ಯುಗಧರ್ಮ | ಕಾಂಗ್ರೆಸ್‌ನ 'ಭಾರತ್ ಜೋಡೋ' ಯಾತ್ರೆಗೆ ತಳಮಟ್ಟದ ಚಳವಳಿಗಳು ಬೆಂಬಲ ವ್ಯಕ್ತಪಡಿಸಿರುವುದೇಕೆ?

Bharat Jodo Yatra

ನಮಗೆ ರಾಜಕೀಯ ಪಕ್ಷವೂ ಅಲ್ಲದ, ಚಳವಳಿ ಸಂಘಟನೆಯೂ ಅಲ್ಲದ ವಿಶೇಷ ವಾಹಕವೊಂದರ ಅಗತ್ಯವಿದೆ. ಇದು ನಮ್ಮ ನೀತಿ, ದೃಷ್ಟಿಕೋನಗಳನ್ನು ರೂಪಿಸಿದರೂ, ಥಿಂಕ್ ಟ್ಯಾಂಕ್ ಆಗಬಾರದು. ಅಭಿಯಾನಗಳನ್ನು ಪ್ರಾರಂಭಿಸಿದರೂ ಪ್ರಚಾರ ಸಂಸ್ಥೆಯಾಗಬಾರದು. ಚುನಾವಣಾ ರಾಜಕೀಯದಲ್ಲಿ ಮಧ್ಯಪ್ರವೇಶಿಸಬೇಕು; ಆದರೆ ರಾಜಕೀಯ ಪಕ್ಷವಾಗಬಾರದು

ಭಾರತಕ್ಕೆ ವಿರೋಧ ಪಕ್ಷಗಳನ್ನು ಮತ್ತು ತಳಮಟ್ಟದ ಚಳವಳಿಗಳನ್ನು ಬೆಸಯುವ ರಾಜಕೀಯ ಸೇತುವೆಯೊಂದರ ಅಗತ್ಯವಿದೆ. ಅದು ಹೇಗಿರಬಹುದು ಎಂಬುದನ್ನು ಕಳೆದ ವಾರ ನಾವು ಕಂಡೆವು. ಭಾರತೀಯ ಪ್ರಜಾಪ್ರಭುತ್ವವನ್ನು ಪುನರುಜ್ಜೀವನಗೊಳಿಸುವ ಮತ್ತು ನಮ್ಮ ಗಣರಾಜ್ಯವನ್ನು ಮರಳಿ ಪಡೆಯುವ ಸಾಧ್ಯತೆಯು ಈ ರಾಜಕೀಯ ನವೀನತೆಯ ಮೇಲೆ ಅವಲಂಬಿತವಾಗಿದೆ.

ಇತ್ತೀಚೆಗೆ, ರಾಜಕೀಯ ಪಕ್ಷಗಳಿಂದ ಅಂತರ ಕಾಯ್ದುಕೊಂಡ ಇತಿಹಾಸ ಹೊಂದಿರುವ ಕೆಲವು ಪ್ರಮುಖ ತಳಮಟ್ಟದ ಚಳವಳಿ ಗುಂಪುಗಳು ಕಾಂಗ್ರೆಸ್ ಪಕ್ಷವು ಪ್ರಾರಂಭಿಸಿರುವ ʼಭಾರತ್ ಜೋಡೋʼ ಯಾತ್ರೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿವೆ. ನಮ್ಮ ದೇಶದ ಉಳಿವಿಗೇ ಬಂದೊದಗಿರುವ ಸವಾಲು ಈ ಗುಂಪುಗಳನ್ನು ಮುಖ್ಯವಾಹಿನಿಯ ವಿರೋಧ ಪಕ್ಷಗಳೊಂದಿಗೆ ಕೂಡಿ ರಾಜಕೀಯ ವಿದ್ಯಮಾನಗಳಲ್ಲಿ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದೆ. ಅದೇ ಸಂದರ್ಭದಲ್ಲಿ, ಯಾವೊಂದು ರಾಜಕೀಯ ಪಕ್ಷದ ಪ್ರಚಾರಕ್ಕೆ ಕಟ್ಟುಬೀಳದೆ ಮತ್ತು ವಿರೋಧ ಪಕ್ಷಗಳ ನಡುವಿನ ಸ್ಪರ್ಧೆಯಲ್ಲಿ ಭಾಗವಹಿಸಲು ನಿರಾಕರಿಸುವುದರ ಮೂಲಕ ಈ ಮಧ್ಯಪ್ರವೇಶಿಸುವಿಕೆಯು ನಿಷ್ಪಕ್ಷಪಾತಿಯಾಗಿದೆ. ನಾವು ಅದನ್ನು ಪ್ರತಿರೋಧದ ನಿಷ್ಪಕ್ಷಪಾತಿ ರಾಜಕೀಯ ಎಂದು ಕರೆಯಬಹುದು.

