರಾಚಾರಿಯು ತಾನು ಸೃಷ್ಟಿಸಬಹುದಾದ ಸುಂದರ ಶಿಲಾ ಬಾಲಿಕೆಯಂತಿರುವ ಗೌರಿಯನ್ನು, ಶ್ರೇಷ್ಠ ಕಲಾವಂತಿಕೆಯನ್ನು ಸಿದ್ಧಿಸಿಕೊಂಡಿದ್ದ ತನ್ನ ಕೈಗಳಿಂದ ಮುಕ್ಕು ಮಾಡುವ ಕೆಲಸಕ್ಕೆ ತೊಡಗಬೇಕಾಗುತ್ತದೆ.

ನಿಮಗೆ ಏನು ಅನ್ನಿಸ್ತು?
4 ವೋಟ್
eedina app