ಜಾಗರ | ಭೂಮಿಯ ಮೇಲಿದ್ದೂ ಆಕಾಶದಲ್ಲೇ ಉಳಿದುಹೋಗುವ ರಾಯನ್!

Up In The Air

ಇದ್ದಕ್ಕಿದ್ದಂತೆ ವೈರಾಗ್ಯ ತಾಳಿದ ಮದುಮಗ, "ನಾಳೆ ನಾನು ಮದುವೆಯಾಗುತ್ತೇನೆ, ಮಕ್ಕಳಾಗುತ್ತವೆ, ಅವರನ್ನು ಓದಿಸುತ್ತೇನೆ, ಅವರು ಕೆಲಸಕ್ಕೆ ಸೇರಿ ಮದುವೆಯಾಗುತ್ತಾರೆ. ಅವರಿಗೂ ಮಕ್ಕಳು ಹುಟ್ಟುತ್ತವೆ, ನಾನು ಅಜ್ಜನಾಗುತ್ತೇನೆ, ಆಮೇಲೆ ಒಂದು ದಿನ ಸತ್ತುಹೋಗುತ್ತೇನೆ. ಇದೆಲ್ಲ ಅರ್ಥಹೀನ, ನಾನು ಮದುವೆ ಆಗುವುದಿಲ್ಲ," ಎಂದುಬಿಡುತ್ತಾನೆ!

ನಲವತ್ತರ ಪ್ರಾಯದ ರಾಯನ್, ವರ್ಷದ ಮುಕ್ಕಾಲು ಭಾಗಕ್ಕಿಂತ ಹೆಚ್ಚು ಕಾಲ ಅಮೆರಿಕಾದ್ಯಂತ ವಿಮಾನಗಳಲ್ಲಿ ಹಾರಾಡಿಕೊಂಡಿರುವವನು. ಒಂದು ಕೋಟಿ ಮೈಲಿ ಹಾರಾಟದ ದಾಖಲೆ ಕ್ರಮಿಸುವುದು ಅವನ ವೈಯಕ್ತಿಕ ಗುರಿ. ಕಂಪನಿಗಳು ತಮ್ಮ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಬೇಕಾದಾಗ ಆ ವಜಾಗೊಳ್ಳಲಿರುವ ವ್ಯಕ್ತಿಯನ್ನು ಭೇಟಿಯಾಗಿ, ಅವರನ್ನು ಕೆಲಸದಿಂದ ತೆಗೆಯುವುದು ಇವನ ಕೆಲಸ.

ಇದೇನು ಅಷ್ಟು ಸುಲಭದ ಕೆಲಸವಲ್ಲ. ಒಬ್ಬೊಬ್ಬರು ಒಂದೊಂದು ಥರ ಪ್ರತಿಕ್ರಿಯಿಸುತ್ತಾರೆ. ಅವರ ದುಃಖದ, ನಿರಾಶೆಯ, ಸಿಟ್ಟಿನ ಪ್ರತಿಕ್ರಿಯೆಗಳಿಗೆ ಮುಖಾಮುಖಿಯಾಗಿ ಅವರಿಗೆ ಸಮಾಧಾನವಾಗುವಂತೆ ಸಂತೈಸಿ ಅವರ ಮುಂದಿನ ಬದುಕಿನ ಬಗ್ಗೆ ಸೂಕ್ತ ಸಲಹೆ ಮಾರ್ಗದರ್ಶನ ನೀಡುವುದು ರಾಯನ್‌ನ ವೃತ್ತಿ. 

ಆಗಾಗ್ಗೆ ಇವನು ಕೊಡುವ ಪ್ರವಚನಗಳಲ್ಲಿ ‘ಬ್ಯಾಕ್‌ಪ್ಯಾಕ್’ ನಿರ್ವಹಣೆಯೇ ಮುಖ್ಯ ವಿಷಯ. ‘ಅಪ್ ಇನ್ ದ ಏರ್’ ಚಿತ್ರದಲ್ಲಿ ಇವನ ಮೊದಲ ಪ್ರವಚನದಲ್ಲಿ, “ಚಲಿಸುವುದೆಂದರೆ ಜೀವಿಸುವುದು. ನಾಳೆಯಿಂದ ನಿಮ್ಮ ಬ್ಯಾಕ್‌ಪ್ಯಾಕ್‌ನಲ್ಲಿ ಯಾವುದೇ ಹೊರೆ ಇಲ್ಲದೆ ನಡೆಯುವುದನ್ನು ಕಲ್ಪಿಸಿಕೊಳ್ಳಿ,” ಎಂದು ತನ್ನ ಚಿಂತನೆಯನ್ನು ಹಂಚಿಕೊಳ್ಳುತ್ತಾನೆ.