ಅಚ್ಚರಿಯ ವಿಷಯವೆಂದರೆ, ಈ ನವೀನ ಪ್ರಯತ್ನವು ಸದ್ದು-ಗದ್ದಲವೆಬ್ಬಿಸಲಿಲ್ಲ. ಮಾಧ್ಯಮಗಳು ರಾಹುಲ್ ಗಾಂಧಿ 'ನಾಗರಿಕ ಸಮಾಜ'ದೊಂದಿಗೆ ಚರ್ಚಿಸುತ್ತಿದ್ದಾರೆ ಎಂಬುದನ್ನಷ್ಡೇ ವರದಿ ಮಾಡಿತ್ತು. ರಾಹುಲ್‌ ಗಾಂಧಿ ಅವರು ಮುಂಬರುವ 2024ರ ಚುನಾವಣೆಯ ಸೋಲನ್ನು ಈಗಾಗಲೇ ಒಪ್ಪಿಕೊಂಡಿದ್ದಾರೆ ಎಂಬ ಸುಳ್ಳು ಸುದ್ದಿಗಳು ಅವನ್ನು ಬಿತ್ತರಿಸಿದ ಮಾಧ್ಯಮಗಳೇ ಹಿಂತೆಗೆದುಕೊಳ್ಳುವವರೆಗೆ ಕೆಲವು ಸುತ್ತು ಹರಿದಾಡಿತ್ತು. ಕೆಲವು "ಆಂದೋಲನ ಜೀವಿಗಳು" ಕಾಂಗ್ರೆಸ್ ಸೇರುವ ಬಗ್ಗೆ ಕೆಲವು ಊಹಾಪೋಹಗಳಿದ್ದವು. ಯಾವ ಸಂಘಟನೆಗಳು ಇದರಲ್ಲಿ ಪಾಲ್ಗೊಳ್ಳಲಿವೆ ಮತ್ತು ಅವರು ಯಾತ್ರೆಗೆ ನೀಡಿದ ಬೆಂಬಲದ ಸ್ವರೂಪವನ್ನು ತಿಳಿಯುವ ವ್ಯವಧಾನವನ್ನೂ ಇವರ್ಯಾರು ತೋರಲಿಲ್ಲ.

