ಜತೆಗಿರುವನೇ ಚಂದಿರ? | ಅಮ್ಮಿ ರಾರಾಜಿಸುತ್ತಿದ್ದಾಳೆ - ಕೆಲವೊಮ್ಮೆ ಶಾಹಿರಾಬಾನು, ಕೆಲವೊಮ್ಮೆ ಸಾವಿತ್ರಮ್ಮ

woman

ಬಹಳ ಕಾಲ ನಮ್ಮ ಮನೆಯಲ್ಲಿ ಎರಡು ಟ್ರಂಕುಗಳಿದ್ದವು; ಒಂದು ಅಬ್ಬನದು, ಮತ್ತೊಂದು ಅಮ್ಮಿಯದು. ಅಬ್ಬನ ಟ್ರಂಕಿನಲ್ಲಿ ಒಂದೆರಡು ಜೊತೆ ಶರ್ಟು-ಪ್ಯಾಂಟು ಇದ್ದವು. ಅಮ್ಮಿಯ ಟ್ರಂಕಿನಲ್ಲಿ ಅವಳ ಮದುವೆಯ ಸೀರೆ, ಒಂದೆರಡು ರವಿಕೆ, ಮದುವೆಯ ಫೋಟೊ, ಅವಳ ಅಕ್ಕನೊಂದಿಗೆ ತೆಗೆಸಿ ಕಟ್ಟುಹಾಕಿಸಿದ್ದ ಬ್ಲಾಕ್ ಅಂಡ್ ವೈಟ್ ಫೋಟೊಗಳಿದ್ದವು

ಆಗ ಅಬ್ಬ, ಅಮ್ಮಿ, ದೊಡ್ಡಣ್ಣ ಮೂವರೂ ಮೈಸೂರಿನ ಕುರುಬರಹಳ್ಳಿಯಲ್ಲಿ ಬಾಡಿಗೆಗೆ ವಾಸವಿದ್ದರಂತೆ. ಆವತ್ತು ಅಬ್ಬ ಕೆಲಸ ಮುಗಿಸಿ ಮನೆಗೆ ಬರುವಷ್ಟರಲ್ಲಿ ಮಧ್ಯರಾತ್ರಿ ಮೂರಾಗಿತ್ತಂತೆ. ಬಂದವನೇ ತುಂಬ ಅವಸರವಸರವಾಗಿ ತಾವು ಊರು ಬಿಡಬೇಕಾದ ಸುದ್ದಿಯನ್ನು ಹೇಳಿ ರಾತ್ರೋರಾತ್ರಿ ತಮಗೆ ಬೇಕಾದ ಸಾಮಾನುಗಳನ್ನು ಮಾತ್ರ ಜೋಡಿಸಿಕೊಂಡು ಮಿಕ್ಕಿದ್ದನ್ನೆಲ್ಲಾ ಅಕ್ಕಪಕ್ಕದ ಮನೆಯವರಿಗೆ ಕೊಟ್ಟು ಬಿಡಲು ಅಮ್ಮಿಗೆ ಹೇಳಿದನಂತೆ. ಅಮ್ಮಿ ವಿಷಯವನ್ನು ಕೆದಕಿ ಕೇಳಿದಾಗ, "ಕೆಲಸ ಮುಗಿಸಿ ಬರುವಾಗ ಸೈಕಲ್ಲಿನಲ್ಲಿ ಡೈನಮೋ ಲೈಟ್ ಇಲ್ಲದಿದ್ದ ಕಾರಣಕ್ಕೆ ಪೋಲೀಸರು ಅಡ್ಡಗಟ್ಟಿದರು. ಅವರೊಂದಿಗೆ ಜಗಳವಾಯ್ತು. ನಾನು ಪೊಲೀಸರಿಗೆ ಹೊಡೆದು ತಪ್ಪಿಸಿಕೊಂಡು ಬಂದಿದ್ದೇನೆ. ಅವರು ನನ್ನನ್ನು ಹುಡುಕುತ್ತಿದ್ದಾರೆ," ಎಂದನಂತೆ. ಅಮ್ಮಿ ಅಕ್ಕ ಪಕ್ಕದವರಿಗೆ ಕೊಡುವ ಮತ್ತು ತಾನು ಕೊಂಡೊಯ್ಯುವ ಸಾಮಾನುಗಳನ್ನು ವಿಂಗಡಿಸಿ ಮಾರನೆಯ ದಿನ ಬೆಳಕು ಹರಿಯುವುದಕ್ಕೂ ಮುಂಚೆಯೇ ಊರು ಬಿಡಲು ತಯಾರಾಗಿದ್ದಳಂತೆ.

