ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 9 | ಸಮಾಜವಾದಿಗಳಿಗೆ ಒಂದಷ್ಟು ಪ್ರಶ್ನೆಗಳು

B R Ambedkar

ಸಮಾಜವಾದಿಗಳು ಪರಿಭಾವಿಸುವ ಆರ್ಥಿಕ ಸುಧಾರಣೆಯು ಕ್ರಾಂತಿಯಿಂದಷ್ಟೇ ಸಾಧ್ಯ. ಆ ಕ್ರಾಂತಿ ಅಧಿಕಾರವನ್ನು ವಶಪಡಿಸಿಕೊಳ್ಳುವುದೇ ಆಗಿರುತ್ತದೆ. ಅಂತಹ ಕಾರ್ಯ ಶ್ರಮಿಕ ವರ್ಗದಿಂದಲೇ ಆಗಬೇಕು. ಹಾಗಾದರೆ, ಈ ಕ್ರಾಂತಿಗಾಗಿ ಭಾರತದ ಶ್ರಮಿಕರು ಒಗ್ಗೂಡುತ್ತಾರೆಯೇ? ಜನರನ್ನು ಇಂಥದ್ದೊಂದು ಕ್ರಿಯೆಗೆ ಪ್ರೇರೇಪಿಸಬಲ್ಲದ್ದು ಏನು?

ಈ ರೀತಿಯಾಗಿ ಸಮಾಜವಾದಿಗಳು ಅಳವಡಿಸಿಕೊಂಡ ಇತಿಹಾಸ ಕುರಿತ ಆರ್ಥಿಕ ದೃಷ್ಟಿಕೋನದ  ವ್ಯಾಖ್ಯಾನವನ್ನು ಯಾರೋ ಒಬ್ಬ ವಿರೋಧಿಸಬಹುದು. ಆದರೆ, ನನಗೆ ಕಾಣುವಂತೆ, ಆಸ್ತಿ ಸರ್ವರಿಗೂ ಸಮಪಾಲಾಗಿರುವಂತೆ ಮಾಡುವುದು ನಿಜವಾದ ಏಕೈಕ ಸುಧಾರಣೆಯೆಂದೂ, ಉಳಿದೆಲ್ಲಕ್ಕಿಂತ ಮುಂಚೆ ಇದನ್ನು ಸಾಧಿಸಲೇಬೇಕೆಂದೂ ಹೇಳುವ ಸಮಾಜವಾದಿಗಳ ವಾದಕ್ಕೆ ಇತಿಹಾಸದ ಆರ್ಥಿಕ ವಿವರಣೆ ಅವಶ್ಯವೇನಲ್ಲ.

ಆದಾಗ್ಯೂ, ನಾನು ಸಮಾಜವಾದಿಗಳನ್ನು ಕೇಳಬಯಸುವುದೇನೆಂದರೆ, ನೀವು ಮೊದಲು ಸಾಮಾಜಿಕ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ತರದೆ ಆರ್ಥಿಕ ಸುಧಾರಣೆಯನ್ನು ಹೊಂದಲು ಸಾಧ್ಯವೇ?