ಸೇತುವೆ ನಿರ್ಮಾಣದ ನಿಟ್ಟಿನಲ್ಲಿ ಇತ್ತೀಚಿನ ಪ್ರಯತ್ನಗಳು

Bharat Jodo Yatra

ಕಳೆದ ವರ್ಷ, ಅಂತಹ ಸೇತುವೆಯ ನಿರ್ಮಿಸುವ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳು ನಡೆದಿವೆ. (ಈಗಲೇ ತಿಳಿಸುತ್ತಿರುವೆ: ಇಲ್ಲಿ ಉಲ್ಲೇಖಿಸಿರುವ ಹೆಚ್ಚಿನ ಸಭೆಗಳು ಮತ್ತು ಉಪಕ್ರಮಗಳಲ್ಲಿ ನಾನೂ ಭಾಗವಹಿಸಿದ್ದೇನೆ). ಹಲವಾರು ಗಣ್ಯ ವ್ಯಕ್ತಿಗಳು, ಬುದ್ಧಿಜೀವಿಗಳು ಮತ್ತು ಕಾರ್ಯಕರ್ತರು ಸೆಪ್ಟೆಂಬರ್ 2021 ರಲ್ಲಿ ದೆಹಲಿಯಲ್ಲಿ ಸಭೆ ಸೇರಿ, 'ಇಂಡಿಯಾ ಡಿಸರ್ವ್ಸ್ ಬೆಟರ್' ಎಂಬ ಹೆಸರಿನಲ್ಲಿ ಕಾರ್ಯಗತವಾಗುವ ಸಾಧ್ಯತೆಯನ್ನು ಅನ್ವೇಷಿಸಿದರು. ನಂತರದಲ್ಲಿ, ಬೆಂಗಳೂರು, ಕೊಚ್ಚಿ, ಜೈಪುರ, ಪ್ರಯಾಗರಾಜ್ ಮತ್ತು ಗುವಾಹಟಿಯಲ್ಲಿಯೂ ಸಭೆಗಳು ನಡೆದವು. ಇದರ ಭಾಗವಾಗಿದ್ದ ಕೆಲವರು 'ಹಮ್ ಹಿಂದೂಸ್ತಾನಿ' ಎಂದು ಹೆಸರಿನಡಿ ಕಾರ್ಯೋನ್ಮುಖರಾಗಿದ್ದಾರೆ. ಗಣರಾಜ್ಯವನ್ನು ಮರಳಿ ಪಡೆಯಲು ಮತ್ತು ಪ್ರಜಾಸತ್ತಾತ್ಮಕ ಪ್ರತಿರೋಧಕ್ಕೆ ಶಕ್ತಿ ತುಂಬಲು ಬಯಸುವ ಎಲ್ಲರನ್ನು ಒಳಗೊಂಡು ಐಕ್ಯಮತ್ಯ ರೂಪಿಸುವುದು ಇದರ ಮೂಲ ಗುರಿಯಾಗಿದೆ.

ಪ್ರಜಾಪ್ರಭುತ್ವಕ್ಕೆ ಇರುವ ಕುತ್ತು-ಕಂಟಕಗಳು ದಿನೇ-ದಿನೆ ದೊಡ್ಡದಾಗಿ ಬೆಳೆಯುತ್ತಿರುವುದರಿಂದ ಈ ರೀತ್ಯ ಪ್ರಯತ್ನಗಳು ವೇಗಪಡೆದುಕೊಂಡಿವೆ. ಮೂರು ಮಹತ್ವದ ಸಮಾಲೋಚನೆಗಳು ಈ ತಿಂಗಳು ಜರುಗಿದವು. ಗಾಂಧಿವಾದಿ ಸಂಸ್ಥೆಗಳು ಮತ್ತು ಜೆಪಿ ಚಳವಳಿಗೆ ಸಂಬಂಧಿಸಿದ ಕಾರ್ಯಕರ್ತರ ಗುಂಪು ಆಗಸ್ಟ್ 13-14 ರಂದು, ವಾರಣಾಸಿಯಲ್ಲಿ 'ರಾಷ್ಟ್ರ ನಿರ್ಮಾಣ ಸಮಾಗಮ'ವನ್ನು ಆಯೋಜಿಸಿದ್ದವು. ಇದರಲ್ಲಿ ಅಮರನಾಥ್ ಭಾಯಿ, ರಾಮಚಂದ್ರ ರಾಹಿ, ಪ್ರಶಾಂತ್ ಭೂಷಣ್ ಮತ್ತು ಆನಂದ್ ಕುಮಾರ್ ಕೂಡ ಭಾಗವಹಿಸಿದ್ದರು. ರಾಷ್ಟ್ರೀಯ ಏಕತೆಯನ್ನು ಬಲಪಡಿಸಲು ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಬಹುಮುಖಿಯಾದ ರಾಷ್ಟ್ರವ್ಯಾಪಿ ಆಂದೋಲನವನ್ನು ಪ್ರಾರಂಭಿಸಲು ಸಭೆಯು ನಿರ್ಧರಿಸಿತು.