ಊರು ಬಿಟ್ಟು ಬರುವಾಗ ತಂದಿದ್ದ ಎರಡು ಟ್ರಂಕುಗಳು ನಾನು ದೊಡ್ಡವಳಾಗುವವರೆಗೂ ನಮ್ಮ ಮನೆಯಲ್ಲಿದ್ದವು. ಅವುಗಳಲ್ಲಿ ಒಂದು ಅಬ್ಬನದು. ಮತ್ತೊಂದು ಅಮ್ಮಿಯದು. ಅಬ್ಬನ ಟ್ರಂಕಿನಲ್ಲಿ ಅಬ್ಬ ತನ್ನ ಒಂದೆರಡು ಜೊತೆ ಶರ್ಟು ಪ್ಯಾಂಟುಗಳನ್ನು ಇಟ್ಟುಕೊಂಡಿದ್ದನು. ಅಮ್ಮಿಯ ಟ್ರಂಕಿನಲ್ಲಿ ತನ್ನ ಮದುವೆಯ ಸೀರೆಯ ಜೊತೆಗೆ ಒಂದೆರಡು ಸೀರೆ ರವಿಕೆಗಳು, ಅಬ್ಬ ಅಮ್ಮಿ ಮದುವೆಯ ಹೊಸತರಲ್ಲಿ ತೆಗೆಸಿಕೊಂಡಿದ್ದ ಫೋಟೊ ಮತ್ತು ಅಮ್ಮಿ ಅವಳ ಅಕ್ಕನೊಂದಿಗೆ ತೆಗೆಸಿ ಕಟ್ಟುಹಾಕಿಸಿದ್ದ ಬ್ಲಾಕ್ ಅಂಡ್ ವೈಟ್ ಫೋಟೊಗಳಿದ್ದವು. ಮನೆ ತುಂಬಾ ತುಂಬಿದ್ದ ಪಾತ್ರೆ, ಸಾಮಾನು, ಅಮ್ಮಿಯ ಸೀರೆಗಳೆಲ್ಲವನ್ನು ಅಕ್ಕ ಪಕ್ಕದವರಿಗೆ ಕೊಟ್ಟು ಬಂದುಬಿಟ್ಟರಂತೆ. ಕೂಡಿಗೆಯೊಂದಿಗೆ ಸಂಪರ್ಕದಲ್ಲಿದ್ದ ಅಬ್ಬನ ಸ್ನೇಹಿತನೊಬ್ಬ ಕೂಡಿಗೆಯನ್ನು ಪರಿಚಯಿಸಿ ಇಲ್ಲಿಗೆ ಕಳುಹಿಸಿದ್ದನಂತೆ.

ಅಬ್ಬ ಮತ್ತು ಅಮ್ಮಿ ಮೈಸೂರು ತೊರೆದು ಕೂಡಿಗೆಗೆ ಬಂದ ಹೊಸತರಲಿ ಅಬ್ಬ ದೊಡ್ಡಣ್ಣನನ್ನು ಕರೆದುಕೊಂಡು ಕೂಡಿಗೆಯ ಮಸೀದಿಗೆ ನಮಾಜಿಗೆ ಹೋಗುತ್ತಿದ್ದನಂತೆ. ದೊಡ್ಡಣ್ಣನ ಕೈಯಲ್ಲಿ ಕೋಳಿ ಕಳಿಸಿ ಮಸೀದಿಯಿಂದಲೇ ಬಿಸ್ಮಿಲ್ಲಾ ಮಾಡಿಸಿ ತರಿಸುತ್ತಿದ್ದನಂತೆ. ಒಮ್ಮೆ ಬಿಸ್ಮಿಲ್ಲಾ ಮಾಡಿಸಲು ದೊಡ್ಡಣ್ಣನ ಕೈಯಲ್ಲಿ ಕೋಳಿ ಕೊಟ್ಟು ಕಳಿಸಿದಾಗ ಗುರುಗಳಿದ್ದರೂ 'ಮಸೀದಿಯಲ್ಲಿ ಗುರುಗಳಿಲ್ಲ' ಎಂದು ಹೇಳಿ ಬಿಸ್ಮಿಲ್ಲಾ ಮಾಡಿಕೊಡದೆ ಹಾಗೇ ಕಳಿಸಿದ್ದರಂತೆ. ಅಳುತ್ತಾ ಬಂದ ದೊಡ್ಡಣ್ಣನನ್ನು ನೋಡಿ ಕೋಪಗೊಂಡ ಅಬ್ಬ ಮಸೀದಿಯ ಮುಂದೆ ಹೋಗಿ ನಿಂತು ಜಗಳ ಮಾಡಿದ್ದನಂತೆ.

