ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 2 | 'ಪದಗಳಿಗೆ ಹೆದರುವವರು ಮೂರ್ಖರು ಮಾತ್ರ ಎಂದೆಣಿಸಿದ್ದೆ'

Ambedkar 6

ಜಾತಿ ವಿನಾಶ ಕುರಿತು ಅಂಬೇಡ್ಕರ್ ಬರೆದ 'Annihilation of Caste' ಪುಸ್ತಕದ ಕನ್ನಡ ಅನುವಾದ ಸರಣಿ ಇದು. ಅವರು ಲಾಹೋರ್‌ನಲ್ಲಿ ಮಾತನಾಡಲೆಂದು ಬರೆದ ಭಾಷಣವೊಂದನ್ನು ವಿವಾದಕ್ಕೆ ದೂಡಲಾಗುತ್ತದೆ. ಆ ಸಂದರ್ಭದಲ್ಲಿ ಸಮ್ಮೇಳನದ ಸಂಘಟಕರಿಗೆ ಅಂಬೇಡ್ಕರ್ ಬರೆದ ಅತ್ಯಂತ ಮಹತ್ವಪೂರ್ಣ ಪತ್ರ ಇಲ್ಲಿದೆ

ಹರ್ ಭಗವಾನ್ ಅವರಿಗೆ ನಾನು ಕಳಿಸಿದ ಉತ್ತರ:
ಏಪ್ರಿಲ್ 27, 1936

ನೀವು ಏಪ್ರಿಲ್ 22ರಂದು ಕಳಿಸಿದ ಪತ್ರ ತಲುಪಿತು. ನಾನು ನನ್ನ ಭಾಷಣದ ಪೂರ್ಣ ಪಠ್ಯವನ್ನು ಈಗಿರುವಂತೆಯೇ ಪ್ರಕಟಿಸಲು ಒತ್ತಾಯಿಸಿದರೆ, ಜಾತ್ ಪಾತ್ ತೋಡಕ್ ಮಂಡಲದ ಸ್ವಾಗತ ಸಮಿತಿಯು, ಸಮ್ಮೇಳನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ಬಯಸುತ್ತದೆ ಎಂದು ತಿಳಿದು ವಿಷಾದವಾಯಿತು. ಅದಕ್ಕೆ ಉತ್ತರವಾಗಿ ನಾನು ಹೇಳಬೇಕಿರುವುದೆಂದರೆ, ಮಂಡಲವು ನನ್ನ ಭಾಷಣವನ್ನು ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಕತ್ತರಿಸಬೇಕೆಂದು ಹಠ ಹಿಡಿಯುವುದಾದರೆ, ನಾನು ಈ ಸಮ್ಮೇಳನವು ರದ್ದಾಗಲಿ ಎಂದು ಆಶಿಸುತ್ತೇನೆ. ನನಗೆ ಸುತ್ತಿ ಬಳಸಿ ಮಾತಾಡಲು ಬರುವುದಿಲ್ಲ. ನಿಮಗೆ ನನ್ನ ನಿರ್ಧಾರ ಹಿಡಿಸದಿರಬಹುದು. ಆದರೆ, ಕೇವಲ ಅಧ್ಯಕ್ಷ ಸ್ಥಾನದ ಗೌರವವನ್ನು ಉಳಿಸಿಕೊಳ್ಳುವುದಕ್ಕಾಗಿ, ಅಧ್ಯಕ್ಷ ಭಾಷಣ ಸಿದ್ಧಪಡಿಸುವಲ್ಲಿ ಪ್ರತಿಯೊಬ್ಬ ಅಧ್ಯಕ್ಷನಿಗಿರಬೇಕಾದ ಸ್ವಾತಂತ್ರ್ಯವನ್ನು ಬಿಟ್ಟುಕೊಡುವುದನ್ನು ನನಗೆ ಒಪ್ಪಲಾಗದು. ಕೇವಲ ಮಂಡಲವನ್ನು ಮೆಚ್ಚಿಸುವ ಕಾರಣಕ್ಕಾಗಿ, ಅಧ್ಯಕ್ಷನೊಬ್ಬ ತನ್ನ ವಿವೇಚನೆಗೆ ಸರಿ ಮತ್ತು ಉಚಿತವೆನ್ನಿಸುವ ರೀತಿಯಲ್ಲಿ ಸಮ್ಮೇಳನವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಬಿಟ್ಟುಕೊಡಲು ನಾನು ಸಿದ್ಧನಿಲ್ಲ. ಇದೊಂದು ತಾತ್ವಿಕ ಪ್ರಶ್ನೆ. ಈ ವಿಚಾರವಾಗಿ ಖಂಡಿತವಾಗಿಯೂ ನಾನು ಯಾವ ರೀತಿಯಲ್ಲೂ ರಾಜಿ ಮಾಡಿಕೊಳ್ಳಬಾರದು ಎಂದು ನನಗನಿಸುತ್ತದೆ.

