ಕರುಣೆಯ ಕೃಷಿ | ಎರಿಕ್ ಫ್ರೀಡ್ ಕವಿತೆ 'ಕೈಗೊಂಡ ಕ್ರಮಗಳು'

Austrian poet Erich Fried poem

ಸೋಮಾರಿಗಳ ಹತ್ಯೆ ಮಾಡಲಾಯಿತು
ಲೋಕದಲ್ಲಿ ಪರಿಶ್ರಮ ಹೆಚ್ಚಿತು

ಕುರೂಪಿಗಳ ಹತ್ಯೆ ಮಾಡಲಾಯಿತು
ಲೋಕದಲ್ಲಿ ಅಂದ ಹೆಚ್ಚಿತು

ಮೂರ್ಖರ ಹತ್ಯೆ ಮಾಡಲಾಯಿತು
ಲೋಕದಲ್ಲಿ ಅರಿವು ಹೆಚ್ಚಿತು

ರೋಗಿಗಳ ಹತ್ಯೆ ಮಾಡಲಾಯಿತು
ಲೋಕದಲ್ಲಿ ಆರೋಗ್ಯ ಹೆಚ್ಚಿತು

ದುಃಖಿಗಳ ಹತ್ಯೆ ಮಾಡಲಾಯಿತು
ಲೋಕದಲ್ಲಿ ಸಂತೋಷ ಹೆಚ್ಚಿತು

ವಯಸ್ಸಾದವರ ಹತ್ಯೆ ಮಾಡಲಾಯಿತು
ಲೋಕದಲ್ಲಿ ತಾರುಣ್ಯ ಹೆಚ್ಚಿತು

ವೈರಿಗಳ ಹತ್ಯೆ ಮಾಡಲಾಯಿತು
ಲೋಕದಲ್ಲಿ ಸ್ನೇಹ ಹೆಚ್ಚಿತು

ದುಷ್ಟರ ಹತ್ಯೆ ಮಾಡಲಾಯಿತು
ಲೋಕದಲ್ಲಿ ಶಿಷ್ಟತನ ಹೆಚ್ಚಿತು.

* * * * *

“Every beautiful poem is an act of resistance” - Mahmoud Darwish

Image
Erich Fried

ಹಿಂಸಾತ್ಮಕ ವಿಚಾರಗಳು ಯುದ್ಧಗಳಾಗಿ ಪರಿವರ್ತಿತವಾಗುತ್ತವೆ. ಪ್ರಭುತ್ವವೊಂದು ಅನ್ಯದೇಶಗಳ ಮೇಲೆ ನಡೆಸುವ ಯುದ್ಧದಂತೆಯೇ, ದೇಶದೊಳಗೆಯೇ ನಡೆಸುವ ಹತ್ಯಾಕಾಂಡಗಳು ಕೂಡ ಯುದ್ಧವೇ. ಯುದ್ಧಕ್ಕೆ ಪ್ರತಿರೋಧವೆಂದರೆ, ಅನ್ಯರ ಕುರಿತಾಗಿ ಇರುವ ಅಸಹನೆ, ಪೂರ್ವಗ್ರಹ, ದ್ವೇಷಪೂರಿತ ಮನಸುಗಳನ್ನು ಹಸನುಗೊಳಿಸುವುದು.

ನಾಝಿ ಹತ್ಯಾಕಾಂಡದಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡ ಆಸ್ಟ್ರಿಯಾ ದೇಶದ ಕವಿ ಎರಿಕ್ ಫ್ರೀಡ್ (1921-1988) ಅವರ ಯುದ್ಧ-ವಿರೋಧಿ ಪ್ರಣಾಳಿಕೆಯ ನೆಲೆಯುಳ್ಳ ಈ ಕವನ ನಾಟಕೀಯವಾಗಿ ತೋರಿಸುವಂತೆ, ಹಿಂಸೆಯ ಮೂಲಕ ಒಳಿತನ್ನು ಸಾಧಿಸುವುದು ಅಸಾಧ್ಯ - ಅದು ನಮ್ಮನ್ನೂ ಕೇಡಿಗೆಳೆಯುತ್ತದೆ. ಈ ಕವನದ ಮೊದಲ ಸಾಲಿನಲ್ಲಿ ಬರುವ 'ಹತ್ಯೆ ಮಾಡಲಾಯಿತು' ಎನ್ನುವ ಮಾತೇ ಎರಡನೆಯ ಸಾಲಿನಲ್ಲಿ ಬರುವ ಒಳಿತಿನ ಕಲ್ಪನೆಯನ್ನು ಸುಳ್ಳಾಗಿಸುವಂಥದ್ದು.

