ಮೈಕ್ರೋಸ್ಕೋಪು | ಭೂಮಿಯದೊಂದು ಆಲ್ಬಮ್ ಮಾಡಬೇಕಿದೆ, ನೀವು ತಯಾರಿದ್ದೀರಾ?

ERATH 2

ಭೂಮಿಯ ಆಲ್ಬಮ್ ಮಾಡುವುದು ಹೇಗೆ ಎಂಬುದು ನಿಮ್ಮ ಪ್ರಶ್ನೆ ಆಗಿದ್ದರೆ ಇಲ್ಲಿದೆ ಉತ್ತರ: 'ಅತಿಮಾನವ ಯುಗ' ಅಥವಾ 'ಆಂತ್ರೊಪೋಸೀನು' ಎನ್ನುವ ಕಾಲಘಟ್ಟದಲ್ಲಿ ಅತಿ ಹೆಚ್ಚಿನ ಬದಲಾವಣೆಗಳಾದ ಕಳೆದ ಎರಡು-ಮೂರು ದಶಕಗಳಲ್ಲಿ ತಂತ್ರಜ್ಞಾನವೂ ಬೆಳೆದದ್ದು ಕಾಕತಾಳೀಯ. ಈ ತಂತ್ರಜ್ಞಾನವನ್ನೇ ಭೂಮಿಯ ಚರಿತ್ರೆ ದಾಖಲೆಗೆ ಬಳಸಿಕೊಳ್ಳಬಹುದಲ್ಲ?

ಮಾನವನ ಚಟುವಟಿಕೆಗಳಿಂದ ಭೂಮಿಯಲ್ಲಿ ಆಗುತ್ತಿರುವ ಬದಲಾವಣೆಗಳು ಭೂಮಿಯ ಚರಿತ್ರೆಯನ್ನು ಅಳಿಸಿಹಾಕುವ ಮುನ್ನ ಅದನ್ನು ನಾವು ದಾಖಲಿಸಬೇಕಿದೆ. ಇದು ಚಂದ್ರನ ಮೇಲೆ ಕಾಲಿಡಲು ನಡೆಸಿದ ಅಥವಾ ಮಾನವ ಜೀನೋಮ್ ಅನಾವರಣಗೊಳಿಸಲು ನಡೆದ ಮಹಾಯೋಜನೆಗಳನ್ನೂ ಮೀರಿಸಿದ ಹಂಬಲ. ಇದು ಇಂದಿನ ಪರಿಸರವನ್ನು ಕಾಪಾಡುವುದಕ್ಕಷ್ಟೇ ಅಲ್ಲ, ನಮ್ಮ ಭೂಮಿಯ ಇತಿಹಾಸ ಮತ್ತು ವಿಕಾಸದ ಬಗ್ಗೆ ನಾಳಿನವರಿಗೆ ತಿಳಿಯಲೂ ಅವಶ್ಯ.

ಫೇಸ್‌ಬುಕ್ಕಿನಲ್ಲಿ ನಿಮ್ಮ ಬಾಲ್ಯದ ಫೋಟೊ ಹಾಕಿದ್ದೀರಾ? ಬಹುಶಃ ಅದಕ್ಕೆ ಬರುವಷ್ಟು ಲೈಕುಗಳು ನೀವು ಚರಿತ್ರೆಯ ಪಾಠದ ಬಗ್ಗೆ ಬರೆದರೂ ಬರುವುದಿಲ್ಲ. ಫೋಟೊವಷ್ಟೆ ಅಲ್ಲ, ಅಂದಿನ ಕಾಲದ ಚಿತ್ರಣಗಳನ್ನು ತೋರುವ ಯಾವುದೇ ವಿಷಯವನ್ನೂ ಹಾಕಿ ನೋಡಿ. ಲೈಕುಗಳು ದಂಡಿಯಾಗಿ ದೊರೆಯುತ್ತವೆ. ಕಾರಣ ಇಷ್ಟೆ; ಕಳೆದ ಕಾಲದ ಬಗ್ಗೆ ನಮಗೆಲ್ಲ ಇರುವ ಕುತೂಹಲ.

