ಹಳ್ಳಿ ಹಾದಿ | ಅನ್ನ ಕಪ್ಪಾದೊಡೆ ಉಣಲುಂಟೆ?

farming

ಅಪೌಷ್ಟಿಕತೆ ತಡೆಗೆ ಸರ್ಕಾರ ಕಬ್ಬಿಣಾಂಶ ಬೆರೆತ ಕಪ್ಪು ಅಕ್ಕಿಯನ್ನು ಪಡಿತರದಲ್ಲಿ ವಿತರಿಸುವ ಆಲೋಚನೆಯಲ್ಲಿದೆ. ಈ ಯೋಜನೆಯ ಪ್ರಕಾರ, ಸಾಮಾನ್ಯ ಅಕ್ಕಿಯೊಂದಿಗೆ ಕಪ್ಪು ಅಕ್ಕಿಯನ್ನು ಮಿಶ್ರ ಮಾಡಿ ವಿತರಿಸಲಾಗುತ್ತದೆ. ಆದರೆ, ಅಡುಗೆಗೆ ಅಕ್ಕಿ ಸ್ವಚ್ಛ ಮಾಡಿಕೊಳ್ಳುವಾಗ ಹೆಣ್ಣುಮಕ್ಕಳು ಆ ಕಪ್ಪು ಅಕ್ಕಿ ಕಾಳನ್ನು ಕಲ್ಲಿನ ಕಣವೆಂದು ಎತ್ತಿ ಬಿಸಾಕುವ ಸಾಧ್ಯತೆ ಹೆಚ್ಚಿದೆ

ಇತ್ತೀಚೆಗೆ ಒಬ್ಬ ರೈತನೊಂದಿಗೆ ಮಾತುಕತೆ ನಡೆಸಿದ್ದೆವು; ಏನು ಬೆಳೆಯುತ್ತಾರೆ, ಏನು ಉಣ್ಣುತ್ತಾರೆ ಎಂದೆಲ್ಲ. ಹಿಂದೆ ತನ್ನ ಅನ್ನವನ್ನು ತಾನೇ ಬೆಳೆದುಣ್ಣುತ್ತಿದ್ದ ಕಾಲದಲ್ಲಿ ಸ್ಥಳೀಯ ದೊಡ್ಡ ಭತ್ತವನ್ನು (ದೊಡಗ್ಯಾ ಭತ್ತ) ಬೆಳೆಯುತ್ತಿದ್ದ ರೈತರು ಇಂದು ಯಾವುದೋ ಒಂದು ಹೈಬ್ರಿಡ್ ಭತ್ತ ಬೆಳೆದು ರೇಶನ್ ಅಕ್ಕಿ ಉಣ್ಣುತ್ತಾರೆ ಎನ್ನುವ ಸತ್ಯವನ್ನು ಬಿಚ್ಚಿಟ್ಟರವರು. ಯಾಕೆ ದೊಡಗ್ಯಾವನ್ನು ಉಣ್ಣುವುದಿಲ್ಲ ಎಂಬ ಪ್ರಶ್ನೆಗೆ, ಬಿಳೀ ರೇಶನ್ ಅಕ್ಕಿ ಉಂಡು ಉಂಡು ಮೈಯುಂಡೋಗಿದೆ, ದೊಡಗ್ಯಾವನ್ನು ಕರಗಿಸಿಕೊಳ್ಳೋ ತಾಕತ್ತೇ ನಮಗಿಲ್ಲ ಎನ್ನಬೇಕೆ? ದುಡಿಯುವ ರೈತರಿಗೇ ಉಂಡಿದ್ದನ್ನು ಅರಗಿಸಿಕೊಳ್ಳುವ ತಾಕತ್ತಿಲ್ಲವೆಂದರೆ ಇನ್ಯಾರಿಗಿದೆ ಆ ತಾಕತ್ತು? ಒಂದು ಬಟ್ಟಲು ತುಂಬ ಅನ್ನ ಉಂಡರೆ ಸಂಜೆ ತನಕ ಹಸಿವೆಯಾಗೋದಿಲ್ಲ. ಮೈಮುರಿ ಕೆಲಸ ಮಾಡಬೇಕು ಅಂದಾಗಲೇ ಉಂಡಿದ್ದು ಕರಗುತ್ತದೆ. ಎನ್ನುವ ಆ ರೈತನ ಮಾತಿನಲ್ಲಿ ನಮ್ಮ ಆಹಾರ ಪದ್ಧತಿಯಲ್ಲಿ ಅದೆಷ್ಟು ಬದಲಾವಣೆ ಆಗಿಹೋಗಿದೆ ಎನ್ನುವ ವಾಸ್ತವಾಂಶವಿತ್ತು.

