ಕರುಣೆಯ ಕೃಷಿ | ನಿಯಿ ಒಸುಂಡರೆ ಕವಿತೆ 'ನನಗೇಕೆ ಉಸಾಬರಿ?'

Niyi Osundare poem

ಒಂದು ಮುಂಜಾನೆ ಮಿಸ್ಟರ್ ಅಕನ್ನಿಯನ್ನು ಎತ್ತಿಕೊಂಡು ಹೋದರು ಅವರು

ಗಡಿಗೆಯ ಮಣ್ಣಿನಂತೆ ಮೆತ್ತಗಾಗಿಸಿದರು ಅವನನ್ನು

ಹಾಗೂ ಕಾಯುತ್ತ ನಿಂತಿದ್ದ

ಜೀಪಿನ ಉದರದಲ್ಲಿ ತುರುಕಿದರು ಅವನನ್ನು.

 

ನನಗೇನಂತೆ, ಅದು ನನಗೆ ಸಂಬಂಧಿಸಿದ್ದಲ್ಲ,

ನಾನು ಸವಿಯುತ್ತಿರುವ ಅನ್ನಕ್ಕೆ ಅವರು

ಕೈಹಾಕುವವರೆಗೆ, ನನಗೇಕೆ ಉಸಾಬರಿ?

 

ಒಂದು ರಾತ್ರಿ ಬಂದರು ಅವರು

ಇಡೀ ಮನೆಮಾರನ್ನು ಬೂಟಿನಿಂದ ಎಬ್ಬಿಸಿದರು

ಮಿಸ್ಟರ್ ಡನಾಲ್ಡಿಯನ್ನು ಹೊರಗೆ ಎಳೆದುಕೊಂಡು ಹೋದರು

ಸುದೀರ್ಘ ಕಾಲದವರೆಗೆ ಕಾಣೆಯಾಗಲು.

 

ನನಗೇನಂತೆ, ಅದು ನನಗೆ ಸಂಬಂಧಿಸಿದ್ದಲ್ಲ,

ನಾನು ಸವಿಯುತ್ತಿರುವ ಅನ್ನಕ್ಕೆ ಅವರು

ಕೈಹಾಕುವವರೆಗೆ, ನನಗೇಕೆ ಉಸಾಬರಿ?

 

ಒಂದು ದಿನ ಮಿಸ್ ಚಿನ್‌ವೆ ಹೋಗಿದ್ದಳು ಕೆಲಸಕ್ಕೆ

ಆಗ ಆಕೆಗೆ ತಿಳಿದದ್ದು: ಕೆಲಸ ಹೋಗಿತ್ತು.

ಪ್ರಶ್ನೆ ಇಲ್ಲ, ಎಚ್ಚರಿಕೆ ಇಲ್ಲ, ವಿಚಾರಣೆ ಇಲ್ಲ -

ಕುಂದು ಒಂದೂ ಇರದ ವೃತ್ತಿಜೀವನಕ್ಕೆ ಒಂದೇ ಸಲ ಕೊಕ್

 

ನನಗೇನಂತೆ, ಅದು ನನಗೆ ಸಂಬಂಧಿಸಿದ್ದಲ್ಲ,

ನಾನು ಸವಿಯುತ್ತಿರುವ ಅನ್ನಕ್ಕೆ ಅವರು

ಕೈಹಾಕುವವರೆಗೆ, ನನಗೇಕೆ ಉಸಾಬರಿ?

 

ಕುಳಿತಿದ್ದೆ ರಾತ್ರಿ ಊಟವ ಸವಿಯಲೆಂದು

ಕೇಳಿಸಿತು ಬಾಗಿಲ ಬಡಿತ

ಮರಗಟ್ಟಿಹೋಯಿತು ನನ್ನ ಹಸಿದ ಕೈ

 

ನನ್ನ ದಿಗ್ಭ್ರಾಂತ ಅಂಗಳದಲ್ಲಿ ಜೀಪು ಕಾಯುತ್ತಿತ್ತು

ತನ್ನ ವಾಡಿಕೆಯ ಮೌನದಲ್ಲಿ ಕಾಯುತ್ತಿತ್ತು

ಜೀಪು ಕಾಯುತ್ತಿತ್ತು.

