ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 8 | ಭಾರತದ ಸಮಾಜವಾದಿಗಳ ಆಲೋಚನೆ ಎಡವಿದ್ದೆಲ್ಲಿ?

Ambedkar

ಒಬ್ಬ ವ್ಯಕ್ತಿಯ ಸಾಮಾಜಿಕ ಸ್ಥಾನಮಾನವು ಎಷ್ಟೋ ಸಲ ಶಕ್ತಿ ಮತ್ತು ಅಧಿಕಾರದ ಮೂಲವಾಗಿರುತ್ತದೆ. ಧರ್ಮವು ಅಧಿಕಾರ ಶಕ್ತಿಯ ಮೂಲ ಎಂದು ಭಾರತದ ಇತಿಹಾಸ ಹೇಳುತ್ತದೆ. ಇಲ್ಲಿ ಪುರೋಹಿತರು ಸಾಮಾನ್ಯ ವ್ಯಕ್ತಿಯ ಮೇಲೆ ಮ್ಯಾಜಿಸ್ಟ್ರೇಟ್‌ಗಿಂತ ಹೆಚ್ಚಿನ ಹಿಡಿತ ಸಾಧಿಸುತ್ತಾರೆ. ಮುಷ್ಕರ, ಚುನಾವಣೆಗಳು ಸಹ ಧಾರ್ಮಿಕ ತಿರುವು ಪಡೆದುಕೊಳ್ಳಬಹುದು

ಈಗ ನಾನು ಸಮಾಜವಾದಿಗಳ ವಿಷಯಕ್ಕೆ ಬರುತ್ತೇನೆ. ಸಮಾಜವಾದಿಗಳು ಯಾವುದೇ ಒಂದು ಸಾಮಾಜಿಕ ಸ್ಥಿತಿಯಿಂದ ಉದ್ಭವಿಸುವ ಸಮಸ್ಯೆಯನ್ನು ಕಡೆಗಣಿಸಬಲ್ಲರೇ? ಭಾರತದ ಸಮಾಜವಾದಿಗಳು ಯುರೋಪಿನ ತಮ್ಮ ಸಹವರ್ತಿಗಳನ್ನು ಅನುಸರಿಸುತ್ತಾರೆ ಮತ್ತು ಇತಿಹಾಸದ ಆರ್ಥಿಕ ನೆಲಗಟ್ಟಿನ ವ್ಯಾಖ್ಯಾನವನ್ನು ಭಾರತದ ವಸ್ತುಸ್ಥಿತಿಗಳಿಗೆ ಅನ್ವಯಿಸಲು ಪ್ರಯತ್ನಿಸುತ್ತಾರೆ. "ಮನುಷ್ಯನು ಆರ್ಥಿಕ ಜೀವಿ, ಅವನ ಚಟುವಟಿಕೆಗಳು ಮತ್ತು ಆಕಾಂಕ್ಷೆಗಳು ಆರ್ಥಿಕ ಸಂಗತಿಗಳಿಂದ ಬಂಧಿಸಲ್ಪಟ್ಟಿವೆ; ಹಾಗಾಗಿ ಅಧಿಕಾರ ಶಕ್ತಿಯ ಏಕೈಕ ಮೂಲವೆಂದರೆ ಅಸ್ತಿ," ಎಂದು ಪ್ರತಿಪಾದಿಸುತ್ತಾರೆ. ಆದ್ದರಿಂದ ಅವರು, ರಾಜಕೀಯ ಮತ್ತು ಸಾಮಾಜಿಕ ಸುಧಾರಣೆಗಳು ಕೇವಲ ಕಲ್ಪನೆಗೂ ಮೀರಿದ ಭ್ರಮೆಗಳು ಮತ್ತು ಆಸ್ತಿಯ ಸಮ ಹಂಚಿಕೆಯ ಮೂಲಕ ಆರ್ಥಿಕ ಸುಧಾರಣೆಯು ಇತರ ಎಲ್ಲ ರೀತಿಯ ಸುಧಾರಣೆಗಳಿಗಿಂತ ಆದ್ಯತೆಯನ್ನು ಹೊಂದಿರಬೇಕು ಎಂದು ಬೋಧಿಸುತ್ತಾರೆ.

