
ನಾವೆಲ್ಲ ಒಂದು ಸಂಗತಿ ನೆನಪಿಡಬೇಕಿದೆ; ಹಾವಾಗಲೀ, ಗೂಬೆಯಾಗಲೀ, ಮತ್ಯಾವುದೇ ಪ್ರಾಣಿ-ಪಕ್ಷಿಯಾಗಲೀ, ಅವುಗಳಿಗೆ ಮಾನವರ ಸಂಸ್ಕೃತಿಯ ಕಿಂಚಿತ್ ಅರಿವೂ ಇರುವುದಿಲ್ಲ. ಅವು ನಮ್ಮ ಇರುವಿಕೆಗೆ ಹೇಗೆ ಹೊಂದಿಕೊಂಡು ಹೋಗಬಹುದು ಎಂಬುದನ್ನಷ್ಟೇ ಅರಿತಿರುತ್ತವೆ. ಮನುಷ್ಯ ಜೀವಿಗಳೂ ಅದೇ ರೀತಿ ಇದ್ದುಬಿಟ್ಟರೆ ಪ್ರಕೃತಿಗೆ ದೊಡ್ಡ ಉಪಕಾರ
ನಮ್ಮಲ್ಲಿ ಬೇಸಿಗೆ ಶುರುವಾಯಿತೆಂದರೆ ಹಲವು ಹಕ್ಕಿಗಳು ಮೊಟ್ಟೆ ಇಟ್ಟು ಮರಿ ಮಾಡಲು ಶುರು ಮಾಡುತ್ತವೆ. ಟಿಟ್ಟಿಣಗಳು, ಮೆಟ್ಟುಗಾಲಕ್ಕಿಗಳು ನೆಲದಲ್ಲೇ ಮೊಟ್ಟೆ ಇಟ್ಟು ಸುರಕ್ಷತೆಗೆ ಕಾವಲು ಕಾಯುವುದು ನಮ್ಮ ಅರಿವಿಗೆ ಬಂದಿತ್ತು. ಆದರೆ ಈ ಬಾರಿ ನಮಗೆ ಹೊಸ ಹಕ್ಕಿಯ ಪರಿಚಯ ಆಗುವುದಿತ್ತು.
ಕೆರೆಯಲ್ಲಿ ನಡೆಯುತ್ತ ಹೋದಂತೆ, ನೆಲದಿಂದ ಆಕಾಶಕ್ಕೆ ಚೆಂಡಿನಂತೆ ಪುಟಿಯುತ್ತ ಹಕ್ಕಿಗಳೆರಡು ಹಾರಿದ್ದು ಕಂಡು, ಅಲ್ಲಿಯೇ ನಿಂತು ಗಮನಿಸತೊಡಗಿದೆವು. ಅವುಗಳು ಮತ್ತೆ ನೆಲದ ಮೇಲೆ ಕುಳಿತಾಗ, ಗಂಡು ಹಕ್ಕಿಯನ್ನು ಕಂಡೊಡನೆ ಅದು 'ಕರಿ ಎದೆಯ ನೆಲಗುಬ್ಬಿ' (Ashy Crowned Sparrow Lark) ಎಂದು ಅರಿವಾಗಿತ್ತು. ಹಾಗೆ ನೋಡಿದರೆ, ನಾವು ಕೆರೆಯೊಳಗೆ ಹುಡುಕಿ ಬಂದದ್ದು ಇದೇ ಹಕ್ಕಿಯನ್ನು. ಕಾರಣ, ನಿನ್ನೆ ತಂಗಿ ಕೆರೆಯ ಗುಂಡಿಯೊಂದರಲ್ಲಿ ಪುಟಾಣಿ ಗೂಡನ್ನು ಕಂಡು ಬರಹೇಳಿದ್ದಳು.

