ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 13 | ಹಿಂದೂಗಳಲ್ಲಿನ ಎಲ್ಲ ಜಾತಿಗಳೂ ಸ್ವಾರ್ಥ ಸಾಧನೆಗಾಗಿ ಕಾದು ಕುಳಿತ ಬಣಗಳಷ್ಟೆ

ಬ್ರಾಹ್ಮಣೇತರರರಿಂದ ತಮ್ಮ ಹಿತಾಸಕ್ತಿಗೆ ಹಾನಿಯಾಗದಂತೆ ನೋಡಿಕೊಳ್ಳುವುದೇ ಬ್ರಾಹ್ಮಣರಿಗೆ ಮುಖ್ಯ. ಅದರಂತೆ, ಬ್ರಾಹ್ಮಣರಿಂದ ತಮ್ಮ ಹಿತ ಕಾಯ್ದುಕೊಳ್ಳುವುದೇ ಬ್ರಾಹ್ಮಣೇತರರಿಗೆ ಮುಖ್ಯವಾಗುತ್ತದೆ. ಆದ್ದರಿಂದ ಹಿಂದೂಗಳು ಕೇವಲ ಜಾತಿಗಳ ವಿಂಗಡಣೆಯಲ್ಲ, ಬದಲಾಗಿ ಅವರು ಪ್ರತಿಯೊಂದರಲ್ಲೂ ತಮ್ಮ ಸ್ವಾರ್ಥ ಸಾಧನೆಗಾಗಿ ಬದುಕುತ್ತಿರುವ ವಿವಿಧ ಬಣಗಳು

ಹಿಂದೂಗಳು ಸಾಮಾನ್ಯವಾಗಿ ಒಂದು ಗುಂಪು ಅಥವಾ ವರ್ಗದ ಪ್ರತ್ಯೇಕತಾ ಮನೋಭಾವದ ಬಗ್ಗೆ ಆರೋಪ ಮಾಡುತ್ತಿರುತ್ತಾರೆ ಮತ್ತು ಸಮಾಜ ವಿರೋಧಿ ಮನೋಭಾವಕ್ಕಾಗಿ ಅವರನ್ನು ದೂರುತ್ತಾರೆ. ಆದರೆ, ಈ ಸಮಾಜ ವಿರೋಧಿ ಮನೋಭಾವವು ತಮ್ಮದೇ ಜಾತಿ ವ್ಯವಸ್ಥೆಯ ಕೆಟ್ಟ ಲಕ್ಷಣ ಎಂಬುದನ್ನು ಅವರು ಅನುಕೂಲಕರವಾಗಿ ಮರೆತುಬಿಡುತ್ತಾರೆ.

ಹಿಂದಿನ ಯುದ್ಧದ ಸಂದರ್ಭದಲ್ಲಿ ಜರ್ಮನರು ಇಂಗ್ಲಿಷರ ವಿರುದ್ಧ ಹೇಗೆ ದ್ವೇಷ ಉಕ್ಕಿಸುವ ಹಾಡನ್ನು ಹಾಡುತ್ತಿದ್ದರೋ ಹಾಗೆಯೇ, ಜಾತಿ ವ್ಯವಸ್ಥೆಯಲ್ಲಿಯ ವಿಭಿನ್ನ ಜಾತಿಗಳು ಪರಸ್ಪರ ದ್ವೇಷ ಕಾರುವ ಗೀತೆಗಳನ್ನು ಹಾಡುವುದರಲ್ಲಿ ಸಂತೋಷಪಡುತ್ತವೆ. ಹಿಂದೂ ಸಾಹಿತ್ಯವು, ಹುಟ್ಟಿನಿಂದಲೇ ಒಂದು ಜಾತಿ ಶ್ರೇಷ್ಠ ಮತ್ತು ಮತ್ತೊಂದು ಜಾತಿ ಕನಿಷ್ಠವೆಂದು ಎತ್ತಿ ತೋರಿಸುವ ವಂಶಾವಳಿಯ ಕಥನಗಳಿಂದ ತುಂಬಿತುಳುಕುತ್ತದೆ. 'ಸಹ್ಯಾದ್ರಿ ಕಾಂಡ' ಈ ನಮೂನೆಯ ಸಾಹಿತ್ಯಕ್ಕೆ ಒಂದು ಕುಖ್ಯಾತ ಉದಾಹರಣೆ.

