ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 11 | ಯಾರಾದರೂ 'ಜಾತಿ ಪದ್ಧತಿ ವೈಜ್ಞಾನಿಕ' ಎಂದರೆ, ಮೊದಲು ನಕ್ಕುಬಿಡಿ

ಜಾತಿ ಪದ್ಧತಿಯು ವಂಶತಳಿ ನಿಯಂತ್ರಣಾ ತತ್ವಗಳ ಆಧಾರದಲ್ಲಿ ನಿರೂಪಿತವಾಗಿದ್ದೇ ಆಗಿದ್ದಲ್ಲಿ, ಮನುಷ್ಯ ಜನಾಂಗ ಹೇಗಿರಬೇಕಿತ್ತು? ದೈಹಿಕ ಲಕ್ಷಣಗಳ ಪ್ರಕಾರ, ಹಿಂದೂಗಳದ್ದು ಸಿ3 ಗುಂಪು; ಕುಳ್ಳರೂ ಅಬಲರೂ ಆಗಿರುವ ಪಿಗ್ನಿ ಜನಾಂಗಕ್ಕೆ ಸೇರಿದವರು. ಪರಿಣಾಮವಾಗಿ, ಹತ್ತರಲ್ಲಿ ಒಂಬತ್ತರಷ್ಟು ಜನ ಸೈನಿಕ ಸೇವೆಗೆ ಅನರ್ಹರು ಎಂದು ಪರಿಗಣಿತವಾಗಿರುವ ದೇಶವಿದು

ಜಾತಿ ಪದ್ಧತಿಯ ಸಮರ್ಥನೆಗಾಗಿ ಕೆಲವರು ಜೈವಿಕಶಾಸ್ತ್ರದ ಆಳಕ್ಕಿಳಿಯಲು ಪ್ರಯತ್ನಿಸುತ್ತಾರೆ. ಒಂದು ಜನಾಂಗದ ಶುದ್ಧತೆ ಮತ್ತು ರಕ್ತದ ಶುದ್ಧತೆಯನ್ನು ಕಾಪಾಡುವುದು ಜಾತಿಯ ಉದ್ದೇಶ ಎಂದು ಹೇಳಲಾಗುತ್ತದೆ. ಜನಾಂಗಶಾಸ್ತ್ರಜ್ಞರು, "ಈಗ ಶುದ್ಧ ಜನಾಂಗವೆಂಬುದು ಎಲ್ಲಿಯೂ ಅಸ್ತಿತ್ವದಲ್ಲಿಲ್ಲ ಮತ್ತು ಪ್ರಪಂಚದ ಎಲ್ಲ ಭಾಗಗಳಲ್ಲಿಯೂ ಎಲ್ಲ ಜನಾಂಗಗಳ ಬೆರಕೆಯಿದೆ," ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಜನರ ವಿಷಯದಲ್ಲಂತೂ ಇದು ತೀರಾ ಸ್ಪಷ್ದವಾದ ಸಂಗತಿ.

ಡಿ ಆರ್ ಭಂಡಾರ್ಕರ್ ಅವರು ತಮ್ಮ 'ಫಾರಿನ್ ಎಲಿಮೆಂಟ್ಸ್ ಇನ್ ಹಿಂದೂ ಪಾಪುಲೇಶನ್' ಎಂಬ ಲೇಖನದಲ್ಲಿ ಹೀಗೆ ಹೇಳಿದ್ದಾರೆ: "ಭಾರತದಲ್ಲಿ ಪರಕೀಯ ತಳಿಗಳಿಂದ ಸಂಕರಗೊಳ್ಳದ ಜಾತಿ ಅಥವಾ ವರ್ಗಗಳನ್ನು ನಾವು ಎಲ್ಲೂ ಕಾಣೆವು. ಕ್ಷತ್ರಿಯ ವರ್ಗಗಳಾದ ರಜಪೂತರು, ಮರಾಠರು ಮಾತ್ರವಲ್ಲದೆ, ತಾವು ಸಕಲ ಪರಕೀಯ ಧಾತುಗಳಿಂದ ಮುಕ್ತವಾದ ಪರಿಶುದ್ಧ ಜನರೆಂಬ ಭ್ರಮೆಯಲ್ಲಿರುವ ಬ್ರಾಹ್ಮಣರೂ ಸಹ ಪರಕೀಯ ರಕ್ತ ಸಂಕರಕ್ಕೆ ಒಳಗಾದವರೇ ಆಗಿದ್ದಾರೆ.”

