ಈಚೆ ದಡದಿಂದ | ಸಾಗರ ತಾಲೂಕಿನ ಉರುಳುಗಲ್ಲಿನ ಮಂದಿಗೆ ಆಸ್ಪತ್ರೆಗೆ ಹೋಗಲು ದಡಿಗೆಯೇ ಗತಿ!

ಉರುಳುಗಲ್ಲು ಗ್ರಾಮದಲ್ಲಿ ಇರುವುದು ಒಂದೇ ಒಂದು ಟಿ.ವಿ. ಗುಡ್ಡದ ತುದಿಯ ನೀರನ್ನು ಪೈಪ್ ಮೂಲಕ ಸಣ್ಣ ಯಂತ್ರಕ್ಕೆ ಹಾಯಿಸಿ, ಥೇಟ್ ಜೋಗದ ಮಾದರಿಯಲ್ಲೇ ವಿದ್ಯುತ್ ಉತ್ಪಾದನೆ ಮಾಡಿಕೊಂಡು, ಆ ಊರಿನ ಜನ ಜಗತ್ತಿನ ವಿದ್ಯಮಾನ ತಿಳಿಯುತ್ತಾರೆ. ಇತ್ತೀಚೆಗೆ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಈ ಜನ ಇದೇ ರೀತಿ ಕಣ್ತುಂಬಿಕೊಂಡರು... ಅದ್ಭುತವಲ್ಲವೇ?

ಶರಾವತಿ ನದಿ ದಡದಲ್ಲಿ ಕುಳಿತು, ಮುಳುಗಿದ ನದಿಮೂಲದ ನಾಗರಿಕತೆಯ ಕುರುಹುಗಳಂತೆ ಅನಾಥವಾಗಿ ಹೊಳೆಯಿಂದ ಮೇಲೆದ್ದು ಆಗಷ್ಟೇ ಇಣುಕುವ, ಅರ್ಧ ಮುಳುಗಿರುವ, ಬಯಲಲ್ಲಿ ಪೂರ್ಣ ದರ್ಶನ ನೀಡುವ ಎತ್ತರದ ಮರ, ದೇವಸ್ಥಾನದ ಗೋಡೆ, ಆಲೆಮನೆಯ ಉರಿಕುಣಿಯ ದಂಡೆ, ತೋಟದ ಕೋವಲ್ಲಿ ಕಾಂಡ ಮಾತ್ರ ಉಳಿದ ಅಡಿಕೆಮರಗಳನ್ನು ನೋಡಿದಾಗ ಮೌನವಾಗುವೆ... ಬೆಳಕಿನ ಆಳದಲ್ಲಿ ಅದೆಷ್ಟು ಕತ್ತಲು!

Eedina App

ಈಚೆಗೆ ಪುನೀತ್ ರಾಜಕುಮಾರ್ ನಟನೆಯ, ಪ್ರಾಕೃತಿಕ ಕಾಳಜಿಯ 'ಗಂಧದ ಗುಡಿ' ಸಿನಿಮಾ ತೆರೆ ಮೇಲೆ ಬಂದಿದೆ. ಅದನ್ನು ನಾನಿನ್ನೂ ನೋಡಿಲ್ಲ. ಅವರ ತಂದೆ ವರನಟ ರಾಜಕುಮಾರ್ ನನ್ನ ನದಿಯನ್ನು ಕುರಿತಾಗಿ ಹಾಡಿದ ಹಾಡು - 'ಶರಾವತಿ ನದಿ ಕನ್ನಡ ನಾಡಿನ ಭಾಗೀರಥಿ' ಎನ್ನುವ ಸಾಲು, ಜೋಗದ ಗುಂಡಿಯನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಿ ಎನ್ನುತ್ತ ಜಲಪಾತದ ವಿವರಣೆ ನೀಡುತ್ತದೆ. ಪುನೀತ್ ಅವರ ಬಗ್ಗೆ ಮತ್ತು ಕೊನೆಯ ಸಿನಿಮಾ 'ಗಂಧದ ಗುಡಿ' ಬಗ್ಗೆ ನನಗೂ ನಿರೀಕ್ಷೆಗಳು ಬೇರೆಯದೇ ಇವೆ, ಇದ್ದವು.