ಸಮಾಜವಾದಿಗಳು ಹೇಳುವ, ಸಂಪತ್ತಿನ ಸಮ ಹಂಚಿಕೆಯ ಆರ್ಥಿಕ ಸುಧಾರಣೆಯೇ ಉಳಿದೆಲ್ಲ ಸುಧಾರಣೆಗಿಂತ ಮುಖ್ಯವಾದದ್ದು ಎಂಬುದನ್ನು ಒಬ್ಬ ಒಪ್ಪಬಹುದು, ಮನುಷ್ಯನ ಚಟುವಕೆಗಳಿಗೆಲ್ಲ ಆರ್ಥಿಕ ಉದ್ದೇಶವೇ ಪ್ರೇರಕ ಶಕ್ತಿ ಎಂಬುದನ್ನು ಇನ್ನೊಬ್ಬ ಅಲ್ಲಗಳೆಯಬಹುದು. ಆರ್ಥಿಕ ಶಕ್ತಿಯೊಂದೇ ನಿಜವಾದ ಶಕ್ತಿ ಎಂಬುದನ್ನು ಮಾನವ ಸಮಾಜದ ಅಧ್ಯಯನ ಮಾಡುವ ಯಾರೂ ಒಪ್ಪಲು ಸಾಧ್ಯವಿಲ್ಲ.

ಒಬ್ಬ ವ್ಯಕ್ತಿಯ ಸಾಮಾಜಿಕ ಸ್ಥಾನಮಾನವು ಎಷ್ಟೋ ಸಲ ಶಕ್ತಿ ಮತ್ತು ಅಧಿಕಾರದ ಮೂಲವಾಗಿರುತ್ತದೆ ಎಂಬುದು ಮಹಾತ್ಮರು ಶ್ರೀಸಾಮಾನ್ಯನ ಮೇಲೆ ಬೀರಿರುವ ಪ್ರಭಾವವನ್ನು ನೋಡಿದಾಗ ಸ್ಪಷ್ಟವಾಗುತ್ತದೆ. ಭಾರತದಲ್ಲಿ ಕೋಟ್ಯಾಧೀಶರು ಹಣವಿಲ್ಲದ ಫಕೀರ ಸಾಧು-ಸಂತರಿಗೆ ವಿಧೇಯರಾಗುವುದೇಕೆ? ಲಕ್ಷಾಂತರ ಬಡವರು ತಮ್ಮ ಸರ್ವಸ್ವವಾದ ಒಡವೆ-ವಸ್ತುಗಳನ್ನು ಮಾರಿ, ವಾರಾಣಸಿಗೋ, ಮಕ್ಕಾ ಯಾತ್ರೆಗೋ ಹೋಗುವುದೇಕೆ? ಧರ್ಮವು ಅಧಿಕಾರ ಶಕ್ತಿಯ ಮೂಲ ಎಂದು ಭಾರತದ ಇತಿಹಾಸ ಹೇಳುತ್ತದೆ. ಇಲ್ಲಿ ಪುರೋಹಿತರು ಸಾಮಾನ್ಯ ವ್ಯಕ್ತಿಯ ಮೇಲೆ ಮ್ಯಾಜಿಸ್ಟ್ರೇಟ್‌ಗಿಂತ ಹೆಚ್ಚಿನ ಹಿಡಿತ ಸಾಧಿಸುತ್ತಾರೆ. ಇಲ್ಲಿ ಮುಷ್ಕರಗಳು ಮತ್ತು ಚುನಾವಣೆಗಳು ಸಹ ಧಾರ್ಮಿಕ ತಿರುವು ಪಡೆದುಕೊಳ್ಳಬಹುದು. ಆಗಲೂ ಧರ್ಮ ಅಥವಾ ಮತೀಯ ಅಂಶವೇ ಮೇಲಾಗುತ್ತದೆ.

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 7 | ರಾಜಕೀಯ ಕ್ರಾಂತಿಗಳ ಪೂರ್ವ ಮತ್ತು ಪಶ್ಚಿಮ