Image
ERATH 3

ಎರಡನೆಯದಾಗಿ, ಅವು ನಮಗೆ ನೀಡುವ ಬದಲಾವಣೆಯ ಮಾಹಿತಿ. 'ಕಾಲ ಕೆಟ್ಟಿದೆ' ಎಂದು ಹಿರಿಯರು ಹೇಳುವ ಮಾತಿಗೂ, ಯಾರೂ ಎಂದಿಗೂ ಒಂದೇ ತೆರನಾಗಿರುವುದಿಲ್ಲ ಎನ್ನುವುದಕ್ಕೆ ಪುರಾವೆಯಾಗಿಯೂ ಈ ಫೋಟೊಗಳು ನಿಲ್ಲುತ್ತವೆ. ಇನ್ನು, ಫೇಸ್‌ಬುಕ್ ಕೂಡ ಆಗಾಗ್ಗೆ ನಿಮ್ಮ ಹಳೆಯ ಪೋಸ್ಟುಗಳನ್ನು ತೋರಿಸಿ, ಆ ಕಾಲದಲ್ಲಿ ನಿಮ್ಮ ಚಿಂತನೆ ಹೀಗಿತ್ತು ಎಂದು ತೋರಿಸುವುದುಂಟು. ಫೇಸ್‌ಬುಕ್ ಬಿಡಿ. ಯಾರಾದರೂ ನೆಂಟರ ಮನೆಗೆ ಹೋದಾಗಲೂ ಈ ಫೋಟೊ ಆಲ್ಬಮ್ ಎದುರಾಗುತ್ತದೆ. ಆಹ್ವಾನವಿದ್ದೂ ಮದುವೆಗೋ, ಗೃಹಪ್ರವೇಶಕ್ಕೋ, ಮಗುವಿನ ಹುಟ್ಟುಹಬ್ಬದ ಪಾರ್ಟಿಗೋ ನೀವು ಹೋಗಿರಲಿಲ್ಲವೆನ್ನಿ! ಆಗ ಅಂದಿನ ದಿನದ ಎಲ್ಲ ಫೋಟೊಗಳನ್ನೂ ಕಮೆಂಟರಿಯೊಂದಿಗೆ ನೋಡಬೇಕಾಗಿ ಬರಬಹುದು. ಎಂದೋ ಕಳೆದ ಸಂಗತಿಗಳನ್ನು ಮತ್ತೆ ತಿಳಿಯಲು ಈ ಅಲ್ಬಮ್‌ಗಳು ನೆರವಾಗುತ್ತವಷ್ಟೆ. ಹೀಗೆ ಕಳೆದ ದಿನಗಳ ದಾಖಲೆ ಇಡುವ ಆಲ್ಬಮ್ ನಮ್ಮ ಭೂಮಿಗೂ ಬೇಕು ಎನ್ನುವ ವಿಚಾರವನ್ನು ಮೊನ್ನೆ ಕೊಲರಾಡೋ ವಿಶ್ವವಿದ್ಯಾಲಯದ ಮಾನವ ವಿಜ್ಞಾನಿ ಕ್ರಿಸ್ಟೋಫರ್ ಫಿಶರ್ ಇನ್ನೂ ಹಲವು ವಿಶ್ವವಿದ್ಯಾಲಯಗಳ ಇಪ್ಪತ್ತೈದು ವಿಜ್ಞಾನಿಗಳ ಜೊತೆಗೂಡಿ 'ಪ್ರೊಸೀಡಿಂಗ್ಸ್ ಆಫ್ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್' ಪತ್ರಿಕೆಯಲ್ಲಿ ಸೂಚಿಸಿದ್ದಾರೆ. ಕ್ರಿಸ್ಟೋಫರ್ ಫಿಶರ್ ಮತ್ತು ಸಂಗಡಿಗರು ಭೂಮಿಯ ಭೌಗೋಳಿಕ ಚರಿತ್ರೆಯನ್ನು ದಾಖಲಿಸಿ ಇಡಬಾರದೇಕೆ ಎಂದು ಪ್ರಶ್ನಿಸಿದ್ದಾರೆ.

