ಹಳ್ಳಿ ಹಾದಿ | ಗ್ರಾಮೀಣರ ಘನತೆಯ ಬದುಕಿಗೆ ಕೊಳ್ಳಿ ಇಟ್ಟ ಉದ್ಯೋಗ ಖಾತರಿ ಡಿಜಿಟಲೀಕರಣ

ಮಹಿಳೆಯರಿದ್ದಲ್ಲಿ ಅಂಜದೆ ಭ್ರಷ್ಟಾಚಾರವನ್ನು ಪ್ರಶ್ನೆ ಮಾಡುತ್ತಾರೆ. ಮಹಿಳೆಯರಿದ್ದಲ್ಲಿ ದುಡಿದು ಗಳಿಸಿದ ಹಣ ಹೆಂಡದಂಗಡಿಯ ದಾರಿ ಹಿಡಿಯುವುದು ತಪ್ಪಿ, ಕುಟುಂಬದ ಆಹಾರ ಮತ್ತು ಮಕ್ಕಳ ಶಿಕ್ಷಣಕ್ಕೆ ಖರ್ಚಾಗುತ್ತದೆ. ಮಹಿಳೆಯರ ಈ ಗುಣವೇ ಅವರಿಗೆ ಶತ್ರುವಾಯಿತೇ? ಉದ್ಯೋಗ ಖಾತರಿಯಿಂದ ಮಹಿಳೆಯರನ್ನು ದೂರ ಇಡಲು ಮಾಡಿರುವ ತಂತ್ರವೇ ಇದು?

ಗೀತಾ, ಹುಕ್ಕೇರಿ ತಾಲೂಕಿನ ಹಳ್ಳಿಯೊಂದರಲ್ಲಿ ಸುಮಾರು ಐದು ವರ್ಷಗಳಿಂದ ಉದ್ಯೋಗ ಖಾತರಿಯಲ್ಲಿ ಗುಂಪೊಂದರ 'ಕಾಯಕ ಬಂಧು'ವಾಗಿ (ಮೇಟ್) ಕೆಲಸ ಮಾಡುತ್ತಿರುವವಳು. ಇತ್ತೀಚೆಗೆ 'ಕಾಯಕ ಬಂಧು'ಗಳೆಲ್ಲ ಸ್ಮಾರ್ಟ್‍ಫೋನ್‍ನ್ನೇ ಬಳಸಿ ಹಾಜರಿಗಳನ್ನು ಹಾಕಬೇಕೆಂದು ಪದೇಪದೆ ಪಂಚಾಯತಿಯವರು ಹೇಳುತ್ತಿರುವುದರಿಂದ ಬೇರೆ ದಾರಿ ಕಾಣದೆ ತನ್ನ ಬೆಂಡೋಲೆಗಳನ್ನೇ ಅಡವಿಟ್ಟು ಹಣ ತಂದು ಸ್ಮಾರ್ಟ್‍ಫೋನ್ ಖರೀದಿಸಿದ್ದಾಳೆ. ಇನ್ನೂ ಫೋಟೊ ಮತ್ತು ಹಾಜರಾತಿಯನ್ನು ಅಪ್‍ಲೋಡ್ ಮಾಡುವುದನ್ನು ಕಲಿಯಲಿಕ್ಕಿದೆ. ಅವರದೇ ಗೆಳತಿಯರು ಮೇಟ್ ಕೆಲಸವೇ ಬೇಡವೆಂದು ಮನೆಗೆ ಹೋಗಿದ್ದಾರೆ.

