ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 7 | ರಾಜಕೀಯ ಕ್ರಾಂತಿಗಳ ಪೂರ್ವ ಮತ್ತು ಪಶ್ಚಿಮ

Ambedkar

ಸಾಮಾಜಿಕ ಮತ್ತು ಧಾರ್ಮಿಕ ಸಮಸ್ಯೆಗಳು ರಾಜಕೀಯ ಘಟನೆಯ ಮೇಲೆ ಪ್ರಭಾವ ಬೀರುತ್ತವೆ. ಈ ಪ್ರಭಾವ ಅಥವಾ ಪರಸ್ಪರ ಸಂಬಂಧ ಸೀಮಿತವೆಂದು ತಿಳಿಯಬಾರದು. ಸರಳವಾಗಿ ಹೇಳುವುದಾದರೆ, ರಾಜಕೀಯ ಕ್ರಾಂತಿಗಳು ಯಾವಾಗಲೂ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಗಳಿಗಿಂತ ಮುಂಚೆ ಸಂಭವಿಸುತ್ತವೆ ಎಂಬುದನ್ನು ಇತಿಹಾಸ ಹೇಳುತ್ತದೆ

ಸಾಂವಿಧಾನಿಕ ಪ್ರಶ್ನೆಗಳು ಮುಖ್ಯವಾಗಿ ಹಕ್ಕಿನ ಪ್ರಶ್ನೆಯಲ್ಲ. ಬದಲಿಗೆ, ಸತ್ವದ ಪ್ರಶ್ನೆ. ದೇಶದ ಸಂವಿಧಾನದ ಅಸ್ತಿತ್ವ ಇರುವುದು ಆ ದೇಶದಲ್ಲಿರುವ ಸತ್ವದಲ್ಲಿ. ಸಮಾಜದೊಳಗೆ ಆಚರಣೆಯಲ್ಲಿರುವ ಸತ್ವಗಳು ನಿಖರವಾಗಿ ವ್ಯಕ್ತವಾದಾಗ ಮಾತ್ರ ರಾಜಕೀಯ ಸಂವಿಧಾನಗಳು ಮೌಲ್ಯಯುತ ಮತ್ತು ಶಾಶ್ವತವಾಗಿರುತ್ತವೆ.