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 12 | 'ಹಿಂದೂ'ಗಳ ಒಗ್ಗಟ್ಟಿಗೆ ಅಡ್ಡಿಯಾದ ಅತೀ ದೊಡ್ಡ ತೊಡರುಗಾಲು 'ಜಾತಿ ಪದ್ಧತಿ'

AV Eye Hospital ad

ಈ ಬಗೆಯ ಸಮಾಜಘಾತುಕ ಮನೋಭಾವ ಜಾತಿ-ಜಾತಿಗಳ ನಡುವೆ ಮಾತ್ರವಲ್ಲದೆ, ಒಂದೇ ಜಾತಿಯ ಉಪಜಾತಿಗಳ ನಡುವಿನ ಪರಸ್ಪರ ಸಂಬಂಧಗಗಳಿಗೂ ಹುಳಿ ಹಿಂಡಿದೆ. ನನ್ನ ಪ್ರಾಂತ್ಯದಲ್ಲಿ ಗೋಲಕ ಬ್ರಾಹ್ಮಣರು, ದೇವರುಖಾ ಬ್ರಾಹ್ಮಣರು, ಕರಾಡಾ ಬ್ರಾಹ್ಮಣರು, ಪಲಶ ಬ್ರಾಹ್ಮಣರು ಮತ್ತು ಚಿತ್ಪಾವನ ಬ್ರಾಹ್ಮಣರು, ಇವರೆಲ್ಲ ತಾವು ಈ ಬ್ರಾಹ್ಮಣ ಜಾತಿಯ ಉಪವರ್ಗಗಳೆಂದು ಹೇಳಿಕೊಳ್ಳುತ್ತಾರೆ. ಆದರೆ, ಇವರಿವರ ನಡುವೆಯೇ ಕಾಣುವ ಸಮಾಜಘಾತುಕ ದ್ವೇಷ, ಬ್ರಾಹ್ಮಣೇತರ ಜಾತಿಗಳ ಬಗ್ಗೆ ಇವರು ವ್ಯಕ್ತಪಡಿಸುವ ದ್ವೇಷಕ್ಕಿಂತ ಕಮ್ಮಿಯೇನೂ ಇಲ್ಲ. ಇದರಲ್ಲಿ ಆಶ್ಚರ್ಯಪಡುವಂಥದ್ದೇನೂ ಇಲ್ಲ. ಒಂದು ಗುಂಪು 'ತನ್ನದೇ ಆದ ಹಿತಾಸಕ್ತಿಗಳನ್ನು' ಹೊಂದಿರುವಲ್ಲೆಲ್ಲ ಸಮಾಜ ವಿರೋಧಿ ಮನೋಭಾವವು ಕಂಡುಬರುತ್ತದೆ. ಅದು ತಾನು ಗಳಿಸಿಕೊಂಡಿರುವುದನ್ನು ರಕ್ಷಿಸಲು ಇತರ ಗುಂಪುಗಳೊಂದಿಗೆ ಇರುವ ಸಂವಹನವನ್ನು ಸಂಪೂರ್ಣವಾಗಿ ಮುಚ್ಚಿಹಾಕುತ್ತದೆ. ಸ್ವಹಿತಕ್ಕಾಗಿ ಪ್ರತ್ಯೇಕತೆ ಸಾಧಿಸುವ ಈ ಸಮಾಜ ವಿರೋಧಿ ಮನೋಭಾವ ಹೇಗೆ ರಾಷ್ಟ್ರಗಳ ವಿಚಿತ್ರ ಲಕ್ಷಣವೋ ಹಾಗೆಯೇ, ಪರಸ್ಪರ ಪ್ರತ್ಯೇಕವಾಗಿರುವ ಜಾತಿಗಳ ಎದ್ದುಕಾಣುವ ಲಕ್ಷಣವೂ ಹೌದು.

ಬ್ರಾಹ್ಮಣೇತರರರಿಂದ ತಮ್ಮ ಸ್ವಂತ ಹಿತಾಸಕ್ತಿಗೆ ಹಾನಿಯಾಗದಂತೆ ನೋಡಿಕೊಳ್ಳುವುದೇ ಬ್ರಾಹ್ಮಣರಿಗೆ ಮುಖ್ಯವಾಗುತ್ತದೆ. ಅದರಂತೆ, ಬ್ರಾಹ್ಮಣರಿಂದ ನಮ್ಮ ಹಿತ ಕಾಯ್ದುಕೊಳ್ಳುವುದೇ  ಬ್ರಾಹ್ಮಣೇತರರಿಗೆ ಮುಖ್ಯವಾಗುತ್ತದೆ. ಆದ್ದರಿಂದ ಹಿಂದೂಗಳು ಕೇವಲ ಜಾತಿಗಳ ವಿಂಗಡಣೆಯಲ್ಲ, ಬದಲಾಗಿ ಅವರು ಪ್ರತಿಯೊಂದರಲ್ಲೂ ತಮಗಾಗಿ ಮತ್ತು ತಮ್ಮ ಸ್ವಾರ್ಥ ಸಾಧನೆಗಾಗಿ ಬದುಕುತ್ತಿರುವ ವಿವಿಧ ಬಣಗಳಾಗಿವೆ.