ಪಾರದರ್ಶಕತೆಯ ಹೆಸರಿನಲ್ಲಿ ಉದ್ಯೋಗ ಖಾತರಿಯ ಡಿಜಿಟಲೀಕರಣವು ಬಲು ವೇಗವಾಗಿ ಆಗುತ್ತಿದೆ. ಪರಿಣಾಮವಾಗಿ ಪಾರದರ್ಶಕತೆ ಬರುವ ಬದಲಿಗೆ ಗ್ರಾಮೀಣ ಜನರ ಕೈಯಿಂದ ಉದ್ಯೋಗವು ಜಾರಿಹೋಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಈ ಹಿಂದೆ ಹದಿನೈದು ದಿನಗಳಲ್ಲಿ ಸ್ಥಳೀಯವಾಗಿ ಆಗುತ್ತಿದ್ದ ಕೂಲಿ ಪಾವತಿಯು, ವರ್ಷದಿಂದ ವರ್ಷಕ್ಕೆ ಯಾವಾಗ ಬರುತ್ತದೆಂಬ ಭರವಸೆಯೇ ಇಲ್ಲದಾಗಿದೆ. ಆಧಾರ್ ಜೋಡಣೆಯ ಕಾರಣದಿಂದ ಸರಳ ಆಗಬೇಕಾಗಿದ್ದ ಕೂಲಿ ಪಾವತಿ ಹೆಚ್ಚೆಚ್ಚು ಜಟಿಲವಾಗಿ ಗೊಂದಲಮಯವಾಗಿದೆ. ಒಂದು ಬಾರಿ ಕೆಲಸ ಮಾಡಿದ ಕೂಲಿಕಾರರಿಗೆ ಮತ್ತೊಂದು ಬಾರಿ ಕೆಲಸ ಸಿಗದಂತಾಗಿದೆ. ಡಿಜಿಟಲೀಕರಣವು ಕಂಪ್ಯೂಟರ್ ಆಪರೇಟರ್‌ಗೆ ಹೆಚ್ಚಿನ ಅಧಿಕಾರವನ್ನು ತಂದುಕೊಟ್ಟಿತೇ ಹೊರತು ಜನರಿಗೆ ಕೆಲಸ ಸಿಗುವಂತೆ, ಸಕಾಲಕ್ಕೆ ಕೂಲಿ ಪಾವತಿ ಆಗುವಂತೆ ಆಗಲಿಲ್ಲ. ಕೆಲಸ ಕೊಡದಿದ್ದರೆ ನಿರುದ್ಯೋಗ ಪಾವತಿ, ಕೂಲಿ ಸಿಗದಿದ್ದರೆ ವಿಳಂಬ ಕೂಲಿಗೆ ದಂಡ ಇವೆಲ್ಲ ಹಿಂದೆ ಸಲೀಸಾಗಿ ಬರುತ್ತಿದ್ದುದು ಇಂದು ಜನರಿಗೆ ಸಿಗದೆ ವಂಚನೆಯಾಗುತ್ತಿದೆ. ಈ ದಿಶೆಯಲ್ಲಿ ಓಂಬುಡ್ಸ್‌ಮನ್ ಮಾಡಿದ ಆದೇಶದ ಪಾಲನೆಯೂ ಆಗುತ್ತಿಲ್ಲ.

ಉದ್ಯೋಗ ಖಾತರಿ ಯೋಜನೆ ಹಿನ್ನೆಲೆಯಲ್ಲಿ ಕೂಲಿ ಕುರಿತು ಕಾನೂನು ಬಂದು ಹದಿನೇಳು ವರ್ಷಗಳಾಗಿದ್ದರೂ ಇಂದಿಗೂ ಗ್ರಾಮೀಣ ಜನರಿಗೆ ಆ ಕಾನೂನಿನ ಬಗ್ಗೆ ಮಾಹಿತಿಯೇ ಇಲ್ಲದಿರುವುದು ಅತಿ ಖೇದಕರ. ನಾಗರಿಕರ ಬದುಕುವ ಹಕ್ಕಿನ ಪ್ರಶ್ನೆ ಇದು. ಸಂಖ್ಯೆಯೊಂದು ಮನುಷ್ಯಳನ್ನೇ ನೀನು ನೀನಲ್ಲ ಎನ್ನುವುದಿದೆಯಲ್ಲ, ಅದು ಮನುಷ್ಯ ಗೌರವವನ್ನೇ ಪ್ರಶ್ನೆ ಮಾಡುವಂತಹುದು. ದೇಶ ಮಟ್ಟದಲ್ಲಿ ಡಿಜಿಟಲೀಕರಣಕ್ಕಿಂತ ಗ್ರಾಮೀಣ ಮಟ್ಟದಲ್ಲಿ ಜನರಿಗೆ ಉದ್ಯೋಗ ಖಾತರಿಯ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡುವತ್ತ ಹೆಚ್ಚು ಪ್ರಯತ್ನವನ್ನು ಹಾಕಿದ್ದರೆ, ಹೆಚ್ಚೆಚ್ಚು ಕೂಲಿಕಾರ ಕುಟುಂಬಗಳಿಗೆ ನ್ಯಾಯಯುತವಾಗಿ ಉದ್ಯೋಗ ಪಡೆಯಲು ಸಹಾಯವಾಗುತ್ತಿತ್ತು.  

