ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 12 | 'ಹಿಂದೂ'ಗಳ ಒಗ್ಗಟ್ಟಿಗೆ ಅಡ್ಡಿಯಾದ ಅತೀ ದೊಡ್ಡ ತೊಡರುಗಾಲು 'ಜಾತಿ ಪದ್ಧತಿ'

Ambedkar

ಹಿಂದೂಗಳಲ್ಲಿ 'ಸ್ವಕೀಯ ಪ್ರಜ್ಞೆ' ಎಳ್ಳಷ್ಟೂ ಇಲ್ಲ. ಬದಲಿಗೆ, ಪ್ರತಿಯೊಬ್ಬರಲ್ಲೂ ಇರುವುದು 'ಜಾತಿಪ್ರಜ್ಞೆ' ಮಾತ್ರ. ಹಾಗಾಗಿಯೇ, ಹಿಂದೂಗಳು ಒಂದು ಸಮಾಜ ಅಥವಾ ರಾಷ್ಟ್ರವಾಗಿದ್ದಾರೆ ಎನ್ನುವಂತಿಲ್ಲ. ಆದರೆ, "ಭಾರತೀಯರು ಒಂದು ರಾಷ್ಟ್ರವಲ್ಲ, ಅವರು ನಿರ್ದಿಷ್ಟ ಆಕಾರವಿಲ್ಲದ ಜನರ ಸಮೂಹ," ಎಂದು ಒಪ್ಪಲು ಬಹುತೇಕರಿಗೆ ದೇಶಾಭಿಮಾನ ಅಡ್ಡಿಯಾಗುತ್ತದೆ!

ಜಾತಿ ವ್ಯವಸ್ಥೆಯು ಸಮಾಜಕ್ಕೆ ಆರ್ಥಿಕ ದಕ್ಷತೆಯನ್ನು ನೀಡಿಲ್ಲ. ಜಾತಿಯು ಜನಾಂಗವನ್ನು ಉತ್ತಮಗೊಳಿಸಿಲ್ಲ; ಹಾಗೆ ಮಾಡಲು ಅದಕ್ಕೆ ಸಾಧ್ಯವೂ ಇಲ್ಲ. ಆದರೆ, ಜಾತಿ ಪದ್ಧತಿ ಒಂದನ್ನು ಸಾಧಿಸಿದೆ - ಅದು ಹಿಂದೂಗಳನ್ನು ಪೂರ್ತಿಯಾಗಿ ಹರಿದು ಹಂಚಿ, ಅವರ ಮನೋಸ್ಥೆರ್ಯವನ್ನು ಕುಗ್ಗಿಸಿದೆ. ಮೊತ್ತಮೊದಲನೆಯದಾಗಿ ಗಮನಿಸಬೇಕಾದ ಅಂಶವೆಂದರೆ, ಹಿಂದೂ ಸಮಾಜವೆಂಬುದೇ ಒಂದು ಮಿಥ್ಯೆ. ಹಿಂದೂ ಎಂಬ ಹೆಸರೇ ವಿದೇಶಿ ಮೂಲದಿಂದ ಬಂದದ್ದು. ಇದು ತಮಗಿಂತ ಭಿನ್ನರಾದ ಇಲ್ಲಿಯ ನಿವಾಸಿಗಳನ್ನು ಗುರುತಿಸಲು ಮಹಮ್ಮದೀಯರು ಕೊಟ್ಟ ಹೆಸರು.