ನಾನು ಸ್ವಾಗತ ಸಮಿತಿಯು ತೆಗೆದುಕೊಂಡ ನಿರ್ಧಾರದ ಔಚಿತ್ಯದ ಕುರಿತಾಗಿ ಯಾವುದೇ ರೀತಿಯ ವಿವಾದಕ್ಕಿಳಿಯುತ್ತಿರಲಿಲ್ಲ. ಆದರೆ, ನೀವು ನೀಡಿರುವ ಕೆಲವೊಂದು ಕಾರಣಗಳು ನನ್ನದೇ ತಪ್ಪು ಎಂಬಂತೆ ಬಿಂಬಿಸುತ್ತಿರುವುದರಿಂದ ನಾನೀಗ ಉತ್ತರಿಸಲೇಬೇಕಾಗಿದೆ. ಮೊತ್ತಮೊದಲನೆಯದಾಗಿ,  ಭಾಷಣದಲ್ಲಿರುವ ನನ್ನ ಅಭಿಪ್ರಾಯಗಳಿಗೆ ಸಮಿತಿಯವರು ಆಕ್ಷೇಪಿಸಿರುವುದು ಮಂಡಲಕ್ಕೆ ಆಶ್ಚರ್ಯವನ್ನುಂಟುಮಾಡಿದೆ ಎಂಬ ಗ್ರಹಿಕೆಯನ್ನು ನಾನು ಹೋಗಲಾಡಿಸಬೇಕು. ಸನ್ಮಾನ್ಯ ಸಂತ ರಾಮರಿಗೆ ನೆನಪಿದ್ದರೆ, ಅವರ ಪತ್ರವೊಂದಕ್ಕೆ ಉತ್ತರಿಸುತ್ತ, ಜಾತಿ ಪದ್ಧತಿಯನ್ನು ತೊಡೆದುಹಾಕುವ ನಿಜವಾದ ವಿಧಾನ, ಅಂತರ್ಜಾತಿ ಕೂಡೂಟ ಮತ್ತು ಅಂತರ್ಜಾತಿ ಮದುವೆಗಳನ್ನು ಚಾಲ್ತಿಗೆ ತರುವುದಲ್ಲ; ಬದಲಾಗಿ, ಜಾತಿ ವ್ಯವಸ್ಥೆಯು ಯಾವ ಧಾರ್ಮಿಕ ಪರಿಕಲ್ಪನೆಯಿಂದ ಸ್ಥಾಪನೆಯಾಗಿದೆಯೋ ಅದನ್ನು ತೊಡೆದುಹಾಕುವುದು ಎಂದಿದ್ದಕ್ಕೆ, ಸಂತ ರಾಮರು, ನನ್ನ ಈ ದೃಷ್ಟಿಕೋನವು ಹೊಸತಾಗಿದೆ ಎಂದೂ, ಅದನ್ನು ಇನ್ನಷ್ಟು ವಿಸ್ತರಿಸುವಂತೆಯೂ ಕೇಳಿಕೊಂಡಿದ್ದರು. ಆ ಕಾರಣದಿಂದಲೇ ಸಂತ ರಾಮರಿಗೆ ಪತ್ರದಲ್ಲಿ ಒಂದು ವಾಕ್ಯದಲ್ಲಿ ಹೇಳಿದ್ದನ್ನು ನನ್ನ ಭಾಷಣದಲ್ಲಿ ವಿಸ್ತೃತವಾಗಿ ದಾಖಲಿಸಬೇಕು ಎಂದುಕೊಂಡೆ. ಹಾಗಾಗಿ, ಈಗ ನೀವು ಆ ಅಭಿಪ್ರಾಯಗಳು ಅನಿರೀಕ್ಷಿತ ಎನ್ನುವ ಹಾಗಿಲ್ಲ. ನಿಮ್ಮ ಮಂಡಲದ ಪ್ರಮುಖ ಧುರೀಣ ಮತ್ತು ಜೀವನಾಡಿಯಂತಿರುವ ಮಾನ್ಯ ಸಂತ ರಾಮರಿಗೆ ನನ್ನ ಮಾತುಗಳು ಯಾವ ರೀತಿಯಲ್ಲೂ ಹೊಸತಲ್ಲ. ಮುಂದುವರಿದು ಹೇಳಬೇಕೆಂದರೆ, ಈ ಭಾಗವನ್ನು ನಾನು ಕೇವಲ ಅಪೇಕ್ಷಣೀಯವೆಂದೆನಿಸಿ ಬರೆಯಲಿಲ್ಲ. ಬದಲಾಗಿ, ನನ್ನ ವಾದವನ್ನು ಪರಿಪೂರ್ಣಗೊಳಿಸಲು ಅತ್ಯವಶ್ಯಕವೆಂದೆನಿಸಿ ಬರೆದದ್ದು. ನಿಮ್ಮ ಸಮಿತಿ ಆಕ್ಷೇಪ ವ್ಯಕ್ತಪಡಿಸಿದ ಭಾಷಣದ ಭಾಗವನ್ನು ನೀವು, 'ಅನಗತ್ಯ ಮತ್ತು ಅಸಂಬದ್ಧ' ಎಂಬ ತೀರ್ಮಾನಕ್ಕೆ ಬಂದಿರುವುದು ನಿಜಕ್ಕೂ ನನ್ನನ್ನು ಆಶ್ಚರ್ಯಗೊಳಿಸಿದೆ. ನೀವು ತಪ್ಪು ತಿಳಿಯುವುದಿಲ್ಲವೆಂದಾದರೆ ಒಂದು ಮಾತು... ಒಬ್ಬ ವಕೀಲನಾದ ನನಗೆ ಔಚಿತ್ಯದ ಮಾನದಂಡಗಳೇನು ಎಂಬುದು ನಿಮ್ಮ ಸಮಿತಿಯ ಸದಸ್ಯರಷ್ಟೇ ಚೆನ್ನಾಗಿ ಗೊತ್ತು. ಆಕ್ಷೇಪಿತ ಭಾಗವು ಅತ್ಯಂತ ಮುಖ್ಯ ಮತ್ತು ಪ್ರಸ್ತುತ ಎಂದು ನಾನು ಧೃಢವಾಗಿ ಹೇಳುತ್ತೇನೆ. ಜಾತಿ ಪದ್ಧತಿಯನ್ನು ತೊಡೆದುಹಾಕಲು ಅನುಸರಿಸಬೇಕಾದ ಮಾರ್ಗ ಮತ್ತು ವಿಧಾನಗಳನ್ನು ನಾನು ಚರ್ಚಿಸಿರುವುದು ಆ ಭಾಗದಲ್ಲಿಯೇ. ಜಾತಿ ವಿನಾಶಕ್ಕೆ ಯಾವುದು ಅತ್ಯುತ್ತಮ ವಿಧಾನವೆಂದು ನಾನು ಯಾವ ನಿರ್ಧಾರಕ್ಕೆ ಬಂದಿರುವೇನೋ ಅದು ನಿಮಗೆ ಆಶ್ಚರ್ಯ ಮತ್ತು ನೋವುಂಟು ಮಾಡಿರಬಹುದು. ನನ್ನ ವಿಶ್ಲೇಷಣೆ ತಪ್ಪು ಎನ್ನುವ ಹಕ್ಕು ನಿಮಗಿದೆ. ಆದರೆ, ಜಾತಿಯ ಸಮಸ್ಯೆಯನ್ನು ಕುರಿತು ಚರ್ಚಿಸುವ ಭಾಷಣದಲ್ಲಿ, ಜಾತಿ ವಿನಾಶವನ್ನು ಹೇಗೆ ಮಾಡಬೇಕೆಂದು ಚರ್ಚಿಸುವ ಮುಕ್ತತೆ ನನಗಿಲ್ಲ ಎಂದು ನೀವು ಹೇಳಲಾಗದು.

