ಮುಳ್ಳುಹಾದಿಗೆ ಮಣ್ಣು ಹೊತ್ತವರು | ಭಿನ್ನದನಿ ಕೇಳುವ ನೆಲವಷ್ಟೇ ಸ್ವತಂತ್ರ: ಅರುಣಾ ರಾಯ್

Aruna Roy

ಜನರ ಮುಂದಾಳುವಾಗುವ ಬದಲು ಅವರ ಸಮಾನರಾಗಬೇಕೆಂದು ಅರಿತುಕೊಂಡ ಅರುಣಾ, ಬಡತನ, ಜಾತಿ, ಲಿಂಗ ತಾರತಮ್ಯಗಳನ್ನು ಅನುಭವಿಸುವವರ ದೃಷ್ಟಿಯಿಂದ ನೋಡಲು ಕಲಿತರು. ಜನರಿಂದ ನಿರಂತರ ಸಲಹೆ, ಸೂಚನೆ ಪಡೆದು ತಮ್ಮ ಬದಲಾವಣೆಗೆ ತಾವೇ ದಾರಿಯಾಗುವ ಮಾರ್ಗಗಳನ್ನು ಜನರ ಜೊತೆಗಿದ್ದೇ ಹುಡುಕಿದ್ದು ಗಮನಾರ್ಹ

ಭಾರತ ದೇಶ ರಾಜಕೀಯ ಸ್ವಾತಂತ್ರ್ಯ ಪಡೆದು 75 ವರ್ಷಗಳು ತುಂಬಿದವು. ಹತ್ತಾರು ಧರ್ಮಗಳು, ನೂರಾರು ಭಾಷೆಗಳು, ಸಾವಿರಾರು ಜಾತಿಗಳು, ಅಸಂಖ್ಯ ಗುಣಸ್ವಭಾವ, ಗುರಿ, ಆಸೆ, ಕನಸುಗಳ 140 ಕೋಟಿ ಜನರನ್ನು ಒಂದು ದೇಶವಾಗಿ ಮುನ್ನಡೆಸುವುದು ಸುಲಭವಲ್ಲ. ಲಾಭ-ನಷ್ಟ ಲೆಕ್ಕಾಚಾರದ ಮಾರುಕಟ್ಟೆಯು ದೇಶದ ಆಳುವವರನ್ನು ಆಳತೊಡಗಿದ ಮೇಲೆ ಭಿನ್ನಮತವನ್ನು ಗೌರವಿಸುವ ವಾತಾವರಣ ಕ್ಷೀಣವಾಗುತ್ತಿದೆ. ಪ್ರಭುತ್ವಕ್ಕೆ ಕಸಿವಿಸಿಯಾಗುವ ಪ್ರಶ್ನೆಗಳನ್ನೆತ್ತುವವರು ಅದೃಶ್ಯರಾಗುತ್ತಿದ್ದಾರೆ. ಹೀಗಿರುತ್ತ ದೇಶದ ಪ್ರಜಾಪ್ರಭುತ್ವ ಗುಣ ಜೀವಂತವಾಗಿ ಉಳಿಯಬೇಕೆಂದರೆ, ಸ್ವಾತಂತ್ರ್ಯ ಅನುಭವವಾಗಿ ನಾಗರಿಕರಿಗೆ ನಿಲುಕಬೇಕೆಂದರೆ ಮೂಲಭೂತಹಕ್ಕುಗಳನ್ನು ಚಲಾಯಿಸುವ ಅವಕಾಶ, ಅದು ಸಿಗದಿದ್ದಾಗ ಪ್ರಶ್ನಿಸುವ ಗುಣ ಬಹುಮುಖ್ಯ.

ಹೀಗೆಂದೆ, ಕೋಟಿಗಟ್ಟಲೆ ಜನರ ದೈನಂದಿನ ಬದುಕನ್ನು ನಿಯಂತ್ರಿಸುವ ಆಳ್ವಿಕರು ಪಾರದರ್ಶಕವಾಗಿರಬೇಕು, ಉತ್ತರದಾಯಿತ್ವ ಹೊಂದಿರಬೇಕು ಎಂದು ಪ್ರತಿಪಾದಿಸಿ ಆಂದೋಲನದ ರೂಪದಲ್ಲಿ ಹಕ್ಕುಪ್ರಶ್ನೆಗಳನ್ನೆತ್ತಿದ ಹೋರಾಟಗಾರ್ತಿ ಅರುಣಾ ರಾಯ್ ಯುವ ಭಾರತ ಗಮನಿಸಬೇಕಾದ ವ್ಯಕ್ತಿಯಾಗಿದ್ದಾರೆ. ಜನ ಹೋರಾಟ ಮತ್ತು ಸಾಮೂಹಿಕ ಪ್ರಯತ್ನಗಳಷ್ಟೇ ನ್ಯಾಯಯುತ ಸಮಾಜ ಕಟ್ಟಬಲ್ಲವು ಎಂದು ದೃಢವಾಗಿ ನಂಬಿದ; 'ಮಾಹಿತಿ ಹಕ್ಕು ಕಾಯ್ದೆ', 'ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ'ಗಳು ರೂಪುಗೊಳ್ಳಲು ಕಾರಣವಾದ ಅರುಣಾ ಜನದನಿಯ ಭರವಸೆಯಾಗಿ ಕಾಣಿಸುತ್ತಾರೆ. ಫುಲೆ, ಗಾಂಧೀಜಿ, ಎಂ.ಎನ್. ರಾಯ್, ಅಂಬೇಡ್ಕರರ ವ್ಯಕ್ತಿತ್ವ, ಚಿಂತನೆಗಳನ್ನು ಕಸಿ ಮಾಡಿ ಹೋರಾಟದ ಬದುಕು ಕಟ್ಟಿಕೊಂಡ ಅರುಣಾ ಅಹಿಂಸಾತ್ಮಕ, ಸಾಂವಿಧಾನಿಕ ಹೋರಾಟದ ಮಾದರಿಯಾಗಿದ್ದಾರೆ.

ಮದರಾಸಿನ ಹೇಮಾ ಮತ್ತು ಇ ಡಿ ಜಯರಾಂ ಅವರ ನಾಲ್ಕು ಮಕ್ಕಳಲ್ಲಿ ಹಿರಿಯವಳು ಅರುಣಾ (1946). ತಾಯಿ ಹೇಮಾ ಭೌತಶಾಸ್ತ್ರ, ಗಣಿತ, ಸಂಸ್ಕೃತ ವಿಷಯಗಳಲ್ಲಿ ಪದವಿ ಪಡೆದಿದ್ದರು. ಆಟಗಾರ್ತಿಯಾಗಿದ್ದರು. ವೀಣಾವಾದಕಿಯಾಗಿ ಕಚೇರಿ ನಡೆಸುತ್ತಿದ್ದರು. ಬಹುಭಾಷಾ ಪಂಡಿತೆಯಾಗಿದ್ದ ಹೇಮಾ, 25 ವರ್ಷ ತುಂಬುವವರೆಗೂ ಮದುವೆ ಒಲ್ಲೆನೆಂದಿದ್ದ ಅವರು ಬಳಿಕ ಬೇರೆ ಉಪಜಾತಿಗೆ ಸೇರಿದ ಜಯರಾಂ ಅವರನ್ನು ವಿವಾಹವಾಗಿದ್ದರು. ಅರುಣಾಳ ತಂದೆ ಜಯರಾಂ ಹತ್ತನೆಯ ವಯಸ್ಸಿನಿಂದ ಶಾಂತಿನಿಕೇತನದಲ್ಲಿ ಓದಿ ವಕೀಲರಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುತ್ತಿದ್ದರು. ಅವರ ಮನೆ ಆ ಕಾಲದ ಇತರ ಮೇಲ್ಮಧ್ಯಮ ವರ್ಗದ ಮನೆಗಳಿಗಿಂತ ಭಿನ್ನವಾಗಿತ್ತು. ಯಾವುದೇ ವಿಷಯವಿರಲಿ, ಮಕ್ಕಳು ಸುಮ್ಮನೇ ಹ್ಞೂಂ ಎನ್ನದೇ ಯೋಚಿಸಬೇಕೆಂದು ಹಿರಿಯರು ಹೇಳುತ್ತಿದ್ದರು. ಎಲ್ಲ ಧರ್ಮದ ಹಬ್ಬಗಳನ್ನೂ ಆಚರಿಸುತ್ತಿದ್ದರು. ಜಾತಿ, ವರ್ಗ, ವೃತ್ತಿ, ಸಿರಿವಂತಿಕೆಗಳನ್ನು ಗಮನಿಸಬಾರದು; ಮನುಷ್ಯರು ಎಲ್ಲರೂ ಒಂದೇ ಎಂದು ತಿಳಿಸಿ ಹೇಳುತ್ತಿದ್ದರು. ಮಹಾನ್ ವ್ಯಕ್ತಿಗಳ ಜೀವನದ ಕಥೆಗಳನ್ನು ಮಕ್ಕಳಿಗೆ ಹೇಳುತ್ತಿದ್ದರು.