ಭಾರತದ ಸಮಾಜವಾದಿಗಳು ಈ ಪ್ರಶ್ನೆಯನ್ನು ಪರಿಗಣಿಸಿದಂತಿಲ್ಲ. ಅವರಿಗೆ ಅನ್ಯಾಯ ಮಾಡಲು ನನಗೆ ಮನಸ್ಸಿಲ್ಲ; ಕೆಲವು ದಿನಗಳ ಹಿಂದೆ ಸಮಾಜವಾದಿಯೊಬ್ಬರು ನನ್ನ ಸ್ನೇಹಿತನಿಗೆ ಬರೆದ ಪತ್ರದ ಉಲ್ಲೇಖವನ್ನು ನಾನು ಕೆಳಗೆ ನೀಡುತ್ತೇನೆ. ಅದರಲ್ಲಿ ಅವರು ಹೀಗೆ ಹೇಳಿದ್ದರು: "ಒಂದು ವರ್ಗದವರು ಇನ್ನೊಂದು ವರ್ಗದವರನ್ನು ದಬ್ಬಾಳಿಕೆಯಿಂದ ನಡೆಸಿಕೊಳ್ಳುತ್ತಿರುವುದು ಸಂಪೂರ್ಣವಾಗಿ ನಿರ್ನಾಮವಾಗುವವರೆಗೆ, ಭಾರತದಲ್ಲಿ ಸ್ವತಂತ್ರ ಸಮಾಜದ ನಿರ್ಮಾಣ ಸಾಧ್ಯವಿದೆ ಎಂದು ನಾನು ನಂಬುವುದಿಲ್ಲ. ನಾನು ಸಮಾಜವಾದಿ ಆದರ್ಶದಲ್ಲಿ ಇಟ್ಟ ನಂಬಿಕೆಯಂತೆ, ವಿವಿಧ ವರ್ಗ, ಗುಂಪುಗಳನ್ನು ಸಮಾನತೆಯಿಂದ ನಡೆಸಿಕೊಳ್ಳಬೇಕು. ಇತರ ಅನೇಕ ಸಮಸ್ಯೆಗಳಂತೆ ಈ ಸಮಸ್ಯೆಗೆ ಕೂಡ ಸಮಾಜವಾದವೊಂದೇ ಪರಿಹಾರವನ್ನು ಒದಗಿಸಬಲ್ಲದು ಎಂದು ನಾನು ಭಾವಿಸುತ್ತೇನೆ.”

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 8 | ಭಾರತದ ಸಮಾಜವಾದಿಗಳ ಆಲೋಚನೆ ಎಡವಿದ್ದೆಲ್ಲಿ?

ಈಗ ನಾನು ಕೇಳಬಯಸುವ ಪ್ರಶ್ನೆ: ವಿವಿಧ ವರ್ಗಗಳನ್ನು ಸಮನಾಗಿ ನಡೆಸಿಕೊಳ್ಳುವುದರಲ್ಲಿ ನನಗೆ ನಂಬಿಕೆಯಿದೆ ಎಂದು ಸಮಾಜವಾದಿ ಹೇಳಿಬಿಟ್ಟರೆ ಸಾಕೇ? ಅಂತಹ ನಂಬಿಕೆಯೊಂದೇ ಸಾಕು ಎನ್ನುವುದು ಅವರಿಗೆ ಸಮಾಜವಾದ ಎಷ್ಟು ಅರ್ಥವಾಗಿದೆ ಎನ್ನುವುದನ್ನು ತೋರಿಸುತ್ತದೆ. ಸಮಾಜವಾದವೆಂಬುದು ಎಲ್ಲಿಯೋ ದೂರದಲ್ಲಿರುವ ಒಂದು ಆದರ್ಶ ಮಾತ್ರವಾಗಿರದೆ, ಅದೊಂದು ವ್ಯವಹಾರ ಸಾಧ್ಯವಾದ ನಿರ್ದಿಷ್ಟ ಕಾರ್ಯಕ್ರಮವಾಗಿರುವ ಪಕ್ಷದಲ್ಲಿ  ಸಮಾಜವಾದಿಗಿರುವ ಪ್ರಶ್ನೆ, ಅವನಿಗೆ ಸಮಾನತೆಯಲ್ಲಿ ನಂಬಿಕೆಯಿದೆಯೇ ಎಂಬುದಲ್ಲ, ಬದಲಿಗೆ ಒಂದು ವ್ಯವಸ್ಥೆಯಾಗಿ, ಒಂದು ತತ್ವವಾಗಿ, ಒಂದು ವರ್ಗವನ್ನು ಕೆಟ್ಟದಾಗಿ ನಡೆಸಿಕೊಳ್ಳುವುದು, ದಮನ ಮಾಡುವುದು ಹಾಗೂ ಹೀಗೆ ದೌರ್ಜನ್ಯ, ದಬ್ಬಾಳಿಕೆಯ ಮೂಲಕ ಒಂದು ವರ್ಗದಿಂದ ಇನ್ನೊಂದು ವರ್ಗವನ್ನು ಒಡೆಯತ್ತ ಹೋಗುವುದು ಅವನಿಗೆ ಒಪ್ಪಿಗೆಯಿದೆಯೇ ಎಂಬುದು.

