ಮತಾಂತರವಾಗಿ ಬಂದ ಮನುಷ್ಯರಿಗೆ 'ಉದಾತ್ತ' ಹಿಂದೂ ಧರ್ಮದಲ್ಲಿ ಕೀಳು ಸ್ಥಾನ ಸಿಗುವುದೇಕೆ ಗೊತ್ತೇ?

ಅಂಬೇಡ್ಕರ್‌ ಅವರ 'ಜಾತಿ ವಿನಾಶ' ಸರಣಿ - ಭಾಗ 15 | ಹಿಂದೂ ಧರ್ಮವು ಪ್ರಚಾರಕ (ಮಿಷನರಿ) ಧರ್ಮವಾಗಿತ್ತೇ ಎಂಬುದು ಚರ್ಚಾರ್ಹ ವಿಷಯ. ಎಂದಿಗೂ ಮಿಷನರಿ ಧರ್ಮ ಆಗಿರಲಿಲ್ಲ ಎಂಬ ಅಭಿಪ್ರಾಯ ಕೆಲವರದ್ದು. ಮಿಷನರಿ ಧರ್ಮ ಆಗಿತ್ತು ಎನ್ನುತ್ತಾರೆ ಕೆಲವರು. ಅಸಲಿಗೆ, ಹಿಂದೂ ಧರ್ಮ ಒಂದು ಕಾಲದಲ್ಲಿ ಮಿಷನರಿ ಧರ್ಮವಾಗಿತ್ತು ಎಂಬುದು ನಿಜ

ಅನಾಗರಿಕರನ್ನು ನಾಗರಿಕಗೊಳಿಸುವ ಮಾನವೀಯ ಉದ್ದೇಶಕ್ಕಾಗಿ ಹಿಂದೂ ಯಾವುದೇ ಪ್ರಯತ್ನವನ್ನೂ ಮಾಡಿಲ್ಲ. ಮಾತ್ರವಲ್ಲದೆ, ಮೇಲ್ಜಾತಿಯ ಹಿಂದೂಗಳು ಉದ್ದೇಶಪೂರ್ವಕವಾಗಿ ಹಿಂದೂ ಧರ್ಮದ ಒಳಗಿರುವ ಕೆಳಜಾತಿಗಳನ್ನು ಸಾಂಸ್ಕೃತಿಕವಾಗಿ ತಮ್ಮ  ಮಟ್ಟಕ್ಕೆ ಏರದಂತೆ ತಡೆದಿದ್ದಾರೆ.

Eedina App

ನಾನು ಎರಡು ನಿದರ್ಶನಗಳನ್ನು ನೀಡುತ್ತೇನೆ. ಒಂದು ಸೋನಾರ್ ಮತ್ತು ಇನ್ನೊಂದು ಪಠಾರೆ ಪ್ರಭುಗಳು; ಎರಡೂ ಮಹಾರಾಷ್ಟ್ರದಲ್ಲಿ ಸಾಕಷ್ಟು ಪ್ರಸಿದ್ಧವಾದ ಸಮುದಾಯಗಳು. ಉಳಿದೆಲ್ಲ ಸಮುದಾಯಗಳು ತಮ್ಮ ಸ್ಥಾನಮಾನ ಹೆಚ್ಚಿಸಿಕೊಳ್ಳಲು ಬಯಸುವಂತೆ, ಈ ಎರಡು ಸಮುದಾಯಗಳು ಕೂಡ ಅದೇ ಪ್ರಯತ್ನದ ಭಾಗವಾಗಿ ಒಂದು ಕಾಲದಲ್ಲಿ ಬ್ರಾಹ್ಮಣರ ಕೆಲವು ವಿಧಾನಗಳು ಮತ್ತು ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದವು. ಸೋನಾರರು ತಮ್ಮನ್ನು ತಾವು ದೈವಜ್ಞ ಬ್ರಾಹ್ಮಣರಂತೆ ತೋರಿಸಿಕೊಳ್ಳಲು ನೆರಿಗೆ ಹಾಕಿ ಧೋತಿಯನ್ನು ಉಡತೊಡಗಿದರು ಮತ್ತು “ನಮಸ್ಕಾರ...” ಹೇಳುತ್ತ ಒಬ್ಬರನ್ನೊಬ್ಬರು ಗೌರವಿಸತೊಡಗಿದರು.

