ಮುಳ್ಳುಹಾದಿಗೆ ಮಣ್ಣು ಹೊತ್ತವರು | ಕಾಶ್ಮೀರದ ಗೌರಿ - ಆಸಿಯಾ ಜಿಲಾನಿ

ವಿಚಾರಣೆಗೆಂದು ಹೋದ ದುಡಿಯುವ ಪುರುಷರು ಮರಳಿ ಬರದೆ ಉಂಟಾದ ಆರ್ಥಿಕ ಅಭದ್ರತೆ, ರಕ್ಷಕರ ವೇಷ ತೊಟ್ಟವರ ಕಾಟ, ಅವಮಾನ, ಆತಂಕ, ಭಯ, ಅನಿಶ್ಚಿತತೆಯನ್ನು ಕಾಶ್ಮೀರದ ಹೆಣ್ಣುಮಕ್ಕಳು ಮೌನವಾಗಿ ಸಹಿಸಬೇಕಿತ್ತು. ಇವನ್ನೆಲ್ಲ ನೋಡುತ್ತ ದೊಡ್ಡವಳಾದ ಆಸಿಯಾ, ಇವುಗಳ ವಿರುದ್ಧ ಹೋರಾಡಬೇಕು ಎಂದು ಬಾಲ್ಯದಲ್ಲೇ ನಿಶ್ಚಯಿಸಿದಳು

ಎಲ್ಲಿ ಮನಕಳುಕಿರದೋ, ಎಲ್ಲಿ ದುಃಖವಿರದೋ, ಎಲ್ಲಿ ತಾರತಮ್ಯ ಅಸಮಾನತೆಗಳಿರವೋ, ಎಲ್ಲಿ ತೆರಿಗೆ ಹಿಂಸೆ ಕಿರುಕುಳಗಳಿರವೋ, ಎಲ್ಲಿ ಎಲ್ಲರಿಗೂ ಸ್ವತಂತ್ರವಿರುವುದೋ ಅಂತಹ 'ಬೇಗಮ್‍ ಪುರ'ವನ್ನು ಸಂತ ರವಿದಾಸ ಕಲ್ಪಿಸಿಕೊಂಡು ಬರೆದ. ಅದು ಕವಿಯ ರಮ್ಯ, ಉದಾತ್ತ ಮನದ ಕಲ್ಪನೆಯಷ್ಟೇ. ವಾಸ್ತವದಲ್ಲಿ ಇರುವವೆಲ್ಲ ಬೇಗಮ್‍ಪುರಗಳಲ್ಲ, ದರ್ದ್‍ಪುರಗಳು.  

'ಯಲ್ಲಾ ಬತ್ತಿರಾ, ನೂರುಗಟ್ಲೆ ಜನ, ಕೈಲಿ ಪೆನ್ನು, ಪಟ್ಟಿ, ಕ್ಯಾಮೆರಾ ಹಿಡ್ಕಂಡು. ಬರ್ದೇ ಬರಿತಿರ, ಪೋಟೋ ತಗ್ದೇ ತೆಗಿತಿರ. ಬಂದೋರೆಲ್ಲ ಅದೇನ್ ಬರದ್ರೋ, ಬಂದವ್ರೆಲ್ಲ ಏನ್ ಇದಾರೋ ಸತ್ತೋದ್ರೋ, ಹೋದೋರು ಒಬ್ರೂ ವಾಪಸ್ ಬರ್ಲಿಲ್ಲ. ನಮ್ಮ ಗಂಡರಂಗೇಯ. ನಿಮ್ಮತ್ರ ಎಸ್ಟ್ ಮಾತಾಡಿದ್ರೂ ನಮಿಗೇನೂ ಉಪಯೋಗಿಲ್ಲ...'

ಮೈಮುಚ್ಚಿದ್ದ ಉಣ್ಣೆಯ ನಿಲುವಂಗಿ, ದಣಿದ ಕಣ್ಣುಗಳ ಮುಖ, ಉಣ್ಣೆಯ ಶಿರವಸ್ತ್ರದಾಚೆ ಹಾರುವ ಕರಿಬಿಳಿ ಕೂದಲು, ಜಾರುತ್ತಿರುವ ವಯಸ್ಸನ್ನು ಮುಷ್ಟಿಯಲ್ಲಿ ತುಂಬಿ ಹಿಡಿದು, ದುವಾ ಮಾಡಿ-ಮಾಡಿ ಜಡ್ಡುಗಟ್ಟಿ ಬಿರಿದ ಅಂಗೈಗಳು...

ನಡುವಯಸ್ಸು ದಾಟಿದ ಮಹಿಳೆ ಆಕ್ರೋಶದಿಂದ ಮಾತನಾಡುತ್ತಿದ್ದಳು. ಸುತ್ತಲ ಪರ್ವತ ಶಿಖರಗಳಲ್ಲಷ್ಟೇ ಹಿಮ ಗಟ್ಟಿಯಾಗಿರಲಿಲ್ಲ, ಎದೆಯೊಳಗಿನ ದುಃಖವು ಕರಗದ ಹಿಮಾಲಯವಾಗಿ ಅವಳ ಬದುಕನ್ನೇ ಭಾರವಾಗಿಸಿತ್ತು.

ಅವಳೊಬ್ಬ ಕಾಶ್ಮೀರಿ ಅರೆ ವಿಧವೆ. ಮನೆ ಬಿಟ್ಟ ಗಂಡ ಇರುವನೋ ಸತ್ತಿರುವನೋ ಎಂದು ಗೊತ್ತಿಲ್ಲದ ಪತ್ನಿ. ವಿಚಾರಣೆಗೆಂದು ಸೇನೆ ಹೆಡೆಮುರಿ ಕಟ್ಟಿ ಅವಳ ಗಂಡನನ್ನು ಒಯ್ದು ಎರಡು ದಶಕಗಳೇ ಸಂದಿದ್ದವು. ಮೂರು ಮಕ್ಕಳು ಬೆಳೆದು ದೊಡ್ಡವರಾಗಿದ್ದರು. ಅವಳು ಮಾತ್ರ ಗಂಡನ ಬರವನ್ನು ಕಾದು-ಕಾದು ತ್ರಿಶಂಕು ಸ್ಥಿತಿ ಅನುಭವಿಸುತ್ತಿದ್ದಳು.

Image

ಇಸ್ಲಾಮಿನಲ್ಲಿ, ಕಾಶ್ಮೀರದಲ್ಲಿ ಮಹಿಳೆಯರು ವಿವಾಹ ವಿಚ್ಛೇದನ ತೆಗೆದುಕೊಳ್ಳುವುದು, ವಿಧವಾ ವಿವಾಹವಾಗುವುದು ಸಾಮಾನ್ಯವಾಗಿದ್ದರೂ ಕಾಣೆಯಾದ ಗಂಡನ ಹೆಂಡತಿಯರು ಹಾಗೆ ಮಾಡಲಾಗದು. ಷರಿಯಾ ಅರೆ ವಿಧವೆಯರಿಗೆ ಖುಲಾ ಆಗಲು ಬಿಡುವುದಿಲ್ಲ; ಗಂಡನ ಆಸ್ತಿಯಲ್ಲಿ ಯಾವುದೇ ಪಾಲು ಕೊಡುವುದಿಲ್ಲ. ಗಂಡನ ಮರಣ ದಾಖಲೆ ಸಿಗದ ಕಾರಣ ಕಾನೂನುಬದ್ಧವಾಗಿಯೂ ಪಾಲು ಸಿಗುವುದಿಲ್ಲ. ಕೆಲವು ಇಸ್ಲಾಂ ಧಾರ್ಮಿಕ ಪಂಗಡಗಳ ಮುಖ್ಯಸ್ಥರು ಚರ್ಚಿಸಿ, ಅರೆ ವಿಧವೆಯರು ಮರುಮದುವೆ ಆಗಬಹುದೆಂದು ಹೇಳಿದ್ದರೂ, ಮೊದಲ ಗಂಡ ತಿರುಗಿ ಬಂದರೆ ಎರಡನೆಯ ಮದುವೆ ಮುರಿದುಬೀಳುತ್ತಿತ್ತು. ಮತ್ತೆ ಹಳೆಯ ಗಂಡನ ಬಳಿಗೆ ಬರಬೇಕಿತ್ತು. ಎರಡೂ ವಿವಾಹದಿಂದ ಹುಟ್ಟಿದ ಮಕ್ಕಳ ನಡುವೆ ವಿಭಾಗಿಸಲ್ಪಡುವ ವಿಚಿತ್ರ ಇಕ್ಕಟ್ಟನ್ನು ಊಹಿಸಿಕೊಂಡು ಅವರೆಲ್ಲ ಒಂಟಿಯಾಗಿ ಕೊನೆಮೊದಲಿಲ್ಲದೆ ಕಾಯುತ್ತಿದ್ದರು.