ಬೆಳಗಾವಿಯ ಹುಕ್ಕೇರಿ ತಾಲೂಕಿನ ಒಂದು ಪಂಚಾಯಿತಿಯಲ್ಲಿ ಒಂಬತ್ತು ಗ್ರಾಮಗಳಿವೆ. ಒಂದು ಗ್ರಾಮದವರು ಅರ್ಜಿ ಕೊಟ್ಟು ಕೆಲಸ ಪಡೆದರೆ ಮತ್ತೆ ಅವರು ಕೆಲಸ ಪಡೆಯಲು ಉಳಿದೆಲ್ಲ ಗ್ರಾಮಗಳ ಜನರಿಗೆ ಒಂದೊಂದು ವಾರದ ಕೆಲಸ ಮುಗಿಯುವವರೆಗೆ ಕಾಯಬೇಕು! ವಿಜಯಪುರದ ಇಂಡಿ ತಾಲೂಕಿನಲ್ಲಿ ಕೊರೊನಾ ಕಾಲದಲ್ಲಿ ಸಾವಿರಾರು ಜನರು ದೂರ ಉದ್ಯೋಗ ತೊರೆದು ಮರುವಲಸೆ ಆದಾಗ, ತಿಂದುಣ್ಣಲು ಏನೂ ಸಿಗದಿದ್ದಾಗ ಒಬ್ಬ ದಿಟ್ಟ ಯುವತಿ ಆ ಜನರನ್ನು ಒಟ್ಟಿಗೇ ಪಂಚಾಯತಿಗೆ ಕರೆದೊಯ್ದು, ಉದ್ಯೋಗ ಕೊಡಿರೆಂದು ಕೇಳಿದಳು. ಯಾರ ಬಳಿಯೂ ಜಾಬ್ ಕಾರ್ಡ್ ಕೂಡ ಇರಲಿಲ್ಲ. ಸಾಕಷ್ಟು ಕಷ್ಟಪಟ್ಟಾಗ ಜಾಬ್ ಕಾರ್ಡುಗಳು ಸಿಕ್ಕವು, ಕೆಲಸವೂ ಸಿಕ್ಕಿತು. ಆದರೆ, ಎಂತಹ ಕೆಲಸ? ಗಟರು ಸ್ವಚ್ಛ ಮಾಡುವುದು, ಕಸ ಬಳಿಯುವುದು ಇಂತಹ ಕೆಲಸ. ಸ್ವಚ್ಛತಾ ಕಾರ್ಯಕ್ರಮಕ್ಕೆ ಬೇರೆಯೇ ಅನುದಾನ, ನಿಧಿ ಇರುವಾಗ ಉದ್ಯೋಗ ಖಾತರಿಯಲ್ಲಿ ಪಂಚಾಯತಿಯು ಈ ಕೆಲಸ ಕೊಟ್ಟಿದ್ದು ಹೇಗೆ?

