ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 5 | ಅಸ್ಪೃಶ್ಯತೆಯ ಅವತಾರದ ನಾಲ್ಕು ನಿದರ್ಶನ

Ambedkar

ಅಂಬೇಡ್ಕರ್ ಅವರ 'Annihilation of Caste' ಪುಸ್ತಕದ ಅನುವಾದ ಸರಣಿ ಇದು. ಅವರು ಲಾಹೋರ್‌ನಲ್ಲಿ ಮಾಡಬೇಕಿದ್ದ ಭಾಷಣದಲ್ಲಿನ ನೇರಮಾತು ಕೆಲವರಿಗೆ ಹಿಡಿಸದೆ ವಿವಾದ ಆಗುತ್ತದೆ. ಭಾಷಣದಲ್ಲಿ ಒಂದಕ್ಷರವನ್ನೂ ಬದಲಿಸಲಾಗದು ಎನ್ನುತ್ತಾರೆ ಅಂಬೇಡ್ಕರ್. ಕೊನೆಗೆ ಸಮ್ಮೇಳನ ರದ್ದಾಗುತ್ತದೆ. ಹಾಗಾದರೆ, ಭಾಷಣದಲ್ಲಿ ಏನಿತ್ತು? ಇಲ್ಲಿದೆ ಮುಂದುವರಿದ ಭಾಗ

ಪೇಶ್ವೆಗಳ ಆಡಳಿತದ ಮರಾಠ ರಾಜ್ಯದಲ್ಲಿ, ಹಿಂದೂವೊಬ್ಬ ಸಾರ್ವಜನಿಕ ಬೀದಿಯಲ್ಲಿ  ನಡೆದುಕೊಂಡು ಬರುತ್ತಿದ್ದರೆ ಅಸ್ಪೃಶ್ಯನ ನೆರಳು ಅವನಿಗೆ ಮೈಲಿಗೆ ಮಾಡುತ್ತದೆ ಎಂಬ ಕಾರಣಕ್ಕೆ,  ಅಸ್ಪೃಶ್ಯನೆನಿಸಿದವನು ಅಲ್ಲಿ ನಡೆದಾಡಲು ಅನುಮತಿ ಇರಲಿಲ್ಲ. ಎಲ್ಲೋ ತಪ್ಪಾಗಿ ತನ್ನ ಸ್ಪರ್ಶದಿಂದ ಹಿಂದೂವನ್ನು ಮೈಲಿಗೆ ಮಾಡದಂತೆ ತಡೆಯಲು ಅಸ್ಪೃಶ್ಯನಾದ ವ್ಯಕ್ತಿಯು ಮಣಿಕಟ್ಟು ಅಥವಾ ಕುತ್ತಿಗೆಯಲ್ಲಿ ಕಪ್ಪು ದಾರವನ್ನು ಗುರುತು ಅಥವಾ ಚಿಹ್ನೆಯಾಗಿ ಧರಿಸಬೇಕಾಗಿತ್ತು. ಪೇಶ್ವೆಯ ರಾಜಧಾನಿಯಾದ ಪೂನಾದಲ್ಲಿ, ಅಸ್ಪೃಶ್ಯನು ತನ್ನ ಸೊಂಟದಿಂದ ನೇತಾಡುವಂತೆ ಪೊರಕೆಯೊಂದನ್ನು ಕಟ್ಟಿಕೊಂಡು ಹೋಗಬೇಕಾಗಿತ್ತು. ಅವನ ಹಿಂದುಗಡೆಯಿಂದ ಬರುವ ಹಿಂದೂವಿಗೆ ಮೈಲಿಗೆಯಾಗಬಾರದೆಂದು ತಾನು ನಡೆದ ದಾರಿಯ ಧೂಳನ್ನು ಗುಡಿಸುತ್ತ ನಡೆಯಬೇಕಾಗಿತ್ತು. ಅದೇ ಪೂನಾದಲ್ಲಿ, ಅಸ್ಪೃಶ್ಯನು ತಾನು ಹೋದಲ್ಲೆಲ್ಲ ಕುತ್ತಿಗೆಯಲ್ಲಿ ನೇತುಹಾಕಿದ ಮಣ್ಣಿನ ಮಡಕೆಯೊಂದನ್ನು ಒಯ್ಯಬೇಕಾಗಿತ್ತು. ಅಲ್ಲಿ ನಡೆಯುವ ಹಿಂದೂಗಳಿಗೆ ಮೈಲಿಗೆಯಾಗದ ಹಾಗೆ ತನ್ನ ಉಗುಳನ್ನು ಹಿಡಿದಿಟ್ಟುಕೊಳ್ಳಬೇಕಾಗಿತ್ತು.