ಶರಾವತಿ ಕಣಿವೆ

ನಿಜ... ಶರಾವತಿ ಕನ್ನಡ ನಾಡಿನ ಭಾಗೀರಥಿಯೇ. ರಾಜ್ಯದ ಹಳ್ಳಿ-ಹಳ್ಳಿಗಳಿಗೆ ವಿದ್ಯುತ್ ತಲುಪಿ, ಬೆಂಗಳೂರು-ಹುಬ್ಬಳ್ಳಿ ಮಹಾನಗರಗಳು ಪ್ರಮುಖ ಉತ್ಪಾದನಾ ಕೇಂದ್ರಗಳಾಗಿ ಬೆಳೆಯಲು ನನ್ನ ನೆಲದ ನದಿ ಕಾರಣ. ಒಂದು ಕಾಲದಲ್ಲಿ ಇಡೀ ರಾಜ್ಯಕ್ಕೆ ಶೇಕಡ 60ರಷ್ಟು ವಿದ್ಯುತ್ ನೀಡಿದ್ದು ಜೋಗದ ವಿದ್ಯುತ್ ಉತ್ಪಾದನಾ ಘಟಕಗಳು. ಹಳ್ಳಿ-ಹಳ್ಳಿಗೆ ವಿದ್ಯುತ್ ಕಂಬ ಹೊತ್ತು ಬರುವ ಲಾರಿಗಳು ನಮ್ಮ ಬಾಲ್ಯದ ಸುಂದರ ನೆನಪುಗಳು ಕೂಡ. ಕರ್ನಾಟಕ ಪವರ್ ಕಾರ್ಪೋರೇಶನ್ ಏಷ್ಯಾದಲ್ಲೇ ಜಲವಿದ್ಯುತ್ ಯೋಜನೆಯಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಉತ್ಪಾದನಾ ಘಟಕವಾಗಿದೆ. ಲಿಂಗನಮಕ್ಕಿ ಜಲಾಶಯದಿಂದ ಒಂದು ಅಂದಾಜು ಪ್ರಕಾರ, ಕೆಪಿಸಿ ಕಳೆದ 50 ವರ್ಷದಲ್ಲಿ ಗಳಿಸಿದ ಆದಾಯವೇ ಕನಿಷ್ಠ ಮೂರು ಲಕ್ಷ ಕೋಟಿ ರೂಪಾಯಿ!

AV Eye Hospital ad

ಆದರೆ, ಜೋಗದ ಜಲವಿದ್ಯುತ್ ಕೇಂದ್ರದಿಂದ ಕೆಲವೇ ಕಿಲೋಮೀಟರ್ ದೂರ ಇರುವ, ಶಿವಮೊಗ್ಗ ಜಿಲ್ಲೆಯ ಗಡಿಭಾಗವಾದ ಸಾಗರ ತಾಲೂಕಿನ ಉರುಳುಗಲ್ಲು ಗ್ರಾಮದ 60 ಮನೆಗಳು ಇವತ್ತಿನ ತನಕವೂ ಚಿಮುಣಿ ಬುಡ್ಡಿ ಅಡಿಯಲ್ಲಿವೆ ಎಂದರೇ ನೀವು ನಂಬುವಿರಾ? ನಂಬಲೇಬೇಕು. ಕಾರ್ಗಲ್ ಸಮೀಪದ ಬಾನುಕುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉರುಳುಗಲ್ಲು ಮತ್ತು ಸುತ್ತಮುತ್ತಲ ಗ್ರಾಮಗಳಿಗೆ ವಿದ್ಯುತ್ ಬಂದೇ ಇಲ್ಲ! ಈ ಗ್ರಾಮದ ಎಲ್ಲ ಕುಟುಂಬಗಳು ಶರಾವತಿಯ ಲಿಂಗನಮಕ್ಕಿ ಜಲಾಶಯದಲ್ಲಿ ಮುಳುಗಡೆಯಾಗಿ ಇಲ್ಲಿ ನೆಲೆ ಕಂಡಂಥವು. ರಾಜ್ಯದ ಬೆಳಕಿಗೆ ತಮ್ಮ ಸೂರು ಕಳೆದುಕೊಂಡ ಜನ, ಅದೇ ಬೆಳಕಿಗಾಗಿ ಕಳೆದ 60 ವರ್ಷದಿಂದ ಗೋಗೆರೆಯುತ್ತಿರುವುದು ಈ ರಾಜ್ಯದ ಸರ್ಕಾರಕ್ಕೆ, ನಾಡಿನ ಜನರ ಕಿವಿಗೆ ತಲುಪದಿರುವುದು ನಮ್ಮ ನಡುವಿನ ವಾಸ್ತವ, ಕ್ರೂರ ವ್ಯಂಗ್ಯ ಕೂಡ.