Image
ಸಾಂದರ್ಭಿಕ ಚಿತ್ರ

ಯಾದಗಿರಿ ಜಿಲ್ಲೆಯ ಪಂಚಾಯತಿಗಳಲ್ಲಿ ಇಂದಿಗೂ ಕೆಲಸ ಕೇಳಿ ಬಂದವರಿಗೆ ಜಾಬ್‍ ಕಾರ್ಡ್ ಕೊಡದಿರುವುದು, ನಮ್ಮಲ್ಲಿ ಕೆಲಸವೇ ಇಲ್ಲವೆಂದು ಹೇಳಿ ಹಿಂದಕ್ಕೆ ಕಳಿಸುವುದು ನಡೆದೇ ಇದೆ. ತುಮಕೂರು ಜಿಲ್ಲೆಯಲ್ಲಿ ಹತ್ತು ಲಕ್ಷದ ಕೆಲಸವಿದೆ ಬನ್ನಿ ಎಂದು ಜನರನ್ನು ಒಮ್ಮೆ ಕರೆಯುತ್ತಾರೆ, ಕೆಲಸ ಕೊಡುತ್ತಾರೆ, ಕೂಲಿ ಪಾವತಿಯೂ ಆಗುತ್ತದೆ. ಜನ ಕೆಲಸ ಮುಂದುವರಿಸಬಯಸಿದರೆ, ಈಗೇನೂ ಕೆಲಸ ಇಲ್ಲ ಹೋಗಿ ಎಂದು ಕಳಿಸಿಬಿಡುತ್ತಾರೆ. ಇವೆಲ್ಲ ಸಾಧ್ಯವಾಗುವುದು ಜನರಿಗೆ ಕಾನೂನಿನ ಮಾಹಿತಿ ಇಲ್ಲದಿರುವಾಗ ಮಾತ್ರ. ಉದ್ಯೋಗ ಖಾತರಿಯೆಂಬುದು ಒಂದು ಕಾನೂನಾಗಿ ನಮಗೆ ಸಿಕ್ಕಿದೆ, ನಾವು ಕೆಲಸ ಕೇಳಿದಾಗ ಕೆಲಸ ಕೊಡುವುದು ಪಂಚಾಯತಿಯ ಆದ್ಯ ಕರ್ತವ್ಯ ಎಂಬುದು ಪ್ರತಿಯೊಬ್ಬ ಕೂಲಿಕಾರಳಿಗೂ ಗೊತ್ತಿರಬೇಕು. ಆದರೆ, ಮಾಹಿತಿ ಹಂಚಿಕೆಯು ಸರಕಾರದಿಂದ ಆಗಿಯೇ ಇಲ್ಲ. ಕೆಲಸ ಕೊಡದಿದ್ದರೆ ನಿರುದ್ಯೋಗ ಭತ್ಯೆ, ಕೂಲಿ ಪಾವತಿ ಆಗದಿದ್ದರೆ ವಿಳಂಬ ಪಾವತಿಯ ದಂಡ ಮುಂತಾದ ಗಟ್ಟಿ ಅಂಶಗಳಿಗೆ ನೀರು ಬೆರೆಸಿ ತೆಳ್ಳಗೆ ಮಾಡಿದ್ದರ ಪರಿಣಾಮದಿಂದ ಅಧಿಕಾರಿಗಳು ಕೆಲಸ ಕೊಡದಿರಲೂ ಅಂಜುವುದಿಲ್ಲ, ಕೂಲಿ ಪಾವತಿಗೂ ಮುಂದಾಗುವುದಿಲ್ಲ. ಕಾನೂನು ಪಾಲನೆ ಮಾಡದಿದ್ದರೆ ಅವರ ಕೂದಲೂ ಕೊಂಕುವುದಿಲ್ಲ. ಆರಂಭದ ವರ್ಷಗಳಲ್ಲಿ ಲಕ್ಷಗಟ್ಟಲೆ ರೂಪಾಯಿಗಳ ನಿರುದ್ಯೋಗ ಭತ್ಯೆ ಕೊಟ್ಟ ಪಿಡಿಒಗಳು ಇಂದು ನಿರ್ಭಯರಾಗಿದ್ದಾರೆ.

ಗ್ರಾಮಸಭೆಗಳಲ್ಲಿಯೇ ಕಾಮಗಾರಿಗಳ ನಿರ್ಧಾರ ಆಗಬೇಕು ಎನ್ನುವ ಕಾನೂನಿನ ಅಂಶ ಪ್ರಜಾಪ್ರಭುತ್ವದ ಮೂಲ ಆಶಯವನ್ನು ಎತ್ತಿಹಿಡಿಯುತ್ತದೆ. ಕೂಲಿಯಾಗಿ ತಾನು ಮಾಡುವ ಕಾಮಗಾರಿ ಯಾವುದೆಂದು ಪ್ರಭುಗಳಾಗಿ ಜನರೇ ನಿರ್ಧರಿಸಬೇಕು. ಆದರೆ, ಅಧಿಕಾರಿ ವರ್ಗ ಸಂವಿಧಾನದ ಈ ಆಶಯವನ್ನು ಚಿಂದಿ-ಚಿಂದಿ ಮಾಡಿಹಾಕಿದೆ. ಕೂಲಿಕಾರರು ಕೇಳಿದ ಯಾವೊಂದು ಕಾಮಗಾರಿಯೂ ಅವರ ಕಾಮಗಾರಿ ಪಟ್ಟಿಯಲ್ಲಿ ಬರುವುದಿಲ್ಲ. ಹಿಂಡಲಗಿಯಲ್ಲಿ ಏನು ಕೆಲಸ ಆಗಬೇಕೆಂದು ಬೆಂಗಳೂರಿನ ಪ್ರಭುಗಳು ನಿರ್ಧರಿಸುತ್ತಾರೆ. ಹಿಂಡಲಗಿ ಎಲ್ಲಿದೆ ಗೊತ್ತೇ?