Image
Human

ಅಮ್ಮಿ ಬುರ್ಖಾ ಇಲ್ಲದೆ ಓಡಾಡುತ್ತಿದ್ದುದ್ದರಿಂದ ಸರ್ಕಲ್ಲಿನಲ್ಲಿ ತರಕಾರಿ ಅಂಗಡಿ ಇಟ್ಟುಕೊಂಡಿದ್ದ ಅಬ್ದುಲ್ಲಣ್ಣ ಅಬ್ಬ ಸರ್ಕಲ್‌ನಲ್ಲಿ ಸಿಕ್ಕಾಗಲೆಲ್ಲಾ "ಹಿಂದು ಹೆಣ್ಣನ್ನು ಮದುವೆಯಾಗಿದ್ದಿ. ಅವಳನ್ನು ಜಾತಿಗೆ ಸೇರಿಸು. ಬಂದು ನಮ್ಮ ಜನರೊಟ್ಟಿಗೆ ವಾಸ ಮಾಡು. ಬುರ್ಖಾ ಹಾಕಲು ಹೇಳು, ಮುಸ್ಲಿಂಮನಾಗಿ ಕುಡೀತೀಯಾ, ಇಸ್ಪೀಟ್ ಆಡ್ತೀಯ," ಎನ್ನುತ್ತಾ ಕಿರಿಕಿರಿ ಮಾಡಿ ಜಗಳ ತೆಗೆಯುತ್ತಿದ್ದನಂತೆ. ಹಾಗಾಗಿ, ಅಬ್ದುಲ್ಲಣ್ಣನಿಗೂ ಅಬ್ಬನಿಗೂ ಒಂದು ರೀತಿಯ ಮನಸ್ತಾಪ ಸ್ಥಾಯಿಯಾಗಿಯೇ ಉಳಿದಿತ್ತು. ನಾವು ಅವನ ಅಂಗಡಿಗೆ ಸಾಮಾನು ತರಲು ಹೋದರೆ ಮುಖ ಗಂಟಿಕ್ಕಿಕೊಂಡು ಗಂಟೆಗಟ್ಟಲೆ ನಮ್ಮನ್ನು ಕಾಯಿಸಿ ಸಾಮಾನಿದ್ದರೂ ಇಲ್ಲವೆನ್ನುತ್ತಿದ್ದ.

ಒಂದು ದಿನ ಸಾಯಂಕಾಲ ಏಳೆಂಟು ಗಂಟೆಯ ಸಮಯ. ನಾವು ಓದುತ್ತಾ ಕುಳಿತಿದ್ದೆವು. ಅಮ್ಮಿ ಅಡುಗೆ ಕೋಣೆಯಲ್ಲಿದ್ದಳು. ಯಾರೋ ಒಬ್ಬ ಅಪರಿಚಿತ ಬಂದು ಕುಡಿದಿದ್ದ ಅಬ್ಬನೊಂದಿಗೆ ಅಬ್ದುಲ್ಲಣ್ಣ ಜಗಳವಾಡಿ ಅಬ್ಬನನ್ನು ಹೊಡೆದು ಮೋರಿಯಲ್ಲಿ ಹಾಕಿದ್ದನ್ನು ಹೇಳಿ ಹೋದನು. ಅಮ್ಮಿ ಗಾಬರಿಯಿಂದ ಅಳುತ್ತಾ ಅಬ್ಬನನ್ನು ಬಯ್ದುಕೊಳ್ಳುತ್ತಾ ಸರ್ಕಲ್‌ನ ಕಡೆಗೆ ಓಡತೊಡಗಿದಳು. ನಾವೂ ಅವಳ ಹಿಂದೆ ಓಡಿದೆವು. ಹೋಗಿ ನೋಡಿದರೆ ಅಬ್ಬ ಕಸದಂತೆ ಮೋರಿಯಲ್ಲಿ ಮುದ್ದೆಯಾಗಿ ಬಿದ್ದುಕೊಂಡಿದ್ದ. ಅಮ್ಮಿ ಅಳುತ್ತಾ ಅಬ್ಬನನ್ನು ಮೋರಿಯಿಂದ ಎತ್ತಲು ಯಾರ್ಯಾರನ್ನೋ ಗೋಗರೆದಳು. ಒಂದಿಬ್ಬರು ಅಬ್ಬನನ್ನು ಮೋರಿಯಿಂದ ಎತ್ತಿ ಹೆಗಲ ಮೇಲೆ ಹೊತ್ತು ತಂದು ಮನೆಗೆ ಹಾಕಿದರು.

