ವರ್ತಮಾನ | ಪುರೋಹಿತಶಾಹಿಯೇ ಪ್ರಭುತ್ವದ ರೂಪ ತಾಳಿದಾಗ ಇಂತಹ ಅವಾಂತರ ಸಹಜ ತಾನೇ?

B C Nagesh 3

ಶಾಲಾ ಪಠ್ಯದಲ್ಲಿ ಜಾತಿ ಆಧಾರಿತ ಶೋಷಣೆ ಕುರಿತೋ ಅಥವಾ ಪುರೋಹಿತಶಾಹಿ ಬಗೆಗೋ ಪ್ರಸ್ತಾಪ ಬಂದ ಕೂಡಲೇ ಉರಿದುಬೀಳುವವರ ಆತ್ಮವಂಚನೆಗೆ ಮಿತಿ ಎಂಬುದು ಇದೆಯೇ? ಸಂಪತ್ತಿನ ಅಸಮಾನ ಹಂಚಿಕೆಯ ಪ್ರಮುಖ ಫಲಾನುಭವಿಗಳಾಗಿ ಎಲ್ಲವನ್ನೂ ದಕ್ಕಿಸಿಕೊಂಡವರೇ ಇಂತಹ ಸೋಗು ಹಾಕುವುದು ಯಾವ ಸೀಮೆಯ ನ್ಯಾಯ?

ಶಾಲಾ ಮಕ್ಕಳಿಗೆ ಏನನ್ನು ಓದಿಸಬೇಕು ಮತ್ತು ಓದಿಸಬಾರದು ಎನ್ನುವ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ. ಪಠ್ಯಪುಸ್ತಕ ಪುನರ್ ಪರಿಷ್ಕರಣಾ ಸಮಿತಿಗೆ ಸರ್ಕಾರ ಅಧ್ಯಕ್ಷರಾಗಿ ನೇಮಿಸಿದ್ದ ವ್ಯಕ್ತಿಯ ಹಿನ್ನೆಲೆ ಮತ್ತು ಅರ್ಹತೆ ಕೂಡ ವಿವಾದದ ಕೇಂದ್ರಬಿಂದುವಾಗಿದೆ. ಕುವೆಂಪು ಮತ್ತು ಬಸವಣ್ಣನವರಿಗೆ ಅವಮಾನ ಮಾಡಲಾಗಿದೆ ಎಂದು ಸಾಹಿತ್ಯ ಮತ್ತು ಸಾಮಾಜಿಕ ವಲಯದಿಂದ ಅಪಸ್ವರ ಕೇಳಿಬಂದಾಗ ತುಟಿಬಿಚ್ಚದ ಸರ್ಕಾರ, ಇದೇ ವಿಚಾರಕ್ಕೆ ಒಕ್ಕಲಿಗ ಮತ್ತು ಲಿಂಗಾಯತ ಸ್ವಾಮೀಜಿಗಳು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದೇ ತಡ ಸಮಜಾಯಿಷಿ ನೀಡಲು ಮುಂದಾಯಿತು. ಇನ್ನು, ಪಠ್ಯಪುಸ್ತಕ ಪುನರ್ ಪರಿಷ್ಕರಣೆಯ ನೇತೃತ್ವ ವಹಿಸಿದ್ದ ವ್ಯಕ್ತಿಯನ್ನು ಯಾವ ಆಧಾರದಲ್ಲಿ ಆಯ್ಕೆ ಮಾಡಲಾಯಿತು ಎನ್ನುವುದು ಇಂದಿಗೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಸರ್ಕಾರದ ಆಯ್ಕೆ ಸಮರ್ಥಿಸಿಕೊಳ್ಳಲು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ನೀಡಿದ ‘ಐಐಟಿ-ಸಿಇಟಿ ಪ್ರೊಫೆಸರ್' ಹೇಳಿಕೆ - ಈ ಕುರಿತು ಅವರಿಗಿರುವ ತಿಳಿವಳಿಕೆ ಯಾವ ಮಟ್ಟದೆಂಬುದಕ್ಕೆ ಕನ್ನಡಿ ಹಿಡಿಯಲಷ್ಟೇ ಸಫಲವಾಯಿತು. ಆದರೆ, ರೋಹಿತ್ ಚಕ್ರತೀರ್ಥ ಅವರಿಗಿರುವ ಶೈಕ್ಷಣಿಕ ಅರ್ಹತೆಯ ಕುರಿತು ಕಿಂಚಿತ್ತೂ ಬೆಳಕು ಚೆಲ್ಲಲಿಲ್ಲ.

