ಪಾಟಿ ಚೀಲ | ಶ್ರೀರಂಗಪಟ್ಟಣದ ನಗುವನಹಳ್ಳಿಯ ಪುನೀತನ ಮನೆಗೆ ಬಜ್ಪೆಯ ಹಫೀಲ್ ಬಂದ ಕತೆ

Puneet Hafeel Story 1

ಶ್ರೀರಂಗಪಟ್ಟಣದ ಸುತ್ತಲಿನ ಹಳ್ಳಿಗಳಲ್ಲಿ ಜನ ತಮ್ಮ ಮನೆಗಳಿಗೆ ವಿಜ್ಞಾನ ಹಬ್ಬದ ಅತಿಥಿ ಮಕ್ಕಳು ಬರುತ್ತಿದ್ದಾರೆಂದು ತಿಳಿದು ಶೌಚಾಲಯ ಕಟ್ಟಿಸಿಕೊಂಡಿದ್ದರು. ಪಂಚಾಯತ್ ನೀಡಿದ ಶೌಚಾಲಯವನ್ನು ಇದುವರೆಗೂ ಸೌದೆ ಸಂಗ್ರಹಿಸಲು ಇಟ್ಟುಕೊಂಡಿದ್ದವರು ಕೂಡ ಸೌದೆಯನ್ನು ಹೊರ ಸಾಗಿಸಿ ಅತಿಥಿಯ ಸೌಕರ್ಯಕ್ಕಾಗಿ ಸಜ್ಜುಗೊಳಿಸಿದ್ದರು

ನಗುವನಹಳ್ಳಿಯ ಪುನೀತನ ಮನೆಯಲ್ಲಿ ದಕ್ಷಿಣ ಕನ್ನಡದ ಬಜ್ಪೆಯ ಮೊಹಮ್ಮದ್ ಹಫೀಲ್ ಉಳಿದುಕೊಂಡ ಕತೆಯನ್ನು ಹಂಚಿಕೊಳ್ಳುವ ಮೊದಲು, ನಿಮಗೆ ಇದರ ಹಿನ್ನೆಲೆಯನ್ನು ಸ್ವಲ್ಪ ವಿವರಿಸಬೇಕು.

ಮಕ್ಕಳು ತಮ್ಮ ಜಗತ್ತಿನ ಚಿಪ್ಪೊಡೆದು ತಾವೇ ಸಂಪಾದಿಸಿದ ಅನುಭವದಲ್ಲಿ ಜ್ಞಾನವನ್ನು ರಚಿಸಿಕೊಳ್ಳುತ್ತಾರೆ ಎಂದು 2005ರ ಪಠ್ಯಕ್ರಮ ನೆಲಗಟ್ಟು ಹೇಳುತ್ತದೆ. ಇದೊಂದು ಚಂದದ ಆಶಯವಾಗಿ ಉಳಿದಿದೆಯೇ ಹೊರತು ತರಗತಿಯ ವಿದ್ಯಮಾನವಾಗಲಿಲ್ಲ. ಮೌಲ್ಯಮಾಪನವೆಂಬ ಗುಮ್ಮ ಹೇಗೆ ಆಡುತ್ತದೋ ಹಾಗೆಯೇ ಎಲ್ಲವೂ ನಡೆಯುತ್ತವೆ. ಸ್ವತಃ ಜ್ಞಾನ ಸೃಷ್ಟಿಯಲ್ಲಿ ತೊಡುಗುವಂತಹ ಕಲಿಕಾ ಪರಿಸರವನ್ನು ರೂಪಿಸುವ ಪ್ರಯತ್ನಗಳು ನಡೆದಿವೆಯಾದರೂ, ಅವು ದೈನಿಕದ ತರಗತಿ ವ್ಯವಹಾರವಾಗಲಿಲ್ಲ. ಅಲ್ಲೊಮ್ಮೆ ಇಲ್ಲೊಮ್ಮೆ ಬೆಳಕಿಂಡಿಗಳಂತೆ, ಬೆಳ್ಳಿರೇಖೆಗಳಂತೆ ಭರವಸೆಗಳು ಗೋಚರಿಸಿವೆ. ತೆಕ್ಕೆಗೆ ಸಿಕ್ಕಿತೆನ್ನುವಾಗ ಅಂತಹ ಭರವಸೆಗಳೆಲ್ಲ ಮೃಗಜಲದಂತೆ ಮಾಯವಾಗಿವೆ.