ಮನುಷ್ಯನ ಮೇಲೆ ಧರ್ಮದ ಪ್ರಭಾವವನ್ನು ತಿಳಿಯಲು ಇನ್ನೊಂದು ನಿದರ್ಶನವಾಗಿ ರೋಮ್‌ನ ಪ್ಲೇಬಿಯನ್ನರ ಪ್ರಕರಣವನ್ನೇ ತೆಗೆದುಕೊಳ್ಳೋಣ. ಇದು ಸದರಿ ವಿಷಯದಲ್ಲಿ ವಿಶೇಷ ಬೆಳಕು ಚೆಲ್ಲುತ್ತದೆ. ರೋಮ್ ಗಣರಾಜ್ಯದ ಅತ್ಯುನ್ನತ ಅಧಿಕಾರದಲ್ಲಿ ತಮಗೆ ಪಾಲು ಸಿಗಬೇಕೆಂದು ಹೋರಾಡಿದ ಪ್ಲೇಬಿಯನ್ನರು, ತಮ್ಮ ಅಸೆಂಬ್ಲಿಯಾದ 'Commitia Centuriata'ದಿಂದ ಪ್ರತ್ಯೇಕವಾಗಿ ರಚಿಸಲ್ಪಟ್ಟ ಮತದಾರ ಕ್ಷೇತ್ರದಿಂದ ಒಬ್ಬ ಪ್ಲೇಬಿಯನ್ ಕಾನ್ಸಲ್‌ನನ್ನು ನೇಮಿಸುವುದರಲ್ಲಿ ಯಶಸ್ವಿಯಾಗಿದ್ದರು. ಅವರಿಗೆ ತಮ್ಮವನೇ ಒಬ್ಬ ಕಾನ್ಸಲ್ ಆಗುವುದು ಬೇಕಾಗಿತ್ತು. ಏಕೆಂದರೆ, ಪ್ಯಾಟ್ರಿಶಿಯನ್ ಕಾನ್ಸಲ್‌ಗಳು ಆಡಳಿತದಲ್ಲಿ ಪ್ಲೇಬಿಯನ್ನರಿಗೆ ಭೇದ-ಭಾವ ಮಾಡುತ್ತಾರೆಂದು ಅವರಿಗನ್ನಿಸಿತು. ರೋಮ್ ಗಣರಾಜ್ಯದ ಸಂವಿಧಾನದ ಪ್ರಕಾರ, ಒಬ್ಬ ಕಾನ್ಸಲ್‌ಗೆ ಇತರ ಕಾನ್ಸಲ್‌ನ ಕಾರ್ಯವನ್ನು ವೀಟೋ ಮಾಡುವ ಅಧಿಕಾರ ಇರುವುದರಿಂದ ಪ್ಲೇಬಿಯನ್ನರು ಸ್ಪಷ್ಟವಾಗಿ ಹೆಚ್ಚಿನ ಲಾಭವನ್ನು ಪಡೆದರು. ಆದರೆ, ನಿಜವಾಗಿಯೂ ಇದರಿಂದ ಪ್ಲೇಬಿಯನ್ನರಿಗೆ ಲಾಭವಾಯಿತೇ? ಇಲ್ಲವೆಂದೇ ಹೇಳಬೇಕು.

ಪ್ಲೇಬಿಯನ್ನರು ಎಂದಿಗೂ ಪ್ರಬಲ ಎನ್ನಬಹುದಾದ ಮತ್ತು ಪೆಟ್ರೀಷಿಯನ್ ಕಾನ್ಸುಲ್‌ನಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸಬಲ್ಲ ಪ್ಲೇಬಿಯನ್ ಕಾನ್ಸಲ್‌ನನ್ನು ಪಡೆಯಲು ಸಾಧ್ಯವಾಗಲಿಲ್ಲ. ಹಾಗೆ ನೋಡಿದರೆ ಪ್ಲೇಬಿಯನ್ನರ ಪ್ರತಿನಿಧಿಯು ಪ್ರತ್ಯೇಕವಾದ ಪ್ಲೇಬಿಯನ್  ಮತದಾರರಿಂದ ಆಯ್ಕೆ ಆಗುವುದರಿಂದ ಅವರು ಪ್ರಬಲವಾದ ಕಾನ್ಸುಲ್‌ ಅನ್ನು ಪಡೆಯಬೇಕಾಗಿತ್ತು. ಪ್ರಶ್ನೆಯೆಂದರೆ, ಅವರು ಪ್ರಬಲವಾದ ಪ್ಲೇಬಿಯನ್‌ನನ್ನು ತಮ್ಮ ಕಾನ್ಸುಲ್ ಆಗಿ ತರುವಲ್ಲಿ ಏಕೆ ವಿಫಲರಾದರು? ಈ ಪ್ರಶ್ನೆಗೆ ಉತ್ತರವು ಮನುಷ್ಯರ ಮನಸ್ಸಿನ ಮೇಲೆ ಧರ್ಮವು ಹೊಂದಿರುವ ಅಧಿಪತ್ಯವನ್ನು ತಿಳಿಸಿಕೊಡುತ್ತದೆ. ಡೆಲ್ಫಿಯ ಒರಾಕಲ್ (ಪ್ರಧಾನ ಅರ್ಚಕಿ / ದೇವವಾಣಿ ನೀಡುವ ಮಧ್ಯಸ್ಥೆ) ಅವರು ದೇವತೆಗೆ ಸ್ವೀಕಾರಾರ್ಹ ಎಂದು ಘೋಷಿಸದ ಹೊರತು ಯಾವುದೇ ಅಧಿಕಾರಿ ತನ್ನ ಕರ್ತವ್ಯಗಳನ್ನು ನಿರ್ವಹಿಸಲು ಕಚೇರಿಯನ್ನು ಪ್ರವೇಶಿಸಲು ಸಾಧ್ಯವಿಲ್ಲ ಎಂಬುದು ಇಡೀ ರೋಮನ್ ಜನರಿಗೆ ಸಮ್ಮತವಾಗಿದ್ದ ನಂಬಿಕೆಯಾಗಿತ್ತು. ಡೆಲ್ಫಿಯ ದೇವತೆಯ ಮಂದಿರದ ಉಸ್ತುವಾರಿ ವಹಿಸಿದ್ದ ಅರ್ಚಕರೆಲ್ಲರೂ ಪಾಟ್ರಿಶಿಯನ್ ಆಗಿದ್ದರು. ಪ್ಲೇಬಿಯನ್ನರು ಬಲಿಷ್ಠನಾದ, ಪಾಟ್ರಿಶಿಯನ್ನರನ್ನು ವಿರೋಧಿಸುವ (ಭಾರತದಲ್ಲಿ ಪ್ರಸ್ತುತವಾಗಿರುವ ಪದವನ್ನು ಬಳಸುವುದಾದರೆ 'ಕೋಮುವಾದಿ') ಪ್ಲೇಬಿಯನ್‌ನನ್ನು ಕಾನ್ಸಲ್‌ ಎಂದು ಆಯ್ಕೆ ಮಾಡಿದಾಗಲೆಲ್ಲ ದೇವತೆಗೆ ಅವನು ಸಮ್ಮತವಿಲ್ಲವೆಂದು ಒರಾಕಲ್‌ನಿಂದ ಹೇಳಿಸಲಾಗುತ್ತಿತ್ತು. ಈ ಕಾರಣದಿಂದ ಪ್ಲೇಬಿಯನ್ನರಿಗೆ ತಮ್ಮ ಹಕ್ಕನ್ನು ಚಲಾಯಿಸಲಾಗಲೇ ಇಲ್ಲ.

