ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 3 | 'ಹಿಂದೂಗಳು ನನ್ನ ಬಗ್ಗೆ ರೋಸಿಹೋಗಿದ್ದಾರೆಂದು ಗೊತ್ತು'

Babashaheb-with-his-pet-dog

ಅಂಬೇಡ್ಕರ್ ಅವರ 'Annihilation of Caste' ಪುಸ್ತಕದ ಅನುವಾದ ಸರಣಿ ಇದು. ಅವರು ಲಾಹೋರ್‌ನಲ್ಲಿ ಮಾಡಬೇಕಿದ್ದ ಭಾಷಣದಲ್ಲಿನ ನೇರ ಮಾತುಗಳು ಕೆಲವರಿಗೆ ಹಿಡಿಸದೆ ವಿವಾದವಾಗುತ್ತದೆ. ಭಾಷಣದಲ್ಲಿ ಒಂದಕ್ಷರವನ್ನೂ ಬದಲಿಸಲಾಗದು ಎನ್ನುತ್ತಾರೆ ಅಂಬೇಡ್ಕರ್. ಕೊನೆಗೆ ಸಮ್ಮೇಳನ ರದ್ದಾಗುತ್ತದೆ. ಹಾಗಾದರೆ, ಭಾಷಣದಲ್ಲಿ ಏನಿತ್ತು? ಇಲ್ಲಿದೆ ಮೊದಲ ಭಾಗ

 

Eedina App

ಇಂದ
ಬಿ ಆರ್ ಅಂಬೇಡ್ಕರ್

 

AV Eye Hospital ad

ಇವರಿಗಾಗಿ
ಲಾಹೋರಿನ ಜಾತ್ ಪಾತ್ ತೋಡಕ್ ಮಂಡಲದ ವಾರ್ಷಿಕ ಸಮ್ಮೇಳನ, 1936

 

(ಸಿದ್ಧಪಡಿಸಿದ ಭಾಷಣ. ಆದರೆ, ವೇದಿಕೆಯಿಂದ ನೀಡಲಾಗಲಿಲ್ಲ. ಭಾಷಣದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಸಮ್ಮೇಳನಕ್ಕೆ ಒಪ್ಪಿತವಲ್ಲ ಎಂದು ಸ್ವಾಗತ ಸಮಿತಿಯು ಸಮ್ಮೇಳನವನ್ನು ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ...)

 

ಭಾಗ - 1

ಗೆಳೆಯರೇ,

ನನ್ನನ್ನು ಈ ಸಮ್ಮೇಳನಕ್ಕೆ ಅಧ್ಯಕ್ಷನನ್ನಾಗಿ ಆಹ್ವಾನಿಸಿದ ಜಾತ್ ಪಾತ್ ತೋಡಕ್ ಮಂಡಲದ ಸದಸ್ಯರ ಬಗ್ಗೆ ನನಗೆ ನಿಜವಾಗಿಯೂ ಬೇಸರವೆನಿಸುತ್ತಿದೆ. ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂಬುದನ್ನು ನಾನು ಚೆನ್ನಾಗಿ ಬಲ್ಲೆ. ಲಾಹೋರ್‌ನಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲು ಬಾಂಬೆಯಿಂದ ಒಬ್ಬ ವ್ಯಕ್ತಿಯನ್ನು ಏಕೆ ಕರೆಸಿಕೊಳ್ಳಬೇಕಾಯಿತು ಎಂಬುದನ್ನು ಮಂಡಲವು ವಿವರಿಸಬೇಕಾಗುತ್ತದೆ. ಅಧ್ಯಕ್ಷತೆ ವಹಿಸಲು ನನಗಿಂತ ಅರ್ಹರಾದವರು ಮಂಡಲಕ್ಕೆ ಖಂಡಿತವಾಗಿಯೂ ಸುಲಭದಲ್ಲಿ ಸಿಗುತಿದ್ದರು ಎಂದು ನಾನು ನಂಬಿದ್ದೇನೆ.

