ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 6 | ಯಾವುದೇ ಒಂದು ವರ್ಗ ಮತ್ತೊಂದು ವರ್ಗವನ್ನು ಆಳಲು ಯೋಗ್ಯವಲ್ಲ

Ambedkar 4

ಅಂಬೇಡ್ಕರ್ ಅವರ 'Annihilation of Caste' ಪುಸ್ತಕದ ಅನುವಾದ ಸರಣಿ ಇದು. ರಾಜಕೀಯ ಸುಧಾರಣಾ ಪಕ್ಷದ ಎದುರು ಸಮಾಜ ಸುಧಾರಣಾ ಪಕ್ಷ ಮಂಡಿಯೂರಿದ್ದು ಏಕೆ? ಸಮಾಜ ಸುಧಾರಕರು ಎದುರಿಸುತ್ತಿದ್ದ ಸಮಸ್ಯೆಗಳೇನು? ರಾಜಕೀಯ ಸುಧಾರಣಾ ಪಕ್ಷ ಮೇಲುಗೈ ಸಾಧಿಸಲು ಯಾವ ಸಂಗತಿಗಳು ಕಾರಣವಾದವು ಎಂಬ ಕುರಿತ ಚರ್ಚೆ ಇಲ್ಲಿದೆ

ಈವರೆಗೆ ವಾಸ್ತವವನ್ನು ಹೇಳಿರುವುದರಿಂದ ಈಗ ಸಮಾಜ ಸುಧಾರಣೆಯ ವಿಷಯವನ್ನು ಎತ್ತಿಕೊಳ್ಳೋಣ. ಅದಕ್ಕಾಗಿ, ಸನ್ಮಾನ್ಯ ಬ್ಯಾನರ್ಜಿಯವರನ್ನು ಅನುಸರಿಸಿ, ಎಷ್ಟು ಸಾಧ್ಯವೋ ಅಷ್ಟು ರಾಜಕೀಯ ಮನೋಭಾವದ ಹಿಂದೂಗಳನ್ನು ಕೇಳಬಯಸುವುದು ಏನೆಂದರೆ, “ನಿಮ್ಮ ಸ್ವಂತ ದೇಶ  ಬಾಂಧವರಾದ ಅಸ್ಪೃಶ್ಯರ ಒಂದು ದೊಡ್ಡ ವರ್ಗಕ್ಕೆ ಸಾರ್ವಜನಿಕ ಶಾಲೆಗಳಲ್ಲಿ ಪ್ರವೇಶ ನಿರಾಕರಿಸುತ್ತಿರುವ ನೀವು ರಾಜಕೀಯ ಅಧಿಕಾರಕ್ಕೆ ಯೋಗ್ಯರೇ? ಅವರಿಗೆ ಸಾರ್ವಜನಿಕ ಬಾವಿಗಳನ್ನು ಬಳಸಲು ಅವಕಾಶ ನೀಡದ ನೀವು ರಾಜಕೀಯ ಅಧಿಕಾರಕ್ಕೆ ಯೋಗ್ಯರೇ? ಅವರಿಗೆ ಸಾರ್ವಜನಿಕ ಬೀದಿಗಳನ್ನು ಬಳಸಲು ಅನುಮತಿ ನೀಡದ ನೀವು ರಾಜಕೀಯ ಅಧಿಕಾರಕ್ಕೆ ಅರ್ಹರೇ? ಅವರು ಇಷ್ಟಪಡುವ ಉಡುಪು ಅಥವಾ ಆಭರಣಗಳನ್ನು ಧರಿಸಲು ಬಳಸಲು ಅನುಮತಿ ನೀಡದ ನೀವು ರಾಜಕೀಯ ಅಧಿಕಾರಕ್ಕೆ ಅರ್ಹರೇ? ಅವರು ಇಷ್ಟಪಡುವ ಯಾವುದೇ ಆಹಾರವನ್ನು ತಿನ್ನಲು ಅನುಮತಿ ನೀಡದ ನೀವು ರಾಜಕೀಯ ಅಧಿಕಾರಕ್ಕೆ ಅರ್ಹರೇ?” ಇಂತಹ ಪ್ರಶ್ನೆಗಳ ಸರಮಾಲೆಯನ್ನೇ ನಾನು ಕೇಳಬಲ್ಲೆ. ಆದರೆ ಇಷ್ಟು ಸಾಕು. ಸನ್ಮಾನ್ಯ ಬ್ಯಾನರ್ಜಿಯವರ ಉತ್ತರ ಏನಾಗಿರಬಹುದು ಎಂದು ನನಗೆ ಕುತೂಹಲವಿದೆ. ಯಾವುದೇ ಸಂವೇದನಾಶೀಲ ವ್ಯಕ್ತಿ ಇವಕ್ಕೆ ಸಕಾರಾತ್ಮಕ ಉತ್ತರ ನೀಡುವ ಧೈರ್ಯ ತೋರಲಾರ ಎಂಬುದು ನನಗೆ ಖಾತ್ರಿಯಿದೆ. ಒಂದು ದೇಶ ಇನ್ನೊಂದು ದೇಶವನ್ನು ಆಳಲು ಯೋಗ್ಯವಲ್ಲ ಎಂಬ ಮಿಲ್ ತತ್ತ್ವವನ್ನು ಪದೇಪದೆ ಹೇಳುವ ಪ್ರತಿಯೊಬ್ಬ ಕಾಂಗ್ರೆಸ್ಸಿಗರು, ಒಂದು ವರ್ಗವು ಮತ್ತೊಂದು ವರ್ಗವನ್ನು ಆಳಲು ಯೋಗ್ಯವಲ್ಲ ಎಂಬುದನ್ನೂ ಒಪ್ಪಿಕೊಳ್ಳಬೇಕು.