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 12 | 'ಹಿಂದೂ'ಗಳ ಒಗ್ಗಟ್ಟಿಗೆ ಅಡ್ಡಿಯಾದ ಅತೀ ದೊಡ್ಡ ತೊಡರುಗಾಲು 'ಜಾತಿ ಪದ್ಧತಿ'

AV Eye Hospital ad

ನೆರಿಗೆಯ ಧೋತಿ ಮತ್ತು ನಮಸ್ಕಾರ ಹೇಳುವ ಕ್ರಮ ಎರಡೂ ಬ್ರಾಹ್ಮಣರಿಗೆ ವಿಶಿಷ್ಟವಾದವು. ಸೋನಾರರು ತಮ್ಮನ್ನು ಬ್ರಾಹ್ಮಣರೆಂದು ಹೇಳಿಕೊಳ್ಳುವುದು ಮತ್ತು ಬ್ರಾಹ್ಮಣರ ಪದ್ಧತಿಗಳನ್ನು ಅನುಕರಿಸುವುದು, ಬ್ರಾಹ್ಮಣರಿಗೆ ಇಷ್ಟವಾಗಲಿಲ್ಲ. ಪೇಶ್ವೆಗಳ ಅಧಿಕಾರ ಬಲವನ್ನು ಉಪಯೋಗಿಸಿಕೊಂಡು ಬ್ರಾಹ್ಮಣರ ಆಚರಣೆಗಳನ್ನು ಅನುಕರಿಸುವ ಸೋನಾರರ ಪ್ರಯತ್ನವನ್ನು ಬ್ರಾಹ್ಮಣರು ಯಶಸ್ವಿಯಾಗಿ ಹತ್ತಿಕ್ಕಿದರು. ಬಾಂಬೆಯಲ್ಲಿದ್ದ ಈಸ್ಟ್ ಇಂಡಿಯಾ ಕಂಪನಿಯ ಕೌನ್ಸಿಲ್‌ಗಳ ಅಧ್ಯಕ್ಷರಿಂದ ಮುಂಬೈನಲ್ಲಿ ವಾಸಿಸುತ್ತಿದ್ದ ಸೋನಾರರಿಗೆ ಆ ಕುರಿತು ಪ್ರತಿಬಂಧಕಾಜ್ಞೆಯನ್ನು ಹೊರಡಿಸಿದರು. ಒಂದು ಕಾಲದಲ್ಲಿ ಪಠಾರೆ ಪ್ರಭುಗಳ ಜಾತಿಯಲ್ಲಿ ವಿಧವಾ ವಿವಾಹ ಆಚರಣೆಯಲ್ಲಿತ್ತು. ಬ್ರಾಹ್ಮಣರಲ್ಲಿ ವಿಧವಾ ವಿವಾಹ ನಿಷಿದ್ಧವಾಗಿರುವುದರಿಂದ ನಂತರದ ದಿನಗಳಲ್ಲಿ ತಮ್ಮ ಜಾತಿಯಲ್ಲಿ ಈ ಆಚರಣೆ ಇರುವುದು ಸಾಮಾಜಿಕವಾಗಿ ತಮ್ಮನ್ನು ಕೀಳಾಗಿ ಚಿತ್ರಿಸುತ್ತದೆ ಎಂದು ಪಠಾರೆ ಸಮುದಾಯದ ಒಂದು ಪಂಗಡ ಭಾವಿಸತೊಡಗಿತು. ತಮ್ಮ ಸಮುದಾಯದ ಸ್ಥಾನಮಾನವನ್ನು ಹೆಚ್ಚಿಸುವ ಉದ್ದೇಶದಿಂದ ಕೆಲವು ಪಠಾರೆ ಪ್ರಭುಗಳು ತಮ್ಮ ಜಾತಿಯಲ್ಲಿ ಚಾಲ್ತಿಯಲ್ಲಿದ್ದ ವಿಧವಾ ವಿವಾಹ ಪದ್ಧತಿಯನ್ನು ನಿಲ್ಲಿಸಲು ಪ್ರಯತ್ನಿಸಿದರು. ಇದರಿಂದಾಗಿ ಪುನರ್ವಿವಾಹಕ್ಕೆ ಪರ ಮತ್ತು ವಿರೋಧದ ಎರಡು ಬಣಗಳುಂಟಾದವು. ಆಗ ಪೇಶ್ವೆಗಳು ವಿಧವಾ ವಿವಾಹದ ಪರವಾಗಿರುವ ಬಣದ ಬೆಂಬಲಕ್ಕೆ ನಿಂತರು. ಆದ್ದರಿಂದ ಪಠಾರೆ ಪ್ರಭುಗಳು ಬ್ರಾಹ್ಮಣರ ಯಾವುದೇ ಆಚರಣೆಗಳನ್ನು ಅನುಸರಿಸದಂತೆ ನಿಷೇಧಿಸಿದರು.

