ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 4 | ಸಾಮಾಜಿಕ ಪರಿಷತ್ತಿಗೆ ಕೊನೆಯ ಮೊಳೆ ಹೊಡೆದ ಡಬ್ಲ್ಯೂ ಸಿ ಬ್ಯಾನರ್ಜಿ

Dr B R Ambedkar

ಅಂಬೇಡ್ಕರ್ ಅವರ 'Annihilation of Caste' ಪುಸ್ತಕದ ಅನುವಾದ ಸರಣಿ ಇದು. ಅವರು ಲಾಹೋರ್‌ನಲ್ಲಿ ಮಾಡಬೇಕಿದ್ದ ಭಾಷಣದಲ್ಲಿನ ನೇರ ಮಾತುಗಳು ಕೆಲವರಿಗೆ ಹಿಡಿಸದೆ ವಿವಾದವಾಗುತ್ತದೆ. ಭಾಷಣದಲ್ಲಿ ಒಂದಕ್ಷರವನ್ನೂ ಬದಲಿಸಲಾಗದು ಎನ್ನುತ್ತಾರೆ ಅಂಬೇಡ್ಕರ್. ಕೊನೆಗೆ ಸಮ್ಮೇಳನ ರದ್ದಾಗುತ್ತದೆ. ಹಾಗಾದರೆ, ಭಾಷಣದಲ್ಲಿ ಏನಿತ್ತು? ಇಲ್ಲಿದೆ ಎರಡನೇ ಭಾಗ

ಭಾಷಣದ ಮೊದಲ ಭಾಗ ಓದಲು ಇಲ್ಲಿ ಕ್ಲಿಕ್ ಮಾಡಿ: 'ಹಿಂದೂಗಳು ನನ್ನ ಬಗ್ಗೆ ರೋಸಿಹೋಗಿದ್ದಾರೆಂದು ಗೊತ್ತು'

Eedina App

ಭಾಗ - 2

ಭಾರತದಲ್ಲಿ ಸಮಾಜ ಸುಧಾರಣೆಯ ದಾರಿ ಸ್ವರ್ಗದ ದಾರಿಯಂತೆಯೇ ಅನೇಕ ಕಷ್ಟಗಳಿಂದ ಕೂಡಿದೆ. ಸುಧಾರಣೆಗೆ ಜೊತೆಯಾಗುವ ಗೆಳೆಯರು ಕೆಲವೇ ಜನ. ವಿಮರ್ಶಕರು ಮಾತ್ರ ಹಲವರಿದ್ದಾರೆ. ವಿಮರ್ಶಕರಲ್ಲಿ ಎರಡು ವಿಧ; ರಾಜಕೀಯ ಸುಧಾರಕರು, ಸಮಾಜವಾದಿಗಳು.

AV Eye Hospital ad

ಬಹಳ ಹಿಂದಿನಿಂದಲೂ ಗುರುತಿಸಿದಂತೆ, ಸಾಮಾಜಿಕ ದಕ್ಷತೆ ಇರದ ಯಾವುದೇ ಕಾರ್ಯಕ್ಷೇತ್ರದಲ್ಲಿ  ಶಾಶ್ವತ ಪ್ರಗತಿ ಸಾಧ್ಯವಿಲ್ಲ. ಅನಿಷ್ಟ ಪದ್ಧತಿಗಳು ಹುಟ್ಟುಹಾಕಿರುವ ದುಷ್ಕೃತ್ಯಗಳಿಂದಾಗಿ ಹಿಂದೂ ಸಮಾಜ ಇಂದು ದಕ್ಷ ಸ್ಥಿತಿಯಲಿಲ್ಲ. ಈ ಅನಿಷ್ಟಗಳ ನಿರ್ಮೂಲನೆಗೆ ನಾವು ನಿರಂತರ ಪ್ರಯತ್ನ ಮಾಡಬೇಕು. ಈ ಸತ್ಯ ಗೊತ್ತಿದ್ದರಿಂದಲೇ ರಾಷ್ಟ್ರೀಯ ಕಾಂಗ್ರೆಸ್ಸಿನ ಜೊತೆಜೊತೆಗೇ ಸಾಮಾಜಿಕ ಪರಿಷತ್ತು ಕೂಡ ಹುಟ್ಟಿಕೊಂಡಿತು. ದೇಶದ ರಾಜಕೀಯ ಸಂಘಟನೆಯಲ್ಲಿನ ನ್ಯೂನತೆಗಳನ್ನು ಗುರುತಿಸುವಲ್ಲಿ ಕಾಂಗ್ರೆಸ್ ತೊಡಗಿಕೊಂಡರೆ, ಸಾಮಾಜಿಕ ಪರಿಷತ್ತು ಹಿಂದೂ ಸಮಾಜದಲ್ಲಿನ ನ್ಯೂನತೆಗಳನ್ನು ತೊಡೆದುಹಾಕುವುದರಲ್ಲಿ ನಿರತವಾಗಿತ್ತು.