Image
Ambedkar 1

ಭಾಷಣ ಧೀರ್ಘವಾಗಿದೆ ಎಂಬುದು ನಿಮ್ಮ ಇನ್ನೊಂದು ಆಕ್ಷೇಪ. ಆ ಕುರಿತು ಮನ್ನಿಸುವಂತೆ ನಾನು ಭಾಷಣದಲ್ಲೇ ಮನವಿ ಮಾಡಿದ್ದೇನೆ. ಆದರೆ, ಇದಕ್ಕೆ ನಿಜವಾಗಿಯೂ ಕಾರಣ ಯಾರು? ನೀವು ಈ ಪ್ರಕ್ರಿಯೆಯಲ್ಲಿ ತಡವಾಗಿ ಸೇರಿಕೊಂಡಿರಿ ಅನಿಸುತ್ತದೆ. ಅಲ್ಲದಿದ್ದರೆ, ವಿಸ್ತಾರವಾದ ಪ್ರಬಂಧದ ತಯಾರಿಕೆಯಲ್ಲಿ ತೊಡಗಿಸಿಕೊಳ್ಳಲು ನನಗೆ ಸಮಯವಾಗಲೀ, ಉತ್ಸಾಹವಾಗಲೀ ಇಲ್ಲದ ಕಾರಣ, ನನ್ನ ಅನುಕೂಲಕ್ಕಾಗಿ ಸಣ್ಣ ಭಾಷಣವನ್ನು ಬರೆಯಲು ಯೋಚಿಸಿದ್ದೆ ಎಂಬ ವಿಷಯ ನಿಮಗೆ ಗೊತ್ತಿರುತ್ತಿತ್ತು. ಆದರೆ, ಈ ವಿಷಯವನ್ನು ಸವಿಸ್ತಾರವಾಗಿ ವಿವರಿಸಲು ನನ್ನನ್ನು ಕೇಳಿಕೊಂಡದ್ದು ಮಂಡಲ ಮತ್ತು ನನಗೆ ಜಾತಿ ವ್ಯವಸ್ಥೆಗೆ ಸಂಬಂಧಿಸಿದ ಪ್ರಶ್ನೆಗಳ ಪಟ್ಟಿಯನ್ನು ಕಳುಹಿಸಿಕೊಟ್ಟದ್ದು  ಕೂಡ ಮಂಡಲವೇ. ಮಂಡಲ ಮತ್ತು ಅದರ ವಿರೋಧಿಗಳ ನಡುವಿನ ವಿವಾದದಲ್ಲಿ ಇವು ಆಗಾಗ್ಗೆ ಏಳುತ್ತಿದ್ದ ಪ್ರಶ್ನೆಗಳಾಗಿದ್ದರಿಂದ, ಮಂಡಲವು ಅವುಗಳಿಗೆ ತೃಪ್ತಿಕರವಾಗಿ ಉತ್ತರಿಸಲು ಕಷ್ಟಕರ ಆಗಿರುತ್ತಿದ್ದರಿಂದ ನನ್ನ ಭಾಷಣದಲ್ಲಿ ಅವುಗಳನ್ನು ಉತ್ತರಿಸಲು ಕೇಳಿಕೊಂಡದ್ದು. ಈ ನಿಟ್ಟಿನಲ್ಲಿ ಮಂಡಲದ ಆಶಯಗಳನ್ನು ಪೂರೈಸುವ ಪ್ರಯತ್ನದಲ್ಲಿಯೇ ಭಾಷಣ ದೀರ್ಘವಾದದ್ದು. ಈ ದೃಷ್ಟಿಯಿಂದ ನೋಡಿದಾಗ, ಭಾಷಣ ದೀರ್ಘವಾಗಿರುವುದಕ್ಕೆ ನಾನು ದೋಷಿಯಲ್ಲ ಎಂದು ನೀವು ಒಪ್ಪುತ್ತೀರಿ ಎನ್ನುವುದು ನನಗೆ ಖಾತ್ರಿ ಇದೆ.