ಗ್ರಾಮಸಭೆಗಳು ಎಲ್ಲಿ, ಯಾವಾಗ ಆಗುತ್ತವೆಂದು ಯಾವೊಬ್ಬ ಪ್ರಜೆಗೂ ಗೊತ್ತಿರದ ಪರಿಸ್ಥಿತಿ ಇಂದು. ಗ್ರಾಮ್ ಸ್ವರಾಜ್ ಕಾನೂನಿನ ಆಶಯಗಳನ್ನೆಲ್ಲ ಪ್ರಭುತ್ವವು ಗಾಳಿಗೆ ತೂರಿಬಿಟ್ಟಿದೆ. "ಕಲಬುರಗಿ ಜಿಲ್ಲೆಯಲ್ಲಿ ಕೂಲಿಕಾರರಿಗೆ ಅರ್ಜಿ ಕೊಟ್ಟಿದ್ದಕ್ಕೆ ಸರಿಯಾಗಿ ಕೆಲಸ ಸಿಗುತ್ತಿದ್ದುದು ಇಂದು ಎಲ್ಲ ಕಾಮಗಾರಿಗಳನ್ನೂ ಪಂಚಾಯತಿ ಪ್ರತಿನಿಧಿಗಳು ಹಂಚಿಕೊಂಡು, ಜನರ ಗುಂಪುಗಳು ಕೇಳಿದಾಗ ಎಂದೂ ಕೆಲಸ ಸಿಗುವುದಿಲ್ಲ," ಎಂದು ಅತ್ಯಂತ ವಿಷಾದದಿಂದ ಹೇಳುತ್ತಾರೆ 'ಜನವಾದಿ ಸಂಘಟನೆ'ಯ ಕೆ ನೀಲಾ. ಕಳೆದ ಪಂಚಾಯತಿ ಚುನಾವಣೆಯ ನಂತರ ಸ್ಥಿರಗೊಂಡ ಪದ್ಧತಿ ಇದು.

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ನಾಚಬೇಡಿ ಹೆಣ್ತನಕೆ, ತಲೆಯೆತ್ತಿ ನಿಲ್ಲಿರಿ: ವಿಜಯಾ ದಬ್ಬೆ

ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಡಿಜಿಟಲೀಕರಣ ಮಾಡುತ್ತಿರುವ ಸರ್ಕಾರದ ಪ್ರಯತ್ನದಲ್ಲಿ ಇತ್ತೀಚೆಗೆ ಸೇರಿದ್ದು - ಎಲ್ಲ ಕಾಯಕ ಬಂಧುಗಳೂ ಸ್ಮಾರ್ಟ್‍ಫೋನ್ ಹೊಂದಿರಬೇಕು, ಕೆಲಸಕ್ಕೆ ಹಾಜರಾಗಿರುವ ಕೂಲಿಕಾರರ ಫೋಟೊಗಳನ್ನು ನಿಯಮಿತವಾಗಿ ಹೇಳಿದ ಸಮಯದಲ್ಲಿಯೇ ಅಪ್‍ಲೋಡ್ ಮಾಡಬೇಕು, ಎನ್‌.ಎಂ.ಆರ್ ಅನ್ನು ಫೋನ್ ಮೂಲಕವೇ ತುಂಬಿ ಕಳಿಸಬೇಕು ಎನ್ನುವುದು. ಈ ಆದೇಶವಂತೂ ಅನೇಕ ವರ್ಷಗಳಿಂದ ಜನರ ಗುಂಪುಗಳಿಗೆ ಮುಂದಾಳುಗಳಾಗಿ ಅತ್ಯುತ್ತಮವಾಗಿ ಉದ್ಯೋಗ ಖಾತರಿಯನ್ನು ಜಾರಿಯಲ್ಲಿ ತಂದಿರುವ ಅರೆಶಿಕ್ಷಿತ ಮಹಿಳೆಯರಿಗೆ ಬಲು ದೊಡ್ಡ ಪೆಟ್ಟನ್ನೇ ಕೊಟ್ಟಿದೆ. ವಲಸೆ ಹೋಗುತ್ತಿದ್ದ ಮಹಿಳೆಯರನ್ನು ತಡೆದು ನಿಲ್ಲಿಸಿದ್ದು ಉದ್ಯೋಗ ಖಾತರಿ. ಮುಂದಾಳತ್ವದ ಗುಣವಿರುವ ಮಹಿಳೆಯರು ಕೂಲಿಕಾರರನ್ನು ಸಂಘಟಿಸಿ ಊರಲ್ಲೇ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಹಾಗೆಂದು ಅವರ ಬಡತನವೇನೂ ಪರಿಹಾರವಾಗಿಲ್ಲ. ಈಗ ಇದೇ ಮಹಿಳೆಯರಿಗೆ ಸ್ಮಾರ್ಟ್‍ಫೋನ್ ಖರೀದಿಸಿ, ಫೋಟೊ, ಹಾಜರಾತಿಗಳನ್ನು ಅಪ್‍ಲೋಡ್ ಮಾಡಿ ಎಂದು ಆದೇಶ ಮಾಡಿದಾಗ ಅವರೆಲ್ಲ ಕಕ್ಕಾಬಿಕ್ಕಿ ಆಗಿದ್ದಾರೆ. ಹೆಚ್ಚಿನ ಮಹಿಳೆಯರು ಬೇರೆಯವರಿಗೆ ತಮ್ಮ ಮುಂದಾಳತ್ವವನ್ನು ಬಿಟ್ಟುಕೊಟ್ಟಿದ್ದಾರೆ.