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 13 | ಹಿಂದೂಗಳಲ್ಲಿನ ಎಲ್ಲ ಜಾತಿಗಳೂ ಸ್ವಾರ್ಥ ಸಾಧನೆಗಾಗಿ ಕಾದು ಕುಳಿತ ಬಣಗಳಷ್ಟೆ

ಮಹಮ್ಮದೀಯರು ತಮ್ಮ ಧರ್ಮವನ್ನು ಖಡ್ಗ ಝಳಪಿಸಿ ಹರಡಿದರು ಎಂದು ಹಿಂದೂಗಳು ಟೀಕಿಸುತ್ತಾರೆ. ಇಂಕ್ವಿಜಿಶನ್ (ಯುರೋಪ್ ಮತ್ತು ಅಮೆರಿಕಾದ್ಯಂತ ಧರ್ಮದ್ರೋಹಿಗಳನ್ನು ಶಿಕ್ಷಿಸಲು  ಕ್ಯಾಥೊಲಿಕ್ ಚರ್ಚ್‌ನೊಳಗೆ ಸ್ಥಾಪಿಸಲಾದ ಪ್ರಬಲವಾದ ವ್ಯವಸ್ಥೆ ) ಉದಾಹರಿಸಿ, ಕ್ರಿಶ್ಚಿಯನ್ ಧರ್ಮವನ್ನು ಅಪಹಾಸ್ಯ ಮಾಡುತ್ತಾರೆ. ಆದರೆ, ನಿಜಕ್ಕೂ ಹೇಳುವುದಾದರೆ, ನಮ್ಮ ಗೌರವಕ್ಕೆ ಯಾರು ಉತ್ತಮ ಮತ್ತು ಹೆಚ್ಚು ಅರ್ಹರು? ಮಹಮ್ಮದೀಯರೇ ಆಗಲಿ, ಕ್ರೈಸ್ತರೇ ಆಗಲಿ, ತಮ್ಮ ಉದ್ಧಾರಕ್ಕೆ ಯಾವುದು ಅವಶ್ಯ ಎಂದು ನಂಬಿದ್ದರೋ ಅದನ್ನು ಒಪ್ಪದೆ ಇರುವವರ ಗಂಟಲಲ್ಲಿ ತುರುಕಿದರು; ಆದರೆ, ತಮ್ಮ ಜ್ಞಾನದ ಬೆಳಕನ್ನು ಇತರರಿಗೆ ಬೀರಲು ಒಪ್ಪದ, ಇತರರನ್ನು ಅಜ್ಞಾನದ ಕತ್ತಲೆಯಲ್ಲೇ ಇಡಲು ಪ್ರಯತ್ನಿಸಿದ, ಇತರರು ತಮ್ಮದಾಗಿಸಿಕೊಳ್ಳಲು ಹಾತೊರೆದು ನಿಂತಿದ್ದರೂ, ತಮ್ಮ ಬೌದ್ಧಿಕ ಮತ್ತು ಸಾಮಾಜಿಕ ವಾರಸುದಾರಿಕೆಯನ್ನು ಅವರ ಜೊತೆ ಹಂಚಿಕೊಳ್ಳಲು ನಿರಾಕರಿಸುವ ಹಿಂದೂ ಹೇಗೆ ಗೌರವಾರ್ಹ? ಮಹಮ್ಮದೀಯನು ಕ್ರೂರನಾಗಿದ್ದರೆ, ಹಿಂದೂ ನೀಚನಾಗಿದ್ದಾನೆ ಮತ್ತು ಕ್ರೌರ್ಯಕ್ಕಿಂತ ನೀಚತನ ಕೆಟ್ಟದ್ದು ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ.

