ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 14 | ಜಾತಿ ಉಳಿಸಿಕೊಳ್ಳುವ ಆತಂಕದಲ್ಲೇ ಕಳೆದುಹೋಗುತ್ತದೆ ಹಿಂದೂಗಳ ಇಡೀ ಜೀವನ!

ಮೂಲನಿವಾಸಿಗಳ ಘೋರ ಸ್ಥಿತಿಗೆ ಅವರ ಜನ್ಮಜಾತ ಮೂರ್ಖತನವೇ ಕಾರಣವೆಂದು ಹಿಂದೂಗಳು ಹೇಳಬಹುದು. ಆದಿವಾಸಿಗಳನ್ನು ನಾಗರಿಕರನ್ನಾಗಿಸಲು, ವೈದ್ಯಕೀಯ ನೆರವು ನೀಡಲು, ಅವರ ಜೀವನಮಟ್ಟ ಸುಧಾರಿಸಲು ಯಾವುದೇ ಪ್ರಯತ್ನ ಮಾಡದ ಕಾರಣದಿಂದ ಅವರು ಅನಾಗರಿಕರಾಗಿ ಉಳಿದಿದ್ದಾರೆ ಎಂದು ಇವರು ಬಹುಶಃ ಒಪ್ಪಿಕೊಳ್ಳಲಾರರು

ಹೊರಗಿಟ್ಟಿರುವ ಮತ್ತು ಭಾಗಶಃ ಒಳಗೊಂಡಿರುವ ಪ್ರದೇಶಗಳ ಕುರಿತಾದ ಇತ್ತೀಚಿನ ಚರ್ಚೆಯು ಭಾರತದಲ್ಲಿನ 'ಮೂಲನಿವಾಸಿ ಬುಡಕಟ್ಟುಗಳು' ಎಂದು ಕರೆಯಲ್ಪಡುವವರ ಸ್ಥಿತಿಗತಿಯ ಬಗ್ಗೆ ಗಮನ ಸೆಳೆಯುವಂತೆ ಮಾಡಿದೆ. ಇವರ ಸಂಖ್ಯೆ ಕಡಿಮೆಯೆಂದರೂ 13 ದಶಲಕ್ಷದಷ್ಟು. ಹೊಸ ಸಂವಿಧಾನದಲ್ಲಿ ಈ ಜನರನ್ನು ಸೇರಿಸದೆ ಬಿಟ್ಟಿರುವುದು ಸರಿಯೋ ತಪ್ಪೋ ಎಂಬ ಪ್ರಶ್ನೆಗಳ ಹೊರತಾಗಿ ನೋಡಿದರೂ, ಸಹಸ್ರಾರು ವರ್ಷಗಳ ನಾಗರಿಕತೆಯುಳ್ಳದ್ದೆಂದು ಬಡಾಯಿ ಕೊಚ್ಚಿಕೊಳ್ಳುವ ದೇಶದಲ್ಲಿಯೇ, ಈ ಆದಿವಾಸಿಗಳು ತಮ್ಮ ಪ್ರಾಚೀನ ಪದ್ಧತಿಯ ಅನಾಗರಿಕ ಅವಸ್ಥೆಯಲ್ಲಿ ಬದುಕುತ್ತ ಬಂದಿದ್ದಾರೆಂಬುದು ವಾಸ್ತವ. ಇವರು ಅನಾಗರಿಕರಾಗಿ ಉಳಿದಿರುವುದು ಮಾತ್ರವಲ್ಲದೆ, ಅವರಲ್ಲಿ ಕೆಲವರು ಹಿಡಿದ ದಾರಿಯಿಂದಾಗಿ ಅಪರಾಧಿಗಳೆಂದೂ ಪರಿಗಣಿಸಲ್ಪಟ್ಟಿದ್ದಾರೆ. ನಾಗರಿಕ ದೇಶದಲ್ಲಿರುವ ಜನರ ನಡುವೆ 13 ದಶಲಕ್ಷ ಜನರು ಅನಾಗರಿಕವಾಗಿ, ಪಾರಂಪರಿಕ ಅಪರಾಧಿಗಳಂತೆ ಬದುಕು ನಡೆಸುತ್ತಿದ್ದಾರೆ! ಆದರೆ ಹಿಂದೂಗಳಿಗೆ ಇದರಿಂದ ಒಂಚೂರೂ ನಾಚಿಕೆ ಆಗಿಲ್ಲ.

