ಮೈಕ್ರೋಸ್ಕೋಪು | ಬಸಿರಿಳಿಸಿಕೊಳ್ಳುವುದು ಭ್ರೂಣ ಹೊರುವ ಹಕ್ಕಿನ ಕುರುಹೋ, ಕೊಲೆಯೋ?

Abortion Protest 5

ಮಾನವ ಹಕ್ಕುಗಳು, ಮಹಿಳೆಯ ಘನತೆ, ವ್ಯಕ್ತಿ ಸ್ವಾತಂತ್ರ್ಯ, ವೈದ್ಯ ವಿಜ್ಞಾನ... ಹೀಗೆ, ಗರ್ಭಪಾತಕ್ಕೆ ಸಂಬಂಧಿಸಿದಂತೆ ನಾನಾ ಆಯಾಮಗಳಿವೆ. ಹಾಗಾಗಿ ಈ ವಿಷಯದಲ್ಲಿ ಗೆರೆ ಕೊರೆದಂತೆ ತೀರ್ಪು ಕೊಡುವುದು ಕಷ್ಟಸಾಧ್ಯ. ಆದರೂ, ಅಮೆರಿಕದ ಕೋರ್ಟು ಗರ್ಭಪಾತ ನಿರ್ಬಂಧಿಸಿ ಆದೇಶ ಹೊರಡಿಸಿದ್ದು, ಪ್ರತಿಭಟನೆ ಸ್ಫೋಟಿಸಿದೆ. ಈ ಕುರಿತ ಅವಲೋಕನ ಇಲ್ಲಿದೆ

“ಅಮೆರಿಕ ಈಗ ಅತ್ಯಂತ ಹಿಂದುಳಿದ ದೇಶ..."

-ಚೀನಾ, ಭಾರತ, ಜರ್ಮನಿ ದೇಶಗಳು ಅಮೆರಿಕವನ್ನು ಹಿಮ್ಮೆಟ್ಟಿಸುವಷ್ಟು ಸುಧಾರಿಸಿರಬೇಕು. ಅಥವಾ ಕೋವಿಡ್‌ ಸಾಂಕ್ರಾಮಿಕದಿಂದಾಗಿ ಅಮೆರಿಕದ ಆರ್ಥಿಕ ವ್ಯವಸ್ಥೆ ಹದಗೆಟ್ಟಿರಬೇಕು. ಹೀಗಾಗಿ, ಈ ಮಾತು ಎಂದು ನೀವೇನಾದರೂ ಊಹಿಸಿದ್ದರೆ ಅದು ತಪ್ಪು. ಬದಲಿಗೆ, 2022ರ ಜೂನ್‌ 23ರಂದು ಅಮೆರಿಕದ ಸುಪ್ರೀಂ ಕೋರ್ಟು ಕೊಟ್ಟ ಒಂದು ತೀರ್ಪನ್ನು ಆಲಿಸಿದ ಕೆಲವು ವಿಜ್ಞಾನಿಗಳ ಉದ್ಗಾರ ಇದು.

ರೋ ಮತ್ತು ವೇಡ್‌ ಕೇಸು ಎಂದೇ ಸುಪ್ರಸಿದ್ಧವಾದ ದಾವೆಯೊಂದರ ವೇಳೆ 1973ರಲ್ಲಿ ತಾನು ಇತ್ತಿದ್ದ ತೀರ್ಮಾನವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟು, "ಗರ್ಭಪಾತ ಅಥವಾ ಬಸುರಿಳಿಸುವುದು ಕಾನೂನುಬದ್ಧವಲ್ಲ. ಅದು ಮಹಿಳೆಯರ ಹಕ್ಕಲ್ಲ. ಅಮೆರಿಕದ ಸಂವಿಧಾನದಲ್ಲಿ ಬಸಿರಿಳಿಸುವುದರ ಉಲ್ಲೇಖವೇ ಇಲ್ಲ," ಎಂದು ಮೊನ್ನೆ ತೀರ್ಪು ಕೊಟ್ಟಿತು. ಅರ್ಥಾತ್‌, ರೋ ಮತ್ತು ವೇಡ್‌ ಕೇಸಿನ ಸಂದರ್ಭದಲ್ಲಿ ಭ್ರೂಣ ಎನ್ನುವುದು ಪ್ರತ್ಯೇಕ ಜೀವಿ ಎನ್ನಿಸುವವರೆಗೆ, ಅಂದರೆ ಮೂರು ತಿಂಗಳ ಗರ್ಭಾವಸ್ಥೆಯವರೆಗೂ, ಅದನ್ನು ಕಳೆದುಕೊಳ್ಳುವ ಹಕ್ಕು ತಾಯಿಗೆ ಇದೆ ಎಂದು ಕೊಟ್ಟಿದ್ದ ತೀರ್ಪು ರದ್ದಾಗಿದೆ. ಅಂದರಿಷ್ಟೆ - ಮೂರು ತಿಂಗಳಲ್ಲ, ಒಂದು ದಿನದ ಗರ್ಭವನ್ನು ಕಳೆಯುವುದೂ ಕಾನೂನುಬಾಹಿರ ಎಂದು ಈ ತೀರ್ಪು ಹೇಳುತ್ತದೆ. ಹೀಗಾಗಿ, ಇನ್ನು ಮುಂದೆ ಯಾವ ಮಹಿಳೆಯೂ ಸ್ವ-ಇಚ್ಛೆಯಿಂದ ಬಸಿರನ್ನು ಕಳೆದುಕೊಳ್ಳುವುದು ಆಗದು. 

