ಗ್ರಾಹಕಾಯಣ | ನಿಮ್ಮ ಮನೆಯ ಗ್ಯಾಸ್ ಸ್ಟೌವ್ ಚೆನ್ನಾಗಿದೆಯೇ?

GAS STOVE 3

ಗ್ಯಾಸ್‍ ಸ್ಟೌವ್ ಖರೀದಿಸುವಾಗ ಎಷ್ಟು ಎಚ್ಚರದಿಂದ ಇರುತ್ತೀರೋ ಅದನ್ನು ಬಳಸುವಾಗಲೂ ಅಷ್ಟೇ ಎಚ್ಚರ ಅತ್ಯವಶ್ಯ. ಚಂಡೀಗಢದ ಎ ಎಸ್ ವೈದ್ ಎಂಬುವವರು 5,400 ರೂಪಾಯಿ ಕೊಟ್ಟು ಗ್ಯಾಸ್‍ ಸ್ಟೌವ್ ಖರೀದಿಸಿದ್ದರು. ಖರೀದಿಸಿದ ಆರು ತಿಂಗಳಲ್ಲೇ ಬರ್ನರ್ ಹಾಳಾಯಿತು. ಕಂಪನಿ ಸರಿಯಾಗಿ ಸ್ಪಂದಿಸದೆ, ಕಡೆಗವರು ಗ್ರಾಹಕರ ವೇದಿಕೆಗೆ ದೂರು ಕೊಡಬೇಕಾಯಿತು

ನಿಮ್ಮ ಅಡುಗೆಮನೆಯಲ್ಲಿ ಅಪಾಯಕಾರಿ ವಸ್ತುವೊಂದು ಇದೆ ಎಂಬುದನ್ನು ಮರೆಯಬೇಡಿ. ಆದರೆ, ಈ ಅಪಾಯಕಾರಿ ವಸ್ತು ಇಲ್ಲದೆ ಇಂದಿನ ಜೀವನ ಸುಖಕರವಾಗಿರುವುದಿಲ್ಲ. ಹಾಗೆಂದು, ಈ ವಸ್ತುವಿನ ಅಪಾಯದ ಬಗ್ಗೆ ನಿರ್ಲಕ್ಷ ಸಲ್ಲದು. ಆ ವಸ್ತುವೇ ನಿಮ್ಮ ಗ್ಯಾಸ್ ಸ್ಟೌವ್, ಬರ್ನರ್ ಹಾಗೂ ಅದರೊಟ್ಟಿಗೆ ಇರುವ ಗ್ಯಾಸ್ ಸಿಲಿಂಡರ್.

ಇದನ್ನು ಅಡುಗೆಮನೆಯ ಆರ್‌ಡಿಎಕ್ಸ್ ಎಂದರೂ ತಪ್ಪಾಗಲಾರದು. ಗ್ಯಾಸ್‍ ಸ್ಟೌವ್ ಖರೀದಿಸುವಾಗ ಎಷ್ಟು ಎಚ್ಚರದಿಂದ ಇರುತ್ತೀರೋ ಅದನ್ನು ಬಳಸುವಾಗಲೂ ಅಷ್ಟೇ ಎಚ್ಚರದಿಂದಿರುವುದು ಲೇಸು. ಚಂಡೀಗಢದ ಎ ಎಸ್ ವೈದ್ ಎಂಬುವವರು 5,400 ರೂಪಾಯಿ ಕೊಟ್ಟು ಗ್ಲಿನ್ ಅಪ್ಲೇಎನ್ಸಸ್ ಎಂಬ ಕಂಪನಿಯಿಂದ ಗ್ಯಾಸ್‍ ಸ್ಟೌವ್ ಖರೀದಿಸಿದ್ದರು. ಗ್ಯಾಸ್‍ ಸ್ಟೌವ್‍ಗೆ ಒಂದು ವರ್ಷ ಮತ್ತು ಬರ್ನರ್‌ಗೆ ಐದು ವರ್ಷ ಗ್ಯಾರಂಟಿ ನೀಡಲಾಗಿತ್ತು. ಆದರೆ, ಸ್ಟೌವ್ ಖರೀದಿಸಿದ ಆರು ತಿಂಗಳಲ್ಲೇ ಬರ್ನರ್ ಕೆಟ್ಟು, ಅದನ್ನು ದುರಸ್ತಿಪಡಿಸುವಂತೆ ಮಾರಾಟಗಾರರಲ್ಲಿ ಮನವಿ ಮಾಡಿಕೊಂಡರು.