ಅರುಣಾಳ ಅಜ್ಜ, ಅಜ್ಜಿಯರೂ ವಿದ್ಯಾವಂತರಾಗಿದ್ದರು. ಮ್ಯಾಜಿಸ್ಟ್ರೇಟ್, ವಕೀಲರು, ಇಂಜಿನಿಯರ್ ಎಲ್ಲರೂ ಅವರ ಮನೆತನದಲ್ಲಿದ್ದರು. ಅವಳ ತಾಯಿಯ ತಾಯಿ (ಅಜ್ಜಿ) ಕುಷ್ಠರೋಗಿಗಳ ಸೇವೆ, ಸಮಾಜಸೇವೆಯ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಅಮ್ಮನ ಅಪ್ಪ ಇಂಜಿನಿಯರ ಆಗಿದ್ದರು. ಸುಲಭವಾಗಿ ಅರ್ಥವಾಗುವಂತೆ ಮಕ್ಕಳಿಗೆ ತಾವು ಬರೆದ ಪಠ್ಯಗಳನ್ನು ಮುದ್ರಿಸಿ ಹಂಚುತ್ತಿದ್ದರು.

Image
Women-with-slogans

ಮನೆಯವರು ದೇಶದ ಆಗುಹೋಗುಗಳ ಬಗೆಗೆ ಪ್ರೌಢವಾಗಿ ಚರ್ಚಿಸುವುದನ್ನು ಕೇಳುತ್ತ ಇಬ್ಬರು ತಂಗಿಯರು, ಒಬ್ಬ ತಮ್ಮನೊಡನೆ ಅರುಣಾ ಮುಕ್ತ ವಾತಾವರಣದಲ್ಲಿ ಬೆಳೆದಳು. ಪ್ರತೀ ಹೆಣ್ಣು ತಾನು ಸ್ವತಂತ್ರವಾಗಿ ಬೆಳೆಯಗೊಡುವ ವಾತಾವರಣವನ್ನು ತಾನೇ ರೂಪಿಸಿಕೊಳ್ಳಬೇಕು; ಮನೆಗೆಲಸದ ಆಚೆಗೆ ಒಂದು ಲೋಕ ಸೃಷ್ಟಿಸಿಕೊಳ್ಳಬೇಕು; ಜಾತಿಮತದ ಗಡಿಗಳನ್ನು ಮೀರಿ ಮನುಷ್ಯರಾಗಬೇಕು ಎಂಬ ಮಾದರಿಯನ್ನು ಕಣ್ಣೆದುರಿಗಿಟ್ಟುಕೊಂಡು ಬೆಳೆದಳು. ಅವಳಿಗೆ 4 ವರ್ಷವಾದಾಗ ಕುಟುಂಬ ದೆಹಲಿಗೆ ಹೋಯಿತು. ಜೀಸಸ್ ಅಂಡ್ ಮೇರಿ ಕಾನ್ವೆಂಟಿನಲ್ಲಿ ಓದಿದ ಬಳಿಕ ತಂದೆ ಚೆನ್ನೆöÊನ ಕಲಾಕ್ಷೇತ್ರಕ್ಕೆ ಸೇರಿಸಿದರು. ಎರಡು ವರ್ಷ ಭರತನಾಟ್ಯಂ ಮತ್ತು ಸಂಗೀತ ಕಲಿತ ಬಳಿಕ ಪಾಂಡಿಚೆರಿಯ ಅರಬಿಂದೊ ಆಶ್ರಮಕ್ಕೆ ಕಳಿಸಿದರು. ಅಲ್ಲಿನ ಪರಿಸರ ಅರುಣಾಗೇಕೋ ಇಷ್ಟವಾಗಲಿಲ್ಲ. ದೆಹಲಿಗೆ ಬಂದು ಭಾರತೀಯ ವಿದ್ಯಾಭವನದಲ್ಲಿ ವಿದ್ಯಾಭ್ಯಾಸ ಮುಂದುವರೆಸಿದಳು. 1967ರಲ್ಲಿ ದೆಹಲಿ ವಿ ವಿ ದ ಇಂದ್ರಪಸ್ಥ ಕಾಲೇಜಿನಲ್ಲಿ ಇಂಗ್ಲಿಷ್ ಎಂಎ ಪೂರೈಸಿದಳು. 

ಕಣ್ಣಿಗೆ ರಾಚುವ ಸಮಾಜದ ತಾರತಮ್ಯ, ಅಸಮಾನತೆಗಳನ್ನು ಹೋಗಲಾಡಿಸುವ ತುಡಿತದ ಯುವತಿ, ಪತ್ರಕರ್ತೆ ಅಥವಾ ಉಪನ್ಯಾಸಕಿಯಾಗುವುದೇ ತನಗೆ ಸರಿಯಾದೀತು ಎಂದು ಒಂದು ವರ್ಷ ಬೋಧಕಿಯಾಗಿ ಕೆಲಸ ಮಾಡಿದಳು. ಆದರೆ, ಮನಸ್ಸು ಆ ಕೆಲಸಕ್ಕೆ ಒಗ್ಗಿಕೊಳ್ಳದೇ ಹೋದಾಗ 1967ರಲ್ಲಿ ಭಾರತೀಯ ಆಡಳಿತ ಸೇವೆ (ಐಎಎಸ್) ಪರೀಕ್ಷೆ ಬರೆದಳು. ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾಗಿ ತರಬೇತಿ ಮುಗಿದ ಬಳಿಕ ಕೇಂದ್ರಾಡಳಿತ ಪ್ರದೇಶಗಳ ಕ್ಯಾಡರ್ ಆಗಿ ಕೆಲಸ ಆರಂಭಿಸಿದಳು. ಕಾಲೇಜು ದಿನಗಳ ಗೆಳೆಯ ಸಂಜಿತ್ ರಾಯ್ ಅವರನ್ನು ವಿವಾಹವಾದಳು.