ಮಹಮ್ಮದೀಯರ ದಾಳಿಗಳಿಗೆ ಮುಂಚಿನ ಯಾವ ಸಂಸ್ಕೃತ ಗ್ರಂಥದಲ್ಲಿಯೂ 'ಹಿಂದೂ' ಪದದ ಉಲ್ಲೇಖವಿಲ್ಲ. ಹಿಂದೂಗಳಲ್ಲಿ ತಾವು ಒಂದು ಸಮುದಾಯಕ್ಕೆ ಸೇರಿದವರೆಂಬ ಪರಿಕಲ್ಪನೆ ಇಲ್ಲದಿದ್ದರಿಂದ, ಎಲ್ಲ ಜನರಿಗೂ ಸಾಮಾನ್ಯವಾದೊಂದು ಹೆಸರಿನ ಅವಶ್ಯಕತೆಯೂ ಅವರಿಗೆ ಕಂಡುಬರಲಿಲ್ಲ. ವಾಸ್ತವದಲ್ಲಿ ಹಿಂದೂ ಸಮಾಜವೆಂಬುದು ಇಲ್ಲ. ಅದು, ಅನೇಕ ಜಾತಿಗಳ ಸಮೂಹ. ಪ್ರತಿಯೊಂದು ಜಾತಿಗೂ ತನ್ನ ಅಸ್ತಿತ್ವದ ಬಗ್ಗೆ ಎಚ್ಚರವಿದೆ. ಜಾತಿಯನ್ನು ಉಳಿಸಿಕೊಳ್ಳಬೇಕು ಎನ್ನುವುದೇ ಅದರ ಅಸ್ತಿತ್ವದ ಸಾರ. ಜಾತಿಗಳು ಒಂದು ಒಕ್ಕೂಟವಾಗಿ ಕೂಡ ಕೂಡಿಕೊಂಡಿಲ್ಲ.

ಹಿಂದೂ-ಮುಸಲ್ಮಾನ ಗಲಭೆ ಸಂದರ್ಭವನ್ನು ಹೊರತುಪಡಿಸಿದರೆ, ಒಂದು ಜಾತಿಯ ಜನ ತಮಗೆ ಮಿಕ್ಕವರ ಜೊತೆ ನಂಟಿದೆ ಎಂದು ಭಾವಿಸಿದ್ದೇ ಇಲ್ಲ. ಉಳಿದೆಲ್ಲ ಸಂದರ್ಭಗಳಲ್ಲೂ ಪ್ರತಿಯೊಂದು ಜಾತಿಯೂ ಇತರ ಜಾತಿಗಳಿಗಿಂತ ತನ್ನನ್ನು ತಾನು ಪ್ರತ್ಯೇಕಿಸಲು ಮತ್ತು ತಾನು ವಿಶಿಷ್ಟವೆಂದು ತೋರಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಿರುತ್ತದೆ. ಸಹಭೋಜನವಾಗಲೀ, ಮದುವೆಯಾಗಲೀ ಜಾತಿಯೊಳಗೆ ನಡೆಯುವುದು ಮಾತ್ರವಲ್ಲದೆ, ಪ್ರತಿಯೊಂದು ಜಾತಿಯೂ ತನ್ನದೇ ಆದ ವಿಶಿಷ್ಟ ಉಡುಗೆಯನ್ನು ತೊಡುವಂತೆ ನಿರ್ದೇಶಿಸುತ್ತದೆ. ಪ್ರವಾಸಿಗರಿಗೆ ಮೋಜೆನಿಸುವ, ಭಾರತದ ಹೆಣ್ಣು-ಗಂಡುಗಳ ನೂರಾರು ಬಗೆಯ ವೇಷಭೂಷಣಗಳನ್ನು ಇನ್ನು ಹೇಗೆ ತಾನೇ ವಿವರಿಸಲು ಸಾಧ್ಯ?

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 11 | ಯಾರಾದರೂ 'ಜಾತಿ ಪದ್ಧತಿ ವೈಜ್ಞಾನಿಕ' ಎಂದರೆ, ಮೊದಲು ನಕ್ಕುಬಿಡಿ