ಕೋವಿಡ್ ಎಂಬ ಕ್ರೂರ ಕಾಯಿಲೆ ಜಗತ್ತನ್ನು ತನ್ನ ಮುಷ್ಟಿಯಲ್ಲಿ ಆಡಿಸುವ ಹಿಂದಿನ ವರ್ಷವೇ ಶಿಕ್ಷಣ ಇಲಾಖೆಯು ಭಾರತ ಜ್ಞಾನ ವಿಜ್ಞಾನ ಸಮಿತಿಯ ಜೊತೆ ಸೇರಿ 'ಮಕ್ಕಳ ವಿಜ್ಞಾನ ಹಬ್ಬ' ಎಂಬ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಆಯೋಜಿಸಿತ್ತು. ಕ್ಲಸ್ಟರ್ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಈ ಹಬ್ಬಗಳು ನಡೆದಿದ್ದವು. ಇದೊಂದು ಕಲಿಕೆಯ ಹಬ್ಬ. ಈ ಹಬ್ಬದಲ್ಲಿ ಮಕ್ಕಳು ಸ್ವತಃ ಕಲಿಯಲು ಗುಂಪು ಒಡನಾಟದ ಅವಕಾಶವನ್ನು ಸೃಷ್ಟಿಸಲಾಗಿತ್ತು. ಮಕ್ಕಳ ಕಲಿಕೆಯನ್ನು ಪಾಲಕರು ಸಂಭ್ರಮಿಸುವಂತೆ ಅವರನ್ನೂ ಒಳಗೊಳಿಸಲಾಗಿತ್ತು. ಮಕ್ಕಳು ಆಟಿಕೆಗಳನ್ನು ತಯಾರಿಸುತ್ತಿದ್ದರು, ನಿಧಿ ಶೋಧದಂತಹ ಆಟಗಳನ್ನು ಆಡುತ್ತಿದ್ದರು, ಹಾಡು ಕಲಿಯುತ್ತಿದ್ದರು ಮತ್ತು ಕಲಿತ ಹಾಡುಗಳನ್ನು ಅಭಿನಯಿಸುತ್ತಿದ್ದರು. ಶಿಕ್ಷಕ-ಶಿಕ್ಷಕಿಯರು ಅವರಿಗೆ ಬೆಂಬಲ, ಸಹಾಯ ನೀಡುತ್ತ, ಮಕ್ಕಳ ಕಲಿಕೆಯನ್ನು ಅನುಕೂಲಿಸುತ್ತಿದ್ದರು. ಈ ಪರಿಸರವು ಮಕ್ಕಳಿಗೂ ದೊಡ್ಡವರಿಗೂ ಕಲಿಕೆಯ ಹೊಸ ಸಾಧ್ಯತೆಗಳನ್ನು ತೋರಿಸಿತು.