ಈ ಲೇಖನ ಓದಿದ್ದೀರಾ?: ಜತೆಗಿರುವನೇ ಚಂದಿರ? | ಆಗಾಗ ರಕ್ಕಸನಾಗುತ್ತಿದ್ದ ಅಬ್ಬನ ಅವಾಂತರಗಳು

ಒಮ್ಮೆ ಅಬ್ಬ ಅಮ್ಮಿಗೆ "ಬುರ್ಖಾ ತಂದ್ಕೊಡ್ತೀನಿ.. ಹಾಕ್ಕೋತೀಯಾ" ಎಂದು ಕೇಳಿದಾಗ ಅದಕ್ಕೆ ಅಮ್ಮಿ ಒಪ್ಪಲಿಲ್ಲವಂತೆ. ಅಬ್ಬನೂ ಹೆಚ್ಚು ಒತ್ತಾಯ ಪಡಿಸಲಿಲ್ಲ ಎಂದು ಅಮ್ಮಿ ಹೇಳುತ್ತಿದ್ದಳು. ಆದರೆ, ಅಬ್ಬ ಮಾತ್ರ ಅಮ್ಮಿಯೊಂದಿಗೆ ಉರ್ದುವಿನಲ್ಲೇ ಮಾತನಾಡುತ್ತಿದ್ದ. ಹಾಗಾಗಿ, ಅಮ್ಮಿ ಚೆನ್ನಾಗಿ ಉರ್ದು ಕಲಿತಿದ್ದಳು. ಅವಳು ನಮ್ಮೊಂದಿಗೆ ಉರ್ದುವಿನಲ್ಲೇ ಮಾತನಾಡಬೇಕಿತ್ತು. ಅಪ್ಪಿತಪ್ಪಿ ನಮ್ಮೊಂದಿಗೆ ಕನ್ನಡದಲ್ಲಿ ಮಾತನಾಡಿದರೆ ಅಬ್ಬ ಆವೇಶ ಬಂದವನಂತೆ "ಕನ್ನಡದಲ್ಲಿ ಮಾತಾಡ್ಸಿ ನನ್ನ ಮಕ್ಕಳ್ನ ಹಾಳ್ ಮಾಡ್ತೀಯಾ" ಎನ್ನುತ್ತಾ ಹೊಡೆಯಲು ಹೋಗುತ್ತಿದ್ದನು. ಯಾರಾದರೂ ಅಮ್ಮಿಯ ಹೆಸರನ್ನು ಕೇಳಿದರೆ 'ಶಾಹಿರಾಬಾನು' ಎನ್ನಬೇಕೆಂದು ಅಮ್ಮಿಗೆ ಹೇಳಿಕೊಟ್ಟಿದ್ದ. ಹಾಗಾಗಿ, ಎಲ್ಲರಿಗೂ ಅಮ್ಮಿ ಶಾಹಿರಾಬಾನಾಗಿ ಪರಿಚಿತಳಾಗಿ ಸಾವಿತ್ರಮ್ಮನಾಗಿ ಹಳಬಳಾಗುತ್ತಿದ್ದಳು. ಈಗಲೂ ನನ್ನ ಮತ್ತು ಅವಳ ಗುರುತಿನ ಚೀಟಿ ಹಾಗೂ ಕೆಲವು ಪ್ರಮಾಣ ಪತ್ರಗಳಲ್ಲಿ ಅಲ್ಲಲ್ಲಿ ಶಾಹಿರಾಬಾನು ಆಗಿಯೂ, ಕೆಲವು ಕಡೆ ಸಾವಿತ್ರಮ್ಮ ನಾಗಿಯೂ ರಾರಾಜಿಸುತ್ತಿದ್ದಾಳೆ. ನಾವೂ ಕೂಡ ಯಾರಾದರೂ ಅಮ್ಮಿಯ ಹೆಸರು ಕೇಳಿದರೆ ಶಾಹಿರಾಬಾನು ಅಂತಲೇ ಹೇಳುತ್ತಿದ್ದೆವು.

