ಹೆಣ್ಣೆಂದರೆ... | ಬೆಂಗಳೂರಿನ ಗಟ್ಟಿ ಮಾತಿನ ದಿಟ್ಟ ಹುಡುಗಿ ಭಾರತಿ

Bharati

"ಒಬ್ಬರೇ ಇರುವ ಸೆಟ್‌ಗಳಲ್ಲಿ ತುಂಬಾ ಬಾರಿ ಉಸಿರುಗಟ್ಟಿದ ಹಾಗಾಗುತ್ತದೆ. ಆದರೆ, ನಮ್ಮದೇ ಕನಸುಗಳನ್ನು ಬೆನ್ನತ್ತಿರುವುದರಿಂದ ಅದನ್ನೆಲ್ಲ ನಿಭಾಯಿಸಲು ಕಲಿಯಬೇಕು. ನಾವು ವಾಪಸ್ ಹೋದರೆ ಚಿತ್ರರಂಗಕ್ಕೆ ಬರುವ ಹೆಣ್ಣುಮಕ್ಕಳಿಗೆ ತಪ್ಪು ಸಂದೇಶ ಹೋದಂತೆ ಅಲ್ಲವೇ?" ಎನ್ನುತ್ತಾರೆ ಕನಸುಗಳೊಂದಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಭಾರತಿ

ಎಂಜಿನಿಯರ್ ಓದಿದ ಯುವ ಜನರು ಕನ್ನಡ ಸಿನೆಮಾ ರಂಗದಲ್ಲಿ ಹೆಚ್ಚು ಹೆಚ್ಚು ತೊಡಗಿಕೊಳ್ಳುತ್ತಿದ್ದಾರೆ. ಎಂಜಿನಿಯರಿಂಗ್ ನನ್ನ ಕ್ಷೇತ್ರವಲ್ಲ ಎಂದು ಅರ್ಧಕ್ಕೆ ಬಿಟ್ಟು ತಮ್ಮ ಕನಸನ್ನು ಬೆನ್ನುಹತ್ತುವವರ ಸಂಖ್ಯೆಗೇನು ಕಡಿಮೆಯಿಲ್ಲ. ಭಂಡಧೈರ್ಯವೆಂತಲೆ ಹೇಳುವ ಈ ಕೆಟಗರಿಯಲ್ಲೆ ಹುಡುಗಿಯರ ಸಂಖ್ಯೆ ಕಡಿಮೆಯಾದರೂ ಹುಡಿಗಿಯರೂ ಇದಕ್ಕೇನು ಹೊರತಾಗಿಲ್ಲ. ಹೀಗೆ, ಸಿನೆಮಾದ ಹಿಂದೆ ಬಿದ್ದು ಅರ್ಧಕ್ಕೆ ಎಂಜಿನಿಯರಿಂಗ್ ಕೈ ಬಿಟ್ಟು ಬಂದಾಕೆ ಬೆಂಗಳೂರಿನ ಗಟ್ಟಿ ಮಾತಿನ ದಿಟ್ಟ ಹುಡುಗಿ ಭಾರತಿ.