ಇದಕ್ಕೆ ಪ್ರಷ್ಯಾಕ್ಕೆ ಹೋಗುವ ಅಗತ್ಯವಿಲ್ಲ. ನಮಲ್ಲೇ ಇದಕ್ಕೆ ಪುರಾವೆ ಇದೆ. ವಿವಿಧ ವರ್ಗಗಳು ಮತ್ತು ಸಮುದಾಯಗಳಿಗೆ ಇಂತಿಷ್ಟು ಎಂದು ನಿಗದಿಪಡಿಸಿ ರಾಜಕೀಯ ಅಧಿಕಾರದ ಹಂಚಿಕೆ ಮಾಡಿದ 'ಕಮ್ಯುನಲ್ ಅವಾರ್ಡ್'ನ  ಮಹತ್ವವೇನು? ನನ್ನ ದೃಷ್ಟಿಯಲ್ಲಿ, ಇದರ ಮಹತ್ವ ಇರುವುದು ರಾಜಕೀಯ ಸಂವಿಧಾನವು ಸಾಮಾಜಿಕ ಸಂಘಟನೆಯನ್ನು ಗಮನಿಸಬೇಕು ಎಂಬುದರಲ್ಲಿ. ಭಾರತದಲ್ಲಿನ ಸಾಮಾಜಿಕ ಸಮಸ್ಯೆಯು ರಾಜಕೀಯ ಸಮಸ್ಯೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಾದಿಸುತ್ತಿದ್ದ ರಾಜಕಾರಣಿಗಳು ಸಂವಿಧಾನವನ್ನು ರೂಪಿಸುವಾಗ  ಸಾಮಾಜಿಕ ಸಮಸ್ಯೆಯನ್ನು ಗಣನೆಗೆ ತೆಗೆದುಕೊಳ್ಳಲೇಬೇಕಾಯಿತು ಎನ್ನುವುದನ್ನು ಇದು ತೋರಿಸುತ್ತದೆ. ಸಮಾಜ ಸುಧಾರಣೆಯೆಡೆಗೆ ತೋರಿದ ಉದಾಸೀನತೆ ಮತ್ತು ನಿರ್ಲಕ್ಷಕ್ಕೆ ತಕ್ಕ ಶಾಸ್ತಿಯಾಗಿಯೇ ಕಮ್ಯುನಲ್ ಅವಾರ್ಡ್ ಬಂತು ಎನ್ನಬಹುದು. ಸಮಾಜ ಸುಧಾರಣಾ ಪಕ್ಷಕ್ಕೆ ಇದೊಂದು ದೊಡ್ಡ ಯಶಸ್ಸು. ಅವರು ಸೋತಿದ್ದರೂ, ಸಾಮಾಜಿಕ ಸುಧಾರಣೆಯ ಪ್ರಾಮುಖ್ಯತೆಯನ್ನು ಒತ್ತಾಯಿಸುವ ನಿಟ್ಟಿನಲ್ಲಿ ಅವರು ಸರಿಯಾಗಿಯೇ ಇದ್ದರು ಎನ್ನುವುದನ್ನು ಇದು ತೋರಿಸುತ್ತದೆ. ನನಗೆ ಗೊತ್ತಿರುವಂತೆ ಅನೇಕರು ಇದನ್ನು ಒಪ್ಪುವುದಿಲ್ಲ. ಕಮ್ಯುನಲ್ ಅವಾರ್ಡ್  ಅಸಹಜವಾದದ್ದು ಮತ್ತದು ಅಲ್ಪಸಂಖ್ಯಾತರು ಮತ್ತು ಅಧಿಕಾರಿ ವರ್ಗಗಳ ನಡುವಿನ ಅಪವಿತ್ರ ಮೈತ್ರಿಯ ಕಾರಣದಿಂದ ಆದದ್ದೆಂಬುದು ಹೆಚ್ಚು ಪ್ರಚಲಿತವಾಗಿರುವ ಮತ್ತು ನಂಬಲರ್ಹ ಅಭಿಪ್ರಾಯ. ಕಮ್ಯುನಲ್ ಅವಾರ್ಡ್ ಒಂದು ಉತ್ತಮವಾದ ಪುರಾವೆಯಲ್ಲ ಎಂದು ಭಾವಿಸುವುದಾದರೆ, ನಾನು ನನ್ನ ವಾದಕ್ಕೆ ಅದನ್ನು ಆಧರಿಸುವುದಿಲ್ಲ.