ಅವರಿವರ ಅನುಕಂಪದಲ್ಲಿ ಬದುಕು ಸವೆಸಿ ಬೇಸತ್ತ ಮಹಿಳೆಯರ ಠೋಳಿಯೇ ಆ ಊರಿನಲ್ಲಿತ್ತು. ಆ ಊರಿನ 200 ಮಹಿಳೆಯರು ಅರೆ ವಿಧವೆಯರು. 100 ಮಹಿಳೆಯರು ವಿಧವೆಯರು. ಅವರೆಲ್ಲರ ಸಂಕಟವೇ ಮೈವೆತ್ತು ಊರಿನ ಹೆಸರಾಗಿಬಿಟ್ಟಿತ್ತು.

ಆ ಊರು ಕಾಶ್ಮೀರದ ದರ್ದ್‍ಪುರ. ಅದು ಕವಿಯ ಕಲ್ಪನೆಯ ನಗರವಲ್ಲ, ವಾಸ್ತವದ ನೋವಿನ ಹಳ್ಳಿ.

ದರ್ದ್‍ಪುರಕ್ಕೆ ಬಂದ ಒಬ್ಬ ಯುವ ಪತ್ರಕರ್ತೆ, "ಹೋದೋರು ಒಬ್ರೂ ವಾಪಸ್ ಬರ್ಲಿಲ್ಲ. ನಮ್ಮ ಗಂಡರಂಗೇಯ. ನಿಮ್ಮತ್ರ ಎಸ್ಟ್ ಮಾತಾಡಿದ್ರೂ ನಮಿಗೇನೂ ಉಪಯೋಗಿಲ್ಲ," ಎಂದ ಅರೆ ವಿಧವೆಯ ಮಾತು ಕೇಳಿ ಮರಗಟ್ಟಿಹೋದಳು. ಅಲ್ಲಿಗೆ ಮತ್ತೆ ಬರಬೇಕು, ಅವರಿಗೇನಾದರೂ ಅನುಕೂಲ ಮಾಡಬೇಕು ಎಂದು ನಿಶ್ಚಯಿಸಿದಳು. ಈ ತೀರ್ಮಾನ ಅವಳ ಬದುಕಿಗೊಂದು ಮುಖ್ಯ ತಿರುವು ಒದಗಿಸಿತು. ಅವಳ ಬದುಕೇ ಅದಕ್ಕಾಗಿ ಕರಗಿಹೋಯಿತು.

ಆಕೆ ಆಸಿಯಾ ಜಿಲಾನಿ. ಕಾಶ್ಮೀರವನ್ನು ಅಲ್ಲಿನ ಹೆಣ್ಣುಗಳ ಪ್ರೇಮ, ನೋವು, ಸಂಕಟ, ನಷ್ಟ, ವಿಷಾದ, ಭರವಸೆಗಳ ಕಣ್ಣಿನಿಂದ ನಿರೂಪಿಸಿದವಳು. ಮಹಿಳೆಯರ ದೃಷ್ಟಿಯಿಂದ ಕಣಿವೆಯ ಬದುಕನ್ನು, ಕಷ್ಟವನ್ನು, ಪರಿಹಾರವನ್ನು ಲೋಕ ನೋಡಬೇಕೆಂದು ಒತ್ತಾಯಿಸಿದವಳು. ಮಾತನಾಡದಿರುವ, ಮಾತನಾಡಲು ಅವಕಾಶ ಇಲ್ಲದಿರುವ ಮಹಿಳೆಯರ ದನಿಯಾಗಲೆತ್ನಿಸಿದವಳು. ಅವರಿಗೆ ನ್ಯಾಯ ದೊರಕಿದರೆ ಕಾಶ್ಮೀರ ನೆಲಕ್ಕೆ ನ್ಯಾಯ ದೊರೆತಂತೆ ಎಂದು ಭಾವಿಸಿದವಳು.

* * * * *

Image

1974ರ ಫೆಬ್ರವರಿ 9ರಂದು ಶ್ರೀನಗರದ ಮೇಲ್ಮಧ್ಯಮ ವರ್ಗದ ಅನುಕೂಲಸ್ಥರ ಮನೆಯಲ್ಲಿ ಹುಟ್ಟಿದ ಆಸಿಯಾ, ಕಫ್ರ್ಯೂ, ಬಾಂಬ್ ದಾಳಿ, ಎನ್‍ಕೌಂಟರ್, ತನಿಖೆ, ಶಿಕ್ಷೆ, ವಿಚಾರಣೆ, ವಾರಂಟ್, ಕೋರ್ಟ್ ಮುಂತಾದ ಪದಗಳನ್ನು ಕೇಳುತ್ತ, ಅನುಭವಿಸುತ್ತ ದೊಡ್ಡವಳಾದಳು. ಶ್ರದ್ಧಾವಂತ ಮುಸ್ಲಿಮರಾದ ಅವಳ ತಂದೆ, ಹೆಣ್ಣುಮಕ್ಕಳಿಗೆ ಶಿಕ್ಷಣ ಅವಶ್ಯವೆಂದು ಭಾವಿಸಿದ್ದರು. ಅವಳನ್ನು ಶ್ರೀನಗರದ ಪ್ರೆಸೆಂಟೇಷನ್ ಕಾನ್ವೆಂಟ್ ಶಾಲೆಗೆ ಸೇರಿಸಿದರು. ಅರ್ಧ ಶತಮಾನ ಹಿಂದಿನ ವರ್ಜಿನ್ ಮೇರಿ ಪಂಥಾನುಯಾಯಿ ಕ್ರೈಸ್ತ ಸನ್ಯಾಸಿನಿಯರು ನಡೆಸುತ್ತಿದ್ದ ಶಾಲೆಯ ಮುಕ್ತ ಪರಿಸರದಲ್ಲಿ ಆಸಿಯಾ ಬೆಳೆಯತೊಡಗಿದಳು.

10ನೆಯ ತರಗತಿಯಲ್ಲಿದ್ದಾಗ ಕಣಿವೆಯಲ್ಲಿ ಸಶಸ್ತ್ರ ಸಂಘರ್ಷ ತೀವ್ರವಾಯಿತು. ಶ್ರೀನಗರದಲ್ಲಿ ಹೆಜ್ಜೆಹೆಜ್ಜೆಗೂ ಸೇನೆ. ಎಲ್ಲಿ ನೋಡಿದರೂ ಸಶಸ್ತ್ರಧಾರಿಗಳು. ಆಸಿಯಾ ಇದ್ದದ್ದು ಶ್ರೀನಗರದ ಜನನಿಬಿಡ ಹೃದಯಭಾಗದಲ್ಲಿ. "ನಾವು ಭಾರತಕ್ಕಾಗಲೀ, ಪಾಕಿಸ್ತಾನಕ್ಕಾಗಲೀ ಸೇರಬಯಸುವುದಿಲ್ಲ; ನಮ್ಮನ್ನು ನಮ್ಮಷ್ಟಕ್ಕೆ ಬಿಡಿ," ಎನ್ನುವ ಆಜಾದ್ ಕಾಶ್ಮೀರಿಗಳ ವಲಯ ಅದು. ಕಾಶ್ಮೀರ ಪಾಕಿಸ್ತಾನಕ್ಕೆ ಸೇರಲಿ ಎನ್ನುವ ಆತಂಕವಾದಿಗಳಿಂದ, ಅದು ಭಾರತದ ಅವಿಭಾಜ್ಯ ಅಂಗ ಎಂದು ಸಾಧಿಸುವ ಸೇನೆಯಿಂದ ಪದೇಪದೆ ದಾಳಿ ನಡೆಯುತ್ತಿತ್ತು. ದಿನನಿತ್ಯ ಹಿಂಸೆ, ಪ್ರತಿಹಿಂಸೆ, ಶಿಕ್ಷೆ, ಹತ್ಯೆ. ಒಮ್ಮೆ ಇವರಿಂದ, ಮತ್ತೊಮ್ಮೆ ಅವರಿಂದ.