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 10 | ಜಾತಿ ಎಂಬುದು ಮನುಷ್ಯನ ಚೈತನ್ಯವನ್ನು ಕಟ್ಟಿಹಾಕುವ ಕೆಡುಕು

ಜಾತಿ ವ್ಯವಸ್ಥೆಯು ಜನಾಂಗಗಳ ಕಲಬೆರಕೆಯನ್ನು ತಡೆಯುವ ಸಲುವಾಗಿ ಅಥವಾ ರಕ್ತದ ಶುದ್ಧತೆಯನ್ನು ಕಾಪಾಡುವ ಸಲುವಾಗಿ ಅಸ್ತಿತ್ವಕ್ಕೆ ಬಂತು ಎಂದು ಹೇಳಲಾಗದು. ವಾಸ್ತವವಾಗಿ  ಭಾರತದಲ್ಲಿ ವಿವಿಧ ಜನಾಂಗಗಳು ರಕ್ತ ಸಂಬಂಧದಲ್ಲಿ ಮತ್ತು ಸಂಸ್ಕೃತಿಯಲ್ಲಿ ಬೆರೆತ ಬಹಳ ಕಾಲದ ನಂತರ ಜಾತಿ ವ್ಯವಸ್ಥೆಯು ಅಸ್ತಿತ್ವಕ್ಕೆ ಬಂತು. ಜಾತಿ ಬೇಧ ಅಥವಾ ಜನಾಂಗೀಯ ಬೇಧವನ್ನು ಚಾಲ್ತಿಯಲ್ಲಿಡುವುದು ಮತ್ತು ಬೇರೆ-ಬೇರೆ ಜಾತಿಗಳನ್ನು ಬೇರೆ-ಬೇರೆ ಜನಾಂಗಗಳಾಗಿ ನೋಡುವುದು ನೈಜತೆಯನ್ನು ತಿರುಚುವ ವಿಕೃತಿ. ಪಂಜಾಬಿನ ಬ್ರಾಹ್ಮಣನಿಗೂ ಮದ್ರಾಸಿನ ಬ್ರಾಹ್ಮಣನಿಗೂ ಯಾವ ಜನಾಂಗೀಯ ಸಂಬಂಧವಿದೆ? ಬಂಗಾಳದ ಅಸ್ಪೃಶ್ಯ ಮತ್ತು ಮದ್ರಾಸಿನ ಅಸ್ಪೃಶ್ಯರ ನಡುವೆ ಯಾವ ಜನಾಂಗೀಯ ಸಂಬಂಧವಿದೆ? ಪಂಜಾಬಿನ ಬ್ರಾಹ್ಮಣ ಮತ್ತು ಪಂಜಾಬಿನ ಚಮ್ಮಾರನ ನಡುವೆ ಯಾವ ಜನಾಂಗೀಯ ವ್ಯತ್ಯಾಸವಿದೆ? ಮದ್ರಾಸಿನ ಬ್ರಾಹ್ಮಣ ಮತ್ತು ಮದ್ರಾಸಿನ ಪರಯ್ಯರ ನಡುವೆ ಯಾವ ಜನಾಂಗೀಯ ವ್ಯತ್ಯಾಸವಿದೆ? ಪಂಜಾಬಿನ ಬ್ರಾಹ್ಮಣ ಜನಾಂಗೀಯವಾಗಿ ಪಂಜಾಬಿನ ಚಮ್ಮಾರ ಮತ್ತು ಮದ್ರಾಸಿನ ಬ್ರಾಹ್ಮಣ ಮದ್ರಾಸಿನ ಪರಯ್ಯ ಒಂದೇ ಜನಾಂಗದವರಾಗಿದ್ದಾರೆ. ಜಾತಿ ವ್ಯವಸ್ಥೆಯು ಜನಾಂಗೀಯ ವಿಭಜನೆಯನ್ನು ಗುರುತಿಸುವುದಿಲ್ಲ. ಜಾತಿ ವ್ಯವಸ್ಥೆಯು ಒಂದೇ ಜನಾಂಗದ ಜನರ ಸಾಮಾಜಿಕ ವಿಭಜನೆ.