ಅಮೆರಿಕೆಯ ಸುಪ್ರೀಂ ಕೋರ್ಟಿನ ಈ ತೀರ್ಪು ಬರುವ ಮುನ್ನ ಹಲವಾರು ತಿಂಗಳುಗಳ ಕಾಲ ವಾದ-ವಿವಾದಗಳು ನಡೆದಿದ್ದವು. ಈ ವಾದ-ವಿವಾದಗಳಲ್ಲಿ, ಕೇಸನ್ನು ದಾಖಲಿಸಿದ್ದ ಕೆಲವು ರಾಜ್ಯ ಸರಕಾರಗಳಷ್ಟೇ ಅಲ್ಲದೆ, ಸ್ವಯಂಪ್ರೇರಿತರಾಗಿ ಹಲವಾರು ಮಹಿಳಾ ಹಕ್ಕುಗಳ ಹೋರಾಟಗಾರ ಸಂಸ್ಥೆಗಳು, ವಿಜ್ಞಾನಿಗಳು ಪಾಲ್ಗೊಂಡಿದ್ದರು. 'ಗರ್ಭಪಾತ ಹಕ್ಕಿನ ಕಾನೂನು' ಎಂದು ಹೆಸರಾದ ಕಾನೂನನ್ನು ರದ್ದುಗೊಳಿಸುವುದು ಸರಿಯಲ್ಲ ಎಂದು ವಾದಿಸಿದ್ದರು. "ವೈಜ್ಞಾನಿಕವಾಗಿಯಾಗಲೀ, ಸಾಮಾಜಿಕವಾಗಿಯಾಗಲೀ, ಮಾನವ ಹಕ್ಕುಗಳ ಹಿನ್ನೆಲೆಯಿಂದಾಗಲೀ ಇದು ಸರಿಯಲ್ಲ. 'ಗರ್ಭ' ಇರಬೇಕೇ, ಬೇಡವೇ ಎನ್ನುವುದನ್ನು ತೀರ್ಮಾನಿಸುವುದು ತಾಯಿಯ ಹಕ್ಕು. ಅದನ್ನು ಈ ನಿಷೇಧ ಕಿತ್ತುಕೊಳ್ಳುತ್ತಿದೆ," ಎಂದು ಇವರ ವಾದವಿತ್ತು. ಆದರೆ, ಇತ್ತೀಚೆಗೆ ಅಮೆರಿಕದಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ ಬಲಪಂಥೀಯ ರಾಷ್ಟ್ರವಾದಿ ಎನ್ನಿಸಿಕೊಂಡ ಮತ್ತು ರಿಪಬ್ಲಿಕನ್‌ ಪಕ್ಷದ ಬೆಂಬಲವಿರುವ ಸಂಸ್ಥೆಗಳು ಖಟ್ಲೆ ಹೂಡಿ, ಈ ಕಾನೂನನ್ನು ರದ್ದುಗೊಳಿಸಿವೆ. 

Image
Abortion Protest 4

ವಿಶೇಷ ಎಂದರೆ, ಇದು ಕೇವಲ ಕಾನೂನಿನ ತೊಡಕಲ್ಲ. ಇದೊಂದು ಸೈದ್ಧಾಂತಿಕ, ತಾತ್ವಿಕ ಹಾಗೂ ವೈಜ್ಞಾನಿಕ ತೊಡಕಿನ ಪ್ರಶ್ನೆ ಕೂಡ. ಈಗ ಗರ್ಭಪಾತವನ್ನು ನಿಷೇಧಿಸುವ ಮುನ್ನ ಇದ್ದ ಕಾನೂನು, ಮೂರು ತಿಂಗಳು ಮೀರದ ಬಸಿರನ್ನು ತೆಗೆದು ಹಾಕಲು ಕಾನೂನಿನ ತೊಡಕಿಲ್ಲ ಎಂದಿತ್ತು. ಅಂದರೆ, ತಾಯಿ ಮೂರು ತಿಂಗಳು ಬಸಿರಾಗುವುದಕ್ಕೂ ಮುನ್ನ ಯಾವುದೇ ಸಮಯದಲ್ಲಿ ಗರ್ಭಪಾತವನ್ನು ಮಾಡಿಸಿಕೊಳ್ಳಬಹುದಿತ್ತು. ಅದು ಆಕೆಯ ಹಕ್ಕೆನಿಸಿತ್ತು. ಮೂರು ತಿಂಗಳು ಕಳೆದ ಬಸಿರನ್ನು ಕಳೆದುಕೊಳ್ಳಲು ಹಕ್ಕಿರಲಿಲ್ಲ. ಹಾಗೆ ಮೂರು ತಿಂಗಳು ಕಳೆದ ನಂತರ ಗರ್ಭಪಾತ ಮಾಡಿಸಿಕೊಳ್ಳಬೇಕೆಂದರೆ, ಒಂದೋ ತಾಯಿಯ ಆರೋಗ್ಯಕ್ಕೆ ಧಕ್ಕೆ ಆಗುವಂತಿರಬೇಕು, ಇಲ್ಲವೇ ಭ್ರೂಣಕ್ಕೇ ಧಕ್ಕೆ ಆಗುವಂತಹ ಪರಿಸ್ಥಿತಿ ಇರಬೇಕಿತ್ತು. ಇಂತಹ ತುರ್ತು ಇಲ್ಲದ ಮೂರು ತಿಂಗಳಾದ ಬಸಿರನ್ನು ತೆಗೆಯಲು ಯಾವ ದೇಶದ ಕಾನೂನೂ ಒಪ್ಪಿಲ್ಲವೆನ್ನಿ. 