ಈಗ ಐರ್ಲಂಡ್ ಕಡೆಗೆ ಹೊರಳೋಣ. ಅಲ್ಲಿನ 'ಹೋಮ್ ರೂಲ್'ನ ಇತಿಹಾಸ ನಮಗೆ ಏನನ್ನು ಹೇಳುತ್ತದೆ? ಅಲ್‌ಸ್ಟರ್‌ ಮತ್ತು ದಕ್ಷಿಣ ಐರ್ಲೆಂಡ್‌ ಪ್ರತಿನಿಧಿಗಳ ನಡುವಿನ ಮಾತುಕತೆಯ ಸಂದರ್ಭದಲ್ಲಿ, ಐರ್ಲೆಂಡ್ ಪ್ರತಿನಿಧಿಯಾದ ಮಿ.ರೆಡ್ಮಂಡ್, ಅಲ್‌ಸ್ಟರ್ ಅನ್ನು ಇಡೀ ಐರ್ಲೆಂಡ್‌ಗೆ ಅನ್ವಯಿಸುವ ಹೋಮ್ ರೂಲ್ ಸಂವಿಧಾನದಲ್ಲಿ ತರಲು ಅಲ್‌ಸ್ಟರ್‌ನ ಪ್ರತಿನಿಧಿಗಳಿಗೆ ಹೀಗೆ ಹೇಳಿದರು: “ನಿಮಗೆ ಯಾವ ರಾಜಕೀಯ ರಕ್ಷಣೆ ಬೇಕಾದರೂ ಕೇಳಿ, ನಿಮಗದು ಸಿಗುತ್ತದೆ.” ಅಲ್‌ಸ್ಟರ್‌ನವರು ಕೊಟ್ಟ ಉತ್ತರವೇನು ಗೊತ್ತೇ? "ನಿಮ್ಮ ರಕ್ಷಣೆ ವಿಷಯ ಹಾಳಾಗಲಿ. ನಾವು ನಿಮ್ಮ ಯಾವುದೇ ರೀತಿಯ ಆಳ್ವಿಕೆಗೆ ಒಳಪಡಲು ಬಯಸುವುದಿಲ್ಲ.” ಅಲ್‌ಸ್ಟರ್‌ನವರಂತೆ ಭಾರತದಲ್ಲಿಯ ಅನೇಕ ಅಲ್ಪಸಂಖ್ಯಾತ ವರ್ಗಗಳೂ ನಿಲುವು ತಾಳಿದ್ದರೆ, ಬಹುಸಂಖ್ಯಾತರ ರಾಜಕೀಯ ಆಕಾಂಕ್ಷೆಗಳ ಗತಿ ಏನಾಗುತ್ತಿತ್ತು ಎನ್ನುವುದನ್ನು ಅಲ್ಪಸಂಖ್ಯಾತರನ್ನು ದೂರುವ ಜನ ಯೋಚಿಸಬೇಕು. ಐರಿಶ್ ಹೋಮ್ ರೂಲ್ ಕುರಿತಾಗಿ ಅಲ್‌ಸ್ಟರ್‌ನ ಧೋರಣೆಯನ್ನು ಗಮನಿಸಿ ಹೇಳುವುದಾದರೆ, ಅಲ್ಪಸಂಖ್ಯಾತರಿಗಾಗಿ ಕಲ್ಪಿಸಿಕೊಟ್ಟ ಕೆಲವು ರಕ್ಷಣೋಪಾಯಗಳ ಹೊರತಾಗಿ ಹೆಚ್ಚಿನ ರಾಜನೈತಿಕ ಪ್ರಜ್ಞೆಯನ್ನು ತೋರಿಸದ ಬಹುಸಂಖ್ಯಾತರಿಂದ ಅಲ್ಪಸಂಖ್ಯಾತರು ಆಳಲ್ಪಡಲು ಒಪ್ಪಿದರು ಎಂದೇ  ವಿನಾ ಮತ್ತೇನೂ ಅಲ್ಲ.

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 6 | ಯಾವುದೇ ಒಂದು ವರ್ಗ ಮತ್ತೊಂದು ವರ್ಗವನ್ನು ಆಳಲು ಯೋಗ್ಯವಲ್ಲ