ಈ ಎಲ್ಲಾ ವರ್ತಮಾನಗಳಿಂದ ಅಬ್ಬ ಕೂಡಿಗೆಯ ಮಸೀದಿಗೆ ಹೋಗುವುದನ್ನೇ ಬಿಟ್ಟಿದ್ದನು. ಪ್ರತೀ ಶುಕ್ರವಾರಗಳಂದು ಕುಶಾಲನಗರದ ಮಸೀದಿಗೆ ದಿನಣ್ಣನನ್ನು ಕರೆದುಕೊಂಡು ಹೋಗಿ ನಮಾಜ್ ಮುಗಿಸಿ ಬರುತ್ತಿದ್ದನು. ಹೀಗೆ, ದಿನದ ನಮಾಜ್ ಹೋಗಿ ವಾರಕ್ಕೊಮ್ಮೆಯಂತೆ ಬದಲಾಯಿತು. ಒಮ್ಮೆ ನನ್ನನ್ನೂ ಕುಶಾಲನಗರದ ಮಸೀದಿಗೆ ಕರೆದುಕೊಂಡು ಹೋಗಿದ್ದನು. ನನ್ನನ್ನು ಮಸೀದಿಗೂ ರಸ್ತೆಗೂ ಅಡ್ಡಲಾಗಿ ಕಟ್ಟಿದ್ದ ತಂತಿ ಬೇಲಿಯ ಆಚೆ ನಿಲ್ಲಿಸಿ ಅಬ್ಬ ದಿನಣ್ಣ ಇಬ್ಬರೂ ಹೋಗಿ ನಮಾಜ್ ಮುಗಿಸಿ ಬಂದಿದ್ದರು.