ಇದಕ್ಕೆ ವೈದ್ಯಕೀಯ ಕಾರಣವಿರುವಂತೆಯೇ, ವೈಜ್ಞಾನಿಕ ತರ್ಕವೂ ಇದೆ. ವೈದ್ಯಕೀಯವಾಗಿ, ಮೂರು ತಿಂಗಳ ಬಸುರಿಗೆ ಮೊದಲು ಭ್ರೂಣ ಇನ್ನೂ ಚಿಕ್ಕದಾಗಿದ್ದು, ತಾಯಿಯ ಗರ್ಭದಲ್ಲಿ ಭದ್ರವಾಗಿ ನೆಲೆಯೂರಿರುವುದಿಲ್ಲ. ಹೀಗಾಗಿ, ಬಲವಂತವಾಗಿ ಗರ್ಭಪಾತ ಮಾಡಿಸುವ ವೇಳೆ ತಾಯಿಯ ಗರ್ಭಾಶಯಕ್ಕೆ ತೊಂದರೆ ಆಗುವ ಸಂದರ್ಭ ಕಡಿಮೆ. ಆದರೆ, ಮೂರು ತಿಂಗಳ ನಂತರ ಅದು ಹೊಕ್ಕಳ ಬಳ್ಳಿಯ ಜೊತೆಗೆ ತಾಯಿಯ ಗರ್ಭಕ್ಕೆ ಅಂಟಿಕೊಂಡುಬಿಡುತ್ತದೆ. ಇಂತಹ ಬಸಿರನ್ನು ಕಳೆದಾಗ ರಕ್ತ ನಷ್ಟವಾಗುವ ಸಾಧ್ಯತೆಗಳು ಹೆಚ್ಚು. ಪರಿಣಾಮವಾಗಿ ತಾಯಿಗೆ ತೊಂದರೆ ಆಗಬಹುದು. ತಾಯಿ ಇನ್ನೂ ಸಣ್ಣ ವಯಸ್ಸಿನವಳಾಗಿದ್ದರಂತೂ ಇದು ಇನ್ನೂ ಆತಂಕಕಾರಿ. 

ಇದೇ ಕಾರಣದಿಂದಲೇ ಭಾರತದ ಕಾನೂನಿನಲ್ಲಿ ಹದಿನೆಂಟು ವಯಸ್ಸು ಮೀರಿಲ್ಲದಿದ್ದ ತಾಯಿಯ ಬಸಿರನ್ನು ಇಳಿಸಲು ಅವಕಾಶವಿಲ್ಲ. ಕೆಲವು ವರ್ಷಗಳ ಹಿಂದೆ ದೆಹಲಿಯಲ್ಲಿ ಬಲಾತ್ಕಾರಕ್ಕೆ ಒಳಗಾಗಿದ್ದ ಹರೆಯದ ಹುಡುಗಿಯೊಬ್ಬಳು ಬಸಿರಾಗಿದ್ದು, ಆ ಬಸಿರು ಬೆಳೆದು ತಾಯಿಯ ಆರೋಗ್ಯಕ್ಕೆ ತೊಂದರೆಯಾದಾಗ, ಬಸಿರು ತೆಗೆಸಲು ನ್ಯಾಯಾಲಯದ ಮೊರೆಹೋಗಿದ್ದು ಸುದ್ದಿಯಾಗಿತ್ತು. ಹಾಗೆಯೇ, ಯುರೋಪಿನ ಐರ್ಲೆಂಡಿನಲ್ಲಿ ಗರ್ಭಪಾತ ನಿಷೇಧ ಕಾನೂನು ಇರುವುದರಿಂದ, ಗರ್ಭದಲ್ಲಿಯೇ ಸತ್ತಿದ್ದ ಮಗುವನ್ನು ತೆಗೆಸಲೂ ಆಗದೆ ಭಾರತೀಯ ಮಹಿಳೆಯೊಬ್ಬರು ಮರಣಿಸಿದ್ದೂ ಸುದ್ದಿಯಾಗಿತ್ತು.

Image
Abortion 2

ಗರ್ಭಪಾತ ನಿಷೇಧದ ಕಾನೂನುಗಳಿಗೆ ಹಲವು ಕಾರಣಗಳಿವೆ. ಕೆಲವು ಧಾರ್ಮಿಕ ಮತ್ತು ಸಾಮಾಜಿಕ ಒತ್ತಡಗಳಿಂದ ಬಂದಂಥವು. ಉದಾಹರಣೆಗೆ, ಕೆಲವು ಕ್ರಿಶ್ಚಿಯನ್‌ ಪಂಗಡಗಳಲ್ಲಿ ಗರ್ಭಪಾತವನ್ನು ಪಾಪ ಎಂದು ಪರಿಗಣಿಸುತ್ತವೆ. ಹಿಂದೂ ಸಮಾಜದಲ್ಲಿಯೂ ಇದನ್ನು ಪಾಪವೆಂದೇ ಪರಿಗಣಿಸಿದರೂ, ಅವಿವಾಹಿತ ಅಥವಾ ವಿವಾಹೇತರ ಸಂಬಂಧಗಳ ಸಂದರ್ಭಗಳಲ್ಲಿ ಬಸಿರು ತೆಗೆಯುವ ಪದ್ಧತಿ ಇದ್ದೇ ಇತ್ತು. ಅದೀಗ ವೈದ್ಯರ ನೆರವಿನಿಂದ ನಡೆಯುತ್ತದೆಯಷ್ಟೆ. ಈ ಧಾರ್ಮಿಕ ನಿಷೇಧಕ್ಕೆ ಕಾರಣ ಭ್ರೂಣ ಒಂದು ಜೀವಿ ಎನ್ನುವ ನಂಬಿಕೆ. ಅದೊಂದು ಹೊಸ ಜೀವಿಯಾದ್ದರಿಂದ ಗರ್ಭಪಾತ ಎನ್ನುವುದು ಭ್ರೂಣ ಹತ್ಯೆ. ಅದು ಕೊಲೆಗೆ ಸಮಾನ ಎನ್ನುವ ವಾದವಿದೆ.