Image
Puneet Hafeel Story 3
ವಿಜ್ಞಾನ ಹಬ್ಬದ ದೃಶ್ಯ

ಈ ಕಾರ್ಯಕ್ರಮವನ್ನು ಈಗ ನಾನು ನೆನಪು ಮಾಡಿಕೊಳ್ಳುತ್ತಿರುವುದು ಬೇರೊಂದು ಕಾರಣಕ್ಕೆ - ಈ ಲೇಖನದ ಆರಂಭದಲ್ಲಿ ಪ್ರಸ್ತಾಪಿಸಿದ ಪುನೀತನೂ ಹಫೀಲನೂ ಆಕಸ್ಮಿಕವಾಗಿ ಗೆಳೆಯರಾದ ಕತೆ ಹೇಳಲು. ಜಿಲ್ಲಾ ಮಟ್ಟದ ಮಕ್ಕಳ ಹಬ್ಬಕ್ಕೆ ಬೇರೆ-ಬೇರೆ ಊರುಗಳಿಂದ ಬಂದ ಮಕ್ಕಳು ಅತಿಥೇಯ ಶಾಲೆಯ ಮಕ್ಕಳ ಮನೆಯಲ್ಲಿ ಎರಡು ರಾತ್ರಿಗಳನ್ನು ಕಳೆಯಬೇಕಿತ್ತು. ಅತಿಥಿ-ಆತಿಥೇಯ ಮಾದರಿಯ ಈ ವಿಧಾನದಲ್ಲಿ ಆತಿಥೇಯ ಶಾಲೆಯ ಯಾವ ಮಗುವಿನ ಮನೆಯಲ್ಲಿ ದೂರದೂರಿನಿಂದ ಬಂದ ಯಾವ ಮಗು ಉಳಿಯುವುದೆಂಬುದನ್ನು ಮುಂಚಿತವಾಗಿ ನಿರ್ಧರಿಸಿ, ಆ ಎರಡು ಮಕ್ಕಳು ಮತ್ತು ಅವರ ಕುಟುಂಬವು ಕಾರ್ಯಕ್ರಮಕ್ಕೂ ಮೊದಲೇ ಪರಸ್ಪರ ಸಂಪರ್ಕದಲ್ಲಿರುವಂತೆ ನೋಡಿಕೊಳ್ಳಲಾಗಿತ್ತು. ನಾನು ಐದಾರು ಜಿಲ್ಲೆಗಳಿಗೆ ತೆರಳಿ, ಅಲ್ಲಿನ ಜಿಲ್ಲಾ ಮಟ್ಟದ ಮಕ್ಕಳ ಹಬ್ಬದಲ್ಲಿ ಭಾಗವಹಿಸಿದ್ದೆ. ಉಡುಪಿಯ ಹಬ್ಬದ ಆರಂಭದಲ್ಲಿ ಕೆಲವು ಶಿಕ್ಷಕರು ತಮ್ಮ ಮಕ್ಕಳು ಯಾರದೋ ಮನೆಯಲ್ಲಿರುವುದು ಬೇಡ, ಅವರಿಗೆ ವಸತಿ ವ್ಯವಸ್ಥೆ ಮಾಡಬೇಕೆಂದು ಹಠ ಹಿಡಿದಿದ್ದರು. ಅವರ ಮನವೊಲಿಸಿ, ಮೊದಲೇ ನಿರ್ಧಾರವಾದಂತೆ ಆತಿಥೇಯರ ಮನೆಗಳಿಗೆ ಕಳುಹಿಸಲಾಯಿತು. ಸಾಧ್ಯವಾದಷ್ಟೂ ಅವರದೇ ಆಹಾರ ಕ್ರಮವುಳ್ಳವರ ಮನೆಯಲ್ಲಿ ಉಳಿದುಕೊಳ್ಳುವಂತೆ ಜೋಡಿ ಮಾಡಲಾಗಿದ್ದರೂ, ಕೊನೆಯ ದಿನ ಅನಿಸಿಕೆ ಹೇಳುವಾಗ ಮಕ್ಕಳು ತಮ್ಮ ಭಿನ್ನ ಮತ್ತು ಮಧುರ ಅನುಭವಗಳನ್ನು ಹಂಚಿಕೊಂಡರು.

ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಹಬ್ಬವು ಶ್ರೀರಂಗಪಟ್ಟಣದಲ್ಲಿ ನಡೆಯಿತು. ಅಲ್ಲಿಯೂ ಬೇರೆ-ಬೇರೆ ಜಿಲ್ಲೆಗಳಿಂದ ಬಂದ ಮಕ್ಕಳು ಶ್ರೀರಂಗಪಟ್ಟಣದ ಸುತ್ತಮುತ್ತಲ ಶಾಲೆಗಳ ಮಕ್ಕಳ ಮನೆಯಲ್ಲಿ ಅತಿಥಿಗಳಾಗಿದ್ದರು. ನಗುವನಹಳ್ಳಿಯ ಪುನೀತನ ಮನೆಯಲ್ಲಿ ಬಜ್ಪೆಯ ಮೊಹಮ್ಮದ್ ಹಫೀಲ್ ಅತಿಥಿಯಾಗಿದ್ದ. ಇಬ್ಬರೂ ಏಳನೇ ತರಗತಿಯ ವಿದ್ಯಾರ್ಥಿಗಳು. ಮೂರೇ ದಿನಕ್ಕೆ ಈ ಮಕ್ಕಳು ಒಬ್ಬರನ್ನೊಬ್ಬರು ಬಿಟ್ಟಿರಲಾದಷ್ಟು ಆತ್ಮೀಯರಾದರು.

ಶ್ರೀರಂಗಪಟ್ಟಣದ ಸುತ್ತಲಿನ ಹಳ್ಳಿಗಳಲ್ಲಿ ಜನ ತಮ್ಮ ಮನೆಗಳಿಗೆ ವಿಜ್ಞಾನ ಹಬ್ಬದ ಅತಿಥಿ ಮಕ್ಕಳು ಬರುತ್ತಿದ್ದಾರೆಂದು ತಿಳಿದು ಶೌಚಾಲಯ ಕಟ್ಟಿಸಿಕೊಂಡರೆಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಬಾಬು ಹೇಳುತ್ತಿದ್ದರು. ಪಂಚಾಯತ್ ನೀಡಿದ ಶೌಚಾಲಯವನ್ನು ಇದುವರೆಗೂ ಸೌದೆ ಸಂಗ್ರಹಿಸುವ ಸ್ಥಳವನ್ನಾಗಿಸಿಕೊಂಡವರು ಕೂಡ ಸೌದೆಯನ್ನು ಹೊರ ಸಾಗಿಸಿ ಅತಿಥಿಯ ಸೌಕರ್ಯಕ್ಕಾಗಿ ಸಜ್ಜುಗೊಳಿಸಿದ್ದರು.