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 6 | ಯಾವುದೇ ಒಂದು ವರ್ಗ ಮತ್ತೊಂದು ವರ್ಗವನ್ನು ಆಳಲು ಯೋಗ್ಯವಲ್ಲ

ಆದರೆ, ಇದರಲ್ಲಿ ಗಮನಿಸಬೇಕಾದ ಒಂದಂಶವೆಂದರೆ, ಈ ವಂಚನೆಗೊಳಗಾಗಲು ಪ್ಲೇಬಿಯನ್ನರಿಗಿದ್ದ ಸಮ್ಮತಿ. ಏಕೆಂದರೆ, ಅವರು ಕೂಡ ಪಾಟ್ರಿಶಿಯನ್ನರನ್ನು ಇಷ್ಟಪಡುತ್ತಿದ್ದರು ಮತ್ತು ಅಧಿಕಾರ ವಹಿಸಿಕೊಳ್ಳಲು ಜನರಿಂದ ಚುನಾಯಿತರಾದರೆ ಸಾಲದು, ದೇವತೆ ಒಪ್ಪುವುದು ಅದಕ್ಕಿಂತ ಮುಖ್ಯ  ಎಂದು ಬಲವಾಗಿ ನಂಬಿದ್ದರು. ಈ ನಂಬಿಕೆಯನ್ನು ಅಲ್ಲಗಳೆದು ಜನತೆಯ ಆಯ್ಕೆಯೇ ಮುಖ್ಯವೆಂದು ಒತ್ತಾಯಿಸಿದ್ದರೆ, ಅವರು ತಾವು ಗಳಿಸಿದ ರಾಜಕೀಯ ಹಕ್ಕಿನ ಸಂಪೂರ್ಣ ಲಾಭ ಪಡೆಯಬಹುದಾಗಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ತಮಗೆ ಅಷ್ಟು ಸೂಕ್ತನಲ್ಲದಿದ್ದರೂ, ದೇವತೆಗೆ ಸಮ್ಮತನಾದ, ಎಂದರೆ ಪ್ಯಾಟ್ರಿಶಿಯನ್ನರಿಗೆ ಅನುಕೂಲಕರನಾದ ಇನ್ನೊಬ್ಬನನ್ನು ಆಯ್ಕೆ ಮಾಡಲು ಒಪ್ಪುತ್ತಿದ್ದರು. ಧರ್ಮವನ್ನು ತ್ಯಜಿಸುವ ಬದಲು, ತಾವು ಕಷ್ಟಪಟ್ಟು ಹೋರಾಡಿ ಗಳಿಸಿದ ರಾಜಕೀಯ ಹಕ್ಕನ್ನು ಬಿಟ್ಟುಕೊಟ್ಟರು. ಇದು ಧರ್ಮವು ಹಣಕ್ಕಿಂತ ಹೆಚ್ಚಿಗೆ ಅಲ್ಲದಿದ್ದರೂ ಹಣದಷ್ಟೇ ಅಧಿಕಾರದ ಮೂಲವಾಗಬಹುದು ಎಂದು ತೋರಿಸುವುದಿಲ್ಲವೇ?

