ಅಪ್ರಮೇಯ | ಉಪ್ಪಾರ್ ಪೇಟೆ ಪೊಲೀಸ್ ಠಾಣೆಯ 'ಟು ಸ್ಟಾರ್' ಜೊತೆಗಿನ ಒಂದು ವಾಗ್ವಾದ

human trafficking 3

ಲೈಂಗಿಕ ಕಾರ್‍ಯಕರ್‍ತರ ಕಶ್ಟ-ಸುಖಗಳನ್ನು ಕಣ್ಣಾರೆ ಕಂಡಿದ್ದೇನೆ. ಸೋಲುಗಳಲ್ಲಿ ಅವರ ಜೊತೆಗೆ ಅತ್ತು, ಸಂತೋಶಗಳಲ್ಲಿ ಗಟ್ಟಿಯಾಗಿ ಅಪ್ಪಿ ಕುಶಿಯಾಗಿದ್ದಿದೆ. ಲೈಂಗಿಕ ಕೆಲಸ ಒಂದು ವ್ರುತ್ತಿನೋ ಅಲ್ಲವೋ ತೀರ್ಮಾನ ಮಾಡಲು ನಾನು ಯಾರೂ ಅಲ್ಲ. ಆದ್ರೆ, ಈ ಕೆಲಸ ಮಾಡುವವರಿಗೆ ಮಿಕ್ಕ ಕೆಲಸ ಮಾಡುವವರಂತೆಯೇ ಸಾಂವಿದಾನಿಕ ಗನತೆ ಮತ್ತು ಗೌರವ ಸಿಗಬೇಕು

ಏನ್ ಬರೀಬೇಕು ಅಂತ ಗೊತ್ತಾಗ್ತ ಇಲ್ಲ. ಅಶ್ಟೊಂದು ಗೊಂದಲ. ದಿನೇ-ದಿನೇ ನಡೆಯುತ್ತಿರುವ ವಿಶಯಗಳು ನಿರಾಸೆ ತರಿಸುತ್ತಿವೆ, ರೊಚ್ಚಿಗೇಳಿಸುತ್ತಿವೆ. ಒಂದೊಂದು ಸಾರಿ ರೂಮಲ್ಲಿ ಬಾಗಿಲು ಹಾಕಿಕೊಂಡು ಜೋರಾಗಿ ಅಳ್ತೀನಿ. ಒಮ್ಮೊಮ್ಮೆ ಅಳಕ್ಕಾಗದೆ, ಗೊಳೋ ಅಂತ ಅಳೋ ಸಿನಿಮಾ ಹಾಕಿಕೊಂಡು, ಈರುಳ್ಳಿ ಹೆಚ್ಚಿ-ಹೆಚ್ಚಿ ಅಳಕ್ಕೆ ಟ್ರೈ ಮಾಡಿದರೂ ಅಳು ಬರಲ್ಲ. ಆದ್ರೆ ಇತ್ತೀಚೆಗೆ ಒಂದು ಸಿನಿಮಾ ನೋಡಿದ ನಂತರ ಮತ್ತು ಲೈಂಗಿಕ ಕಾರ್‍ಯಕರ್‍ತರಿಗೆ ಆದಾರ್ ಕಾರ್‍ಡ್ ಕೊಡಿ ಅಂತ ಸುಪ್ರೀಂ ಕೋರ್ಟ್ ತೀರ್ಮಾನ ಹೇಳಿದ ನಂತರ, ಯಾಕೆ ಅಂತ ಗೊತ್ತಿಲ್ಲ... ಅವತ್ತು ಫಮಿಲಾ, ಕಾಜಲ್ ಹಾಗೂ ಸಲ್ಮಾನ ನೆನೆಸಿಕೊಂಡು ಜೋರಾಗಿ ಅತ್ತುಬಿಟ್ಟೆ.