ನಾನು ಹಿಂದೂಗಳನ್ನು ಟೀಕಿಸಿದ್ದೇನೆ. ಅವರು ಗೌರವಿಸುವ ಮಹಾತ್ಮರ ಸ್ಥಾನಮಾನವನ್ನು ನಾನು ಪ್ರಶ್ನಿಸಿದ್ದೇನೆ. ಹಾಗಾಗಿ, ಅವರು ನನ್ನನ್ನು ದ್ವೇಷಿಸುತ್ತಾರೆ. ಅವರಿಗೆ ನಾನೊಂದು ಹಿತ್ತಿಲಲ್ಲಿರುವ ಹಾವು. ಈ ಗೌರವಾನ್ವಿತ ಸ್ಥಾನವನ್ನು ಅಲಂಕರಿಸಲು ನನ್ನನ್ನು ಏಕೆ ಕರೆದರು ಎಂಬುದನ್ನು ವಿವರಿಸಲು ರಾಜಕೀಯ ಮಾಡುವ ಹಿಂದೂಗಳು, ಮಂಡಲವನ್ನು ಕೇಳುವುದರಲ್ಲಿ ಸಂದೇಹವಿಲ್ಲ. ಇದೊಂದು ಸಾಹಸದ ಕೆಲಸ. ರಾಜಕೀಯ ಮಾಡುವ ಕೆಲವು ಹಿಂದೂಗಳು ಇದನ್ನು ಅವಮಾನವೆಂದು ಪರಿಗಣಿಸಿದರೆ ನನಗೇನೂ ಆಶ್ಚರ್ಯವೆನಿಸದು. ನನ್ನ ಈ ಆಯ್ಕೆಯು ಸಾಮಾನ್ಯವಾಗಿ ಧಾರ್ಮಿಕ ಮನಸ್ಸಿನ ಹಿಂದೂಗಳನ್ನು ಖಂಡಿತವಾಗಿಯೂ ಮೆಚ್ಚಿಸಲು ಸಾಧ್ಯವಿಲ್ಲ. ಅಧ್ಯಕ್ಷರ ಆಯ್ಕೆಯಲ್ಲಿ ಶಾಸ್ತ್ರ ಸಮ್ಮತ ಪರಿಪಾಠವನ್ನು ಏಕೆ ಉಲ್ಲಂಘಿಸಲಾಯಿತು ಎಂಬುದನ್ನು ಮಂಡಲವು ವಿವರಿಸಬೇಕಾದೀತು.

ಈ ಲೇಖನ ಓದಿದ್ದೀರಾ?: ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ `ಜಾತಿ ವಿನಾಶ' | ಭಾಗ 1 | ಮಾತಾಗಿ ಬೆಳಗಬೇಕಾದ್ದು, ಅಕ್ಷರವಾಗಿ ಉಸಿರಾಯ್ತು