ಇತ್ತೀಚಿನ ಸಂಗತಿಯನ್ನೇ ಹೇಳುವೆ; ಇದಕ್ಕಾಗಿ ಮಧ್ಯ ಭಾರತದ ಅಸ್ಪೃಶ್ಯ ಸಮುದಾಯವಾದ ಬಲಾಯಿಗಳ ಮೇಲೆ ಹಿಂದೂಗಳು ನಡೆಸುತ್ತಿರುವ ದೌರ್ಜನ್ಯವನ್ನು ಉಲ್ಲೇಖಿಸಲು ಬಯಸುವೆ. 1928, ಜನವರಿ 4ರ 'ಟೈಮ್ಸ್ ಆಫ್ ಇಂಡಿಯಾ'ದಲ್ಲಿ ಇದರ ವರದಿಯನ್ನು ನೀವು ಕಾಣಬಹುದು. ಪತ್ರಿಕೆಯಲ್ಲಿ ವರದಿ ಮಾಡಿರುವಂತೆ, ಸವರ್ಣೀಯ ಹಿಂದೂಗಳು ಅಂದರೆ ಕನಾರಿಯಾ, ಬಿಛೋಲಿ ಹಾಫ್ಸೀ, ಬಿಛೋಲಿ ಮರ್ದಾನಾ ಹಾಗೂ ಇಂದೋರ್ ಜಿಲ್ಲೆಯ (ಇಂದೋರ್ ರಾಜ್ಯದ) ಸುಮಾರು 15 ಹಳ್ಳಿಗಳ ಪಟೇಲ್ ಮತ್ತು ಪಟ್ವಾರಿ ಸೇರಿದಂತೆ ಕಲೋಟರು, ರಜಪೂತರು ಹಾಗೂ ಬ್ರಾಹ್ಮಣರು, ತಮ್ಮ ಹಳ್ಳಿಗಳ ಬಲಾಯಿಗಳು ತಮ್ಮ ನಡುವೆ ವಾಸಿಸಲು ಬಯಸಿದರೆ ಅವರು ಈ ಕೆಳಗಿನ ನಿಯಮಗಳನ್ನು ಅನುಸರಿಸಬೇಕು ಎಂದು ತಾಕೀತು ಮಾಡಿದ್ದರು:

  1. ಚಿನ್ನದ ಜರಿಯುಳ್ಳ ಪಗಡಿ ಧರಿಸಬಾರದು.
  2. ಬಣ್ಣ-ಬಣ್ಣದ, ಅಲಂಕಾರಿಕ ಅಂಚು ಹೊಂದಿರುವ ಧೋತಿ ಧರಿಸಬಾರದು.
  3. ಹಿಂದೂವೊಬ್ಬ ಸತ್ತರೆ, ಸತ್ತವನ ಸಂಬಂಧಿಕರು ಎಷ್ಟೇ ದೂರದಲ್ಲಿದ್ದರೂ, ಬಲಾಯಿಗಳು ಸಾವಿನ ಸುದ್ದಿಯನ್ನು ಸಂಬಂಧಿಕರಿಗೆ ತಿಳಿಸಲೇಬೇಕು.
  4. ಎಲ್ಲ ಹಿಂದೂ ವಿವಾಹಗಳಲ್ಲಿ, ಮೆರವಣಿಗೆಯ ಮೊದಲು ಮತ್ತು ಮದುವೆಯ ಸಂಧರ್ಭದಲ್ಲಿ ಸಂಗೀತ ನುಡಿಸಬೇಕು.
  5. ಬಲಾಯಿ ಮಹಿಳೆಯರು ಚಿನ್ನ ಅಥವಾ ಬೆಳ್ಳಿಯ ಆಭರಣ ಧರಿಸಬಾರದು. ಅಲಂಕಾರಿಕ ನಿಲುವಂಗಿಗಳು ಅಥವಾ ಜಾಕೆಟ್‌ಗಳನ್ನು ಧರಿಸಬಾರದು.
  6. ಬಲಾಯಿ ಮಹಿಳೆಯರು ಎಲ್ಲ ಹಿಂದೂ ಮಹಿಳೆಯರ ಹೆರಿಗೆಯ ಸಂದರ್ಭದಲ್ಲಿ ಸೇವೆಗೆ ಹಾಜರಿರಬೇಕು.
  7. ಯಾವುದೇ ಸಂಭಾವನೆ ಕೇಳದೆ ಸೇವೆ ಸಲ್ಲಿಸಬೇಕು ಮತ್ತು ಹಿಂದೂಗಳು ನೀಡಲಿಚ್ಛಿಸುವುದನ್ನು ಸ್ವೀಕರಿಸಬೇಕು.
  8. ಈ ಷರತ್ತುಗಳನ್ನು ಪಾಲಿಸಲು ಒಪ್ಪದ ಬಲಾಯಿಗಳು ಹಳ್ಳಿಯನ್ನು ತೊರೆಯಬೇಕು.