ಭೂಮಿಯ ಚರಿತ್ರೆ ಇಂದು, ನಿನ್ನೆಯದಲ್ಲ. ಫೇಸ್‌ಬುಕ್‌ನಷ್ಟು ಅಲ್ಪಕಾಲದ್ದೂ ಅಲ್ಲ. ಅದನ್ನೇಕೆ ದಾಖಲಿಸಬೇಕು ಎನ್ನುವುದು ಒಂದು ಪ್ರಶ್ನೆಯಾದರೆ, ಹೇಗೆ ಎನ್ನುವುದು ಇನ್ನೊಂದು ಪ್ರಶ್ನೆ. ಮೊದಲನೆಯ ಪ್ರಶ್ನೆಗೆ ಉತ್ತರ ಇಷ್ಟೆ... ಇರುವುದೊಂದೇ ಭೂಮಿ. ಅದರಲ್ಲಾಗುವ ಬದಲಾವಣೆಗಳನ್ನು ನಾವು ಅರ್ಥ ಮಾಡಿಕೊಳ್ಳದೆ ಹೋದರೆ ನಷ್ಟ ಅದರ ನಿವಾಸಿಗಳಾದ ನಮ್ಮ ಪಾಲಿಗೇ ಬರುತ್ತದಷ್ಟೆ. ಭೂಮಿಯಲ್ಲಿ ಬದಲಾವಣೆಗಳು ಹೇಗಾಗುತ್ತಿವೆ? ಹೇಗೆ ಆದುವು? ಆ ಬದಲಾವಣೆಗಳಿಗೆ ಕಾರಣವೇನು? ಬದಲಾವಣೆಯ ಗತಿ ಹೇಗಿತ್ತು? ಇವೆಲ್ಲ ಪ್ರಶ್ನೆಗೂ ಬಹುಶಃ ಭೂಮಿಯ ಆಲ್ಬಮ್ ಉತ್ತರ ನೀಡಬಹುದು ಎನ್ನುವುದು ಫಿಶರ್ ಅವರ ಆಶಯ.

Image
ERATH 4

ಇಂಥ ಆಲೋಚನೆಗೆ ಕಾರಣ ಬಹಳ ಸ್ಪಷ್ಟ. ವಿಜ್ಞಾನಿಗಳ ಪ್ರಕಾರ, ಭೂಮಿ ಹುಟ್ಟಿ ಸುಮಾರು ಐನೂರು ಕೋಟಿ ವರ್ಷಗಳಾಗಿರಬಹುದು. ತದನಂತರ ಸುಮಾರು ಮುನ್ನೂರು ಕೋಟಿ ವರ್ಷಗಳ ಹಿಂದೆ ಈ ಭೂಮಿ ಮೇಲೆ ಜೀವಿಗಳು ಕಾಣಿಸಿಕೊಂಡವು. ಅಲ್ಲಿಂದ ಕಳೆದ ಮುನ್ನೂರು ವರ್ಷಗಳಷ್ಟು ಹಿಂದಿನವರೆಗೂ ಭೂಮಿಯ ಒಟ್ಟಾರೆ ಸ್ವರೂಪದಲ್ಲಿ ಅಷ್ಟೇನೂ ಬದಲಾವಣೆ ಆಗಿರಲಿಲ್ಲ. ಆದರೆ, ಈ ಮೂರು ಶತಮಾನಗಳಲ್ಲಿ ಭೂಮಿ ಹಿಂದೆಂದೂ ಇಲ್ಲದ ರೀತಿಯಲ್ಲಿ ಬದಲಾಗಿಬಿಟ್ಟಿದೆ. ನಮ್ಮ, ನಿಮ್ಮ ಚಟುವಟಿಕೆಗಳೇ ಈ ಬದಲಾವಣೆಗಳನ್ನು ತಂದಿವೆ ಎನ್ನುವುದು ವಿಜ್ಞಾನಿಗಳ ಮಾತು. ಹೀಗಾಗಿ, ಕೋಟ್ಯಂತರ ವರ್ಷಗಳ ಭೂಮಿಯ ಚರಿತ್ರೆಯಲ್ಲಿ ಮಾನವ ನಾಗರಿಕತೆ ಆರಂಭವಾಯಿತೆನ್ನುವ ಹತ್ತು ಸಾವಿರ ವರ್ಷಗಳೀಚೆಗಿನ ಕಾಲವನ್ನು 'ಅತಿಮಾನವ ಯುಗ' ಎಂದು ವಿಜ್ಞಾನಿಗಳು ಕರೆದಿದ್ದಾರೆ.