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 5 | ಅಸ್ಪೃಶ್ಯತೆಯ ಅವತಾರದ ನಾಲ್ಕು ನಿದರ್ಶನ

ಹಾಗಾದರೆ, ಸಮಾಜ ಸುಧಾರಣಾ ಪಕ್ಷ ಹೇಗೆ ಸೋತಿತು? ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು, ಸಮಾಜ ಸುಧಾರಕರು ಯಾವ ರೀತಿಯ ಸಾಮಾಜಿಕ ಸುಧಾರಣೆಗಾಗಿ ಆಂದೋಲನ ನಡೆಸುತ್ತಿದ್ದರು ಎಂಬುದನ್ನು ಗಮನಿಸುವುದು ಅವಶ್ಯ. ಇದಕ್ಕೆ ಸಂಬಂಧಪಟ್ಟಂತೆ, ಹಿಂದೂ ಕೌಟುಂಬಿಕ ಸುಧಾರಣೆ ಮತ್ತು ಹಿಂದೂ ಸಮಾಜದ ಮರುಸಂಘಟನೆ/ ಮರುನಿರ್ಮಾಣ ಇವೆರಡರ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಮುಖ್ಯ.

ಮೊದಲನೆಯದು, ವಿಧವಾ ಮರುವಿವಾಹ, ಬಾಲ್ಯ ವಿವಾಹ ಇತ್ಯಾದಿಗಳಿಗೆ ಸಂಬಂಧಿಸಿದ್ದರೆ; ಎರಡನೆಯದು, ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ಸಂಬಂಧಿಸಿದ್ದು. ಸಾಮಾಜಿಕ ಸಮ್ಮೇಳನವು ಮುಖ್ಯವಾಗಿ ಸವರ್ಣೀಯ  ಹಿಂದೂ ಕೌಟುಂಬಿಕ ಸುಧಾರಣೆಯಲ್ಲಿ ಆಸಕ್ತಿ ಹೊಂದಿದ್ದ ಸಂಸ್ಥೆಯಾಗಿತ್ತು. ಇದು ಬಹುಪಾಲು ಅರಿತ ಸವರ್ಣೀಯ ಹಿಂದೂಗಳನ್ನು ಒಳಗೊಂಡಿತ್ತು, ಅವರು ಜಾತಿ ನಿರ್ಮೂಲನೆಗಾಗಿ ಆಂದೋಲನದ ಅಗತ್ಯವೆಂದು ಭಾವಿಸಲಿಲ್ಲ ಅಥವಾ ಅವರಿಗೆ ಆಂದೋಲನ ಮಾಡುವ ಧೈರ್ಯವಿರಲಿಲ್ಲ. ತಾವು ಕಂಡು ಕೇಳಿದ್ದ, ಸ್ವತಃ ಅನುಭವಿಸಿದ್ದ ಬಲವಂತದ ವೈಧವ್ಯ ವ್ಯವಸ್ಥೆ, ಬಾಲ್ಯ ವಿವಾಹ ಮುಂತಾದ ಅನಿಷ್ಟಗಳನ್ನು ತೊಡೆದುಹಾಕಲು ಅವರಲ್ಲಿ ಸ್ವಾಭಾವಿಕವಾಗಿ ಹೆಚ್ಚಿನ ತುಡಿತವಿತ್ತು. ಹಾಗಾಗಿ, ಅವರು ಹಿಂದೂ ಸಮಾಜದ ಸುಧಾರಣೆಗೆ ಮುಂದಾಗಲಿಲ್ಲ. ಅವರ ಹೋರಾಟವು ಕೌಟುಂಬಿಕ ಸುಧಾರಣೆಯ ಪ್ರಶ್ನೆಯ ಸುತ್ತ ಕೇಂದ್ರೀಕೃತವಾಗಿತ್ತು. ಇದು ಜಾತಿ ವಿನಾಶದ ನೆಲೆಯ ಸಾಮಾಜಿಕ ಸುಧಾರಣೆಗೆ ಸಂಬಂಧಿಸಿಲ್ಲ. ಸುಧಾರಕರು ಎಂದಿಗೂ ಅದನ್ನು ಒಂದು ಸಮಸ್ಯೆ ಎಂದು ಭಾವಿಸಲಿಲ್ಲ. ಆ ಕಾರಣಕ್ಕಾಗಿಯೇ ಸಮಾಜ ಸುಧಾರಣಾ ಪಕ್ಷ ಸೋತಿತು.

ಈ ಲೇಖನ ಓದಿದ್ದೀರಾ?: ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 3 | 'ಹಿಂದೂಗಳು ನನ್ನ ಬಗ್ಗೆ ರೋಸಿಹೋಗಿದ್ದಾರೆಂದು ಗೊತ್ತು'