ಕೆಲ ಕಾಲ ಕಾಂಗ್ರೆಸ್ ಮತ್ತು ಪರಿಷತ್ತು ಒಂದೇ ಸಂಸ್ಥೆಯ ಎರಡು ವಿಭಾಗಗಳಂತೆ ಕೆಲಸ ಮಾಡಿದವು ಮತ್ತು ಒಂದೇ ಚಪ್ಪರದಡಿಯಲ್ಲಿ ತಮ್ಮ ವಾರ್ಷಿಕ ಅಧಿವೇಶನ ನಡೆಸುತಿದ್ದವು. ಆದರೆ, ಬಹು ಬೇಗನೆ ಇವೆರಡೂ ಬೇರೆ-ಬೇರೆ ಪಕ್ಷಗಳಾಗಿ ಬೆಳೆದವು. ಒಂದು ರಾಜಕೀಯ ಸುಧಾರಣಾ ಪಕ್ಷ, ಇನ್ನೊಂದು ಸಮಾಜ ಸುಧಾರಣಾ ಪಕ್ಷ. ಎರಡರ ನಡುವೆ ಅಸಹನೆ, ತಿಕ್ಕಾಟವಿತ್ತು. ರಾಜಕೀಯ ಸುಧಾರಣಾ ಪಕ್ಷವು ರಾಷ್ಟ್ರೀಯ ಕಾಂಗ್ರೆಸ್ ಅನ್ನು ಬೆಂಬಲಿಸಿದರೆ, ಸಮಾಜ ಸುಧಾರಣಾ ಪಕ್ಷವು ಸಾಮಾಜಿಕ ಪರಿಷತ್ತನ್ನು ಬೆಂಬಲಿಸಿತು. ಹೀಗೆ, ಎರಡೂ ಪಕ್ಷಗಳು ಒಂದನ್ನೊಂದು ವಿರೋಧಿಸುತ್ತಲೇ ಬೆಳೆದವು.

ಈ ಲೇಖನ ಓದಿದ್ದೀರಾ?: ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 2 | 'ಪದಗಳಿಗೆ ಹೆದರುವವರು ಮೂರ್ಖರು ಮಾತ್ರ ಎಂದೆಣಿಸಿದ್ದೆ'

ಸಾಮಾಜಿಕ ಸುಧಾರಣೆ ಮತ್ತು ರಾಜಕೀಯ ಸುಧಾರಣೆ ಇವೆರಡರಲ್ಲಿ ಯಾವುದು ಮೊದಲಾಗಬೇಕು ಎಂಬುದು ವಿವಾದದ ಮುಖ್ಯ ವಿಷಯವಾಗಿತ್ತು. ಒಂದು ದಶಕದವರೆಗೆ ಎರಡೂ ಪಕ್ಷಗಳು ಸಮಬಲವಾಗಿಯೇ ಇದ್ದವು. ಇಬ್ಬರ ನಡುವೆ ಘರ್ಷಣೆ ಏರ್ಪಡುತ್ತಿದ್ದರೂ, ಯಾರಿಗೂ ಪೂರ್ಣ ಪ್ರಮಾಣದ ಯಶಸ್ಸು ದೊರಕಿರಲಿಲ್ಲ. ಆದರೂ, ಸಾಮಾಜಿಕ ಪರಿಷತ್ತಿನ ಭವಿಷ್ಯ ಆಶಾದಾಯಕವಾಗಿಲ್ಲ ಎಂಬುದು ಮಾತ್ರ ನಿಚ್ಚಳವಾಗಿತ್ತು.

ವಿದ್ಯಾವಂತ ಹಿಂದೂಗಳಲ್ಲಿ ಹೆಚ್ಚಿನ ಜನ ರಾಜಕೀಯವಾಗಿ ಮುನ್ನಡೆಯಲು ಬಯಸುತ್ತಿದ್ದಾರೆ  ಮತ್ತು ಸಮಾಜ ಸುಧಾರಣೆಯ ಬಗ್ಗೆ ಅಸಡ್ಡೆ ಹೊಂದಿದ್ದಾರೆ. ಮೇಲಾಗಿ, ಕಾಂಗ್ರೆಸ್‌ನ ಸಭೆಗೆ ಹಾಜರಾಗುತ್ತಿರುವವರ ಸಂಖ್ಯೆ ದೊಡ್ಡದಾಗಿದೆ, ಭಾಗವಹಿಸದಿದ್ದರೂ ಅದರ ಬಗ್ಗೆ ಸಹಾನುಭೂತಿ ಹೊಂದಿರುವವವರ ಸಂಖ್ಯೆ ಇನ್ನೂ ದೊಡ್ಡದಾಗಿದೆ. ಆದರೆ, ಸಾಮಾಜಿಕ ಪರಿಷತ್ತಿನ ಸಭೆಗೆ ಭಾಗವಹಿಸುತ್ತಿರುವವರ ಸಂಖ್ಯೆ ತೀರಾ ಕಡಿಮೆ ಎಂದು ಸಾಮಾಜಿಕ ಪರಿಷತ್ತಿನ ಸಭೆಗಳ ಅಧ್ಯಕ್ಷತೆ ವಹಿಸುತಿದ್ದವರು ಗೊಣಗುತ್ತಿದ್ದರು. ಜನರ ಈ ಅಸಡ್ಡೆ ಮತ್ತು ದಿನೇ-ದಿನೇ ಕಡಿಮೆಯಾಗುತಿದ್ದ ಜನರ ಭಾಗವಹಿಸುವಿಕೆಯಿಂದಾಗಿ ಮುಂದೆ ರಾಜಕಾರಣಿಗಳಲ್ಲಿಯೂ ಪರಿಷತ್ತಿನ ಬಗ್ಗೆ ತಿರಸ್ಕಾರದ ಭಾವನೆ ಕಂಡುಬಂದಿತು.

ತಿಲಕರ ನೇತೃತ್ವದಲ್ಲಿ, ಸೌಜನ್ಯದ ನಡೆಯಾಗಿ ಪರಿಷತ್ತಿಗೆ ತನ್ನ ಚಪ್ಪರವನ್ನು ಬಳಸಲು ನೀಡಿದ್ದ ಅನುಮತಿಯನ್ನು ಕಾಂಗ್ರೆಸ್ ಹಿಂಪಡೆಯಲಾಯಿತು. ವಿರಸವು ಯಾವ ಮಟ್ಟಿಗೆ ಹೋಗಿತ್ತೆಂದರೆ, ಪರಿಷತ್ತು ತನ್ನದೇ ಚಪ್ಪರವನ್ನು ಹಾಕಲು ಸಿದ್ಧವಾದಾಗ ಅದನ್ನು ಸುಟ್ಟುಹಾಕುವ ಬೆದರಿಕೆಯೂ ವಿರೋಧಿಗಳಿಂದ ಬಂದಿತು. ಹೀಗೆ, ಕಾಲಕ್ರಮೇಣ ರಾಜಕೀಯ ಸುಧಾರಣೆಯ ಪರವಾಗಿದ್ದ ಪಕ್ಷ ಗೆದ್ದು, ಸಾಮಾಜಿಕ ಪರಿಷತ್ತು ಕಣ್ಮರೆಯಾಗಿ ಜನಮಾನಸದಿಂದ ಮರೆಯಾಯಿತು. 1892ರಲ್ಲಿ ಅಲಹಾಬಾದ್‌ನಲ್ಲಿ ನಡೆದ ಕಾಂಗ್ರೆಸ್‌ನ ಎಂಟನೇ ಅಧಿವೇಶನದ ಅಧ್ಯಕ್ಷರಾಗಿ ಶ್ರೀ ಡಬ್ಲ್ಯೂ ಸಿ ಬ್ಯಾನರ್ಜಿ ಮಾಡಿದ ಭಾಷಣವು, ಸಾಮಾಜಿಕ ಪರಿಷತ್ತಿನ ಅಂತ್ಯಕ್ರಿಯೆಗೆ ಹಾಡಿದ ಚರಮಗೀತೆಯಂತಿತ್ತು. ಅದು ಕಾಂಗ್ರೆಸ್‌ನ ಧೋರಣೆಯನ್ನು ಚೆನ್ನಾಗಿ ಧ್ವನಿಸುವುದರಿಂದ ಅದರಲ್ಲಿನ ಭಾಗವೊಂದನ್ನು ಇಲ್ಲಿ ಹೇಳಬಯಸುತ್ತೇನೆ.