ಈ ಲೇಖನ ಓದಿದ್ದೀರಾ?: ಗ್ರಾಹಕಾಯಣ | ವೈದ್ಯಕೀಯ ನಿರ್ಲಕ್ಷ್ಯ ಎಂದರೇನು, ಯಾವಾಗ ದೂರು ಕೊಡಬಹುದು?

ಕಂಪನಿಯವರು ಸಾಯಿ ಸೇಲ್ಸ್ ಕಾರ್ಪೊರೇಷನ್‌ನ ಒಬ್ಬ ತಜ್ಞರನ್ನು ಕಳುಹಿಸಿ, ಸ್ಟೌವ್ ರಿಪೇರಿ ಮಾಡುವ ವ್ಯವಸ್ಥೆ ಮಾಡಿದರು. ಆದರೆ, ತಜ್ಞರು ದೋಷವನ್ನು ಸರಿಪಡಿಸಲು ಆಗದ ಕಾರಣ ಮತ್ತೊಬ್ಬರನ್ನು ಕಳುಹಿಸುವುದಾಗಿ ಹೇಳಿಹೋದರು. ತಿಂಗಳಾದರೂ ಗ್ರಾಹಕರತ್ತ ಆತ ಸುಳಿಯಲಿಲ್ಲ. ಸ್ಟೌವ್‍ನಲ್ಲಿರುವ ನಾಬ್‍ ಅನ್ನು ಹೈ ಫ್ಲೇಮ್‌ನಿಂದ ಸ್ಲಿಮ್‌ಗೆ ತಿರುಗಿಸಿದರೂ ಬೆಂಕಿ ಕಡಿಮೆಯಾಗುತ್ತಿರಲಿಲ್ಲ. ಬದಲಿಗೆ ಸಂಪೂರ್ಣವಾಗಿ ಜಾಸ್ತಿ ಆಗುತ್ತಿತ್ತು. ಆದರೆ, ಸಿಲಿಂಡರ್‌ನಿಂದ ಬಂದ ಗ್ಯಾಸ್, ಬರ್ನರ್ ಸುತ್ತಮುತ್ತ ಹಬ್ಬಿಕೊಂಡು ನಂತರ ಹರಡುತ್ತಿತ್ತು. ಇದು ಅಪಾಯಕಾರಿ ಎಂದು ವಿವರಿಸಿದರೂ ಮಾರಾಟಗಾರರು ಇದರತ್ತ ಗಮನ ಹರಿಸಲಿಲ್ಲ. ಗ್ರಾಹಕರು ಈ ಸಮಸ್ಯೆ ಬಗ್ಗೆ ನಾಲ್ಕಾರು ಬಾರಿ ದೂರವಾಣಿ ಮೂಲಕ ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಕಡೆಗೆ, ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರು ಸಲ್ಲಿಸಿದರು.