ಪ್ರತಿಭಟನೆಯ ದೃಶ್ಯ

ನನ್ನ ಪತ್ರಕರ್ತ ಮಿತ್ರರೊಬ್ಬರು ಈ ಹಳ್ಳಿಗೆ ದಶಕದ ಹಿಂದೆ ಭೇಟಿ ಮಾಡಿ ವರದಿ ಮಾಡಿದ್ದರು. ಅವತ್ತಿಗೂ ಮತ್ತು ಇವತ್ತಿಗೂ ಯಾವ ವ್ಯತ್ಯಾಸವೂ ಆಗಿಲ್ಲ. ಉರುಳುಗಲ್ಲು ಸುತ್ತಲ ಗ್ರಾಮಗಳಿಗೆ ಹೋಗಲು ಸರಿಯಾದ ಒಂದು ರಸ್ತೆ ಇಲ್ಲ. ಮಳೆಗಾಲದಲ್ಲಿ ಉಂಬುಳ ತುಂಬಿರುವ ಕಾಡಿನ ಕಾಲುದಾರಿಯಲ್ಲಿ ಈ ಗ್ರಾಮದ ಜನರು ಅನಾರೋಗ್ಯಕ್ಕೀಡಾದ ಹಿರೀಕರು, ಬಸುರಿ, ಬಾಣಂತಿಯರನ್ನು ದಡಿಗೆ ಕಟ್ಟಿ ಅಥವಾ ಬೆತ್ತದ ಕಲ್ಲಿಯಲ್ಲಿ ಹೊತ್ತು ಸಾಗುತ್ತಾರೆ. ಒಂದಲ್ಲ, ಎರಡಲ್ಲ, ಬರೋಬ್ಬರಿ ಎಂಟು ಕಿಲೋಮೀಟರ್. ನದಿ ದಂಡೆ ಆಚೆಯ ನಿಮ್ಮಲ್ಲಿ ನಾಲ್ಕು ಜನ ಹೊತ್ತು ಹೋದರು ಅಂದರೆ ಅವರನ್ನು ಚಿತೆಗೆ ಕರೆದೊಯ್ದರು ಅಂತಲೇ ಅರ್ಥ; ಆದರೆ, ನದಿ ಈಚೆಯ ನನ್ನ ಶರಾವತಿ ನದಿ ದಂಡೆಯಲ್ಲಿ ಹಾಗಲ್ಲ.

ಒಂದು ಅಂಗನವಾಡಿ ಕೊಡಿ ಎನ್ನುವ ಬೇಡಿಕೆ ಸಹ ಈಡೇರಿಲ್ಲವೆಂದರೆ ಜನನಾಯಕರ ನಿರ್ಲಕ್ಷ್ಯ ಎಂಥದ್ದಿರಬೇಕು! ಮಕ್ಕಳು ಕೂಡ ಪ್ರತೀದಿನ ಶಾಲೆಗೆ ತಲುಪಲು ಆರು ಕಿಲೋಮೀಟರ್ ಕ್ರಮಿಸಬೇಕು.

ಹೀಗಿದೆ ನೋಡಿ - ಬೆಳಕಿಗಾಗಿ ಬದುಕನ್ನು ಕೊಟ್ಟವರ ಕತೆ...

ಈ ಲೇಖನ ಓದಿದ್ದೀರಾ?: ಈಚೆ ದಡದಿಂದ | 5ಜಿ ಮಾತು ಬಿಡಿ, ಈ ಹಳ್ಳಿಗಳ ಮಂದಿಗೆ 2ಜಿ ನೆಟ್‌ವರ್ಕ್ ಕೂಡ ಕನಸು!

