ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 10 | ಜಾತಿ ಎಂಬುದು ಮನುಷ್ಯನ ಚೈತನ್ಯವನ್ನು ಕಟ್ಟಿಹಾಕುವ ಕೆಡುಕು

ವ್ಯಕ್ತಿಯು ತನಗಿಷ್ಟದ ವೃತ್ತಿ ಆಯ್ಕೆ ಮಾಡಿ ಮುನ್ನಡೆದಾಗ ಮಾತ್ರ ಸಾಮಾಜಿಕ ದಕ್ಷತೆ ಸಾಧ್ಯ. ಆದರೆ, ಜಾತಿ ಪದ್ಧತಿಯಲ್ಲಿ ಈ ಮೂಲ ತತ್ವಕ್ಕೆ ಬೆಲೆ ಇಲ್ಲ. ಏಕೆಂದರೆ, ಮುಂಚಿತವಾಗಿಯೇ ಕೆಲಸ-ಕಾರ್ಯ ನಿಗದಿಪಡಿಸಲಾಗುತ್ತದೆ. ಅದೂ ತರಬೇತಿ ಪಡೆದ ಮೂಲ ಸಾಮರ್ಥ್ಯಕ್ಕೆ ಅನುಗುಣವಾಗಿ ಅಲ್ಲ, ಬದಲಾಗಿ ಪೋಷಕರ ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ!

ಇಂದಿಗೂ ಜಾತಿಯು ತನ್ನ ಸಮರ್ಥಕರನ್ನು ಹೊಂದಿರುವುದು ವಿಷಾದದ ಸಂಗತಿ. ಸಮರ್ಥನೆಗಳು ಬೇಕಾದಷ್ಟಿವೆ. ಜಾತಿ ವ್ಯವಸ್ಥೆಯು ಶ್ರಮ ವಿಭಜನೆಗೆ ಮತ್ತೊಂದು ಹೆಸರೆಂದೂ ಮತ್ತು ಶ್ರಮ ವಿಭಜನೆಯು ಪ್ರತಿ ನಾಗರಿಕ ಸಮಾಜದ ಅಗತ್ಯ ಲಕ್ಷಣ ಅಂದಮೇಲೆ ಜಾತಿ ವ್ಯವಸ್ಥೆಯಲ್ಲಿ ಯಾವುದೇ ತಪ್ಪಿಲ್ಲ ಎಂದೂ ವಾದಿಸಲಾಗುತ್ತದೆ. ಈ ದೃಷ್ಟಿಕೋನಕ್ಕೆ ಪ್ರತಿಯಾಗಿ ಹೇಳಬೇಕಾದ ಮೊದಲ ವಿಚಾರ, ಜಾತಿ ಪದ್ಧತಿ ಬರೀ ಶ್ರಮ ವಿಭಜನೆ ಮಾತ್ರವಾಗಿರದೆ ಶ್ರಮಿಕರ ವಿಭಜನೆಯೂ ಆಗಿದೆ. ನಾಗರಿಕ ಸಮಾಜಕ್ಕೆ ನಿಸ್ಸಂದೇಹವಾಗಿ ಶ್ರಮ ವಿಭಜನೆಯ ಅಗತ್ಯವಿದೆ. ಆದರೆ,  ಶ್ರಮ ವಿಭಜನೆಯು ಶ್ರಮಿಕರನ್ನು ಉಸಿರುಗಟ್ಟಿಸುವ ರೀತಿಯಲ್ಲಿ ಪ್ರತ್ಯೇಕ ವರ್ಗವಾಗಿಸಿ ಒಬ್ಬರನ್ನೊಬ್ಬರು ಬೆರೆಯದಂತೆ ಇಟ್ಟಿರುವುದು ಯಾವ ನಾಗರಿಕವಾದ ಯಾವ ಸಮಾಜದಲ್ಲೂ ಇಲ್ಲ.