* * * * *

“Every beautiful poem is an act of resistance” - Mahmoud Darwish

Image
Niyi Osundare 1

ನಿಯಿ ಒಸುಂಡರಿ (1947ರಲ್ಲಿ ಜನನ) ನೈಜೀರಿಯಾದ ಹೆಸರಾಂತ ಕವಿಗಳಲ್ಲಿ ಒಬ್ಬರು. ಇಂಗ್ಲಿಷ್‌ನಲ್ಲಿ ಬರೆಯುವ ನಿಯಿ ಅವರ ಕಾವ್ಯವು ಯೊರುಬಾ ಜನಪದ ಕಾವ್ಯದ ಜೊತೆಗೆ, ವಿಶ್ವದ ಹಲವು, ಅದರಲ್ಲೂ ಅಫ್ರಿಕನ್-ಅಮೆರಿಕನ್, ಲ್ಯಾಟಿನ್-ಅಮೆರಿಕನ್ ಹಾಗೂ ಯುರೋಪಿನ ಕಾವ್ಯದೊಂದಿಗೆ ಅನುಸಂಧಾನ ನಡೆಸಿರುವುದನ್ನು ಕಾಣುತ್ತೇವೆ.

ತಮ್ಮ ಕಾವ್ಯದಲ್ಲಿ ಆಫ್ರಿಕಾ, ಅದರಲ್ಲೂ ನೈಜೀರಿಯಾ ದೇಶ ಎದುರಿಸುತ್ತಿರುವ ಹಲವು ಸಮಸ್ಯೆಗಳ ಕುರಿತಾಗಿ ನಿಯಿ ಒಸುಂಡರಿ ತೀಕ್ಷ್ಣ ರಾಜಕೀಯ ಪ್ರಜ್ಞೆಯಿಂದ ಬರೆಯುತ್ತಾರೆ. ಆಫ್ರಿಕಾದಲ್ಲಿ ಕವಿಯಾದವರಿಗೆ ರಾಜಕೀಯ ವಿಷಯ ಬರೆಯುವುದು ಅನಿವಾರ್ಯ ಎನ್ನುವ ಅವರು, ನೈಜೀರಿಯಾದ ಭ್ರಷ್ಟ ಧುರೀಣರ ಕುರಿತಾಗಿ ಹರಿತ ವಿಮರ್ಶೆ ಮಾಡುತ್ತಾರೆ. ಕಿವಿ ಕೇಳದ ತಮ್ಮ ಮಗಳಿಗಾಗಿ ಈಗ ಅಮೆರಿಕದಲ್ಲಿ ವಾಸವಾಗಿರುವ ನಿಯಿ, ಕಾವ್ಯದ ಹೊರತಾಗಿ ನಾಟಕ, ವಿಮರ್ಶೆ, ಅಂಕಣಗಳನ್ನೂ ಬರೆಯುತ್ತಾರೆ. ವೃತ್ತಿಯಲ್ಲಿ ಅಧ್ಯಾಪಕರಾಗಿರುವ ಅವರು, ಬರವಣಿಗೆ ಮತ್ತು ಅಧ್ಯಾಪನ ಎರಡೂ ಒಂದಕ್ಕೊಂದು ಪೂರಕ ಎನ್ನುತ್ತಾರೆ. "ಕಲಿಕೆ ಎನ್ನುವುದು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಒಟ್ಟಾಗಿ ನಡೆಸುವ ಬೌದ್ಧಿಕ, ಸಾಮಾಜಿಕ ಶೋಧನೆ ಮತ್ತು ವಿನಿಮಯ," ಎಂದು ತಾವು ನಂಬಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಈ ಕವಿತೆ ಓದಿದ್ದೀರಾ?: ಕರುಣೆಯ ಕೃಷಿ | ಡೆನಿಸ್ ಬ್ರೂಟಸ್ ಕವಿತೆ 'ಗಲ್ಲಿಗೇರಿಸಿದರು ಅವನನ್ನು - ನಾನೆಂದೆ ತಿರಸ್ಕಾರದಿಂದ'

1993ರಿಂದ 1998ರವರೆಗೆ ಜನರಲ್ ಸನ್ನಿ ಅಬಾಚಾ ಸರ್ವಾಧಿಕಾರ ಆಡಳಿತ ನಡೆಸುತ್ತಿದ್ದ ಸಂಧರ್ಭದಲ್ಲಿ ಬರೆದ 'ನಾಟ್ ಮೈ ಬಿಸಿನೆಸ್' ಎಂಬ ಈ ಕವನವೇ ತೋರಿಸುವಂತೆ, ನಿಯಿ ಒಸುಂಡರಿ ಅವರದ್ದು ನೇರಾನೇರ ವಿಮರ್ಶಾತ್ಮಕ ಧ್ವನಿ. ಯೊರುಬಾ ಭಾಶೆಯ ಲಯವನ್ನು ತಮ್ಮ ಇಂಗ್ಲಿಷ್ ಕವನಗಳಲ್ಲಿಯೂ ತರಲು ಪ್ರಯತ್ನಿಸುವ ಅವರು, "ಯೊರುಬಾ ಭಾಷೆಯಲ್ಲಿ ನಾವು ಕವನ ಓದುವುದಿಲ್ಲ, ನಗಾರಿಯ ಲಯದೊಂದಿಗೆ ಹಾಡುತ್ತೇವೆ," ಎನ್ನುತ್ತಾರೆ.