ಈ ಮಧ್ಯೆ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಳ್ಳಲಾಗಿರುವ ಭಾರತ್ ಜೋಡೋ ಯಾತ್ರೆಯ ಯೋಜನೆಯನ್ನು ಘೋಷಿಸಿದ ಕಾಂಗ್ರೆಸ್, ಎಲ್ಲಾ ನಾಗರಿಕರು, ಸಂಘಟನೆಗಳು, ಚಳವಳಿಗಳು ಮತ್ತು ರಾಜಕೀಯ ಪಕ್ಷಗಳಿಗೆ ಇದರಲ್ಲಿ ಭಾಗವಹಿಸಲು ಮನವಿ ಮಾಡಿದೆ. ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಮತ್ತು ಹಿರಿಯ ಸಮಾಜವಾದಿ ನಾಯಕ ಜಿ.ಜಿ. ಪಾರಿಖ್ ಬಳಿಗೆ ಕಾಂಗ್ರೆಸ್ ಅಧ್ಯಕ್ಷರ ಪತ್ರವನ್ನು ತಲುಪಿಸಿದ ದಿಗ್ವಿಜಯ್‌ ಸಿಂಗರು ಭಾರತ್ ಜೋಡೋ ಯಾತ್ರೆಗೆ ಬೆಂಬಲ ಕೋರಿದರು. ನಂತರದಲ್ಲಿ, 19 ಆಗಸ್ಟ್ ರಂದು ದೆಹಲಿಯಲ್ಲಿ ಜನಾಂದೋಲನಕ್ಕಾಗಿ ರಾಷ್ಟ್ರೀಯ ಸಮನ್ವಯ (NAPM) ಸೇರಿದಂತೆ ಸುಮಾರು 25 ಜನಸಂಘಟನೆಗಳನ್ನು ಒಳಗೊಂಡ ಸಭೆಯು, 'ನಫ್ರತ್ ಛೋಡೋ, ಭಾರತ್ ಜೋಡೋ' ಅಭಿಯಾನವನ್ನು ಪ್ರಾರಂಭಿಸಲು ನಿರ್ಧರಿಸಿತು; ಮೇಧಾ ಪಾಟ್ಕರ್, ನಿವೃತ್ತ ನ್ಯಾಯಮೂರ್ತಿ ಕೋಲ್ಸೆ ಪಾಟೀಲ್, ಅಲಿ ಅನ್ವರ್, ತುಷಾರ್ ಗಾಂಧಿ, ಡಾ.ಸುನಿಲಂ ಮತ್ತಿತರರನ್ನು ಒಳಗೊಂಡಿದ್ದ ಸಭೆಯು, ಕಾಂಗ್ರೆಸ್‌ ಘೋಷಿಸಿರುವ 'ಭಾರತ್ ಜೋಡೋ' ಯಾತ್ರೆಗೆ ಬೆಂಬಲ ಸೂಚಿಸಿತು.

ಈ ಲೇಖನ ಓದಿದ್ದೀರಾ?: ಯುಗಧರ್ಮ | ಪ್ರಧಾನಿ ಮೋದಿಯವರು ಹೇಳಿದ 'ಪಂಚಪ್ರಾಣ' ಮತ್ತು ಹೊಸ ಕನಸುಗಳ ಸುಳ್ಳಿನ ತೋಟ  