ಎರಡನೆಯ ಮಹಾಯುದ್ಧದ ಹಿನ್ನೆಲೆಯಲ್ಲಿ ಎರಿಕ್ ಫ್ರೀಡ್ ರಚಿಸಿರುವ ಈ ಕವನ, ನಮ್ಮ ಸಮಾಜದಲ್ಲಿಯೂ ವೃದ್ಧಿಸುತ್ತಲೇ ಇರುವ ನಾನಾ ಬಗೆಯ ದ್ವೇಷಪೂರಿತ ಚಿಂತನೆಗಳ ಒಳಹುಳುಕನ್ನು ಒತ್ತಿ ಹೇಳುತ್ತದೆ. ಧರ್ಮದ ಹೆಸರಲ್ಲಿ, ಜಾತಿಯ ಹೆಸರಲ್ಲಿ, ಅಸ್ಮಿತೆಯ ಹೆಸರಲ್ಲಿ, ಇತಿಹಾಸದ ಹೆಸರಲ್ಲಿ ಅಥವಾ ಇನ್ಯಾವುದೇ ಹೆಸರಲ್ಲಿ ನಡೆಯುವ ದ್ವೇಷಕಾರ್ಯಗಳು ಯಾವುದೇ ದೇಶವನ್ನು ಅಭಿವೃದ್ಧಿಗೊಳಿಸುವುದಾಗಲೀ, ಉಚ್ಚಸ್ಥಾನಕ್ಕೆ ಒಯ್ಯುವುದಾಗಲೀ ಸಾಧ್ಯವಿಲ್ಲ. ತೇಜಸ್ವಿಯವರು ಹೇಳಿದಂತೆ, "ಕೊಂದು ಕಾಪಾಡಿಕೊಳ್ಳಬೇಕಾಗುವಂಥದ್ದು ಏನೂ ಇಲ್ಲ." ಕಣ್ಣಿಗೆ ಕಣ್ಣು ಎಂಬ ವಾದ ಎಲ್ಲರನ್ನೂ ಕುರುಡರನ್ನಾಗಿಸುವುದೆಂಬ ಗಾಂಧೀಜಿಯವರ ಎಚ್ಚರಿಕೆಯನ್ನು ಈ ಕವನ ನೆನಪಿಸುತ್ತದೆ.

ಈ ಕವಿತೆ ಓದಿದ್ದೀರಾ?: ಕರುಣೆಯ ಕೃಷಿ | ಅರ್ನೆಸ್ಟೋ ಕಾರ್ಡಿನಲ್ ಕವಿತೆ 'ಮರಣಕ್ಕೀಡಾದ ನಮ್ಮವರಿಗೆ'

ಎರಿಕ್ ಫ್ರೀಡ್ ಅವರ ತೀಕ್ಷ್ಣ ವ್ಯಂಗ್ಯದ ಈ ಸಾಲುಗಳು, ಸಮಾಜವೊಂದರಲ್ಲಿ ಪರಿಶ್ರಮ, ಅಂದ, ಸ್ನೇಹ, ಅರಿವು, ಆರೋಗ್ಯ, ಸಂತೋಷ, ಶಿಷ್ಟತನ ಹೀಗೆ ಯಾವುದೇ ರೀತಿಯ ಧನಾತ್ಮಕತೆಯನ್ನು ಹಿಂಸಾತ್ಮಕವಾಗಿ ಹೆಚ್ಚಿಸಲಾಗದು ಎಂದು ಸಾರುತ್ತವೆ. ಅಂತಹ ಪ್ರತಿಯೊಂದು ಹಿಂಸೆಯೂ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತದೆ, ಏಳ್ಗೆಯನ್ನು ಕೊನೆಯಾಗಿಸುತ್ತದೆ, ಜನರನ್ನು ಅಸಹಾಯಕರನ್ನಾಗಿಸುತ್ತದೆ ಅಷ್ಟೇ, ಮತ್ತೇನಿಲ್ಲ.

ನಿಮಗೆ ಏನು ಅನ್ನಿಸ್ತು?
1 ವೋಟ್