ಜಾಸ್ತಿ ಸಿನೆಮಾ ನೋಡಿದರೆ ಅವುಗಳ ಪ್ರಭಾವದಿಂದ ಬಿಡಿಸಿಕೊಳ್ಳಲಾರೆ, ಹೊಸತು ಹುಟ್ಟಿಸಲಾರೆ ಎನ್ನುವ ಈಕೆಗೆ ಕ್ರಿಯಾತ್ಮಕವಾಗಿರುವ ಗುಟ್ಟೇನು ಎಂದು ಕೇಳಿದರೆ, ಕಣ್ಣರಳಿಸಿ ಕಂಪಿಸಿ ಆಲಿಸಿ ‘ತನ್ನ ಸುತ್ತಲಾಗುವ ಘಟನೆ’ ಎನ್ನುತ್ತಾಳೆ. ಜೀವಂತಿಕೆಯಿಂದಿರಬೇಕು ಎಂದುಕೊಂಡವರು ಆಲೋಚಿಸುವಂತೆ ತನ್ನನ್ನು ಎಲ್ಲಾದರೂ ಗುರುತಿಸಿಕೊಳ್ಳಬೇಕು ಎಂಬ ಹಟ ಈಕೆಗೆ. ಹೊಸ ಜನರ ಜೊತೆ ಒಡನಾಡಬೇಕು, ಹೊಸ ವಿಚಾರ ಹಂಚಿಕೊಳ್ಳಬೇಕು, ಜನರನ್ನು ತಲುಪಬಲ್ಲ ಮಾಧ್ಯಮದಲ್ಲಿ ಕೆಲಸ ಮಾಡಬೇಕೆಂಬ ಆಸೆ ಪಿಯುಸಿಯಲ್ಲಿಯೇ ಚಿಗುರಿಸಿಕೊಂಡಿದ್ದಳು. ಈ ಆಲೋಚನೆ ಗಟ್ಟಿಯಾದಂತೆಲ್ಲಾ ಸಾಧಿಸುವುದು ಹೇಗೆ? ಎಂಬ ಆಲೋಚನೆ ಬಂದಾಗ ಕಣ್ಣು ಹೋಗಿದ್ದು ಟಿ.ವಿ ಚಾನೆಲ್‌ಗಳತ್ತ. ಆದರೆ, ಮಗಳು ಎಂಜಿನಿಯರಿಂಗ್ ಮುಗಿಸಲೇಬೇಕು, ಎಂಜಿನಿಯರ್ ಆಗಿ ಕೆಲಸ ಮಾಡಬೇಕು ಎಂಬ ನಿರ್ಧಾರ ಮನೆಯವರು ಮಾಡಿಯಾಗಿತ್ತು. ತಂದೆ-ತಾಯಿಯ ಪೂರ್ವನಿರ್ಧರಿತ ಯೋಜನೆಯಿಂದ ಭಾರತಿ ಸುಮ್ಮನೆ ಗುಮ್ಮನಾಗಿದ್ದರು.

Image
Ramesh Aravind

ಎಂಜಿನಿಯರಿಂಗ್ ನೀರಸ ಎನಿಸಿದಾಗ, ಗಟ್ಟಿ ನಿರ್ಧಾರ ಮಾಡಿ ಸಿನೆಮಾ ನಿರ್ದೇಶನ ಕ್ರಾಷ್ ಕೋರ್ಸ್ ಮಾಡಲು ಮುಂದಾಗುತ್ತಾರೆ. ಕೆಲ ತಿಂಗಳುಗಳ ಕಲಿಕೆಯಿಂದ ಅಂತಹದ್ದೇನು ಕಲಿಯಲು ಸಾಧ್ಯವಿಲ್ಲ ಎಂಬುದನ್ನು ತಿಳಿದು ನಂತರ ಸುಮ್ಮನಾಗಿದ್ದರು. ಹಿರಿ ತೆರೆಯಲ್ಲಿ ಕೆಲಸ ಮಾಡಬೇಕೆಂಬ ತನ್ನ ಇಚ್ಛೆಯನ್ನು ಸ್ನೇಹಿತರ ಬಳಿ ಹಂಚಿಕೊಂಡು ಅವಕಾಶಕ್ಕಾಗಿ ಹುಡುಕುತ್ತಿದ್ದರು. ಆಗಲೆ, ಸ್ನೇಹಿತರಿಂದ ನಿರ್ದೇಶಕ ಮಂಸೋರೆ ಅವರ ಪರಿಚಯವಾಗುವ ಮೂಲಕ ಸಿನೆಮಾ ಕ್ಷೇತ್ರಕ್ಕೆ ಇಣುಕುತ್ತಾರೆ. ಭಾರತೀಯ ಚಿತ್ರರಂಗದಲ್ಲಿ ಪ್ರಮುಖ ಹೆಜ್ಜೆ ಮೂಡಿಸಿರುವ ಸ್ತ್ರೀ ಸಂವೇದನೆಯ ಚಿತ್ರ ‘ನಾತಿಚರಾಮಿ’ಗೆ ಸಹಾಯಕ ನಿರ್ದೇಶಕಿಯಾದರು. ನಂತರ ರಮೇಶ್ ಅರವಿಂದ್ ಅವರ ನಿರ್ದೇಶಿಸಿ ನಟಿಸಿದ್ದ 100ನೇ ಸಿನಿಮಾಗೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ ಅನುಭವ ಕೂಡ ಭಾರತಿಯವರಿಗಿದೆ. ಓದು ಬಿಟ್ಟು ಸಿನೆಮಾ ಹಿಂದೆ ಬಿದ್ದಿದ್ದ ಮಗಳ ಕನಸುಗಳು ಅಪ್ಪ-ಅಮ್ಮನಿಗೆ ಅರ್ಥವಾಗುತ್ತಾ ಹೋದಂತೆ ಭಾರತಿಯವರ ಹಾದಿ ಸಾಕಷ್ಟು ಸುಗಮವಾಯಿತು.