* * *

ಹಿಂದೂ ಧರ್ಮವು ಪ್ರಚಾರಕ (ಮಿಷನರಿ) ಧರ್ಮವಾಗಿತ್ತೋ ಇಲ್ಲವೋ ಎಂಬುದು ಚರ್ಚಾರ್ಹ ವಿಷಯ. ಇದು ಎಂದಿಗೂ ಮಿಷನರಿ ಧರ್ಮವಾಗಿರಲಿಲ್ಲ ಎಂಬ ಅಭಿಪ್ರಾಯವನ್ನು ಕೆಲವರು ಹೊಂದಿದ್ದಾರೆ. ಇನ್ನು ಕೆಲವು ಜನ, ಮಿಷನರಿ ಧರ್ಮ ಆಗಿತ್ತು ಎಂದು ಭಾವಿಸುತ್ತಾರೆ. ಹಿಂದೂ ಧರ್ಮ ಒಂದು ಕಾಲದಲ್ಲಿ ಮಿಷನರಿ ಧರ್ಮವಾಗಿತ್ತು ಎಂಬುದನ್ನು ಒಪ್ಪಿಕೊಳ್ಳಬೇಕು. ಅದು ಮಿಷನರಿ ಧರ್ಮ ಆಗಿರದಿದ್ದರೆ ಭಾರತಾದ್ಯಂತ ಹರಡಲು ಸಾಧ್ಯವಿಲ್ಲ. ಇಂದು ಅದು ಮಿಷನರಿ ಧರ್ಮವಲ್ಲ ಎಂಬುದು ಕೂಡ ಒಪ್ಪಿಕೊಳ್ಳಬೇಕಾದ ಸತ್ಯ. ಆದ್ದರಿಂದ ಹಿಂದೂ ಧರ್ಮವು ಮಿಷನರಿ ಧರ್ಮವಾಗಿದೆಯೇ ಅಥವಾ ಇಲ್ಲವೇ ಎಂಬುದು ಪ್ರಶ್ನೆಯಲ್ಲ; ನಿಜವಾದ ಪ್ರಶ್ನೆ ಏನೆಂದರೆ, ಹಿಂದೂ ಧರ್ಮ 'ಪ್ರಚಾರಕ ಧರ್ಮ'ವಾಗಿ (ಮಿಷನರಿ ರಿಲಿಜನ್) ಆಗಿ ಯಾಕೆ ಮುಂದುವರಿಯಲಿಲ್ಲ? ಇದಕ್ಕೆ ನನ್ನ ಉತ್ತರ - ಹಿಂದೂಗಳಲ್ಲಿ ಜಾತಿ ವ್ಯವಸ್ಥೆ ಬೆಳೆದಂತೆ ಹಿಂದೂ ಧರ್ಮದ ಪ್ರಚಾರಕತ್ವ ನಿಂತುಹೋಯಿತು.

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 14 | ಜಾತಿ ಉಳಿಸಿಕೊಳ್ಳುವ ಆತಂಕದಲ್ಲೇ ಕಳೆದುಹೋಗುತ್ತದೆ ಹಿಂದೂಗಳ ಇಡೀ ಜೀವನ!