Eedina App

ಸತ್ವಯುತ ಆಹಾರವನ್ನು ಅರಗಿಸಿಕೊಳ್ಳುವ ತಾಕತ್ತೂ ನಮಗಿಲ್ಲ, ಪೌಷ್ಟಿಕಾಂಶ ಭರಿತ ಆಹಾರದ ಖರೀದಿ ಸಾಮರ್ಥ್ಯ ಕೂಡ ನಮಗಿಲ್ಲ. ದೇಶದ ಶೇಕಡ 71ರಷ್ಟು ಜನರಿಗೆ ಆರೋಗ್ಯಕರ ಆಹಾರವನ್ನು ಖರೀದಿಸುವ ಶಕ್ತಿಯೇ ಇಲ್ಲ. ವಿಜ್ಞಾನ ಮತ್ತು ಪರಿಸರ ಕೇಂದ್ರದಿಂದ ಇತ್ತೀಚೆಗೆ ಬಿಡುಗಡೆಗೊಂಡ ‘ಭಾರತದ ಪರಿಸರ 2022’ ವರದಿಯ ಪ್ರಕಾರ, ನಮ್ಮ ದೇಶದಲ್ಲಿ ಶೇಕಡ 71ರಷ್ಟು ಜನರಿಗೆ ಪೌಷ್ಟಿಕಾಂಶವುಳ್ಳ ಆಹಾರ ಖರೀದಿಸುವ ಸಾಮರ್ಥ್ಯ ಇಲ್ಲ.

Ration
ಸಾಂದರ್ಭಿಕ ಚಿತ್ರ

ಸರ್ಕಾರವು ಪಡಿತರದಲ್ಲಿ ಕೊಡುವ ಅತಿಯಾಗಿ ಪಾಲಿಷ್ ಮಾಡಿದ ಅಕ್ಕಿ ಮತ್ತು ಗೋಧಿಯೇ ಅತಿ ಹೆಚ್ಚಿನ ಕುಟುಂಬಗಳ ನಿತ್ಯದ ಊಟ. ಅದನ್ನೇ ತಿಂದೂ ತಿಂದೂ ಜನರಿಗೂ ಪೌಷ್ಟಿಕ ಆಹಾರವೊಂದು ಆದ್ಯತೆಯಾಗಿ ಕಾಣುತ್ತಿಲ್ಲ.  ಪೌಷ್ಟಿಕ ಆಹಾರ ಕೊಡುವತ್ತ ಸರ್ಕಾರಕ್ಕೂ ಗಮನವಿಲ್ಲ. ತರಕಾರಿಗಳು, ಹಣ್ಣು, ಎಣ್ಣೆಕಾಳು ಮತ್ತು ಬೇಳೆ ಬಹುತೇಕ ಜನರ ಊಟದ ತಾಟಿನಲ್ಲಿ ಇಲ್ಲ. ತನ್ನ ದುಡಿತದ ಶೇಕಡ 63ಕ್ಕಿಂತ ಹೆಚ್ಚು ಹಣ ಆಹಾರ ಖರೀದಿಗೇ ಹೋಗುವಂತಾದಾಗ ಅದು ಆ ವ್ಯಕ್ತಿಯ ಅಪೌಷ್ಟಿಕತೆಗೆ ಕಾರಣವಾಗುತ್ತದೆ ಎನ್ನುತ್ತದೆ ಈ ವರದಿ.