Eedina App

ಜಾತಿ ಪದ್ಧತಿಯು ಶ್ರಮ ವಿಭಜನೆಗಿಂತ ಭಿನ್ನವಾದ ಶ್ರಮಿಕರ ವಿಭಜನೆ ಮಾತ್ರವಾಗಿರದೆ, ವಿಭಜಿತ ಶ್ರಮಿಕರನ್ನು ಮೇಲು-ಕೀಳಿನ ಸ್ತರಗಳಲ್ಲಿ ಇಡುವ ಶ್ರೇಣೀಕರಣ ವಿಧಾನವೂ ಆಗಿದೆ. ಶ್ರಮ ವಿಭಜನೆಯು ಶ್ರಮಿಕರಲ್ಲಿ ಮೇಲು-ಕೀಳೆಂಬ ತಾರತಮ್ಯ ಹುಟ್ಟುಹಾಕಿರುವುದು ಬೇರೆ ಯಾವ ದೇಶದಲ್ಲೂ ಇಲ್ಲ. ಇನ್ನೂ ಒಂದು ಮಾತಿದೆ, ಈ ಶ್ರಮ ವಿಭಜನೆ ಸಹಜವಾದುದಲ್ಲ. ಇದು ಸಹಜವಾಗಿ ನಿಸರ್ಗದತ್ತ ಬುದ್ಧಿಮತ್ತೆಯನ್ನು ಆಧರಿಸಿಲ್ಲ. ಯಾವುದೇ ವ್ಯಕ್ತಿಯ ಸಾಮರ್ಥ್ಯವನ್ನು, ಅವನು ಸ್ಪರ್ಧಾತ್ಮಕವಾಗಿ, ತನಗೆ ಇಷ್ಟವಾಗುವ ವೃತ್ತಿಜೀವನವನ್ನು ಆಯ್ಕೆ ಮಾಡಿ, ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯದ ಹಂತಕ್ಕೆ ಕೊಂಡೊಯ್ದಾಗ ಮಾತ್ರ ಸಾಮಾಜಿಕ ಮತ್ತು ವೈಯಕ್ತಿಕ ದಕ್ಷತೆ ಸಾಧ್ಯವಾಗುತ್ತದೆ. ಆದರೆ, ಜಾತಿ ಪದ್ಧತಿಯಲ್ಲಿ ಈ ಮೂಲ ತತ್ವಕ್ಕೆ ಬೆಲೆಯಿಲ್ಲ. ಇಲ್ಲಿ ಕೆಲಸ-ಕಾರ್ಯಗಳನ್ನು ಮುಂಚಿತವಾಗಿಯೇ ನಿಗದಿಪಡಿಸಲಾಗುತ್ತದೆ; ಅದು ತರಬೇತಿ ಪಡೆದ ಮೂಲ ಸಾಮರ್ಥ್ಯಕ್ಕೆ ಅನುಗುಣವಾಗಿ ಅಲ್ಲ, ಬದಲಾಗಿ ಪೋಷಕರ ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ!

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 9 | ಸಮಾಜವಾದಿಗಳಿಗೆ ಒಂದಷ್ಟು ಪ್ರಶ್ನೆಗಳು