ಹಿಂದೂ ಧರ್ಮ ನಾಶವಾಗಬೇಕೆಂದು ನಾನು ಹೇಳಿದ ಮಾತು ಮಂಡಲಕ್ಕೆ ಇಷ್ಟೊಂದು ಬೇಸರ ಮೂಡಿಸುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಪದಗಳಿಗೆ ಹೆದರುವವರು ಮೂರ್ಖರು ಮಾತ್ರ ಎಂದೆಣಿಸಿದ್ದೆ ನಾನು. ಏಕೆಂದರೆ, ಜನರ ಮನಸ್ಸಿನಲ್ಲಿ ಯಾವುದೇ ತಪ್ಪು ಗ್ರಹಿಕೆ ಇರಬಾರದೆಂದು, ಧರ್ಮ ಮತ್ತು ಧರ್ಮದ ನಾಶ ನನ್ನ ಪ್ರಕಾರ ಏನು ಎಂಬುದನ್ನು ವಿವರಿಸಲು ತುಂಬಾ ಶ್ರಮಪಟ್ಟಿದ್ದೇನೆ. ನನ್ನ ಭಾಷಣವನ್ನು ಓದಿದ ಯಾರೂ ಖಂಡಿತವಾಗಿಯೂ ನನ್ನನ್ನು ತಪ್ಪು ತಿಳಿದಿರಲಾರರು. ಸಾಕಷ್ಟು ವಿವರಣೆಗಳನ್ನು ನೀಡಿದ್ದರೂ ಕೇವಲ 'ಧರ್ಮನಾಶ' ಮೊದಲಾದ ಪದಗಳನ್ನು ನೋಡಿಯೇ ಮಂಡಲಕ್ಕೆ ಗಾಬರಿ ಆಯಿತೆಂದರೆ, ಅದು ಮಂಡಲದ ಮೇಲೆ ನಾನಿಟ್ಟಿರುವ ಗೌರವವನ್ನೇನೂ ಹೆಚ್ಚಿಸದು. ಸುಧಾರಕನೆಂದು ಕರೆಸಿಕೊಳ್ಳುವ ವ್ಯಕ್ತಿ, ತನ್ನ ಸ್ಥಾನ ಬಯಸುವ ನಡತೆಯನ್ನು ಪಾಲಿಸುವುದು ಒತ್ತಟ್ಟಿಗಿರಲಿ, ಆ ಸ್ಥಾನದ ತಾರ್ಕಿಕ ವಿವರಣೆಯನ್ನು ಅರ್ಥೈಸುವುದಕ್ಕೂ ಹಿಂಜರಿಯುತ್ತಾರಾದರೆ, ಅಂಥವರ ಬಗ್ಗೆ ಯಾವುದೇ ಆಸ್ಥೆಯಾಗಲೀ ಅಥವಾ ಗೌರವವಾಗಲೀ ಉಳಿಯುವುದಿಲ್ಲ.