AV Eye Hospital ad

ನಮ್ಮ ದೇಶದಲ್ಲಿ 20ಕ್ಕೆ ಮೇಲ್ಪಟ್ಟ ವಯಸ್ಸಿನವರು ದಿನಕ್ಕೆ 200 ಗ್ರಾಂನಷ್ಟು ಹಣ್ಣು ಸೇವಿಸಲೇಬೇಕಾಗಿದ್ದು, ಕೇವಲ 36 ಗ್ರಾಂ. ಸೇವಿಸುತ್ತಾರೆ. 300 ಗ್ರಾಂ. ತರಕಾರಿ ಸೇವನೆ ಇರಬೇಕಾದಲ್ಲಿ 169 ಗ್ರಾಂ. ಅಂದರೆ ಸುಮಾರು ಅರ್ಧದಷ್ಟು ಮಾತ್ರ ಇರುತ್ತದೆ. ಇನ್ನು ಬೇಳೆಕಾಳು ಮತ್ತು ಎಣ್ಣೆಕಾಳನ್ನಂತೂ ಸೇವಿಸಬೇಕಾದ ಪ್ರಮಾಣದ ಶೇಕಡ 25, ಶೇಕಡ 13ರಷ್ಟನ್ನೇ ತಿನ್ನುತ್ತಿದ್ದಾರೆಂದರೆ ಯಾವ ಪ್ರಮಾಣದ ಕೊರತೆಯಿದೆ ಎನ್ನುವುದು ಅರ್ಥವಾಗಬಹುದು. ಕೊರತೆಯ ಈ ಕಂದರದ ಬಗ್ಗೆ ಆದಷ್ಟು ಬೇಗನೆ ಅರ್ಥಮಾಡಿಕೊಂಡು ಅದನ್ನು ತುಂಬದೇ ಹೋದಲ್ಲಿ ಬಹುದೊಡ್ಡ ಬೆಲೆಯನ್ನು ಅತಿ ಸನಿಹದಲ್ಲಿಯೇ ತೆರಬೇಕಾದೀತೆಂದು ಈ ವರದಿಯು ಎಚ್ಚರಿಸುತ್ತದೆ.

ಕಳೆದ ವರ್ಷ ದಿನಬಳಕೆಯ ವಸ್ತುಗಳ ಬೆಲೆ ಶೇಕಡ 81ರಷ್ಟು ಏರಿದರೆ, ದಿನಬಳಕೆಯ ಆಹಾರ ವಸ್ತುಗಳ ಬೆಲೆ ಶೇಕಡ 372ರಷ್ಟು ಮೇಲೇರಿತು. ಅಂದರೆ ಆಹಾರ ವಸ್ತುಗಳದ್ದೇ ಅತಿ ಹೆಚ್ಚಿನ ಬೆಲೆ ಏರಿಕೆ. ಬೆಳೆ ತೆಗೆಯುವುದರ ವೆಚ್ಚ ಹೆಚ್ಚಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಧಾನ್ಯಗಳ ಬೆಲೆ ಏರಿಕೆ ಮತ್ತು ಪ್ರಕೃತಿ ವಿಕೋಪದಿಂದಾಗಿ ಬೆಳೆಗಳ ನಾಶವು ಆಹಾರ ವಸ್ತುಗಳ ಬೆಲೆ ಏರಿಕೆಗೆ ಮುಖ್ಯ ಕಾರಣವಾಗುತ್ತದೆ. ಬೆಳೆ ತೆಗೆಯಲು ಹೆಚ್ಚಿದ ಬೆಲೆ ಮತ್ತು ಬೆಳೆನಾಶ ಇವೆರಡಕ್ಕೂ ಅತಿ ಹತ್ತಿರದ ಸಂಬಂಧ. ಅತಿಯಾದ ಮಳೆ, ಗಾಳಿ, ನೆರೆಗಳಿಂದಾಗಿ ರೈತ ಬೆಳೆದುದ್ದೆಲ್ಲ ನಾಶ ಆಗುತ್ತಿರುವುದನ್ನು ನಿತ್ಯ ನೋಡುತ್ತಿದ್ದೇವೆ.

ಇದನ್ನು ಓದಿದ್ದೀರಾ?: 'ಇರೋರಿಗೇ ಮನೆ ಕೊಡೋದು ನೀವೆಲ್ಲ. ನಮ್ಮಂತ ಬಡವರು ಎಲ್ಲಿ ಕಾಣ್ತಾರೆ!'