ಗುಬ್ಬಚ್ಚಿಗಳಂತೆ ಕಾಣುವ ಇವು, ಗಾತ್ರದಲ್ಲಿ ಮತ್ತು ಲಕ್ಷಣಗಳಲ್ಲಿ ವಿಭಿನ್ನ. ಗಂಡು ಹಕ್ಕಿಗಳ ಎದೆ ಸಂಪೂರ್ಣ ಕಪ್ಪಿದ್ದು, ಬಲು ಆಕರ್ಷಕವಾಗಿ ಕಾಣುತ್ತವೆ. ನೆಲದಲ್ಲೇ ಕೂತು ಬೀಜಗಳನ್ನು, ಹುಳುಗಳನ್ನು ಹೆಕ್ಕಿ ತಿನ್ನುತ್ತ, ಆಗಾಗ್ಗೆ ಗಂಡು ಹಕ್ಕಿಯು ಮೇಲೆ ಹಾರಿ ಕೂಗುತ್ತ ನೆಲಕ್ಕೆ ಡೈವ್ ಹೊಡೆಯುತ್ತಿರುತ್ತದೆ.
ಟಿಟ್ಟಿಣಗಳು, ಮೆಟ್ಟುಗಾಲಕ್ಕಿಯಾದರೆ ಎಂತಹ ಆಪತ್ತು ಬಂದರೂ ಯುದ್ಧಕ್ಕೆ ನಿಂತು ಹೋರಾಡುತ್ತವೆ. ಆದರೆ, ಈ ಕರಿ ಗುಬ್ಬಿಗಳ ಗಾತ್ರ ಎಷ್ಟು ಪುಟ್ಟದೆಂದರೆ, ನೇರ ಯುದ್ಧಕ್ಕೆ ನಿಲ್ಲುವುದು ಕಷ್ಟ. ಹಾಗಾಗಿ, ಇವುಗಳ ಏಕಮಾತ್ರ ಅಸ್ತ್ರವೆಂದರೆ ಮರೆಮಾಚುವಿಕೆ. ಥೇಟ್ ಮಣ್ಣಿನ ಬಣ್ಣಕ್ಕೆ ಇರುವ ಇವು ಅಲುಗಾಡದೆ ನಿಮ್ಮ ಮುಂದೆ ಕೂತರೆ, ನೀವು ಅದೆಷ್ಟು ಹುಡುಕಿದರೂ ಕಾಣುವುದಿಲ್ಲ! ಹೀಗೆ, ಮಣ್ಣಿನೊಂದಿಗೆ ಮಣ್ಣಾಗಿ ಬದುಕುವ ಹಕ್ಕಿಗಳಿಗೂ ಆಪತ್ತು ಇಲ್ಲವೇನೆಂದಲ್ಲ.

ಒಂದಿನ ಎತ್ತರದಲ್ಲಿ ಕುಳಿತು, ಇವುಗಳ ಗೂಡು ಕಟ್ಟುವಿಕೆ ಗಮನಿಸುತ್ತಿದ್ದೆವು. ಆಗಿನ್ನೂ ಬೇಸಿಗೆಯ ಬಿಸಿಲು ಸುಡುತ್ತಿತ್ತು. ನಮ್ಮಿಂದ ಸ್ವಲ್ಪ ದೂರದಲ್ಲಿ ಮತ್ತೊಂದು ಗುಡ್ಡೆಯಲ್ಲಿ ಎರಡು ಕಳ್ಳಿಪೀರಗಳು ತೂತು ಕೊರೆದು ಗೂಡು ಮಾಡಿಕೊಳ್ಳುತ್ತಿದ್ದದ್ದು ಕಾಣಿಸುತ್ತಿತ್ತು. ಅದೇ ಗುಡ್ಡೆಯಲ್ಲಿ ಆಗಲೇ ಮೂರ್ನಾಲ್ಕು ತೂತುಗಳು ಕಾಣಿಸುತ್ತಿದ್ದವು. ಇನ್ನೆರಡು ನಿಮಿಷದ ನಂತರ ಕಳ್ಳಿಪೀರಗಳು ಗಾಳಿಯಲ್ಲಿ ಎತ್ತಲೋ ಹಾರಿದವು. ಕಳ್ಳಿಪೀರಗಳ ಗುಡ್ಡೆಯ ಬಳಿ ಎಂತದೋ ಹಾವೊಂದು ತೆವಳುವುದು ಕಂಡು ಗಾಬರಿಯಾದೆವು. ಆದರೆ, ನಾವು ಕುಳಿತಿದ್ದು ದೂರವಿದ್ದುದರಿಂದ ಅಲುಗಾಡದೆ ನೋಡತೊಡಗಿದೆವು. ಆಗ ಕಂಡದ್ದು ಈ ಕೆರೆಯ ನೆಲದಲ್ಲಿ, ತೂತುಗಳಲ್ಲಿ ಮೊಟ್ಟೆ ಇಟ್ಟು ಮರಿ ಮಾಡುವ ಹಕ್ಕಿಗಳ ಬದ್ಧವೈರಿಯಾದ ಕೇರೆಹಾವು (Indian Rat Snake- Ptyas mucosa).