ನಾನು ನೋಡಿದ್ದೆ ಅವರ ಕಶ್ಟ-ಸುಖಗಳನ್ನು, ಜೊತೆ ನಿಂತಿದ್ದೆ ಕೂಡ. ಸೋಲುಗಳಲ್ಲಿ ಅವರ ಜೊತೆಗೆ ಅತ್ತು, ಸಣ್ಣ-ಸಣ್ಣ ಸಂತೋಶಗಳಲ್ಲಿ ಗಟ್ಟಿಯಾಗಿ ಅಪ್ಪಿ ಕುಶಿಯಾಗಿದ್ದಿದೆ. ಆಗಲೂ ಅಶ್ಟೆ, ಈಗಲೂ ಅಶ್ಟೆ; ಲೈಂಗಿಕ ಕೆಲಸ ಒಂದು ವ್ರುತ್ತಿನೋ ಅಲ್ಲವೋ ಅಂತ ತೀರ್ಮಾನ ಮಾಡಲು ನಾನು ಯಾರೂ ಅಲ್ಲ. ಆದ್ರೆ, ನನಗಿಶ್ಟೇ ಬೇಕು - ಈ ಕೆಲಸ ಮಾಡುವವರಿಗೆ ಮಿಕ್ಕ ಕೆಲಸ ಮಾಡುವವರಂತೆ ಸಾಂವಿದಾನಿಕ ಗನತೆ ಮತ್ತು ಗೌರವ ಇರಬೇಕು. ನಮ್ ಫಮೀಲ (ಹಿಜ್ರ, ಸೆಕ್ಸ್ ವರ್ಕರ್. 2004ರಲ್ಲಿ ತೀರಿಕೊಂಡಳು) ಅಂತೂ ಯಾವಾಗಲೂ ಹೇಳುತ್ತಿದ್ದಳು, "ಲೈಂಗಿಕ ಕೆಲಸದಲ್ಲಿ ನಮಗಿಂತ ಮಹಿಳೆಯರಿಗೇ ಬಹಳ ಕಶ್ಟ. ನಾವು ಹೆಂಗಸಾಗಿನೇ ಕೆಲಸಕ್ಕೆ ಹೋಗ್ತೀವಿ. ಕ್ಲೈಂಟ್ ನಮಗೆ ಕೇಡು ಮಾಡಕ್ಕೆ ಬಂದರೆ ಜೋರಾಗಿ ಚಪ್ಪಾಳೆ ಹೊಡೆದು ಹೆದರಿಸಿ ಓಡಿಸಬಹುದು. ಆದ್ರೆ ಮಹಿಳೆಯರು ಎಲ್ರೂ ಗಟ್ಟಿ ಇರಲ್ಲ. ಹಾಗಂತ ಫೀಲ್ಡ್‌ಗೆ ಬಂದ ಮೇಲೆ ಹೆಂಗಸರು ಬಹಳ ಗಟ್ಟಿ ಆಗ್ತಾರೆ. ಈ ಫೀಲ್ಡೇ ಹಾಗೆ. ಎಂತ ಅಮಾಯಕ ಹೆಂಗಸರನ್ನೂ ಗಟ್ಟಿ ಮಾಡಿಬಿಡುತ್ತದೆ."

Image
human trafficking 1
ಸಾಂದರ್ಭಿಕ ಚಿತ್ರ

ನಾನು 1999ರಲ್ಲಿ ಲೈಂಗಿಕ ಕಾರ್‍ಮಿಕರ ಜೊತೆ ಕೆಲಸ ಮಾಡಲು ಶುರು ಮಾಡಿದೆ. ಜೊತೆ ಕೆಲಸ ಶುರು ಮಾಡಿದೆ ಎಂದರೆ, ಅವರ ಸಂಗಟನೆಯಲ್ಲಿ ಬೆಂಬಲಿಗನಾಗಿ, ಅವರನ್ನು ಪೋಲೀಸರು, ಗೂಂಡಾಗಳು ಹಾಗೂ ಪಬ್ಲಿಕ್ಕು ಪೀಡಿಸಿದಾಗ, ಅವರಿಗೆ ಕಾನೂನು ಸಹಾಯ ಮಾಡೋದು, ಫೀಲ್ಡ್‌ನಲ್ಲಿ ಏನಾದರೂ ಬ್ಲಾಕ್‌ಮೇಲ್ ಮಾಡಿದರೆ ಹೋಗಿ ಸಂದಾನ ಮಾಡೋದು, ಅವರ ಹಕ್ಕುಗಳಿಗಾಗಿ ಅವರ ಜೊತೆ ಸೇರಿ ಪ್ರತಿಬಟನೆ ಆಯೋಜಿಸುವುದು, ಅವರನ್ನು ಅರೆಸ್ಟ್ ಮಾಡಿದ್ರೆ ಪೊಲೀಸ್ ಸ್ಟೇಶನ್‍ನಿಂದ ಬಿಡಿಸಿಕೊಂಡು ಬರುವುದು, ಅವರ ಮದ್ಯೆ ಬರುವ ಜಗಳಗಳನ್ನು ಬಿಡಿಸುವುದು, ಅವರಿಗೆ ಸಂಗಟಿತರಾಗಲು ಸಂವಿದಾನವನ್ನು ತಿಳಿಸಿಕೊಡುವುದು... ಹೀಗೆಲ್ಲ. ಒಮ್ಮೊಮ್ಮೆ ಜೊತೆ ಸೇರಿ ಗುಂಡು ಹಾಕಿ ಅವರ ಜೀವನದ ಕತೆಗಳನ್ನು ಕೇಳುವುದು, ಅವರನ್ನು ಮನೆಗೆ ಕರೆದು ಅಡುಗೆ ಮಾಡಿ ಜೊತೆ ಸೇರಿ ಹಾಡಿ, ಕುಣಿದು, ಜೋರಾಗಿ ನಕ್ಕು ಅವರ ಕುಟುಂಬದವರಲ್ಲಿ ಒಬ್ಬರಾಗಿಬಿಡುವುದು.