ಕಾನ್ವೆಂಟ್ ಆಫ್ ಜೀಸಸ್ ಅಂಡ್ ಮೇರಿ, ಕಲಾಕ್ಷೇತ್ರ, ಅರಬಿಂದೋ ಆಶ್ರಮ, ಭಾರತೀಯ ವಿದ್ಯಾಭವನ, ಇಂಗ್ಲಿಷ್ ಎಂಎ, ಐಎಎಸ್ – ಅರುಣಾರ ಬದುಕು ನಿರಂತರ ಬದಲಾವಣೆಯಾಗುತ್ತ ಸಾಗಿತ್ತು. ತಿರುಚ್ಚಿ, ವೆಲ್ಲೂರು, ಪಾಂಡಿಚೆರಿ, ದೆಹಲಿಗಳಲ್ಲಿ ಏಳು ವರ್ಷ ಸೇವೆ ಸಲ್ಲಿಸಿದ ಅರುಣಾಗೆ ದೆಹಲಿಯ ಲೆಫ್ಟಿನೆಂಟ್ ಗವರ್ನರಗೆ ಕಾರ್ಯದರ್ಶಿಯಾಗಿದ್ದ ಸಮಯದಲ್ಲಿ ತಾನೇನು ಮಾಡುತ್ತಿದ್ದೇನೆ ಎಂಬ ಕಸಿವಿಸಿಯ ಪ್ರಶ್ನೆ ಎದುರಾಯಿತು. ಭ್ರಷ್ಟ ವ್ಯವಸ್ಥೆಯ ಒಳಗಿದ್ದುಕೊಂಡೇ ಹೋರಾಡುವುದು ಅಸಾಧ್ಯವೆನಿಸಿತು. ಕೆಲಸಕ್ಕೆ ರಾಜೀನಾಮೆ ಕೊಡುವೆನೆಂದು ಮನೆಯಲ್ಲಿ ಹೇಳಿದಾಗ ಎಲ್ಲರೂ ಬೇಡವೆಂದೇ ಹೇಳಿದರು. ಆರು ತಿಂಗಳು ರಜೆ ಹಾಕಿ ಸಂಗಾತಿ ಕೆಲಸ ಮಾಡುತ್ತಿದ್ದ ರಾಜಸ್ಥಾನದ ತಿಲೋನಿಯಾಗೆ ಹೋದರು. 

1972ರಲ್ಲಿ ಸಂಜಿತ್ ರಾಯ್ ಗೆಳೆಯರೊಂದಿಗೆ ʼಸಮಾಜಸೇವಾ ಸಂಶೋಧನಾ ಕೇಂದ್ರʼವನ್ನು ತಿಲೋನಿಯಾದಲ್ಲಿ ಆರಂಭಿಸಿದ್ದರು. ಅದು ಬೇರ್‌ಫುಟ್ ಕಾಲೇಜ್ ಎಂದೂ ಹೆಸರಾಗಿತ್ತು. ಪರ್ಯಾಯ ಅಭಿವೃದ್ಧಿ ಯೋಜನೆಗಳ ಮೂಲಕ ಹಳ್ಳಿಯ ಸಾಮಾಜಿಕ, ಆರ್ಥಿಕ ಬೆಳವಣಿಗೆ ಅದರ ಉದ್ದೇಶ. ಸಂಜಿತ್ ಮತ್ತು ಅಲ್ಲಿನ ಜನರು ಸಮಾನ ನೆಲೆಯಲ್ಲಿ ಅನುಭವ ಹಂಚಿಕೊಳ್ಳುತ್ತಿದ್ದರು, ಚರ್ಚಿಸುತ್ತಿದ್ದರು, ಒಟ್ಟೊಟ್ಟಿಗೆ ಕೆಲಸ ಮಾಡುತ್ತಿದ್ದರು. ಅಲ್ಲಿನ ಕೆಲಸದ ವಾತಾವರಣಕ್ಕೂ, ತನ್ನ ಅಧಿಕಾರಶಾಹಿ ಉದ್ಯೋಗಕ್ಕೂ ಇರುವ ಗಾಢ ವ್ಯತ್ಯಾಸ ಅರುಣಾಗೆ ಎದ್ದುಕಾಣಿಸಿತು. ಸ್ವಾಯತ್ತ ಚಿಂತನೆ, ಯೋಚನೆಗಳ ತನಗೆ ಕಟ್ಟುನಿಟ್ಟಿನ ಚೌಕಟ್ಟು, ಭ್ರಷ್ಟತೆ, ಶ್ರೇಣೀಕರಣಗಳ ಸರ್ಕಾರಿ ವ್ಯವಸ್ಥೆ ಹೊಂದುವುದಿಲ್ಲ ಎಂದು ಗಟ್ಟಿಯಾಯಿತು. ಕೂಡಲೇ ಐಎಎಸ್ ಬಾಬುಗಿರಿಗೆ ರಾಜೀನಾಮೆ ಕೊಟ್ಟು ಬಂದರು. 

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಕಾಶ್ಮೀರದ ಗೌರಿ - ಆಸಿಯಾ ಜಿಲಾನಿ

ಮುಂದಿನ ಹತ್ತು ವರ್ಷ 1983ರವರೆಗೆ ಅರುಣಾರ ಕರ್ಮಭೂಮಿ ತಿಲೋನಿಯಾ ಆಯಿತು. ಜೈಪುರದಿಂದ 100 ಕಿಲೋಮೀಟರ್ ದೂರದ ಹಳ್ಳಿ ತಿಲೋನಿಯಾ. ಅಲ್ಲಿ ನಲ್ಲಿ ನೀರಿರಲಿಲ್ಲ, ವಿದ್ಯುತ್ ಇರಲಿಲ್ಲ, ಸಾರಿಗೆ ವ್ಯವಸ್ಥೆಯಿರಲಿಲ್ಲ, ಬ್ಯಾಂಕುಗಳಿರಲಿಲ್ಲ. ಮೈಲುಗಟ್ಟಲೆ ನಡೆದು ಹಳ್ಳಿ ತಲುಪಬೇಕು. ಗ್ರಾಮೀಣ ಬದುಕಿನ ಪರಿಚಯವೇ ಇರದ ನಗರ ಪ್ರಜ್ಞೆಯ ಅರುಣಾ ಹೊಸಲೋಕಕ್ಕೆ ಬಂದರು. ಸಣ್ಣ ಹಟ್ಟಿಯಲ್ಲಿ ಸಮಾಜಸೇವೆಗೆ ಅರ್ಪಿಸಿಕೊಂಡ ಅವರಂತಹ 17 ಜನರಿದ್ದರು. ಅವರೆಲ್ಲರೂ ಮನೆಗೆಲಸ ಮತ್ತು ʼಕೇಂದ್ರʼದ ಕೆಲಸಗಳನ್ನು ಹಂಚಿಕೊಂಡು ಮಾಡುತ್ತಿದ್ದರು. ಬದಲಾವಣೆ ಬಯಸುವವರು ಮೊದಲು ತಾವು ಬದಲಾಗಬೇಕು ಎಂಬ ಗಾಂಧೀಜಿಯವರ ಮಾತು ನೆನಪಿಸಿಕೊಂಡ ಅರುಣಾ-ಸಂಜಿತ್ ತಂಡ ಅತ್ಯಂತ ಸರಳ ಜೀವನ ನಡೆಸಿತು.

ಆ ಹಳ್ಳಿ ಅವರ ಇದುವರೆಗಿನ ಓದು-ಯೋಚನೆಗಳ ದಿಕ್ಕನ್ನು ಆಮೂಲಾಗ್ರವಾಗಿ ಬದಲಿಸಿತು. ಜನರ ಮುಂದಾಳುವಾಗುವ ಬದಲು ಅವರ ಸಮಾನರಾಗಬೇಕೆಂದು ಅರಿತುಕೊಂಡರು. ಬಡತನ, ಜಾತಿ, ಲಿಂಗತಾರತಮ್ಯಗಳನ್ನು ಅನುಭವಿಸುವವರ ದೃಷ್ಟಿಯಿಂದ ನೋಡಲು ಕಲಿತರು. ಜನರಿಂದ ನಿರಂತರ ಸಲಹೆ, ಸೂಚನೆಗಳನ್ನು ಪಡೆದು ತಮ್ಮ ಬದಲಾವಣೆಗೆ ತಾವೇ ದಾರಿಯಾಗುವ ಮಾರ್ಗಗಳನ್ನು ಅವರ ಜೊತೆಗೆ ಅರಸಿದರು. ಊರಿಗೆ ಸೌರಶಕ್ತಿ ಬಂತು. ಶಾಲೆ ಆರಂಭವಾಯಿತು. ಕರಕುಶಲ ವಸ್ತುಗಳ ತಯಾರಿಕೆ, ಮಾರಾಟ ಸೇವೆ ಶುರುವಾಯಿತು. 