ಮಕ್ಕಳಿಗೆ ಯಾವ ಪದ್ಯ ಓದಿಸಬೇಕು, ಯಾರು ಬರೆದಿರುವುದನ್ನು ಓದಿಸಬೇಕು, ಯಾವೆಲ್ಲ ವಿಷಯಗಳು ಪಠ್ಯಪುಸ್ತಕದಲ್ಲಿ ಸ್ಥಾನ ಪಡೆಯಬೇಕು ಎನ್ನುವ ಚರ್ಚೆ ಕಾವೇರಿರುವ ಈ ಹೊತ್ತಿನಲ್ಲಿ, ಪಠ್ಯದಲ್ಲಿ ‘ಸಾಮಾಜಿಕ ಬಂಡವಾಳ'ವೆಂದರೆ (ಸೋಷಿಯಲ್ ಕ್ಯಾಪಿಟಲ್) ಏನು ಮತ್ತು ವ್ಯಕ್ತಿಯ ಬದುಕು, ಆರ್ಥಿಕ-ಸಾಮಾಜಿಕ ಬೆಳವಣಿಗೆಯಲ್ಲಿ ಅದು ವಹಿಸುವ ಪಾತ್ರವೇನು ಎಂಬ ಕುರಿತು ಮನದಟ್ಟು ಮಾಡಿಕೊಡುವ ಅಗತ್ಯತೆಯತ್ತಲೂ ಗಮನ ಹರಿಯಬೇಕಿದೆ. ‘ಭಾರತೀಯ ಮೌಲ್ಯ ವ್ಯವಸ್ಥೆ'ಯ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಉತ್ಸಾಹ ತೋರುವವರಿಗೆ, ಸಾಮಾಜಿಕ ಬಂಡವಾಳದ ಕುರಿತು ವಿದ್ಯಾರ್ಥಿಗಳಿಗೆ ಸೂಕ್ತ ತಿಳಿವಳಿಕೆ ಮೂಡಿಸುವಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಬಹುತೇಕ ಸೋಲುತ್ತಿರುವುದು ಗಮನಾರ್ಹ ಸಂಗತಿಯಾಗೇನೂ ತೋರುತ್ತಿಲ್ಲ. ಮೀಸಲಾತಿ ಮತ್ತು ಜಾತಿ ವ್ಯವಸ್ಥೆ ಕುರಿತು ಶೋಷಕ ಜಾತಿಗಳಿಗೆ ಸೇರಿದ ಜನರಲ್ಲಿ ಇರುವ ಅಸಮಾಧಾನ ಮತ್ತು ಆತ್ಮವಂಚಕ ಪ್ರವೃತ್ತಿ ಗಮನಿಸುವ ಯಾರಿಗೇ ಆದರೂ, ಸಾಮಾಜಿಕ ಬಂಡವಾಳದ ಕುರಿತು ಅರಿವು ಮೂಡಿಸುವ ಅಗತ್ಯತೆ ಮನದಟ್ಟಾಗಲಿದೆ.