ಇದು ಹೊರಗಣ ನೋಟವಾದರೆ, ಮನೆಮನೆಯ ಕತೆ ಬೇರೆ ಇತ್ತು. ಹೆಣ್ಣುಗಳು ಹಲವು ನೆಲೆಗಳಿಂದ ದೌರ್ಜನ್ಯ ಎದುರಿಸುತ್ತಿದ್ದರು. ವಿಚಾರಣೆಗೆಂದು ಹೋದ ದುಡಿಯುವ ಪುರುಷರು ಮರಳಿ ಬರದೆ ಆರ್ಥಿಕ ಅಭದ್ರತೆ, ಕೌಟುಂಬಿಕ ಬಿಕ್ಕಟ್ಟು ಒಂದು ಕಡೆ. ರಕ್ಷಕರ ವೇಷ ತೊಟ್ಟವರು ಲೈಂಗಿಕ ಬಲಾತ್ಕರ ನಡೆಸುವುದು ಇನ್ನೊಂದು ಕಡೆ. ಅವಮಾನ, ಆತಂಕ, ಭಯ, ಅನಿಶ್ಚಿತತೆಯ ಬದುಕನ್ನು ಮಹಿಳೆಯರು ಮೌನವಾಗಿ ಸಹಿಸಬೇಕಿತ್ತು. ಇವನ್ನೆಲ್ಲ ನೋಡುತ್ತ ದೊಡ್ಡವಳಾದ ಆಸಿಯಾ, ಇದರ ವಿರುದ್ಧ ಹೋರಾಡಬೇಕು ಎಂದು ಬಾಲ್ಯದಲ್ಲೇ ನಿಶ್ಚಯಿಸಿದಳು. ಸರ್ಕಾರವನ್ನು, ವ್ಯವಸ್ಥೆಯನ್ನು ಎದುರು ಹಾಕಿಕೊಂಡು ಹೋರಾಡುವುದನ್ನು ಸಹಜವೆಂಬಂತೆ ಅವಳಿದ್ದ ವಾತಾವರಣವೇ ಕಲಿಸಿತು. ವಿಜ್ಞಾನ ವಿಷಯದಲ್ಲಿ ಪದವಿ ಪಡೆದರೂ ಕಾಶ್ಮೀರ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಎಂ.ಎ ಮಾಡಿದಳು.

ಮೊದಲು ಎಎಫ್‍ಪಿ (ಏಜೆನ್ಸ್ ಫ್ರಾನ್ಸ್ ಪ್ರೆಸ್) ಕಾಶ್ಮೀರ್ ಬ್ಯೂರೋನಲ್ಲಿ ಸಂಶೋಧಕಿ ಮತ್ತು ತರಬೇತಿ ಪಡೆಯುವ ವರದಿಗಾರ್ತಿಯಾಗಿ 1998ರಲ್ಲಿ ಸೇರಿದ ಆಸಿಯಾಗೆ, ನಿರ್ಭಯವಾಗಿ ತನ್ನ ಸಂಶೋಧನೆಯನ್ನು ನಡೆಸುವ, ನಿಜವನ್ನು ಪ್ರಕಟಿಸುವ ಸಾಮರ್ಥ್ಯ ಬೆಳೆಸಿಕೊಳ್ಳಲು ಆ ಕೆಲಸ ಸಹಕಾರಿಯಾಯಿತು. 2001ರಲ್ಲಿ 'ಟೈಮ್ಸ್ ಆಫ್ ಇಂಡಿಯಾ' ಸೇರಿ ದೆಹಲಿಗೆ ಹೋಗಿ ವೃತ್ತಿ ಮುಂದುವರಿಸಿದಳು. ರಾಜಧಾನಿಯ ವಾತಾವರಣ, ಅಲ್ಲಿನ ವರಸೆಗಳು, ಕೆಲಸ ಎಳ್ಳಷ್ಟೂ ಇಷ್ಟವಾಗಲಿಲ್ಲ. ತಾನು ಮಾಡುತ್ತಿರುವ ಕೆಲಸದಿಂದ ಕಣಿವೆಯ ಜನರಿಗೇನು ಉಪಯೋಗ ಎಂಬ ಪ್ರಶ್ನೆ ಪದೇಪದೆ ಏಳುತ್ತಿತ್ತು. ದಿನಪತ್ರಿಕೆಯ ತೋರುಗಾಣಿಕೆ ವರದಿಗಳು, ಲಾಭ-ನಷ್ಟ ಲೆಕ್ಕಾಚಾರದ ಸುದ್ದಿ ಸಂಗ್ರಹ, ವ್ಯಾಪಾರಿ ಉದ್ದೇಶಗಳನ್ನು ಕಂಡು ಬೇಸರ ಹುಟ್ಟಿತು. ದ್ವಂದ್ವ, ಅತೃಪ್ತಿ, ತಳಮಳಗಳ ನಡುವೆ ಎಲ್ಲರೂ ಉಚ್ಚತಮವೆಂದು ಭಾವಿಸುವ ದೆಹಲಿ ವಾಸ ತೊರೆದು ಹೊರಟುಬಿಟ್ಟಳು. ಕಾಶ್ಮೀರ ಕಣಿವೆಯ ಅಸಹಾಯಕ ಸೋದರಿಯರ ಸಲುವಾಗಿ ತನ್ನ ಬದುಕು, ಬರಹ ಮುಡಿಪಾಗಿಡುವೆನೆಂದು ನಿರ್ಧರಿಸಿದಳು.

Image

ಪತ್ರಕರ್ತೆಯ ವೃತ್ತಿಯನ್ನು ಸಾಮಾಜಿಕ ಹೋರಾಟದ ಭಾಗವಾಗಿ ನಿಭಾಯಿಸಬೇಕು ಎನಿಸಿ, 'ಜಮ್ಮು ಅಂಡ್ ಕಾಶ್ಮೀರ್ ಕೊಯಲಿಷನ್ ಆಫ್ ಸಿವಿಲ್ ಸೊಸೈಟಿ (ಜೆಕೆಸಿಸಿಎಸ್)' ಸೇರಿಕೊಂಡಳು. ಅದರ ಸತ್ಯಶೋಧನಾ ಸಮಿತಿ, ಕ್ಷೇತ್ರಕಾರ್ಯ, ಸಂಶೋಧನೆಗಳಲ್ಲಿ ತೊಡಗಿಕೊಂಡಳು. ಧರ್ಮ, ರಾಜಕಾರಣ, ಪಿತೃಪ್ರಾಧಾನ್ಯ, ಭಾರತೀಯ ಆಡಳಿತ, ಸೇನೆ ಎಲ್ಲರಿಂದ ದಮನ ಎದುರಿಸುತ್ತಿರುವ ಕಾಶ್ಮೀರದ ಮಹಿಳೆಯರ ಬದುಕನ್ನು ದಾಖಲಿಸತೊಡಗಿದಳು. ಕಾಣೆಯಾದ ವ್ಯಕ್ತಿಗಳ ಪಾಲಕರ ಸಂಘದ (ಎಪಿಡಿಪಿ) ಮೂಲಕ ಕಾಣೆಯಾದವರ ಬದುಕು, ಕೆಲಸ, ಸಂಪರ್ಕ, ಸಾಧನೆ, ಕನಸುಗಳ ವಿವರಗಳನ್ನು ಸಂಗ್ರಹಿಸಿದಳು. ಬೆಚ್ಚಿಬೀಳುವಂತಹ ಸತ್ಯಗಳು ಅನಾವರಣಗೊಂಡವು. ಕಾಣೆಯಾದವರಲ್ಲಿ ಬಹುತೇಕರು ಪುರುಷರೇ ಆಗಿದ್ದರು. ಎರಡು ದಶಕದಲ್ಲಿ ನಾಲ್ಕು ಸಾವಿರ ಜನ 'ಕಾಣೆ'ಯಾಗಿದ್ದರು ಎಂದು ಅಧಿಕೃತ ಅಂಕಿ-ಅಂಶ ಹೇಳುತ್ತಿದ್ದರೆ, ನಿಜ ಸಂಖ್ಯೆ ಅದಕ್ಕಿಂತ ಹತ್ತು ಪಟ್ಟು ಹೆಚ್ಚು ಎಂದು ಜನ ಹೇಳುತ್ತಿದ್ದರು.