ಆದಾಗ್ಯೂ, ಇದನ್ನು ಜನಾಂಗೀಯ ವಿಭಜನೆಯೆಂದು ಭಾವಿಸಿ ಹೀಗೆ ಕೇಳಬಹುದು: ಭಾರತದಲ್ಲಿ ಅಂತರ್ಜಾತೀಯ ವಿವಾಹಗಳಿಗೆ ಅವಕಾಶ ಮಾಡಿಕೊಡುವ ಮೂಲಕ ಜನಾಂಗೀಯ ಸಂಕರ, ರಕ್ತಸಂಕರಗಳು ಸಂಭವಿಸಿದರೆ ಆಗುವ ಹಾನಿಯಾದರೂ ಏನು? ಮನುಷ್ಯರನ್ನು ಪ್ರಾಣಿಗಳಿಂದ ನಿಚ್ಚಳವಾದ ವ್ಯತ್ಯಾಸಗಳ ಮೂಲಕ ವಿಂಗಡಿಸಲಾಗಿದೆ; ವಿಜ್ಞಾನವು ಮನುಷ್ಯರು ಮತ್ತು ಪ್ರಾಣಿಗಳನ್ನು ಭಿನ್ನ ಜೀವಪ್ರಭೇದಗಳಾಗಿ ಗುರುತಿಸಿದೆ. ಜನಾಂಗಗಳ ಶುದ್ಧತೆಯನ್ನು ನಂಬುವ ವಿಜ್ಞಾನಿಗಳು ಕೂಡ ಭಿನ್ನ ಜನಾಂಗಗಳಿಗೆ ಸೇರಿದ ಮನುಷ್ಯರನ್ನು ವಿಭಿನ್ನ ಜೀವಪ್ರಭೇದಗಳು ಎಂದು ಪ್ರತಿಪಾದಿಸುವುದಿಲ್ಲ. ಅವು ಒಂದೇ ಪ್ರಬೇಧದದ ಮನುಷ್ಯರಲ್ಲಿರುವ ವೈವಿಧ್ಯಗಳು ಅಷ್ಟೇ. ಅವರು ಸಂತಾನೋತ್ಪತ್ತಿ ಮಾಡಬಲ್ಲರು ಮತ್ತು ಸಂತಾನೋತ್ಪತ್ತಿಯ ಸಾಮರ್ಥ್ಯವುಳ್ಳ ಜೀವಿಗಳನ್ನು ಹುಟ್ಟುಹಾಕಬಲ್ಲರು.  

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 9 | ಸಮಾಜವಾದಿಗಳಿಗೆ ಒಂದಷ್ಟು ಪ್ರಶ್ನೆಗಳು