ಆಗಸ್ಟ್ 22ರಂದು ದೆಹಲಿಯ ಕಾನ್ಸ್‌ಟಿಟ್ಯೂಷನ್ ಕ್ಲಬ್‌ನಲ್ಲಿ ನಡೆದ, ಜನಚಳವಳಿಗಳು ಮತ್ತು ಕಾಂಗ್ರೆಸ್ ನಾಯಕತ್ವದ ನಡುವಿನ ಸಂವಾದವನ್ನು ಈ ಹಿನ್ನಲೆಯಲ್ಲಿ ಅರ್ಥೈಸಬೇಕು. ಅರುಣ ರಾಯ್, ಬೆಜವಾಡ ವಿಲ್ಸನ್, ದೇವನೂರ ಮಹಾದೇವ, ಗಣೇಶ್ ದೇವಿ, ಪಿ ವಿ ರಾಜಗೋಪಾಲ್‌, ಶರದ್‌ ಬೆಹರ್‌ ಮತ್ತು ನನ್ನನ್ನು ಒಳಗೊಂಡ ಗುಂಪಿನ ಆಹ್ವಾನದ ಮೇರೆಗೆ (20 ರಾಜ್ಯಗಳ ಬೇರೆ-ಬೇರೆ ಸಿದ್ಧಾಂತಗಳೊಂದಿಗೆ ಗುರುತಿಸಿಕೊಂಡಿರುವ ಮತ್ತು ವಲಯಗಳಲ್ಲಿ ಕಾರ್ಯೋನ್ಮುಖವಾಗಿರುವ) ಸುಮಾರು 150 ಜನ ಚಳವಳಿಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಒಟ್ಟುಗೂಡಿದರು. 'ಭಾರತ್ ಜೋಡೋ' ಯಾತ್ರೆಯೊಂದಿಗೆ ಜನಾಂದೋಲನಗಳು ಸಂಬಂಧವನ್ನು ಹೊಂದಬೇಕೇ? ಹೌದಾದರೆ, ಅದು ಯಾವ ರೀತಿಯಲ್ಲಿರಬೇಕು? ಎಂಬುದು ಈ ಸಭೆಯ ಮುಖ್ಯ ಚರ್ಚಾ ವಿಷಯವಾಗಿತ್ತು. ವಿಸ್ತೃತ ಚರ್ಚೆ, ದಿಗ್ವಿಜಯ ಸಿಂಗ್ ಅವರ ವಿಚಾರ ಮಂಡನೆ ಮತ್ತು ರಾಹುಲ್ ಗಾಂಧಿಯವರೊಂದಿಗೆ ಮುಕ್ತ ಚರ್ಚೆಯ ನಂತರ, ಸಭೆಯು ಸರ್ವಾನುಮತದಿಂದ ಭಾರತ್‌ ಜೋಡೋ ಯಾತ್ರೆಯನ್ನು ಸ್ವಾಗತಿಸಲು ಮತ್ತು ಈ ಯಾತ್ರೆಯೊಂದಿಗೆ 'ತೊಡಗಿಸಿಕೊಳ್ಳಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿತು.'

ಇದು ಭಾರತದಲ್ಲಿನ ರಾಜಕೀಯ ಪಕ್ಷಗಳ ಮತ್ತು ಚಳವಳಿಗಳ ಸಂಬಂಧಗಳ ಇತಿಹಾಸದಲ್ಲಿ ಮಹತ್ವದ ಕ್ಷಣವೊಂದನ್ನು ಪ್ರತಿನಿಧಿಸುತ್ತದೆ. ಖಚಿತವಾಗಿ ಹೇಳಬೇಕೆಂದರೆ, ಸಭೆಯಲ್ಲಿ ಭಾಗವಹಿಸಿದವರೆಲ್ಲರೂ ಈ ಯಾತ್ರೆಗೆ ಸೇರಲು ಒಪ್ಪಿಲ್ಲ; ಪ್ರತಿಯೊಂದು ಚಳವಳಿ ಮತ್ತು ಗುಂಪು ಕೂಡ ಈ ಪ್ರಯತ್ನದಲ್ಲಿ ತೊಡಗಿಸಿಕೊಳ್ಳಲು ತನ್ನದೇ ಆದ ಮಾರ್ಗಗಳನ್ನು ಅನ್ವೇಷಿಸಿಕೊಳ್ಳುತ್ತವೆ. ಭಾಗವಹಿಸಿದ ಸದಸ್ಯರು ದ್ವೇಷದ ರಾಜಕೀಯಕ್ಕೆ ತಾತ್ವಿಕ ಪ್ರತಿರೋಧವನ್ನೊಡ್ಡಲು ರಾಜಕೀಯ ಪಕ್ಷಗಳ ಸನ್ನದ್ಧತೆಯ ಬಗ್ಗೆ ತಮ್ಮ ಆತಂಕ, ಅನುಮಾನಗಳನ್ನು ಮುಕ್ತವಾಗಿ ಹಂಚಿಕೊಂಡರು. ಈ ತಳಮಟ್ಟದ ಚಳವಳಿಗಳು ಯಾವುದೇ ರೀತಿಯಲ್ಲೂ ಕಾಂಗ್ರೆಸ್ ಪಕ್ಷದೊಂದಿಗೆ ರಾಜಿ ಮಾಡಿಕೊಂಡಿಲ್ಲ. ಈ ಜನಚಳವಳಿಗಳು ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಸಾಂವಿಧಾನಿಕ ಮೌಲ್ಯಗಳ ಮೇಲಿನ ಆಕ್ರಮಣಕ್ಕೆ ಪರಿಣಾಮಕಾರಿಯಾದ-ಪ್ರಜಾಸತ್ತಾತ್ಮಕವಾದ ಪ್ರತಿರೋಧವನ್ನು ಒಡ್ಡುವ ಭರವಸೆಯನ್ನು ನೀಡುವ ಇತರ ವಿರೋಧ ಪಕ್ಷಗಳ ಪ್ರಯತ್ನಗಳಿಗೂ ತಮ್ಮ ಬೆಂಬಲವನ್ನು ವಿಸ್ತರಿಸಲು ಮುಕ್ತವಾಗಿರಬಹುದು.