ಈ ಹಾವು ಒಂದೊಂದೇ ತೂತುಗಳ ಒಳಗೆ ನುಗ್ಗುತ್ತ, ಆಗಾಗ್ಗೆ ತಲೆ ಈಚೆ ಹಾಕುತ್ತಿದ್ದರೆ, ಅತ್ತ ಟಿಟ್ಟಿಣಗಳು ಮತ್ತು ಮೆಟ್ಟುಗಾಲಕ್ಕಿ ಇದನ್ನು ಎಲ್ಲಿಂದ ಗಮನಿಸಿದವೋ ಕಾಣದು; ತಕ್ಷಣ ಅಖಾಡಕ್ಕೆ ಇಳಿದು, ಹಾವಿನ ಮೇಲೆ ಗಲಾಟೆಗೆ ಇಳಿದವು. ಇವುಗಳ ಜೊತೆ ಕಳ್ಳಿಪೀರಗಳೂ ಸೇರಿ, ಹಾವನ್ನು ಹೆದರಿಸಿ ಓಡಿಸಲು ದೊಡ್ಡ ಮಟ್ಟದ ಕದನವೇ ನಡೆಯಿತು. ಕೊನೆಗೆ, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ, ಆ ಹಾವು ನೀರು ದಾಟಿ ಓಡದೆ ಬೇರೆ ದಾರಿ ಇರಲಿಲ್ಲ. ಇತ್ತ ಇದೆಲ್ಲ ನಡೆಯುವುದು ಗೊತ್ತಾಗುತ್ತಿದ್ದರೂ, ತಮಗೆ ಏನೂ ತಿಳಿಯದಂತೆ ಈ ನೆಲಗುಬ್ಬಿಗಳು ಗೂಡು ಕಟ್ಟುವುದರಲ್ಲಿ ನಿರತರಾಗಿದ್ದವು.
ಈ ಲೇಖನ ಓದಿದ್ದೀರಾ?: ಪಕ್ಷಿನೋಟ | ಅಂದು ರಾತ್ರಿ ಕೆರೆ ಬದಿಯ ಟಿಟ್ಟಿಣದ ಮೊಟ್ಟೆ ಕಬಳಿಸಿದ್ದು ಯಾರು?