ಶಾಸ್ತ್ರಗಳ ಪ್ರಕಾರ, ಉಳಿದ ಮೂರು ವರ್ಣಗಳಿಗೆ ಬ್ರಾಹ್ಮಣನೇ ಗುರು. 'ವರ್ಣೋನಾಮ್ ಬ್ರಾಹ್ಮಣೋ ಗುರು' ಎಂಬುದು ಶಾಸ್ತ್ರಗಳು ನೀಡಿರುವ ನಿರ್ದೇಶನ. ಆದ್ದರಿಂದ ಒಬ್ಬ ಹಿಂದೂ ಯಾರಿಂದ ಉಪದೇಶ ಪಡೆಯಬೇಕು ಮತ್ತು ಯಾರಿಂದ ಅವನು ಉಪದೇಶ ಪಡೆಯಬಾರದು ಎಂಬುದು ಮಂಡಲಕ್ಕೆ ಗೊತ್ತಿದೆ. ಯಾರೋ ಪಾಂಡಿತ್ಯ ಹೊಂದಿರುವವನನ್ನು ಒಬ್ಬ ಹಿಂದೂ ತನ್ನ ಗುರುವಾಗಿ ಸ್ವೀಕರಿಸಲು ಶಾಸ್ತ್ರಗಳು ಸಮ್ಮತಿಸುವುದಿಲ್ಲ. ಶಿವಾಜಿಗೆ, ಹಿಂದೂ ಸಾಮ್ರಾಜ್ಯ ಸ್ಥಾಪನೆಗೆ ಪ್ರೇರಕನೆಂದು ಹೇಳಲಾದ ಮಹಾರಾಷ್ಟ್ರದ ಬ್ರಾಹ್ಮಣ ಸಂತ ರಾಮದಾಸ್ ಇದನ್ನು ಅತ್ಯಂತ ಸ್ಪಷ್ಟಪಡಿಸಿದ್ದಾರೆ. ಮರಾಠಿಯಲ್ಲಿರುವ, ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ವಿಚಾರಗಳ ತನ್ನ ಸಂಕಲನ 'ದಾಸಬೋಧ'ದಲ್ಲಿ ಹಿಂದೂಗಳನ್ನು ಉದ್ದೇಶಿಸಿ, 'ಪಂಡಿತನಾದ ಮಾತ್ರಕ್ಕೆ ಒಬ್ಬ ಅಂತ್ಯಜನನ್ನು ನಾವು ಗುರುವಾಗಿ ಒಪ್ಪಿಕೊಳ್ಳಬಹುದೇ?' ಎಂದು ಪ್ರಶ್ನಿಸುತ್ತಾರೆ ಮತ್ತು ನಕಾರಾತ್ಮಕ ಉತ್ತರವನ್ನು ನೀಡುತ್ತಾರೆ. ಇಂತಹ ಪ್ರಶ್ನೆಗಳಿಗೆ ಏನೆಂದು ಉತ್ತರಿಸಬೇಕು ಎಂಬುದು ಮಂಡಲಕ್ಕೆ ಬಿಟ್ಟ ವಿಷಯ.

ಅಧ್ಯಕ್ಷನ ಆಯ್ಕೆಗಾಗಿ ಬಾಂಬೆವರೆಗೆ ಪ್ರಯಾಣಿಸಿ, ಹಿಂದೂಗಳಿಗೆ ಇಷ್ಟೊಂದು ಅಪ್ರಿಯನಾದ ವ್ಯಕ್ತಿಯನ್ನು ಗೊತ್ತು ಮಾಡಿ, ಅಂತ್ಯಜ - ಒಬ್ಬ ಅಸ್ಪೃಶ್ಯನನ್ನು ಸವರ್ಣೀಯರನ್ನು ಉದ್ದೇಶಿಸಿ ಮಾತಾಡಲು ಕರೆತರುವಂತಹ ಇಷ್ಟೊಂದು ಕೆಳಮಟ್ಟಕ್ಕೆ ಮಂಡಲವು ಏಕೆ ಇಳಿಯಿತು ಎಂಬುದು ಮಂಡಲಕ್ಕೆ ಮಾತ್ರ ಗೊತ್ತು. ನನ್ನ ಮಟ್ಟಿಗೆ ಹೇಳುವುದಾದರೆ, ನನ್ನ ಇಚ್ಚೆಗೆ ಮತ್ತು ನನ್ನ ಅನೇಕ ಸಹವರ್ತಿ ಅಸ್ಪೃಶ್ಯರ ಇಚ್ಚೆಗೆ ವಿರುದ್ಧವಾಗಿ ನಾನು ಈ ಆಹ್ವಾನವನ್ನು ಒಪ್ಪಿದ್ದೇನೆ.