ಪ್ರಕೃತಿಯ ಮೇಲೆ ಮಾನವನ ದಿನ ನಿತ್ಯದ ಏಟಿಗೆ ಪ್ರಕೃತಿ ಕೊಡುತ್ತಿರುವ ಎದಿರೇಟು ಅದು. ವರ್ಷದಿಂದ ವರ್ಷಕ್ಕೆ ನಮ್ಮ ಆಹಾರೋತ್ಪಾದನೆ ಹೆಚ್ಚುತ್ತಿರುವ ಅಂಕಿ ಸಂಕಿಗಳನ್ನು ನೋಡುತ್ತೇವೆ. ಆಹಾರ ಬೆಳೆಯುವ ಕ್ಷೇತ್ರ ಅದೆಷ್ಟು ಪ್ರಮಾಣದಲ್ಲಿ ಹೆಚ್ಚಾಯಿತು ಎನ್ನುವ ಅಂಕಿಗಳು ಹೊರಬರುವುದು ಕಡಿಮೆ. ಆದರೆ, ಸುತ್ತಮುತ್ತ ನೋಡಿದರೆ ಕೃಷಿ ಕ್ಷೇತ್ರ ಯಾವ ಪ್ರಮಾಣದಲ್ಲಿ ವೃದ್ಧಿಯಾಗುತ್ತಿದೆಯೆಂಬುದು ಗೊತ್ತಾಗುತ್ತದೆ. ಕೌಳಿ, ಕಾರೆ, ಹೊಳೆದಾಸವಾಳ, ಪೊದೆಗಳಿರುತ್ತಿದ್ದ ಜಾಗವೆಲ್ಲ ಸವರಿ ಹೊಲಗಳಾಗುತ್ತಿವೆ. ಗುಡ್ಡ ಗುಡ್ಡಗಳನ್ನೇ ಜೆಸಿಬಿಯಿಂದ ಅಗೆದಗೆದು ಕಬ್ಬು, ತೆಂಗು, ಅಡಿಕೆಯ ತೋಟ ಎಬ್ಬಿಸಲಾಗುತ್ತಿದೆ, ಇಲ್ಲವೇ ಹೊಸ ಮನೆ ಕಟ್ಟಲಾಗುತ್ತಿದೆ. ದಟ್ಟ ಕಾಡಿನೊಳಗೆ ಸಾಗಿ ಹೋಗುವ ನೂರೊಂದು ರಸ್ತೆಗಳು ಕಾಡನ್ನೆಲ್ಲ ಛಿದ್ರ ಛಿದ್ರ ಮಾಡಿಯಾಗಿದೆ.

ಮನುಷ್ಯನ ಈ ಎಲ್ಲ ಪ್ರಹಾರಗಳಿಗೆ ಪ್ರಕೃತಿಯು ಹತ್ತು ಪಟ್ಟು ಜೋರಾಗಿ ಎದಿರೇಟು ಕೊಡುತ್ತದೆ. ಬೆಳೆದುದನ್ನೆಲ್ಲ ನಾಶ ಮಾಡಿ ಹಾಕುತ್ತದೆ. ನಿಸರ್ಗದಲ್ಲಿ ಅಡಗಿದ್ದ ಜೀವಜಂತುಗಳಿಗೆ ವಿಷವುಣ್ಣಿಸಿ ತನಗೆ ಬೇಕಾದುದನ್ನು ಬೆಳೆಯಲು ಮನುಷ್ಯ ಹೊರಟಾಗ ಪ್ರಕೃತಿ ಪ್ರತಿರೋಧಿಸುತ್ತದೆ. ಒಂದಕ್ಕೆ ನಾಲ್ಕರಷ್ಟು ಖರ್ಚು ಮಾಡಿಸುತ್ತದೆ. ನೈಸರ್ಗಿಕ ಮುಚ್ಚಿಗೆ ಮರೆಯಾಗಿ ಮಣ್ಣಿನ ಸವುಕಳಿ ಜಾಸ್ತಿ ಆದಾಗ ಬೆಳೆ ತೆಗೆಯಲು ಒಳದುರಿ ಸುರಿದಷ್ಟೂ ಬೇಕು. ಇದನ್ನೇ ಅಭಿವೃದ್ಧಿ ಎಂದು ಕರೆಯಲಾಗುತ್ತದೆ.