"ಭೂಮಿಯ ಚರಿತ್ರೆಯಲ್ಲಿ ಈ ಹಿಂದೆ ಎಂದೆಂದೂ ಆಗಿರದಂತಹ ಬದಲಾವಣೆಗಳು 'ಅತಿಮಾನವ ಯುಗ'ದಲ್ಲಿ ಆಗಿದ್ದಷ್ಟೇ ಅಲ್ಲ, ಭೂಮಿಯ ಜೀವಗೋಲ ಅರ್ಥಾತ್ ಜೀವ ಸಂಪತ್ತು ವಿಷಮ ಸ್ಥಿತಿಯನ್ನು ಮುಟ್ಟಿದೆ. ನಾವೆಷ್ಟೇ ಪರಿಸರಸ್ನೇಹಿ ಕ್ರಮಗಳನ್ನು ಕೈಗೊಂಡರೂ ಯಥಾಸ್ಥಿತಿಗೆ ಭೂಮಿಯನ್ನು ಕೊಂಡೊಯ್ಯಲಾಗದಷ್ಟು ಬದಲಾವಣೆಗಳನ್ನು ಮಾನವನ ಚಟುವಟಿಕೆಗಳು ಉಂಟುಮಾಡಿವೆ. ವಾಯುಗುಣದಲ್ಲಿನ ಬದಲಾವಣೆ ಎಷ್ಟು ವಿಷಮವಾಗಿದೆ ಎಂದರೆ, ಭೂಮಿಯ ಹವಾಮಾನ ವ್ಯವಸ್ಥೆಗಳೇ ಛಿದ್ರವಾಗಿಬಿಟ್ಟಿವೆ. ಸಮುದ್ರದ ನೀರಿನ ಮಟ್ಟ ಏರುತ್ತಿದೆ. ವಿವಿಧೆಡೆ ಜೀವಿಗಳ ವಿತರಣೆಯಲ್ಲಿಯೂ ಬದಲಾವಣೆಗಳಾಗಿವೆ, ಇನ್ನೂ ಆಗುತ್ತಿವೆ. ಪುರಾತತ್ವ ವಿಜ್ಞಾನಿಗಳಿಂದ ಪ್ರಾಣಿವಿಜ್ಞಾನಿಗಳವರೆಗೆ ಸಂಶೋಧಕರು, ಈ ಭೂಮಿಯಲ್ಲಿ ಮಾನವನ ಮತ್ತು ಜೀವಿವಿಕಾಸದ ಕುರುಹುಗಳು ಇರುವುದನ್ನು ಸ್ಪಷ್ಟಪಡಿಸಿದ್ದಾರೆ. ಇವು ನಷ್ಟವಾದರೆ ತುಂಬಲಾಗದು. ಗತಕಾಲದ ನಮ್ಮ ಸಾಂಸ್ಕೃತಿಕ, ಪಾರಿಸರಿಕ ಪರಂಪರೆಗಳನ್ನು ಹಾಗೂ ಜೀವಿವೈವಿಧ್ಯ ಕುರಿತ ಮಾಹಿತಿಯನ್ನು ಅವು ಇನ್ನಿಲ್ಲದಂತೆ ಆಗುವ ಮುನ್ನವೇ ನಾವು ಕಾಪಾಡಿಕೊಳ್ಳಬೇಕಾಗಿದೆ,” ಎನ್ನುತ್ತಾರೆ ಫಿಶರ್.

ಈ ಲೇಖನ ಓದಿದ್ದೀರಾ?: ಮೈಕ್ರೋಸ್ಕೋಪು | ಹೆಚ್ಚುತ್ತಲೇ ಇದೆ ದರೋಡೆಕೋರ ವಿಜ್ಞಾನ ಪತ್ರಿಕೆಗಳ ದರ್ಬಾರು