AV Eye Hospital ad

ಇನ್ನೊಂದು ಮಗ್ಗುಲಿನಿಂದ ನೋಡಿದರೆ, ಜಾತಿ ಪದ್ಧತಿಯಿಂದಾದ ಈ ಕಸುಬಿನ ಶ್ರೇಣೀಕರಣ ಖಂಡಿತವಾಗಿ ವಿನಾಶಕವಾಗಿದೆ. ಉದ್ಯಮ ಎಂದೂ ನಿಂತ ನೀರಲ್ಲ. ಅದು ತ್ವರಿತ ಮತ್ತು ಹಠಾತ್ ಬದಲಾವಣೆಗಳಿಗೆ ಒಳಗಾಗುತ್ತಿರುತ್ತದೆ. ಅಂತಹ ಬದಲಾವಣೆಗಳಾಗುತ್ತಿರುವಾಗ ಒಬ್ಬ ವ್ಯಕ್ತಿಯು ತನ್ನ ಉದ್ಯೋಗವನ್ನು ಬದಲಾಯಿಸಲು ಮುಕ್ತವಾದ ಸ್ವಾತಂತ್ರ್ಯವಿರಬೇಕು. ಬದಲಾಗುತ್ತಿರುವ ಪರಿಸ್ಥಿತಿಗೆ ಹೊಂದಿಕೊಳ್ಳಲು ವ್ಯಕ್ತಿ ಸ್ವತಂತ್ರನಾಗಿರದೆ ಹೋದರೆ ಜೀವನ ನಿರ್ವಹಣೆ ಕಷ್ಯಸಾಧ್ಯವಾಗುತ್ತದೆ. ಆದರೆ, ಒಬ್ಬ ಹಿಂದೂವಿಗೆ ವಂಶಪಾರಂಪರಿಕವಾಗಿ ಬಂದ ವೃತ್ತಿಗೆ ಹೊರತಾದ ಅನ್ಯ ವೃತ್ತಿಗಳಲ್ಲಿ ತೊಡಗಲು ಜಾತಿ ಪದ್ಧತಿಯು ಆಸ್ಪದ ನೀಡುವುದಿಲ್ಲ. ಹಿಂದೂವೊಬ್ಬ ಹೊಟ್ಟೆಗಿಲ್ಲದಿದ್ದರೂ ತನ್ನ ಜಾತಿಗೆ ಅನ್ಯವಾದ ಯಾವುದೇ ಹೊಸ ವೃತ್ತಿಯಲ್ಲಿ ತೊಡಗದೆ ಇರುವುದಕ್ಕೆ ಜಾತಿ ಪದ್ಧತಿಯೇ ಕಾರಣ.

ವೃತ್ತಿಗಳ ಮರುಹೊಂದಾಣಿಕೆಗೆ ಅನುಮತಿ ನೀಡದೆ ಇರುವುದರಿಂದ, ದೇಶದಲ್ಲಿ ನಾವು ಕಾಣುವ ಹೆಚ್ಚಿನ ನಿರುದ್ಯೋಗಕ್ಕೆ ಜಾತಿಯು ನೇರ ಕಾರಣವಾಗಿದೆ. ಶ್ರಮ ವಿಭಜನೆಯ ಮಾದರಿಯಾಗಿ ತೆಗೆದುಕೊಂಡರೆ ಜಾತಿ ವ್ಯವಸ್ಥೆಯು ಇನ್ನೊಂದು ಗಂಭೀರ ದೋಷದಿಂದ ಬಳಲುತ್ತಿದೆ. ಜಾತಿ ಪದ್ಧತಿಯಿಂದಾದ ಶ್ರಮ ವಿಭಾಗ ಸ್ವಂತ ಆಯ್ಕೆಯಿಂದ ಆದುದಲ್ಲ. ವೈಯಕ್ತಿಕ ಭಾವನೆಗಾಗಲೀ, ಅಥವಾ ವೈಯಕ್ತಿಕ ಆದ್ಯತೆಗಾಗಲೀ ಅಲ್ಲಿ ಜಾಗವಿಲ್ಲ. ಅದು ಪೂರ್ವಕರ್ಮದ ಫಲವೆಂಬ  ಸಿದ್ಧಾಂತವನ್ನು ಆಧರಿಸಿದ್ದು. ಕೈಗಾರಿಕಾ ಸಮಾಜದಲ್ಲಿರುವ ಭೀಕರ ಪರಿಸ್ಥಿತಿಗೆ ಕಾರಣ ಅಲ್ಲಿನ ಬಡತನವಲ್ಲ, ಅಲ್ಲಿನ ಬವಣೆಗಳೂ ಅಲ್ಲ. ಬದಲಾಗಿ, ಅಲ್ಲಿ ಬಹಳಷ್ಟು ಜನ ತಮ್ಮ ಮನಸ್ಸಿಗೊಪ್ಪದ ವೃತ್ತಿಗಳಲ್ಲಿ ತೊಡಗಿಕೊಂಡಿರುವ ವಾಸ್ತವ ಎಂಬುದನ್ನು ನಾವು ಗಮನಿಸಬೇಕು. ಅಂತಹ ವೃತ್ತಿಗಳು, ವ್ಯಕ್ತಿಯಲ್ಲಿ ತನ್ನ ವೃತ್ತಿಯ ಬಗ್ಗೆ ಹೇವರಿಕೆ, ಕೆಟ್ಟ ಭಾವನೆಯನ್ನು ಉಂಟುಮಾಡುವುದಲ್ಲದೆ, ಮೈಗಳ್ಳತನವನ್ನೂ ಬೆಳೆಸುತ್ತದೆ. ಭಾರತದ ಹಲವಾರು ವೃತ್ತಿಗಳನ್ನು ಹಿಂದೂಗಳು ಕೀಳೆಂದು ಪರಿಗಣಿಸುವುದರಿಂದ, ಆ ವೃತ್ತಿಗಳಲ್ಲಿ ತೊಡಗಿರುವ ಜನರು ಕೂಡ ತಮ್ಮ ಕೆಲಸವನ್ನು ಅಸಡ್ಡೆಯಿಂದ ಕಾಣುತ್ತಾರೆ.