ಈ ಲೇಖನ ಓದಿದ್ದೀರಾ?: ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ `ಜಾತಿ ವಿನಾಶ' | ಭಾಗ 1 | ಮಾತಾಗಿ ಬೆಳಗಬೇಕಾದ್ದು, ಅಕ್ಷರವಾಗಿ ಉಸಿರಾಯ್ತು

ಭಾಷಣದ ಸಿದ್ಧತೆಯ ಸಮಯದಲ್ಲಿ ಯಾವುದೇ ರೀತಿಯ ಇತಿಮಿತಿಗಳನ್ನು ನಾನು ಯಾವತ್ತೂ ಒಪ್ಪಿಕೊಂಡಿಲ್ಲ ಮತ್ತು ಭಾಷಣದಲ್ಲಿ ಏನಿರಬೇಕು, ಏನಿರಬಾರದು ಎಂಬುದನ್ನು ಮಂಡಲ ನನ್ನೊಡನೆ ಯಾವತ್ತೂ ಚರ್ಚಿಸಿಲ್ಲ ಎನ್ನುವುದನ್ನು ತಾವು ಒಪ್ಪುತ್ತೀರಿ. ವಿಷಯದ ಕುರಿತಾಗಿ ನನಗಿರುವ ಅಭಿಪ್ರಾಯವನ್ನು ಮಂಡಿಸಲು ನನಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಎಂಬುದನ್ನು ನಾನು ಸ್ವಲ್ಪ ಲಘುವಾಗಿ ತೆಗೆದುಕೊಂಡಿದ್ದೆ. ಏಪ್ರಿಲ್ 9ರಂದು ತಾವು ಬಾಂಬೆಗೆ ಬರುವವರೆಗೂ, ಮಂಡಲಕ್ಕೆ ನನ್ನ ಭಾಷಣದ ಸ್ವರೂಪ ಗೊತ್ತಿರಲಿಲ್ಲ. ದೌರ್ಜನ್ಯಕ್ಕೊಳಗಾಗಿರುವ ವರ್ಗಗಳು ಮತಾಂತರಗೊಳ್ಳಬೇಕೆಂಬ ನನ್ನ ಅಭಿಪ್ರಾಯವನ್ನು ಪ್ರತಿಪಾದಿಸಲು, ನಿಮ್ಮ ವೇದಿಕೆಯನ್ನು ಬಳಸಿಕೊಳ್ಳುವುದು ನನಗೆ ಇಷ್ಟವಿಲ್ಲ ಎನ್ನುವುದನ್ನು, ನೀವು ಮುಂಬೈಗೆ ಬಂದಿದ್ದಾಗ ನಾನೇ ಖುದ್ದಾಗಿ ಹೇಳಿದ್ದೆ. ಅಂತೆಯೇ, ನಿಮಗೆ ನೀಡಿದ್ದ ಮಾತನ್ನು ನನ್ನ ಭಾಷಣದಲ್ಲಿ ಅತ್ಯಂತ ಎಚ್ಚರಿಕೆಯಿಂದ ಕಾಪಾಡಿಕೊಂಡಿದ್ದೇನೆ. 'ನಾನು ನಿಮ್ಮೊಡನಿರುವುದಿಲ್ಲ, ಕ್ಷಮಿಸಿ' ಮುಂತಾದ ಒಂದೆರಡು ಪರೋಕ್ಷ ಉಲ್ಲೇಖಗಳನ್ನು ಬಿಟ್ಟರೆ ಆ ವಿಷಯವಾಗಿ ಭಾಷಣದಲ್ಲಿ ನಾನು ಏನನ್ನೂ ಹೇಳಿಲ್ಲ. ಹಾಗೇ ಹಾದುಹೋಗುವ ಪರೋಕ್ಷ ಉಲ್ಲೇಖವನ್ನು ಕೂಡ ನೀವು ವಿರೋಧಿಸುವುದನ್ನು  ನೋಡಿದಾಗ, ನಿಮ್ಮನ್ನು ಒಂದು ಮಾತು ಕೇಳಬೇಕೆನಿಸುತ್ತದೆ: ನಿಮ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಲು ಒಪ್ಪಿಕೊಂಡ ಮಾತ್ರಕ್ಕೆ ದೌರ್ಜನ್ಯಕ್ಕೊಳಗಾದ ವರ್ಗಗಳ ಮತಾಂತರದ ವಿಚಾರವನ್ನು  ಮಾತಾಡುವುದನ್ನು ನಿಲ್ಲಿಸುತ್ತೇನೆ ಅಥವಾ ಆ ಕುರಿತಾದ ನನ್ನ ನಿಲುವನ್ನು ಕೈಬಿಡುತ್ತೇನೆ ಎಂದುಕೊಂಡಿರಾ? ಒಂದು ವೇಳೆ ನೀವು ಹಾಗೆ ತಿಳಿದಿದ್ದರೆ, ಆ ತಪ್ಪಿಗೆ ನಾನು ಜವಾಬ್ದಾರನಲ್ಲ ಎಂದು ನಾನು ಹೇಳಬಯಸುತ್ತೇನೆ. ನನ್ನನ್ನು ಸಮ್ಮೇಳನದ ಅಧ್ಯಕ್ಷನನ್ನಾಗಿ ಮಾಡಿ ಗೌರವಿಸಿದ್ದಕ್ಕೆ ಪ್ರತಿಯಾಗಿ, ಮತಾಂತರದ ಬಗ್ಗೆ ನನಗಿರುವ ನಂಬಿಕೆಯನ್ನು ನಾನು ತ್ಯಜಿಸಬೇಕಾಗುತ್ತದೆ ಎಂದು ನೀವು ಸುಳಿವು ನೀಡಿದ್ದರೂ ಸಾಕಿತ್ತು, ನಿಮ್ಮಿಂದ ಸಿಗುವ ಯಾವುದೇ ಗೌರವಕ್ಕಿಂತ ನನಗೆ ನನ್ನ ನಂಬಿಕೆಯೇ ಮುಖ್ಯ ಎಂದು ನೇರ ಮಾತುಗಳಲ್ಲಿ ಹೇಳಿಬಿಡುತ್ತಿದ್ದೆ.