ಆದರೆ ಹೇಗೆ? ಇದು ಸಾಧ್ಯವೇ? ಸಾಧ್ಯ ಎನ್ನುವುದಾದರೆ ಎಷ್ಟು ಕ್ಷಿಪ್ರವಾಗಿ ಇದನ್ನು ಮಾಡಬಹುದು? ಫಿಶರ್ ಅವರ ತಂಡ ಇದಕ್ಕೆ ಹಲವು ಸಲಹೆಗಳನ್ನು ನೀಡಿದೆ. 'ಅತಿಮಾನವ ಯುಗ' ಅಥವಾ 'ಆಂತ್ರೊಪೋಸೀನು' ಎನ್ನುವ ಕಾಲಘಟ್ಟದಲ್ಲಿ ಅತಿ ಹೆಚ್ಚಿನ ಬದಲಾವಣೆಗಳಾದ ಕಳೆದ ಎರಡು-ಮೂರು ದಶಕಗಳಲ್ಲಿ ತಂತ್ರಜ್ಞಾನವೂ ಬೆಳೆದದ್ದು ಕಾಕತಾಳೀಯ. ಈ ತಂತ್ರಜ್ಞಾನವನ್ನೇ ನಮ್ಮ ಭೂಮಿಯ ಚರಿತ್ರೆಯ ದಾಖಲೆಗೆ ಬಳಸಿಕೊಳ್ಳಬಹುದಲ್ಲ ಎನ್ನುವುದು ಫಿಶರ್ ಅವರ ಕನಸು. ಉದಾಹರಣೆಗೆ, ಮುದ್ರಣ ಯಂತ್ರದ ಆವಿಷ್ಕಾರವಾದ ಮೇಲೆ ಸಾಂಸ್ಕೃತಿಕ ಚಟುವಟಿಕೆಗಳನ್ನು ದಾಖಲಿಸುವ ಸಾಹಿತ್ಯ ಸೃಷ್ಟಿಯಾಯಿತು. ಹಾಗೆಯೇ, ಛಾಯಾಗ್ರಹಣ ಕಲೆ ಸಿದ್ಧಿಸಿದ ಮೇಲೆ ದೃಶ್ಯಗಳನ್ನೂ ಸೇರಿಸಿಟ್ಟಿದ್ದೇವೆ. ಇನ್ನು, ಕಳೆದ ಎಪ್ಪತ್ತು-ಎಂಬತ್ತು ವರ್ಷಗಳಿಂದ ಉಪಗ್ರಹಗಳ ತಂತ್ರಜ್ಞಾನ, ದೂರಸಂವೇದಿ ತಂತ್ರಗಳೂ ಅಭಿವೃದ್ಧಿಯಾಗಿವೆ. ಗತಿಸಿದ ವೈಯಕ್ತಿಕ ಅಥವಾ ಸೀಮಿತ ಕ್ಷೇತ್ರದ ಚಟುವಟಿಕೆಗಳನ್ನು ಪರಿಚಯಿಸುತ್ತವೆ ಮುದ್ರಣ, ಛಾಯಾಗ್ರಹಣ. ಅದೇ ದೂರಸಂವೇದಿ ತಂತ್ರ ಇಡೀ ಭೂಮಿಯ ಒಟ್ಟಾರೆ ಚಿತ್ರವನ್ನು ಗ್ರಹಿಸಲು ನೆರವಾಗುತ್ತದೆ. ಇವನ್ನು ಒಟ್ಟಾಗಿಸಬಹುದು ಎನ್ನುವುದು ಇವರ ಕಲ್ಪನೆ.

ಉದಾಹರಣೆಗೆ, ಅಮೆರಿಕದ ರಾಷ್ಟ್ರೀಯ ಭೂ ಸರ್ವೇಕ್ಷಣಾ ಸಂಸ್ಥೆ ಹೀಗೊಂದು ಸಂಗ್ರಹವನ್ನು ಈಗಾಗಲೇ ಮಾಡಿಟ್ಟಿದೆ. 1970ರ ದಶಕದಿಂದ ಉಪಗ್ರಹಗಳು ತೆಗೆದ ಅಮೆರಿಕ ನೆಲದ ಚಿತ್ರಗಳನ್ನು ಮತ್ತು ಭೂಮಿಯ ಇತರೆ ಭಾಗಗಳ ಚಿತ್ರಗಳನ್ನು ಸಂಸ್ಥೆ ಸಂಗ್ರಹಿಸಿಟ್ಟಿದೆ. ಕೆನಡಾ ಕೂಡ ಇಂತಹುದೇ ಒಂದು ಪ್ರಯತ್ನ ನಡೆಸಿದೆ. ಭೂಮಿಯ ಮೇಲಿನ ಬೆಟ್ಟ-ಗುಡ್ಡಗಳ ಮೂರು ಆಯಾಮದ ಚಿತ್ರಗಳೂ ಇವೆ. ಅಷ್ಟು ದೂರ ಯಾಕೆ? ಭಾರತದಲ್ಲಿ ಕಳೆದ ನಲವತ್ತು-ನಲವತ್ತೈದು ವರ್ಷಗಳಿಂದ ದೂರಸಂವೇದಿ ತಂತ್ರಗಳನ್ನು ಬಳಸಿಕೊಂಡು ಉಪಗ್ರಹಗಳು ಭೂಮಿಯ ಚಿತ್ರಗಳನ್ನು ತೆಗೆಯುತ್ತಿವೆಯಷ್ಟೆ. ಇವುಗಳಲ್ಲಿ ಭೂಮಿಯ ಮೇಲಿನ ಕಾಡುಗಳನ್ನಷ್ಟೇ ಬಿಂಬಿಸುವ ಮಾಹಿತಿ ಇರುವಂತೆಯೇ, ಅಂತರ್ಜಲದ ಪ್ರಮಾಣವನ್ನೂ ಗುರುತಿಸುವ ಮಾಹಿತಿ ಇರುತ್ತದೆ. ಪವನ ವಿಜ್ಞಾನದ ಕ್ಷೇತ್ರದಲ್ಲಿಯಂತೂ ಪ್ರತೀ ವರ್ಷವೂ ಬರುವ ಮುಂಗಾರಿನ ಕುರಿತು ಬೃಹತ್ ಮಾಹಿತಿ ಸಂಗ್ರಹವೇ ಇದೆ. ಇವೆಲ್ಲವನ್ನೂ ಕಾಲಘಟ್ಟಗಳಿಗೆ ಅನುಗುಣವಾಗಿ ಒಟ್ಟಾಗಿಸಿ, ಸಂಗ್ರಹಿಸಬಹುದಲ್ಲ ಎನ್ನುವುದು ಫಿಶರ್ ಅವರ ಕಲ್ಪನೆ.