'ಪಕ್ಷೇತರ'ದಿಂದ 'ನಿಷ್ಪಕ್ಷಪಾತ'ದವರೆಗೆ

ಪ್ರಸ್ತುತ ವಿದ್ಯಮಾನವು ಒಂದು ಕಾಲದಲ್ಲಿದ್ದ 'ಪಕ್ಷೇತರ ರಾಜಕೀಯ ಪ್ರಕ್ರಿಯೆʼಗಳಿಗಿಂತಲೂ ವಿಭಿನ್ನವಾಗಿದೆ. 1980ರ ದಶಕದಲ್ಲಿ, ಭಾರತೀಯ ಪ್ರಜಾಪ್ರಭುತ್ವದ ಸಿದ್ಧಾಂತಗಳ ವಿಮರ್ಶಕರು ರಾಜಕೀಯವೆಂಬ ಕಾಡಿನಲ್ಲಿ ವಿಚಿತ್ರವಾದ ಮೃಗವೊಂದರ ತಿರುಗಾಟವನ್ನು ಗಮನಿಸಿದರು. ಇವು ರಾಜಕೀಯ ಪಕ್ಷಗಳಾಗಿರಲಿಲ್ಲ; ಇವು ಚುನಾವಣೆಯಗಳಲ್ಲಿ ಸ್ಪರ್ಧಿಸಲಿಲ್ಲ ಅಥವಾ ಅದರಲ್ಲಿ ಮಧ್ಯಪ್ರವೇಶಿಸಲಿಲ್ಲ. ಇವು ಪರೋಪಕಾರಿಯೋ ಅಥವಾ ದತ್ತಿ NGOಗಳಾಗಿರಲೂ ಇಲ್ಲ. ಇವು ಕೇವಲ ಒತ್ತಡದ ಗುಂಪುಗಳೂ (pressure group) ಆಗಿರಲಿಲ್ಲ. ಇವು ರಾಜಕೀಯ ಸ್ಥಾನಗಳನ್ನು ಪಡೆದವು, ರಾಜಕೀಯ ಅಧಿಕಾರವನ್ನು ವಿರೋಧಿಸಿದವು ಮತ್ತು ರಾಜಕೀಯ ಸಿದ್ಧಾಂತಗಳಿಂದ ಮಾರ್ಗದರ್ಶನ ಪಡೆದ ಕಾರಣಕ್ಕೆ ಇವು ರಾಜಕೀಯ ಸಂರಚನೆಗಳಾಗಿದ್ದವು. ಸೆಂಟರ್‌ ಫಾರ್‌ ಸ್ಟಡಿ ಆಫ್‌ ಡೆವೆಲಪಿಂಗ್‌ ಸೊಸೈಟೀಸ್‌ನಲ್ಲಿ (CSDS) ಕೆಲಸ ಮಾಡುತ್ತಿದ್ದ ವಿದ್ವಾಂಸರಾದ ರಜನಿ ಕೊಠಾರಿ, ಡಿ ಎಲ್ ಶೇಥ್ ಮತ್ತು ಹರ್ಷ್ ಸೇಥಿ ಅವರುಗಳು ಈ ತಳಮಟ್ಟದ ಪ್ರತಿಭಟನಾ ಚಳವಳಿಗಳನ್ನು 'ಪಕ್ಷೇತರ ರಾಜಕೀಯ ರಚನೆಗಳು' ಎಂದು ವಿವರಿಸಿದ್ದಾರೆ. ಪಾಶ್ಚಿಮಾತ್ಯ ಪ್ರಜಾಪ್ರಭುತ್ವಗಳಿಗೆ ಅಲ್ಲಿಯವರೆಗೆ ತಿಳಿದಿದ್ದ ಎಲ್ಲಕ್ಕಿಂತ ಭಿನ್ನವಾದ, ಭಾರತೀಯ ಪ್ರಜಾಪ್ರಭುತ್ವವೇ ಕಂಡುಹಿಡಿದುಕೊಂಡಿದ್ದ ಈ ಹೊಸ ಸಂರಚನೆಯಲ್ಲಿ ಅವರು ಹೆಚ್ಚಿನ ಭರವಸೆಯನ್ನು ಹೊಂದಿದ್ದರು.