ವಾಸ್ತವದಲ್ಲಿ ಸಾಮಾಜಿಕ ಸುಧಾರಣೆಗಿಂತ ರಾಜಕೀಯ ಸುಧಾರಣೆಯು ಮೇಲುಗೈ ಸಾಧಿಸಿತು ಎಂಬ ಅಂಶವನ್ನು ಈ ವಾದವು ಬದಲಾಯಿಸಲು ಸಾಧ್ಯವಿಲ್ಲ ಎಂದು ನನಗೆ ಗೊತ್ತಿದೆ. ಆದರೆ, ವಾದವು ಹೆಚ್ಚಲ್ಲದಿದ್ದರೂ ತಕ್ಕಮಟ್ಟಿಗೆ ಮೌಲ್ಯಯುತವಾಗಿಯೇ ಇದೆ. ಸಮಾಜ ಸುಧಾರಕರು ತಮ್ಮ ಹೋರಾಟದಲ್ಲಿ ಯಾಕೆ ಸೋತರು ಎನ್ನುವುದನ್ನು ಇದು ವಿವರಿಸುತ್ತದೆ. ಸಮಾಜ ಸುಧಾರಣಾ ಪಕ್ಷದ ವಿರುದ್ಧ ರಾಜಕೀಯ ಸುಧಾರಣಾ ಪಕ್ಷವು ಗಳಿಸಿದ ಗೆಲುವು ಎಷ್ಟು ಸೀಮಿತವಾಗಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಲು ಇದು ನಮಗೆ ಸಹಾಯ ಮಾಡುತ್ತದೆ ಮತ್ತು ಸಾಮಾಜಿಕ ಸುಧಾರಣೆಯು ರಾಜಕೀಯ ಸುಧಾರಣೆಗಿಂತ ಮುಂಚಿತವಾಗಿರಬೇಕಾಗಿಲ್ಲ ಎಂದೆನಿಸುವುದು ಸಾಮಾಜಿಕ ಸುಧಾರಣೆಯನ್ನು  ಕೌಟುಂಬಿಕ ಸುಧಾರಣೆ ಎಂಬ ಸೀಮಿತಾರ್ಥದಲ್ಲಿ ಗ್ರಹಿಸಿದಾಗ. ಆದರೆ, ಇಡೀ ಸಮಾಜದ ಮರು ರಚನೆಯ ದೃಷ್ಟಿಯಿಂದ ನೋಡಿದಾಗ, ರಾಜಕೀಯ ಸುಧಾರಣೆಯು ಸಾಮಾಜಿಕ ಸುಧಾರಣೆಗಿಂತ ಮುಂಚೆ ಆಗಲು ಸಾಧ್ಯವಿಲ್ಲ ಎನ್ನುದು ನಿರ್ವಿವಾದ. ಏಕೆಂದರೆ, ರಾಜಕೀಯ ಸಂವಿಧಾನಗಳನ್ನು ರಚಿಸುವವರು ಸಾಮಾಜಿಕ ಶಕ್ತಿಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕು ಎಂಬುದು ಕಾರ್ಲ್ ಮಾರ್ಕ್ಸ್‌ನ ಸ್ನೇಹಿತ ಮತ್ತು ಸಹೋದ್ಯೋಗಿ ಫರ್ಡಿನಾಂಡ್ ಲಸ್ಸಾಲ್ ಹೇಳಿದ ಮಾತು. 1862ರಲ್ಲಿ ಪ್ರಷ್ಯಾದ ಪ್ರೇಕ್ಷಕರನ್ನು ಉದ್ದೇಶಿಸಿ ಲಸ್ಸಾಲ್ ಹೀಗೆ ಹೇಳಿದರು:

"ಸಾಂವಿಧಾನಿಕ ಪ್ರಶ್ನೆಗಳು ಮುಖ್ಯವಾಗಿ ಹಕ್ಕಿನ ಪ್ರಶ್ನೆಯಲ್ಲ. ಬದಲಿಗೆ, ಸತ್ತ್ವದ ಪ್ರಶ್ನೆ. ದೇಶದ ಸಂವಿಧಾನದ ಅಸ್ತಿತ್ವ ಇರುವುದು ಆ ದೇಶದಲ್ಲಿರುವ ಸತ್ತ್ವದಲ್ಲಿ. ಸಮಾಜದೊಳಗೆ ಆಚರಣೆಯಲ್ಲಿರುವ ಸತ್ತ್ವಗಳು ನಿಖರವಾಗಿ ವ್ಯಕ್ತವಾದಾಗ ಮಾತ್ರ ರಾಜಕೀಯ ಸಂವಿಧಾನಗಳು ಮೌಲ್ಯಯುತ ಮತ್ತು ಶಾಶ್ವತವಾಗಿರುತ್ತವೆ.”

ಮುಖ್ಯ ಚಿತ್ರ: ಶಾಂತಾರಾಮ್ ಉಪಶ್ಯಾಮ್ ಗುರೂಜಿ ಅವರೊಂದಿಗೆ ಅಂಬೇಡ್ಕರ್ ಕುಶಲೋಪರಿ | ಕೃಪೆ: ಚಿಂತನೈ ಜಾಲತಾಣ
ನಿಮಗೆ ಏನು ಅನ್ನಿಸ್ತು?
0 ವೋಟ್