ಇದು ಅಳತೆಯನ್ನಾಧರಿಸಿದ ಕೆಲಸ. ಅಂದರೆ, ಉದ್ಯೋಗ ಖಾತರಿಯಲ್ಲಿ ನಮೂದಿಸಿದ ಅಳತೆಯ ಕೆಲಸವನ್ನು ಮಾಡಿದರಾಯಿತು. ಆದರೆ, ಈಗ ದಿನಕ್ಕೆರಡು ಬಾರಿ ಫೋಟೊ ತೆಗೆಯುವುದು, ಪಂಚಾಯತಿಯವರು ಬರುವವರೆಗೆ ಸ್ಥಳದಲ್ಲಿಯೇ ಕೂಲಿಗಳು ಇರಬೇಕೆನ್ನುವುದು ಕಾನೂನಿನ ಈ ಅಂಶವನ್ನು ಮುರಿದಂತಾಗಿದೆ. ಇದು ಅಳತೆಯ ಕೆಲಸವೋ? ಹಾಜರಿಯ ಕೆಲಸವೋ? ಫೋಟೊ ಸರಿಯಾಗಿ ಅಪ್‌ಲೋಡ್ ಆಗದಿದ್ದರೆ, ಕೂಲಿಕಾರರ ಆ ದಿನದ ವೇತನ ಕಟ್. ದ್ವನಿ ಎತ್ತಿ ಮಾತನಾಡಲಾಗದ ಜನರು ವಾರಕ್ಕೊಂದೋ, ಎರಡೋ ದಿನಗಳ ಕೂಲಿಯನ್ನು ಕಳೆದುಕೊಂಡೇ ಬಿಡುತ್ತಾರೆ. ಪಾರದರ್ಶಕತೆಯ ಹೆಸರಿನಲ್ಲಿ ಕೂಲಿಕಾರರ ಮೇಲೆ ಅಧಿಕಾರಶಾಹಿಯ, ಮಾಹಿತಿ ಇಲ್ಲದವರ ಮೇಲೆ ಕಂಪ್ಯೂಟರ್ ಬಲ್ಲವರ, ನಾಗರಿಕರ ಘನತೆಯ ಮೇಲೆ ವಂಚನೆಯ ಸವಾರಿ ಇದು.