ಈ ಅಭಿವೃದ್ಧಿಯ ಯುಗದಲ್ಲಿ ಜನರಿಗೆ ಆರೋಗ್ಯಪೂರ್ಣವಾದ ಆಹಾರವನ್ನೊದಗಿಸಲು ಇನ್ನೂ ಸಾಧ್ಯವಾಗುತ್ತಿಲ್ಲ. ನಿಸರ್ಗಕ್ಕೆ ಪ್ರಹಾರ ಮಾಡಿ ಹೆಚ್ಚು ಬೆಳೆಯುವ ಧಾವಂತವೇ, ಹೊರತು ಆಹಾರದಲ್ಲಿರಬೇಕಾದ ಪೌಷ್ಟಿಕತೆಯ ಕೊರತೆಯ ಕಡೆಗೆ ಯಾರದ್ದೂ ಲಕ್ಷ್ಯವಿಲ್ಲ. ಸಮುದಾಯ ಭೂಮಿಯಲ್ಲಿ ಹತ್ತು ಹಲವು ಸ್ಥಳೀಯ ಹೂವು ಹಣ್ಣುಗಳಿದ್ದವು. ಗ್ರಾಮದ ಮಕ್ಕಳಿಗೆ ಸುಲಭವಾಗಿ ಸಿಗುತ್ತಿದ್ದ, ಈ ಹಳ್ಳಿ ಹಣ್ಣುಗಳಲ್ಲಿದ್ದ ಪೋಷಕಾಂಶಗಳನ್ನು ಯಾರೂ ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ. ಅವು ಸ್ಥಳೀಯ ಆಹಾರ ಭದ್ರತೆಗೆ ಹಲವು ರೀತಿಯಲ್ಲಿ ತಮ್ಮ ಕೊಡುಗೆ ಕೊಟ್ಟಿದ್ದವು. ಈಗ ಅವೆಲ್ಲ ಮಾಯವಾಗಿವೆ. ಮಾರಾಟದ ವಸ್ತುಗಳಾಗಿವೆ. ಕೌಳಿ, ನೇರಳೆ, ಹಲಸು, ಗೋಡಂಬಿ ಹಣ್ಣುಗಳಿಗೆ ಕಾಸು ಕೊಡಬೇಕು. ಹಣ್ಣಿನಂಗಡಿಗಳಲ್ಲಿ ಸಿಗುವ ಸೇಬು, ಕಿತ್ತಳೆ, ಪುಟ್ಟಿ ಹಣ್ಣುಗಳು ಸ್ಥಳೀಯವೂ ಅಲ್ಲ, ಕಾಲಕ್ಕೆ ಅನುಗುಣವಾಗಿಯೂ ಇಲ್ಲ. ಅಪೌಷ್ಟಿಕತೆಗೆ ಇವೆಲ್ಲವುಗಳ ಕೊಡುಗೆಯನ್ನು ನಾವು ನಿರ್ಲಕ್ಷಿಸಲಾಗದು.

kavali hannu
ಕವಳೆಹಣ್ಣು

ಜನರಲ್ಲಿ, ಮುಖ್ಯವಾಗಿ ಮಕ್ಕಳಲ್ಲಿ ಕಬ್ಬಿಣಾಂಶದ ಕೊರತೆ ಇದೆಯೆಂದು ಸರಕಾರವು ಅಕ್ಕಿಯಲ್ಲಿ ಕಬ್ಬಿಣಾಂಶವನ್ನು ಸೇರಿಸಹೊರಟಿದೆ. ಬೃಹತ್ ಉದ್ಯಮವದು. ಚೀನಾದಿಂದ ದೊಡ್ಡ ಪ್ರಮಾಣದಲ್ಲಿ ಯಂತ್ರಗಳು ಬರಬೇಕು. ಈಗಾಗಲೇ ಒಡಿಶಾದಲ್ಲಿ ತೀವ್ರ ಪ್ರತಿರೋಧದ ನಡುವೆಯೂ ಪ್ರಯೋಗಾತ್ಮಕವಾಗಿ ಅಕ್ಕಿಯಲ್ಲಿ ಕಬ್ಬಿಣಾಂಶ ಸೇರಿಸಿ ಕಪ್ಪು ಬಣ್ಣದ ಅಕ್ಕಿಕಾಳನ್ನು ಮಿಶ್ರ ಮಾಡಿ ರೇಶನ್ ಕೊಡಲಾಗುತ್ತಿದೆ. 2024ರ ವೇಳೆಗೆ ದೇಶದ ಎಲ್ಲೆಡೆ ಪಡಿತರ, ಮಧ್ಯಾಹ್ನದ ಬಿಸಿಯೂಟ, ಅಂಗನವಾಡಿ ಆಹಾರವೆಲ್ಲದರಲ್ಲೂ ಕಬ್ಬಿಣಾಂಶ, ಫೋಲಿಕ್ ಆಮ್ಲ, ವಿಟಮಿನ್ ಬಿ 12ನ್ನು ಸೇರಿಸಿಯೇ ತಿನ್ನಿಸಿ ಮಹಿಳೆ ಮತ್ತು ಮಕ್ಕಳೆಲ್ಲರ ರಕ್ತಹೀನತೆಯನ್ನು ಕಡಿಮೆ ಮಾಡುವ ಮಹತ್ವಾಕಾಂಕ್ಷಿ ಯೋಜನೆ.