ಸಮಾನಮನಸ್ಕ ಬಳಗದವರು ಕಾಶ್ಮೀರದ ಮಹಿಳೆಯರಿಗೆ ಬೆಂಬಲಗುಂಪು ರಚಿಸಲು 'ಶಾಂತಿ ಮತ್ತು ನಿಶ್ಶಸ್ತ್ರೀಕರಣಕ್ಕಾಗಿ ಕಾಶ್ಮೀರ ಮಹಿಳೆಯರ ಪ್ರಯತ್ನ' (ಕೆಡಬ್ಲ್ಯುಐಪಿಡಿ) ಆರಂಭಿಸಿದರು. ಆಸಿಯಾ ಅದರ ಮೊದಲ ಮುಖ್ಯಸ್ಥೆಯಾದಳು. 2003ರಲ್ಲಿ ಮೂರು ತಿಂಗಳಿಗೊಮ್ಮೆ ಬರುವ ಸುದ್ದಿಪತ್ರಿಕೆ 'ವಾಯ್ಸಸ್ ಅನ್‍ಹರ್ಡ್’ (ಕೇಳಿಸದ ದನಿಗಳು) ಹೊರಬಂತು. ಮಹಿಳೆಯರು ಎದುರಿಸುವ ತಾರತಮ್ಯ, ಹಿಂಸೆ, ದೌರ್ಜನ್ಯಗಳ ಕುರಿತೇ ಅದು ಚರ್ಚಿಸಬಯಸಿತು. ಅದರ ಸಂಪಾದಕಿಯಾಗಿ ಆಸಿಯಾ ಜವಾಬ್ದಾರಿ ವಹಿಸಿಕೊಂಡಳು.

"ಧೈರ್ಯದಿಂದ ಬದುಕುವ, ಹೋರಾಡುವ, ಜನರ ಕಣ್ಣಿಗೇ ಬೀಳದೆ ಅದೃಶ್ಯರಾಗುಳಿಯುವ ಎಲ್ಲ ಮಹಿಳೆಯರಿಗೆ ಈ ಪತ್ರಿಕೆಯನ್ನು ಅರ್ಪಿಸುತ್ತಿದ್ದೇವೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಶ್ಶಸ್ತ್ರೀಕರಣ ಮತ್ತು ಶಾಂತಿ ನೆಲೆಸಲು ನಮ್ಮ ಎಲ್ಲ ಪ್ರಯತ್ನಗಳೂ ದಾರಿ ಮಾಡಿಕೊಡಲಿ ಎಂದು ಆಶಿಸುತ್ತೇವೆ. ದಕ್ಷಿಣ ಏಷ್ಯಾ ಜೀವಂತವಿರಬೇಕಾದರೆ ಕಾಶ್ಮೀರ ಸಮಸ್ಯೆ ಇತ್ಯರ್ಥವಾಗಬೇಕು. ಕಾಶ್ಮೀರ ಐದು ದಶಕಗಳಿಂದ ಕುದಿಯುತ್ತಿದೆ. ಇದುವರೆಗೆ 75,000 ಜನ ಪ್ರಾಣ ಕಳೆದುಕೊಂಡಿದ್ದಾರೆ. ಉಗ್ರರಿಗೆಂದು ಮನೆ-ಮನೆಯ ಶೋಧ ನಡೆಯುತ್ತಿದೆ. ಮಾನಸಿಕ ಸಮಸ್ಯೆಗಳು ಹಲವು ಪಟ್ಟು ಹೆಚ್ಚಿವೆ. ಯುವ ಪೀಳಿಗೆ ಅನಿಶ್ಚಿತತೆ ತಡೆಯಲಾರದೆ ಮಾದಕವಸ್ತುಗಳ ಮೊರೆ ಹೋಗುತ್ತಿದ್ದಾರೆ. ಅಡವಿ, ಹೊಲಗಳಲ್ಲೆಲ್ಲ ನೆಲಬಾಂಬುಗಳನ್ನಿಟ್ಟು ಮುಕ್ತವಾಗಿ ಓಡಾಡಲು, ಕೆಲಸ ಮಾಡಲು ಅಸಾಧ್ಯವೆನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ರಣರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಆಳ-ಅಗಲ ಅರಿಯುವ ಯತ್ನ ಈ ತ್ರೈಮಾಸಿಕ ಸುದ್ದಿಪತ್ರಿಕೆಯದು. ಸೇರಿಸಲಿಕ್ಕೇ ಆಗದ ಒಡಕುಗಳನ್ನೂ ಕೂಡಿಸುವುದು ಮಹಿಳೆಯರ ಅನನ್ಯ ಸಾಮರ್ಥ್ಯವಾಗಿದೆ. ಈ ಸುದ್ದಿಪತ್ರಿಕೆ ಅಂತಹ ದಿಟ್ಟತನವನ್ನು ತೋರಿಸಿ ಹೋರಾಡುವ ಮಹಿಳೆಯರಿಗೆ ಸಂದ ಕಾಣಿಕೆಯಾಗಿದೆ," ಎಂದು ಮೊದಲ ಸಂಚಿಕೆಯಲ್ಲಿ (2003ರ ಜನವರಿ-ಮಾರ್ಚ್) ಬರೆದಳು.

ದೇಶದಲ್ಲಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಶ್ಮೀರ ಸಮಸ್ಯೆ, ಮಹಿಳೆಯರ ಸಂಕಷ್ಟಗಳ ಚರ್ಚೆ ಮುನ್ನೆಲೆಗೆ ಬರುವಂತೆ ಆಸಿಯಾ ಬರೆದಳು. ಗಡಿ ರಾಜಕಾರಣವನ್ನು ಒಳಗೊಂಡಿರುವ ಸಮಸ್ಯೆಗಳು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಚರ್ಚೆಯಾದಾಗಲೇ ಅವಕ್ಕೆ ಪರಿಹಾರ ಗೋಚರಿಸಬಹುದು ಎನ್ನುವುದು ಅವರ ನಂಬಿಕೆಯಾಗಿತ್ತು. 2003ರಲ್ಲಿ ನೆದರ್‍ಲೆಂಡಿನಲ್ಲಿ ಶಾಂತಿ ನಿರ್ವಹಣಾ ಸಮಾವೇಶದಲ್ಲಿ ಭಾಗವಹಿಸಿ, ಕಾಶ್ಮೀರದ ವಾಸ್ತವ, ಮಹಿಳೆಯರ ಸಮಸ್ಯೆಗಳು, ಪ್ರಭುತ್ವದ ದಮನದ ಬಗೆಗೆ ಮಾತನಾಡಿದಳು.

Image

'ಅರೆ ವಿಧವೆಯರ' ದುಃಖ-ದುಮ್ಮಾನಗಳನ್ನು ವಿಶೇಷವಾಗಿ ವರದಿ ಮಾಡಲೆಂದು ಕಾಶ್ಮೀರದ ಉದ್ದಗಲಗಳನ್ನು ಆಸಿಯಾ ತಿರುಗಿದಳು. 'ಕಾಣೆ'ಯಾದ ವ್ಯಕ್ತಿಗಳ ಕುಟುಂಬಸ್ಥರನ್ನು ಸಂಪರ್ಕಿಸಿ ವಿವರ ಸಂಗ್ರಹಿಸಿದಳು. ಮನೆಯೊಳಗೆ, ಸಮುದಾಯದೊಳಗೆ, ತಮ್ಮ ಧಾರ್ಮಿಕ ಪರಿಸರದೊಳಗೆ, ಹೊರಜಗತ್ತಿನೊಂದಿಗೆ, ಮಾಧ್ಯಮದವರೊಂದಿಗೆ ಮಾತನಾಡುವ ಅವಕಾಶ, ಸಾಧ್ಯತೆ ಯಾರಿಗೆ ಇರಲೇ ಇಲ್ಲವೋ ಅವರನ್ನೆಲ್ಲ ಸಂದರ್ಶಿಸಿದಳು. ಹಾಗೆ ದರ್ದ್‍ಪುರಕ್ಕೆ ಹೋಗಿಬಂದು ಬರೆದ ಬರಹದ ಆರಂಭ ಇದು:

"ತನ್ನ ಹೆಸರಿಗೆ ಅನ್ವರ್ಥವಾಗುವಂತೆ ದರ್ದ್‍ಪುರದ ನಿವಾಸಿಗಳ ಬದುಕಿನ ಮುಖ್ಯ ಭಾಗ ದುಃಖ, ನೋವುಗಳೇ ಆಗಿವೆ. ಶ್ರೀನಗರದಿಂದ 120 ಕಿಲೋಮೀಟರ್ ದೂರದಲ್ಲಿ ಉತ್ತರ ಕಾಶ್ಮೀರದಲ್ಲಿರುವ ಈ ಹಳ್ಳಿಯಲ್ಲಿ ನೀರಿನ ಸೌಲಭ್ಯವಾಗಲೀ, ವಿದ್ಯುತ್ ಆಗಲೀ ಇಲ್ಲ. ಇಡಿಯ ವಿಶ್ವವೇ ತಂತ್ರಜ್ಞಾನದ ಕ್ರಾಂತಿಯನ್ನು ಕಂಡರೂ, ಈ ಹಳ್ಳಿಗರು ತಂತ್ರಜ್ಞಾನ ತಮ್ಮ ಸಮಸ್ಯೆಗಳಿಗೆ ಪರಿಹಾರವಾಗಬಹುದು ಎಂದು ನಂಬುವುದಿಲ್ಲ. ದರ್ದ್‍ಪುರವು ಎರಡು ಭಾಗಗಳಾಗಿ ವಿಭಾಗಿಸಲ್ಪಟ್ಟಿದೆ; ಕೆಳಗಿನದು ಕಾಶ್ಮೀರಿ ದರ್ದ್‍ಪುರ. ಮೇಲಿನದು ಪಹಾರಿ ಅಥವಾ ಗುಜ್ಜರಿ ದರ್ದ್‍ಪುರ. ಮೇಲಿನ ದರ್ದ್‍ಪುರದವರು ತಾವು ಪಾಕಿಸ್ತಾನಿ ಮೂಲದವರೆಂದು ಹೇಳುತ್ತಾರೆ..."

"ಈ ಹಳ್ಳಿಯ ಭೌಗೋಳಿಕ ಸ್ಥಾನ ಇನ್ನೂ ಹಿಂದಿನ ಕಾಲದಲ್ಲಿಯೇ ಇರುವಂತೆ ಮಾಡಿದೆ. ದುರ್ಗಮ ಮೇಲ್ಮೈ ಲಕ್ಷಣಗಳು ಅಲ್ಲಿಗೆ ತಲುಪುವುದೇ ಕಷ್ಟವೆನ್ನುವಂತೆ ಮಾಡಿವೆ. ಗಡಿಯಲ್ಲಿರುವುದರಿಂದ ಸೇನೆ ಮತ್ತು ಉಗ್ರಗಾಮಿಗಳು ತುಂಬಿಹೋಗಿದ್ದಾರೆ. ಕಳೆದ 14 ವರ್ಷಗಳಲ್ಲಿ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೃಷಿಯೇ ಇವರ ಜೀವನಾಧಾರ. ಆದರೆ ಗೋಧಿ, ಮೆಕ್ಕೆಜೋಳಗಳಂತಹ ಕಡಿಮೆ ನೀರು ಬೇಡುವ ಬೆಳೆಗಳನ್ನು ಮಾತ್ರ ಬೆಳೆಯುತ್ತಾರೆ ಯಾಕೆಂದರೆ, ವರ್ಷವಿಡೀ ಇವರಿಗೆ ನೀರಿನ ಕೊರತೆಯದೇ ಸಮಸ್ಯೆ. ಮಳೆ ನೀರೇ ಇವರ ಏಕೈಕ ನೀರಿನ ಆಧಾರವಾಗಿದೆ."

ಮೇಲ್ಮಧ್ಯಮ ವರ್ಗದ, ನಗರದಲ್ಲಿ ಹುಟ್ಟಿ ಬೆಳೆದ, ಇಂಗ್ಲಿಷ್ ಶಿಕ್ಷಣ ಪಡೆದ, ದೇಶ-ವಿದೇಶಗಳ ಸಮಾನಮನಸ್ಕರ ಸಂಪರ್ಕ ಹೊಂದಿದ್ದ ಆಸಿಯಾ, ತನ್ನ ವರ್ಗ ಅಸ್ಮಿತೆಯನ್ನು ದಾಟಿಕೊಂಡಳು. ಬಡ, ಅಸಹಾಯಕ, ಅಧಿಕಾರಹೀನ, ದನಿಯಿಲ್ಲದ ಕಾಶ್ಮೀರಿ ಮಹಿಳೆಯರ ಬದುಕನ್ನು ಸಮಗ್ರವಾಗಿ ಗ್ರಹಿಸಲೆತ್ನಿಸಿದಳು. ಸ್ವಾಯತ್ತ ಬದುಕಿಗಾಗಿ ಅವರಿಗೆ ಏನಾದರೂ ಮಾಡಬೇಕೆನಿಸಿ ಸ್ವಸಹಾಯ ಗುಂಪುಗಳನ್ನು ಆರಂಭಿಸುವ ಯೋಜನೆ ರೂಪಿಸಿದಳು. ಅದರ ತರಬೇತಿ-ಮಾಹಿತಿ ಪಡೆಯಲು ಚೆನ್ನೈಗೆ ಹೋಗಿಬಂದಳು. ಸ್ವಸಹಾಯ ಗುಂಪುಗಳು ಪ್ರತೀ ಹಳ್ಳಿಯಲ್ಲೂ ಇರುವಂತಾಗಬೇಕು ಎಂಬುದು ಅವಳ ಕನಸಾಯಿತು.

* * * * *

Image

ಕಾಶ್ಮೀರ ವಿಧಾನಸಭಾ ಚುನಾವಣೆ 2002ರಲ್ಲಿ ನಡೆದಿತ್ತು. ಒತ್ತಾಯದ ಅನಧಿಕೃತ ಮತದಾನ, ಹುಸಿ ಅಂಕಿ-ಅಂಶ ನೀಡಿಕೆ, ಅಕ್ರಮಗಳು ವ್ಯಾಪಕವಾಗಿ ನಡೆದಿವೆಯೆಂಬ ಸುದ್ದಿಗಳು ಬರುತ್ತಿದ್ದವು. "ಭಾರತ ಸರ್ಕಾರದ (ಅಂದರೆ ಸಶಸ್ತ್ರ ಸೇನಾಪಡೆಯ) ಬಲವಂತ, ಪ್ರತೀಕಾರ ಕ್ರಮದ ಬೆದರಿಕೆ, ತಂತ್ರಗಾರಿಕೆಗಳು ಮತದಾನದ ಮೇಲೆ ತೀರಾ ಪರಿಣಾಮ ಬೀರಿ ಅವು ಜನರ ಅಭಿಪ್ರಾಯ ತಿಳಿಯದಂತೆ ಮಾಡಿವೆ. ಕನಿಷ್ಠ ಸ್ವಾತಂತ್ರ್ಯ, ನಾಗರಿಕ ಹಕ್ಕುಗಳನ್ನು ಚಲಾಯಿಸಲಾಗದ ಸ್ಥಿತಿಯಲ್ಲಿರುವ ಜನ ಚುನಾವಣೆಯಲ್ಲಿ ಮತ ಹಾಕಿ ಪ್ರಜಾಪ್ರಭುತ್ವದಲ್ಲಿದ್ದೇವೆ ಅಂದುಕೊಳ್ಳುವುದು ಸಾಧ್ಯವೇ?" ಎಂದು ಕಾಶ್ಮೀರದ ಚಿಂತನಶೀಲರು ಪ್ರಶ್ನಿಸಿದ್ದರು. ಒಂದೆಡೆ, ಪಾಕ್ ಅಧ್ಯಕ್ಷ ಪರ್ವೇಜ್ ಮುಶರ್ರಫ್ ಮತ್ತು ಭಾರತದ ಪ್ರಧಾನಿ ವಾಜಪೇಯಿ ಶಾಂತಿ ಮಾತುಕತೆಗೆ ಮುಂದಾಗುತ್ತ, ದೆಹಲಿ-ಲಾಹೋರ್ ನಡುವಣ ಬಸ್ ಸಂಚಾರ ಆರಂಭಿಸಿದ್ದರೆ; ಮತ್ತೊಂದೆಡೆ, 'ಆಪರೇಷನ್ ಸರ್ಪ ವಿನಾಶ್' ಹೆಸರಿನಲ್ಲಿ ಕಣಿವೆಯ ಮನೆಮನೆಯಲ್ಲಿ 'ಉಗ್ರಗಾಮಿಗಳನ್ನು' ಹುಡುಕಿ 'ಸ್ವಚ್ಛ’ಗೊಳಿಸುವ ಕಾರ್ಯ ನಡೆಯುತ್ತಿತ್ತು. ಬಂಧನ, ತನಿಖೆ, ವಿಚಾರಣೆ ಎದುರಿಸಬೇಕಾದ ಭಯದಲ್ಲಿ ವೃತ್ತಿನಿರತ ಪತ್ರಕರ್ತರಿದ್ದರು.