ಮಹಿಳೆಯರಿದ್ದಲ್ಲಿ ಅಂಜದೆ ಭ್ರಷ್ಟಾಚಾರವನ್ನು ಪ್ರಶ್ನೆ ಮಾಡುತ್ತಾರೆ. ಮಹಿಳೆಯರಿದ್ದಲ್ಲಿ ದುಡಿದು ಗಳಿಸಿದ ಹಣ ಹೆಂಡದಂಗಡಿಯ ದಾರಿ ಹಿಡಿಯದೆ ಪೂರ್ತಿಯಾಗಿ ಮನೆಗೇ ಹೋಗುತ್ತದೆ; ಆ ಹಣ ಕುಟುಂಬದ ಆಹಾರ ಮತ್ತು ಮಕ್ಕಳ ಶಿಕ್ಷಣಕ್ಕೇ ಖರ್ಚಾಗುತ್ತದೆ. ಮಹಿಳೆಯರ ಈ ಗುಣವೇ ಅವರಿಗೆ ಶತ್ರುವಾಯಿತೇ? ಉದ್ಯೋಗ ಖಾತರಿಯಿಂದ ಮಹಿಳೆಯರನ್ನು ಹೊರತೆಗೆಯಲು ಮಾಡಿರುವ ತಂತ್ರವೇ ಇದು?

Image
ಸಾಂದರ್ಭಿಕ ಚಿತ್ರ

ಕೂಲಿಕಾರರು ಅಗೆಯುವ, ತುಂಬುವ ಸಲುವಾಗಿ ಉಪಕರಣಗಳನ್ನು ಮೊದಲಿನಿಂದಲೂ ತಾವೇ ಒಯ್ಯುತ್ತಿದ್ದಾರೆ. ಈ ಸಾಧನಗಳನ್ನು ಹಣಿಸುವುದಕ್ಕಾಗಿ ಹತ್ತು ರೂಪಾಯಿಯನ್ನು ಸರಕಾರವು ಕೊಡುತ್ತಿತ್ತು. ಆದರೆ, ಇತ್ತೀಚೆಗೆ ಗ್ರಾಮೀಣಾಭಿವೃದ್ಧಿಯ ಆಯುಕ್ತಾಲಯದಿಂದ ಪ್ರಕಟಗೊಂಡಿರುವ ಆದೇಶದ ಪ್ರಕಾರ, "ಸಲಕರಣೆ ಹರಿತಗೊಳಿಸಲು ಪಾವತಿಸಲಾಗುತ್ತಿದ್ದ ರೂ. 10/- ವೆಚ್ಚವನ್ನು ರದ್ದುಗೊಳಿಸಲಾಗಿದೆ." ಯಾಕೆ? ಪ್ರಶ್ನೆಗೆ ಉತ್ತರವಿಲ್ಲ.

ಕೊರೋನಾ ಬಂದಾಗಿನಿಂದ ಕೂಲಿಕಾರರ ಆರ್ಥಿಕ ಪರಿಸ್ಥಿತಿಯು ಏನಾಗಿದೆ ಎಂಬುದು, ಮತ್ತು ಆ ವರ್ಷ ಉದ್ಯೋಗ ಖಾತರಿಯೇ ಕೂಲಿಕಾರ ಕುಟುಂಬಗಳನ್ನು ಬದುಕಿಸಿತು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಈಗ ಪರಿಸ್ಥಿತಿಯು ಬಹಳ ಬದಲಾಗಿದೆ. ಕೆಲಸ ಕೇಳಿ ಅರ್ಜಿ ಕೊಟ್ಟರೆ ಅರ್ಜಿಗಳನ್ನು ಸ್ವೀಕರಿಸುವುದೇ ಇಲ್ಲ. ಕೆಲಸ ಸಿಗುವುದಿಲ್ಲ. ನಿರುದ್ಯೋಗ ಭತ್ಯೆಯೂ ಇಲ್ಲ. ಕೆಲಸ ಸಿಕ್ಕರೆ ಕೂಲಿ ಸಿಗುವುದರಲ್ಲಿ ವಿಳಂಬ. ವಿಳಂಬ ಕೂಲಿಗೆ ದಂಡವೂ ಇಲ್ಲ. ಕೆಲವು ಪಂಚಾಯತಿಗಳಲ್ಲಂತೂ ಪಂಚಾಯತಿಯ ಮುಂದೆ ಧರಣಿ ಮಾಡಿಯೇ ಕೆಲಸ ಪಡೆಯಬೇಕು. ಅದೂ ಒಂದು ವಾರ ಮಾತ್ರ. ಇಷ್ಟಾದರೂ ಕೂಡ ಜನರು ಪಂಚಾಯತಿಯಲ್ಲಿ ಸಿಗುವ ಕೆಲಸವನ್ನೇ ನಂಬಿದ್ದಾರೆ. ಮತ್ತೆ-ಮತ್ತೆ ಅರ್ಜಿ ಕೊಡುತ್ತಿದ್ದಾರೆ. ಪಂಚಾಯತಿಯು ಸಲಕರಣೆಗಳನ್ನು ಕೊಡದೆ ಇದ್ದರೂ ತಮ್ಮದೇ ಗುದ್ಲಿ, ಸಲಿಕೆ, ಬುಟ್ಟಿಗಳನ್ನು ಹಿಡಿದು ಕೆಲಸಕ್ಕೆ ಹೊರಡುತ್ತಿದ್ದಾರೆ.