Eedina App

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 13 | ಹಿಂದೂಗಳಲ್ಲಿನ ಎಲ್ಲ ಜಾತಿಗಳೂ ಸ್ವಾರ್ಥ ಸಾಧನೆಗಾಗಿ ಕಾದು ಕುಳಿತ ಬಣಗಳಷ್ಟೆ

ಇಂತಹ ವಿದ್ಯಮಾನ ಬೇರೆಲ್ಲಿಯೂ ಕಾಣಸಿಗದು. ಈ ನಾಚಿಕೆಗೇಡಿನ ದುಸ್ಥಿತಿಗೆ ಕಾರಣವೇನು? ಈ ಮೂಲನಿವಾಸಿಗಳನ್ನು ನಾಗರಿಕ ವ್ಯವಸ್ಥೆಯೊಳಗೆ ತಂದು, ಅವರು ಕೂಡ ಗೌರವದ ಬದುಕು ನಡೆಸಲು ಸಾಧ್ಯವಾಗುವಂತಹ ಪ್ರಯತ್ನವನ್ನು ಏಕೆ ಮಾಡಲಿಲ್ಲ? ಮೂಲನಿವಾಸಿಗಳ ಈ ಘೋರ ಸ್ಥಿತಿಗೆ ಅವರ ಜನ್ಮಜಾತ ಮೂರ್ಖತನವೇ ಕಾರಣವೆಂದು ಹಿಂದೂಗಳು ಹೇಳಬಹುದು. ಆದಿವಾಸಿಗಳನ್ನು ನಾಗರಿಕರನ್ನಾಗಿಸಲು, ವೈದ್ಯಕೀಯ ನೆರವು ನೀಡಲು, ಅವರ ಜೀವನಮಟ್ಟವನ್ನು ಸುಧಾರಿಸಲು, ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡಲು ಯಾವುದೇ ಪ್ರಯತ್ನ ಮಾಡದ ಕಾರಣ ಅವರು ಅನಾಗರಿಕರಾಗಿ ಉಳಿದಿದ್ದಾರೆ ಎಂದು ಇವರು ಬಹುಶಃ ಒಪ್ಪಿಕೊಳ್ಳಲಾರರು.

AV Eye Hospital ad

ಆದರೆ, ಕ್ರಿಶ್ಚಿಯನ್ ಮಿಷನರಿಗಳು ಈ ಮೂಲನಿವಾಸಿಗಳಿಗೆ ಮಾಡುತ್ತಿರುವುದನ್ನು ಒಬ್ಬ ಹಿಂದೂ ಮಾಡಬಯಸುತ್ತಾನೆ ಎಂದಿಟ್ಟುಕೊಳ್ಳೋಣ. ಅವನು ಅದನ್ನು ಮಾಡಲು ಸಾಧ್ಯವೇ? ಅಸಾಧ್ಯವೆಂದೇ ನಾನು ಹೇಳುತ್ತೇನೆ. ಮೂಲನಿವಾಸಿಗಳನ್ನು ನಾಗರಿಕಗೊಳಿಸುವುದು ಎಂದರೆ, ಅವರನ್ನು ನಮ್ಮಲ್ಲೇ ಒಬ್ಬರಂತೆ ನೋಡುವುದು, ಅವರ ಮಧ್ಯೆ ಬದುಕುವುದು ಹಾಗೂ ಸಹ-ಭಾವನೆಯನ್ನು ಬೆಳೆಸುವುದು, ಸಂಕ್ಷಿಪ್ತವಾಗಿ ಅವರನ್ನು ಪ್ರೀತಿಸುವುದು. ಒಬ್ಬ ಹಿಂದೂ ಇದನ್ನು ಮಾಡಲು ಹೇಗೆ  ಸಾಧ್ಯ? ಅವನು ಇಡೀ ಜೀವನವನ್ನು ತನ್ನ  ಜಾತಿಯನ್ನು ಉಳಿಸಿಕೊಳ್ಳಬೇಕೆಂಬ ಆತಂಕದಲ್ಲಿಯೇ ಕಳೆಯುತ್ತಾನೆ. ಅವನಿಗೆ ಜಾತಿ ಒಂದು ಅಮೂಲ್ಯ ಆಸ್ತಿ. ಯಾವುದೇ ಬೆಲೆ ತೆತ್ತಾದರೂ ಅವನು ಅದನ್ನು ಉಳಿಸಿಕೊಳ್ಳಬೇಕು. ವೇದಕಾಲದಲ್ಲಿ ಅನಾರ್ಯರೆನಿಸಿಕೊಂಡವರ ವಂಶಸ್ಥರಾದ ಈ ಮೂಲನಿವಾಸಿಗಳೊಡನೆ ಸಂಪರ್ಕ ಬೆಳೆಸಿದರೆ ತನ್ನ ಜಾತಿ ಕೆಟ್ಟುಹೋದೀತೆಂದು ಅವನು ಅದಕ್ಕೆ ಒಪ್ಪುವುದಿಲ್ಲ.