Image
rohit chakratirtha
ಪಠ್ಯಪುಸ್ತಕ ಪುನರ್ ಪರಿಷ್ಕರಣಾ ಸಮಿತಿಯ ವಿವಾದಿತ ಅಧ್ಯಕ್ಷ ರೋಹಿತ್ ಚಕ್ರತೀರ್ಥ

ತಮ್ಮ ಹುಟ್ಟಿನೊಂದಿಗೆ ತಳುಕು ಹಾಕಿಕೊಳ್ಳುವ ಜಾತಿಯ ಕಾರಣಕ್ಕೆ ಸಿಗುವ ಅವಕಾಶಗಳು ಮತ್ತು ಹೊಂದಬಹುದಾದ ಮೇಲರಿಮೆಯ ಕುರಿತು ಆತ್ಮವಿಮರ್ಶೆಗೆ ಸಿದ್ಧರಿಲ್ಲದ ಬಲಾಢ್ಯ ಜಾತಿ ಜನ, "ಮೀಸಲಾತಿಯಿಂದ ಪ್ರತಿಭಾವಂತರಿಗೆ ಅನ್ಯಾಯವಾಗುತ್ತಿದೆ," ಎಂದೇ ವಾದಿಸುತ್ತಿರುತ್ತಾರೆ. ಜಾತಿ ಆಧಾರಿತ ಮೀಸಲಾತಿಯ ಅಗತ್ಯತೆಯೇ ಇಲ್ಲ ಎನ್ನುವ ನಿಲುವಿಗೆ ಸುಲಭವಾಗಿ ಜೋತುಬೀಳುತ್ತಾರೆ. ಹೀಗೆ ವಾದಿಸುವವರೇ ಇಂದು, ತನ್ನ ಶೈಕ್ಷಣಿಕ ಅರ್ಹತೆ ಏನೆಂಬ ಕುರಿತು ಖಚಿತವಾಗಿ ಹೇಳಿಕೊಳ್ಳಲೂ ಹಿಂಜರಿಯುವ ವ್ಯಕ್ತಿ ಪಠ್ಯಪುಸ್ತಕ ಪುನರ್ ಪರಿಷ್ಕರಣಾ ಸಮಿತಿ ಅಧ್ಯಕ್ಷನಾಗಿರುವಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸತೊಡಗಿದ್ದಾರೆ! ಪಠ್ಯಪುಸ್ತಕ ಪುನರ್ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರೋಹಿತ್ ಚಕ್ರತೀರ್ಥ ಅವರು ನೇಮಕಗೊಳ್ಳುವಲ್ಲಿ ಜಾತಿ ವಹಿಸಿರಬಹುದಾದ ಪಾತ್ರದ ಕುರಿತು ವಾಸ್ತವಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸಲು ಮುಂದಾದರೂ ಸಾಕು, ಸಾಮಾಜಿಕ ಬಂಡವಾಳದ ಅರಿವು ಎಲ್ಲರಲ್ಲೂ ಏಕೆ ಬೇರೂರಬೇಕು ಎಂಬುದರ ಅರಿವಾಗಲಿದೆ.