ನೀವು-ನಾವು ಒಂದು ಗಂಟೆ ವಿದ್ಯುತ್ ಕೈ ಕೊಟ್ಟರೆ ಅದೆಷ್ಟು ರೋಷ, ಆವೇಶ, ಕೋಪ, ಅಸಹನೆ ತೋರುತ್ತೇವೆ. ಅಂಥದ್ದರಲ್ಲಿ ಉರುಳುಗಲ್ಲು ಗ್ರಾಮದ ಬಗ್ಗೆ ಯೋಚಿಸಿದರೆ ನೋವಾಗುತ್ತದೆ. ಹೇಳಲು ಮರೆತಿದ್ದೆ... ಇಡೀ ಉರುಳುಗಲ್ಲು ಗ್ರಾಮದಲ್ಲಿ ಇರುವುದು ಒಂದೇ ಒಂದು ಟಿ.ವಿ. ಗುಡ್ಡದ ತುದಿಯ ನೀರನ್ನು ಪೈಪ್ ಮೂಲಕ ಸಣ್ಣ ಯಂತ್ರಕ್ಕೆ ಹಾಯಿಸಿ, ಥೇಟ್ ಜೋಗದ ಮಾದರಿಯಲ್ಲೇ ಕರೆಂಟು ಉತ್ಪಾದನೆ ಮಾಡಿಕೊಂಡು, ಆ ಊರಿನ ಜನ ಜಗತ್ತಿನ ವಿದ್ಯಮಾನ ತಿಳಿಯುತ್ತಾರೆ. 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಈ ವರ್ಷ ಕಣ್ತುಂಬಿಕೊಂಡರು ನೋಡಿ! ಅದ್ಭುತವಲ್ಲವೇ? 

ಶಿವಮೊಗ್ಗ ಜಿಲ್ಲೆ ರಾಜ್ಯಕ್ಕೆ ಮುಖ್ಯಮಂತ್ರಿಗಳನ್ನು ಕೊಟ್ಟ ಜಿಲ್ಲೆ. ಎಂತೆಂಥ ನಾಯಕರು... ಜೆ ಎಚ್ ಪಟೇಲ್, ಬಂಗಾರಪ್ಪ, ಯಡಿಯೂರಪ್ಪ. ಹಾಗೆ ನೋಡಿದರೆ, ರಾಜ್ಯದ ಹಿರಿಯ ಸಮಾಜವಾದಿ ನಾಯಕ ಕಾಗೋಡು ತಿಮ್ಮಪ್ಪನವರು ಉರುಳುಗಲ್ಲು ಇರುವ ಸಾಗರ ಕ್ಷೇತ್ರವನ್ನುನ ದೀರ್ಘಕಾಲ ಪ್ರತಿನಿಧಿಸಿದವರು. ಕಾಗೋಡು ಇಲ್ಲಿನ ಕುಟುಂಬಗಳಿಗೆ ಭೂಮಿ ಹಕ್ಕು ನೀಡಿದ ಕಾರಣ ಈ ಗ್ರಾಮಗಳು ಒಕ್ಕಲೆಬ್ಬಿಸುವ ಭೀತಿಯಿಂದ ತಪ್ಪಿಸಿಕೊಂಡಿವೆ. ಆದರೆ ವಿದ್ಯುತ್, ರಸ್ತೆ, ಶಾಲೆ, ಅಂಗನವಾಡಿ ಮಾತ್ರ ದೂರವೇ ಉಳಿದಿವೆ.