ದಿನಾಂಕ 14ರ ತರುವಾಯ ಬಂದ ಇನ್ನೊಂದು ಪತ್ರ ನನಗೆ ಅಚ್ಚರಿ ಉಂಟುಮಾಡಿದೆ. ಎರಡನ್ನೂ ಓದಿದ ಯಾರಿಗಾದರೂ ಹಾಗೆಯೇ ಅನ್ನಿಸಬಹುದು. ಸ್ವಾಗತ ಸಮಿತಿ ಒಮ್ಮಿಂದೊಮ್ಮೆಗೆ ಹೀಗೆ ಮುಖ ಸಿಂಡರಿಸಿಕೊಂಡಿರುವುದೇಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನೀವು 14ನೇ ತಾರೀಖಿನಂದು ಪತ್ರ ಬರೆದಾಗ ಸಮಿತಿಯ ಮುಂದಿದ್ದ ಕರಡು ಪ್ರತಿಗೂ, ಈಗ ನೀವು ಪತ್ರದಲ್ಲಿ ತಿಳಿಸಿರುವಂತೆ, ಸಮಿತಿಯ ಸದ್ಯದ ನಿಲುವಿಗೆ ಕಾರಣವಾಗಿರುವ ಕರಡು ಪ್ರತಿಗೂ ವ್ಯತ್ಯಾಸವೇನೂ ಇಲ್ಲ. ಮೊದಲ ಕರಡಿನಲ್ಲಿ ಇಲ್ಲದ ಒಂದೇ ಒಂದು ಹೊಸ ವಿಚಾರವನ್ನೂ ನೀವು ಬೊಟ್ಟು ಮಾಡಲಾರಿರಿ. ವಿಚಾರಗಳು ಅವೇ. ಒಂದೇ ವ್ಯತ್ಯಾಸ ಎಂದರೆ, ಅಂತಿಮ ಪ್ರತಿಯಲ್ಲಿ ವಿಸ್ತೃತವಾಗಿ ಹೇಳಲಾಗಿದೆ. ಅಂತಹ ಆಕ್ಷೇಪಗಳೇನಾದರೂ ಇದ್ದಿದ್ದರೆ ನೀವು, ದಿನಾಂಕ 14ರ ಪತ್ರದಲ್ಲಿ ಹೇಳಬಹುದಿತ್ತು. ಆದರೆ, ನೀವು ಹೇಳಲಿಲ್ಲ. ಅದಲ್ಲದೆ, ನನಗೆ 1,000 ಪ್ರತಿಗಳನ್ನು ಮುದ್ರಿಸಲು ಹೇಳಿ, ನೀವು ಸೂಚಿಸಿದ ಕೆಲವೊಂದು ತಿದ್ದುಪಡಿಗಳನ್ನು ಒಪ್ಪುವ ಅಥವಾ ಬಿಡುವ ಸ್ವಾತಂತ್ರ್ಯವನ್ನು ನನಗೇ ಬಿಟ್ಟಿರಿ. ಅದರಂತೆ ನಾನು 1,000 ಪತ್ರಿಗಳನ್ನು ಮುದ್ರಿಸಿದೆ. ಅವು ಈಗ ನನ್ನೊಡನಿವೆ. ಇದಾದ ಎಂಟು ದಿನಗಳ ನಂತರ ತಾವು ಪತ್ರದಲ್ಲಿ ನನ್ನ ಭಾಷಣಕ್ಕೆ ಆಕ್ಷೇಪವೆತ್ತಿದ್ದೀರಿ ಮತ್ತು ಬದಲಾಯಿಸಿಕೊಳ್ಳದಿದ್ದರೆ ಸಮ್ಮೇಳನವನ್ನು ರದ್ದುಗೊಳಿಸಲಾಗುವುದು ಎಂದು ಬರೆದಿದ್ದೀರಿ. ನಾನು ಭಾಷಣದಲ್ಲಿ ಯಾವುದೇ ಬದಲಾವಣೆ ಮಾಡುವ ಭರವಸೆಯಿಲ್ಲ ಎಂಬುದು ನಿಮಗೆ ಗೊತ್ತಿರಬೇಕಿತ್ತು. ನಾನು ಭಾಷಣದಲ್ಲಿ ಒಂದು ಅಲ್ಪವಿರಾಮವನ್ನು ಕೂಡ ಬದಲಾಯಿಸುವುದಿಲ್ಲ, ಯಾವುದೇ ರೀತಿಯ ಸೆನ್ಸಾರ್‌ಗೂ ಒಪ್ಪುವುದಿಲ್ಲ ಹಾಗೂ ನನ್ನಿಂದ ಸಿಗುವ ರೀತಿಯಲ್ಲಿಯೇ ನೀವು ಭಾಷಣವನ್ನು ಒಪ್ಪಿಕೊಳ್ಳಬೇಕು ಎಂದು ನೀವು ಬಾಂಬೆಯಲ್ಲಿದ್ದಾಗ ನಾನು ಹೇಳಿದ್ದೆ. ಭಾಷಣದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳಿಗೆ ಸಂಪೂರ್ಣ ಹೊಣೆ ನನ್ನದು ಮತ್ತು ಸಮ್ಮೇಳನಕ್ಕೆ ನನ್ನ ಮಾತು ಸಮ್ಮತಿಯಾಗದಿದ್ದರೆ, ಸಮ್ಮೇಳನವು ಅವನ್ನು ಖಂಡಿಸುವ ನಿರ್ಣಯ ಅಂಗೀಕರಿಸಿದರೆ, ಆ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲಾರೆ ಎಂದು ಕೂಡ ಹೇಳಿದ್ದೆ. ಮಂಡಲವು ನನ್ನ ಅಭಿಪ್ರಾಯಗಳಿಗೆ ಉತ್ತರದಾಯಿ ಆಗಬೇಕಾಗಬಹುದೆಂದು  ನಾನು ಆತಂಕಗೊಂಡಿದ್ದೆ ಮತ್ತು ಸಮ್ಮೇಳನದೊಂದಿಗೆ ನಾನು ನಿಕಟ ಸಂಬಂಧ ಹೊಂದಿರಬಾರದೆಂದು, ನನ್ನ ಭಾಷಣವನ್ನು ಅಧ್ಯಕೀಯ ಭಾಷಣಕ್ಕೆ ಬದಲಾಗಿ ಉದ್ಘಾಟನಾ ಭಾಷಣವಾಗಿ ಪರಿಗಣಿಸಿ ಮತ್ತು ನಿರ್ಣಯಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಮಂಡಲವು, ಅಧ್ಯಕ್ಷ ಸ್ಥಾನಕ್ಕೆ ಬೇರೊಬ್ಬರನ್ನು ಹುಡುಕುವಂತೆ ಸಲಹೆ ನೀಡಿದ್ದೆ. 14ನೇ ತಾರೀಖಿನಂದು ನಿರ್ಣಯ ತೆಗೆದುಕೊಳ್ಳಲು ನಿಮ್ಮ ಸಮಿತಿಗಿದ್ದಷ್ಟು ಅನುಕೂಲ ಇನ್ಯಾರಿಗೂ ಇರಲಿಲ್ಲ. ಆದರೆ, ಸಮಿತಿಯು ಅದರಲ್ಲಿ ವಿಫಲವಾಯಿತು. ಈ ನಡುವೆ, ಸಮಿತಿಯು ಸ್ವಲ್ಪ ದೃಢವಾಗಿ ಇದ್ದಿದ್ದರೆ ಮುದ್ರಣದ ವೆಚ್ಚವನ್ನು ಉಳಿಸಬಹುದಿತ್ತು.