ಮೀಸಲಾತಿಯಿಂದ ಪ್ರತಿಭೆಗೆ ಮನ್ನಣೆ ದೊರೆಯುತ್ತಿಲ್ಲವೆಂದು ದೂರುತ್ತಿದ್ದವರು, ಅನರ್ಹ ವ್ಯಕ್ತಿ ತಮ್ಮ ಜಾತಿಗೆ ಸೇರಿದವನೆಂಬ ಕಾರಣಕ್ಕೆ ಆತನಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಬಹುತೇಕ ಕ್ಷೇತ್ರಗಳಲ್ಲಿ ಅಗತ್ಯಕ್ಕಿಂತ ಹೆಚ್ಚೇ ಪ್ರಾತಿನಿಧ್ಯ ಹೊಂದಿದ್ದರೂ, ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರು ಎಂಬ ನೆಪ ಮುಂದೊಡ್ಡಿ ಶೇಕಡ 10ರಷ್ಟು ಮೀಸಲಾತಿ ನೀಡಲು ಮುಂದಾದಾಗ ಯಾವ ಹಿಂಜರಿಕೆಯೂ ಇಲ್ಲದೆ ಸ್ವಾಗತಿಸಿದರು. ಅವಕಾಶ ವಂಚಿತ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸುವ ಸಲುವಾಗಿ ಸರ್ಕಾರ ಮೀಸಲಾತಿ ಕಲ್ಪಿಸಿದರೆ, ಅದರಿಂದ ತಮಗೆ ಅನ್ಯಾಯವಾಗುತ್ತಿದೆ ಎಂದು ಭಾವಿಸುವವರಿಗೆ, ಅದೇ ಸರ್ಕಾರ ಶೋಷಕ ಜಾತಿಗೆ ಸೇರಿದವರನ್ನೇ ಆಯ್ದು ಸಮಿತಿ ರಚಿಸಿದರೆ ಅದು ಸಹಜವೆಂದು ತೋರುವುದು ಬೂಟಾಟಿಕೆಯಲ್ಲವೇ? ಪಠ್ಯಪುಸ್ತಕ ಪುನರ್ ಪರಿಷ್ಕರಣೆ ವಿವಾದ ಜಾತಿ ಶ್ರೇಣಿಯಲ್ಲಿ ಮೇಲಿನವರಾಗಿ ಕುಳಿತಿರುವ ಜನರ ಬೂಟಾಟಿಕೆಗೆ ನಾನಾ ರೀತಿಯಲ್ಲಿ ಕನ್ನಡಿ ಹಿಡಿದಿದ್ದಂತೂ ವಾಸ್ತವ. ಸಾಮಾನ್ಯವಾಗಿ ಸಾಮಾಜಿಕ ಮತ್ತು ರಾಜಕೀಯ ವಿಷಯಗಳಿಗೆ ಪ್ರತಿಕ್ರಿಯಿಸುವ ಗೋಜಿಗೆ ಹೋಗದ ಶೋಷಕ ಜಾತಿಗೆ ಸೇರಿದ ಕನ್ನಡದ ಕೆಲ ಕವಿಗಳು, ಬರಹಗಾರರು, ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ನೀಡಿದ ಅಭಿಪ್ರಾಯಗಳು ಗಮನಾರ್ಹವಾಗಿದ್ದವು. ಅವುಗಳ ಪೈಕಿ ಒಂದು: "ಪಠ್ಯಪುಸ್ತಕದ ಪಾಠಗಳು ಹೇಗೇ ಇರಲಿ, ಸಮಿತಿ ಏನೇ ಇರಲಿ, ಅದನ್ನು ಮಕ್ಕಳ ಮನಸಿಗೆ ಹೇಗೆ, ಎಷ್ಟು ಸೂಕ್ಷ್ಮವಾಗಿ, ಸೃಜನಾತ್ಮಕ ಮತ್ತು ಆರೋಗ್ಯಕರ ರೀತಿಯಲ್ಲಿ ದಾಟಿಸಬೇಕು ಎಂಬ ಪ್ರಜ್ಞೆ ಶಿಕ್ಷಕರಿಗೆ ಇದ್ದರೆ ಸಾಕು." ಇನ್ನು ಕೆಲವರು, "ಈ ಹಿಂದೆ ಪರಿಷ್ಕರಣೆ ಮಾಡಿದವರು ಅವರ ಅಜೆಂಡಾ ತುರುಕಿದ್ದರು, ಈಗಿನವರು ಇವರ ಅಜೆಂಡಾ ತುರುಕುತ್ತಿದ್ದಾರೆ. ಇದರಲ್ಲಿ ತಪ್ಪು ಹುಡುಕುವುದಾದರೆ, ಇಬ್ಬರ ತಪ್ಪುಗಳ ಬಗ್ಗೆಯೂ ಮಾತನಾಡಬೇಕು," ಎನ್ನುವ ವಾದ ಮುಂದಿಡುವ ಮೂಲಕ, ಅನರ್ಹರ ನೇತೃತ್ವದ ಸಮಿತಿಗೆ ಪರೋಕ್ಷ ಬೆಂಬಲವನ್ನೂ ಸೂಚಿಸಿದರು.

ಈ ಲೇಖನ ಓದಿದ್ದಿರಾ?: ಅನುದಿನ ಚರಿತೆ | ಪಠ್ಯಪುಸ್ತಕ ಎನ್ನುವುದು ರಾಜಕೀಯ ಪಕ್ಷದ ಪ್ರಣಾಳಿಕೆಯೇ?