ಜಿಲ್ಲಾಧಿಕಾರಿ ಸೆಲ್ವಮಣಿ

ಈ ಬಾರಿಯ ಸ್ವಾತಂತ್ರ್ಯ ದಿನಕ್ಕೂ ಹತ್ತು ದಿನ ಮುಂಚೆ, ಶರಾವತಿ ನದಿ ದಂಡೆಯ ದ್ವೀಪದ ಜನರು, ತಮಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಮತ್ತು ಮೂಲಭೂತ ಸೌಕರ್ಯ ಕೊಡಿ ಎಂದು ಆಗ್ರಹಿಸಿ ಸುರಿವ ಮಳೆಯಲ್ಲೂ 22 ಕಿಲೋಮೀಟರ್ ಪಾದಯಾತ್ರೆ ಮಾಡಿದರು. ನಮ್ಮ ಜನಪರ ಮತ್ತು ಕಾಗೋಡು ಜನಪರ ಹೋರಾಟ ವೇದಿಕೆ ಮೂಲಕ ನಾವು ಸಂಘಟನೆಯ ಭಾಗ ಆಗಿ ಹೆಜ್ಜೆ ಹಾಕಿದೆವು. ಮಕ್ಕಳು, ಮಹಿಳೆಯರು, ಹಿರಿಯರು ಎಲ್ಲರೂ ಹೆಜ್ಜೆ ಹಾಕಿ, ತಡರಾತ್ರಿವರೆಗೆ ನ್ಯಾಯಕ್ಕಾಗಿ ದನಿ ಎತ್ತಿದೆವು. ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಸೆಲ್ವಮಣಿಯವರು, ಖುದ್ದು ಭೇಟಿ ನೀಡಿ ಪರಿಶೀಲಿಸಿ, ವಿದ್ಯುತ್ ನೀಡುವ ಭರವಸೆ ನೀಡಿದರು.

ಕರೆಂಟು ಬರುತ್ತದಾ? ಶಾಲೆ ಬರುತ್ತದಾ? ಆಸ್ಪತ್ರೆಗೆ ನಾಲ್ಕು ಜನ ಹೊತ್ತು ಹೋಗುವ ದಿನಗಳು ಮುಗಿಯುತ್ತದಾ?

ನಾಚಿಕೆ ಪಟ್ಟುಕೊಳ್ಳಬೇಕಿದೆ - ಬೆಳಕು ಕೊಟ್ಟವರನ್ನು ಹೀಗೆ ನಡೆಸಿಕೊಳ್ಳುವ ನಾವು ಕಟ್ಟಿಕೊಂಡ ಪ್ರಭುತ್ವಕ್ಕೆ. ಇದೇ ಕಾರಣಕ್ಕೆ, ಅಪ್ಪು ತಮ್ಮ 'ಗಂಧದ ಗುಡಿ' ಸಿನಿಮಾದಲ್ಲಿ ಇದೇ ನಾಡಿನ ಉರುಳುಗಲ್ಲಿನ ನೋವನ್ನು ದೃಶ್ಯ ಆಗಿಸಬೇಕಿತ್ತು, ಮುಳುಗಿದ ಒಣಮರಗಳ ಆತ್ಮಕಥನ ಮತ್ತು ನಡುಗಡ್ಡೆಯ ಅರಣ್ಯರೋಧನ ಆಲಿಸಬೇಕಿತ್ತು ಎಂದು ಬಯಸಿದ್ದೆ. ಆದರೆ, ಅಪ್ಪು ಹೊರಟುಹೋದ ಕಾರಣ ಆ ಅವಕಾಶ ಇಲ್ಲವಾಗಿದೆ. ಅಪ್ಪು ಜೀವಂತ ಇದ್ದಿದ್ದರೆ ಅವರನ್ನು ಭೇಟಿ ಆಗುವ ಅವಕಾಶ ನಿಗದಿ ಆಗಿತ್ತು. ಆದರೆ ಈಗ...?

ಕಾಲ ಮಿಂಚಿಹೋಗಿದೆ... ಅಸಲು ಪ್ರಶ್ನೆಗಳು, ಸಮಸ್ಯೆಗಳು ಹಾಗೆಯೇ ಉಳಿದಿವೆ. ಬೆಳಕಿಗಾಗಿ ಇನ್ನೂ ಅದೆಷ್ಟು ದಿನ ಕಾಯಬೇಕೋ? ಉರುಳುಗಲ್ಲಿನ ಉರುಳಿಗೆ ಮುಕ್ತಿ ಯಾವಾಗ?

ನಿಮಗೆ ಏನು ಅನ್ನಿಸ್ತು?
9 ವೋಟ್
eedina app