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 8 | ಭಾರತದ ಸಮಾಜವಾದಿಗಳ ಆಲೋಚನೆ ಎಡವಿದ್ದೆಲ್ಲಿ?

ಹಿಂದೂ ಧರ್ಮವು ಅನೇಕ ವೃತ್ತಿಗಳನ್ನು ತುಚ್ಛವೆಂದು ಪರಿಗಣಿಸುವ ಕಾರಣದಿಂದಾಗಿ, ಅದನ್ನು ಅನುಸರಿಸುವ ಜನರು, ಈ ಹೀನ ವೃತ್ತಿಗಳಿಂದ ತಪ್ಪಿಸಿಕೊಳ್ಳಲು ಸತತವಾಗಿ ಹಾತೊರೆಯುತ್ತಿರುತ್ತಾರೆ. ಜನರಿಗೆ ತಾವು ಮಾಡುವ ಕೆಲಸದಲ್ಲಿ ಮನಸ್ಸೇ ಇಲ್ಲದ ವ್ಯವಸ್ಥೆಯಲ್ಲಿ ಅವರಿಂದ ಯಾವ ದಕ್ಷತೆಯನ್ನು ನಿರೀಕ್ಷಿಸಬಹುದು? ಜಾತಿಯು ಆರ್ಥಿಕ ಸಂಘಟನೆಯ ಒಂದು ಮಾದರಿಯೇ ಆಗಿದ್ದಲ್ಲಿ, ಅದು ಮನುಷ್ಯನ ನಿಸರ್ಗದತ್ತ ಚೈತನ್ಯವನ್ನು ಮತ್ತು ಸಹಜ ಒಲವುಗಳನ್ನು ಸಾಮಾಜಿಕ ಕಟ್ಟುಪಾಡಿಗೆ ಅಡಿಯಾಳಾಗಿಸುವ ಕೆಡುಕಿನ ಸಂಸ್ಥೆಯಾಗಿದೆ.

ಅಂಬೇಡ್ಕರ್ ಅವರ 'Annihilation of Caste' ಪುಸ್ತಕದ ಅನುವಾದ ಸರಣಿ ಇದು. ಇಲ್ಲಿರುವುದು ನಾಲ್ಕನೇ ಅಧ್ಯಾಯ.
ನಿಮಗೆ ಏನು ಅನ್ನಿಸ್ತು?
0 ವೋಟ್
eedina app