ಒಮ್ಮೆ ಬೆಂಗಳೂರಿನ ಉಪ್ಪಾರ್ ಪೇಟೆ ಪೊಲೀಸ್ ಸ್ಟೇಶನ್‍ನಲ್ಲಿ ಹೀಗೇ ಒಬ್ಬರು ಮಹಿಳೆ ಮತ್ತು ಒಬ್ಬರು ಹಿಜ್ರ ಅವರನ್ನು ಬಿಡಿಸಿಕೊಳ್ಳಲು ಹೋದಾಗ, ಪೊಲೀಸರು ಮತ್ತು ನನ್ನ ನಡುವೆ ಈ ಕೆಳಗಿನ ವಾಗ್ವಾದ ನಡೆಯಿತು:

"ನೀನೇನು ಇವ್ರನ್ನ ಇಟ್ಕೊಂಡು ದಂದ ಮಾಡ್ತಿದ್ದೀಯ?"

"ಇಲ್ಲ, ನಾನು ಮಾನವ ಹಕ್ಕುಗಳ ಕೆಲಸ ಮಾಡ್ತೀನಿ."

"ಇವ್ರು ದಂದೆ ಮಾಡಿ ನಿಮಗೆಶ್ಟು ಪರ್ಸೆಂಟೇಜ್ ಕೊಡ್ತಾರೆ?”

ಈ ಲೇಖನ ಓದಿದ್ದೀರಾ?: ಅಪ್ರಮೇಯ | ಪುರುಶ ಪ್ರದಾನ ದಬ್ಬಾಳಿಕೆಗಳನ್ನೆಲ್ಲ ಕಾನೂನಿನ ಕಟಕಟೆಗೆ ತಂದು ನಿಲ್ಲಿಸುವುದು ಅತ್ಯವಶ್ಯ

“ಇವರು ಕೆಲಸ ಮಾಡೋದು ಅವರ ಹೊಟ್ಟೆ ಪಾಡಿಗೆ. ನಾನು ಇವರನ್ನು ಬಿಡಿಸಲು ಬಂದಾಗ ನಿಮ್ಮ ತರ ಪರ್ಸೆಂಟೇಜ್ ಕೇಳಲ್ಲ. ನಾನು ಅವರ ಜೀವಿಸುವ ಹಕ್ಕಿಗಾಗಿ ಕೆಲಸ ಮಾಡುತ್ತಿದ್ದೇನೆ.”

“ಓಹೊಹೋ, ಸೋಶಲ್ ಸರ್ವಿಸು...”

“ಅಲ್ಲ, ಅವರಿಗೂ ಮಾನವ ಹಕ್ಕುಗಳಿವೆ ಅಂತ ನಿಮಗೆ ತಿಳಿಸಲು ಬಂದೆ..."

“ಈ ಸೂಳೇರ್ಗೆ ಏನ್ ಹಕ್ಕಪ್ಪ! ಹಾಕ್ಕಂಡು ಸರೀಗೆ ಮಾಡಿದ್ರೆ ಈ ಕಚಡಾ ಕೆಲಸ ನಿಲ್ಸಿ ಮನೇಲಿ ಮುದುರ್‍ಕೊಂಡಿರ್‍ತಾರೆ. ಸುಮ್‌ಸುಮ್ನೆ ಬೀದಿಗೆ ಬಂದ್‍ಬಿಟ್ಟು ಗಂಡಸರ್ನ ಕೆಡಸ್ತಾರೆ ಬೇವರ್ಸಿಗಳು..."