ಕವಿಯಾಗಿ ತಕ್ಕ ಮಟ್ಟಿಗೆ ಗುರುತಿಸಿಕೊಂಡಿರುವ ಮಧ್ಯವಯಸ್ಕರೊಬ್ಬರು, ಮೂರ್ನಾಲ್ಕು ವರ್ಷಗಳ ಹಿಂದೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಗೆ ಸಿಗಬೇಕಿದ್ದಷ್ಟು ಮನ್ನಣೆ ದೊರಕಿಲ್ಲ ಎನ್ನುವ ಅಳಲು ತೋಡಿಕೊಳ್ಳುತ್ತಲೇ, ತಮ್ಮ ಹೆಸರಿನೊಂದಿಗೆ ಜಾತಿಸೂಚಕ ಪದವನ್ನು ಏಕೆ ಸೇರಿಸಿಕೊಂಡೆ ಎಂಬುದನ್ನು ಫೇಸ್‍ಬುಕ್‍ನಲ್ಲಿ ವಿವರಿಸಿದ್ದರು. ಹೆಸರಿನೊಂದಿಗೆ ಜಾತಿ ಸೂಚಕ ಸೇರಿಸದೆ ಪತ್ರಿಕೆಗಳಿಗೆ ಕಳಿಸುತ್ತಿದ್ದ ಕವನಗಳು ತಿರಸ್ಕೃತಗೊಳ್ಳುತ್ತಿದ್ದವಂತೆ. ತಮ್ಮ ಹೆಸರಿಗೆ ಜಾತಿ ಸೂಚಕ ಸೇರಿಸಿದ ನಂತರ ಒಂದಾದ ನಂತರ ಒಂದರಂತೆ ಪ್ರಕಟಗೊಳ್ಳುತ್ತ ಹೋದವಂತೆ. ಕವಿಯಾಗಿ ಗುರುತಿಸಿಕೊಳ್ಳಲು ಜಾತಿ ದಯಪಾಲಿಸಿದ ಸಾಮಾಜಿಕ ಬಂಡವಾಳವನ್ನು ಬಳಸಿಕೊಂಡದ್ದರ ಕುರಿತು ಯಾವ ಅಳುಕಿಲ್ಲದಿದ್ದರೂ, ತಮ್ಮನ್ನು ಏರಿಸಬೇಕಿದ್ದ ಎತ್ತರಕ್ಕೆ ಸಾಹಿತ್ಯ ಕ್ಷೇತ್ರ ಏರಿಸದಿರಲೂ ಜಾತಿಯೇ ಕಾರಣವಾಗಿರಬಹುದೆಂಬ ಅನುಮಾನ ಅವರಿಗೆ. ಹೀಗೆ ಭಾವಿಸಿರುವವರು ಕೂಡ ಶೋಷಕ ಜಾತಿಗೆ ಸೇರಿದವರೇ.

ಸಾಮಾಜಿಕ ಬಂಡವಾಳ ದಯಪಾಲಿಸುವ ಅನುಕೂಲಗಳನ್ನು (ಪ್ರಿವಿಲೇಜ್) ತಮ್ಮ ಪ್ರತಿಭೆಗೆ ದಕ್ಕಲೇಬೇಕಿದ್ದ ಮನ್ನಣೆ ಎಂದು ಪರಿಭಾವಿಸುವವರಿಗೆ, ಇದೇ ಸಾಮಾಜಿಕ ಬಂಡವಾಳ ವಂಚಿತ ಜನರೆಡೆಗೆ ಇರುವ ತಿರಸ್ಕಾರದ ನೋಟ ಎಂತಹುದೆಂಬುದಕ್ಕೆ ಪ್ರಸ್ತುತ ಚಾಲ್ತಿಯಲ್ಲಿರುವ ಪಠ್ಯಪುಸ್ತಕ ಪರಿಷ್ಕರಣೆ ವಿವಾದವೇ ಪುರಾವೆ ಒದಗಿಸುತ್ತಿದೆ.