ಜಾತಿಪದ್ಧತಿಯನ್ನು ಸಮರ್ಥಿಸಿಕೊಳ್ಳುತ್ತ ಅನುವಂಶೀಯತೆ ಮತ್ತು ವಂಶಾವಳಿಯ ಕುರಿತಾಗಿ ಸಾಕಷ್ಟು ಅಸಂಬದ್ಧ ಮಾತುಗಳು ಕೇಳಿಬರುತ್ತವೆ. ವಂಶಾವಳಿಯ ಮೂಲಭೂತ ತತ್ವಕ್ಕೆ ಅನುಗುಣವಾಗಿದ್ದರೆ ಕೆಲವರಷ್ಟೇ ಜಾತಿ ವ್ಯವಸ್ಥೆಯನ್ನು ವಿರೋಧಿಸಬಹುದು. ಏಕೆಂದರೆ, ವಿವೇಚನೆಯುತ ಸಂಭೋಗದ ಮೂಲಕ ಜನಾಂಗದ ತಳಿಯ ಸುಧಾರಣೆಯನ್ನು ಕೆಲವರು ವಿರೋಧಿಸಿಬಹುದೇನೋ. ಆದರೆ, ಜಾತಿ ವ್ಯವಸ್ಥೆಯು ವಿವೇಚನೆಯುತ ಸಂಭೋಗ ಮಿಲನವನ್ನು ಹೇಗೆ ಸಾಧ್ಯವಾಗಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳವುದು ಕಷ್ಟ. ಜಾತಿ ವ್ಯವಸ್ಥೆ ನಕಾರಾತ್ಮಕವಾದದ್ದು. ಇದು ಬೇರೆ-ಬೇರೆ ಜಾತಿಗಳಿಗೆ ಸೇರಿದ ವ್ಯಕ್ತಿಗಳು ಅಂತರ್ಜಾತಿ ವಿವಾಹವಾಗುವುದನ್ನು ನಿಷೇಧಿಸುತ್ತದೆ. ಇರುವ ಜಾತಿಯಲ್ಲಿ ಯಾವ ಇಬ್ಬರು ಮದುವೆಯಾಗಬೇಕು ಎಂಬುದನ್ನು ಆಯ್ಕೆ ಮಾಡುವುದು ಸಕಾರಾತ್ಮಕ ವಿಧಾನವಲ್ಲ. ವಂಶತಳಿ ನಿಯಂತ್ರಣಾ ವಿವೇಚನೆ ಜಾತಿಯ ಹುಟ್ಟಿಗೆ ಆಧಾರವಾಗಿದ್ದಲ್ಲಿ, ಅದೇ ವಿವೇಚನೆ ಉಪಜಾತಿಗಳ ಹುಟ್ಟಿಗೂ ಆಧಾರವಾಗಿರಬೇಕು. ಉಪಜಾತಿಗಳ ರಚನೆಗೆ ಇಂಥ ವಿವೇಚನೆಯೇ ಆಧಾರವೆಂಬ ನಿಲುವಿಗೆ ಯಾರಾದರೂ ಬದ್ಧರಾಗಿರುತ್ತಾರೆಯೇ? ಹಾಗೆಂದು ಪ್ರತಿಪಾದಿಸುವುದು ತೀರಾ ಅಸಂಬದ್ಧ ಎನ್ನುವುದು ನನ್ನ ನಿಲುವು. ಮತ್ತದಕ್ಕೆ ಕಾರಣ ಸ್ಪಷ್ಟ. ಜಾತಿ ಜನಾಂಗಕ್ಕೆ ಸಮ ಎಂದಾದರೆ, ಒಂದು ಜಾತಿಯ ಮೂಲದಿಂದ ಹುಟ್ಟಿದ ಉಪಜಾತಿಗಳು ಭಿನ್ನ ಜನಾಂಗಗಳಾಗಲು ಸಾಧ್ಯವಿಲ್ಲ. ಏಕೆಂದರೆ, ಉಪ-ಜಾತಿಗಳು ಜನಾಂಗದ ಪರಿಕಲ್ಪನೆಯಲ್ಲಿ ಉಪ-ವಿಭಾಗವಾಗುತ್ತವೆ.  