"ಗಂಡಸರ್‍ಗೆ ಎಲ್ಲಂದ್ರೆ ಅಲ್ಲಿ ಕೆಡಿಸಕ್ಕೆ ಅವರು ಅಶ್ಟು ವೀಕಾ ಸರ್?"

"ಏನಮ್ಮ ಹಿಂಗ್ ಮಾತಾಡ್ತೀಯ? ನಾನು ಯಾರ್ ಅಂತ ಗೊತ್ತಲ್ಲ? ಟು ಸ್ಟಾರು..."

“ಕಂಡಿತ ಗೊತ್ತು ಸಾರ್... ಆದ್ರೆ ಅವರೂ ಕೆಲಸಗಾರರು. ಅವರ ಕೆಲಸ ನಿಮ್ ಗಂಡಸರ ಬೇಡಿಕೆಗಳ ಮೇಲೇ ನಿಂತಿದೆ. ಗಂಡಸರು ಯಾವಾಗ ತಾವಾಯ್ತು ತಮ್ ಕುಟುಂಬವಾಯ್ತು ಅಂತ ಇರ್ತಾರೋ ಆವಾಗ ಇವರೂ ಬೇರೆ ಕೆಲಸಕ್ಕೆ ಹೋಗಬಹುದು...”

"ಎನ್ ಸುಮ್ನೆ ಬಿಟ್ರೆ ಮಾತಾಡ್ತಾನೇ ಹೋಗತೀಯ! ನಾಲ್ಗೆ ಬಿಗಿ ಇರ್ಲಿ. ನಂಗೆ ಮಾತಾಡೋವ್ರು ಇಶ್ಟ ಇಲ್ಲ..."

"ಸರ್... ಟು ಸ್ಟಾರ್ ಸರ್, ಮಾತನಾಡೋದು ನಮ್ಮ ಸಂವಿದಾನ ಕೊಟ್ಟಿರೋ ಹಕ್ಕು. ಅದನ್ನು ಕೇಳಿಸಿಕೊಳ್ಳಬೇಕಾಗಿರುವುದು ನಿಮ್ ಕೆಲಸ. ಇವರು ಬಸ್ ಸ್ಟಾಪ್‍ನಲ್ಲಿ ನಿಂತಿದ್ದು ಮನೆಗೆ ಹೋಗಕ್ಕೇ ವಿನಾ ದಂದ ಮಾಡಕ್ಕೆ ಅಲ್ಲ. ಇವರ ಇಂದಿನ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ನಿಮ್ಮ ಹೊಯ್ಸಳದವರು ಇವರನ್ನು ಎತ್ತಾಕ್ಕೊಂಡು ಬಂದಿರೋದು... ಆಮೇಲೆ ನೀವು ಈ ಮಹಿಳೆಯ ಮೇಲೆ ಕೈ ಮಾಡಿದ್ದೀರಿ, ಅದು ಯಾಕೆ?"

"ಅವ್ಳು ತುಂಬಾ ಮಾತಾಡ್ತಾಳೆ... ಇನ್ನೊಂದು ಆ ಕೋಜ, ಅದಕ್ಕೆ ತೂತೇ ಇಲ್ಲ ಅದೂ ನಿಂತ್ಕೊಳತ್ತೆ! ಸಮಾಜ ನಿಮ್ಮಂತವರಿಂದಾನೇ ಕೆಟ್ಟೋಗಿರೋದು. ಆರ್ ಗಂಟೆ ಮೇಲೆ ನೀವ್ ಹೆಂಗಸ್ರು ಮನೆಯಿಂದ ಆಚೆ ಬರ್ಬಾರ್ದು ಗೊತ್ತಾಯ್ತಾ? ಇದು ಕಾನೂನಲ್ಲೇ ಇದೆ. ಸುಮ್ನೆ ನಮ್ ಪೊಲೀಸರಿಗೆ ಜಾಸ್ತಿ ಕೆಲಸ ಕೊಡ್ಬೇಡಿ..."