ಈ ಬಗ್ಗೆ ವಿಜ್ಞಾನಿಗಳಲ್ಲಿ ಒಮ್ಮತವಿಲ್ಲವೆನ್ನಿ. ಮುಖ್ಯವಾಗಿ, ಭ್ರೂಣ ಎನ್ನುವುದರ ಬಗ್ಗೆ ಜನಸಾಮಾನ್ಯರು ಮತ್ತು ಜೀವಿವಿಜ್ಞಾನಿಗಳ ವ್ಯಾಖ್ಯಾನಗಳು ಬೇರೆ-ಬೇರೆ. ಜನಸಾಮಾನ್ಯರಿಗೆ ತಾಯಿಯ ಗರ್ಭದಲ್ಲಿರುವ ಯಾವುದೂ ಒಂದು ಜೀವವೇ. ವ್ಯಕ್ತಿಯೊಂದರ ಅಥವಾ ಜೀವಿಯೊಂದರ ಮೂಲ. ಆದರೆ, ವೈದ್ಯರು-ವಿಜ್ಞಾನಿಗಳ ಮಟ್ಟಿಗೆ ಭ್ರೂಣಕ್ಕೆ ವಿಶೇಷ ಅರ್ಥವಿದೆ. ಕಳೆದ ಮೂರು ಶತಮಾನಗಳಿಂದ ಜೀವಿವಿಜ್ಞಾನದಲ್ಲಿ ಆಗಿರುವ ಬೆಳೆವಣಿಗೆಗಳು ನಮಗೆ ಕೊಟ್ಟಿರುವ ಅರಿವಿನ ಫಲ ಇದು ಎನ್ನಬಹುದು. ಬಹಳ ಹಿಂದೆ ಜೀವಿಗಳಲ್ಲಿ ಬಸಿರು ಎನ್ನುವುದು ಒಂದು ನಿಗೂಢ ವಿದ್ಯಮಾನವಾಗಿತ್ತು. ಗಂಡು ಮತ್ತು ಹೆಣ್ಣು ಕೂಡಿದರೆ ಗರ್ಭ ನಿಲ್ಲುತ್ತದೆ ಎನ್ನುವುದೂ, ಇದು ಋತುಮತಿಯಾದ ಹೆಣ್ಣುಗಳಲ್ಲಿಯಷ್ಟೇ ಸಾಧ್ಯ ಎನ್ನುವುದೂ ಗೊತ್ತಿತ್ತು. ಈ ಅರಿವಿನ ಹಿನ್ನೆಲೆಯಲ್ಲಿ ಗರ್ಭಧಾರಣೆಯೇನು ಎನ್ನುವ ಬಗ್ಗೆ ಬಹಳಷ್ಟು ಕೌತುಕಮಯವಾದ, ಕೆಲವೊಮ್ಮೆ ಇಂದು ನಮಗೆ ನಗೆಪಾಟಲೆನ್ನಿಸುವಂತಹ ನಂಬಿಕೆಗಳೂ ಹುಟ್ಟಿಕೊಂಡಿದ್ದವು. ನವಿಲಿನ ಕಣ್ಣೀರು ಸೇವಿಸಿದರೆ ಗರ್ಭವತಿಯಾಗುತ್ತಾರೆ, ಹರಕೆ ಹೊತ್ತರೆ ಗರ್ಭ ನಿಲ್ಲುತ್ತದೆ ಎನ್ನುವ ನಂಬಿಕೆಗಳು ಹೀಗೆಯೇ ಹುಟ್ಟಿಕೊಂಡಿದ್ದು. ಸೂರ್ಯನ ಇಲ್ಲವೇ ಯಾವುದೋ ಋಷಿಯ ವರದಿಂದ, ಇಲ್ಲವೇ ನೋಟದಿಂದಲೇ ಗರ್ಭ ಧರಿಸಿದರೆನ್ನುವ ಕತೆಗಳನ್ನೂ ಕೇಳಿದ್ದೇವೆ. 

ಈ ನಂಬಿಕೆಗಳನ್ನು ಬುಡಮೇಲು ಮಾಡುವ ಸಂಶೋಧನೆಗಳು ಹದಿನೇಳನೆಯ ಶತಮಾನದಲ್ಲಿ ಆರಂಭವಾದವು. ಹೊಸದಾಗಿ ಆವಿಷ್ಕಾರವಾಗಿದ್ದ ಮೈಕ್ರೋಸ್ಕೋಪು, ಗರ್ಭದ ಬೆಳೆವಣಿಗೆಯ ಬಗ್ಗೆ ಹೊಸ ನೋಟವನ್ನು ನೀಡಿತೆನ್ನಬಹುದು. ವಿವಿಧ ಜೀವಿಗಳ ಮೊಟ್ಟೆಗಳ ಬೆಳವಣಿಗೆಯ ಜೊತೆಗೇ, ವಿವಿಧ ಅವಧಿಯ ಬಸುರಿಯರಲ್ಲಿ ಗರ್ಭಪಾತವಾದಾಗ ಸಿಕ್ಕಿದ ಭ್ರೂಣಗಳ ಅಧ್ಯಯನವೂ ಆಯಿತು. ಮನುಷ್ಯ ಶಿಶುವಿನ ಬೆಳವಣಿಗೆಗೂ ಮೀನಿನ ಮೊಟ್ಟೆಯ ಬೆಳವಣಿಗೆಗೂ ಹೆಚ್ಚೇನೂ ವ್ಯತ್ಯಾಸವಿಲ್ಲ ಎಂದು ತಿಳಿಯಿತು. ಗಂಡು-ಹೆಣ್ಣಿನ ಮಿಲನವಾದರಷ್ಟೇ ಸಾಲದು, ಗಂಡಿನ ವೀರ್ಯಾಣು ಹೆಣ್ಣಿನಲ್ಲಿರುವ ಅಂಡದೊಟ್ಟಿಗೆ ಕೂಡಿದಾಗ ಮಾತ್ರ ಹೊಸ ಜೀವ ಹುಟ್ಟುತ್ತದೆ; ಅದರ ನಂತರದ ಬೆಳವಣಿಗೆ ಆ ಹೊಸ ಜೀವಕ್ಕೊಂದು ಆಕಾರ, ರೂಪು ನೀಡುತ್ತದೆ ಎನ್ನುವುದೂ ಸ್ಪಷ್ಟವಾಯಿತು.