ಅವನ ಎರಡನೆಯ ಪ್ರವಚನದಲ್ಲಿ, “ನಿಮ್ಮ ಸಂಬಂಧಗಳು ನಿಮ್ಮ ಬದುಕಿನ ಅತೀ ಹೆಚ್ಚು ಭಾರದ ಹೊರೆಗಳು. ಅವುಗಳನ್ನು ನಿವಾರಿಸಿಕೊಳ್ಳಿ,” ಎನ್ನುವ ಮಾತುಗಳನ್ನಾಡುತ್ತಾನೆ. ಅವನ ಫಿ಼ಲಾಸಫಿ಼ಯಂತೆಯೇ ಅವನು ಮದುವೆ ಎಂಬ ವ್ಯವಸ್ಥೆಯ ವಿರೋಧಿ. ತನ್ನ ಜೊತೆ ಪ್ರಯಾಣಿಸುವ ಹೊಸ, ಕಿರಿಯ ಸಹೋದ್ಯೋಗಿ ನತಾಲಿ ಎಂಬ ತರುಣಿಯ, “ಮದುವೆ ಮಕ್ಕಳು?’' ಎಂಬ ಪ್ರಶ್ನೆಗೆ, “ಅದರಿಂದ ಪ್ರಯೋಜನವಿಲ್ಲ,” ಎನ್ನುತ್ತಾನೆ. 

ಈ ನತಾಲಿಯಾದರೋ, ಸಿಕ್ಕಿದ್ದ ಒಳ್ಳೆಯ ಕೆಲಸವನ್ನು ಬಿಟ್ಟು ತಾನು ಪ್ರೀತಿಸಿದ ಹುಡುಗನಿಗಾಗಿ ಬೇರೆ ಊರಿನಲ್ಲಿ ರಾಯನ್‌ನ 'ಕೆಲಸದಿಂದ ತೆಗೆದುಹಾಕುವ' ಸೇವೆ ಒದಗಿಸುವ ಕಂಪನಿಗೆ ಸೇರಿರುತ್ತಾಳೆ. "ಕೆಲಸದಿಂದ ತೆಗೆದುಹಾಕುವುದಕ್ಕಾಗಿ ಒಬ್ಬ ವ್ಯಕ್ತಿ ದೇಶದ ಇನ್ನೊಂದು ಮೂಲೆಗೆ ಹೋಗುವುದು ದುಬಾರಿ ಖರ್ಚಿನ ಪ್ರಕ್ರಿಯೆ; ಬದಲಿಗೆ, ಇಲ್ಲಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕೆಲಸದಿಂದ ತೆಗೆದರೆ ಹಣ ಮತ್ತು ಸಮಯ ಉಳಿಯುತ್ತದೆ," ಎಂಬ ಸಲಹೆಯನ್ನೂ ತನ್ನೊಂದಿಗೆ ತಂದಿರುತ್ತಾಳೆ. ಈ ಕಾನ್ಫರೆನ್ಸ್ ಕಾಲ್ ಮೂಲಕ ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆ ರಾಯನ್‌ಗೆ ಇಷ್ಟವಾಗುವುದಿಲ್ಲ. ಬಾಸ್‌ನೊಂದಿಗೆ, “ನಾವಿಲ್ಲಿ ಮಾಡುತ್ತಿರುವ ಕೆಲಸ ಮೊದಲೇ ಕ್ರೌರ್ಯ. ಇದು ಜನರನ್ನು ದುಃಖಿತರನ್ನಾಗಿಸುತ್ತದೆ. ನಾನು ಕೆಲಸ ಮಾಡುವ ರೀತಿಯಲ್ಲಿ ಒಂದು ಘನತೆ ಇದೆ,” ಎಂದು ಹೊಸ ವಿಧಾನವನ್ನು ಪ್ರತಿರೋಧಿಸುತ್ತಾನೆ. ಇದರಿಂದ, ನಿಧಾನವಾಗಿ ಬದಲಾಗಲಿ ಎಂಬ ಉದ್ದೇಶದಿಂದ ಬಾಸ್ ಕ್ರೇಗ್, ರಾಯನ್ ಮತ್ತು ನತಾಲಿಯನ್ನು ಜೊತೆಯಲ್ಲಿ ಕೆಲಸ ಮಾಡಲು ಕಳುಹಿಸುತ್ತಾನೆ. 