Image
Ambedkar 3

ನಿಮ್ಮ ಸಮಿತಿಯ ನಿರ್ಧಾರಕ್ಕೆ, ನನ್ನ ಭಾಷಣದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಅಷ್ಟೇನೂ ಕಾರಣವಲ್ಲ ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ. ಸಮಿತಿಯ ಈ ನಿರ್ಧಾರಕ್ಕೆ ಅಮೃತಸರದಲ್ಲಿ ನಡೆದ ಸಿಖ್ ಪ್ರಚಾರ ಸಮ್ಮೇಳನದಲ್ಲಿ ನಾನು ಭಾಗವಹಿಸಿದ್ದು ಕಾರಣ ಎಂದು ನಂಬಲು ಕಾರಣಗಳಿವೆ. ಏಪ್ರಿಲ್ 14 ಮತ್ತು 24ರ ನಡುವೆ ಅನಿರೀಕ್ಷಿತವಾಗಿ ಸಮಿತಿಯು ತೋರಿರುವ ಅನಾದರವನ್ನು ಬೇರೆ ಇನ್ನೇನೂ ತೃಪ್ತಿಕರವಾಗಿ ವಿವರಿಸಲಾರದು. ಆದಾಗ್ಯೂ ನಾನು ಈ ವಿಚಾರವನ್ನು ಹೆಚ್ಚು ಎಳೆಯಬಾರದು. ನನ್ನ ಅಧ್ಯಕ್ಷತೆಯಲ್ಲಿ ಸೇರಬೇಕಾಗಿದ್ದ ಸಮ್ಮೇಳನವನ್ನು ರದ್ದುಗೊಳಿಸಲಾಗಿದೆ ಎಂದು ಘೋಷಿಸುವಂತೆ ನಿಮ್ಮನ್ನು ಕೇಳಿಕೊಳ್ಳಲೇಬೇಕು. ಸಮಯ ಮೀರಿ ಹೋಗಿದೆ. ಈಗ ನಿಮ್ಮ ಸಮಿತಿಯು ನನ್ನ ಭಾಷಣವನ್ನು ಪೂರ್ಣ ಪ್ರಮಾಣದಲ್ಲಿ ಒಪ್ಪಿಕೊಂಡರೂ ನಾನು ಅಧ್ಯಕ್ಷನಾಗಲು ಒಪ್ಪುವುದಿಲ್ಲ. ಭಾಷಣ ಸಿದ್ಧಪಡಿಸುವಲ್ಲಿ ನಾನು ತೆಗೆದುಕೊಂಡ ಶ್ರಮವನ್ನು ಗುರುತಿಸಿ ಮೆಚ್ಚಿಗೆ ಸೂಚಿಸಿದಕ್ಕಾಗಿ ನಿಮಗೆ ವಂದನೆಗಳು. ನನ್ನ ಈ ಶ್ರಮದಿಂದ ಇತರರಿಗೆ ಲಾಭವಾಗಿದೆಯೋ ಇಲ್ಲವೋ ಗೊತ್ತಿಲ್ಲ. ನನಗಂತೂ ಆಗಿದೆ. ನನಗಿರುವ ಒಂದೇ ಬೇಸರವೆಂದರೆ, ನನ್ನ ಆರೋಗ್ಯ ಈ ಕೆಲಸವನ್ನು ನಿರ್ವಹಿಸುವಷ್ಟು ಶಕ್ತವಿಲ್ಲದಿದ್ದಾಗ ನಾನಿದನ್ನು ಮಾಡಬೇಕಾಯಿತು ಎಂಬುದಷ್ಟೇ.