ಮುಂದೆ ಮೂರ್ನಾಲ್ಕು ದಿನಗಳಲ್ಲಿ ಈ ನೆಲಗುಬ್ಬಿಗಳು ಎರಡು ಪುಟಾಣಿ ಮೊಟ್ಟೆ ಇಟ್ಟು ಕಾವು ಕೊಡಲು ಶುರುವಾಗಿದ್ದರೆ ನಮಗೆ ಖುಷಿಯಾಗಿತ್ತು. ಆದರೆ, ಈ ಕೇರೆಹಾವು ಕೂಡ ಬೆಳಗ್ಗೆ, ಸಂಜೆ ಎನ್ನದಂತೆ ಎಲ್ಲ ಸಮಯದಲ್ಲೂ ಕಾಣಿಸಿಕೊಳ್ಳಲು ಶುರುವಾಗಿತ್ತು. ಯಾವುದಾದರೂ ತೂತುಗಳಿಗೆ ನುಗ್ಗುವುದು ಮತ್ತು ಈ ಹಕ್ಕಿಗಳು ಅದನ್ನು ಓಡಿಸುವುದು ಸಾಮಾನ್ಯ ಆಗಿಬಿಟ್ಟಿತ್ತು. ಆದರೆ, ಒಂದು ರಾತ್ರಿ ಕರಿಗುಬ್ಬಿಗಳ ಮೊಟ್ಟೆ ಕಂಡು ಬಂದು, ಮರುದಿನ ಬೆಳಗ್ಗೆ ನೋಡಿದರೆ, ಮೊಟ್ಟೆಯೂ ಸೇರಿದಂತೆ ಹಕ್ಕಿಗಳು ಇಡೀ ಗೂಡನ್ನೇ ಖಾಲಿ ಮಾಡಿದ್ದವು. ಮೊಟ್ಟೆಯನ್ನು ಯಾರೋ ಕದ್ದಿದ್ದರು; ಅಂದರೆ, ಯಾವುದೋ ಭಕ್ಷಕ ತನ್ನ ಒಂದೊತ್ತಿನ ಊಟ ಗಿಟ್ಟಿಸಿಕೊಂಡಿದ್ದ.
ಈ ಕೇರೆಹಾವುಗಳು ನಮ್ಮ ಪರಿಸರ ಸಮತೋಲನ ಕಾಯ್ದುಕೊಳ್ಳಲು ಬೇಕಾದ ಅತೀ ಅವಶ್ಯಕ ಜೀವಿಗಳು. ನಮ್ಮ ಹಿತ್ತಲು, ಮನೆ, ತೋಟ ಎನ್ನದಂತೆ ಎಲ್ಲೆಲ್ಲೂ ಕಾಣುವ ಇವುಗಳು ಸಾಮಾನ್ಯವಾಗಿ ಇಲಿಗಳನ್ನು ಹಿಡಿದು ತಿನ್ನುತ್ತವೆ. ಆದರೆ, ಇಲಿಗಳ ಜೊತೆ ಸುಲಭವಾಗಿ ಹಕ್ಕಿ ಮೊಟ್ಟೆಗಳು, ಮರಿಗಳು ಸಿಕ್ಕರೆ ಅವುಗಳನ್ನೂ ಮುಗಿಸುತ್ತವೆ. ಈ ಕೇರೆಹಾವುಗಳು ಬಹಿರುಷ್ಣಕ ಜೀವಿಗಳು. ಅಂದರೆ, ದೇಹದ ಶಾಖಕ್ಕೆ ಬಾಹ್ಯ ಮೂಲಗಳನ್ನು ಅವಲಂಬಿಸಿರುವ ಜೀವಿ.

ಹವಾಮಾನ ವೈಪರೀತ್ಯ ಹೇಗೆಲ್ಲ ಪರಿಸರಕ್ಕೆ ಹಾನಿ ಮಾಡಬಹುದು ಎಂಬುದಕ್ಕೆ ಇಲ್ಲೊಂದು ನೇರ ನಿದರ್ಶನವಿದೆ ನೋಡಿ. ಹವಾಮಾನ ವೈಪರೀತ್ಯದಿಂದ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾದಂತೆ ಕೇರೆಹಾವುಗಳಿಗೆ ಒಂಥರಾ ಸೌಖ್ಯ. ಬರೀ ಬೆಳಗಿನಲ್ಲಿ ಅಡ್ಡಾಡುತ್ತಿದ್ದ ಈ ಕೇರೆಹಾವುಗಳು ಹಗಲು-ರಾತ್ರಿ ಎನ್ನದಂತೆ ಯಾವಾಗಲೂ ಬಿಲದಿಂದ ಆಚೆ ಬಂದು ಸುತ್ತಾಡಲು ಸಹಾಯಕವಾಗುತ್ತದೆ. ಸಾಮಾನ್ಯವಾಗಿ ಹೆಚ್ಚೆಚ್ಚು ಆಹಾರ ಕಬಳಿಸುವ ಈ ಹಾವುಗಳು, ರಾತ್ರಿಯಲ್ಲಿ ಇಂಥದ್ದೊಂದು ಭಕ್ಷಕನನ್ನು ನಿರೀಕ್ಷೆ ಮಾಡದೆ ಇರುವ ಪಕ್ಷಿಗಳ ಲೋಕದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡುವುದುಂಟು. ಇದರಿಂದ ಪಕ್ಷಿಗಳ ಸಂಖ್ಯೆಯಲ್ಲಿ, ವಂಶಾಭಿವೃದ್ಧಿಯಲ್ಲಿ ವ್ಯತ್ಯಾಸ ಕಂಡುಬರಲು ಶುರುವಾಗುತ್ತದೆ.