ಅಂಥ ಹೊತ್ತಿನಲ್ಲಿ 2004ರಲ್ಲಿ ಲೋಕಸಭಾ ಚುನಾವಣೆ ನಡೆಯತೊಡಗಿತು. ಚುನಾವಣೆ ಪಾರದರ್ಶಕವಾಗಿ, ನ್ಯಾಯಬದ್ಧವಾಗಿ ನಡೆಯುತ್ತಿದೆಯೇ? ಶಸ್ತ್ರಾಸ್ತ್ರಗಳ ನಡುವಿನ ಯುದ್ಧಭೂಮಿಯಂತಹ ವಾತಾವರಣದಲ್ಲಿ ಬದುಕು ನಡೆಸುವವರಿಗೆ ಚುನಾವಣೆ ಎಂದರೆ ಏನು? ಪ್ರಜಾಪ್ರಭುತ್ವ ಭರವಸೆ ಕೊಡುವಂತಹುದೇ? ಎಂದು ಜನರನ್ನೇ ಕೇಳಿ ತಿಳಿಯಬೇಕಿತ್ತು. ಅದಕ್ಕಾಗಿ ಜೆಕೆಸಿಸಿಎಸ್ ಯೋಜನೆ ಕೈಗೊಂಡಿತು. ರಾಜ್ಯದ, ಹೊರ ರಾಜ್ಯಗಳ ಮಾನವ ಹಕ್ಕು ಹೋರಾಟಗಾರರು, ಪತ್ರಕರ್ತರಿರುವ ತಂಡಗಳನ್ನು ರಚಿಸಿ ಮತಗಟ್ಟೆಗಳಿಗೆ ಹೋಗಿ ಪರಿವೀಕ್ಷಣೆ ನಡೆಸಲು ವೇಳಾಪಟ್ಟಿ ಹಾಕಿಕೊಂಡಿತು.

ಆಸಿಯಾ ಮತ್ತು ಅವಳ ಸಂಘಟನಾ ಸಹಯಾನಿ ಖುರ್ರಮ್ ಪರ್ವೇಜ್ ಒಂದು ತಂಡದಲ್ಲಿ ಹೊರಟರು. 2004ರ ಏಪ್ರಿಲ್ 20ರ ಬೆಳಗ್ಗೆ ಆಸಿಯಾ ಆಫೀಸಿಗೆ ಬಂದದ್ದು ನೋಡಿ ಖುರ್ರಮ್ ಅಚ್ಚರಿಪಟ್ಟಿದ್ದ. ಅವಳಿಗೆ ಹಿಂದಿನ ದಿನವೇ ಆರೋಗ್ಯ ಕೈ ಕೊಟ್ಟಿತ್ತು. ಆದರೂ ಜೊತೆಯಾಗಿದ್ದಳು. ಈ ದಿನ ದೂರದ ಲೋಲಾಬ್‍ಗೆ ತಾನೊಬ್ಬನೇ ಹೋಗಬೇಕಾದೀತು ಎಂದುಕೊಳ್ಳುತ್ತ ಬಂದರೆ, ಆಸಿಯಾ ಹಾಜರಾಗಿದ್ದಳು. ಕಾಶ್ಮೀರದಲ್ಲಿ ಮಹಿಳೆಯರು ಸಾಧಾರಣವಾಗಿ ಪುರುಷರೆದುರು ಮಾತನಾಡುವುದಿಲ್ಲವಾದ್ದರಿಂದ ಅವರ ಬಳಿ ಹೋಗಲು ಆಸಿಯಾ ಅನಿವಾರ್ಯವಾಗಿದ್ದಳು. ಮಿಕ್ಕವರು ಎಲ್ಲೆಲ್ಲಿ ಯಾವ-ಯಾವ ವಿಷಯದತ್ತ ಗಮನ ಹರಿಸಬೇಕೆಂದು ಯೋಜಿಸಿಕೊಂಡು ಪಯಣ ಹೊರಟರು. ಕಚ್ಚಾ ರಸ್ತೆಯಲ್ಲಿ ಹೋಗಲು ಟಾಟಾ ಸುಮೋ ಹರಸಾಹಸ ಪಡುತ್ತಿದ್ದರೆ ಒಳಗಿದ್ದವರ ಆಲೋಚನೆಗಳು ನಾಗಾಲೋಟದಲ್ಲಿ ಚಲಿಸುತ್ತಿದ್ದವು. ಹತ್ತಾರು ಯೋಜನೆಗಳು, ಹಲವಾರು ಪ್ರಶ್ನಾವಳಿಗಳು. ಅಂದು ಅವರ ತಂಡದಲ್ಲಿ ಏಳು ಜನರಿದ್ದರು. ಕರ್ನಾಟಕದ ಯುವ ಪತ್ರಕರ್ತ ಕುಮಾರ್ ಬುರಡೀಕಟ್ಟಿ ಅವರಲ್ಲೊಬ್ಬರು.

ಕುಪ್ವಾರಾ ನಂತರದ ಒಂದು ಊರು. ಜನ ತಮ್ಮನ್ನು ಬೆದರಿಸಿ ಮತ ಹಾಕಿಸಿದ ವಿಷಯ ತಿಳಿಸಿದರು. ಬೆರಳ ಮೇಲೆ ನೀಲಿ ಶಾಯಿ ಗುರುತು ಇಲ್ಲದಿದ್ದರೆ ಸೈನ್ಯದವರು ಬೆರಳು ಕತ್ತರಿಸುವರೆಂಬ ಸುದ್ದಿ ಹಬ್ಬಿತ್ತು. ಯಾವ ಊರಿನಲ್ಲಿ ಮತ ಹಾಕುವುದಿಲ್ಲವೋ ಅಲ್ಲಿಗೆ ಯಾವುದೇ ಅಭಿವೃದ್ಧಿ ಯೋಜನೆಗಳು ಬಾರವು ಎಂದೂ ಎಚ್ಚರಿಸಲಾಗಿತ್ತು. ಮತ್ತೊಂದೆಡೆ ಪ್ರತ್ಯೇಕವಾದಿಗಳು ಚುನಾವಣೆಗೆ ಹೋಗಬೇಡಿ ಎಂದು ನಿರ್ಬಂಧ ಹೇರಿ ಮನೆ-ಮನೆಗೆ ಸುದ್ದಿ ಕಳಿಸಿದ್ದರು. ಇತ್ತ ದರಿ ಅತ್ತ ಪುಲಿ.

Image
ಕೊನೆಯದಾಗಿ ಆಸಿಯಾ ಬಳಿಸಿದ ನೋಟ್‌ ಬುಕ್‌ನ ಹಾಳೆ

ಆಗಷ್ಟೇ ಬಳಕೆಗೆ ಬಂದ ಮೊಬೈಲ್ ಫೋನುಗಳು ಪತ್ರಕರ್ತರ ಕೆಲಸವನ್ನು ಸ್ವಲ್ಪ ಸುಲಭ ಮಾಡಿದ್ದರೂ, ಧ್ವನಿಮುದ್ರಕಗಳನ್ನು ಅಷ್ಟೆಲ್ಲ ಬಳಸುತ್ತಿರಲಿಲ್ಲ. ಆಸಿಯಾ ಎಲ್ಲೇ ಹೋದರೂ ತನ್ನೊಡನೆ ನೋಟ್‍ಬುಕ್ ಒಯ್ಯುತ್ತಿದ್ದಳು. ಅದರಲ್ಲಿ ಒಂದಿಂಚೂ ಬಿಡದೆ ಕೇಳಿದ್ದನ್ನು, ಕಂಡದ್ದನ್ನು ಬರೆದಿಟ್ಟುಕೊಳ್ಳುವಳು. ಅವತ್ತೂ ಅಷ್ಟೇ, ಕಾರು ಚಲಿಸುತ್ತಿರುವಾಗಲೇ ನೋಟ್‍ಬುಕ್ಕಿನ ಹಾಳೆಗಳು ತುಂಬತೊಡಗಿದವು.