ಈ ಲೇಖನ ಓದಿದ್ದೀರಾ?: ಪಾಟಿ ಚೀಲ | ನಾನೆಂದೂ ಕಂಡಿರದ ಆ ಹುಡುಗ ಆಗಾಗ ನನ್ನ ಕ್ಲಾಸಿಗೆ ಬರುತ್ತಾನೆ

ಹಬ್ಬದ ಕೊನೆಯ ದಿನ ಬೆಳಗ್ಗೆ ನಾನು ಪುನೀತನ ಮನೆಗೆ ಹೋಗಿದ್ದೆ. ಏಳೂವರೆಯಷ್ಟೊತ್ತಿಗೆ ಅವನ ಅಮ್ಮ ಮತ್ತು ಅಜ್ಜಿ ಕೆಲಸಕ್ಕೆ ಹೊರಟಾಗಿತ್ತು. ಹಫೀಲ್ ಮರಳಿ ಮಂಗಳೂರಿಗೆ ಹೋಗುತ್ತಿದ್ದಾನೆಂದು ತಿಳಿದು ಪಕ್ಕದ ಮನೆಯ ಮಹಿಳೆಯೊಬ್ಬರು ಆತನನ್ನು ಕರೆದು ದೋಸೆ ತಿನ್ನಿಸಿದರು. ಇಪ್ಪತ್ತು ರೂಪಾಯಿ ಕೊಟ್ಟು ಸಿಹಿತಿನಿಸು ಕೊಳ್ಳು ಎಂದು ಬೀಳ್ಕೊಟ್ಟರು.

ನಗುವನಹಳ್ಳಿಯ ಅಂಚಿನಲ್ಲಿರುವ ಈ ಕೇರಿಯಲ್ಲಿ ವಾಸಿಸುತ್ತಿರುವ ಪುನೀತನ ಕುಟುಂಬಕ್ಕೆ ಮನೆಯೊಂದನ್ನು ಬಿಟ್ಟು ಬೇರೆ ಆಸ್ತಿಯಿಲ್ಲ. ಬದುಕಿಗಾಗಿ ಈ ಕುಟುಂಬ ಕೂಲಿಯನ್ನು ಆಧರಿಸಿತ್ತು.
ಪುನೀತನ ಅಜ್ಜಿ ಮಲ್ಲಿಗೆ ಹೂವು ಕೀಳಲು ಹೋಗುತ್ತಿದ್ದ ಹೊಲ ದಾರಿಯಲ್ಲೇ ಇದ್ದುದರಿಂದ ಹಫೀಲ್ ಅಜ್ಜಿಗೆ ಹೇಳಿ ಬರಲು ಹೋದ. ನಾವೂ ಆತನನ್ನು ಹಿಂಬಾಲಿಸಿದೆವು. ಅಜ್ಜಿ ತಲೆ ನೇವರಿಸಿ "ಹೋಗಿಬಾ ಮಗಾ," ಎಂದರು. ಹಿಂದಿನ ವರ್ಷವಷ್ಟೇ ತನ್ನ ಅಜ್ಜಿಯನ್ನು ಕಳೆದುಕೊಂಡಿದ್ದ ಹಫೀಲ್, ಮತ್ತೆ ನಗುವನಹಳ್ಳಿಯಲ್ಲಿ ಅಜ್ಜಿಯನ್ನು ಪಡೆದಿದ್ದ.