Bharta jodo

ಪ್ರಜಾಸತ್ತಾತ್ಮಕ ಪ್ರತಿರೋಧದ ಅನಿವಾರ್ಯತೆಯು ಇದರ ಭಾಗಶಃ ಹಿಮ್ಮುಖ ಚಲನೆಯ ಅಗತ್ಯವನ್ನು ಸೃಷ್ಟಿಸಿದೆ. ರಾಜಕೀಯವನ್ನು ಪಕ್ಷಗಳ ರಾಜಕೀಯ ಮತ್ತು ಪಕ್ಷೇತರ ರಾಜಕೀಯ ಎಂಬುದಾಗಿ ವಿಂಗಡಿಸಿ ಪ್ರತಿಫಲ ಪಡೆಯುವ ಅಥವಾ ಈ ರೀತ್ಯ ವಿಂಗಡಣೆಯಿಂದ ದೂರವೇ ಉಳಿಯುವ ಬದಲಿಗೆ, ನಾವಿಂದು ಈ ಎರಡೂ ಸ್ವರೂಪಗಳು ಹೇಗೆ ಪರಸ್ಪರ ಸಂವಹಿಸಬೇಕೆಂಬುದನ್ನು ವಿನ್ಯಾಸಗೊಳಿಸಬೇಕಿದೆ. ವಿರೋಧ ಪಕ್ಷದಲ್ಲಿರುವ ರಾಜಕೀಯ ಪಕ್ಷಗಳಿಗೆ ಹಿಂದೆಂದಿಗಿಂತಲೂ ಚಳುವಳಿಗಳು ಇಂದು ಹೆಚ್ಚು ಅಗತ್ಯವಾಗಿವೆ, ಏಕೆಂದರೆ ಅವುಗಳು ಕೇಡರ್, ಸಂಘಟನೆ ಮತ್ತು ಸಿದ್ಧಾಂತಗಳಿಲ್ಲದ ರಾಜಕೀಯ ಯಂತ್ರಗಳಾಗಿ ಬದಲಾಗುತ್ತಿವೆ. ಕಳೆದ ಎಂಟು ವರ್ಷಗಳಲ್ಲಿ, ಪ್ರತಿರೋಧಕ್ಕೆ ಪ್ರಮುಖ ತಾಣವಾಗಿರುವುದು ಸಂಸತ್ತಲ್ಲ. ಬದಲಿಗೆ ಬೀದಿಗಳೇ.

ಆದರೆ, ಇದೇ ಸಮಯದಲ್ಲಿ, ತಳಮಟ್ಟದ ಚಳವಳಿಗಳಿಗೆ ರಾಜಕೀಯ ಪಕ್ಷಗಳು ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಾಗಿವೆ. ಪ್ರತಿಭಟನೆ ಮತ್ತು ಭಿನ್ನಾಭಿಪ್ರಾಯಗಳ ಅಭಿವ್ಯಕ್ತಿಗೆ ಅವಕಾಶಗಳು ಕ್ಷೀಣಿಸುತ್ತಿರುವ ದಿನಗಳಲ್ಲಿ, ಈ ದಿನದ ರಾಜಕೀಯವನ್ನು ಪ್ರಭಾವಿಸಲು ನಮಗೆ ಲಭ್ಯವಿರುವ ಏಕೈಕ ಪ್ರಜಾಸತ್ತಾತ್ಮಕ ವಲಯವೆಂದರೆ ಚುನಾವಣೆಗಳು ಮಾತ್ರ. ಪ್ರತಿರೋಧದ ರಾಜಕೀಯವು ಚುನಾವಣಾ ಫಲಿತಾಂಶಗಳು ಮತ್ತು ಚುನಾವಣೆಗಳನ್ನು ಗೆಲ್ಲುವ ರಾಜಕೀಯ ಪಕ್ಷಗಳನ್ನು ಪರಿಗಣಿಸದೆ ಉಳಿಯಲು ಸಾಧ್ಯವಿಲ್ಲ. ಚಳವಳಿಗಳು ಆಳವನ್ನು ಒದಗಿಸಿದರೆ, ಪಕ್ಷಗಳು ವ್ಯಾಪಕತೆ ನೀಡುತ್ತವೆ. ಚಳವಳಿಗಳು ಸಮಸ್ಯೆಗಳನ್ನು ಮುನ್ನಲೆಗೆ ತಂದರೆ, ಪಕ್ಷಗಳು ಮಧ್ಯಸ್ಥಿಕೆ ವಹಿಸಿ ಇವುಗಳನ್ನು ಅಜೆಂಡಾವಾಗಿಸುತ್ತವೆ. ಚಳವಳಿಗಳು ಕಚ್ಚಾಶಕ್ತಿಯನ್ನು ಒದಗಿಸಿದರೆ, ಪಕ್ಷಗಳು ಇವುಗಳನ್ನು ಪರಿಣಾಮಕಾರಿ ಫಲಿತಾಂಶಗಳಾಗಿ ಪರಿವರ್ತಿಸುತ್ತವೆ.