ಆದರೆ, ಕೇರೆಹಾವುಗಳನ್ನು ಹಲವು ಜೀವಿಗಳು ಭಕ್ಷಿಸುತ್ತವೆ. ಇದರ ಅರಿವಿಲ್ಲದೆ, ವಾತಾವರಣ ಬಿಸಿಯಿದೆ ಎಂದು ರಾತ್ರಿ ಸಮಯ ಇವುಗಳು ಈಚೆ ಬಂದರೆ ತಾನೇ ಬಲಿ ಆಗಬೇಕಾಗಬಹುದು. ಇದು ಹಾವುಗಳ ಸಂಖ್ಯೆಯಲ್ಲಿ ನಿಯಂತ್ರಣ ತಪ್ಪುವಂತೆ ಮಾಡಬಹುದು. ಜೊತೆಗೆ, ಈ ಕೇರೆಹಾವುಗಳ ಸಂಖ್ಯೆ ಕಡಿಮೆಯಾದರೆ, ನಿಮ್ಮ ಹಾಸಿಗೆ ಮೇಲೆ, ನಿಮ್ಮ ಅನ್ನದ ತಪ್ಪಲಿಗಳಲ್ಲಿ, ನಿಮ್ಮ ಬಟ್ಟೆಗಳೊಳಗೆ ಇಲಿಗಳು ಹಬ್ಬವನ್ನೇ ಮಾಡುತ್ತವೆ.

ಇನ್ನು, ಈ ಕೇರೆಹಾವಿಗೂ ನಾಗರಹಾವಿಗೂ ಅನೇಕ ಇಲ್ಲಸಲ್ಲದ ಸಂಬಂಧ ಕಲ್ಪಿಸಿ, ನಾಗರಹಾವೆಂದು ಭಾವಿಸಿ ಇವುಗಳನ್ನೂ ಕೊಂದ ನಿದರ್ಶನಗಳು ನಮ್ಮಲ್ಲಿವೆ. ಈ ಕೇರೆಹಾವುಗಳ ಸೆಣಸಾಟವೇ ಮಿಲನ ಎಂಬ ತಪ್ಪು ಕಲ್ಪನೆ ಹಳ್ಳಿಗಳಲ್ಲಿದೆ. ನಾವೆಲ್ಲ ಒಂದು ಸಂಗತಿ ನೆನಪಿಡಬೇಕಿದೆ; ಹಾವುಗಳಿಗಾಗಲೀ, ಗೂಬೆಗಳಿಗಾಗಲೀ, ಮಾನವರ ಸಂಸ್ಕೃತಿಯ ಕಿಂಚಿತ್ ಅರಿವೂ ಇರುವುದಿಲ್ಲ. ಅವು ನಮ್ಮ ಇರುವಿಕೆಗೆ ಹೇಗೆ ಹೊಂದಿಕೊಂಡು ಹೋಗಬಹುದು ಎಂಬುದನ್ನು ಮಾತ್ರ ಅರಿತಿರುತ್ತವೆ. ಅದೇ ರೀತಿ, ಮಾನವರು ಕೂಡ ಅವುಗಳ ಇರುವಿಕೆಯನ್ನು ಅರಿತು, ಇಲ್ಲಸಲ್ಲದ ಕತೆಗಳನ್ನು ಸೃಷ್ಟಿಸದೆ ಇದ್ದುಬಿಟ್ಟರೆ ಪ್ರಕೃತಿಗೆ ಅದೇ ದೊಡ್ಡ ಉಪಕಾರ.