ಚಿತ್ರ ಭಿತ್ತಿ | ಸೊರಗಿದ ಕಲಾ ವಿಮರ್ಶೆ; ಕಾರಣಗಳ ಹುಡುಕಾಟ

wong zihoo photo

ಕಲಾ ವಿಮರ್ಶೆ ಕಡಿಮೆಯಾಗಿದೆಯಾ? ವಿಮರ್ಶಕರು ಕಡಿಮೆ ಆಗಿದ್ದಾರಾ? ಕಲಾ ವಿಮರ್ಶೆಗಳನ್ನು ಪ್ರಕಟಿಸುವ ಆಸಕ್ತಿಯನ್ನು ಮಾಧ್ಯಮಗಳು ಕಳೆದುಕೊಂಡಿವೆಯಾ? ಹೀಗೆ, ಅನೇಕ ಪ್ರಶ್ನೆಗಳನ್ನು ನನಗೆ ನಾನೇ ಕೇಳಿಕೊಂಡು ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದೇನೆ, ಹಲವರೊಟ್ಟಿಗೆ ಚರ್ಚಿಸಿದ್ದೇನೆ. ಆದರೆ, ಈವರೆಗೂ ತೃಪ್ತಿದಾಯಕ ಉತ್ತರ ಸಿಕ್ಕಿಲ್ಲ

"ಕಲಾ ವಿಮರ್ಶೆ ಅನ್ನೋದು ಇತ್ತೀಚಿನ ದಿನಗಳಲ್ಲಿ ಮರೀಚಿಕೆ ಆಗಿಬಿಟ್ಟಿದೆ. ಇಲ್ವೇ ಇಲ್ಲ ಅಂದರೂ ತಪ್ಪಾಗಲಿಕ್ಕಿಲ್ಲ. ಯಾರೂ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ..."

"ನಿಜ ಹೇಳಿ, ಇದು ನಿಜಾನಾ...? ಕಲಾ ವಿಮರ್ಶೆ ಓದುವ, ಓದಿ ಅರಗಿಸಿಕೊಳ್ಳುವ ಅಥವಾ ಸ್ವೀಕರಿಸುವ ಹಾಗೂ ವಿಮರ್ಶಾತ್ಮಕ ಅಭಿಪ್ರಾಯ ಮುಂದಿಡುವ ವಾತಾವರಣ ಇಂದು ಇದೆಯೇ?"

- ಇಂತಹ ಮಾತುಗಳನ್ನು ಆಗಾಗ ನಾವೆಲ್ಲರೂ ಕೇಳುತ್ತಿರುತ್ತೇವೆ ಅಥವಾ ನಾವೇ ಆಡಿರುತ್ತೇವೆ. ಆದರೆ, ವಾಸ್ತವ ಇದೇನಾ ಅನ್ನೋದನ್ನು ಪರಾಮರ್ಶೆ ಮಾಡಿಕೊಳ್ಳಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಇದು ಚರ್ಚೆ ಆಗಲೇಬೇಕಾದ ವಿಚಾರವೂ ಹೌದು. ಕಾರಣ, ವಿಮರ್ಶೆಗಳಿಗೆ ಇಂದಿನ ಮಾಧ್ಯಮಗಳಲ್ಲಿ ಜಾಗವೇ ಇಲ್ಲ ಅಥವಾ ನಿರೀಕ್ಷಿತ ಮಟ್ಟದ ವಿಮರ್ಶಾ ಬರಹಗಳು ಬರುತ್ತಿಲ್ಲವೇನೋ. ಈ ಎರಡು ಕಾರಣ ಹೊರತುಪಡಿಸಿದರೆ ಸಿಗೋದು ಇನ್ನೊಂದೇ ಕಾರಣ, ವಿಮರ್ಶಾ ಬರಹಕ್ಕೆ ಓದುಗರು ಇಲ್ಲ ಅನ್ನೋದು. ಇದು ಒಪ್ಪಿಕೊಳ್ಳುವಂಥದ್ದೇ? ಇದರಲ್ಲಿ ಸತ್ಯವೆಷ್ಟು, ಮಿಥ್ಯವೆಷ್ಟು?