ಕರ್ನಾಟಕದಲ್ಲಿ ಉದ್ಯೋಗ ಖಾತರಿಯನ್ನು ಕಾಡುತ್ತಿರುವ ತೊಡಕುಗಳಿವು. ದೇಶದ ಮಟ್ಟಕ್ಕೆ ಹೋದರೆ ಈ ಸಮಸ್ಯೆಗಳು ನೂರು ಪಟ್ಟು. ಪಶ್ಚಿಮ ಬಂಗಾಳದಲ್ಲಿ ಕಾಮಗಾರಿಯಲ್ಲಿ ಲೋಪವಿದೆಯೆಂದು ನೆವ ಹೇಳಿ ಕೇಂದ್ರ ಸರ್ಕಾರವು ಒಂಬತ್ತು ತಿಂಗಳಿನಿಂದ ಜನರಿಗೆ ಕೆಲಸ ಕೊಡುತ್ತಿಲ್ಲ, ಕೋಟಿಗಟ್ಟಲೆ ಕೂಲಿಯನ್ನು ತಡೆಹಿಡಿದಿದೆ. ಮನವಿ ಹೋರಾಟಗಳೊಂದೂ ಫಲ ಕೊಡುತ್ತಿಲ್ಲ. ಅಲ್ಲಿನ ಮುಖ್ಯಮಂತ್ರಿ ಘರ್ಜಿಸಿದ್ದರ ಪರಿಣಾಮವಾಗಿ ಕಾಮಗಾರಿಗಳನ್ನು ವೀಕ್ಷಿಸಲು ಈಗ ಕೇಂದ್ರ ಸರ್ಕಾರ ತಮ್ಮ ಟೀಮನ್ನು ಕಳಿಸಲು ಒಪ್ಪಿಕೊಂಡಿದೆ. ಬಿಹಾರ, ಒಡಿಶಾ, ಉತ್ತರ ಪ್ರದೇಶ... ಹೀಗೆ ಯಾವ ರಾಜ್ಯಕ್ಕೆ ಹೋಲಿಸಿದರೂ ಕರ್ನಾಟಕವೇ ಮೇಲಂತೆ! ಅಂದರೆ, ಅಲ್ಲಿನ ಪರಿಸ್ಥಿತಿ ಯಾವ ಮಟ್ಟದಲ್ಲಿದೆ - ವಿಚಾರ ಮಾಡಬಹುದು.

ಸಂಸತ್ತಿನ ಅಧಿವೇಶನ ನಡೆದಿದೆ. ಸಂಸದರ, ಮಂತ್ರಿಗಳ ಗಮನ ಸೆಳೆಯಲು ಬೇರೆ-ಬೇರೆ ಸಂಘಟನೆಗಳು ಸಂಸತ್ತಿನ ಮುಂದೆ ಆಗಸ್ಟ್ 2ರಿಂದ ಧರಣಿ ಸತ್ಯಾಗ್ರಹ ಹೂಡಲಿವೆ. ಬೆಲೆ ಏರಿಕೆಯ ಬಗ್ಗೆ ಚರ್ಚೆಗಿಳಿದಿದ್ದಕ್ಕೆ ಸಂಸತ್ತಿನಿಂದಲೇ ಹೊರಹಾಕಲ್ಪಡುತ್ತಿದ್ದಾರೆ ಸಂಸದರು. ಇನ್ನು, ಧರಣಿ ಹೂಡಲಿರುವ ಈ ಪ್ರಜೆಗಳಿಗೇನು ಕಾದಿದೆಯೋ!

ಮುಖ್ಯ ಚಿತ್ರ: ಸಾಂದರ್ಭಿಕ
ನಿಮಗೆ ಏನು ಅನ್ನಿಸ್ತು?
3 ವೋಟ್