ಅದಕ್ಕಾಗಿಯೇ ನಮಗೆ ರಾಜಕೀಯ ಪಕ್ಷವೂ ಅಲ್ಲದ ಅಥವಾ ಚಳವಳಿ ಸಂಘಟನೆಯೂ ಅಲ್ಲದ ವಿಶೇಷ ವಾಹಕವೊಂದರ ಅಗತ್ಯವಿದೆ. ಇದು ನಮ್ಮ ನೀತಿಗಳು ಮತ್ತು ದೃಷ್ಟಿಕೋನಗಳನ್ನು ರೂಪಿಸಿದರೂ, ಇವು ಥಿಂಕ್ ಟ್ಯಾಂಕ್ ಆಗಬಾರದು. ಇದು ಅಭಿಯಾನಗಳನ್ನು ಪ್ರಾರಂಭಿಸಬೇಕು; ಆದರೆ ಕೇವಲ ಪ್ರಚಾರ ಸಂಸ್ಥೆಯಾಗಬಾರದು. ಇದು 2024 ಲೋಕಸಭಾ ಚುನಾವಣೆ ಸೇರಿದಂತೆ ಚುನಾವಣಾ ರಾಜಕೀಯದಲ್ಲಿ ಮಧ್ಯಪ್ರವೇಶಿಸಬೇಕು; ಆದರೆ ರಾಜಕೀಯ ಪಕ್ಷವಾಗಬಾರದು. ಇಂದು ನಾವು ಎದುರಿಸುತ್ತಿರುವ ಅಸಾಧಾರಣ ಸವಾಲು ಅಸಾಧಾರಣ ಪ್ರಯತ್ನಗಳನ್ನು ಬೇಡುತ್ತವೆ. ಇತಿಹಾಸದ ಬಹಳ ಭಿನ್ನ ಗಳಿಗೆಯೊಂದರಲ್ಲಿ ಸಾರ್ವಜನಿಕ ಕ್ರಿಯೆಗಾಗಿ ನಮಗೆ ಬೇಕಿರುವುದು ಕೇವಲ ಹೊಸ ವಾಹನವಲ್ಲ; ಬದಲಿಗೆ, ನವೀನವಾದ, ವಿಶೇಷ ವಾಹಕ. ಅಂತಹ ಸೇತುವೆಯೊಂದು ನಮ್ಮ ಭವಿಷ್ಯವನ್ನು ರೂಪಿಸಬಹುದು.

ಅನುವಾದ: ಶಶಾಂಕ್‌ ಎಸ್‌ ಆರ್‌, ಬೆಂಗಳೂರಿನ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯ ಸಮಾಜ ವಿಜ್ಞಾನ ವಿಭಾಗದಲ್ಲಿ ಪಿ.ಎಚ್.ಡಿ ಸಂಶೋಧನಾರ್ಥಿ
ನಿಮಗೆ ಏನು ಅನ್ನಿಸ್ತು?
4 ವೋಟ್
eedina app