ಆದರ್ಶ ಹಿಂದೂ ಆದವನು ಹೊರಗಿನ ಯಾರ ಸಂಪರ್ಕವೂ ಇಲ್ಲದೆ, ತನ್ನ ಬಿಲದೊಳಗಿರುವ ಇಲಿಯಂತಿರಬೇಕು. ಸಮಾಜಶಾಸ್ತ್ರಜ್ಞರು ಹೇಳುವ 'ಸ್ವಕೀಯ ಪ್ರಜ್ಞೆ' ಹಿಂದೂಗಳಲ್ಲಿ ಎಳ್ಳಷ್ಟೂ ಇಲ್ಲ. 'ಹಿಂದೂ ಸ್ವಕೀಯ ಪ್ರಜ್ಞೆ' ಎನ್ನುವುದೇ ಇಲ್ಲ. ಪ್ರತಿಯೊಬ್ಬ ಹಿಂದೂವಿನಲ್ಲೂ ಇರುವುದು 'ಜಾತಿಪ್ರಜ್ಞೆ' ಮಾತ್ರ. ಹಾಗಾಗಿಯೇ, ಹಿಂದೂಗಳು ಒಂದು ಸಮಾಜ ಅಥವಾ ರಾಷ್ಟ್ರವಾಗಿದ್ದಾರೆ ಎನ್ನುವ ಹಾಗಿಲ್ಲ. ಭಾರತೀಯರು ಒಂದು ರಾಷ್ಟ್ರವಲ್ಲ, ಅವರು ನಿರ್ದಿಷ್ಟ ಆಕಾರವಿಲ್ಲದ ಕೇವಲ ಜನರ ಸಮೂಹ ಎನ್ನಲು ಎಷ್ಟೋ ಜನರಿಗೆ ಅವರ ದೇಶಾಭಿಮಾನ ಅಡ್ಡಿಯಾಗುತ್ತದೆ. ಹೊರಗಿನಿಂದ ತೋರುವ ಈ ವೈವಿಧ್ಯದ ಹಿಂದೆ ಮೂಲಭೂತವಾದೊಂದು ಐಕ್ಯತೆ ಇದ್ದು, ಹಿಂದೂಗಳ ಜೀವನವನ್ನು ಗುರುತಿಸುವ ಸಂಪ್ರದಾಯಗಳು, ನಂಬಿಕೆಗಳು, ವಿಚಾರಗಳಲ್ಲಿ ಭಾರತದ ಭೂಖಂಡದಾದ್ಯಂತ ಒಂದು ಸಾಮ್ಯತೆ ಕಂಡುಬರುತ್ತದೆ ಎಂದು ಇವರು ವಾದಿಸುತ್ತಾರೆ.

ಆಚಾರ ಮತ್ತು ಪದ್ಧತಿಗಳು, ನಂಬಿಕೆಗಳು ಮತ್ತು ಆಲೋಚನೆಗಳಲ್ಲಿ ಸಾಮ್ಯತೆ ಇರುವುದೇನೋ ನಿಜವೇ. ಆದರೆ ಹಿಂದೂಗಳು ಒಂದು ಸಮಾಜವಾಗಿದ್ದಾರೆ ಎಂಬ ತೀರ್ಮಾನವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಾಗೆ ಮಾಡುವುದೆಂದರೆ, ಸಮಾಜವೊಂದು ರೂಪುಗೊಳ್ಳಲು ಬೇಕಾದ ಅಗತ್ಯತೆಗಳನ್ನು ತಪ್ಪಾಗಿ ಅರ್ಥೈಸಿಕೊಂಡಂತೆ. ಎರಡನೆಯದಾಗಿ, ಆ ಸಂಪ್ರದಾಯ, ನಂಬಿಕೆ, ವಿಚಾರ ಮೊದಲಾದವುಗಳಲ್ಲಿ ಇರುವ ಸಾಮ್ಯತೆಯೊಂದೇ ಸಮಾಜವಾಗಲು ಸಾಲುವುದಿಲ್ಲ. ವಸ್ತುಗಳನ್ನು ಇಟ್ಟಿಗೆಗಳಂತೆ ಭೌತಿಕವಾಗಿ ಒಬ್ಬರಿಂದ ಒಬ್ಬರಿಗೆ ಸಾಗಿಸುವ ರೀತಿಯಲ್ಲಿ ಒಂದು ಗುಂಪಿನ ಅಭ್ಯಾಸ, ಪದ್ಧತಿ, ನಂಬಿಕೆ ಹಾಗೂ ಆಲೋಚನೆಗಳನ್ನು ಮತ್ತೊಂದು ಗುಂಪು ಎತ್ತಿಕೊಳ್ಳಬಹುದು ಮತ್ತು ಹೀಗೆ ಅವೆರಡರ ನಡುವೆ ಸಾಮ್ಯತೆ ಕಾಣಿಸಿಕೊಳ್ಳಬಹುದು. ಸಂಸ್ಕೃತಿ ಪ್ರಸರಣಗೊಳ್ಳುತ್ತ ಎಲ್ಲೆಡೆ ಹರಡುವುದು.