ಹಿಂದಿನ ಕಂತು ಓದಲು ಇಲ್ಲಿ ಕ್ಲಿಕ್ ಮಾಡಿ: ಸಾಮಾಜಿಕ ಪರಿಷತ್ತಿಗೆ ಕೊನೆಯ ಮೊಳೆ ಹೊಡೆದ ಡಬ್ಲ್ಯೂ ಸಿ ಬ್ಯಾನರ್ಜಿ

ಬಲಾಯಿಗಳು ಈ ಕರಾರಿಗೆ ಒಪ್ಪಲಿಲ್ಲ. ಹಿಂದೂಗಳು ಹಲ್ಲು ಮಸೆಯತೊಡಗಿದರು. ಬಲಾಯಿಗಳಿಗೆ ಗ್ರಾಮದ ಬಾವಿಗಳಿಂದ ನೀರು ತೆಗೆಯುವ ಅವಕಾಶ ನಿರಾಕರಿಸಲಾಯಿತು. ಅವರಿಗೆ ತಮ್ಮ ದನಗಳನ್ನು ಮೇಯಿಸಲು ಅವಕಾಶ ಕೊಡಲಿಲ್ಲ. ಬಲಾಯಿಗಳು ಹಿಂದೂಗಳ ಒಡೆತನದ ಹೊಲಗಳ ಮೂಲಕ ಹಾದುಹೋಗುವುದನ್ನು ನಿಷೇಧಿಸಲಾಯಿತು. ಪರಿಣಾಮವಾಗಿ, ಸುತ್ತಲೂ ಹಿಂದೂಗಳ ಹೊಲಗಳಿದ್ದರೆ, ಅವುಗಳ ನಡುವಿನ ತನ್ನ ಹೊಲಕ್ಕೆ ಬಲಾಯಿ ರೈತ ಹೋಗಲು ಸಾಧ್ಯವಿರಲಿಲ್ಲ. ಹಿಂದೂಗಳು ತಮ್ಮ ಜಾನುವಾರುಗಳನ್ನು ಬಲಾಯಿಗಳ ಹೊಲಗಳಲ್ಲಿ ಮೇಯಲು ಬಿಟ್ಟರು.

ಕಡೆಗೆ ಬಲಾಯಿಗಳು ಈ ಕಿರುಕುಳಗಳ ವಿರುದ್ಧ ರಾಜ ದರ್ಬಾರಿಗೆ ಮನವಿ ಸಲ್ಲಿಸಿದರು. ಆದರೆ, ಅವರಿಗೆ ಸಕಾಲಿಕ ಸ್ಪಂದನೆ ಸಿಗಲೇ ಇಲ್ಲ. ದಬ್ಬಾಳಿಕೆ ಮುಂದುವರಿಯಿತು. ಬೇಸತ್ತ ಬಲಾಯಿ ಕುಟುಂಬಗಳು, ಹಲವಾರು ತಲೆಮಾರುಗಳಿಂದ ತಮ್ಮ ಪೂರ್ವಜರು ವಾಸಿಸುತ್ತ ಬಂದಿದ್ದ ಮನೆ ತೊರೆದು, ಮಡದಿ-ಮಕ್ಕಳೊಂದಿಗೆ ಭೂಪಾಲ, ಗ್ವಾಲಿಯರ್ ಮೊದಲಾದ ನೆರೆರಾಜ್ಯಗಳ ಧಾರ್, ದೇವಾಸ್, ಬಗಲಿ ಗ್ರಾಮಗಳಿಗೂ, ಇತರೆ ರಾಜ್ಯಗಳಿಗೂ ವಲಸೆ ಹೋಗಬೇಕಾಯಿತು. ಹೊಸ ನೆಲೆಗಳಲ್ಲಿ ಅವರಿಗೇನಾಯಿತು ಎನ್ನುವುದನ್ನು ಸದ್ಯ ಚರ್ಚೆಯಿಂದ ಹೊರಗಿಡೋಣ.