ಮಾರ್ಕ್ಸ್‌ವಾದದೊಂದಿಗೆ ಯೊರುಬಾ ಮಿಥಕಗಳಿಂದ ಎತ್ತಿಕೊಂಡ ಸಂಕೇತಗಳನ್ನು ಬಳಸಿ ಕಾವ್ಯ ಬರೆಯುವ ಅವರು, ಆಫ್ರಿಕಾದಲ್ಲಿ ಜನರು ಎದುರಿಸಬೇಕಾಗಿರುವ ಸಾಮಾಜಿಕ ಅನ್ಯಾಯ ಮತ್ತು ಅಮಾನುಷ ಹಿಂಸೆಯ ಜೊತೆಗಿನ ಹೋರಾಟವೇ ಕವಿಯ ಹೊಣೆ ಎಂದು ನಂಬಿರುವವರು. ಹಾಗಾಗಿಯೇ, ಕೇವಲ ಕಾವ್ಯದಲ್ಲಿ ಮಾತ್ರವಲ್ಲದೇ ತಮಗೆ ಲಭ್ಯವಿರುವ ಎಲ್ಲ ಮಾಧ್ಯಮದ ಮೂಲಕವೂ ಅನ್ಯಾಯದ ವಿರುದ್ಧ ಅವರು ತಮ್ಮ ದನಿಗೂಡಿಸಿದ್ದಾರೆ.

ಸರ್ವಾಧಿಕಾರಿ ಪ್ರಭುತ್ವ ಯಾವತ್ತೂ ಯಾವುದೇ ನಾಡಿಗೂ ಒಳಿತನ್ನು ತಂದಿಲ್ಲ. ಸಾಧಾರಣ ಜನರ ಸಾಮಾನ್ಯ ದಿನಗಳೂ ವಿಪರೀತ ಆತಂಕಗಳಿಂದ ಕೂಡಿರುವಂತೆ ಮಾಡುವುದೇ ತನ್ನ ಉಳಿಗಾಲವೆಂದು ಪ್ರತಿ ಸರ್ವಾಧಿಕಾರಿಯೂ ಅರಿತಿರುತ್ತಾನೆ. ಹಾಗಾಗಿಯೇ, ಸರ್ವಾಧಿಕಾರಿ ಪ್ರಭುತ್ವದಲ್ಲಿ ದೈನಂದಿನ ಬದುಕು ದುಸ್ತರವಾಗುತ್ತ ಸಾಗುತ್ತದೆ. ಬದುಕಿನಲ್ಲಿ ಅಸ್ತಿತ್ವದ ಪ್ರಶ್ನೆಯೇ ಪೆಡಂಭೂತವಾದಾಗ ಜನರು ರಾಜಕೀಯ ಪ್ರಜ್ನೆಯನ್ನು ಬದಿಗಿರಿಸಿ, ನ್ಯಾಯದ ಮಾಗಣಿಯನ್ನು ಹಿಂದಿಟ್ಟು, ಪ್ರಶ್ನಿಸುವ ತಮ್ಮ ಹಕ್ಕನ್ನು ತಾವೇ ಮೊಟಕುಗೊಳಿಸಿಕೊಂಡು ಪ್ರಭುತ್ವದ ಮುಂದುವರಿಕೆಗೆ ತಡೆಯೊಡ್ಡುವುದಿಲ್ಲವೆಂಬ ನಂಬಿಕೆ ಇದಕ್ಕೆ ಕಾರಣ. ಇದು ನಮ್ಮದೇ ನಾಡಿನಲ್ಲಿಯೂ ನಾವು ಕಾಣುತ್ತ ಇರುವ ಸಂಗತಿಯೇ ಆಗಿದೆ. ಜನರು ತಮ್ಮದೇ ಆತಂಕಗಳಲ್ಲಿದ್ದಾಗ, ಈ ಕವನ ಸೂಚಿಸಿರುವಂತೆ, ಇತರರ ನೋವಿಗೆ ಪ್ರತಿಸ್ಪಂದಿಸುವುದರಿಂದ ಹಿಂದೇಟು ಹಾಕುತ್ತಾರೆ. ಆದರೂ ಇತಿಹಾಸವೇ ತೋರಿಸಿದಂತೆ, ನಿಯಿ ಒಸುಂಡರಿ ಕೂಡ ಈ ಕವನದಲ್ಲಿ ಒತ್ತಿ ಹೇಳಿರುವಂತೆ, ಅನ್ಯಾಯಕ್ಕೆ ವಿರುದ್ಧ ದನಿ ಎತ್ತದವರು ಒಂದಲ್ಲ ಒಂದು ದಿನ ಅದೇ ಅನ್ಯಾಯಕ್ಕೆ ಗುರಿಯಾಗುತ್ತಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್