Image
ERATH 5

ಇದು ಭೌಗೋಳಿಕ ಬದಲಾವಣೆಗಳ ಚಿತ್ರಣವನ್ನು ನೀಡಬಲ್ಲದು; ಆದರೆ, ಗತಿಸಿದ ಜೀವಿಗಳ ಕತೆ ಏನು ಎಂದಿರಾ? ಪ್ರಪಂಚದಲ್ಲಿ ಸಾವಿರಕ್ಕೂ ಹೆಚ್ಚು ಪ್ರಾಕೃತಿಕ ವಿಜ್ಞಾನದ ಸಂಗ್ರಹಾಲಯಗಳಿವೆ. ಕೆಲವು ಪುಟ್ಟವು, ಕೆಲವು ಬೃಹತ್ತಾದಂಥವು. ಇವುಗಳಲ್ಲಿ ಆಯಾ ಪ್ರದೇಶದ್ದಷ್ಟೇ ಅಲ್ಲದೆ, ಪ್ರಪಂಚದ ಇತರೆಡೆಯಲ್ಲಿನ ಅಳಿದುಹೋದ ಅಥವಾ ವಾಸವಿರುವ ಜೀವಿಗಳ ಸಂಗ್ರಹವಿದೆ. ಇಂತಹ ರಾಷ್ಟ್ರೀಯ ಸಂಗ್ರಹಾಲಯಗಳೂ ಇವೆ. ಇನ್ನು, ಸಾಂಸ್ಕೃತಿಕ ಆಗುಹೋಗುಗಳ ಸಂಗ್ರಹಾಲಯಗಳಿಗೂ ಬರವಿಲ್ಲ. ಇವೆಲ್ಲದರಲ್ಲಿರುವ ಮಾಹಿತಿಯನ್ನೂ ಕಾಲಘಟ್ಟಕ್ಕೆ ತಕ್ಕಂತೆ ವಿಂಗಡಿಸಿ ಸಂಗ್ರಹಿಸಿ ಇಡಬಹುದಲ್ಲವೇ? ಸಸ್ಯಗಳ ಮಟ್ಟಿಗೆ ಬೀಜಗಳನ್ನು ಸಂಗ್ರಹಿಸಿಡುವ ಬೃಹತ್ ಕೋಶಾಗಾರ ನಾರ್ವೆಯ ಸ್ವೆಲ್ಬಾರ್ಡ್ ದ್ವೀಪದಲ್ಲಿದೆ. ಈ ಸಂಗ್ರಹವು ಗತಕಾಲದ ಸಸ್ಯರಾಶಿಯ ವಿವರಗಳನ್ನು ಒದಗಿಸಬಲ್ಲದು. ಭಾರತದಲ್ಲಿಯೂ ಇಂತಹ ಬೀಜಗಳ ಖಾಸಗಿ ಮತ್ತು ಸರ್ಕಾರಿ ಸಂಗ್ರಹಗಳಿವೆ.