Image
dalit community
ಅಸ್ಪೃಶ್ಯತೆಯ ಕರಾಳ ಮುಖಗಳನ್ನು ಅನಾವರಣ ಮಾಡುವ 'ದಲಿತ್ ಕ್ಯಾಮರಾ' ಎಂಬ ಯೂಟ್ಯೂಬ್ ವಾಹಿನಿಯಲ್ಲಿ ಅಳಲು ತೋಡಿಕೊಂಡ ದಲಿತ ಮಹಿಳೆ

ಗುಜರಾತ್ ರಾಜ್ಯದ ಕವಿಥಾ ಎಂಬ ಊರಿನಲ್ಲಿ ಕಳೆದ ವರ್ಷವೇ ನಡೆದ ಒಂದು ಘಟನೆ. ಸರ್ಕಾರ ನಡೆಸುವ, ಎಲ್ಲರಿಗೂ ಸಮಾನ ಅವಕಾಶವಿರುವ ಹಳ್ಳಿಯ ಶಾಲೆಗೆ ಅಸ್ಪೃಶ್ಯರು ತಮ್ಮ ಮಕ್ಕಳನ್ನು ಕಳುಹಿಸಲು ಒತ್ತಾಯಿಸಬೇಡಿ ಎಂದು ಅಲ್ಲಿನ ಹಿಂದೂಗಳು ತಾಕೀತು ಮಾಡಿದರು. ಅಸ್ಪೃಶ್ಯರು, ಹಿಂದೂಗಳ ಇಚ್ಛೆಗೆ ವಿರುದ್ಧವಾಗಿ ತಮಗಿರುವ ನಾಗರಿಕ ಹಕ್ಕನ್ನು ಚಲಾಯಿಸುವ ಧೈರ್ಯ ಮಾಡಿದಕ್ಕಾಗಿ ಏನೆಲ್ಲ ನೋವುಗಳನ್ನು ಅನುಭವಿಸಬೇಕಾಯಿತು ಎಂಬುದಕ್ಕೆ ಹೆಚ್ಚಿನ ವಿವರಣೆಯ ಅಗತ್ಯವಿಲ್ಲ.

ಇನ್ನೊಂದು ನಿದರ್ಶನ - ಗುಜರಾತಿನ ಅಹಮದಾಬಾದ್ ಜಿಲ್ಲೆಯ ಝಾನು ಗ್ರಾಮದಲ್ಲಿ ಸಂಭವಿಸಿದ್ದು. 1935ರ ನವೆಂಬರ್‌ನಲ್ಲಿ, ಕೆಲವು ಅನುಕೂಲಸ್ಥ ಕುಟುಂಬಗಳ ಅಸ್ಪೃಶ್ಯ ಮಹಿಳೆಯರು ಲೋಹದ ಮಡಕೆಗಳಲ್ಲಿ ನೀರು ತರಲಾರಂಭಿಸಿದರು. ಅಸ್ಪೃಶ್ಯರು ಲೋಹದ ಮಡಕೆಗಳನ್ನು ಬಳಸುವುದನ್ನು ತಮ್ಮ ಘನತೆಗೆ ಮಾಡಿದ ಅವಮಾನವೆಂದು ಭಾವಿಸಿದ ಹಿಂದೂಗಳು, ಅಗೌರವ ತೋರಿದರೆಂದು ಅಸ್ಪೃಶ್ಯ ಮಹಿಳೆಯರ ಮೇಲೆ ಹಲ್ಲೆ ನಡೆಸಿದರು.

ಈ ಲೇಖನ ಓದಿದ್ದೀರಾ?: 'ದೊಡ್ಡವರು' ದಯೆ ತೋರಿದರೆ ಮಾತ್ರ ದಲಿತರಿಗೆ ಕುಡಿಯುವ ನೀರು!