ಒಂದಂತೂ ಖರೆ; ಇದಕ್ಕೆ ಥಟ್ ಅಂತ ಉತ್ತರ ಸಿಗದು. ಸಾಹಿತ್ಯ ಬರಹಗಳ ವಿಮರ್ಶೆ ಹೊರತುಪಡಿಸಿ ಇತರೆ ವಿಮರ್ಶಾ ಬರಹಗಳು ಅತೀ ಕಡಿಮೆ. ಅದರಲ್ಲೂ, ಲಲಿತಕಲೆಗಳ ವಿಮರ್ಶಾ ಬರಹಗಳು ಇಲ್ಲವೇ ಇಲ್ಲ. ಇದರ ವಾಸ್ತವ ಅರಿಯುವುದು ಹೇಗೆ ಎಂಬ ಸವಾಲು ಈಗ ನಮ್ಮ ಮುಂದಿದೆ ಅಥವಾ ಪರ್ಯಾಯ ಮಾರ್ಗ ಹುಡುಕಿಕೊಳ್ಳಬೇಕಿದೆ. ಅಷ್ಟರ ಮಟ್ಟಿಗೆ ಕಲಾ ವಿಮರ್ಶೆ ಅನ್ನೋದು ಅಪರೂಪವಾಗಿಬಿಟ್ಟಿದೆ.

Image
Art Exibition 4

"Every good work has to face opposition, and the reaction of the opposition offered always helps the work." - 20ನೇ ಶತಮಾನದ ಆಧ್ಯಾತ್ಮ ಗುರು ಮೆಹರ್ ಬಾಬಾ ಅವರ ಈ ಹಿತನುಡಿಯ ಸಾಲುಗಳನ್ನು ಓದುವಾಗ, ವಿಮರ್ಶೆ ಕುರಿತ ಕೆಲ ಸಂಗತಿಗಳು ಕಾಡಲಾರಂಭಿಸಿತ್ತು. ಚರ್ಚಿಸಲಿಕ್ಕೂ ಇದು ಸೂಕ್ತ ಸಮಯ ಅನಿಸಿದ್ದುಂಟು. ಕಲಾ ವಿಮರ್ಶೆ ಕಡಿಮೆಯಾಗಿದೆಯಾ? ವಿಮರ್ಶಕರು ಕಡಿಮೆ ಆಗಿದ್ದಾರಾ? ಕಲಾ ವಿಮರ್ಶೆಗಳನ್ನು ಪ್ರಕಟಿಸುವ ಆಸಕ್ತಿಯನ್ನು ಮಾಧ್ಯಮಗಳು ಕಳೆದುಕೊಂಡಿವೆಯಾ? ಮೌಲ್ಯಾಧಾರಿತ ವಿಮರ್ಶೆಗಳನ್ನು ಬರೆಯಲಿಕ್ಕೇ ಸಾಧ್ಯವಾಗುತ್ತಿಲ್ಲವಾ? ಹೀಗೆ, ಅನೇಕ ಪ್ರಶ್ನೆಗಳನ್ನು ನನಗೆ ನಾನೇ ಕೇಳಿಕೊಂಡು ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಸಮಯ, ಸಂದರ್ಭ ಸಿಕ್ಕಾಗ ಕೆಲವರ ಜೊತೆ ಚರ್ಚಿಸಿ, ಅಭಿಪ್ರಾಯ ಸಂಗ್ರಹಿಸುವ ಕೆಲಸವನ್ನೂ ಮಾಡಿದ್ದೇನೆ. ಆದರೆ, ಈವರೆಗೂ ತೃಪ್ತಿದಾಯಕ ಉತ್ತರ ಸಿಕ್ಕಿಲ್ಲ. ನಿಖರವಾದ ಕಾರಣ ಸಿಕ್ಕಿಲ್ಲ.