Image
Basavaraj Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸದ್ಯ ಕನ್ನಡದಲ್ಲಿ ಬರೆಯುತ್ತಿರುವ ಶೋಷಕ ಜಾತಿಗೆ ಸೇರಿದವರಿಗೆ, ಸಾಮಾಜಿಕ ಬಂಡವಾಳದ ಅರಿವು ಎಷ್ಟರ ಮಟ್ಟಿಗಿದೆ ಎಂದು ಪರೀಕ್ಷಿಸುವ ಜರೂರತ್ತಿದೆ. ಮೀಸಲಾತಿ ಮತ್ತು ಜಾತಿ ವ್ಯವಸ್ಥೆ ಕುರಿತು ಅವರ ನಿಲುವೇನು? ಧರ್ಮದ ಆಧಾರದಲ್ಲಿ ದ್ವೇಷ ಬಿತ್ತುವ ರಾಜಕೀಯವನ್ನು ಅವರು ವಿರೋಧಿಸುವರೋ ಅಥವಾ ಪರ ವಹಿಸುವರೋ ಎನ್ನುವ ಸರಳ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಇದು ಸಾಧ್ಯವಾದಲ್ಲಿ, ಸಮಾಜವನ್ನು ಅರ್ಥೈಸಿಕೊಳ್ಳಲು ಬೇಕಿರುವ ವಿಶಾಲ ದೃಷ್ಟಿಕೋನ ಹೊಂದಿಲ್ಲದವರ ಸಾಹಿತ್ಯವನ್ನು ಹೇಗೆ ಓದಿಕೊಳ್ಳಬೇಕು ಎಂಬ ಕುರಿತು ಓದುಗರಿಗೆ ಸ್ಪಷ್ಟತೆಯಾದರೂ ದಕ್ಕಬಹುದು.

ಶಾಲಾ ಪಠ್ಯದಲ್ಲಿ ಜಾತಿ ಆಧಾರಿತ ಶೋಷಣೆ ಕುರಿತೋ ಅಥವಾ ಪುರೋಹಿತಶಾಹಿ ಬಗೆಗೋ ಪ್ರಸ್ತಾಪ ಬಂದ ಕೂಡಲೇ ಉರಿದುಬೀಳುವವರ ಆತ್ಮವಂಚನೆಗೆ ಮಿತಿ ಎಂಬುದು ಇದೆಯೇ? ನಮ್ಮ ಸಮಾಜದಲ್ಲಿ ‘ಬಡ' ಪದದ ನಂತರ ಯಾವ ಜಾತಿಯ ಹೆಸರು ಥಟ್ ಅಂತ ಮೊದಲು ಬರುತ್ತದೆ ಎಂಬುದನ್ನು ಗಮನಿಸಿದರೂ ಸಾಕು, ಇಂದಿಗೂ ಈ ಸಮಾಜದ ಮೇಲೆ ಪುರೋಹಿತಶಾಹಿ ಹೊಂದಿರುವ ಬಿಗಿಹಿಡಿತದ ಅರಿವಾಗಲಿದೆ. ಸಂಪತ್ತಿನ ಅಸಮಾನ ಹಂಚಿಕೆಯ ಪ್ರಮುಖ ಫಲಾನುಭವಿಗಳಾಗಿ ಎಲ್ಲವನ್ನೂ ದಕ್ಕಿಸಿಕೊಂಡವರೇ 'ಬಡ'ವರಾಗಿ ಬಿಂಬಿತರಾಗುವುದು ವರ್ತಮಾನದ ದುರಂತ. ಪಠ್ಯ ಪರಿಷ್ಕರಣೆ ವಿವಾದ ಪುರೋಹಿತಶಾಹಿಯೇ ಪ್ರಭುತ್ವದ ರೂಪ ಧರಿಸಿ ನಮ್ಮನ್ನಾಳತೊಡಗಿರುವುದಕ್ಕೆ ಸಿಕ್ಕಿರುವ ಮತ್ತೊಂದು ಪುರಾವೆಯಷ್ಟೆ ಅನಿಸುವುದಿಲ್ಲವೇ?

ನಿಮಗೆ ಏನು ಅನ್ನಿಸ್ತು?
3 ವೋಟ್