1981ರಲ್ಲಿ ಪಕ್ಕದೂರಿನ ನೌರ್ತಿ ಬಾಯಿ ಎಂಬ ದಲಿತ ಮಹಿಳೆ ಸಮಾನ ವೇತನ/ಬಾಕಿ ವೇತನ ಸಂದಾಯ ಆಗುವವರೆಗೆ ಕೆಲಸಕ್ಕೆ ಬರುವುದಿಲ್ಲವೆಂದು 500 ಮಹಿಳೆಯರನ್ನು ಸಂಘಟಿಸಿ ಮುಷ್ಕರ ನಡೆಸುತ್ತಿದ್ದಳು. ಅದನ್ನು ಕೊನೆಗೊಳಿಸಲು ಜಿಲ್ಲಾ ಕಲೆಕ್ಟರ್ ಅರುಣಾರ ಸಹಾಯ ಕೇಳಿದರು. ʼಸಂಜಿತ್ ರಾಯ್ ವರ್ಸಸ್ ರಾಜಸ್ಥಾನ ಸರ್ಕಾರʼ ಪ್ರಕರಣ ನಡೆಯತೊಡಗಿತು. 1983ರಲ್ಲಿ ಸರ್ವೋಚ್ಚ ನ್ಯಾಯಾಲಯ ಕೊಟ್ಟ ಮಹತ್ವದ ತೀರ್ಪು ಮುಂದೆ ನರೇಗಾ ಕಾಯ್ದೆ ಜಾರಿಯಾಗುವ ಮಾರ್ಗ ತೆರೆಯಿತು. ನೌರ್ತಿ ಬಾಯಿಯ ವ್ಯಕ್ತಿತ್ವ ಅರುಣಾ ಮೇಲೆ ಅಪಾರ ಪ್ರಭಾವ ಬೀರಿತು. 

ಆದರೆ, ಬರಬರುತ್ತ ಬೇರ್‌ಫುಟ್ ಕಾಲೇಜ್‌ನ ಮಿತಿಗಳು ಅರುಣಾಗೆ ಗೋಚರಿಸತೊಡಗಿದವು. ಅದು ರಾಜಕೀಯೇತರ ಸಂಸ್ಥೆ. ರತನ್ ಟಾಟಾ ಟ್ರಸ್ಟ್, ಸರ್ಕಾರಿ ಸಂಸ್ಥೆಗಳು, ಆಕ್ಸ್ಫಾಮ್ ಮುಂತಾದ ದೇಶವಿದೇಶಗಳ ಧನಸಹಾಯವನ್ನು ಪಡೆಯುತ್ತಿತ್ತು. ಅದು ಜನಾಂದೋಲನವನ್ನು ಸಬಲೀಕರಣದ ಭಾಗವೆಂದು ತಿಳಿದಿರಲಿಲ್ಲ. ಜನಸಂಘಟನೆ, ಹಕ್ಕುಗಳ ಹೋರಾಟದಿಂದಲ್ಲದೆ ಜನರನ್ನು ಸಬಲೀಕರಣಗೊಳಿಸಲು ಆಗದು, ಎಂದು ಭಾವಿಸಿದ ಅರುಣಾಗೆ ಅಲ್ಲಿ ಕೆಲಸ ಮಾಡಲು ಕಷ್ಟವಾಯಿತು. ತನ್ನ ದಾರಿ ಬೇರೆ ಎಂದು ಹೊಳೆಯಿತು.

ಅಲ್ಲಿಂದಾಚೆಗಿನ ಅರುಣಾ ಪಯಣ ಸಂಗಾತಿ ಸಂಜಿತ್ ಅವರಿಗಿಂತ ಬೇರೆಯಾಯಿತು. ತಿಲೋನಿಯಾದಿಂದ 180 ಕಿಮೀ ದೂರವಿರುವ ದೇವಡುಂಗ್ರಿಗೆ ಹೋದರು. ನಿಖಿಲ್ ಡೆ ಮತ್ತು ಶಂಕರ್ ಸಿಂಗ್ ಅವರ ಜೊತೆಯಾದರು. ಶಂಕರ್ ಸಿಂಗ್‌ರ ಬಂಧುಗಳ ಒಂದು ಮಣ್ಣಿನ ಹಟ್ಟಿಯಲ್ಲಿ ಸಿಂಗ್ ಕುಟುಂಬ, ಅರುಣಾ ಮತ್ತು ನಿಖಿಲ್ ಒಟ್ಟಿಗೆ ವಾಸಿಸತೊಡಗಿದರು. ಹಟ್ಟಿಯನ್ನು ತಾವೇ ವಿಸ್ತರಿಸಿ ಕಟ್ಟಿದರು. ಬರಪೀಡಿತ ಪ್ರದೇಶ ದೇವ್‌ಡುಂಗ್ರಿಯಲ್ಲಿ ಅತಿಕನಿಷ್ಟ ಅವಶ್ಯಕತೆಗಳೊಂದಿಗೆ ಬದುಕತೊಡಗಿದರು. 

ಮಜ್ದೂರ್ ಕಿಸಾನ್ ಶಕ್ತಿ ಸಂಘಟನ್

Image
Aruna-Roy
ಆರ್‌ಟಿಐಗಾಗಿ ಬೇವರ್‌ನಲ್ಲಿ ನಡೆದ ಮೊದಲ ಪ್ರತಿಭಟನೆ (1996)

ದೇವಡುಂಗ್ರಿಯ ಜನರ ಸ್ನೇಹ ಗಳಿಸಲು ಮಿಕ್ಕವರಿಗಿಂತ ಅರುಣಾ ಹೆಚ್ಚು ಕಷ್ಟಪಡಬೇಕಾಯಿತು. ಕೊನೆಗೆ ಮಹಿಳೆಯರ ಮೂಲಕ ಹಳ್ಳಿಯವರನ್ನು ತಲುಪಿದರು. ಆದಿವಾಸಿ ಮತ್ತು ಮಹಿಳಾ ಗುಂಪುಗಳನ್ನು ಗುರುತಿಸಿ ಅವರೊಡನೆ ಕೆಲಸ ಮಾಡಿದರು. ಹೆಣ್ಣುಗಳ ಕಷ್ಟನಷ್ಟ, ಕಾಯಿಲೆ, ಕೆಲಸಗಳಿಗೆ ಕೈಜೋಡಿಸಿ ವಿಶ್ವಾಸ ಗಳಿಸಿಕೊಂಡರು. ಮಹಿಳೆಯರನ್ನು ಮನೆಯಿಂದ ಹೊರಗೆಳೆದು ಸಾಮಾಜಿಕ ಕೆಲಸಗಳಿಗೆ ಕರೆದೊಯ್ಯತೊಡಗಿದರು. ಮಹಿಳೆಯರು ಅರುಣಾ ಮೇಲೆ ಎಷ್ಟು ವಿಶ್ವಾಸ ಬೆಳೆಸಿಕೊಂಡರೆಂದರೆ ಕುಟುಂಬ ಯೋಜನೆಯಿಂದ ಹಿಡಿದು ಸಣ್ಣಪುಟ್ಟ ಕಾಯಿಲೆಗೆ ಔಷಧಿ ಕೊಡುವ ತನಕ ಎಲ್ಲ ವಿಷಯಗಳನ್ನೂ ಕೇಳತೊಡಗಿದರು.