ನಿಮ್ಮ ವಿಶ್ವಾಸಿ,

ಬಿ ಆರ್ ಅಂಬೇಡ್ಕರ್

* * * * *

ಈ ಪತ್ರ ವ್ಯವಹಾರವು, ಅಧ್ಯಕ್ಷನಾಗಿ ನನ್ನ ಆಯ್ಕೆಯನ್ನು ಮಂಡಲವು ರದ್ದುಪಡಿಸಿರುವುದಕ್ಕೆ ಕಾರಣಗಳನ್ನು ಬಹಿರಂಗಪಡಿಸುತ್ತದೆ. ಓದುಗ ತಪ್ಪು ಯಾರದ್ದೆಂದು ನಿರ್ಣಯಿಸುವ ಸ್ಥಿತಿಯಲ್ಲಿರುತ್ತಾನೆ. ಸಮ್ಮೇಳನಾಧ್ಯಕ್ಷನ ಅಭಿಪ್ರಾಯಗಳು ತಮಗೆ ಒಪ್ಪಿಗೆಯಾಗಿಲ್ಲವೆಂದು ಸ್ವಾಗತ ಸಮಿತಿಯವರು ಸಮ್ಮೇಳನಾಧ್ಯಕ್ಷತೆಯಯನ್ನೇ ರದ್ದುಗೊಳಿಸಿರುವುದು ನನಗನ್ನಿಸುವಂತೆ ಇದೇ ಮೊದಲಿರಬೇಕು. ಅದು ಹೌದೋ ಅಲ್ಲವೋ, ಆದರೆ, ಸವರ್ಣೀಯ ಹಿಂದೂಗಳ ಸಮ್ಮೇಳನದ ಅಧ್ಯಕ್ಷನಾಗಲು ನನಗೆ ಆಮಂತ್ರಣ ಬಂದದ್ದು ನನ್ನ ಜೀವನದಲ್ಲಿ ಇದೇ ಮೊದಲು. ಇದು ದುರಂತಮಯ ಅಂತ್ಯ ಕಂಡಿದ್ದಕ್ಕೆ ನನಗೆ ವಿಷಾದವಿದೆ. ಆದರೆ, ಸವರ್ಣೀಯ ಹಿಂದೂಗಳ ಸುಧಾರಣಾವಾದಿ ಪಂಗಡ ಮತ್ತು ಅಸ್ಪೃಶ್ಯರ ಸ್ವಾಭಿಮಾನಿ ಪಂಗಡದ ನಡುವಿನ ಸಂಬಂಧದಂತಹ ದುರಂತಮಯ ಸಂಬಂಧದಿಂದ ಯಾರಾದರೂ ಏನನ್ನು ನಿರೀಕ್ಷಿಸಬಹುದು? ಇಲ್ಲಿ ಮೊದಲಿನವರು ತಮ್ಮ ಸಂಪ್ರದಾಯವಾದಿ ಸಹವರ್ತಿಗಳನ್ನು ದೂರವಿಡಲು ಸಿದ್ಧರಿಲ್ಲ ಮತ್ತು ಎರಡನೆಯವರಿಗೆ ಸುಧಾರಣೆ ಆಗಬೇಕೆಂದು ಒತ್ತಾಯಿಸುವುದನ್ನು ಬಿಟ್ಟರೆ ಬೇರೆ ದಾರಿಯಿಲ್ಲ ತಾನೇ?

 

ಬಿ ಆರ್ ಅಂಬೇಡ್ಕರ್

ರಾಜಾಗೃಹ, ದಾದರ್, ಬಾಂಬೆ - 14
ಮೇ 15, 1936

ನಿಮಗೆ ಏನು ಅನ್ನಿಸ್ತು?
3 ವೋಟ್