Image

ರಾಯನ್‌ಗೆ ಅಲೆಕ್ಸ್ ಎಂಬ ಒಬ್ಬಳು, ಇವನಂತೆಯೇ ತನ್ನ ವ್ಯವಹಾರಗಳಿಗಾಗಿ ದೇಶಾದ್ಯಂತ ವಿಮಾನಯಾನ ಮಾಡುವ ಗೆಳತಿ ಇರುತ್ತಾಳೆ. ಚಿತ್ರದಲ್ಲಿ ಇವರಿಬ್ಬರ ಮೊದಲ ಭೇಟಿಯ ದೃಶ್ಯವನ್ನು ಮಾತುಗಳಿಗಿಂತ ಆಂಗಿಕ ಅಭಿವ್ಯಕ್ತಿಗಳ ಮೂಲಕ ನವಿರಾದ ಆಪ್ತತೆ ಮತ್ತು ಆತ್ಮೀಯತೆಗಳ, ಆದರೆ, ಪ್ರೌಢತೆಯ ಸಾಂಗತ್ಯವನ್ನು ಹಲವಾರು ಸತತ ಚಲನಶೀಲ ಕ್ಲೋಸ್ ಅಪ್ ಮತ್ತು ಕ್ಲೋಸ್-ಮಿಡ್ ಷಾಟ್‌ಗಳ ಚುರುಕು ಸಂಕಲನದ ಮೂಲಕ ನಿರ್ದೇಶಕ ಜೇಸನ್ ರೀಟ್‌ಮನ್ ನಿರ್ವಹಿಸಿದ್ದಾನೆ.

ಅಲೆಕ್ಸಳ ಪಾತ್ರವು ಚಿತ್ರಪೂರ್ತಿ, ಒಂದು ಸನ್ನಿವೇಶ ಬಿಟ್ಟು ಬಾಕಿ ಎಲ್ಲ ದೃಶ್ಯಗಳ ನವಿರು ಬೆಳಕಿನ ವಿನ್ಯಾಸದ ಚಿತ್ರೀಕರಣದಲ್ಲಿ ಅವಳು ದೇವಕನ್ನಿಕೆಯೋ ಎಂಬ ಸಂವೇದನೆಯನ್ನು ಪ್ರೇಕ್ಷಕರಲ್ಲಿ ಉಂಟುಮಾಡುತ್ತದೆ. ಇವರಿಬ್ಬರೂ ಉತ್ಕಟ ಪ್ರಣಯಿಗಳಾದರೂ, ತಮ್ಮಿಬ್ಬರ ಸಂಬಂಧದ ಸಾಮಾಜಿಕ ಬಂಧದ ಬಗ್ಗೆ ಬದ್ಧರಲ್ಲ. ಅಲೆಕ್ಸ್ ಒಮ್ಮೆ ಹೇಳುತ್ತಾಳೆ: “ನನ್ನ ಬಗ್ಗೆ ನೀನು ಯೋಚಿಸಬೇಕಾದ ಹೆಂಗಸಲ್ಲ ನಾನು... ನಿನಗೆ ಕರೆ ಮಾಡಬೇಕೆನಿಸಿದಾಗ ಕರೆ ಮಾಡು. ನನ್ನನ್ನು ನೀನೇ ಅಂದುಕೋ. ಒಂದೇ ವ್ಯತ್ಯಾಸ ಅಂದರೆ, ನನಗೆ ಯೋನಿ ಇದೆ, ಅಷ್ಟೇ."