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 12 | 'ಹಿಂದೂ'ಗಳ ಒಗ್ಗಟ್ಟಿಗೆ ಅಡ್ಡಿಯಾದ ಅತೀ ದೊಡ್ಡ ತೊಡರುಗಾಲು 'ಜಾತಿ ಪದ್ಧತಿ'

ನಿರ್ಲಕ್ಷಿಸಲ್ಪಟ್ಟವರನ್ನು ಉದ್ಧರಿಸುವ ಮಾನವೀಯ ಕರ್ತವ್ಯ ಪ್ರಜ್ಞೆಯನ್ನು ಹಿಂದೂವಿಗೆ ಕಲಿಸಲಾಗದು ಎಂದಲ್ಲ. ಆದರೆ, ಅವನಿಗೆ ಇನ್ನುಳಿದ ಯಾವುದೇ ಕರ್ತವ್ಯ ಪ್ರಜ್ಞೆ, ಜಾತಿಯನ್ನು ಉಳಿಸಿಕೊಳ್ಳುವ ತನ್ನ ಕರ್ತವ್ಯಕ್ಕಿಂತ ಹೆಚ್ಚಿನದಲ್ಲ. ನಾಗರಿಕ ಸಮಾಜದ ನಡುವೆ ಹಿಂದೂಗಳು ಯಾವುದೇ ನಾಚಿಕೆ ಅಥವಾ ಪಶ್ಚಾತ್ತಾಪವಿಲ್ಲದೆ ಈ ಅನಾಗರಿಕ ವರ್ತನೆಯನ್ನು ಹಾಗೆಯೇ ಉಳಿಸಿಕೊಳ್ಳಲು ಜಾತಿಯೇ ಕಾರಣ.

ಈ ಮೂಲನಿವಾಸಿಗಳು ಅಪಾಯಕಾರಿಯಾಗುವ ಸಂಭವವನ್ನು ಹಿಂದೂ ಮಂದಿ ಇನ್ನೂ ಊಹಿಸಿಲ್ಲ. ಈ ಅನಾಗರಿಕರು ಅನಾಗರಿಕರಾಗಿ ಉಳಿದರೆ ಅವರು ಹಿಂದೂಗಳಿಗೆ ಯಾವುದೇ ಹಾನಿ ಮಾಡದಿರಬಹುದು. ಆದರೆ, ಹಿಂದೂಯೇತರ ಜನರು ಇವರನ್ನು ಮತಾಂತರಗೊಳಿಸಿ ತಮ್ಮ ಧರ್ಮಕ್ಕೆ ಸೇರಿಸಿಕೊಂಡರೆ, ಹಿಂದೂ ವಿರೋಧಿಗಳ ಸಂಖ್ಯೆ ಇನ್ನಷ್ಟು ಹೆಚ್ಚುವುದು. ಹಾಗಾದಲ್ಲಿ ಹಿಂದೂ ತನಗೆ ತಾನೇ ಮತ್ತು ತನ್ನ ಜಾತಿ ವ್ಯವಸ್ಥೆಗೆ ಧನ್ಯವಾದ ಹೇಳಬೇಕು ಅಷ್ಟೇ.

ಅಂಬೇಡ್ಕರ್ ಅವರ 'Annihilation of Caste' ಪುಸ್ತಕದ ಅನುವಾದ ಸರಣಿ ಇದು. ಇಲ್ಲಿರುವುದು ಪುಸ್ತಕದ ಎಂಟನೇ ಅಧ್ಯಾಯ..
ನಿಮಗೆ ಏನು ಅನ್ನಿಸ್ತು?
3 ವೋಟ್
eedina app