ʼನ್ಯಾಷನಲ್ ಫೆಡರೇಷನ್ ಫಾರ್ ಇಂಡಿಯನ್ ವಿಮೆನ್ʼನ ಬೀಜಗಳು ಆಗಲೇ ಮೊಳಕೆಯೊಡೆದದ್ದು. 1985ರಲ್ಲಿ ನೈರೋಬಿಯ ಅಂತಾರಾಷ್ಟ್ರೀಯ ಮಹಿಳಾ ಸಮಾವೇಶಕ್ಕೆ ಹೋಗುವ ಅವಕಾಶ ಬಂದರೂ ಅದನ್ನು ನಿರಾಕರಿಸಿ ಗ್ರಾಮೀಣ ಮಹಿಳೆಯರ ಸಮಾವೇಶ ಸಂಘಟಿಸಿದರು. ದೇಶದೆಲ್ಲೆಡೆಯ ಸಾವಿರಾರು ಮಹಿಳೆಯರು ಅದರಲ್ಲಿ ಪಾಲ್ಗೊಂಡರು. ಆಟ, ಸ್ಪರ್ಧೆ, ಕಲೆ, ಕರಕುಶಲ ವಸ್ತುಗಳ ಪ್ರದರ್ಶನ-ಮಾರಾಟ, ಚರ್ಚೆ, ಕಾರ್ಯಾಗಾರಗಳು ನಡೆದವು. ಪಕ್ಕದ ಹಳ್ಳಿಯಲ್ಲಿ 11 ವರ್ಷದ ಹುಡುಗಿಯ ಮೇಲೆ ನಡೆದ ಅತ್ಯಾಚಾರ ವಿರೋಧಿಸುತ್ತ ನಡೆದ ಪ್ರಭಾತ ಫೇರಿಯಲ್ಲಿ ಮಹಿಳಾ ಸಮಾವೇಶ ಕೊನೆಗೊಂಡಿತು.

ಶ್ರೀಮಂತ ಜಮೀನ್ದಾರನೊಬ್ಬ ಆದಿವಾಸಿಗಳ 25 ಹೆಕ್ಟೇರ್ ಜಮೀನನ್ನು ಕಬಳಿಸಿದ್ದ. ಅವರಿಗೆ ಮರಳಿ ಕೊಡಿಸಲು ಹೋರಾಟ ಕಟ್ಟಿ ಯಶಸ್ವಿಯಾದ ಬಳಿಕ ಜನರೇ ಅವರಲ್ಲಿ ಬರತೊಡಗಿದರು. ಜನಸಹಭಾಗಿತ್ವದ ಚಳವಳಿ, ಹೋರಾಟದ ಅನೇಕ ಯೋಜನೆಗಳು ಹುಟ್ಟಿಕೊಂಡವು. "ಯಾವುದೇ ಹೋರಾಟವೂ ರಾಜಕಾರಣದ ಆಳ-ಅಗಲ ಅರಿತೇ ನಡೆಯಬೇಕು. ರಾಜಕಾರಣವೆಂದರೆ ಚುನಾವಣಾ ರಾಜಕಾರಣ ಅಲ್ಲ, ಹಕ್ಕು ಕರ್ತವ್ಯಗಳ ಸಾಂವಿಧಾನಿಕ ಅರಿವು. ನಾವು ನ್ಯಾಯವ್ಯವಸ್ಥೆಯ ವಿರುದ್ಧವಿಲ್ಲ. ಶಾಸಕಾಂಗ, ಕಾರ್ಯಾಂಗದ ವಿರುದ್ಧವೂ ಇಲ್ಲ. ಆದರೆ, ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಗಳು ಸಂವಿಧಾನ ಹೇಳಿದ ಚೌಕಟ್ಟಿನಲ್ಲಿ ಜನರಿಗಾಗಿ ಕಾರ್ಯ ನಿರ್ವಹಿಸಬೇಕು ಎನ್ನುವುದೇ ನಮ್ಮ ಹಕ್ಕೊತ್ತಾಯ" ಎನ್ನುತ್ತ ಅರುಣಾ ಆರೋಗ್ಯಕರ ಸಮಾಜ ಕಟ್ಟಲು ಸೇವೆ, ನಿರ್ಮಾಣ, ಸಂಘರ್ಷ ಎಂಬ ಮೂರೂ ತರಹದ ಕೆಲಸಗಳು ಅವಶ್ಯ ಎಂದು ಗುರುತಿಸಿದರು.

ಆ ಪ್ರದೇಶಕ್ಕೆ ಮಂಜೂರಾಗುತ್ತಿದ್ದ ಬರಪರಿಹಾರ ಕಾಮಗಾರಿಯ ಕೂಲಿಯಲ್ಲಿ ಸರ್ಕಾರ ನೀಡಿರುವುದರ ಅರ್ಧಕ್ಕರ್ಧವನ್ನು ದಲ್ಲಾಳಿಗಳೇ ನುಂಗುತ್ತಿದ್ದರು. ನ್ಯಾಯದ ವೇತನ ಕೇಳುತ್ತಾ ಮೊದಲ ಹೋರಾಟ ಬಿಯಾವರ ಎಂಬಲ್ಲಿ ಧರಣಿ ಸತ್ಯಾಗ್ರಹದ ರೂಪದಲ್ಲಿ ಆರಂಭವಾಯಿತು. ʼನಮಗೆ ನಿಮ್ಮ ಅರೆಬರೆ ಸಂಬಳ ಬೇಡʼವೆಂದು ಕೆಲಸ ಮಾಡಿ ವೇತನ ಪಡೆಯದೆ ಅಸಹಕಾರ ತೋರಿದರು. ವೇತನ ಸ್ವಲ್ಪ ಮಾತ್ರ ಹೆಚ್ಚಳ ಕಂಡರೂ ಘನತೆಯ ಬದುಕಿಗೆ ಸಾಲುವಷ್ಟಿರಲಿಲ್ಲ. 1990ರಲ್ಲಿ ಶ್ರಮಿಕರ ಹಕ್ಕುಗಳ ಕುರಿತೇ ಹೋರಾಡಲು ಒಂದು ಸಂಘಟನೆಯ ಅವಶ್ಯಕತೆಯಿದೆಯೆಂದು `ಮಜ್ದೂರ್ ಕಿಸಾನ್ ಶಕ್ತಿ ಸಂಘಟನ್’ (ಎಂಕೆಎಸ್‌ಎಸ್) ಆರಂಭಿಸಿದರು.

Image
Protest
ಆರ್‌ಟಿಐಗಾಗಿ ನಡೆದ ಪ್ರತಿಭಟನೆಯ ದೃಶ್ಯ

ಈ ಸಂಘಟನೆಯ ಮೂಲಕ ಎಲ್ಲೆಲ್ಲಿ, ಯಾವ ಯೋಜನೆಗಳಿಗೆ, ಯಾವ ಗುತ್ತಿಗೆದಾರರಿಗೆ ಎಷ್ಟು ಹಣ ಮಂಜೂರಾಗಿದೆ? ಮಂಜೂರಾದ ಸರ್ಕಾರಿ ಹಣವನ್ನು ಹೇಗೆ ವಿನಿಯೋಗಿಸಲಾಗಿದೆ? ಅದು ಜನರನ್ನು ತಲುಪಿರುವುದೆಷ್ಟು? ತಲುಪಬೇಕಾದ ಪಾಲೆಷ್ಟು? ಮೊದಲಾದ ಮಾಹಿತಿಗಳನ್ನು ಅಧಿಕೃತವಾಗಿ ಪಡೆಯಲು ಪ್ರಯತ್ನಿಸಿದರು. ಆ ಹೋರಾಟವೇ ಮುಂದೆ ಚಾರಿತ್ರಿಕ `ಮಾಹಿತಿ ಹಕ್ಕು ಕಾಯ್ದೆ’ ರೂಪುಗೊಳ್ಳಲು ಕಾರಣವಾಯಿತು. 