ಅದು ಹೋಗಲಿ, ಅಲ್‌ಸ್ಟರ್‌ ಈ ನಿಲುವನ್ನೇಕೆ ತಾಳಿತು ಎನ್ನುವುದು ಮುಖ್ಯವಾದ ಪ್ರಶ್ನೆ. ನನಗೆ ಕಾಣುವ ಏಕೈಕ ಉತ್ತರವೆಂದರೆ, ಅಲ್‌ಸ್ಟರ್‌ ಮತ್ತು ದಕ್ಷಿಣ ಐರ್ಲೆಂಡ್ ನಡುವೆ ಕ್ಯಾಥೋಲಿಕರು ಮತ್ತು ಪ್ರೊಟೆಸ್ಟಂಟರ ನಡುವಿನ ಸಾಮಾಜಿಕ ಸಮಸ್ಯೆ. ಮೂಲಭೂತವಾಗಿ ಅದು ಜಾತಿಯ ಸಮಸ್ಯೆ. ಐರ್ಲೆಂಡ್‌ನಲ್ಲಿನ 'ಹೋಮ್ ರೂಲ್' ಎಂಬುದು ರೋಮ್ ರೂಲ್ ಆಗಿರುತ್ತದೆ ಎಂದು ಅಲ್‌ಸ್ಟರ್‌ನ ಜನ ಕಂಡುಕೊಂಡಿದ್ದರು. ಇದು ಕ್ಯಾಥೋಲಿಕರು ಮತ್ತು ಪ್ರೊಟೆಸ್ಟಂಟರ ನಡುವಿನ ಜಾತಿಯ ಸಾಮಾಜಿಕ ಸಮಸ್ಯೆ ಎಂದು ಹೇಳುವ ಇನ್ನೊಂದು ರೀತಿ. ಮತ್ತದು ರಾಜಕೀಯ ಸಮಸ್ಯೆಯ ಇತ್ಯರ್ಥಕ್ಕೆ ಅಡ್ಡಿ ಉಂಟುಮಾಡಿತ್ತು. ಈ ಪುರಾವೆಯನ್ನು ಖಂಡಿತವಾಗಿಯೂ ಅಲ್ಲಗಳೆಯಬಹುದು. ಇಲ್ಲಿ ಕೂಡ ಸಾಮ್ರಾಜ್ಯಶಾಹಿಗಳ ಕೈವಾಡವಿತ್ತೆಂದು ಹೇಳುವವರು ಇದ್ದಾರೆ. ಆದರೆ, ನಾನು ಮಂಡಿಸಲಿಕ್ಕಿರುವ ಪುರಾವೆಗಳು ಇನ್ನೂ ಸಾಕಷ್ಟಿವೆ. ನಾನು ರೋಮ್ ಇತಿಹಾಸದಿಂದ ಪುರಾವೆಗಳನ್ನು ನೀಡುತ್ತೇನೆ. ಇಲ್ಲಿ ಯಾವುದೋ ಒಂದು ದುಷ್ಟ ಶಕ್ತಿಯ ಕೈವಾಡವಿದ್ದಿತೆಂದು ಯಾರೂ ಹೇಳಲಾರರು. ರೋಮ್‌ನ ರಿಪಬ್ಲಿಕ್ ಸಂವಿಧಾನದಲ್ಲಿ ನಮ್ಮ ಕಮ್ಯುನಲ್ ಅವಾರ್ಡನ್ನು ಹೋಲುವ ಸಾಕಷ್ಟು ಅಂಶಗಳಿದ್ದವು ಎಂಬುದು ರೋಮಿನ ಚರಿತ್ರೆಯನ್ನು ಅಧ್ಯಯನ ಮಾಡಿದವರಿಗೆ ಗೊತ್ತಾಗುತ್ತದೆ. ರೋಮ್‌ನಲ್ಲಿ ಅರಸೊತ್ತಿಗೆಯನ್ನು ರದ್ದುಪಡಿಸಿದ ಮೇಲೆ ಕಾನ್ಸಲ್‌ರು ಮತ್ತು ಪಾಂಟಿಫ್ ಮ್ಯಾಕ್ಸಿಮಸ್ (ಧರ್ಮಾಧಿಕಾರಿ) ಇವರಿಬ್ಬರಲ್ಲಿ ರಾಜಾಧಿಕಾರದ ಹಂಚಿಕೆಯಾಯಿತು. ರಾಜ್ಯದ ಸೆಕ್ಯುಲರ್ ಆಡಳಿತಾಧಿಕಾರವನ್ನು ಕಾನ್ಸುಲ್‌ಗಳಿಗೆ ನೀಡಲಾಯಿತು, ಪೊಂಟಿಫ್‌ರು ರಾಜನ ಧಾರ್ಮಿಕ ಆಚರಣೆಗಳ ಅಧಿಕಾರವನ್ನು ವಹಿಸಿಕೊಂಡರು. ಅಧಿಕಾರ ನಡೆಸುವ ಇಬ್ಬರು ಕಾನ್ಸಲರಲ್ಲಿ ಒಬ್ಬ ಪ್ಯಾಟ್ರಿಶಿಯನ್ ಇದ್ದರೆ, ಇನ್ನೊಬ್ಬನು ಪ್ಲೇಬಿಯನ್ ಆಗಿರಬೇಕೆಂದು ರಿಪಬ್ಲಿಕನ್ ಸಂವಿಧಾನದಲ್ಲಿ ಹೇಳಲಾಯಿತು. ಅದರಂತೆಯೇ, ಪಾಂಟಿಫ್ ಮ್ಯಾಕ್ಸಿಮಸ್‌ನ ಕೆಳಗೆ ಇರುವವರಲ್ಲಿ ಅರ್ಧದಷ್ಟು ಜನರು ಪ್ಲೇಬಿಯನ್‌ರಾಗಿದ್ದರೆ, ಉಳಿದರ್ದದಷ್ಟು ಜನರು ಪ್ಯಾಟ್ರಿಶಿಯನ್ನರು ಇರಬೇಕೆಂದು ಶಾಸನಬದ್ಧವಾಗಿ ಹೇಳಲಾಗಿತ್ತು. ನಮ್ಮ ಕಮ್ಯುನಲ್ ಅವಾರ್ಡನ್ನು ಬಹಳಷ್ಟು ಹೋಲುವ ಈ ರೀತಿಯ ವಿಧಿಗಳನ್ನು ರೋಮ್‌ನ ರಿಪಬ್ಲಿಕನ್ ಸಂವಿಧಾನದಲ್ಲಿ ಯಾಕೆ ಸೇರಿಸಲಾಗಿತ್ತು? ಪ್ಯಾಟ್ರಿಶಿಯನ್ನರೂ ಮತ್ತು ಪ್ಲೇಬಿಯನ್ನರು ಎರಡು ಬೇರೆ-ಬೇರೆ ಜಾತಿಗಳವರಾದ್ದರಿಂದ, ಈ ಎರಡು ವಿಭಿನ್ನ ಜಾತಿಗಳ ನಡುವಿನ ಸಾಮಾಜಿಕ ಭೇದವನ್ನು ಸಂವಿಧಾನ ಪರಿಗಣಿಸಲೇಬೇಕಾಯಿತು. ಒಟ್ಟಾರೆಯಾಗಿ ಹೇಳುವುದಾದರೆ, ರಾಜಕೀಯ ಸುಧಾರಕರು ತಮಗಿಷ್ಟ ಬಂದ ಯಾವುದೇ ದಿಕ್ಕಿನಲ್ಲಿ ನೋಡಲಿ, ಒಂದು ಸಂವಿಧಾನ ರಚಿಸುವಾಗ, ಚಾಲ್ತಿಯಲ್ಲಿರುವ ಸಾಮಾಜಿಕ ವ್ಯವಸ್ಥೆಯಿಂದ ಉಂಟಾಗುವ ಸಮಸ್ಯೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎನ್ನುವುದನ್ನು ಅವರು ಕಂಡುಕೊಳ್ಳುತ್ತಾರೆ.