ಹಾಗಂತ ವಿಮರ್ಶಾತ್ಮಕ ದೃಷ್ಟಿಕೋನದ ಕೊರತೆ ಖಂಡಿತ ಇಲ್ಲ. ಇದಕ್ಕೊಂದು ಉತ್ತಮ ಉದಾಹರಣೆ ಕೊಡಬೇಕೆಂದರೆ, ಇತ್ತೀಚೆಗೆ ಕಲಾ ಪ್ರದರ್ಶನವೊಂದಕ್ಕೆ ಭೇಟಿ ನೀಡಿದ್ದ ಐಟಿ ಕ್ಷೇತ್ರದ ವ್ಯಕ್ತಿಯೊಬ್ಬರು, ಕಲಾಕೃತಿಗಳನ್ನು ನೋಡಿ ಅಭಿಪ್ರಾಯ ವ್ಯಕ್ತಪಡಿಸಲು ಮುಂದಾದರು. ಆದರೆ, ಆ ಸ್ಥಳದಲ್ಲಿದ್ದ ಮೂವರು ಯುವ ಕಲಾವಿದರು ಅವರ ಮಾತುಗಳನ್ನು ಕೇಳಿಸಿಕೊಳ್ಳುವ ವ್ಯವಧಾನ ತೋರಲಿಲ್ಲ. ಕಲಾವಿದರ ವರ್ತನೆ ಕಂಡು ಅವರು ಮಾತು ನಿಲ್ಲಿಸಿದರು. ಅಷ್ಟಕ್ಕೇ ಸುಮ್ಮನಾಗಲಿಲ್ಲ; ಗ್ಯಾಲರಿಯಿಂದ ಆಚೆ ಬಂದು ಅಲ್ಲೇ ಕುಳಿತು, ತಮ್ಮ ಡೈರಿಯಲ್ಲಿ ಪುಟದಷ್ಟು ಬರೆದು, ಅದನ್ನು ವಿಸಿಟರ್ ಪುಸ್ತಕದಲ್ಲಿ ಇಟ್ಟು ಹೋದರು. ನನಗೆ ಎಲ್ಲಿಲ್ಲದ ಕುತೂಹಲ. ಏನು ಬರೆದಿರಬಹುದು ಎಂದು ನೋಡುವ ಕೌತುಕ. ವಿಸಿಟರ್ ಪುಸ್ತಕದಲ್ಲಿ ನಾನೂ ಒಂದೆರಡು ಸಾಲು ಬರೆದು, ಆ ವ್ಯಕ್ತಿ ಬರೆದಿಟ್ಟ ಪುಟ ಕೈಗೆತ್ತಿಕೊಂಡೆ. ಅಲ್ಲಿಯೇ ನಿಂತು ಓದಿದೆ.

ಈ ಲೇಖನ ಓದಿದ್ದೀರಾ?: ಹೆಣ್ಣೆಂದರೆ... | ಸುಪ್ತಲೋಕ ಸಂಚಾರಕ್ಕೆ ಕರೆದೊಯ್ಯುವ ಕಿನ್ನರಿ ಬಿಂದು ಮಾಲಿನಿ