ಇನ್ನು, ಸಾಂಸ್ಕೃತಿಕ ಕಟ್ಟಡಗಳ ವಿಚಾರ. ಒಂದು ಜಾಗದಲ್ಲಿ ಇದ್ದ ಕಟ್ಟಡದ ಬದಲಿಗೆ ಇನ್ನೊಂದು ಇತ್ತು ಎಂದು ನಾಳೆ ಯಾರಾದರೂ ತಗಾದೆ ತೆಗೆದರೆ ಪುರಾವೆಗಾದರೂ ಬೇಕಲ್ಲ? ಅದಿಲ್ಲದಿದ್ದರೂ ಕಟ್ಟೋಣದ ವಸ್ತುಗಳು, ಕಟ್ಟಡಗಳ ಶೈಲಿ, ವಾಸ್ತು ತಂತ್ರಜ್ಞಾನ ಮೊದಲಾದವುಗಳಲ್ಲಿ ಆಗಿರುವ ಬದಲಾವಣೆಗಳನ್ನು ಗುರುತಿಸಲೂ ಇವು ಬೇಕಾಗಬಹುದು. ಈಗ ಗೂಗಲ್ ನಕ್ಷೆಯಲ್ಲಿ ವಿವಿಧ ಕಟ್ಟಡಗಳ ಸ್ಥಾನವನ್ನಷ್ಟೇ ಗುರುತಿಸಬಹುದು. ಆದರೆ, ಹೊಸ 'ಲಿಡಾರ್' ಎನ್ನುವ ತಂತ್ರಜ್ಞಾನವನ್ನು ಬಳಸಿದರೆ, ಕಟ್ಟಡದ ಅಡಿಯಲ್ಲಿ ಏನಿತ್ತು, ಏನಿದೆ ಎನ್ನುವುದನ್ನೂ ಪತ್ತೆ ಮಾಡಬಹುದು. ಇತ್ತೀಚೆಗಷ್ಟೇ ಅಮೆಝಾನ್ ಕಾಡುಗಳ ನಟ್ಟ ನಡುವೆ ಸಾವಿರ ವರ್ಷಗಳ ಹಿಂದೆ ನಾಗರಿಕತೆಯೊಂದು ಇತ್ತೆಂದು ಈ ತಂತ್ರಜ್ಞಾನ ಪತ್ತೆ ಮಾಡಿತ್ತು. ಅಲ್ಲಿ ಈಗ ಕೇವಲ ಕಾಡುಗಳಿವೆ.

Image
ERATH 1

ಮಾಹಿತಿ ತಂತ್ರಜ್ಞಾನ, ಅಂತರ್ಜಾಲ ಮೊದಲಾದ ಹೊಸ ತಂತ್ರಜ್ಞಾನಗಳನ್ನು ಜೊತೆಗೂಡಿಸಿದರೆ, ಪ್ರತೀ ಕ್ಷಣವೂ ಈ ಭೂಮಿಯಲ್ಲಿ ಎಲ್ಲೆಲ್ಲಿ ಏನೇನಾಗುತ್ತಿದೆ ಎಂದು ದಾಖಲಿಸಬಹುದು. ನಮ್ಮಂತಹ ನಾಗರಿಕರೂ ಇದಕ್ಕೆ ಕೈಜೋಡಿಸಬಹುದು. ಸ್ಮಾರ್ಟ್ ಫೋನಿನಲ್ಲಿ ತೆಗೆದ ಚಿತ್ರಗಳು, ವೀಡಿಯೊಗಳು ನಾವು ಇದುವರೆಗೂ ಕಾಣದ ಜಗತ್ತನ್ನು ತೋರಿಸುತ್ತಿವೆ. ಡ್ರೋನ್ ತಂತ್ರಜ್ಞಾನ ಈಗ ಎಲ್ಲರ ಕೈಗೆಟುಕುವಂತೆ ಇರುವುದರಿಂದ ನೆಲದ ಚಿತ್ರ ತೆಗೆಯಲು ಉಪಗ್ರಹವೇ ಬೇಕೆಂದಿಲ್ಲ. ಹೀಗೆ, ಕ್ಷಣಕ್ಷಣವೂ ಬದಲಾಗುತ್ತಿರುವ ಭೂಮಿಯ ಚಿತ್ರವನ್ನು ಪಡೆಯುವುದು ಸಾಧ್ಯ. ಆದರೆ, ಭೂಮಿಯಂತಹ ಬೃಹತ್ ಪ್ರದೇಶದ ಮೂಲೆ-ಮೂಲೆಯ ಚಿತ್ರಣವನ್ನೂ ಪಡೆಯಬೇಕಾದರೆ ಡ್ರೋನುಗಳ ದೊಡ್ಡ ಸೇನೆಯೇ ಬೇಕಾಗಬಹುದು. ಅವನ್ನು ವ್ಯವಸ್ಥಿತವಾಗಿ ಬಳಸುವುದಲ್ಲದೆ, ಅದರಿಂದ ದೊರೆತ ಮಾಹಿತಿಯನ್ನು ವಿಂಗಡಿಸಿ, ಗುರುತು ಹಚ್ಚಿ ಸಂಗ್ರಹಿಸುವ ಕೆಲಸವೂ ಆಗಬೇಕು. ಇದು ಒಬ್ಬಿಬ್ಬರಿಂದ ಆಗುವ ಕೆಲಸವಲ್ಲ ಬಿಡಿ.