ಈ ಲೇಖನ ಓದಿದ್ದೀರಾ?: ಹೆಣ್ಣೆಂದರೆ... | ರಂಗಾಯಣದ ರಂಗದಲ್ಲಿ ರೂಪುಗೊಂಡ ಶಿಲ್ಪಾ

 "ನಾನು ಕೆಲಸ ಮಾಡಿದ ಸಿನೆಮಾದ ಪ್ರೀಮಿಯರ್‌ಗಳಿಗೆ ಮನೆಯವರು ಬಂದಿದ್ದಾರೆ. ಆಗೆಲ್ಲಾ ತಂಡದವರು ನಟ-ನಟಿಯರು ನನ್ನನ್ನು ಪ್ರಶಂಸೆ ಮಾಡುವುದನ್ನು ಕೇಳಿ ಮನೆಯವರಿಗೆ ಧೈರ್ಯ ಬಂದಿದೆ. ಕೆಲಸ ಸಿನೆಮಾ ಮತ್ತು ವೆಬ್ ಸಿರೀಸ್ ಚರ್ಚೆಗೆ ಹೋಗುತ್ತಲೇ ಇರುತ್ತೇನೆ. ಆದರೆ, ನಾನಾ ಕಾರಣಗಳಿಂದ ಇಷ್ಟವಾಗದಿದ್ದುದು, ಪ್ರೊಜೆಕ್ಟ್‌ಗಳು ಮುಂದಕ್ಕೆ ಹೋಗದಿರುವುದು ಸಹ ಇದೆ. ಆಗೆಲ್ಲಾ, ತಳಮಳ ಆಗಿದ್ದು ಖಂಡಿತ. ನಂಬಿಕೆ, ಪ್ರಯತ್ನ, ಹೊಸ ರೀತಿ ಆಲೋಚನೆ, ಗ್ರಹಿಸುವಿಕೆ ಮಾತ್ರ ಸಿನೆಮಾ ರಂಗದಲ್ಲಿ ನಮ್ಮನ್ನು ಮುನ್ನಡೆಸಬಲ್ಲದು. ಈ ಮಧ್ಯೆ, ನಾನು ಎಂಜನೀಯರಿಂಗ್ ಮುಗಿಸುವುದಾಗಿ ಅಪ್ಪ-ಅಮ್ಮನಿಗೆ ಕೊಟ್ಟ ಮಾತು ನೆನಪಾಗುತ್ತದೆ. ಆ ತಯಾರಿಯಲ್ಲಿ ಇದ್ದೇನೆ. ಏನೇ ಆದರೂ ಚಿತ್ರರಂಗವನ್ನು ಮಾತ್ರ ಬಿಟ್ಟು ಹೋಗೆನು ಎಂಬ ನಂಬಿಕೆ ಅಚಲವಾಗಿದೆ. ಸಿನೆಮಾ ಕನಸು ಹುಚ್ಚು ಒಮ್ಮೆ ಹತ್ತಿಸಿಕೊಂಡರೆ ಅದು ನಿಲ್ಲದು," ಎಂದು ಹೇಳುತ್ತಾರೆ. 