"ನಾನೊಬ್ಬ ಐಟಿ ಉದ್ಯೋಗಿ. ಪ್ರದರ್ಶನ ಚೆನ್ನಾಗಿದೆ. ಕಲಾಕೃತಿಗಳು ಚೆನ್ನಾಗಿವೆ. ಎಲ್ಲ ಕಲಾಕೃತಿಗಳೂ ಒಂದೇ ರೀತಿಯಲ್ಲಿವೆ ಅನ್ನಿಸಿತು. ಮೂವರು ಕಲಾವಿದರ ಸಮೂಹ ಕಲಾ ಪ್ರದರ್ಶನ ಇದಾದರೂ, ಎಲ್ಲರೂ ಏಕೆ ಹೆಣ್ಣು ಅರೆಬೆತ್ತಲಾಗಿ ಇರುವ ವಿಷಯಗಳನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಕಾರಣ ಹುಡುಕಾಡಿದೆ. ನನ್ನ ಪ್ರಶ್ನೆ ಇರುವುದು ನಿಮ್ಮ ಕಲಾಕೃತಿಗಳಿಗೆ ಸಂಬಂಧಿಸಿದ್ದಲ್ಲ. ಕಲಾವಿದನ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಶ್ನಿಸುವ ಗೋಜಿಗೆ ನಾನು ಬರುವುದೂ ಇಲ್ಲ. ಆದರೆ, ಈ ಕಲಾಕೃತಿಗಳನ್ನು ರಚಿಸಲು ಪ್ರೇರಣೆ ಆಗಿದ್ದೇನು, ಹೇಗೆ ಎನ್ನುವುದನ್ನು ತಿಳಿದುಕೊಳ್ಳಬೇಕಿತ್ತು. ಒಂದೇ ವಿಚಾರವು ಮೂವರ ಅಭಿವ್ಯಕ್ತಿಗೂ ಕಾರಣವಾಗಿದೆ ಎಂದಾದರೆ, ನಾಲ್ಕನೇ ವ್ಯಕ್ತಿಯಾದ ನನಗೂ ಯಾಕೆ ಆಗಬಾರದು ಅನ್ನಿಸಿತು. ನಿಮ್ಮ ಜೊತೆ ಚರ್ಚಿಸೋಣ ಅಂದುಕೊಂಡು ಮಾತಿಗಿಳಿದೆ. ನೀವೆಲ್ಲರೂ ಚೇಷ್ಟೆ ಮಾಡಿಕೊಂಡು ಖುಷಿಖುಷಿಯಾಗಿರುವ ಕಾರಣ ಬಹುಶಃ ನನ್ನ ಮಾತುಗಳನ್ನು ಕೇಳಿಸಿಕೊಳ್ಳಲು ಗಮನ ಹರಿಸಲಿಲ್ಲ. ಮತ್ತೆ ಸಿಗೋಣ," ಎಂದು ತೀಕ್ಷ್ಣವಾಗಿಯೇ ಬರೆದಿಟ್ಟಿದ್ದರು.

50ರ ಆಸುಪಾಸಿನ ಆ ವ್ಯಕ್ತಿಯನ್ನು ಭೇಟಿ ಮಾಡಿಯೇಬಿಡೋಣ ಎಂದು ಗ್ಯಾಲರಿಯಿಂದ ಆಚೆ ಬಂದೆ. ಅವರಲ್ಲಿ ಇರಲಿಲ್ಲ, ಭೇಟಿ ಸಾಧ್ಯವಾಗಲಿಲ್ಲ. ಆ ವ್ಯಕ್ತಿಯಲ್ಲೊಬ್ಬ ವಿಮರ್ಶಕ ಇದ್ದ. ವಿರ್ಶಾತ್ಮಕವಾಗಿ ಅಥವಾ ವಿಭಿನ್ನ ದೃಷ್ಟಿಕೋನದಲ್ಲಿ ನೋಡುವ ವ್ಯಕ್ತಿ ಅವರಾಗಿದ್ದರು. ಹೊಸ ಆಯಾಮದಲ್ಲಿ ಕಲಾಕೃತಿಯೊಂದನ್ನು ನೋಡುವ ನೋಡುಗ ಅವರಾಗಿದ್ದರು. ಯುವ ಕಲಾವಿದರಿಗೆ ಈ ಸೂಕ್ಷ್ಮ ಅರಿತು ಮಾತನಾಡುವ ತಾಳ್ಮೆ, ತಿಳಿವಳಿಕೆ ಇಲ್ಲದಾಯ್ತಲ್ಲ ಅನ್ನಿಸಿ ಬೇಸರವಾಯಿತು.

ಯಾರೂ ಕೂಡ ಯಾವುದೇ ವಿಚಾರಕ್ಕೆ ಇನ್ನೊಬ್ಬರನ್ನು, ಇನ್ನೊಬ್ಬರ ಅಭಿಪ್ರಾಯಕ್ಕಾಗಿ ತಮ್ಮ ಸಮಯವನ್ನು ಮೀಸಲಿಡುವ ಜಾಯಮಾನದ ಕಾಲ ಇದಲ್ಲ. ಪ್ರತಿಯೊಬ್ಬರೂ ಅವರದೇ ಆದ ದೃಷ್ಟಿಕೋನದಲ್ಲಿ ನೋಡುವ ಪ್ರಯತ್ನ ನಡೆಸುತ್ತಿರುತ್ತಾರೆ. ಅವಕಾಶ ಸಿಕ್ಕರೆ ಪ್ರತಿಕ್ರಿಯಿಸುವ ಪ್ರಯತ್ನ ಮಾಡುತ್ತಾರೆ. ಆ ಕ್ಷಣ ತಪ್ಪಿದರೆ ಮತ್ತೆ ಮೌಲ್ಯಧಾರಿತ ಪ್ರತಿಕ್ರಿಯೆ ನಮಗೆ ಸಿಗುವುದಿಲ್ಲ.