ರಂಜಾನ್ ಮತ್ತು ಬಕ್ರಿದ್ ಹಬ್ಬಗಳಲ್ಲಿ ನಮ್ಮಿಬ್ಬರಿಗೂ ಹೊಸ ಬಟ್ಟೆ ತರುವುದನ್ನು ತಪ್ಪಿಸುತ್ತಿರಲಿಲ್ಲ. ನನಗೆ ಹೊಸ ಬಟ್ಟೆಯ ಜೊತೆ ಅದಕ್ಕೊಪ್ಪುವ ಬೆಳೆ, ಸರ, ರಿಬ್ಬನ್, ಡಾಬು ಎಲ್ಲವನ್ನೂ ಕೊಡಿಸುತ್ತಿದ್ದನು. ದುಂಡು ಮಲ್ಲಿಗೆಯ ದಂಡೆಯನ್ನು ತಲೆತುಂಬಾ ಮುಡಿಸಿ ಕಣ್ತುಂಬಿಕೊಳ್ಳುತ್ತಿದ್ದನು. ಮೆಹಂದಿ ಪುಡಿಯನ್ನು ನೀರಿನಲ್ಲಿ ಕಲಸಿ ಎರಡು ಕೈಗಳಿಗೂ ರಾತ್ರಿ ದಟ್ಟವಾಗಿ ಮೆತ್ತಿ ಕೈಗಳನ್ನು ಪ್ಲಾಸ್ಟಿಕ್ ಕವರಿನೊಳಗೆ ತೂರಿಸಿ ಬೆಳಿಗ್ಗಿನ ತನಕ ಬಿಚ್ಚದಂತೆ ಹಗ್ಗ ಕಟ್ಟಿ ಬಿಡುತ್ತಿದ್ದ. ಒಮ್ಮೆ ರಂಜಾನ್ ಹಬ್ಬಕ್ಕೆ ಬಟ್ಟೆ ತುಂಬಾ ಮಿಂಚುಗಳಿದ್ದ ಒಂದು ಚೂಡೀದಾರ ಕೊಡಿಸಿದ್ದ. ನನ್ನೊಂದಿಗೆ ಆಡಲು ಬರುತ್ತಿದ್ದ ನನ್ನ ಗೆಳತಿಯರು ಅದರಲ್ಲಿದ್ದ ಮಿಂಚುಗಳನ್ನೆಲ್ಲಾ ಕಿತ್ತು ಕಿತ್ತು ಅವರ ಹಣೆಗೆ ಬೊಟ್ಟಿನಂತೆ ಮತ್ತು ಮೂಗಿಗೆ ಮೂಗುತಿಯಂತೆ ಅಂಟಿಸಿಕೊಳ್ಳುತ್ತಿದ್ದರು. ಅಲ್ಲದೇ, ನನ್ನ ಹಣೆಗೂ ಅಂಟಿಸಿ "ಎಷ್ಟು ಚೆನ್ನಾಗಿ ಕಾಣ್ತಾಳೆ..!" ಅನ್ನುವ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದರು. ನಾನು ಮನೆಯಲ್ಲಿ ಯಾರಿಗೂ ತಿಳಿಯದಂತೆ ಆ ಮಿಂಚುಗಳನ್ನು ಕಿತ್ತು ಹಣೆಗೆ ಅಂಟಿಸಿ ಕನ್ನಡಿ ನೋಡಿಕೊಂಡು ಖುಷಿ ಪಡುತ್ತಿದ್ದೆ. ಮನೆಯಲ್ಲಿ ಶಾಹಿರಾಬಾನಾಗಿ ಅಮ್ಮಿಯಾಗಲಿ, ಜಾಹಿಧಾನಾಗಿ ನಾನಾಗಲಿ ಹಣೆಗೆ ಬೊಟ್ಟಿಡಲು ಅವಕಾಶವಿರಲಿಲ್ಲ. ಆದರೆ, ತವರು ಮನೆಯಲ್ಲಿ ಹಾಕಿಸಿದ್ದ ಹಚ್ಚೆ ಸಾವಿತ್ರಮ್ಮಳ ಹಣೆಯ ಮೇಲೆ ಹಾಗೆಯೇ ಇತ್ತು.