ಅದೇ ರೀತಿ ಇತ್ತೀಚೆಗೆ ವರದಿಯಾದ ಇನ್ನೊಂದು ಘಟನೆ ಜೈಪುರ ರಾಜ್ಯದ ಚಕ್ವಾರಾ ಗ್ರಾಮದ್ದು. ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳ ಪ್ರಕಾರ, ತೀರ್ಥಯಾತ್ರೆಯಿಂದ ಹಿಂದಿರುಗಿದ ಚಕ್ವಾರದ ಅಸ್ಪೃಶ್ಯನೊಬ್ಬ ಧಾರ್ಮಿಕ ಪುಣ್ಯಕಾರ್ಯವಾಗಿ ತನ್ನ ಗ್ರಾಮದ ಸಹವರ್ತಿ ಅಸ್ಪೃಶ್ಯರಿಗೆ ಭೋಜನ ಏರ್ಪಡಿಸಿದ್ದ. ಅತಿಥಿಗಳಿಗೆ ಭೂರಿ ಭೋಜನ ಬಡಿಸಲು ಬಯಸಿ, ಖಾದ್ಯಗಳಿಗೆ ಬೆಣ್ಣೆ-ತುಪ್ಪ ಬಳಸಲಾಗಿತ್ತು. ಆದರೆ, ಸಭಿಕರು ಆಹಾರ ಸೇವಿಸುತಿದ್ದಾಗ ನೂರಾರು ಸಂಖ್ಯೆಯಲ್ಲಿದ್ದ ಹಿಂದೂಗಳು ಲಾಠಿ ಹಿಡಿದು ಘಟನಾ ಸ್ಥಳಕ್ಕೆ ಧಾವಿಸಿ, ಆಹಾರವನ್ನು ಕಿತ್ತುಕೊಂಡು, ಹಾಳು ಮಾಡಿ, ಕೆಟ್ಟದಾಗಿ ನಿಂದಿಸಿ, ಹಲ್ಲೆ ಮಾಡಿದರು. ಬೆಚ್ಚಿಬಿದ್ದ ಅಸ್ಪೃಶ್ಯರು, ಬಡಿಸಿದ ಅನ್ನವನ್ನು ಬಿಟ್ಟು ಪ್ರಾಣಾಪಾಯದಿಂದ ಓಡಿಹೋದರು. ಅಮಾಯಕ ಅಸ್ಪೃಶ್ಯರ ಮೇಲಾದ ಇಂಥ ಮಾರಣಾಂತಿಕ ದಾಳಿಗೆ ಕಾರಣವೇನು? ಆತಿಥ್ಯ ನೀಡಿದ ಅಸ್ಪೃಶ್ಯ ತುಪ್ಪದೂಟ ಬಡಿಸುವಷ್ಟು ದಾಷ್ಟ್ಯವನ್ನು ತೋರಿದ್ದ ಮತ್ತು ಅವರ ಅಸ್ಪೃಶ್ಯ ಅತಿಥಿಗಳು ಅದರ ರುಚಿ ನೋಡುವಷ್ಟು ಮೂರ್ಖತನ ತೋರಿದ್ದರು ಎಂಬ ಕಾರಣ ನೀಡಲಾಯಿತು.

ಶ್ರೀಮಂತರಿಗೆ ತುಪ್ಪವು ನಿಸ್ಸಂದೇಹವಾಗಿ ಸುಖವೇ. ಆದರೆ, ತುಪ್ಪ ಬಳಸುವುದು ಉನ್ನತ ಸಾಮಾಜಿಕ ಸ್ಥಾನಮಾನದ ಗುರುತು ಎಂದು ಯಾರೂ ಭಾವಿಸುವುದಿಲ್ಲ. ಚಕ್ವಾರದ ಹಿಂದೂಗಳು ಬೇರೆ ರೀತಿಯಲ್ಲಿ ಯೋಚಿಸಿದರು. ಅವರ ಪ್ರಕಾರ, ನ್ಯಾಯಯುತವಾದ ಕೋಪದಲ್ಲಿ ಅಸ್ಪೃಶ್ಯರು ಮಾಡಿದ ತಪ್ಪಿಗೆ ಪ್ರತೀಕಾರ ತೀರಿಸಿಕೊಂಡರು, ಅಸ್ಪೃಶ್ಯರು ತುಪ್ಪವನ್ನು ತಮ್ಮ ಆಹಾರದ ವಸ್ತುವಾಗಿ ಪರಿಗಣಿಸಿ ಅವಮಾನಿಸಿದರು, ಅದು ಅವರದಲ್ಲ ಎಂದು ಅವರಿಗೆ ತಿಳಿದಿರಬೇಕಿತ್ತು; ಏಕೆಂದರೆ, ಅದು ಹಿಂದೂಗಳ ಗೌರವ, ಪ್ರತಿಷ್ಠೆಯ ಸಂಕೇತವಾಗಿತ್ತು. ಇದರರ್ಥ, ಅಸ್ಪೃಶ್ಯನು ತುಪ್ಪವನ್ನು ಖರೀದಿಸಲು ಶಕ್ತನಾಗಿದ್ದರೂ ಅದನ್ನು ಬಳಸಬಾರದು. ಏಕೆಂದರೆ, ಅದು ಹಿಂದೂಗಳ ವಿರುದ್ಧದ ದಾಷ್ಟ್ಯದ ನಡವಳಿಕೆ! ಇದು ನಡೆದದ್ದು 1936ರ ಏಪ್ರಿಲ್ 1ರಂದು.

ಮುಂದುವರಿಯುವುದು...
ನಿಮಗೆ ಏನು ಅನ್ನಿಸ್ತು?
2 ವೋಟ್