ಕಲಾ ಪ್ರದರ್ಶನವೆಂದರೆ...

Image
Art Exibition 2

ಇನ್ನು, ಕಲಾ ಪ್ರದರ್ಶನ ಇದ್ದಾಗ ಗ್ಯಾಲರಿ ಹೇಗಿರಬೇಕೆನ್ನುವುದಕ್ಕೆ ಒಂದು ಉದಾಹರಣೆ ಇಲ್ಲಿದೆ. ಮೊನ್ನೆ-ಮೊನ್ನೆಯಷ್ಟೇ ಕರ್ನಾಟಕ ಚಿತ್ರಕಲಾ ಪರಿಷತ್‍ನ ಗ್ಯಾಲರಿಗಳಲ್ಲಿ ಕೃಷ್ಣ ಸೆಟ್ಟಿ ಫೌಂಡೇಷನ್ 57 ಮಂದಿ ಕಲಾವಿದರ ಸಮಕಾಲೀನ ಕಲಾಕೃತಿಗಳ ಕಲಾ ಪ್ರದರ್ಶನ ಆಯೋಜಿಸಿತ್ತು. ಹಿರಿಯ ಕಲಾವಿದ, ಕಲಾ ವಿಮರ್ಶಕ, ವೆಂಕಟಪ್ಪ ಪ್ರಶಸ್ತಿ ವಿಜೇತ ಚಿ ಸು ಕೃಷ್ಣ ಸೆಟ್ಟಿ ಮತ್ತು ಅವರ ತಂಡ ತೋರಿದ ಬದ್ಧತೆ ಗಮನ ಸೆಳೆಯಿತು. ಗ್ಯಾಲರಿಗೆ ಬರುವ ಪ್ರತಿಯೊಬ್ಬರ ಬಗ್ಗೆಯೂ ಆಯೋಜಕರು ಆಸಕ್ತಿ ಹೊಂದಿರುವುದು ಕಂಡುಬಂತು. ಕಲಾಕೃತಿಗಳನ್ನು ಯಾವ ನೆಲೆಯಲ್ಲಿ ನೋಡುತ್ತಾರೆ, ಒಟ್ಟಾರೆ ಪ್ರದರ್ಶನದ ಬಗ್ಗೆ ಅವರ ಅಭಿಪ್ರಾಯ ಏನು ಎನ್ನುವುದನ್ನು ಅರಿಯುವ ಪರಿಪಾಠ ಅಲ್ಲಿತ್ತು.

ಖಡಾಖಂಡಿತವಾಗಿ ಹೇಳುವುದಾದರೆ, ಅಪರೂಪದ ಪ್ರದರ್ಶನ ಇದು. ಆದರೆ, ಕಲಾವಿದರು ಕರ್ನಾಟಕಕ್ಕೆ ಚಿರಪರಿಚಿತರು. ಬೃಹತ್ ಅಳತೆಯ ಕಲಾಕೃತಿಗಳ ಮಧ್ಯೆ ಕೆಲ ಉತ್ತಮ ಸಣ್ಣ ಅಳತೆಯ ಕಲಾಕೃತಿಗಳು ಕಳೆದುಹೋದವೇನೋ ಅನ್ನಿಸಿತಷ್ಟೆ. ಹಾಗಂತ ಯಾರೂ ನೋಡಲೇ ಇಲ್ಲ ಎಂದಲ್ಲ. ಇಲ್ಲಿ ನೋಡುಗನ ಜವಾಬ್ದಾರಿಯೂ ಇದೆ. ಗ್ಯಾಲರಿಗಳಲ್ಲಿ ಕಲಾಕೃತಿಗಳನ್ನು ವೀಕ್ಷಿಸುವಾಗ, ನೋಡುಗನಿಗೆ ಕಲಾಕೃತಿಗಳ ವೀಕ್ಷಣೆ ಹೇಗೆ ಎನ್ನುವ ಮಾಹಿತಿ ಇದ್ದರೆ ಖಂಡಿತ ಯಾವೊಂದು ಕಲಾಕೃತಿಗಳೂ ಕಣ್ಣಿಗೆ ಬೀಳದೆ ಇರುವ ಸಾಧ್ಯತೆ ಕಡಿಮೆ.