ಸುಲಭವಾಗಿ, ನೈಸರ್ಗಿಕವಾಗಿ ಸಿಗುತ್ತಿದ್ದುದನ್ನು ಕಿತ್ತುಕೊಂಡು ಬೃಹತ್ ಕಂಪನಿ, ಬೃಹತ್ ಯಂತ್ರಗಳ ಮೂಲಕ ಪೌಷ್ಟಿಕತೆಯನ್ನು ಮಿಶ್ರ ಮಾಡಿಕೊಡುವುದೇ ಕ್ರೂರ ಹಾಸ್ಯ. ಈಗ ಪಡಿತರದಲ್ಲಿ ಕೊಡುವ ಅಕ್ಕಿಯನ್ನು ಪಾಲಿಷ್ ಮಾಡದೆ ಕೊಟ್ಟರೂ ಸಾಕಿತ್ತು. ಗುಣಮಟ್ಟದ ಬೇಳೆ ಮತ್ತು ಕಾಳುಗಳನ್ನು ಕೊಟ್ಟರೂ ಸಾಕಿತ್ತು. ರಾಗಿ ಮತ್ತು ಜೋಳವನ್ನು, ಸಿರಿಧಾನ್ಯಗಳನ್ನು ಕೊಟ್ಟಿದ್ದರೂ ಬೇಕಾದಷ್ಟಾಗುತ್ತಿತ್ತು. ಊಹೂಂ, ಸರ್ಕಾರಕ್ಕೆ ಇವ್ಯಾವವೂ ರುಚಿಸಿಲ್ಲ. ಯಾಕೆಂದರೆ, ಅದರಲ್ಲಿ ಸಾಮಾನ್ಯ ರೈತರ ಏಳಿಗೆಯೂ ಆಗಿಬಿಡುತ್ತಿತ್ತು. ದೊಡ್ಡ ದೊಡ್ಡ ಕಂಪನಿಗಳ ಉದ್ದಾರ ಇಲ್ಲ ಅದರಲ್ಲಿ. ತಮಾಷೆಯೆಂದರೆ ಕಬ್ಬಿಣಾಂಶ ಬೆರೆತ ಅಕ್ಕಿ ಕಾಳು ಕಪ್ಪು ಕಾಳಾಗುತ್ತದೆ. ಸಾಮಾನ್ಯ ಅಕ್ಕಿಯೊಂದಿಗೆ ಅದನ್ನು ಮಿಶ್ರ ಮಾಡಲಾಗುತ್ತದೆ. ಅಡಿಗೆಗೆ ಅಕ್ಕಿ ಸ್ವಚ್ಛ ಮಾಡಿಕೊಳ್ಳುವಾಗ ಹೆಣ್ಣುಮಕ್ಕಳು ಆ ಕಪ್ಪು ಕಾಳನ್ನು ಕಲ್ಲಿನ ಕಣವೆಂದು ಎತ್ತಿ ಬಿಸಾಕುವ ಸಾಧ್ಯತೆ ಬಹಳವಿದೆ. ಸರ್ಕಾರ ಖರ್ಚು ಮಾಡಿದ ಹೆಚ್ಚುವರಿ 2700 ಕೋಟಿ ರೂ. ಕಸದೊಳಗೆ ಹೋಗುವ ಸಂಭವವೇ ಹೆಚ್ಚು.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app