ಮೊದಲ ಸಲ ನತಾಲಿ ರಾಯನ್ ಜೊತೆ ವಿಮಾನದಲ್ಲಿ ಪ್ರಯಾಣಿಸುವಾಗ, ತನ್ನ ಲ್ಯಾಪ್‌ಟಾಪ್‌ನಲ್ಲಿ ಜನರನ್ನು ಕೆಲಸದಿಂದ ತೆಗೆಯಬೇಕಾದಾಗ, ‘ಸಂಭವನೀಯ ಪ್ರಶ್ನೆಗಳು ಮತ್ತು ಉತ್ತರಗಳು, ಕ್ರಿಯೆಗಳು ಮತ್ತು ಪ್ರತಿಕ್ರಿಯೆಗಳು’ ಎಂಬ ಫ಼್ಲೋ ಚಾರ್ಟ್ ಸಿದ್ಧಪಡಿಸುತ್ತಿರುತ್ತಾಳೆ. ಅದಕ್ಕವನು, “ನಾವಿಲ್ಲಿ ಅವರ ನರಕವನ್ನು ಸಹನೀಯ ಮಾಡುವುದಕ್ಕೆ ಇರುವುದು,” ಎನ್ನುತ್ತಾನೆ.  

ಇವರು ಕೆಲಸದಿಂದ ತೆಗೆಯುವ ಜನ ನಾನಾ ಥರ ಪ್ರತಿಕ್ರಿಯಿಸುತ್ತಾರೆ. ಒಬ್ಬ ಹೆಂಗಸು, “ಇದೊಂದು ನಗೆಪಾಟಲು. ನಾನು ಹತ್ತು ವರ್ಷಗಳಿಂದ ಚೆನ್ನಾಗಿ ಕೆಲಸ ಮಾಡಿದ್ದೀನಿ. ನೀವು ಈ ರೀತಿ ನಡೆಸಿಕೊಳ್ಳುತ್ತಿದ್ದೀರಿ,” ಎಂದು ಬಯ್ಯುತ್ತಾಳೆ. ಇನ್ನೊಬ್ಬ, “ರಾತ್ರಿ ಹೊತ್ತು ಹೇಗಾದ್ರೂ ನಿದ್ರೆ ಮಾಡ್ತೀಯಯ್ಯ? ನಿನ್ನ ಕುಟುಂಬ ಹೇಗಿದೆ? ಅವರೂ ರಾತ್ರಿ ಹೊತ್ತು ಚೆನ್ನಾಗಿ ನಿದ್ರೆ ಮಾಡುತ್ತಾರಾ? ಒಲೆ ಉರಿಯುತ್ತಿದೆಯಾ? ಫ್ರಿಡ್ಜ್‌ನಲ್ಲಿ ಆಹಾರ ತುಂಬಿದೆಯಾ? ಗ್ಯಾಸ್ ಟ್ಯಾಂಕ್‌ನಲ್ಲಿ ಗ್ಯಾಸ್ ತುಂಬಿದೆಯಾ?” ಎಂದು ದುಃಖದಿಂದ ಕೇಳುತ್ತಾನೆ.

ಈ ಲೇಖನ ಓದಿದ್ದೀರಾ?: ಜಾಗರ | ಸಿದ್ದಾರ್ಥ ಹೆಂಡತಿ, ಮಗುವನ್ನು ರಾತ್ರೋರಾತ್ರಿ ತೊರೆದುಹೋದದ್ದು ನಿಜವೇ?

ಮತ್ತೊಬ್ಬ, ಪರ್ಸ್ ತೆರೆದು, ಅಲ್ಲಿರುವ ತನ್ನೆರಡು ಪುಟ್ಟ ಹೆಣ್ಣುಮಕ್ಕಳ ಫೋ಼ಟೋಗಳನ್ನು ತೋರಿಸುತ್ತ, “ಇವರಿಗೆ ನಾನು ಏನು ಹೇಳಲಿ? ನಾನೀಗ ವರ್ಷಕ್ಕೆ ತೊಂಬತ್ತು ಸಾವಿರ ಡಾಲರ್ ಸಂಪಾದಿಸುತ್ತಿದ್ದೇನೆ. ನಿರುದ್ಯೋಗಿ ಎಂದರೆ, ವಾರಕ್ಕೆ ಇನ್ನೂರೈವತ್ತು ಡಾಲರ್. ನನ್ನ ಅಸ್ತಮಾದಿಂದ ನರಳುತ್ತಿರುವ ಮಗಳ ಔಷಧಿಗೆ ಏನು ಮಾಡಲಿ?” ಎಂದು ಕೆಟ್ಟದಾಗಿ ಬಯ್ಯುತ್ತಾನೆ.