ಕಲಾ ವಲಯದಲ್ಲಿ ಈಗಾಗಲೇ ಛಾಪೊತ್ತಿರುವ ಗುರುದಾಸ ಶೆಣೈ, ಎಂ ನಾರಾಯಣ್, ಸುಬ್ರಮಣಿಯನ್ ಗೋಪಾಲಸಾಮಿ, ಪ್ರಭು ಹರಸೂರು, ಬಾಬು ಜತ್ಕರ್, ಜಯಂತ್ ಹುಬ್ಳಿ, ವಿಮಲನಾಥನ್, ಶಿವಕುಮಾರ್ ಕೆಸರಮಡು, ಬಿ ಎಸ್ ದೇಸಾಯಿ ಸೇರಿದಂತೆ ಇನ್ನೂ ಕೆಲವರ ಕಲಾಕೃತಿಗಳು ಬಲು ಬೇಗ ನೋಡುಗನ ಕಣ್ತೆರೆಸುವಂತೆ ಮಾಡಿದರೆ; ಈಗಷ್ಟೇ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಕಲಾಕೃತಿಗಳು ಹೊಸ ಮುಖಗಳಿಗೆ ಹೊಸ ಮಾರ್ಗ ತೋರಬಲ್ಲವು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂತಹ ಪ್ರದರ್ಶನಗಳು ಸಹಜವಾಗಿಯೇ ಹಿರಿಯ ಮತ್ತು ಕಿರಿಯ ಕಲಾವಿದರ ನಡುವಿನ ಅಂತರವನ್ನು ಕಡಿಮೆ ಮಾಡಬಲ್ಲವು. ಕಲಾಕೃತಿ ಕುರಿತಾಗಿ ಕಲಾವಿದರೇ ಚರ್ಚೆಗಿಳಿದಾಗ ಭವಿಷ್ಯದತ್ತ ಮುಖ ಮಾಡಿರುವ ಕಲಾವಿದರಿಗೆ ಒಂದಿಷ್ಟು ಹೊಸ-ಹೊಸ ಐಡಿಯಾಗಳು ಸಿಗಲಿವೆ. ಖಂಡಿತವಾಗಿ ಈ ಪ್ರದರ್ಶನ ಕಲಾ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಮಕಾಲೀನ ಕಲೆ ಅಥವಾ ನವ್ಯ ಕಲೆಯ ಕುರಿತಾಗಿ ಇದ್ದ ಒಂದಿಷ್ಟು ಗೊಂದಲಗಳಿಗೆ ಉತ್ತರ ನೀಡಿರುವುದಲ್ಲಿ ಸಂದೇಹವಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಈ ಕಲಾ ಪ್ರದರ್ಶನ ಕಲಾವಿದರಿಗೆ, ಕಲಾಪ್ರಿಯರಿಗೆ ಒಂದು ಹೊಸ ಆಯಾಮದಲ್ಲಿ ಕಲಾಕೃತಿಗಳನ್ನು ನೋಡುವ ಅವಕಾಶ ಮಾಡಿಕೊಟ್ಟಿತು. ಇಂತಹ ಪ್ರದರ್ಶನಗಳು ಆಗಾಗ ನಡೆಯುವಂತಾಗಲಿ.

ಮುಖ್ಯ ಚಿತ್ರ ಕೃಪೆ: ವೂಂಗ್ ಝಿಹೂ
ನಿಮಗೆ ಏನು ಅನ್ನಿಸ್ತು?
2 ವೋಟ್