ಎಂಕೆಎಸ್‌ಎಸ್ ಮಾಹಿತಿ ಹಕ್ಕಿಗಾಗಿ ನಡೆಸಿದ ಹೋರಾಟದಲ್ಲಿ 1996ರಲ್ಲಿ ಮುಖ್ಯ ಘಟ್ಟ ಎದುರಾಯಿತು. ನಿರ್ಧಾರಕ ಕ್ಷಣವೊಂದರಲ್ಲಿ ಜನ ತಮ್ಮ ಸಂಖ್ಯಾಬಲ ತೋರಿಸಲೇಬೇಕಾಯಿತು. ಸಂಘಟನೆಯ ಕಾರ್ಯಕರ್ತರು 400 ಹಳ್ಳಿಗಳಿಗೆ ಭೇಟಿ ನೀಡಿ ಚರ್ಚೆ ನಡೆಸಿದರು. 40 ದಿನಗಳ ಧರಣಿ ಬಿಯಾವರದಲ್ಲಿ ನಡೆಯಿತು. ಪ್ರತಿ ಕುಟುಂಬದಿAದ ಒಬ್ಬರಾದರೂ ಬಂದು ಐದಾರು ದಿವಸ ಧರಣಿಯಲ್ಲಿ ಪಾಲ್ಗೊಂಡರು. ಐದು ಕೆಜಿಯಷ್ಟು ಯಾವುದಾದರೂ ಒಂದು ಧಾನ್ಯವನ್ನು ಹೊರೆಗಾಣಿಕೆಯಾಗಿ ತಂದುಕೊಟ್ಟರು. ಧರಣಿ ನಡೆಯುತ್ತಿದ್ದ ಜಾಗ ಚಟುವಟಿಕೆ, ಚರ್ಚೆ, ಕವಿತಾ ವಾಚನ, ಹಾಡು, ಅಂಬೇಡ್ಕರ್ ಜಯಂತಿ ಆಚರಣೆ, ಕಾರ್ಮಿಕ ದಿನಾಚರಣೆ ಮೊದಲಾಗಿ ಒಂದಾದ ಮೇಲೊಂದು ಚಟುವಟಿಕೆ ನಡೆಸುತ್ತ ಜನರನ್ನು ಸೆಳೆಯತೊಡಗಿತು. ದೇಶದ ಎಲ್ಲೆಡೆಯ ಚಿಂತಕರನ್ನು ಬಿಯಾವರ ಮತ್ತು ಎಂಕೆಎಸ್‌ಎಸ್‌ನ ಬೇಡಿಕೆಗಳು ಸೆಳೆದವು. ಚರ್ಚೆ, ಸಂವಾದ ನಡೆಯುತ್ತ ಹೋದಂತೆ ಮಾಹಿತಿ ಹಕ್ಕು ಪಡೆದದ್ದೇ ಆದರೆ ಮಾನವ ಹಕ್ಕು, ಆರ್ಥಿಕ ಹಕ್ಕು, ಸಾಮಾಜಿಕ ಹಕ್ಕು ಮುಂತಾದ ಹಲವಾರು ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆಂಬ ಅರಿವಾಯಿತು. ಸ್ಥಳೀಯ ಕಾರ್ಮಿಕ ಸಂಘಟನೆಗಳು, ಸಮಾಜಸೇವಾಕರ್ತರು, ಅಕ್ಯಾಡೆಮಿಕ್ ಚಿಂತಕರ ಸಹಾಯವನ್ನೂ ಅರುಣಾ ಪಡೆದರು. ಒಗ್ಗೂಡಿದ ದನಿಗಿರುವ ಶಕ್ತಿ ಜಯ ಪಡೆಯಿತು. 

ಜನಸಹಭಾಗಿತ್ವವೇ ಉಜ್ವಲ ನೀತಿ

ಎಂಕೆಎಸ್‌ಎಸ್ ಜನಸಹಭಾಗಿತ್ವದ ಆಶಯದಲ್ಲಿ ರೂಪುಗೊಂಡದ್ದು. ಅದಕ್ಕೆ ಯಾರದೂ ನಾಯಕತ್ವವಿಲ್ಲ. ಸೊಸೈಟಿ ಎಂದಾಗಲೀ ಅಥವಾ ಟ್ರೇಡ್ ಯೂನಿಯನ್ ಅಂತಾಗಲೀ ನೋಂದಾವಣೆಯಾಗಿಲ್ಲ. ಸದಸ್ಯತ್ವ ಶುಲ್ಕವಿಲ್ಲ. ಸಂವಿಧಾನವಿಲ್ಲ. ಜನಧನವೇ ಬೆಂಬಲ. ಸಹಮತ ಆಧರಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಅಲ್ಲಿನ ಜನರ ಅವಶ್ಯಕತೆಗಳನ್ನು ಆಧರಿಸಿ ಹಕ್ಕು ಜಾಗೃತಿ ಕಾರ್ಯಕ್ರಮ-ಚಿಂತನೆ-ಹೋರಾಟಗಳನ್ನು ಸಂಘಟಿಸುತ್ತದೆ. 

ಸಾಮಾಜಿಕ, ಸಂಘಟಿತ ಕೆಲಸಗಳಲ್ಲಿ ತೊಡಗಿಕೊಂಡವರಿಗೆ ಪಾರದರ್ಶಕತೆ ತೀರಾ ಅಗತ್ಯ. ತಮ್ಮ ಬದುಕಿನ ನಿರ್ವಹಣೆ ಮತ್ತು ಆಂದೋಲನದ ಮುನ್ನಡೆಸುವಿಕೆಗೆ ಎಲ್ಲಿಂದ ಧನಸಹಾಯ ಪಡೆಯಬೇಕೆನ್ನುವುದೇ ಒಂದು ರಾಜಕಾರಣ. ತಮ್ಮ ಮೊದಲ ಹೋರಾಟದಿಂದ ಇಲ್ಲಿಯವರೆಗೂ ಎಂಕೆಎಸ್‌ಎಸ್ ಕಾರ್ಯಕರ್ತರು ಪ್ರತಿದಿನ ಬಂದದ್ದು, ಖರ್ಚಾದದ್ದನ್ನು ಕಚೇರಿಯ ಬೋರ್ಡ್ ಮೇಲೆ ಎಲ್ಲರೆದುರೇ ಬರೆಯುತ್ತಾರೆ. `ಯಾವುದೇ ಸಾಂಸ್ಥಿಕ ಸಹಾಯ ತೆಗೆದುಕೊಳ್ಳದೇ ಯಾವ ಜನರಿಗಾಗಿ ಹೋರಾಟ ನಡೆಯುತ್ತಿದೆಯೋ ಅವರಿಂದ ಅಥವಾ ಸಮಾನ ಮನಸ್ಕರಿಂದ ಎತ್ತಿದ ದೇಣಿಗೆಯಿಂದಲೇ ಆಂದೋಲನಗಳನ್ನು ರೂಪಿಸಬೇಕು’ ಎಂದ ಗಾಂಧೀಜಿ ಅವರ ಸ್ಫೂರ್ತಿಯಾಗಿದ್ದಾರೆ. ದೀರ್ಘಕಾಲೀನ, ವಿಸ್ತೃತ ಹೋರಾಟಗಳನ್ನು ಜನಧನದಿಂದಲೇ ನಡೆಸಲು ಸಾಧ್ಯವಿದೆ ಎಂದು ತೋರಿಸಿಕೊಡುತ್ತಿದ್ದಾರೆ. 