ಈ ಲೇಖನ ಓದಿದ್ದೀರಾ?: ಮೈಕ್ರೋಸ್ಕೋಪು | ಹವಾಮಾನ ಬದಲಾವಣೆ - ಬಾಗಿದ ಹೆಣ್ಣಿನ ಬೆನ್ನಿಗೆ ಬೀಸುವ ಬಡಿಗೆ

ಒಟ್ಟಾರೆ, ಭ್ರೂಣ ಎನ್ನುವುದು ಲಕ್ಷಾಂತರ ಜೀವಕೋಶಗಳ ಮುದ್ದೆಯಷ್ಟೆ. ಇದರ ಹುಟ್ಟು ಮೊದಲಿಗೆ ಒಂದು ಜೀವಕೋಶದಿಂದ ಆರಂಭವಾಗುತ್ತದೆ. ಮಹಿಳೆಯರಲ್ಲಿ ಗರ್ಭ ನಿಂತ ಮೊದಲ ಎರಡು ವಾರದವರೆಗೂ ಈ ಜೀವಕೋಶ ವಿಭಜಿಸುತ್ತ, ಸಾವಿರಾರು ಕೋಶಗಳ ಮುದ್ದೆಯಾಗುತ್ತದೆ. ಅನಂತರವಷ್ಟೇ ಅದಕ್ಕೆ ಕಣ್ಣು, ಮೂಗು, ಬಾಯಿ ಕಾಣಿಸುವುದು. ಹೀಗೆ, ಅಂಗಗಳು ಸ್ಪಷ್ಟವಾಗಿ ಕಾಣಿಸಲು ಏನಿಲ್ಲವೆಂದರೂ ಮೂರು ತಿಂಗಳುಗಳಾಗಬೇಕು. ತದನಂತರ ಹೃದಯ, ಮಿದುಳು ಹೀಗೆ ಒಂದೊಂದೇ ಅಂಗ ಬೆಳೆದು, ಕೊನೆಗೆ ಮಗು ಎನ್ನಿಸಿಕೊಳ್ಳುತ್ತದೆ. ಇದು ಭ್ರೂಣದ ಬೆಳವಣಿಗೆಯ ಕತೆ.

'ಬಸಿರನ್ನು ಕಳೆಯಲು ಮೂರು ತಿಂಗಳು ಮೀರಿರಬಾರದು' ಎನ್ನುವ ನಿಯಮ ಬಂದಿದ್ದು ಹೀಗೆ. ಇದು ಎಲ್ಲ ವೈದ್ಯರೂ ಒಪ್ಪಿದ ವಿಚಾರ. ಏಕೆಂದರೆ, ಮೂರು ತಿಂಗಳಿಗೂ ಮೊದಲು ಭ್ರೂಣದಲ್ಲಿ ಅದು ಮನುಷ್ಯ ಎನ್ನುವ ಯಾವ ಕುರುಹೂ ಇರುವುದಿಲ್ಲ. ಜೀವ ಎನ್ನುವ ಲಕ್ಷಣಗಳು ಇದ್ದರೂ ಸ್ವತಂತ್ರವಾಗಿ ಬದುಕಲು ಅದಕ್ಕೆ ಆಗುವುದಿಲ್ಲ. ಆದರೆ, ಒಂಬತ್ತು ತಿಂಗಳೂ ತಾಯಿಯ ಗರ್ಭದಲ್ಲಿ ಆರೈಕೆ ಪಡೆದು ಬೆಳೆದು ಹುಟ್ಟಿದ ಶಿಶು ತಾನಾಗಿ ಉಸಿರಾಡಬಲ್ಲದು, ಹಾಲು ಹೀರಬಲ್ಲದು, ಕೈ-ಕಾಲು ಆಡಿಸಬಲ್ಲದು. ಇಷ್ಟಾದರೂ ಚಟುವಟಿಕೆ ಇಲ್ಲದ ಕೋಶಗಳ ಮುದ್ದೆಯನ್ನು ವ್ಯಕ್ತಿ ಎನ್ನಲಾದೀತೇ? ಅದನ್ನು ಕಿತ್ತೊಗೆದದ್ದು ಕೊಲೆ ಎಂದಾದೀತೇ? ಇದು ವಿಜ್ಞಾನಿಗಳ ಪ್ರಶ್ನೆ.