ಈ ನಡುವೆ, ನಮ್ಮ ಜೊತೆ ಇದ್ದ ಸ್ನೇಹಿತರೊಬ್ಬರು, "ನಿಮ್ಮ ಮನೆಗೆ ಬಂದ ಹುಡುಗ ಬೇರೆ ಧರ್ಮದವನು ಎಂದು ಗೊತ್ತಾದಾಗ ಕಿರಿಕಿರಿಯಾಗಲಿಲ್ಲವೇ?" ಎಂದು ಕೇಳಿದರು. ಅಜ್ಜಿ ಈ ಪ್ರಶ್ನೆಯನ್ನು ಕ್ಷುಲ್ಲಕವೆಂಬಂತೆ ಅಲಕ್ಷಿಸಿ, "ಇವನೂ ನನ್ನ ಮೊಮ್ಮಗನೇ. ರಾತ್ರಿ ನಾನೇ ಈತನನ್ನು ಮೂತ್ರಕ್ಕೆ ಹೊರಗೆ ಕರೆದೊಯ್ತಿದ್ದೆ," ಎಂದರು. "ಅಲ್ವೇನಪ್ಪಾ?" ಎಂದು ಹಫೀಲನ ತಲೆ ನೇವರಿಸಿದರು. ಬೇರೆ-ಬೇರೆ ಧರ್ಮದವರು ಒಬ್ಬರ ಮನೆಗೆ ಒಬ್ಬರು ಹೋಗುವುದು, ಉಳಿಯುವುದು ಅಸಾಮಾನ್ಯ ಘಟನೆ ಎಂದು ಅಜ್ಜಿ ಭಾವಿಸಿರಲಿಲ್ಲ.

Image
Puneet Hafeel Story 4
ವಿಜ್ಞಾನ ಹಬ್ಬದ ದೃಶ್ಯ

"ಈ ಹುಡ್ಗ ತುಂಬಾ ಒಳ್ಳೆಯವನು. ಬಂದ ಮೊದಲ ದಿನ ಹುಷಾರಿಲ್ಲದಿದ್ದರೂ ತನ್ನ ಅಮ್ಮ ಫೋನ್ ಮಾಡಿದಾಗ ಅದನ್ನು ಮುಚ್ಚಿಟ್ಟು ಹುಶಾರಾಗಿರುವೆ ಎಂದಿದ್ದ.. ನಾನು ಸೋಡಾ ಕುಡಿಸಿದೆ, ಹುಷಾರಾದ," ಎಂದು ಅಜ್ಜಿ ಹೇಳುವಾಗ ಹಫೀಲ್ ನಗುತ್ತಿದ್ದ.

ಹಫೀಲ್ ಮರಳಿ ಊರಿಗೆ ಹೊರಡುವಾಗ ಪುನೀತ್ ಅಳುತ್ತಿದ್ದ. ಹಫೀಲ್ ಕೂಡ ಅಷ್ಟೇ ದುಃಖಿತನಾಗಿದ್ದ. ಆದರೂ ಗೆಳೆಯನನ್ನು ಸಮಾಧಾನ ಮಾಡಲು ಮುಖದ ಮೇಲೆ ನಗುವಿನ ತೇಪೆ ಹಾಕಿಕೊಂಡಿದ್ದ.

ಅದೇ ರಾತ್ರಿ ಮೈಸೂರು ಬಸ್ ನಿಲ್ದಾಣದಲ್ಲಿ ಹಫೀಲ್ ಮತ್ತು ದಕ್ಷಿಣ ಕನ್ನಡದ ಉಳಿದ ಮಕ್ಕಳು ಸಿಕ್ಕರು. ಪ್ರತಿಯೊಬ್ಬರಲ್ಲೂ ಒಂದೊಂದು ಚಂದದ ಕತೆ ಇತ್ತು. ನಾಲ್ಕು ದಿನಗಳ ಮಟ್ಟಿಗಾದರೂ ಜಾತಿ- ಧರ್ಮಗಳು ಮನುಷ್ಯತ್ವದ ದೊಡ್ಡ ಸಾಗರದಲ್ಲಿ ವಿಲೀನವಾಗಿದ್ದವು. ಅಂತಸ್ತುಗಳು ಮುರಿದುಬಿದ್ದಿದ್ದವು.

ಎಷ್ಟೇ ದ್ವೇಷವನ್ನು ಬಿತ್ತಿದರೂ ಪ್ರೀತಿಯ ಹೂವುಗಳು ಈ ದೇಶದ ಹೊಲ-ಗದ್ದೆಗಳಲ್ಲಿ ಅರಳುತ್ತವೆ. ಬಿತ್ತಿದ ದ್ವೇಷವು ಬೆಳೆಯಾಗದೆ ಕಳೆಯಾಗುತ್ತದೆ ಎಂಬುದು ಮತ್ತೊಮ್ಮೆ ಖಾತರಿಯಾಯಿತು.

ನಿಮಗೆ ಏನು ಅನ್ನಿಸ್ತು?
11 ವೋಟ್