ಮತಾಂತರಕ್ಕೆ ಜಾತಿ ಅಷ್ಟಾಗಿ ಒಗ್ಗದು. ನಂಬಿಕೆ ಮತ್ತು ಸಿದ್ಧಾಂತಗಳಿಗೆ ಒಪ್ಪಿಗೊಂಡು ನಡೆದುಕೊಳ್ಳುವುದು ಮಾತ್ರವೇ ಮತಾಂತರದಲ್ಲಿ ಇರುವ ಏಕೈಕ ಸಮಸ್ಯೆ ಅಲ್ಲ. ಮತಾಂತರಗೊಂಡವರು ಮತಸಮುದಾಯದಲ್ಲಿ ಸಾಮಾಜಿಕ ಸ್ಥಾನಮಾನವನ್ನು ಕಂಡುಕೊಳ್ಳುವುದು ಮತಾಂತರಕ್ಕೆ ಸಂಬಂಧಿಸಿದಂತೆ ಉದ್ಭವಿಸುವ ಮುಖ್ಯವಾದ ಸಮಸ್ಯೆ. ಮತಾಂತರಗೊಂಡವರನ್ನು ಎಲ್ಲಿ, ಯಾವ ಜಾತಿಗೆ ಸೇರಿಸಬೇಕು ಎಂಬುದು ಸಮಸ್ಯೆ. ಪರಕೀಯರನ್ನು ತನ್ನ ಧರ್ಮಕ್ಕೆ ಪರಿವರ್ತಿಸಲು ಬಯಸುವ ಪ್ರತಿಯೊಬ್ಬ ಹಿಂದೂವನ್ನು ಕಾಡುವ ಸಮಸ್ಯೆ ಇದು. ಯಾವುದೇ ಕ್ಲಬ್‌ನಂತೆ ಜಾತಿಯ ಸದಸ್ಯತ್ವವು ಎಲ್ಲರಿಗೂ, ಎಲ್ಲ ಥರದಲ್ಲೂ ಮುಕ್ತವಾಗಿಲ್ಲ. ಜಾತಿಯ ಕಾನೂನಿನ ಪ್ರಕಾರ ಅದರ ಸದಸ್ಯತ್ವ ಸದರಿ ಜಾತಿಯಲ್ಲಿ ಹುಟ್ಟಿದವರಿಗೆ ಮಾತ್ರ ಸೀಮಿತ. ಜಾತಿಗಳು ಸ್ವಾಯತ್ತ ಸಂಸ್ಥೆಗಳು. ಹೊಸಬರನ್ನು ಅದರ ಸಾಮಾಜಿಕ ಜೀವನಕ್ಕೆ ಸೇರಿಸಿಕೊಳ್ಳಲು ಜಾತಿಯನ್ನು ಒತ್ತಾಯಿಸುವ ಅಧಿಕಾರ ಯಾರಿಗೂ ಇಲ್ಲ.

ಹಿಂದೂ ಸಮಾಜವು ಹಲವು ಜಾತಿಗಳ ಸಮೂಹ ಮತ್ತು ಪ್ರತಿಯೊಂದು ಜಾತಿಯು ಸ್ವಾಯತ್ತ ಸಂಸ್ಥೆಯಂತಿರುವುದರಿಂದ ಇಲ್ಲಿ ಮತಾಂತರಗೊಂಡವನಿಗೆ ಜಾಗವಿಲ್ಲ. ಹಾಗಾಗಿ ಹಿಂದೂಗಳು, ತಮ್ಮ ಧರ್ಮವನ್ನು ವಿಸ್ತರಿಸುವುದಕ್ಕೆ ಮತ್ತು ಇತರ ಧರ್ಮೀಯರನ್ನು ತಮ್ಮೊಳಗೆ ಸೇರಿಸಿಕೊಳ್ಳುವುದಕ್ಕೆ ಜಾತಿಯೇ ಪ್ರಮುಖ ಅಡ್ಡಿ. ಹಿಂದೂ ಧರ್ಮದಲ್ಲಿ ಜಾತಿ ಇರುವವರೆಗೆ ಅದು ಮಿಷನರಿ ಧರ್ಮವಾಗಲು ಸಾಧ್ಯವಿಲ್ಲ ಮತ್ತು 'ಶುದ್ಧಿ' ಕಾರ್ಯಕ್ರಮವು ಮೂರ್ಖತನದ್ದು, ನಿರರ್ಥಕ ಆಗಿದೆ.

ಅಂಬೇಡ್ಕರ್ ಅವರ 'Annihilation of Caste' ಪುಸ್ತಕದ ಅನುವಾದ ಸರಣಿ ಇದು. ಇಲ್ಲಿರುವುದು ಪುಸ್ತಕದ 9 ಮತ್ತು 10ನೇ ಅಧ್ಯಾಯ
ನಿಮಗೆ ಏನು ಅನ್ನಿಸ್ತು?
1 ವೋಟ್
eedina app