ಸಿನೆಮಾ ರಂಗದಲ್ಲಿ ಅವರಿಗಿರುವ ಕನಸುಗಳ ಬಗ್ಗೆ ಮಾತನಾಡುತ್ತಾ, ಸಮಾಜದಲ್ಲಿ ಈಗ ಆಗುತ್ತಿರುವ ಘಟನೆಗಳಿಗೆ ಸಿನೆಮಾ ಸ್ಪಂದಿಸಬೇಕು. ಜನರು ತಮ್ಮ ಪ್ರತಿಧ್ವನಿಯನ್ನು ಸಿನೆಮಾದಲ್ಲಿ ಕಾಣಬೇಕು. ಬಹು ಆಲೋಚನೆಗೆ ತೆರೆದುಕೊಳ್ಳುವಂತೆ ಸಿನೆಮಾ ಕಟ್ಟಬೇಕು ಎಂಬ ಮಾತನ್ನಾಡುತ್ತಾರೆ. ಏಕ ಮುಖ ಅಭಿವ್ಯಕ್ತಿಯಲ್ಲದ ಒಂದು ಘಟನೆಯ ಕುರಿತಾದ ಹತ್ತಾರು ಮುಖಗಳನ್ನು ತೋರಿಸುವ ಸಿನೆಮಾಗಳು ಬೇಕು. ನಾನು ಈಗಾಗಲೇ ಸ್ಕ್ರಿಪ್ಟ್ ಕೂಡ ಮಾಡಿಟ್ಟುಕೊಂಡಿದ್ದು ಮುಂದೊಮ್ಮೆ ನನ್ನದೆ ಸಿನೆಮಾ ಮಾಡುವ ಆಸೆಯಿದೆ ಎಂದು ಸಿನೆಮಾ ರಂಗದಲ್ಲಿ ಅರಳಿ ಹಿಗ್ಗುವ ಕನಸು ಹಂಚಿಕೊಂಡರು.

Image
Bharati with Team

ಈ ತನಕ ಇಬ್ಬರು ನಿರ್ದೇಶಕರ ಜೊತೆ ಕೆಲಸ ಮಾಡಿದ್ದು ಇಬ್ಬರೂ ಸಹ ಎಲ್ಲಾ ರೀತಿಯ ಸಂವೇದನೆ ಉಳ್ಳವರು. ‘ನಿಮ್ಮ ಸುರಕ್ಷತೆ ನಮ್ಮ ಜವಾಬ್ದಾರಿ’ ಎಂದು ನಿರ್ದೇಶಕರು ಬಾಯಿ ಬಿಟ್ಟು ಹೇಳಿದಾಗ ನಿರಾತಂಕ ಮೂಡಿತ್ತು. ಆದರೆ ಎಲ್ಲಾ ಕಡೆ ಹೀಗೆ ಇರುತ್ತದೆ ಎಂದಲ್ಲ. ನಮ್ಮ ಚಿತ್ರರಂಗದಲ್ಲೂ ಕಾಸ್ಟಿಂಗ್ ಕೌಚ್ ಇದೆ. ತಾಂತ್ರಿಕ ತಂಡದಲ್ಲಿ ಕೆಲಸ ಮಾಡುವ ಹುಡಿಗಿಯರೆಂದರೆ ಕಾಸ್ಟಿಂಗ್ ಕೌಚ್ ಮೂಲಕ ಬಂದವರು. ಇಲ್ಲವೆ ಕಾಸ್ಟಿಂಗ್ ಕೌಚ್ ಸಾಮಾನ್ಯ ಎಂದು ನಟಿಯರಿಗೆ ಮನವರಿಕೆ ಮಾಡಿ ಒಪ್ಪಿಸಲು ಇರುವ ಮಧ್ಯವರ್ತಿಗಳು ಎಂಬಂತೆ ನೋಡುವವರು ಇದ್ದಾರೆ. ಬೆರಳೆಣಿಕೆ ನಿರ್ದೇಶಕರು ಹೀಗೆ ಇದ್ದಿರಬಹುದು. ಜೊತೆಗೆ ಕೆಲಸ ಮಾಡಿದಾಗ ಇದು ಅರ್ಥವಾಗುತ್ತದೆ. ಇಷ್ಟೆ ಅಲ್ಲದೆ ತಂಡದಲ್ಲಿರುವ ಯಾರೊ ವ್ಯಕ್ತಿ ನಮ್ಮನ್ನು ಬಳಸಿಕೊಳ್ಳಲು ಮುಂದಾಗಬಹುದು. ಆಗೆಲ್ಲ ಬಳಸಬೇಕಾದ ಮುಖ್ಯ ಅಸ್ತ್ರವೆಂದರೆ ಮಾತು. ನಮ್ಮ ಮೇಲಿನವರಿಗೆ ಹೇಳಬೇಕು, ಸಾಧ್ಯವಾದರೆ ನಾವೆ ಹೇಳಬೇಕು. ಏನಾದರೂ ಸರಿ ಸಹಿಸಿಕೊಂಡು ಬಾಯಿಮುಚ್ಚಿಟ್ಟುಕೊಳ್ಳಬಾರದು. ಕಷ್ಟದ ಸಂದರ್ಭಗಳನ್ನು ನಿಭಾಯಿಸುವ ರೀತಿಯನ್ನು ಭಾರತಿ ಹೀಗೆ ಕಂಡುಕೊಂಡಿದ್ದಾರೆ.