Image
human trafficking 2
ಸಾಂದರ್ಭಿಕ ಚಿತ್ರ

"ಸಂವಿದಾನ ನಮಗೆ ಆರ್ಟಿಕಲ್ 19ರಲ್ಲಿ ಮಾತನಾಡಲು ಹಕ್ಕು ಕೊಡುತ್ತದೆ. ನೀವು ನಮ್ಮ ಮಾತನ್ನು ಕೇಳಬೇಕು, ಅಲ್ಲದೆ ಯಾರು ದಂದ ಹೇಗೆ ಮಾಡ್ತಾರೆ ಅನ್ನೋದು ನಿಮ್ಮ ಉಸಾಬರಿ ಅಲ್ಲ. ನಿಮ್ಮ ಉಸಾಬರಿ ಏನಿದ್ರೂ ಪಿಂಪ್ ಇದ್ದಾರ ಇಲ್ಲವಾ ಮತ್ತು ಅವರು ಸಾಗಾಣಿಕೆಯಲ್ಲಿ ಬಂದಿದ್ದಾರ ಇಲ್ಲವಾ ಎಂದು ನೋಡಬೇಕು. ಅವರಿಗೆ ತೂತು ಇದೆಯೋ ಇಲ್ಲವೋ ನೋಡುವ ಕೆಲಸ ನಿಮ್ಮದಲ್ಲ. ಇದೆಲ್ಲಾ ಬಿಟ್ಟು ಆರ್ಟಿಕಲ್ 19ರ 'ಜಿ' ಕ್ಲಾಸಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿರುವಂತೆ, ಯಾರಿಗೇ ಆಗಲಿ, ಇಡೀ ಇಂಡಿಯಾದಲ್ಲಿ ಎಲ್ಲಿ ಬೇಕಾದರೂ ಸ್ವತಂತ್ರವಾಗಿ ತಮ್ಮ ವ್ಯಾಪಾರ/ ಕೆಲಸ ಮಾಡುವ ಅದಿಕಾರ ಇದೆ. ಮತ್ತೆ ನಂಗೊತ್ತಿರಲಿಲ್ಲ - ನಿಮ್ಮ ಗಂಡಸರಿಗೆ ಸಂಜೆ ಆರು ಗಂಟೆಯ ಮೇಲೆ ಲೈಂಗಿಕವಾಗಿ ತಡಿಯಲಾರದ ಅರ್ಜ್ ಬರುತ್ತೆ ಅಂತ! ಹಂಗಿದ್ರೆ ನೀವು ಊರಲ್ಲಿರುವ ಎಲ್ಲಾ ಗಂಡಸರನ್ನೂ ಆರ್ ಗಂಟೆ ಮೇಲೆ ರಸ್ತೆಗೆ ಬಿಡಬಾರದು. ಆಗ ನೀವು ಹೇಳುವ ಈ ದಂದೆ ನಿಂತೋಗತ್ತೆ. ಏನಂತೀರ?"

ಈಗ ಹೇಳಿದ್ದು ಕೇವಲ ಒಂದು ಗಟನೆ. ಹೀಗೆ ಹಲವಾರು ಪೋಲೀಸ್ ಸ್ಟೇಶನ್‍ನಲ್ಲಿ ಸಾಕಶ್ಟು ಬಾರಿ ಕೆಟ್ಟ ಹೆಸರು ಸಿಕ್ಕಿದೆ. ಅದನ್ನು ನಾನು ತುಂಬಾ ಸಂತೋಶವಾಗಿ ಸ್ವೀಕರಿಸಿದ್ದೇನೆ.  

ಮುಂದಿನ ಬಾರಿ, ಸೆಕ್ಸ್‌ ವರ್ಕ್ ಮಾಡಿ ಬದುಕಿದವರ ವಿಶಯ, ಜಾತಿಯ ವಿಶಯ ಮತ್ತು ನಿಜವಾಗಿ ಯಾವುದು ಶೋಶಣೆ, ಯಾವುದು ಗನತೆಯೆ ಕೆಲಸ ಎಂಬ ವಿಶಯ ಬರೀತೀನಿ.

'ಎಲ್ಲರ ಕನ್ನಡ' ಎಂದು ಹೇಳಲಾಗುವ, ಮಹಾಪ್ರಾಣ ಬಳಕೆ ಇಲ್ಲದ ಬರಹ ರೂಪವಿದು
ನಿಮಗೆ ಏನು ಅನ್ನಿಸ್ತು?
3 ವೋಟ್