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 5 | ಅಸ್ಪೃಶ್ಯತೆಯ ಅವತಾರದ ನಾಲ್ಕು ನಿದರ್ಶನ

ಸಾಮಾಜಿಕ ಮತ್ತು ಧಾರ್ಮಿಕ ಸಮಸ್ಯೆಗಳು ರಾಜಕೀಯ ಘಟನೆಯ ಮೇಲೆ ಪ್ರಭಾವ ಬೀರುತ್ತವೆ ಎಂಬುದಕ್ಕೆ ನಾನು ಆಯ್ದುಕೊಂಡ ನಿದರ್ಶನಗಳು ತೀರಾ ವಿಶಿಷ್ಟವೆಂದು ತೋರಬಹುದು.  ಇರಬಹುದೇನೋ... ಆದರೆ, ಈ ಪ್ರಭಾವ ಅಥವಾ ಪರಸ್ಪರ ಸಂಬಂಧ ಸೀಮಿತವೆಂದು ತಿಳಿಯಬಾರದು. ಸರಳವಾಗಿ ಹೇಳುವುದಾದರೆ, ರಾಜಕೀಯ ಕ್ರಾಂತಿಗಳು ಯಾವಾಗಲೂ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಗಳಿಗಿಂತ ಮುಂಚೆ ಸಂಭವಿಸುತ್ತವೆ ಎಂಬುದನ್ನು ಇತಿಹಾಸ ಹೇಳುತ್ತದೆ. ಲೂಥರ್ ಪ್ರಾರಂಭಿಸಿದ ಧಾರ್ಮಿಕ ಸುಧಾರಣೆಯು ಯುರೋಪಿಯನ್ ಜನರ ರಾಜಕೀಯ ವಿಮೋಚನೆಯ ಮುನ್ಸೂಚಿಯಾಗಿತ್ತು. ಹಾಗೆಯೇ, ಇಂಗ್ಲೆಂಡ್‌ನಲ್ಲಿ ಪ್ಯೂರಿಟನ್ ಪಂಥವೇ ರಾಜಕೀಯ ಸ್ವಾತಂತ್ರಕ್ಕೆ ಅಡಿಗಲ್ಲನ್ನಿಟ್ಟಿತು. ಪ್ಯೂರಿಟನ್ ಪಂಥ ಹೊಸ ಜಗತ್ತನ್ನು ಸ್ಥಾಪಿಸಿತು. ಅಮೆರಿಕದ ಸ್ವಾತಂತ್ರ್ಯ ಸಂಗ್ರಾಮವನ್ನು ಗೆದ್ದದ್ದು ಪ್ಯೂರಿಟನ್ ಪಂಥವೇ. ಈ ಪ್ಯೂರಿಟನ್ ಆಂದೋಲನ ಒಂದು ಧಾರ್ಮಿಕ ಚಳವಳಿಯಾಗಿತ್ತು.