ಆದರೆ ರಾಯನ್, ಆ ವ್ಯಕ್ತಿಯ ಬಯೋಡಾಟಾದಲ್ಲಿರುವ 'ಫ಼್ರೆಂಚ್ ಅಡುಗೆ ಪದವೀಧರ' ಎಂಬ ವಿಷಯವನ್ನು ನೆನಪಿಸಿ, ಹೋಟೆಲ್ ತೆರೆಯಬಹುದಾದ ಸಾಧ್ಯತೆಯನ್ನು ಮನವರಿಕೆ ಮಾಡಿಕೊಡುತ್ತಾನೆ. ಇಲ್ಲಿ, ರಾಯನ್‌ನ ಮನವೊಲಿಕೆಯು, ವಜಾಗೊಳ್ಳುತ್ತಿರುವವರ ಮನಸ್ಥಿತಿ ಮತ್ತು ಹಿನ್ನೆಲೆಯನ್ನು ಅರಿಯುವ ಹಾಗೂ ಬದುಕಿನಲ್ಲಿ ಮುಂದಿನ ಸಾಧ್ಯತೆಗಳ ಬಗ್ಗೆ ತಿಳಿ ಹೇಳುವ ಆತನ ಮಾನವೀಯ ಸ್ಪಂದನೆ ಗಮನಾರ್ಹ. ಆದರೆ, ಇದಕ್ಕೆ ವಿರುದ್ಧವಾಗಿ ನತಾಲಿಯ ಅಧಿಕಾರ ಪ್ರಜ್ಞೆ ಮತ್ತು ಯಾಂತ್ರಿಕ ಶೈಲಿ ಕಾಣಸಿಗುತ್ತದೆ.

ಇದರ ನಡುವೆ, ರಾಯನ್‌ನ ತಂಗಿ ಜೂಲಿಯ ಮದುವೆ ನಿಶ್ಚಯವಾಗಿರುತ್ತದೆ. ಇನ್ನೊಬ್ಬ ಸಹೋದರಿ ಕಾರಾ, ಇವನ ಲಗ್ಗೇಜ್ ಟ್ರಾಲಿಗಿಂತ ಎತ್ತರವಿರುವ ಮದುಮಕ್ಕಳ ಪುಟ್ಟ ಕಟೌಟ್ ಕಳಿಸಿರುತ್ತಾಳೆ. ಇವನು ಅಮೆರಿಕದ ಬೇರೆ-ಬೇರೆ ನಗರಗಳಿಗೆ ವಿಮಾನಯಾನ ಮಾಡುವುದರಿಂದ, ಹೋದ ಕಡೆಯಲ್ಲೆಲ್ಲ ಆ ಕಟೌಟನ್ನು ಪ್ರಖ‍್ಯಾತ ಸ್ಥಳಗಳ ಮುಂದೆ ಇರಿಸಿ ಫೋಟೋ ತೆಗೆದು ಕಳಿಸುವಂತೆ ತಾಕೀತು ಮಾಡಿರುತ್ತಾಳೆ. ಅದರಂತೆ ರಾಯನ್, ಹೋದ ಕಡೆಗೆಲ್ಲ ಆ ಕಟೌಟನ್ನು ತನ್ನ ಲಗ್ಗೇಜ್ ಟ್ರಾಲಿಯಲ್ಲಿಟ್ಟುಕೊಂಡು ಹೋಗಿ, ವಿವಿಧ ಪ್ರಖ್ಯಾತ ಸ್ಥಳಗಳ ಮುಂದೆ ಅವರಿಬ್ಬರೂ ಮದುಮಕ್ಕಳು ಇರುವಂತೆ ಫೋ಼ಟೋಗಳನ್ನು ತೆಗೆಯುತ್ತಾನೆ. 