ಜಿಲ್ಲಾ ವೇದಿಕೆಯಲ್ಲಿ ಮಾರಾಟಗಾರರು ತಮ್ಮ ನಿಲುವನ್ನು ಮಂಡಿಸಿದರು. ಬಳಕೆದಾರರಿಗೆ ಸ್ಟೌವ್ ಸರಬರಾಜು ಮಾಡಿದಾಗ ಅದು ಸರಿಯಾಗಿತ್ತೆಂದೂ, ಆನಂತರ ಗ್ಯಾಸ್ ಪೈಪ್‍ಲೈನ್‍ನಲ್ಲಿ ದೋಷ ಉಂಟಾಗಿದ್ದು, ಇದಕ್ಕೆ ಗ್ರಾಹಕರೇ ಕಾರಣ ಎಂದೂ ಹೇಳಿದರು. ಜಲಂದರ್‌ನಿಂದ ಚಂಡೀಗಢದವರೆಗೆ ಅದನ್ನು ಸಾಗಿಸುವಾಗ ಈ ದೋಷ ಉಂಟಾಗಿರಬಹುದು ಎಂದು ಮಾರಾಟಗಾರರು ವಾದಿಸಿದರು. ಜೊತೆಗೆ, ತಾವು ಇಡೀ ಸ್ಟೌವ್‍ ಅನ್ನು ಬದಲಿಸುವುದಾಗಿ ಹೇಳಿದರೂ ಗ್ರಾಹಕರು ಒಪ್ಪದೆ ದೂರು ಸಲ್ಲಿಸಿದ್ದಾರೆ ಎಂದೂ ಹೇಳಿಕೆ ನೀಡಿದರು. ಆದರೆ, ಗ್ರಾಹಕರು ಇದನ್ನು ಅಲ್ಲಗಳೆದು, ತಾವು ನಾಲ್ಕಾರು ಬಾರಿ ದೂರು ನೀಡಿದರೂ ಅದಕ್ಕೆ ಸ್ಪಂದಿಸದೆ ಇದ್ದುದರಿಂದ ವೇದಿಕೆಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದರು.

Image
GAS STOVE
ಸಾಂದರ್ಭಿಕ ಚಿತ್ರ

ಜಿಲ್ಲಾ ವೇದಿಕೆಯು ಗ್ರಾಹಕರ ಪರ ತೀರ್ಪು ನೀಡಿತು. ಗ್ರಾಹಕರು ನೀಡಿದ್ದ 5,400 ರೂಪಾಯಿ ಮರುಪಾವತಿ ಮಾಡಬೇಕೆಂದು ಸೂಚನೆ ನೀಡಿತು. ಜೊತೆಗೆ, ಮಾನಸಿಕ ವೇದನೆಗೂ ಪರಿಹಾರ ನೀಡುವಂತೆ ಸೂಚನೆ ನೀಡಿತು. ಸ್ಟೌವ್ ತಯಾರಕರು ಇದರ ವಿರುದ್ಧ ರಾಜ್ಯ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿದರು.

ರಾಜ್ಯ ಆಯೋಗವು ಸಹ ಜಿಲ್ಲಾ ವೇದಿಕೆಯ ತೀರ್ಪನ್ನು ಎತ್ತಿಹಿಡಿದು, ಗ್ರಾಹಕರ ಪರ ತೀರ್ಪು ನೀಡಿತು. ಬಳಕೆದಾರರು ಸ್ಟೌವ್ ರಿಪೇರಿ ಮಾಡುವಂತೆ ಕೋರಿಕೆ ಸಲ್ಲಿಸಿದ್ದನ್ನು ಸಾಬೀತುಪಡಿಸಿದರು. ಸ್ಟೌವ್ ನೀಡಲು ನಿರಾಕರಿಸಿದರು ಎಂಬ ಮಾರಾಟಗಾರರ ವಾದಕ್ಕೆ ಯಾವುದೇ ಪುರಾವೆ ಇರದ ಕಾರಣ, ಆಯೋಗ ಅವರ ಆಪಾದನೆಗಳನ್ನು ತಳ್ಳಿಹಾಕಿತು. ಜೊತೆಗೆ, ಬಳಕೆದಾರರಿಗೆ 5,400 ರೂಪಾಯಿ ಹಿಂತಿರುಗಿಸಬೇಕೆಂದು ಹಾಗೂ ಮಾನಸಿಕ ವೇದನೆ ನೀಡಿದ್ದಕ್ಕೆ 5,000 ರೂಪಾಯಿ ಪರಿಹಾರ ನೀಡಬೇಕೆಂದೂ ಸೂಚಿಸಿತು. ಅಲ್ಲದೆ, ಬಳಕೆದಾರರು ಕೆಟ್ಟಿರುವ ಸ್ಟೌವ್‍ ಅನ್ನು ಹಿಂತಿರುಗಿಸಬೇಕೆಂದು ಸಹ ಸೂಚಿಸಿತು.

ಮುಖ್ಯಚಿತ್ರ - ಸಾಂದರ್ಭಿಕ
ನಿಮಗೆ ಏನು ಅನ್ನಿಸ್ತು?
2 ವೋಟ್