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 10 | ಜಾತಿ ಎಂಬುದು ಮನುಷ್ಯನ ಚೈತನ್ಯವನ್ನು ಕಟ್ಟಿಹಾಕುವ ಕೆಡುಕು

ಹೀಗಾಗಿಯೇ, ವಿವಿಧ ಬುಡಕಟ್ಟು ಜನಾಂಗಗಳು ದೈಹಿಕವಾಗಿ ಸಮೀಪದಲ್ಲಿ ಜೀವಿಸದಿದ್ದರೂ, ಅವುಗಳ ರೀತಿ-ನೀತಿ, ಆಚಾರ-ವಿಚಾರಗಳಲ್ಲಿ ಸಾಮ್ಯತೆ ಕಂಡುಬರುತ್ತದೆ. ಈ ಸಾಮ್ಯತೆಯ ಆಧಾರದಿಂದ ಆ ಪ್ರಾಚೀನ ಬುಡಕಟ್ಟುಗಳಲ್ಲ ಒಂದೇ ಸಮಾಜವಾಗಿದ್ದವೆಂದು ಯಾರೂ ಹೇಳಲಾಗದು. ಒಂದು ಸಮಾಜದ ರಚನೆಗೆ ಕೆಲವು ವಿಷಯಗಳಲ್ಲಿ ಇರುವ ಸಾಮ್ಯತೆಯಷ್ಟೇ ಸಾಕಾಗುವುದಿಲ್ಲ. ಮನುಷ್ಯರು ಕೆಲವೊಂದು ಸಮಾನ ಅಂಶಗಳನ್ನು ಹೊಂದಿರುವುದರಿಂದ ಒಂದು ಸಮಾಜವಾಗಿ ರೂಪುಗೊಳ್ಳುತ್ತಾರೆ. ಕೆಲವೊಂದು ಆಚಾರ-ವಿಚಾರಗಳಲ್ಲಿ ಸಾಮ್ಯತೆ ಇರುವುದಕ್ಕೂ, ಸಮಾನ ಆಚಾರ-ವಿಚಾರಗಳನ್ನು ಹೊಂದಿರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮನುಷ್ಯರು ಪರಸ್ಪರ ನಿಕಟ ಸಂಪರ್ಕದಲ್ಲಿದ್ದಾಗ ಮಾತ್ರ ಆಚಾರ-ವಿಚಾರಗಳಲ್ಲಿ ಸಮಾನಾಂಶವನ್ನು ಹೊಂದಲು ಸಾಧ್ಯ. ಇದು, ಕೇವಲ ನಿರಂತರ ಸಂವಹನದಲ್ಲಿ ಮತ್ತು ಸಂವಹನದ ಮೂಲಕವೇ ಸಮಾಜವೊಂದು ಅಸ್ತಿತ್ವದಲ್ಲಿರುತ್ತದೆ ಎಂದು ಹೇಳುವ ಇನ್ನೊಂದು ರೀತಿ.