ಮುಸ್ಲಿಂ ಸಾಮ್ರಾಜ್ಯದ ವಿಷಯದಲ್ಲೂ ಇದೇ ಆಗಿದೆ. ಅರಬ್ಬರು ರಾಜಕೀಯ ಶಕ್ತಿಯಾಗುವ ಮೊದಲು ಅವರು ಪ್ರವಾದಿ ಮೊಹಮ್ಮದ್ ಪ್ರಾರಂಭಿಸಿದ ಸಂಪೂರ್ಣ ಧಾರ್ಮಿಕ ಕ್ರಾಂತಿಯನ್ನು  ಹಾಯ್ದು ಬಂದಿದ್ದರು. ಭಾರತೀಯ ಇತಿಹಾಸ ಕೂಡ ಇದೇ ನಿರ್ಣಯವನ್ನು ಬೆಂಬಲಿಸುತ್ತದೆ. ಚಂದ್ರಗುಪ್ತನು ನಡೆಸಿದ ರಾಜಕೀಯ ಕ್ರಾಂತಿಗೆ ಮುನ್ನ ಬುದ್ಧನಿಂದ ಧಾರ್ಮಿಕ ಮತ್ತು ಸಾಮಾಜಿಕ ಕ್ರಾಂತಿಯೊಂದು ನಡೆದುಹೋಗಿತ್ತು. ಮಹಾರಾಷ್ಟ್ರದ ಸಾಧು-ಸಂತರು ಸಾಧಿಸಿದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣೆಗಳ ನಂತರವೇ ಅಲ್ಲಿ ಶಿವಾಜಿಯ ರಾಜಕೀಯ ಕ್ರಾಂತಿ ಕಾಣಿಸಿಕೊಂಡಿತು.  ಸಿಖ್ಖರ ರಾಜಕೀಯ ಕ್ರಾಂತಿಗೆ ಪೂರ್ವಭಾವಿಯಾಗಿ, ಗುರುನಾನಕರ ನೇತೃತ್ವದಲ್ಲಿ ಧಾರ್ಮಿಕ, ಸಾಮಾಜಿಕ ಕ್ರಾಂತಿ ನಡೆದಿತ್ತು. ಇನ್ನೂ ಹೆಚ್ಚಿನ ನಿದರ್ಶನಗಳ ಅಗತ್ಯವಿಲ್ಲ. ಒಂದು ಜನಾಂಗದ ರಾಜಕೀಯ ವಿಕಾಸ ಸಾಧ್ಯವಾಗಬೇಕಾದರೆ, ಅವರ ಮನಸ್ಸು ಮತ್ತು ಆತ್ಮದ ವಿಮೋಚನೆಯು ಒಂದು ಅತೀ ಮುಖ್ಯವಾದ ಪೂರ್ವಸಿದ್ಧತೆ ಎಂದು ತೋರಿಸಲು ಇವಿಷ್ಟು ಸಾಕು.

ನಿಮಗೆ ಏನು ಅನ್ನಿಸ್ತು?
3 ವೋಟ್