ಐವತ್ತು ವರ್ಷಗಳ ಹಿಂದೆ ವೈದ್ಯಕೀಯ ವಿಜ್ಞಾನ ಸಾಧಿಸಿದ ಸಾಧನೆ ಇದಕ್ಕೆ ಉತ್ತರಿಸಿದೆ. ಪ್ರನಾಳ ಶಿಶು ತಂತ್ರವನ್ನು ಅಭಿವೃದ್ಧಿಪಡಿಸಿದ ವಿಜ್ಞಾನಿಯೊಬ್ಬರು, ಭ್ರೂಣ ಬೆಳೆಯುವುದರಲ್ಲಿ ಎರಡು ಹಂತಗಳನ್ನು ಗುರುತಿಸಿದ್ದರು. ಮೊದಲನೆಯದು, ಜೀವಕೋಶಗಳ ಸಂಖ್ಯೆಯಲ್ಲಿ ಅಭಿವೃದ್ಧಿಯ ಹಂತ. ತಾಯಿಯ ಗರ್ಭದಲ್ಲಿ ತಂದೆಯ ವೀರ್ಯ ಸೋಂಕಿದ ಅಂಡ ಮೊದಲು ಒಡೆದು ಎರಡು, ಅನಂತರ ನಾಲ್ಕು, ತದನಂತರ ಎಂಟು... ಎಂದು ಮುಂದುವರಿದು ಕೋಶಗಳ ಮುದ್ದೆಯಾಗುತ್ತದೆ. ಈ ಹಂತದಲ್ಲಿ ಆ ಮುದ್ದೆಯನ್ನು ತಾಯಿಯ ಗರ್ಭದೊಳಗೆ ಇರಿಸಿದರೆ, ಅದು ಅಲ್ಲಿ ಅಂಟಿಕೊಂಡು ಹೊಸ ವ್ಯಕ್ತಿಯಾಗಿ ರೂಪುಗೊಳ್ಳಬಲ್ಲದು. ಹೀಗಾಗಿ, ಇದನ್ನು ಭ್ರೂಣ ಎಂದು ಕರೆಯಬಹುದು. ಇದಕ್ಕೂ ಮೊದಲಿನದ್ದು ಭ್ರೂಣಪೂರ್ವ ಅಥವಾ ಪ್ರಿಎಂಬ್ರಿಯೋ ಎಂದು ಅವರು ಹೆಸರಿಸಿದ್ದರು. ಅಂಡ-ವೀರ್ಯ ಕೂಡಿದ ಎಂಟೊಂಬತ್ತು ದಿನಗಳಲ್ಲಿ ಇದು ನಡೆಯುತ್ತದೆ. ಇದಾದ ನಂತರವೇ ಬಸಿರು ನಿಂತಿತು ಎನ್ನಬಹುದು.

Image
Abortion Protest 8

ಭ್ರೂಣವಲ್ಲದ ಈ ಕೋಶಗಳ ಮುದ್ದೆಯನ್ನು ವ್ಯಕ್ತಿ ಎನ್ನಲಾಗದು ಎಂಬ ವಿಜ್ಞಾನಿಗಳ ವಾದಕ್ಕೆ ಒಪ್ಪಿಗೆಯೂ ಸಿಕ್ಕಿತು. ವಿಜ್ಞಾನಿಗಳ ಈ ವಾದಕ್ಕೆ ಕಾರಣವಿಷ್ಟೇ: ಒಂದು ವೇಳೆ ಭ್ರೂಣ ಬೆಳವಣಿಗೆಯ ಎಲ್ಲ ಹಂತಗಳನ್ನೂ ವ್ಯಕ್ತಿಯ ಹುಟ್ಟು ಎಂದು ಪರಿಗಣಿಸಿದ್ದರೆ, ಜೀವಿವಿಜ್ಞಾನದಲ್ಲಿ ಅದರಲ್ಲಿಯೂ ಪ್ರಜನನದ ಕುರಿತಾದ ಸಂಶೋಧನೆಗಳನ್ನು ನಡೆಸಲಾಗುತ್ತಿರಲಿಲ್ಲ. ಸಹಜವಾಗಿ ಗರ್ಭಪಾತವಾದ ಭ್ರೂಣಗಳನ್ನು ಹೆಕ್ಕಿ ನೋಡುವುದಷ್ಟೇ ಸಾಧ್ಯವಾಗುತ್ತಿತ್ತು. ಭ್ರೂಣ ಮತ್ತು ಭ್ರೂಣ ಪೂರ್ವ ಎಂದು ವರ್ಗೀಕರಿಸಿದ್ದರಿಂದಾಗಿ ಮೂವತ್ತೆರಡು ಕೋಶಗಳ ಮುದ್ದೆಯಾಗುವವರೆಗೂ ಅಂಡವನ್ನು ಗರ್ಭದ ಹೊರಗೆ ಕೃಷಿ ಮಾಡಬಹುದಾಯಿತು. ಪ್ರನಾಳ ಶಿಶು ಮೊದಲಾದ ತಂತ್ರಗಳು ಸಾಧ್ಯವಾದವು. 