ನನ್ನ ವಾದವನ್ನು ವಿವರಿಸುವುದಕ್ಕಾಗಿ ಸಮಾಜವಾದಿ ವ್ಯವಸ್ಥೆಯ ಕನಸನ್ನು ನನಸು ಮಾಡಲು ಅವಶ್ಯವಿರುವ ಸಂಗತಿಗಳನ್ನು ವಿಶ್ಲೇಷಿಸಲು ಬಯಸುತ್ತೇನೆ. ಸಮಾಜವಾದಿಗಳು ಪರಿಭಾವಿಸುವ ಆರ್ಥಿಕ ಸುಧಾರಣೆಯು ಒಂದು ಕ್ರಾಂತಿಯ ಮೂಲಕ ಅಧಿಕಾರವನ್ನು ವಶಪಡಿಸಿಕೊಳ್ಳದೆ ಸಾಧ್ಯವಿಲ್ಲ ಎಂಬುದು ಈಗ ಸ್ಪಷ್ಟ. ಆ ಅಧಿಕಾರವನ್ನು ವಶಪಡಿಸಿಕೊಳ್ಳುವ ಕಾರ್ಯ ಶ್ರಮಿಕ ವರ್ಗದಿಂದಲೇ ಆಗಬೇಕು. ನಾನು ಕೇಳುವ ಮೊದಲ ಪ್ರಶ್ನೆ: ಈ ಕ್ರಾಂತಿಯನ್ನು ತರಲು ಭಾರತದ ಶ್ರಮಿಕರು ಒಗ್ಗೂಡುತ್ತಾರೆಯೇ? ಜನರನ್ನು ಇಂಥ ಒಂದು ಕ್ರಿಯೆಗೆ ಪ್ರೇರೇಪಿಸಬಲ್ಲದ್ದು ಏನು? ಇದರಲ್ಲಿ ಭಾಗಿಯಾಗುವ ಜನರ ನಡುವೆ ಸಮಾನತೆ, ಭ್ರಾತೃತ್ವ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ನ್ಯಾಯಪ್ರಜ್ಞೆಯ ಭಾವನೆ ಇದ್ದಾಗ ಮಾತ್ರ ಇಂಥದ್ದಕ್ಕೆ  ಪ್ರೇರಣೆ ಸಿಗುತ್ತದೆ ಎಂದು ನನಗನಿಸುತ್ತದೆ. ಕ್ರಾಂತಿಯನ್ನು ಸಾಧಿಸಿದ ನಂತರ ಅವರನ್ನು ಸಮಾನವಾಗಿ ನೋಡಲಾಗುತ್ತದೆ ಮತ್ತು ಜಾತಿ, ಪಂಥದ ತಾರತಮ್ಯವಿಲ್ಲದೆ ನಡೆಸಿಕೊಳ್ಳಲಾಗುತ್ತದೆ ಎಂದು ಅವರಿಗೆ ಮನವರಿಕೆಯಾಗದ ಹೊರತು ಆಸ್ತಿಯ ಸಮಹಂಚಿಕೆಯ ಕ್ರಾಂತಿಗಾಗಿ ಜನರು ಸೇರುವುದಿಲ್ಲ.