ಈ ಲೇಖನ ಓದಿದ್ದೀರಾ?: ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 2 | 'ಪದಗಳಿಗೆ ಹೆದರುವವರು ಮೂರ್ಖರು ಮಾತ್ರ ಎಂದೆಣಿಸಿದ್ದೆ'

ಹಿಂದೂಗಳು ನನ್ನ ಬಗ್ಗೆ ರೋಸಿಹೋಗಿದ್ದಾರೆ ಎಂದು ನನಗೆ ಗೊತ್ತು. ನಾನು ಅವರಿಗೆ ಸ್ವೀಕಾರಾರ್ಹ ವ್ಯಕ್ತಿಯಲ್ಲ. ಇದೆಲ್ಲ ಗೊತ್ತಿರುವುದರಿಂದಲೇ ನಾನು ಉದ್ದೇಶಪೂರ್ವಕವಾಗಿ ಅವರಿಂದ ಅಂತರ ಕಾಯ್ದುಕೊಂಡಿದ್ದೇನೆ. ಅವರ ಮೇಲೆ ನನ್ನ ಅಭಿಪ್ರಾಯಗಳನ್ನು ಹೇರುವ ಬಯಕೆ ನನಗಿಲ್ಲ. ನಾನು ನನ್ನ ಸ್ವಂತ ವೇದಿಕೆಯಿಂದಲೇ ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದೇನೆ. ಇದು ಈಗಾಗಲೇ ಸಾಕಷ್ಟು ಹೊಟ್ಟೆ ಉರಿ ಮತ್ತು ಕಿರಿಕಿರಿಯನ್ನು ಉಂಟುಮಾಡಿದೆ. ನಾನು ಇಲ್ಲಿಯವರೆಗೆ ಅವರಿಗೆ ಕೇಳಿಸುವಂತೆ ಮಾಡುತ್ತಿದ್ದುದನ್ನು ಅವರ ಕಣ್ಣೆದುರೇ ಮಾಡಲು ಹಿಂದೂಗಳ ವೇದಿಕೆಯನ್ನೇರಲು ನಾನು ಬಯಸುವುದಿಲ್ಲ. ನಾನು ಇಲ್ಲಿರುವುದು ನಿಮ್ಮ ಆಯ್ಕೆಯಿಂದಲೇ ಹೊರತು, ನನ್ನ ಇಚ್ಚೆಯಿಂದಲ್ಲ.

ಸಮಾಜ ಸುಧಾರಣೆ ನಿಮ್ಮ ಈ ಚಟುವಟಿಕೆಗಳಿಗೆ ಕಾರಣ; ಈ ಕಾರಣವು ನನಗೆ ಯಾವಾಗಲೂ ಒಪ್ಪಿತವಾದದ್ದು. ವಿಶೇಷವಾಗಿ ನಾನು ಈ ಕಾರಣಕ್ಕೆ ನಿಮಗೆ ನೆರವಾಗಬಲ್ಲೆ ಎಂದು ನೀವು ತಿಳಿದಿರುವಾಗ, ಈ ವಿಷಯವಾಗಿ ನೆರವಾಗುವ ಅವಕಾಶವನ್ನು ನಿರಾಕರಿಸಬಾರದು ಎಂದು ನಾನು ಭಾವಿಸಿದೆ. ಇಂದು ನಾನು ಹೇಳಲು ಹೊರಟಿರುವುದು ನಿಮ್ಮಲ್ಲಿರುವ ಸಮಸ್ಯೆಯನ್ನು ಪರಿಹರಿಸಲು ಯಾವ ರೀತಿಯಲ್ಲಿ ಸಹಾಯ ಮಾಡುತ್ತದೆ ಎಂಬುದನ್ನು ನೀವೇ ನಿರ್ಣಯಿಸಿ. ನಾನು ಸಮಸ್ಯೆಯ ಕುರಿತು ನನ್ನ ಅಭಿಪ್ರಾಯಗಳನ್ನು ನಿಮ್ಮ ಮುಂದಿಡಲಷ್ಟೇ ಬಯಸುತ್ತೇನೆ.

(ಮುಂದುವರಿಯುವುದು)

ಮುಖ್ಯ ಚಿತ್ರ ಕೃಪೆ: ಚಿಂತನೈ ಜಾಲತಾಣ
ನಿಮಗೆ ಏನು ಅನ್ನಿಸ್ತು?
15 ವೋಟ್
eedina app