ಅಮೆರಿಕದ ಸುಪ್ರೀಂ ಕೋರ್ಟಿನ ಆದೇಶ ಈ ಎಲ್ಲ ವೈಜ್ಞಾನಿಕ ಅರಿವನ್ನೂ ಬದಿಗೊತ್ತಿ, ಭಾವನಾತ್ಮಕ ಎನ್ನಿಸುವ ಧಾರ್ಮಿಕ ಕಾರಣಗಳನ್ನು ಮುಂದು ಮಾಡಿ, ಗರ್ಭಪಾತ ಎನ್ನುವುದು ಎಲ್ಲ ಹಂತದಲ್ಲಿಯೂ ಭ್ರೂಣ ಹತ್ಯೆ ಎಂದೇ ತೀರ್ಮಾನಿಸಿಬಿಟ್ಟಿದೆ. ಇದರ ಪರಿಣಾಮವೇನೆಂದು ಕಾದುನೋಡಬೇಕಿಲ್ಲ. ಈ ಹಿಂದೆ ಇದ್ದ ಪರಿಸ್ಥಿತಿಯನ್ನು ಗಮನಿಸಿದರೆ ಸಾಕು. ಅಮೆರಿಕದಂತಹ ಮುಕ್ತ ಸಮಾಜದಲ್ಲಿ ಹರೆಯದಲ್ಲಿಯೇ ಬಸಿರಾಗುವ, ಮದುವೆಯಾಗದ ಹೆಣ್ಣುಮಕ್ಕಳ ಸಂಖ್ಯೆ ಜಾಸ್ತಿ. ಗರ್ಭಪಾತಕ್ಕೆ ಅವಕಾಶವಿದ್ದಾಗ ತಮ್ಮ ಕಾಲ ಮೇಲೆ ತಾವು ನಿಲ್ಲುವುದಕ್ಕೆ ಶಕ್ತರಾಗುವುದಕ್ಕೂ ಮುನ್ನ ಬೇಡದ ಬಸಿರನ್ನು ಅಳಿಸಿಕೊಳ್ಳಬಹುದಿತ್ತು. ಆದರೆ, ಈಗ ಹಾಗಾಗುವುದಿಲ್ಲ. ಒಂದೋ, ಅವರು ಪೂರ್ಣಾವಧಿ ಬಸಿರನ್ನು ಹೊತ್ತು ಮಗುವನ್ನು ಹೆರಬೇಕು. ತಂದೆಯಿಲ್ಲದ ಮಗುವಿನ ಪೋಷಕಳೆನ್ನಿಸಿಕೊಳ್ಳಬೇಕು. ಇಲ್ಲವೇ, ಕಳ್ಳತನದಿಂದ ಬಸಿರು ಕಳೆದುಕೊಳ್ಳಬೇಕು. ಎರಡೂ ಕೂಡ ಆ ಹೆಣ್ಣಿಗೂ, ಸಮಾಜಕ್ಕೂ ಆರ್ಥಿಕವಾಗಿ ಹೊರೆಯಾಗುವ ವಿಷಯವೇ. ಇವು ಗಂಭೀರವಾದ ಸಾಮಾಜಿಕ ಸಮಸ್ಯೆಗಳನ್ನು ತಂದೊಡ್ಡುತ್ತವೆ ಎನ್ನುವುದು ಸಮಾಜ ವಿಜ್ಞಾನಿಗಳ ಅಭಿಪ್ರಾಯ. 

ಈ ನಿಟ್ಟಿನಲ್ಲಿ ಗರ್ಭಪಾತಕ್ಕೆ ಅನ್ವಯಿಸುವ ಭಾರತದ ಕಾನೂನು ಸಾಕಷ್ಟು ಮುಂದಿದೆ ಎನ್ನುತ್ತಾರೆ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಕೇತಕಿ ದೇಸಾಯಿ. ಭಾರತದಲ್ಲಿ ಇಪ್ಪತ್ತೈದು ವಾರಗಳು ಅಂದರೆ, ಸುಮಾರು ಆರು ತಿಂಗಳ ಬಸಿರಿನಲ್ಲಿಯೂ ಗರ್ಭಪಾತ ಮಾಡಿಸಿಕೊಳ್ಳುವ ಅವಕಾಶವಿದೆ. . ಕೆಲವು ವರ್ಷಗಳ ಹಿಂದೆ ಮುಂಬೈನಲ್ಲಿ ಹೀಗೇ ಒಂದು ದಂಪತಿ ಗರ್ಭಪಾತ ಮಾಡಿಸಲು ಕೋರ್ಟಿನ ಮೊರೆಹೋಗಿತ್ತು. ಬಸಿರಾಗಿ ಆರು ತಿಂಗಳ ನಂತರ ಭ್ರೂಣ ಪರೀಕ್ಷೆಯ ಸಮಯದಲ್ಲಿ ಅದರ ಹೃದಯದ ಬೆಳವಣಿಗೆ ಸರಿ ಇಲ್ಲ ಎಂದು ತಿಳಿದುಬಂದಿತ್ತು. ಮಗು ಹುಟ್ಟಿದ್ದರೂ ಅದರ ಬದುಕು ಬಹಳ ಕಠಿಣವಾಗುತ್ತಿತ್ತು. ಅಂತಹ ಮಗು ತಮಗೆ ಬೇಡ ಎಂದು ನಿರ್ಧರಿಸಿದ ತಂದೆ-ತಾಯಿ, ಗರ್ಭಪಾತ ಮಾಡಿಸಬೇಕೆಂದು ತೀರ್ಮಾನಿಸಿದ್ದರು. ಆದರೆ, ಆಗ ಕಾನೂನಿನಲ್ಲಿ ಅದಕ್ಕೆ ಅವಕಾಶ ಇರಲಿಲ್ಲ. ಕೋರ್ಟು ಕೂಡ ಅದಕ್ಕೆ ಸಮ್ಮತಿಸಲಿಲ್ಲವೆನ್ನಿ. ಅದರ ಫಲವಾಗಿಯೇ ಹೊಸ ತಿದ್ದುಪಡಿಯಾಗಿ, ಈಗ ಆರು ತಿಂಗಳವರೆಗೂ ಬಸಿರಿಳಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. 

Image
Abortion Protest 10

ಸ್ವ-ಇಚ್ಛೆಯಿಂದ ಗರ್ಭಪಾತ ಮಾಡಿಸಿಕೊಳ್ಳುವ ಅವಕಾಶ ಕೇವಲ ಹನ್ನೆರಡು ವಾರಗಳು ಅಥವಾ ಮೂರು ತಿಂಗಳ ಬಸಿರಿನವರೆಗೆ ಮಾತ್ರ. ತದನಂತರ ಆಯಾ ಜಿಲ್ಲೆಯ ವೈದ್ಯಕೀಯ ಬೋರ್ಡಿನ ಅನುಮತಿ ಪಡೆದು ಬಸಿರಿಳಿಸಿಕೊಳ್ಳಬಹುದು. ಬೋರ್ಡಿನ ಅನುಮತಿ ಪಡೆಯುವುದು ಸುಲಭದ ಮಾತಲ್ಲವೆನ್ನಿ. ಆದರೂ ಇದು ಅಮೆರಿಕಕ್ಕಿಂತಲೂ ಸುಧಾರಿತ ಕಾನೂನು ಎನ್ನಬಹುದು.