ಉಪಜಾತಿಗಳ ನಡುವೆ ಅಂತರ್ವಿವಾಹ ಮತ್ತು ಸಹಭೋಜನಕ್ಕೆ ಇರುವ ನಿರ್ಬಂಧವು ಜನಾಂಗದ ಅಥವಾ ರಕ್ತದ ಶುದ್ಧತೆಯನ್ನು ಕಾಪಾಡುವ ಉದ್ದೇಶಕ್ಕಾಗಿ ಇರಲು ಸಾಧ್ಯವಿಲ್ಲ. ಉಪಜಾತಿಗಳ ನಡುವೆ ಇರುವ ಭೇದಕ್ಕೆ ವಂಶತಳಿ ನಿಯಂತ್ರಣ ವಿವೇಚನೆ ಮೂಲವಲ್ಲ ಎಂದಾದರೆ, ಅದೇ ವಿವೇಚನೆ ಜಾತಿ ಭೇದಕ್ಕೆ ಮೂಲವಾಗಿದೆ ಎಂಬ ವಾದದಲ್ಲಿ ಹುರುಳಿಲ್ಲ. ಜಾತಿಯು ಮೂಲದಲ್ಲಿ ವಂಶತಳಿ ನಿಯಂತ್ರಣದ ಕಾರಣಕ್ಕಾಗಿ ಆಗಿದ್ದರೆ, ಅಂತರ್ಜಾತೀಯ ವಿವಾಹಗಳಿಗೆ ಇರುವ ನಿರ್ಬಂಧವನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ, ಜಾತಿಗಳು ಮತ್ತು ಉಪಜಾತಿಗಳ ಜನರ ನಡುವಿನ ಸಹಪಂಕ್ತಿ ಭೋಜನಕ್ಕಿರುವ ನಿರ್ಬಂಧದ ಉದ್ದೇಶವೇನು? ಸಹಭೋಜನ ಯಾರ ರಕ್ತವನ್ನು ಕೂಡ ಅಶುದ್ಧ ಮಾಡಲಾರದು. ಹಾಗಾಗಿ, ಜನಾಂಗದ ಸುಧಾರಣೆ ಅಥವಾ ಅವನತಿಗೆ ಕಾರಣವಾಗದು. ಜಾತಿಗೆ ಯಾವುದೇ ವೈಜ್ಞಾನಿಕ ತಳಹದಿ ಇಲ್ಲ ಮತ್ತು ಅದು ವಂಶತಳಿ ನಿಯಂತ್ರಣದ ಆಧಾರದಲ್ಲಿ ವೈಜ್ಞಾನಿಕವಾದದ್ದು ಎಂದು ಸಮರ್ಥಿಸಿಕೊಳ್ಳುತ್ತಿರುವವರು ಸಂಪೂರ್ಣವಾಗಿ ಅವೈಜ್ಞಾನಿಕವಾದುದನ್ನು ಬೆಂಬಲಿಸಲು ಹೆಣಗಾಡುತ್ತಿದ್ದಾರೆ ಎಂದು ಇದು ತೋರಿಸುತ್ತದೆ.

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 8 | ಭಾರತದ ಸಮಾಜವಾದಿಗಳ ಆಲೋಚನೆ ಎಡವಿದ್ದೆಲ್ಲಿ?

ಆನುವಂಶಿಕತೆಯ ನಿಯಮಗಳ ಬಗ್ಗೆ ನಮಗೆ ಖಚಿತವಾದ ಜ್ಞಾನವಿಲ್ಲದ ಹೊರತು ಇಂದಿಗೂ ವಂಶತಳಿ ನಿಯಂತ್ರಣ ಪ್ರಾಯೋಗಿಕವಾಗಿ ಸಾಧ್ಯವಿಲ್ಲದ್ದು. 'ಮೆಂಡಲ್ಸ್ ಪ್ರಿನ್ಸಿಪಲ್ಸ್ ಆಫ್ ಹೆರಿಡಿಟಿ' ಎಂಬ ತಮ್ಮ ಪ್ರಬಂಧದಲ್ಲಿ ಪ್ರೊಫೆಸರ್ ಬ್ಯಾಟ್ಸನ್ ಹೇಳುವ ಪ್ರಕಾರ, "ಉನ್ನತ ಬುದ್ಧಿಮತ್ತೆಯ ವಂಶಾವಳಿಯ ಗುಣಲಕ್ಷಣಗಳನ್ನು ಪರಿಶೀಲಿಸಿದರೆ, ಅಲ್ಲಿ ವಂಶವಾಹಿನಿಯ ಪ್ರಸರಣದ  ಏಕಮುಖ ವ್ಯವಸ್ಥೆ ಇರುವುದೇನೂ ಕಂಡುಬರುವುದಿಲ್ಲ. ಯಾವುದೇ ಒಂದು ಆನುವಂಶಿಕ ಅಂಶಕ್ಕಿಂತ ಹೆಚ್ಚಾಗಿ ಹಲವಾರು ಅಂಶಗಳ ಕಾಕತಾಳೀಯತೆಯಿಂದ ಬುದ್ಧಿ ಮತ್ತು ಖಚಿತವಾದ ದೈಹಿಕ ಸಾಮರ್ಥ್ಯ ಬೆಳೆಯುವ ಸಾಧ್ಯತೆ ಇದೆ."