Image
Happy Kids

ನಾವಾಗ ಒಂದು ವಠಾರದಲ್ಲಿ ಬಾಡಿಗೆಗಿದ್ದೆವು. ಅಬ್ಬ ಪೇಪರ್ ವ್ಯಾಪಾರ ಮಾಡುತ್ತಿದ್ದ. ಆವತ್ತು ಪೇಪರ್ ವ್ಯಾಪಾರಕ್ಕೆಂದು ಮೈಸೂರಿಗೆ ಹೋಗಿದ್ದ ಅಬ್ಬ ಮಧ್ಯರಾತ್ರಿ ಮನೆಗೆ ಬಂದನು. ಸೀಮೆಎಣ್ಣೆಯ ದೀಪವೊಂದು ಕುಣಿಯುತ್ತಾ ಕುಣಿಯುತ್ತಾ ಆ ಪುಟ್ಟ ಮನೆಗೆಲ್ಲಾ ಚೆಲ್ಲಿದ್ದ ಮಿಣುಕು ಬೆಳಕಲ್ಲಿ ಅಬ್ಬ ಅಮ್ಮಿ ಇಬ್ಬರೂ ಕೆಳದನಿಯಲ್ಲಿ ಮಾತನಾಡುತ್ತಾ ಕೆಂಪಗೆ ಒಂದಡಿಯಷ್ಟು ಅಗಲ ಹರಡಿಕೊಂಡಿದ್ದ ಮಾಂಸದ ಹಾಸೊಂದನ್ನು ಕುಯ್ಯುತ್ತಿದ್ದರು. ಗಾಢ ನಿದ್ರೆಯನ್ನೇ ಎಚ್ಚರಿಸಿದವಳ ಕಣ್ಣುಗಳಿಗೆ ಹಬ್ಬವೇ ಅಡರಿಕೊಂಡಿತು. ಆ ಪುಟ್ಟ ಮನೆಯ ತುಂಬಾ ತುಂಬಿಕೊಂಡಿದ್ದ ಅದರ ಘಮಲಿಗೆ ಮನಸ್ಸು ಇನ್ನಿಲ್ಲದಂತೆ ಪುಳಕಗೊಂಡಿತ್ತು. ಅಮ್ಮಿ ರಾತ್ರಿಯೇ ತಣ್ಣಗೆ ಉಸಿರು ನಿಲ್ಲಿಸಿದ್ದ ಒಲೆಗೆ ಕಡ್ಡಿ ಪುಳ್ಳೆಗಳನ್ನು ತುರುಕಿ ಬೆಂಕಿ ಹಚ್ಚಿದಳು. ಸಣ್ಣಗೆ ಉದ್ದಕ್ಕೆ ಹೆಚ್ಚಿದ್ದ ಮಾಂಸದ ತುಂಡುಗಳಿಗೆ ಉಪ್ಪು ಖಾರವನ್ನು ಸವರಿ, ಒಲೆಯ ಕಾವಿಗೆ ಹಗ್ಗ ಕಟ್ಟಿ ಅದನ್ನು ಬಟ್ಟೆಚೂರುಗಳಂತೆ ಆ ಹಗ್ಗದ ಉದ್ದಕ್ಕೂ ಒಣಹಾಕಿದಳು. ಒಂದಿಷ್ಟು ಮಾಂಸವನ್ನು ಉಪ್ಪು ಈರುಳ್ಳಿಯೊಂದಿಗೆ ಬೇಯಿಸಿ ತೆಗೆದಿಟ್ಟಳು. ಬೆಳಿಗಿನ ಜಾವದವರೆಗೂ ಮಾಡುತ್ತಿದ್ದ ಕೆಲಸದ ಜೊತೆಗೆ ಮೈಸೂರಿನಲ್ಲಾದ ಆಗುಹೋಗುಗಳ ಬಗ್ಗೆ ಅವರ ಮಾತುಗಳು ಸಾಗಿಯೇ ಇದ್ದವು. ಬೆಳಿಗ್ಗಿನವರೆಗೂ ತಾಕಿದ ಶಾಖಕ್ಕೆ ಆ ಮಾಂಸದ ಚೂರುಗಳು ಒಣಗಿ ಕೊರಡಿನಂತೆ ಸೆಟಗೊಂಡಿದ್ದವು.

ಬೆಳಿಗ್ಗೆ ಕಣ್ಣು ಹೊಸಕುತ್ತಲೇ ಎದ್ದ ನಮ್ಮನ್ನು ಕರೆದು ಯಾರನ್ನೂ ಮನೆಯ ಒಳಗೆ ಬಿಡಬಾರದಾಗಿ ಗುಟ್ಟಿನಲ್ಲಿ ಹೇಳಿ ಅದಕ್ಕೆ ಅಡ್ಡಲಾಗಿ ಒಂದು ಬಟ್ಟೆಯನ್ನು ಕಟ್ಟಿ ಇಬ್ಬರೂ ಕೆಲಸಕ್ಕೆ ಹೊರಟುಹೋದರು. ನಾವು ಅಂದು ಪಹರೆಯವರಂತೆ ಯಾರನ್ನೂ ಮನೆಯೊಳಗೆ ಬಿಟ್ಟುಕೊಳ್ಳದೆ ನಾವು ಮಾತ್ರ ಆಟದ ಮಧ್ಯೆ-ಮಧ್ಯೆ ಅಡಿಗೆ ಕೋಣೆಗೆ ನುಗ್ಗಿ ಕೊರಡಿನಂತೆ ಸೆಟಕೊಂಡಿದ್ದ ಆ ಮಾಂಸದ ತುಂಡನ್ನು ಮುರಿಮುರಿದು ಬಾಯಲ್ಲೆಸೆದುಕೊಂಡು ಅದನ್ನು ಕುರುಕುತ್ತಾ ಸಂಜೆಯವರೆಗೂ ಆಟವಾಡಿದೆವು.

ನಿಮಗೆ ಏನು ಅನ್ನಿಸ್ತು?
3 ವೋಟ್