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 7 | ರಾಜಕೀಯ ಕ್ರಾಂತಿಗಳ ಪೂರ್ವ ಮತ್ತು ಪಶ್ಚಿಮ

ಕ್ರಾಂತಿಯನ್ನು ಮುನ್ನಡೆಸುವ ಸಮಾಜವಾದಿಯು ತನಗೆ ಜಾತಿಯಲ್ಲಿ ನಂಬಿಕೆಯಿಲ್ಲ ಎಂಬ ಭರವಸೆ ನೀಡಿದರೆ ಸಾಲದು. ಈ ಆಶ್ವಾಸನೆ ಇನ್ನೂ ಆಳವಾದ, ಸ್ಥಿರವಾದ ನೆಲೆಗಟ್ಟಿನಿಂದ ಅಂದರೆ, ಕ್ರಾಂತಿಗಾಗಿ ಹೊರಟ ಎಲ್ಲರ ಅಂತಃಕರಣದಿಂದ ಬರಬೇಕು. ತಾವೆಲ್ಲ ಸಮಾನರು, ಸೋದರರು ಎಂಬ ಮಾನಸಿಕತೆ ಅವರಲ್ಲಿ ದೃಢವಾಗಿ ನೆಲೆಸಿರಬೇಕು. ಭಾರತದ ಶ್ರಮಿಕ ವರ್ಗ ಬಡತನದಲ್ಲಿದೆ ನಿಜ. ಆದರೆ, ತಮ್ಮ ಸಮಾಜದಲ್ಲಿ ಶ್ರೀಮಂತ-ಬಡವ ಎಂಬ ಭೇದವಿಲ್ಲದೆ ಬೇರಾವ ರೀತಿಯ ಭೇದಭಾವಗಳು ಇಲ್ಲವೆಂದು ಒಪ್ಪುತ್ತದೆಯೇ? ಭಾರತದಲ್ಲಿನ ಬಡವರು ಜಾತಿ ಪಂಥ, ಮೇಲು -ಕೀಳು ಎಂಬ ಭೇದಭಾವವನ್ನು ನೋಡುವುದಿಲ್ಲ ಎಂದು ಹೇಳಬಹುದೇ? ಅವರು ಹಾಗೆ  ಮಾಡುತ್ತಿರುವುದು ನಿಜವಾಗಿದ್ದರೆ, ಶ್ರೀಮಂತರ ವಿರುದ್ಧದ ಬಂಡಾಯದಲ್ಲಿ ಅಂತಹ ಶ್ರಮಿಕರಿಂದ ಯಾವ ರೀತಿಯ ಒಗ್ಗಟನ್ನು ನಿರೀಕ್ಷಿಸಬಹುದು? ಶ್ರಮಿಕರೆಲ್ಲ ಒಗ್ಗೂಡದೆ ಹೋದರೆ ಕ್ರಾಂತಿ ನಡೆಯುವುದಾದರೂ ಹೇಗೆ?

ಹೇಗೋ ಏನೋ ಸುಯೋಗದಿಂದ ಕ್ರಾಂತಿ ನಡೆಯಿತೆಂದೂ, ಸಮಾಜವಾದಿಗಳಿಗೆ ಅಧಿಕಾರ ದೊರೆಯಿತೆಂದೂ ಇಟ್ಟುಕೊಳ್ಳೋಣ. ಭಾರತದಲ್ಲಿರುವ ನಿರ್ದಿಷ್ಟ ಸಾಮಾಜಿಕ ವ್ಯವಸ್ಥೆಯಿಂದ ಉಂಟಾದ ಸಮಸ್ಯೆಗಳನ್ನು ಅವರು ಎದುರಿಸಬೇಕಾಗಿಲ್ಲವೇ? ಭಾರತದ ಜನರಲ್ಲಿರುವ ಮೇಲು-ಕೀಳು, ಶುದ್ಧ-ಅಶುದ್ಧ ಮುಂತಾದ ಭೇದಭಾವದ ಪೂರ್ವಗ್ರಹಗಳಿಂದ ಉಂಟಾಗುವ ಸಮಸ್ಯೆಗಳನ್ನು ಎದುರಿಸದೆ ಸಮಾಜವಾದವು ಭಾರತದಲ್ಲಿ ಒಂದರೆಗಳಿಗೆಯೂ ಆಡಳಿತ ನಡೆಸಲು ಸಾಧ್ಯ ಎಂಬುದನ್ನು ನಾನು ಕಲ್ಪಿಸಿಕೊಳ್ಳಲಾರೆ.