"ನನ್ನ ಮಗನ್ನ ಜೈಲಿಗಾಕಿದಾರೆ. ಸೇನೆ ನಮಗೆ ಶಿಕ್ಷೆ ಕೊಟ್ಟಿದೆ..."

"ಯಾರಿಗೂ ವೋಟ್ ಹಾಕಕ್ಕೆ ಇಷ್ಟ ಇಲ್ಲ, ಆದ್ರೆ ಏನ್ಮಾಡನ?"

"ಒಂದು ಲಕ್ಷ ಹುಡುಗ್ರನ್ನ ಕೊಂದಿದಾರೆ. ಹೆಂಗ್ ಓಟ್ ಹಾಕದು?"

"ಸೋಗಂ ಊರಲ್ಲಿ ಒಂದು ತರಹ ಜಾತ್ರೆಯ, ಸಂಭ್ರಮದ ವಾತಾವರಣ. ಜನರೆಲ್ಲ ಖುಷಿಯಿಂದಿದ್ದರು. ಎಲ್ಲರೂ ಮತ ಹಾಕಿದೆವೆಂದರು. ಮಕ್ಕಳೂ ಮತ ಚಲಾಯಿಸಿದ್ದವು. ಮತಚೀಟಿ ತೋರಿಸಿ ಎಂದು ನೋಡಿದರೆ, ಹತ್ತು ವರ್ಷದ ಮಕ್ಕಳು ಸಹ ಮತ ಹಾಕಿವೆ! ಪ್ರಜಾಪ್ರಭುತ್ವಕ್ಕೆ ಅವಶ್ಯ ಕ್ರಮವಾದ ಚುನಾವಣೆಯು ಪ್ರಜಾಪ್ರಭುತ್ವವೇ ಇಲ್ಲದ ಕಡೆ ನಡೆದರೆ ಅದು ಸಿಂಧುವೇ? ಸಾಧುವೇ?"

-ಬರೆದುಕೊಳ್ಳುತ್ತ ಹೋದಂತೆ, ಒಂದು ಊರಿಗೂ ಮತ್ತೊಂದಕ್ಕೂ ಇರುವ ವ್ಯತ್ಯಾಸ, ವೈರುಧ್ಯ, ವಾಸ್ತವಗಳು ಅವಳನ್ನು ಅಲುಗಾಡಿಸಿದ್ದವು. ಯಾಕೋ ಬೇಸರಗೊಂಡು, "ಕಿಟಕಿ ಹತ್ರ ಕೂರಬೇಕು ಅನಿಸಿದೆ," ಎಂದು ಡ್ರೈವರನ ಹಿಂದಿನ ಸೀಟಿನಲ್ಲಿದ್ದ ಖುರ್ರಮ್‌ನನ್ನು ಮುಂದೆ ಕಳಿಸಿ ತಾನು ಅವನ ಸೀಟಿಗೆ ಹೋದಳು. ಲೋಲಾಬ್ ಎಂಬ ಊರಿನ ಬಳಿ ಬರುವಾಗ ನಾಲ್ಕು ಸೇನಾ ವಾಹನಗಳು ಅವರನ್ನು ಹಾದುಹೋದವು. ತಮ್ಮ ಕಪ್ಪು ಕಾರೂ ಸೇನಾ ವಾಹನದಂತೆಯೇ ಇದೆಯಲ್ಲವೇ ಎಂದು ಒಳಗಿದ್ದ ಯಾರೋ ಹೋಲಿಕೆ ಮಾಡಿದರು. ಕಾರು ನಿಧಾನವಾಗಿ ಚಲಿಸತೊಡಗಿತು, ಯಾಕೆಂದರೆ, ಸೇನಾ ವಾಹನಗಳು ಹಿಂತಿರುಗಿ ಇವರೆಡೆಗೆ ಬರತೊಡಗಿದ್ದವು.

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಹಳ್ಳಿಯತ್ತ ಚಿತ್ತ ನೆಟ್ಟ ಡಾಕ್ಟರ್ ಕಾವೇರಿ ನಂಬೀಶನ್

ಅಷ್ಟೇ. ಇದ್ದಕ್ಕಿದ್ದಂತೆ ಭೀಕರ ಸದ್ದು ಕೇಳಿತು. ಭಯಾನಕ ಸ್ಫೋಟ ಸಂಭವಿಸಿತು. ನೆಲಬಾಂಬು (ಐಇಡಿ) ಸ್ಫೋಟಗೊಂಡು ಇವರಿದ್ದ ಕಾರು 15 ಅಡಿ ಮೇಲೆ ಹೋಗಿ ಗಾಳಿಯಲ್ಲಿ ತಿರುತಿರುಗಿ ಉಲ್ಟಾ ಆಗಿ ಕೆಳಗೆ ಬಿತ್ತು. ಧೂಳಿನ ಮೋಡ ಕವಿಯಿತು. ಡ್ರೈವರ್ ಗುಲಾಂ ನಬಿ ಶೇಕ್ ಛಿದ್ರಛಿದ್ರವಾಗಿ ಬಿದ್ದ. ಆಸಿಯಾ, "ಅಯ್ಯೋ... ಅಮ್ಮಾ... ಅಮ್ಮಾ..." ಎಂದು ಹೃದಯವಿದ್ರಾವಕವಾಗಿ ಅಳುತ್ತಿದ್ದಳು. ಡ್ರೈವರ್ ಪಕ್ಕದ ಸೀಟಿನಲ್ಲಿದ್ದ ಖುರ್ರಮ್ ಪರ್ವೇಜ್‍ನ ಒಂದು ಕಾಲು ತುಂಡಾಗಿ ನೇತಾಡತೊಡಗಿತು. ಮತ್ತಿಬ್ಬರಿಗೂ ಗಾಯಗಳಾದವು. ವಾಹನದೊಳಗಿನ ಹಿಂದಿನ ಸೀಟಿನವರಿಗೆ ಏನೂ ಆಗದಿದ್ದರೂ ಬೆದರಿ ಬೆಚ್ಚಿ ಹುಚ್ಚರಂತೆ ಕೂಗತೊಡಗಿದ್ದರು. ಕುಮಾರ್, ಖುರ್ರಮ್ ತೆವಳುತ್ತ ಆಸಿಯಾ ಬಳಿ ಹೋಗಿ ವಾಹನದೊಳಗಿಂದ ಅವಳ ಕೈ ಹಿಡೆದೆಳೆದರೆ, ಅದು ಹಾಗೆಯೇ ಪಿಸಿದು ಅವರ ಕೈಗೇ ಬಂತು! ಅವಳ ಒಂದು ಕಣ್ಣು ಗುಡ್ಡೆ ಸಂಪೂರ್ಣ ಹೊರಬಂದು ರಕ್ತದಲ್ಲಿ ಅದ್ದಿಹೋಗಿತ್ತು.

ಸೇನೆಯ ವಾಹನದವರು ಅರ್ಧ ಗಂಟೆಯಲ್ಲಿ ಆಂಬುಲೆನ್ಸ್ ತಂದರು. ರಕ್ತದ ಮಡುವಿನಲ್ಲಿದ್ದವರನ್ನು ಸ್ಟ್ರೆಚರಿನ ಮೇಲೆ ಮಲಗಿಸಿ ಸೋಗಮ್ ಪಿಎಚ್‍ಸಿಗೆ ಒಯ್ದರು. ಅಲ್ಲಿ ಪ್ರಥಮ ಚಿಕಿತ್ಸೆಯ ಹೊರತು ಹೆಚ್ಚೇನೂ ಸಾಧ್ಯವಿರಲಿಲ್ಲ. ಶ್ರೀನಗರಕ್ಕೆ ಒಯ್ಯುವಾಗ ಆಸಿಯಾ ದಾರಿಯಲ್ಲೇ ತೀರಿಕೊಂಡಳು. ಖುರ್ರಮ್‌ನ ಕಾಲು ಕತ್ತರಿಸಲಾಯಿತು. ಕುಮಾರ್ ಕಣ್ಣುಗಳಲ್ಲಿ ಲೋಹದ ಚೂರುಗಳಿದ್ದು, ಬೆನ್ನು ಘಾಸಿಗೊಂಡಿತ್ತು. ಬದುಕುಳಿದವರ ಗಾಯಗಳಿಗೆ ಉಪಚಾರ ನಡೆದವು.