W C Banerjee
ಡಬ್ಲ್ಯೂ ಸಿ ಬ್ಯಾನರ್ಜಿ

ಬ್ಯಾನರ್ಜಿ ಹೇಳುತ್ತಾರೆ: "ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ನಾವು ಸುಧಾರಿಸುವವರೆಗೆ ರಾಜಕೀಯ ಸುಧಾರಣೆಗೆ ನಾವು ಅರ್ಹರಲ್ಲ ಎಂದು ಹೇಳುವವರ ಬಗ್ಗೆ ನನ್ನ ಬಳಿ ಸಮಯವಿಲ್ಲ. ಇವೆರಡರ ನಡುವಿನ ಸಂಬಂಧವೇನೆಂಬುದು ನನಗಂತೂ ಕಾಣದು. ನಮ್ಮಲ್ಲಿ ವಿಧವೆಯರ ಪುನರ್ ವಿವಾಹವಾಗುತ್ತಿಲ್ಲ, ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಹೆಣ್ಣುಮಕ್ಕಳಿಗೆ ಬಹಳ ಬೇಗನೆ ಮದುವೆ ಮಾಡಲಾಗುತ್ತಿದೆ ಎಂದ ಮಾತ್ರಕ್ಕೆ ನಾವು ರಾಜಕೀಯ ಸುಧಾರಣೆಗೆ ಅರ್ಹರಲ್ಲವೇ?  ಅಥವಾ ನಾವು ಸ್ನೇಹಿತರನ್ನು ಭೇಟಿಯಾಗುವಾಗ ನಮ್ಮ ಹೆಂಡತಿ, ಹೆಣ್ಣುಮಕ್ಕಳು ನಮ್ಮ ಜೊತೆಯಾಗುವುದಿಲ್ಲ ಎಂದೋ? ನಾವು ನಮ್ಮ ಹೆಣ್ಣುಮಕ್ಕಳನ್ನು ಆಕ್ಸ್‌ಫರ್ಡ್ ಮತ್ತು ಕೇಂಬ್ರಿಡ್ಜ್‌ಗೆ ಕಳುಹಿಸುವುದಿಲ್ಲ ಎಂದೋ?” (ಚಪ್ಪಾಳೆ...)

ರಾಜಕೀಯ ಸುಧಾರಣೆಗೆ ಸಂಬಂಧಪಟ್ಟಂತೆ ಬ್ಯಾನರ್ಜಿಯವರ ವಾದವನ್ನು ನಿಮ್ಮ ಮುಂದಿಟ್ಟಿದ್ದೇನೆ. ಗೆಲುವು ಕಾಂಗ್ರೆಸ್ ಪಾಲಾಯಿತು ಎಂದು ಹಲವರು ಸಂತಸಗೊಂಡಿರಬಹುದು. ಆದರೆ, ಸಮಾಜ ಸುಧಾರಣೆಯ ಪ್ರಾಮುಖ್ಯತೆಯನ್ನು ನಂಬುವವರು ಕೇಳಬಹುದು, ಬ್ಯಾನರ್ಜಿಯವರಂಥವರ ವಾದವೇ ಅಂತಿಮವೇ? ಸರಿದಾರಿಯಲ್ಲಿದ್ದವರಿಗೇ ಗೆಲುವು ದಕ್ಕಿತು ಎನ್ನುವುದನ್ನು ಇದು ಧೃಡಪಡಿಸುತ್ತದೆಯೇ? ಸಾಮಾಜಿಕ ಸುಧಾರಣೆಯು ರಾಜಕೀಯ ಸುಧಾರಣೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎನ್ನುವುದನ್ನು ಇದು ನಿರ್ಣಾಯಕವಾಗಿ ಸಾಬೀತುಪಡಿಸುತ್ತದೆಯೇ? ನಾನು ಪ್ರಕರಣದ ಇನ್ನೊಂದು ಮಗ್ಗುಲನ್ನು ಹೇಳಿದರೆ, ನಮಗದು ವಿಷಯವನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗುತ್ತದೆ. ವಾಸ್ತವದ ನಿರೂಪಣೆಗಾಗಿ  ಅಸ್ಪೃಶ್ಯರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ ಎಂಬುದರ ಕುರಿತಾಗಿ ನಿಮ್ಮ ಗಮನ ಸೆಳೆಯುತ್ತೇನೆ.

ಮುಂದುವರಿಯುವುದು...

ಮುಖ್ಯ ಚಿತ್ರ: ಸಂಸತ್ ಭವನಕ್ಕೆ ಆಗಮಿಸಿದ ಅಂಬೇಡ್ಕರ್ | ಕೃಪೆ: ಚಿಂತನೈ ಜಾಲತಾಣ
ನಿಮಗೆ ಏನು ಅನ್ನಿಸ್ತು?
1 ವೋಟ್
eedina app