ಹಾಗೊಮ್ಮೆ ಅದು ಸಾಧ್ಯವಾಯಿತೆಂದರೆ, ಭೂಮಿಯ ಅನುಕ್ಷಣದ ಬದಲಾವಣೆಗಳ ಚಿತ್ರ ದೊರೆತಂತಾಗುತ್ತದೆ. ನಿರಂತರವಾಗಿ ಬದಲಾಗುತ್ತಿರುವ ಭೂಮಿಯ ಚಿತ್ರಗಳ ಈ ಆಲ್ಬಮ್ ದಾಖಲೆ ಕೇವಲ ನಾಳಿನ ಚರಿತ್ರಕಾರರಿಗೆ ಮಾತ್ರವಲ್ಲ, ಇಂದಿನ ಆಡಳಿತಕ್ಕೂ ನೆರವಾಗಬಹುದು. ನಾಳಿನ ಸಂಶೋಧಕರು ಈ ಮಾಹಿತಿಯಿಂದ ಹೊಸ ಜಲಸಂಪನ್ಮೂಲಗಳನ್ನು ಪತ್ತೆ ಮಾಡಬಹುದು. ಮರೆತುಹೋದ ನಾಗರಿಕತೆಗಳನ್ನು ಗುರುತಿಸಬಹುದು. ಭೂಮಿಯಲ್ಲಿ ಇರಬಹುದಾದ ಭೂಕಂಪನದ ಸ್ಥಾನಗಳನ್ನು ಹೆಕ್ಕಬಹುದು. ಇದೆಲ್ಲ ನಾಳೆಗೆ. ಇಂದಿಗೂ ಇದರ ಪ್ರಯೋಜನವಿದೆ. ಬದಲಾವಣೆಗಳ ಗತಿ ಮತ್ತು ಅದಕ್ಕೆ ಕಾರಣಗಳು ತಿಳಿದಲ್ಲಿ, ಅನವಶ್ಯ ಮತ್ತು ಹಾನಿಕರ ಬದಲಾವಣೆಗಳನ್ನು ತಡೆಯಬಹುದು. ಇಷ್ಟೆಲ್ಲ ಸಾಧ್ಯವಾಗಬೇಕೆಂದರೆ ಭೂಮಿಯ ಕುರಿತ ಮಾಹಿತಿಗಳೆಲ್ಲವನ್ನೂ ಒಂದೆಡೆ ಒಟ್ಟು ಮಾಡಬೇಕಾಗುತ್ತದೆ. ಅದು ಮಾನವ ಜೀನೋಮ್ ಅಥವಾ ಚಂದ್ರನ ಮೇಲೆ ಕಾಲಿಡಲು ನಡೆಸಿದ ಪ್ರಯತ್ನದಷ್ಟೇ ಬೃಹದಾಶಯದ ಪ್ರಯತ್ನವಾಗಬಹುದು.

ಅದೆಲ್ಲ ಸರಿ... ಈ ಮಾಹಿತಿ ಯಾರಿಗಾಗಿ? ಎಲ್ಲರಿಗೂ ಸಿಗುವಂತೆ ಇರುತ್ತದೆಯೋ? ಈ ಪ್ರಶ್ನೆಗಳಿಗೆ ಮೊದಲು ಉತ್ತರ ಕಂಡುಕೊಳ್ಳದಿದ್ದಲ್ಲಿ, ಇಂತಹ ಮಹಾಯೋಜನೆ ಯಾರದ್ದೋ ಜೇಬು ತುಂಬುವ ಕೆಲಸವಾಗಬಹುದು.

ಮುಖ್ಯ ಚಿತ್ರ: ಅಮೆರಿಕದ 'ದಿ ಪಬ್ಲಿಕ್ ಬ್ರಾಡ್‌ಕಾಸ್ಟಿಂಗ್ ಸರ್ವಿಸ್' ಟಿವಿ ವಾಹಿನಿಯಲ್ಲಿ ಪ್ರಸಾರವಾಗುವ 'ನೇಚರ್' ದೃಶ್ಯಸರಣಿಯಲ್ಲಿ ಕಂಡುಬಂದ ಅತ್ಯಪರೂಪದ ಚಿತ್ರಣ
ನಿಮಗೆ ಏನು ಅನ್ನಿಸ್ತು?
3 ವೋಟ್