Image
ಖುರ್ರಮ್ ಪರ್ವೇಜ್‍

ಮಳೆ ಸುರಿದ ದಿನವದು. ಅವಳ ಅಮ್ಮ ಅಂದು ಮನೆಯಲ್ಲಿರಲಿಲ್ಲ. ಸುದ್ದಿ ತಿಳಿದು ಓಡಿಬಂದರು. ಅವರ ದುಃಖ ಮತ್ತಷ್ಟು ಹೆಚ್ಚದಿರಲಿ ಎಂದು, "ಆಸಿಯಾ ಕೂಗದೆ, ಕಿರುಚದೆ ಶಾಂತವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪ್ರಾಣಬಿಟ್ಟಳು," ಎಂದು ಜೊತೆಯಲ್ಲಿದ್ದವರು ಹೇಳಿದರು. ದುಃಖ, ನಷ್ಟದ ನಡುವೆಯೂ ಅವರ ಸಂಘಟನೆ ಚುನಾವಣೆಯ ಪರಿವೀಕ್ಷಣೆ ನಡೆಸಿ ವರದಿ ಬಿಡುಗಡೆ ಮಾಡಿತು. ಅದನ್ನು ಆಸಿಯಾ ಮತ್ತು ವಾಹನ ಚಾಲಕ ಗುಲಾಂ ನಬಿ ಶೇಕ್‍ಗೆ ಅರ್ಪಿಸಲಾಯಿತು.

ವಾಹನವನ್ನು ಯಾರು ಸ್ಫೋಟಿಸಿದವರು ಎಂಬ ಬಗೆಗೆ ಸಾಕಷ್ಟು ಊಹಾಪೋಹಗಳಿವೆ. ಅದಿನ್ನೂ ತನಿಖೆಯ ಹಾದಿಯಲ್ಲೇ ಇದೆ.

* * * * *

ಹೋದಲ್ಲಿ ಬಂದಲ್ಲಿ ಮಹಿಳೆಯರು, ಮಕ್ಕಳ ಜೊತೆ ಆಸಿಯಾ ಫೋಟೊ ತೆಗೆಸಿಕೊಳ್ಳುತ್ತಿದ್ದಳು. "ಅವರ ನೋವು ನನ್ನೆದೆಯಲ್ಲಿದೆ. ಅವರ ಮುಖ, ಚರಿತ್ರೆ ನೆನಪಿರಬೇಕು. ಅದಕ್ಕೇ ಫೋಟೋ ಬೇಕು," ಎನ್ನುತ್ತಿದ್ದಳು. ಈಗ ಅವಳೇ ಚರಿತ್ರೆಯಾಗಿದ್ದಾಳೆ. ಸ್ಫೋಟದ ಪರಿಣಾಮವಾಗಿ ತನ್ನೊಡತಿಯಿಂದ ದೂರ ಹಾರಿಬಿದ್ದು ಉಳಿದುಕೊಂಡ ಅವಳ ನೋಟ್‍ಬುಕ್ ನಟ್ಟನಡು ಮಧ್ಯದ ಒಂದು ರಂಧ್ರದೊಂದಿಗೆ 'ಗಾಯಾಳು ಸರ್ವೈವರ್' ಎಂದೇ ಹೆಸರಾಗಿದೆ. ಚುನಾವಣೆಯನ್ನು ಪ್ರಜಾಪ್ರಭುತ್ವದ ಸಂಕೇತ ಎಂದು ಹೇಳುವುದು ಎಷ್ಟು ತಪ್ಪೆಂದು ತೋರಿಸಿಕೊಡುವ ಆಸಿಯಾ ನೋಟ್‍ಬುಕ್‍ನ ಸಾಲುಗಳು ಅವಳ ನೆನಪನ್ನು, ಕಟುವಾಸ್ತವವನ್ನು ನಮ್ಮೆದುರು ತೆರೆದಿಡುತ್ತಲೇ ಇವೆ.

"ನಮ್ಮ ದುಃಖವನ್ನು ಅವರು ಮಾರಾಟ ಮಾಡಿದರು. ನಮಗೆ ಸಂದರ್ಶನ ಕೊಟ್ಟು-ಕೊಟ್ಟು ಸಾಕಾಗಿದೆ. ಅದರಿಂದ ನಮ್ಮ ಗಂಡದಿರೇನು ವಾಪಸು ಬರ್ತಾರಾ?" ಎಂದು ಈಗಲೂ ದರ್ದ್‍ಪುರದ ಅರೆ ವಿಧವೆಯರು ಜನರನ್ನು, ಮಾಧ್ಯಮದವರನ್ನು ಪ್ರಶ್ನಿಸುತ್ತಲೇ ಇದ್ದಾರೆ. ಶೋಷಿತರ ಮೇಲಾಗುವ ಅನ್ಯಾಯ, ದೌರ್ಜನ್ಯಗಳನ್ನು ಕಂಡೂ ಮೌನವಾಗಿರುವ ಅಪರಾಧ ಎಸಗುವ ಸಿರಿವಂತರು ಕಾಶ್ಮೀರ ಸಮಸ್ಯೆಗೆ ಪರಿಹಾರದ ದಾರಿ ಕಾಣದಿರುವಂತೆ ಮಾಡಿದ್ದಾರೆ ಎನ್ನುವುದು ಆಸಿಯಾ ನಿಲುವಾಗಿತ್ತು. ಕಾಶ್ಮೀರದ ವರ್ಗಪ್ರಜ್ಞೆ ಮತ್ತು ತಾರತಮ್ಯ ತೊಲಗಬೇಕು; ಕಾಶ್ಮೀರದಲ್ಲಿ ಮಹಿಳಾ ಚಳವಳಿ ಹುಟ್ಟಿದರೆ ಮಾತ್ರ ಸಮಸ್ಯೆಗಳಿಗೆ ಪರಿಹಾರ ದೊರೆತು ಆ ನೆಲ ವಿಮೋಚನೆಗೊಂಡೀತು ಎಂದವಳು ದೃಢವಾಗಿ ನಂಬಿದ್ದಳು.

ಬದುಕಿದ ಕೆಲವೇ ವರ್ಷಗಳಲ್ಲಿ ಆಸಿಯಾ ಕಂಡ ಕನಸುಗಳೆಷ್ಟು! ಅವಳಲ್ಲಿದ್ದ ಯೋಜನೆಗಳೆಷ್ಟು! ಅವುಗಳ ಸಾಕಾರಕ್ಕಾಗಿ ಮಾಡಿದ ಕೆಲಸಗಳೆಷ್ಟು! ಅದಕ್ಕೇ ಇರಬೇಕು, ಅವಳ ಹೆಸರು ಕಾಶ್ಮೀರದ ಮಹಿಳಾ ಪ್ರತಿರೋಧಕ್ಕೆ ಇನ್ನೊಂದು ಹೆಸರಾಗಿ, ಸ್ಫೂರ್ತಿಯ ಮಾದರಿಯಾಗಿ ಉಳಿದುಕೊಂಡಿದೆ. ಅವಳ ಹೆಜ್ಜೆ ಗುರುತುಗಳಲ್ಲಿ ನಡೆಯುವ ಶೆಹ್ಲಾ ರಶೀದ್, ಮಸ್ರತ್ ಝಾರಾರಂತಹ ಹಲವು ಹೆಣ್ಣುಜೀವರು ರೂಪುಗೊಂಡಿದ್ದಾರೆ. ಕಾಶ್ಮೀರದ ಅಸಲಿ ಫೈಲುಗಳು ಅನಾವರಣಗೊಳ್ಳಲು ನೆಲ ಇನ್ನಷ್ಟು ಆಸಿಯಾಗಳಿಗೆ ಕಾಯುತ್ತಲೇ ಇದೆ.

ನಿಮಗೆ ಏನು ಅನ್ನಿಸ್ತು?
8 ವೋಟ್