“ನಿಮ್ಮ ಬ್ಯಾಕ್‌ಪ್ಯಾಕ್‌ಗಳಿಂದ ನಿಮ್ಮ ಸಂಬಂಧಿಕರನ್ನು ಹೊರಗಿಡಿ,” ಎಂದು ಪ್ರವಚನ ನೀಡುತ್ತಿದ್ದ ರಾಯನ್, ಅವನದೇ ಲಗ್ಗೇಜ್ ಟ್ರಾಲಿಯಲ್ಲಿ ಅವನ ತಂಗಿ ಮತ್ತು ಅವಳನ್ನು ಮದುವೆಯಾಗುವ ಹುಡುಗನ ಕಟೌಟ್ ಇಟ್ಟುಕೊಂಡು ಓಡಾಡುವ ದೃಶ್ಯ ಗಮನಾರ್ಹ. ಆ ಇಬ್ಬರೂ ಅವನ ಟ್ರಾಲಿ ಬ್ಯಾಗಿನಿಂದ ಕಟೌಟ್ ರೂಪದಲ್ಲಿ ತಲೆ ಹೊರ ಹಾಕಿ ಸಹಪಯಣಿಗರಾಗಿರುತ್ತಾರೆ. ಅವನು ಹೋದಲ್ಲೆಲ್ಲ ಇವರಿಬ್ಬರೂ ಕಟೌಟ್ ರೂಪದಲ್ಲಿ ಸಾಂಕೇತಿಕವೂ ಆಗುತ್ತಾರೆ. ತಮ್ಮ ಪ್ರಣಯ ಮಿಲನಕ್ಕೆ ಎಷ್ಟು ಬೇಕೋ ಅಷ್ಟು ಸಂಬಂಧವನ್ನು ಅಲೆಕ್ಸಳೊಂದಿಗೆ ನಿರ್ವಹಿಸುತ್ತಿದ್ದ ರಾಯನ್, ಅವಳನ್ನು ತನ್ನ ತಂಗಿಯ ಮದುವೆಯಲ್ಲಿ ಭಾಗವಹಿಸಲು ಆಹ್ವಾನಿಸುತ್ತಾನೆ. ಅಲೆಕ್ಸ್ ಒಪ್ಪುತ್ತಾಳೆ. 

Image

ಮದುವೆಯ ಹಿಂದಿನ ದಿನ, ಮದುಮಗನಿಗೆ ಏಕಾಂತದಲ್ಲಿ ವೈರಾಗ್ಯ ಬಂದುಬಿಡುತ್ತದೆ. "ನಾಳೆ ನಾನು ಮದುವೆಯಾಗುತ್ತೇನೆ, ಮಕ್ಕಳಾಗುತ್ತವೆ, ಅವರನ್ನು ಓದಿಸುತ್ತೇನೆ, ಅವರು ಕೆಲಸಕ್ಕೆ ಸೇರುತ್ತಾರೆ, ಮದುವೆಯಾಗುತ್ತಾರೆ. ಅವರಿಗೂ ಮಕ್ಕಳು ಹುಟ್ಟುತ್ತವೆ, ನಾನು ಅಜ್ಜನಾಗುತ್ತೇನೆ, ಆಮೇಲೆ ಒಂದು ದಿನ ಸತ್ತುಹೋಗುತ್ತೇನೆ. ಇದೆಲ್ಲ ಅರ್ಥಹೀನ, ನಾನು ಮದುವೆಯಾಗುವುದಿಲ್ಲ," ಎಂದುಬಿಡುತ್ತಾನೆ! ಸರಿ, ರಾಯನ್ ಅವನೊಟ್ಟಿಗೆ ಕುಳಿತು, ತಾನು ಇಷ್ಟು ದಿನ ಬದುಕಿದ ಸಿದ್ಧಾಂತಕ್ಕೆ ವಿರುದ್ಧವಾಗಿ, ಮದುಮಗನಿಗೆ ಕೌಟುಂಬಿಕ ಬದುಕಿನ ಅನಿವಾರ್ಯತೆಯನ್ನು ಮನಗಾಣಿಸುತ್ತಾನೆ. ಹೀಗೆ ಮನಗಾಣಿಸುವಾಗ, ತಾನೂ ಕೌಟುಂಬಿಕ ಬದುಕಿನ ಅಗತ್ಯವನ್ನು ಮನಗಾಣುತ್ತಾನೆ.