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 11 | ಯಾರಾದರೂ 'ಜಾತಿ ಪದ್ಧತಿ ವೈಜ್ಞಾನಿಕ' ಎಂದರೆ, ಮೊದಲು ನಕ್ಕುಬಿಡಿ

ಜಾತಿಗೆ ಮತ್ತೊಂದು ಅಸಹ್ಯಕರವಾದ ಮುಖವೂ ಇದೆ. ಇಂದಿನ ಇಂಗ್ಲೀಷರ ಪೂರ್ವಿಕರು ಗತಕಾಲದಲ್ಲಿ 'Wars of the Roses' ಮತ್ತು 'Cromwellian War' ಎಂಬ ಆಂತರಿಕ ಯುದ್ಧಗಳಲ್ಲಿ ಆ ಕಡೆ-ಈ ಕಡೆ ಪರಸ್ಪರ ಎದುರುಬದುರಾಗಿ ನಿಂತು ಕಾದಾಡಿದ್ದರು. ಹಾಗಂತ ಅಂದು ಒಂದು ಕಡೆ ಹೋರಾಡಿದವರ ವಂಶಸ್ಥರು ಮತ್ತೊಂದು ಕಡೆ ಹೋರಾಡಿದವರ ವಂಶಸ್ಥರ ವಿರುದ್ಧ ಇಂದು ಯಾವುದೇ ದ್ವೇಷವನ್ನು ಹೊಂದಿಲ್ಲ. ಅವರು ವೈಷಮ್ಯ ಮರೆತಿದ್ದಾರೆ. ಆದರೆ, ಇಂದಿನ ಬ್ರಾಹ್ಮಣರ  ಪೂರ್ವಜರು ಶಿವಾಜಿಗೆ ಮಾಡಿದ ಅವಮಾನಕ್ಕಾಗಿ ಇಂದಿನ ಬ್ರಾಹ್ಮಣೇತರರು ಬ್ರಾಹ್ಮಣರನ್ನು ಕ್ಷಮಿಸಲು ಸಿದ್ಧರಿಲ್ಲ. ಬ್ರಾಹ್ಮಣರು ತಮ್ಮ ಪೂರ್ವಜರನ್ನು ಅಪಮಾನಕ್ಕೆ ಈಡುಮಾಡಿದ್ದನ್ನು ಮುಂದಿಟ್ಟುಕೊಂಡು, ವರ್ತಮಾನದಲ್ಲಿ ಕಾಯಸ್ಥರು ಬ್ರಾಹ್ಮಣರನ್ನು ಕ್ಷಮಿಸುವುದಿಲ್ಲ. ಹಾಗಾದರೆ, ಈ  ವ್ಯತ್ಯಾಸವೇಕೆ? ನಿಸ್ಸಂಶಯವಾಗಿ ಜಾತಿ ವ್ಯವಸ್ಥೆಯಿಂದ.

ಜಾತಿಗಳ ಅಸ್ತಿತ್ವ ಮತ್ತು ಜಾತಿಪ್ರಜ್ಞೆಯು  ಜಾತಿಗಳ ನಡುವಿನ ಹಿಂದಿನ ವೈಷಮ್ಯಗಳನ್ನು ಹಸಿರಾಗಿಡಲು ಸಹಾಯ ಮಾಡಿದೆ ಮತ್ತು ಜಾತಿಗಳ ನಡುವಿನ ಒಗ್ಗಟ್ಟನ್ನು ಅಸಾಧ್ಯವಾಗಿಸಿದೆ.

ಅಂಬೇಡ್ಕರ್ ಅವರ 'Annihilation of Caste' ಪುಸ್ತಕದ ಅನುವಾದ ಸರಣಿ ಇದು.
ನಿಮಗೆ ಏನು ಅನ್ನಿಸ್ತು?
2 ವೋಟ್
eedina app