ಕಾನೂನು ಏನೇ ಇದ್ದರೂ, ಅದನ್ನು ಮುರಿಯುವವರು ಇದ್ದೇ ಇರುತ್ತಾರಲ್ಲ? ಅವರಿಲ್ಲದೆ ಸಮಾಜವಿಲ್ಲ. ಉದಾಹರಣೆಗೆ, ಮೊನ್ನೆ ಇನ್ನೊಂದು ಸುದ್ದಿ ಬಂದಿತ್ತು. ಬೆಳಗಾವಿಯ ಬಳಿಯಲ್ಲಿ ಚರಂಡಿಯಲ್ಲಿ ಏಳು ಭ್ರೂಣಗಳು ದೊರೆತಿದ್ದವು. ಇವುಗಳಲ್ಲಿ ಹೆಚ್ಚಿನವು ಮೂರು ತಿಂಗಳನ್ನೂ ಮೀರಿದವು ಎನ್ನುವುದು ವಿಶೇಷ. ಕಾನೂನಿನ ಪ್ರಕಾರ ಇದು ಅಪರಾಧವೇನಲ್ಲವಾದರೂ, ಹೀಗೆ ಕದ್ದುಮುಚ್ಚಿ ಮಾಡುವ ಅಗತ್ಯವೇನಿತ್ತು ಎನ್ನುವ ಪ್ರಶ್ನೆ ಬರುತ್ತದೆ. ಇದು ಕಾನೂನುಬಾಹಿರ ಅಲ್ಲದಿದ್ದರೂ ನಿಯಮಬದ್ಧವಲ್ಲ. ಜೊತೆಗೆ, ಭಾರತದಲ್ಲಿ ಹೆಣ್ಣು ಭ್ರೂಣವೆನ್ನುವ ಕಾರಣಕ್ಕೆ ಅದನ್ನು ಹತ್ಯೆಗೈಯುವುದು ಕಾನೂನುಬಾಹಿರ.

ಮಹಿಳೆಯರ ಹಕ್ಕುಗಳ ಮಾತು ಒತ್ತಟ್ಟಿಗಿರಲಿ, ವೈಜ್ಞಾನಿಕವಾಗಿಯೂ ಕೆಲವು ಪ್ರಶ್ನೆಗಳೇಳುತ್ತವೆ. ಅಮೆರಿಕದ ಸುಪ್ರೀಂ ಕೋರ್ಟಿನ ತೀರ್ಪನ್ನೇ ಮುಂದಿಟ್ಟುಕೊಂಡು, ಪ್ರನಾಳಗಳಲ್ಲಿ ಬೆಳೆಸಿದ ಅಂಡಗಳನ್ನು ನಾಶ ಮಾಡಬಾರದು ಎನ್ನುವ ವಾದವೂ ಬರಬಹುದು. ಆಗ ಪ್ರನಾಳ ಶಿಶು ಅಥವಾ ಸ್ಟೆಮ್‌ ಸೆಲ್‌ ಸಂಶೋಧನೆಗಳಿಗೆ ಅಡ್ಡಿಯಾಗಲಿದೆ. ಹಾಗಾಗಲಿಲ್ಲವೆಂದರೆ ಅದು ವಿಜ್ಞಾನದ ಅದೃಷ್ಟ. ಆಗ ಇನ್ನೂ ಜಟಿಲವಾದ ಪ್ರಶ್ನೆಗಳೂ ಹುಟ್ಟಬಹುದು. ತಾಯಿಯ ಅಂಡದಿಂದ ಹುಟ್ಟಿದ್ದರಿಂದ ಈ ಭ್ರೂಣವನ್ನು ಹೊಸ ಜೀವ ಎನ್ನುತ್ತೇವಲ್ಲವೇ? ಇದೀಗ ಸ್ಟೆಮ್‌ ಸೆಲ್‌ ತಂತ್ರಜ್ಞಾನ ಚರ್ಮದ ಕೋಶಗಳನ್ನೂ ವೀರ್ಯವನ್ನಾಗಿಯೋ, ಅಂಡವನ್ನಾಗಿಯೋ ಪರಿವರ್ತಿಸಬಲ್ಲದು. ಅವನ್ನು ಪೂರ್ಣ ಪ್ರಮಾಣದ ಜೀವಿಯನ್ನಾಗಿ ಬೆಳೆಸಬಲ್ಲದು. ಅಂದಮೇಲೆ, ಪ್ರತಿದಿನವೂ ನಾವು ಸ್ನಾನ ಮಾಡುವಾಗ ಹೆರೆದು ಹಾಕುವ ಸಾವಿರಾರು ಕೋಶಗಳೂ ಸಂಭಾವ್ಯ ವ್ಯಕ್ತಿಗಳೆನ್ನಿಸುತ್ತದೆಯಲ್ಲವೇ? ಹಾಗಂತ, ಸ್ನಾನ ಮಾಡದಿರೋಣವೇ? ಅವೆಲ್ಲವೂ ಜೀವಕೋಶಗಳಷ್ಟೇಯೋ, ಸಂಭಾವ್ಯ ಭ್ರೂಣಗಳೋ? ಭ್ರೂಣ ಎನ್ನುವುದು ವ್ಯಕ್ತಿ ಎಂದಾಗುವ ಸೀಮೆಯನ್ನು ಗುರುತಿಸುವುದು ಹೇಗೆ? ಬಹುಶಃ ಈ ಪ್ರಶ್ನೆಗೆ ವಿಜ್ಞಾನ ಈಗ ಉತ್ತರ ಹುಡುಕಬೇಕಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್