ಅಲೆಕ್ಸ್‌ಳ ಮನೆಯ ಮುಂದೆ ಬಂದು ನಿಂತವನಿಗೆ, ಅವಳಿಗೆ ಮದುವೆಯಾಗಿದೆ, ಮಕ್ಕಳಿವೆ ಎಂಬುದು ತಿಳಿಯುತ್ತದೆ. ಮನೆಯೊಳಗಿಂದ, “ಯಾರದು?” ಎಂದು ಕೇಳಿದ ಗಂಡು ಧ್ವನಿಗೆ, “ಯಾರೋ ದಾರಿ ತಪ್ಪಿದ ವ್ಯಕ್ತಿ,” ಎಂದು ಉತ್ತರಿಸಿ ಇವನನ್ನು ಬಾಗಿಲಿನಿಂದಲೇ ಕಳಿಸಿಬಿಡುತ್ತಾಳೆ. ನಂತರ ಅವಳೇ ಫೋ಼ನ್ ಮಾಡಿ, ಅವನು ಆ ರೀತಿ ಅನಿರೀಕ್ಷಿತವಾಗಿ ಮನೆ ಬಾಗಿಲಲ್ಲಿ ಪ್ರತ್ಯಕ್ಷವಾದದ್ದನ್ನು ಆಕ್ಷೇಪಿಸುತ್ತಾಳೆ. "ನೀನು ನನ್ನ ಬದುಕಿನಲ್ಲಿ ಹೆಚ್ಚುವರಿ ಸೇರ್ಪಡೆ ಅಷ್ಟೆ. ನನಗೆ ನನ್ನ ಕುಟುಂಬ ಮುಖ್ಯ,” ಎನ್ನುತ್ತಾಳೆ.

ಇಬ್ಬರ ಈ ಮೊಬೈಲ್ ಸಂಭಾಷಣೆಯನ್ನು ಒಂದೇ ಫ಼‍್ರೇಮಿನಲ್ಲಿರುವ ಹಲವಾರು ಪ್ರೊಫೈ಼ಲ್ ಷಾಟ್‌ಗಳಲ್ಲಿ, ಹಿಂದೆ ದೇವಕನ್ನಿಕೆಯೋ, ಅಪ್ಸರೆಯೋ ಎಂಬಂತೆ ಚಿತ್ರಿಸಲಾಗಿತ್ತು. ನಂತರ ಅಲೆಕ್ಸಳನ್ನು ಗಡಸು ಬೆಳಕಿನ ವಿನ್ಯಾಸದಲ್ಲಿ ಹೆಡ್ ಮೇಡಮ್, ಬಾಲಕ ವಿದ್ಯಾರ್ಥಿಯೊಂದಿಗೆ ಮಾತನಾಡುವಂತೆ ಚಿತ್ರೀಕರಿಸಲಾಗಿದೆ. ಕೊನೆಗೆ, “ನನ್ನನ್ನು ನೋಡಬೇಕೆನಿಸಿದರೆ ನನಗೆ ಕರೆ ಮಾಡು. ಓಕೆ?” ಎಂದು ಮಾತು ಮುಗಿಸುತ್ತಾಳೆ. 

ರಾಯನ್ ಮರಳಿ ಹೆಡ್ ಕ್ವಾರ್ಟರ್ಸ್‌ಗೆ ವಿಮಾನದಲ್ಲಿ ಹೋಗುವಾಗ, ಅವನ ‘ಕೋಟಿ ಮೈಲಿ ವಿಮಾನಯಾನ’ ಸಾಧನೆಯ ಘೋಷಣೆಯಾಗುತ್ತದೆ. ಕಚೇರಿಗೆ ಬಂದರೆ, ನತಾಲಿ ರಾಜಿನಾಮೆ ನೀಡಿರುತ್ತಾಳೆ. ಅವಳು ವಜಾ ಮಾಡಿದ್ದ ಒಬ್ಬ ಮಹಿಳೆ, ತಾನು ಹೇಳಿದ್ದಂತೆ ಸೇತುವೆಯೊಂದರಿಂದ ನೆಗೆದು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಡಿಜಿಟಲ್ ರೂಪದಲ್ಲಿ ವಜಾ ಮಾಡುವುದು ಬೇಡ ಎಂದುಕೊಂಡ ಕಂಪನಿ, ಮುಖಾಮುಖಿ ವಜಾ ಪ್ರಕ್ರಿಯೆಯನ್ನು ಮುಂದುವರಿಸುತ್ತದೆ. ರಾಯನ್ ಪುನಃ ‘ಅಪ್ ಇನ್ ದ ಏರ್.’

ನಿಮಗೆ ಏನು ಅನ್ನಿಸ್ತು?
0 ವೋಟ್