ಜಾತಿ ಪದ್ಧತಿಯು ವಂಶತಳಿ ನಿಯಂತ್ರಣಾ ಪರಿಕಲ್ಪನೆಯಿಂದ ರೂಪ ಪಡೆದಿದೆ ಎಂದು ಸಾಧಿಸುವುದು, ಇಂದಿನ ಹಿಂದೂಗಳ ಪೂರ್ವಜರಿಗೆ ವರ್ತಮಾನದ ವಿಜ್ಞಾನಿಗಳಿಗೇ ತಿಳಿಯದ ಜ್ಞಾನವನ್ನು ಆರೋಪಿಸಿದಂತೆ. ಒಂದು ಮರದ ಫಲವತ್ತತೆಯನ್ನು ಅದು ನೀಡುವ ಫಲಗಳ ಮೂಲಕ ಅಳೆಯಬೇಕು; ಜಾತಿ ಪದ್ಧತಿಯು ವಂಶತಳಿ ನಿಯಂತ್ರಣಾ ತತ್ವಗಳ ಆಧಾರದಲ್ಲಿ ನಿರೂಪಿತವಾಗಿದ್ದೇ ಆದರೆ, ಪರಿಣಾಮವಾಗಿ ಜನಿಸಿದ ಮನುಷ್ಯ ಜನಾಂಗವಾದರೂ ಎಂತಹದ್ದು?  ದೈಹಿಕ ಲಕ್ಷಣಗಳನ್ನು ತೆಗೆದುಕೊಂಡರೆ ಹಿಂದೂಗಳು ಸಿ3 ಗುಂಪಿಗೆ ಸೇರಿದವರು. ಅವರು ಕುಳ್ಳರೂ ಅಬಲರೂ ಆಗಿರುವ ಪಿಗ್ನಿ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಹತ್ತರಲ್ಲಿ ಒಂಬತ್ತರಷ್ಟು ಜನ ಸೈನಿಕ ಸೇವೆಗೆ ಅನರ್ಹರು ಎಂದು ಪರಿಗಣಿತವಾಗಿರುವ ದೇಶವಿದು. ಜಾತಿ ಪದ್ಧತಿಗೆ ವಂಶತಳಿ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಆಧುನಿಕ ವಿಜ್ಞಾನಿಗಳಿಂದ ಸಮರ್ಥನೆ ದೊರಕಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಜಾತಿ ಪದ್ಧತಿಯು ಉನ್ನತ ಸಾಮಾಜಿಕ ಸ್ಥಾನವನ್ನು ಹೊಂದಿದ ವಿಕೃತ ಹಿಂದೂಗಳ ಅಹಂಕಾರ, ಸ್ವಾರ್ಥಗಳಿಂದ ತುಂಬಿ ತುಳುಕುವ, ಅಧಿಕಾರ ಬಲದಿಂದ ಕೆಳಸ್ತರದ ಜನರ ಮೇಲೆ ಒತ್ತಾಯಪೂರ್ವಕವಾಗಿ ಹೇರಿರುವ ಸಾಮಾಜಿಕ ವ್ಯವಸ್ಥೆಯಾಗಿದೆ.

ಅಂಬೇಡ್ಕರ್ ಅವರ 'Annihilation of Caste' ಪುಸ್ತಕದ ಅನುವಾದ ಸರಣಿ ಇದು. ಇಲ್ಲಿರುವುದು ಐದನೇ ಅಧ್ಯಾಯ.
ನಿಮಗೆ ಏನು ಅನ್ನಿಸ್ತು?
2 ವೋಟ್