ಇನ್ನಷ್ಟು ಬಿಡಿಸಿ ಹೇಳಬೇಕೆಂದರೆ, ಒಬ್ಬರು ಇನ್ನೊಬ್ಬರ ಕೃತ್ಯಗಳನ್ನು ಒಪ್ಪುವ ರೀತಿಯಲ್ಲಿ ವರ್ತಿಸಿದರೆ ಸಾಲುವುದಿಲ್ಲ; ಸಮಾನಾಂತರ ಚಟುವಟಿಕೆಗಳಲ್ಲಿನ ಸಾಮ್ಯತೆಯು ಮನುಷ್ಯರನ್ನು ಒಟ್ಟಾಗಿ ಬೆಸೆಯುವುದಿಲ್ಲ. ಹಿಂದೂಗಳಲ್ಲಿ ವಿವಿಧ ಜಾತಿಗಳು ಆಚರಿಸುವ ಹಬ್ಬಗಳು ಒಂದೇ ಆಗಿರುತ್ತವೆ ಎಂಬ ಅಂಶದಿಂದ ಇದು ಸಾಬೀತಾಗುತ್ತದೆ. ಆದರೂ, ಒಂದೇ ಸಮಯಕ್ಕೆ ಆಚರಿಸಲಾಗುವ ಅವೇ ಹಬ್ಬದ ರೀತಿ-ರಿವಾಜುಗಳು ವಿಭಿನ್ನ ಜಾತಿಗಳನ್ನು ಒಂದಾಗಿ ಬೆಸೆದಿಲ್ಲ. ಆ ಉದ್ದೇಶಕ್ಕಾಗಿ ಮನುಷ್ಯ ಇತರರ ಜೊತೆ ಸಾಮಾನ್ಯವಾದ ಚಟುವಟಿಕೆಯಲ್ಲಿ ಪಾಲುದಾರನಾಗಿ ಭಾಗವಹಿಸುವುದು ಅತ್ಯವಶ್ಯ ಮತ್ತು ಇದರಿಂದಾಗಿ ಇತರರು ಯಾವ ರೀತಿಯ ಭಾವನೆಗಳಿಂದ ಉತ್ತೇಜಿತರಾಗುತ್ತಾರೋ ಅದೇ ಭಾವನೆ ಇವನಲ್ಲಿಯೂ ಮೂಡಲು ಸಾಧ್ಯವಾಗುತ್ತದೆ.

ವ್ಯಕ್ತಿಯೊಬ್ಬ ಸಾಂಘಿಕ ಕ್ರಿಯೆಯಲ್ಲಿ ಪಾಲುದಾರನಾಗಿ, ಆ ಕ್ರಿಯೆಯ ಯಶಸ್ಸು ತನ್ನ ಯಶಸ್ಸು ಮತ್ತು ಅದರ ಸೋಲು ತನ್ನ ಸೋಲು ಎಂಬ ಭಾವನೆ ಪ್ರತಿಯೊಬ್ಬನಲ್ಲಿ ಬಂದರೆ, ಮನುಷ್ಯರ ನಡುವೆ ಬೆಸುಗೆ ಸಾಧ್ಯವಾಗಿ ಆ ಜನರೆಲ್ಲ ಒಂದು ಸಮಾಜವಾಗಿ ಸಂಘಟಿತರಾಗುತ್ತಾರೆ. ಜಾತಿ ಪದ್ಧತಿಯು ಸಾಂಘಿಕ ಚಟುವಟಿಕೆಗಳಿಗೆ ತಡೆಯೊಡ್ಡುತ್ತದೆ. ಹೀಗಾಗಿ, ಹಿಂದೂಗಳೆಲ್ಲ ಒಂದೇ ಜೀವನಕ್ರಮ ಮತ್ತು ತನ್ನತನದ ಪ್ರಜ್ಞೆ ಹೊಂದಿದ ಒಗ್ಗೂಡಿದ ಸಮಾಜವಾಗುವುದನ್ನು ಅದು ತಪ್ಪಿಸಿದೆ.

ಅಂಬೇಡ್ಕರ್ ಅವರ 'Annihilation of Caste' ಪುಸ್ತಕದ ಅನುವಾದ ಸರಣಿ ಇದು. ಇಲ್ಲಿರುವುದು ಆರನೇ ಅಧ್ಯಾಯ.
ನಿಮಗೆ ಏನು ಅನ್ನಿಸ್ತು?
6 ವೋಟ್