ನಮ್ಮತನವನ್ನು ಬಿಟ್ಟುಕೊಟ್ಟು ರಾಜಿ ಮಾಡಿಕೊಂಡು ಕೆಲಸ ಮಾಡುವ ಅಗತ್ಯವಿಲ್ಲ. ಬೆರಳೆಣಿಕೆ ಹೆಣ್ಣು ಮಕ್ಕಳಿರುವ ಅಥವಾ ಒಬ್ಬರೇ ಇರುವ ಸೆಟ್‌ಗಳಲ್ಲಿ ತುಂಬಾ ಬಾರಿ ಉಸಿರುಕಟ್ಟಿದ ಹಾಗಾಗುತ್ತದೆ. ಆದರೆ, ನಮ್ಮದೆ ಕನಸುಗಳನ್ನು ಬೆನ್ನತ್ತಿರುವುದರಿಂದ ಅದನ್ನೆಲ್ಲಾ ನಿಭಾಯಿಸಲು ಕಲಿಯಬೇಕು. ನಾವು ವಾಪಸ್ಸು ಹೋದರೆ ಚಿತ್ರರಂಗಕ್ಕೆ ಬರುವ ಹೆಣ್ಣುಮಕ್ಕಳಿಗೆ ತಪ್ಪು ಸಂದೇಶ ಹೋದಂತೆ. ಪರಿಸ್ಥಿತಿಗಳನ್ನು ಎದುರಿಸಿದರೆ ನಮ್ಮ ಹಾದಿ ಸುಗಮವಾಗುವುದು. ನಮಗೆ ಗೊತ್ತಿಲ್ಲದೆ ಬೇರೆಯವರಿಗೆ ನಮ್ಮ ನಡೆ ಸ್ಪೂರ್ತಿಯಾಗಬಹುದು ಎಂದು ತಮ್ಮ ಎಷ್ಟೊ ಗೊಂದಲಗಳ ನಡುವೆ ತಾವೆ ಸ್ಪೂರ್ತಿ ತುಂಬಿಕೊಳ್ಳುತ್ತಾರೆ. ಸಿನೆಮಾ ರಂಗದಲ್ಲಿ ಬೆಳೆಯುವ ಆಸೆ ಹೊಂದಿರುವ ಭಾರತಿಯವರಿಗೆ ಶುಭವಾಗಲಿ.

ನಿಮಗೆ ಏನು ಅನ್ನಿಸ್ತು?
3 ವೋಟ್