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಮಹಿಳಾ ಶಕ್ತಿ, ಮಾನವ ಮುಕ್ತಿ: ಇಂದುಮತಿ ನಿಕಮ್ ಪಾಟಣಕರ್

ಅವರು ಯಾವ ಜನರನ್ನು ಪ್ರತಿನಿಧಿಸುತ್ತಾರೋ, ಯಾವ ಕನಿಷ್ಟ ಕೂಲಿಗಾಗಿ ಹೋರಾಡುತ್ತಾರೋ, ಅಷ್ಟೇ ಹಣವನ್ನು ಮಾಸಿಕ ಭತ್ಯೆಯಾಗಿ ಸಂಘಟನ್‌ನ ಇಪ್ಪತ್ತು ಖಾಯಂ ಕಾರ್ಯಕರ್ತರು ಪಡೆಯುತ್ತಿದ್ದಾರೆ. '31 ವರ್ಷಗಳಿಂದ ಹೀಗೇ ಬದುಕುತ್ತಿದ್ದೇವೆ. ಯಾರನ್ನು ಪ್ರತಿನಿಧಿಸಬಯಸುತ್ತೇವೋ, ಅವರಂತೆ ನಾವು ಬದುಕಬೇಕೆನ್ನುವುದಕ್ಕೆ ಬದ್ಧರಾಗಿದ್ದೇವೆ. ಜನರಿಂದ ಧನ ಮತ್ತು ಸಹಾಯವನ್ನು ತೆಗೆದುಕೊಳ್ಳುತ್ತೇವೆ, ಕೇಳುತ್ತೇವೆ. ಇದು ನಮಗೆ ವಿನಯವನ್ನು ಕಲಿಸಿದೆ. ಜನರಿಲ್ಲದೆ ಬದುಕಲಾಗದು ಎಂಬ ಸತ್ಯವನ್ನು ಅರ್ಥ ಮಾಡಿಸಿದೆ. ಇದು ಜನರನ್ನು ನಮ್ಮ ಬಳಿ ತಂದಿದೆ ಮತ್ತು ಸಂಘಟನೆಯಲ್ಲಿ ಅವರ ಘನತೆಯ ಭಾಗವಹಿಸುವಿಕೆಯನ್ನು ಸಾಧ್ಯ ಮಾಡಿದೆ. ಅವರು ನಮ್ಮನ್ನು ಮೌಲ್ಯಮಾಪನ ಮಾಡಲು, ನಾವು ಉತ್ತರದಾಯಿತ್ವ ವಹಿಸಿಕೊಳ್ಳಲೂ ಇದು ಕಾರಣವಾಗಿದೆ’ ಎಂಬ ಮಾತುಗಳು ಅವರ ಆಶಯ, ಗುರಿಗಳನ್ನು ಸ್ಪಷ್ಟವಾಗಿ ತಿಳಿಸುತ್ತವೆ. 

ಜನಸಹಭಾಗಿತ್ವದ ಮೇಲೆ ಅಪಾರ ವಿಶ್ವಾಸವಿಟ್ಟ ಅರುಣಾ ಸಮಾನತೆ, ಪ್ರಜಾಪ್ರಭುತ್ವ ಆಶಯಗಳು ಚಳವಳಿಯಲ್ಲಿ, ಚಳವಳಿಕಾರರಲ್ಲಿ ಇರಬೇಕಾದದ್ದು ಅತಿ ಅಗತ್ಯ ಎಂದು ನಂಬಿದ್ದಾರೆ. ʼಸಂಘಟನೆಯಲ್ಲಿ ಇರಲೇಬೇಕಾದ ಕೆಲವು ಅಂಶಗಳಲ್ಲಿ 1. ಎಲ್ಲರ ಅಭಿಪ್ರಾಯಗಳನ್ನು ಕೇಳಿಸಿಕೊಳ್ಳುವ ಗುಣ. 2. ಭಿನ್ನಮತವನ್ನು ಒಪ್ಪುವ ಗುಣ. 3. ಒಂದನ್ನು ಕೊಟ್ಟು, ಒಂದನ್ನು ಪಡೆದು ಅಂತೂ ಸಹಮತಕ್ಕೆ ಬರುವ ಗುಣ ಇರಲೇಬೇಕು. ಎಲ್ಲರೂ ಸಮಾನರಾಗಿರಬೇಕು ಎನ್ನುವುದು ಬಾಯಿ ಮಾತಿನಲ್ಲಿ ಆದರೆ, ಸಂಘಟನೆ ಬೆಳೆಯದು; ಪ್ರತಿ ಹೆಜ್ಜೆಯಲ್ಲಿ ಸಮಾನತೆ ನೆಲೆಯಾಗಬೇಕು. ಎಲ್ಲರಿಗೂ ಯೋಚಿಸಲು, ಮಾತನಾಡಲು, ಇರಲು, ಬಿಟ್ಟುಹೋಗಲು ಸಮಾನ ಅವಕಾಶ ಇರಬೇಕು. ಚಳವಳಿಗೆ ಹಣವನ್ನು ಹೇಗಾದರೂ ಸಂಗ್ರಹಿಸಬಹುದು. ಆದರೆ, ಜನರ ಭಾಗವಹಿಸುವಿಕೆ ತುಂಬ ಮುಖ್ಯʼ ಎಂದು ನಂಬಿರುವುದರಿಂದಲೇ ಜನರ ಬೆಂಬಲಗಳಿಸಲು ಅವರಿಗೆ ಸಾಧ್ಯವಾಗಿದೆ.  

ಹೋರಾಟ ಕಟ್ಟುವುದರ ಜೊತೆಗೆ ಅರುಣಾ ಎಲ್ಲ ವಲಯದ ಬೆಂಬಲ ಗಳಿಸಿಕೊಳ್ಳಲು ವಿಶೇಷ ಪ್ರಯತ್ನ ಹಾಕಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯ ಮೊದಲ ಕರಡು ರೂಪಿಸುವಲ್ಲಿ ನಿವೃತ್ತ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಪಿ. ಬಿ. ಸಾವಂತ್ ಸಹಾಯ ಮಾಡಿದ್ದಾರೆ. ನರೇಗಾ ಕಾಯ್ದೆಯಾಗುವ ಮುನ್ನ ಜೀನ್ ಡ್ರೆಜ್, ಜಯತಿ ಘೋಷ್, ಪ್ರಭಾತ್ ಪಟ್ನಾಯಕ್ ಮೊದಲಾದ ಅರ್ಥಶಾಸ್ತ್ರಜ್ಞರು ʼದುಡ್ಡಿಲ್ಲʼಎಂಬ ಸರ್ಕಾರದ ವಾದಕ್ಕೆ ಪ್ರತಿ ಉತ್ತರ ಸಿದ್ಧಪಡಿಸಿ ಸಾಧ್ಯತೆಗಳನ್ನು ಎತ್ತಿ ತೋರಿಸಿದ್ದಾರೆ. ಹಲವು ದಿಕ್ಕಿನ ಬೆಂಬಲ ಗಳಿಸಿದ್ದರಿಂದಲೇ ಅರುಣಾ ಸಹಭಾಗಿಯಾದ ಆಂದೋಲನಗಳು ಮಹತ್ವದ ಕಾಯ್ದೆಗಳನ್ನು ರೂಪಿಸಲು ಕಾರಣವಾದವು. ಸಮಾನ ಕನಿಷ್ಟ ಕೂಲಿಯ ಆಂದೋಲನ ನರೇಗಾ ಕಾಯ್ದೆಯಾದರೆ; ಆಡಳಿತ ವ್ಯವಸ್ಥೆಯಿಂದ ಮಾಹಿತಿ ಪಡೆಯಲು ನಡೆಸಿದ ಹೋರಾಟಗಳು ಮಾಹಿತಿ ಹಕ್ಕು ಕಾಯ್ದೆಯಾಗಿ ಜನತಂತ್ರದ ದೇಶಕ್ಕೆ ಚಾರಿತ್ರಿಕ ಮೈಲುಗಲ್ಲಾದವು.