ಪ್ರಸ್ತುತ ಯುರೋಪಿನ ಸಮಾಜದಲ್ಲಿ, ಅಧಿಕಾರ ಶಕ್ತಿಯ ಮೂಲವಾಗಿ ಆಸ್ತಿಯು ಪ್ರಧಾನವಾಗಿದೆ ಎಂದು ಭಾವಿಸಿರುವುದು ಸಮಾಜವಾದಿಗಳ ತಪ್ಪು ಕಲ್ಪನೆ. ಇದು ಭಾರತದ ವಿಷಯದಲ್ಲೂ ಅಥವಾ ಹಿಂದಿನ ಯುರೋಪಿನಲ್ಲೂ ನಿಜ. ಧರ್ಮ, ಸಾಮಾಜಿಕ ಸ್ಥಾನಮಾನ ಹಾಗೂ ಆಸ್ತಿ ಇವೆಲ್ಲವೂ ಒಬ್ಬ ವ್ಯಕ್ತಿಯು ಇನ್ನೊಬ್ಬರ ಸ್ವಾತಂತ್ರ್ಯವನ್ನು ನಿಯಂತ್ರಿಸಲು ಹೊಂದಿರುವ ಶಕ್ತಿ ಮತ್ತು ಅಧಿಕಾರದ ಮೂಲಗಳಾಗಿವೆ. ಒಂದು ಹಂತದಲ್ಲಿ ಒಂದು ಪ್ರಧಾನವಾಗಿದ್ದರೆ, ಇನ್ನೊಂದು ಹಂತದಲ್ಲಿ ಇನ್ನೊಂದು ಪ್ರಧಾನವಾಗಿರುತ್ತದೆ ಎನ್ನುವುದಷ್ಟೇ ವ್ಯತ್ಯಾಸ. ಸ್ವಾತಂತ್ರ್ಯವೇ ಆದರ್ಶವಾದ ಪಕ್ಷದಲ್ಲಿ, ಸ್ವಾತಂತ್ರ್ಯ ಎಂದರೆ ಒಬ್ಬ ವ್ಯಕ್ತಿಯು ಇನ್ನೊಬ್ಬರ ಮೇಲೆ ಹೊಂದಿರುವ ಪ್ರಭುತ್ವವನ್ನು ನಾಶ ಮಾಡುವುದು ಎಂದಾದರೆ, ಅರ್ಥಿಕ ಸುಧಾರಣೆಯೊಂದೇ ನಾವು ಪ್ರಯತ್ನಿಸಿ ಸಾಧಿಸಲು ಯೋಗ್ಯವಾದದ್ದು ಎಂದು ಹೇಳಲಾಗದು. ಅಧಿಕಾರ ಮತ್ತು ಪ್ರಾಬಲ್ಯದ ಮೂಲವು ಯಾವುದೇ ಸಮಯದಲ್ಲಿ ಅಥವಾ ಯಾವುದೇ ಸಮಾಜದಲ್ಲಿ, ಸಾಮಾಜಿಕ ಮತ್ತು ಧಾರ್ಮಿಕವಾಗಿದ್ದರೆ, ಸಾಮಾಜಿಕ ಸುಧಾರಣೆ ಮತ್ತು ಧಾರ್ಮಿಕ ಸುಧಾರಣೆಯನ್ನು ಅಗತ್ಯವಾಗಿ ಆಗಬೇಕಾದ ಸುಧಾರಣೆಯಾಗಿ ಒಪ್ಪಿಕೊಳ್ಳಬೇಕಾಗುತ್ತದೆ.

ಅಂಬೇಡ್ಕರ್ ಅವರ 'Annihilation of Caste' ಪುಸ್ತಕದ ಅನುವಾದ ಸರಣಿ ಇದು. ಇಲ್ಲಿರುವುದು ಮೂರನೇ ಅಧ್ಯಾಯದ ಮೊದಲ ಭಾಗ.
ನಿಮಗೆ ಏನು ಅನ್ನಿಸ್ತು?
0 ವೋಟ್