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 6 | ಯಾವುದೇ ಒಂದು ವರ್ಗ ಮತ್ತೊಂದು ವರ್ಗವನ್ನು ಆಳಲು ಯೋಗ್ಯವಲ್ಲ

ಬಣ್ಣದ ಮಾತಾಡುವುದರಲ್ಲಿಯೇ ತೃಪ್ತಿಪಡದೆ, ಸಮಾಜವಾದ ನಿಜವಾಗಿಯೂ ಇಲ್ಲಿ ಕಾರ್ಯರೂಪಕ್ಕೆ ಬರಬೇಕೆಂದು ಸಮಾಜವಾದಿಗಳು ಬಯಸುವುದಾದರೆ, ಸಮಾಜ ಸುಧಾರಣೆಯ ಸಮಸ್ಯೆ ಮೂಲಭೂತವಾದುದೆಂದೂ, ಅದನ್ನು ಪರಿಹರಿಸದೆ ಬೇರೆ ದಾರಿ ಇಲ್ಲವೆಂದೂ ಸಮಾಜವಾದಿಗಳು ಅರಿತುಕೊಳ್ಳಬೇಕು. ಭಾರತದಲ್ಲಿರುವ ಸಾಮಾಜಿಕ ವ್ಯವಸ್ಥೆ ಸಮಾಜವಾದಿಯು ಎದುರಿಸಲೇಬೇಕಾದ ವಿಷಯ. ಹಾಗೆ ಮಾಡದ ಹೊರತು ಅವನು ತನ್ನ ಕ್ರಾಂತಿಯನ್ನು ಸಾಧಿಸಲು ಸಾಧ್ಯವಿಲ್ಲ. ಒಂದು ವೇಳೆ ಅವನು ತನ್ನ ಆದರ್ಶವನ್ನು ಅನುಸರಿಸಲು ಬಯಸುವವನಾದರೆ, ಯಾವುದೋ ಅದೃಷ್ಟದಿಂದ ಕ್ರಾಂತಿಯನ್ನು ಸಾಧಿಸಿದರೂ ಸಾಮಾಜಿಕ ಸಮಸ್ಯೆಯನ್ನು ನಿಭಾಯಿಸುವುದು ಅನಿವಾರ್ಯ ಎಂಬುದು ನನ್ನ ಮಟ್ಟಿಗೆ ನಿರ್ವಿವಾದ. ಅವನು ಕ್ರಾಂತಿಗೆ ಮುಂಚೆ ಜಾತಿಯನ್ನು ಗಣನೆಗೆ ತೆಗೆದುಕೊಳ್ಳದಿದ್ದರೂ, ಕ್ರಾಂತಿಯ ನಂತರವಾದರೂ ಪರಿಗಣಿಸಲೇಬೇಕಾಗುತ್ತದೆ. ನೀವು ಯಾವ ದಾರಿಯಲ್ಲಾದರೂ ಹೋಗಿ; ಜಾತಿಯೆಂಬ ರಾಕ್ಷಸ ನಿಮ್ಮನ್ನು ಅಡ್ಡಗಟ್ಟುತ್ತಾನೆ. ಈ ರಾಕ್ಷಸನನ್ನು ಕೊಲ್ಲದ ಹೊರತು, ನಿಮಗೆ ರಾಜಕೀಯ ಸುಧಾರಣೆಯಿಲ್ಲ, ಆರ್ಥಿಕ ಸುಧಾರಣೆಯೂ ಸಾಧ್ಯವಿಲ್ಲ.

ಅಂಬೇಡ್ಕರ್ ಅವರ 'Annihilation of Caste' ಪುಸ್ತಕದ ಅನುವಾದ ಸರಣಿ ಇದು. ಇಲ್ಲಿರುವುದು ಮೂರನೇ ಅಧ್ಯಾಯದ ಎರಡನೇ ಭಾಗ
ನಿಮಗೆ ಏನು ಅನ್ನಿಸ್ತು?
5 ವೋಟ್