Image
Aruna Roy

76ರ ಹರೆಯದ ಅರುಣಾ ಈಗಲೂ ನಿರಂತರವಾಗಿ ಜನಜಾಗೃತಿ, ಆಂದೋಲನಗಳಲ್ಲಿ ತೊಡಗಿದ್ದಾರೆ. ದೇಶದ ಪ್ರತಿ ನಾಗರಿಕರಿಗೂ ಮುಕ್ತ ಅಭಿವ್ಯಕ್ತಿ ಅವಶ್ಯ ಎಂಬ ನಂಬಿಕೆಯಿಟ್ಟಿದ್ದಾರೆ. ಸಾಮೂಹಿಕ ನಾಯಕತ್ವದ ಗುಣಗಳಿಗಾಗಿ 2000ನೇ ಇಸವಿಯಲ್ಲಿ ರೇಮನ್ ಮ್ಯಾಗ್ಸೇಸೆ ಪ್ರಶಸ್ತಿ ಸೇರಿದಂತೆ ಹಲವಾರು ಮನ್ನಣೆ, ಗೌರವಗಳನ್ನು ಪಡೆದಿದ್ದಾರೆ. ದೆಹಲಿಯ ಜಂತರ್ ಮಂತರ್ ಪ್ರತಿಭಟನೆಗಳಿಗೆ ಮುಚ್ಚಿಕೊಂಡಾಗ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ 2018ರಲ್ಲಿ ಮತ್ತೆ ಅದನ್ನು ಪ್ರತಿಭಟನೆಯ ಸ್ಥಳವಾಗಿ ಪಡೆದುಕೊಳ್ಳಲು ಯಶಸ್ವಿಯಾಗಿದ್ದಾರೆ. 2018ರಲ್ಲಿ ಪ್ರಕಟವಾದ ʼದ ಆರ್‌ಟಿಐ ಸ್ಟೋರಿ: ಪವರ್ ಟು ಪೀಪಲ್ʼ ಸೇರಿದಂತೆ ತಮ್ಮ ಐದು ದಶಕಗಳ ಹೋರಾಟದ ಬದುಕಿನ ಉದ್ದಕ್ಕೂ ಅನೇಕ ಹೊತ್ತಿಗೆಗಳನ್ನು ಹೊರತಂದಿದ್ದಾರೆ. ಕಾಲಕಾಲಕ್ಕೆ ಲೇಖನ, ಸಂಶೋಧನಾ ಬರಹ ಬರೆದಿದ್ದಾರೆ. 

ಪ್ರತಿವರ್ಷ 80,000 ಜನ ಮಾಹಿತಿ ಹಕ್ಕು ಕಾಯ್ದೆಯಡಿ ಸರ್ಕಾರದ ನಾನಾ ಯೋಜನೆಗಳು, ಅವು ಹಿಡಿದ ದಾರಿ, ಹಣವಿನಿಯೋಗಗಳ ಬಗೆಗೆ ಮಾಹಿತಿ ಪಡೆದುಕೊಳ್ಳುತ್ತಾ ಜನಾಂದೋಲನವನ್ನು, ಜನಮತವನ್ನು ಜೀವಂತವಾಗಿಟ್ಟಿದ್ದಾರೆ ಎನ್ನುವುದು ಪ್ರಜಾಪ್ರಭುತ್ವದ ದೇಶ ಭಾರತಕ್ಕೆ ಅರುಣಾ ನೀಡಿದ ಕಾಣಿಕೆಯಾಗಿದೆ. ಈಗ ರಾಜಸ್ಥಾನದ 33 ಜಿಲ್ಲೆಗಳಲ್ಲಿ ಜನಪ್ರತಿನಿಧಿಗಳಿಗೆ ಉತ್ತರದಾಯಿತ್ವ ಕಾನೂನು ಬರಬೇಕು; ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಎಷ್ಟನ್ನು ಈಡೇರಿಸಿದರು ಎಂಬ ಮೌಲ್ಯಮಾಪನ ನಡೆಯಬೇಕು ಎಂದು ಆಗ್ರಹಿಸಿ ಅರುಣಾ ಪಾದಯಾತ್ರೆ ನಡೆಸುತ್ತಿದ್ದಾರೆ. 

ಮಾನವೀಯತೆ ಇನ್ನೂ ಸಮಾಜದಲ್ಲಿದೆ; ಈಗಿರುವುದಕ್ಕಿಂತ ನ್ಯಾಯಯುತ ಸಮಾಜ ಕಟ್ಟಲು ಅದು ನೆರವಾಗುತ್ತದೆ ಎಂದು ಗಾಢವಾಗಿ ನಂಬಿರುವ ಅವರ ಹಾದಿ ಕಲ್ಲುಮುಳ್ಳುಗಳೇ ತುಂಬಿರುವ ಅಪಾಯದ ದಾರಿ. ಆದರೆ, ಸಂಗಡಿಗರೊಂದಿಗೆ ಕಷ್ಟದ ಹಾದಿ ಕ್ರಮಿಸುತ್ತಲೇ ಅರುಣಾ ಎದೆಗೆಡದೆ ಬೆಳಕಿನೆಡೆಗೆ ನಡೆಯುತ್ತಿದ್ದಾರೆ. ಮತ್ತೆ ಆ ಹಾದಿ ಕ್ರಮಿಸುವವರಿಗೆ ಮುಳ್ಳು ಚುಚ್ಚದಿರಲೆಂದು ಮಣ್ಣುಹೊತ್ತು ಹಾಕುತ್ತಿದ್ದಾರೆ. 

ಭಾರತಕ್ಕೆ ಭವ್ಯ ಪರಂಪರೆ ಇರುವುದಾದರೆ ಅದು ಅಹಿಂಸಾತ್ಮಕ ಆಂದೋಲನಗಳದ್ದು. ಭಾರತದ ಭವಿಷ್ಯವೇ ಆದ ಯುವಜನರು ನಿರ್ಭೀತಿಯಿಂದ ತಮ್ಮಿಷ್ಟದ ಆಯ್ಕೆಯಂತೆ ಜನಹಿತಕಾರಿಗಳಾಗಿ ಬದುಕುವ ವಾತಾವರಣ ರೂಪಿಸಲು ಅರುಣಾ ಅಹಿಂಸಾತ್ಮಕ ಆಂದೋಲನಗಳ ಪರಂಪರೆಯನ್ನು ಮುಂದುವರೆಸಿದ್ದಾರೆ. ಸ್ವಾತಂತ್ರ್ಯದ 75ನೆಯ ವರುಷವನ್ನು ಆಚರಿಸುತ್ತಿರುವ ದೇಶಕ್ಕೆ ಅರುಣಾ ರಾಯ್ ಅವರ ಬದುಕು, ಹೋರಾಟಗಳು ಉತ್ತಮ ಮಾದರಿಯಾಗಿವೆ. ಅವರಂತಹ ದಿಟ್ಟ, ಭಿನ್ನ ದನಿಗಳು ಅನಿವಾರ್ಯವಾಗಿವೆ.

ನಿಮಗೆ ಏನು ಅನ್ನಿಸ್ತು?
2 ವೋಟ್