ಜಾಗರ | ತೇಜಸ್ವಿಯವರ 'ಅಬಚೂರಿನ ಪೋಸ್ಟಾಫೀಸು' ಮತ್ತು ಬೋಬಣ್ಣನ ದುರಂತ ಕತೆ

Jaagar

ಆ ಹಂಗಾಮಿ ಪೋಸ್ಟಾಫೀಸು ತಾನಾಗಿಯೇ ಬೋಬಣ್ಣನಿಗೆ ಏನೂ ಕೆಡುಕು ಮಾಡಲಿಲ್ಲ. ಆದರೆ, ಬೋಬಣ್ಣನ ಅನಗತ್ಯ ಕುತೂಹಲ ಪ್ರೇರಿತ ತಪ್ಪು ನಡವಳಿಕೆಗಳು, ಅವನ ಅಮಾಯಕತೆ, ಊರವರ ಸಣ್ಣತನಗಳು ಹಾಗೂ ಮುಖ್ಯವಾಗಿ, ಅವನ ಅತ್ತೆ ಮಾಚಮ್ಮನ ಅಸುರಕ್ಷತಾ ಮನೋಭಾವ ಬೋಬಣ್ಣನ ದುರಂತಕ್ಕೆ ಕಾರಣವಾಗುತ್ತವೆ

ಪೂರ್ಣಚಂದ್ರ ತೇಜಸ್ವಿಯವರ ಕಥಾ ಸಂಕಲನದ ಶೀರ್ಷಿಕೆ ಕತೆ ‘ಅಬಚೂರಿನ ಪೋಸ್ಟಾಫೀಸಿನ’ ಮುಖ್ಯ ಪಾತ್ರ ಬೋಬಣ್ಣ. ತಂದೆ-ತಾಯಿ ಇರದ ಬೋಬಣ್ಣ, ತನ್ನಿಬ್ಬರು ಅಣ್ಣಂದಿರ ಜೊತೆ ಇದ್ದವನು. ಮದುವೆಯಾಗಿ ಅತ್ತೆ ಮನೆ ಸೇರಿಕೊಂಡು, ತೋಟದ ರೈಟರನಾಗಿ, ಪೋಸ್ಟ್ ಮಾಸ್ತರನಾಗಿ ಕೊನೆಗೆ ಕತ್ತಲಲ್ಲಿ ಕರಗಿಹೋಗುತ್ತಾನೆ. ಬೋಬಣ್ಣನ ದುರಂತವನ್ನು ಸ್ಥೂಲವಾಗಿ ಹೀಗೆ ಹೇಳಬಹುದು...

Eedina App

ತನ್ನ ಗಂಡನ ಮರಣಾನಂತರ ಏಕಾಂಗಿಯಾಗಿ ದುಡಿದು ಮಗಳು ಕಾವೇರಿಯನ್ನು ಸಾಕಿ ಬೆಳೆಸಿದ್ದ ಮಾಚಮ್ಮನಿಗೆ, ಬೆಳೆದ ಮಗಳಿಗೆ ಮದುವೆ ಮಾಡುವುದಕ್ಕೆ ಇಷ್ಟವಿರಲಿಲ್ಲ. ಕಾರಣವೇನೆಂದರೆ, "ಕಾವೇರಿ ಮದುವೆಯಾದ ನಂತರ ಗಂಡನ ಮಾತನ್ನೇ ಕಟ್ಟಿಕೊಂಡು ಅವನನ್ನೇ ಓಲೈಸುತ್ತ ಬೇರೆ ಹೋದರೆ ಈ ಮುಪ್ಪಿನಲ್ಲಿ ತಾನೇನು ಮಾಡುವುದು?" ಎಂಬ ಅವಳ ಭಯ. ಆದರೆ, ಆಚೀಚಿನವರ ಮಾತಿಗೆ ಹೆದರಿ ಮತ್ತು ಕಾವೇರಿಯೇ ಅಡ್ಡದಾರಿ ಹಿಡಿದರೆ ಎಂದು ಹೆದರಿ, ಆಕೆಗೊಂದು ಗಂಡು ಹುಡುಕತೊಡಗಿದ್ದಳು.

ಬೋಬಣ್ಣನಿಗೆ ತಂದೆ-ತಾಯಿ ಯಾರೂ ಇಲ್ಲದಿದ್ದುದರಿಂದಲೂ, ಅವನು ಮಾಚಮ್ಮನ ಮನೆಗೇ ಬಂದು ಇರಲು ಒಪ್ಪಿದುದರಿಂದಲೂ ಕಾವೇರಿಗೆ ಅನುರೂಪನಾದ ವರನಾಗಿ ಕಂಡಿದ್ದನು. ಮದುವೆ ಮಾಡಿ ಅಳಿಯನನ್ನು ಮನೆಯಲ್ಲೇ ಇರಿಸಿಕೊಂಡಿದ್ದಳು. ಓದಿದ ಹುಡುಗನೆಂದು ತಾನು ಮತ್ತು ತನ್ನ ಮಗಳು ಕೆಲಸ ಮಾಡುತ್ತಿದ್ದ ಎಸ್ಟೇಟ್ ಮಾಲೀಕ ಅಲ್ಲೀಜಾನ್ ಸಾಬರ ಬಳಿ ಕೇಳಿ, ರೈಟರ್ ಕೆಲಸ ಕೊಡಿಸಿದ್ದಳು. ಈ ಪರಿಯಾಗಿ ಸುಮಾರು ಮೂರು-ನಾಲ್ಕು ವರ್ಷಗಳವರೆಗೆ ನೆಮ್ಮದಿಯಿಂದ ಕಾಲ ಹಾಕಿದ್ದ ಬೋಬಣ್ಣ ಬದುಕಿನಲ್ಲಿ, ಅತ್ಯಂತ ಅಸಂತುಷ್ಟನೂ ದುಃಖಿಯೂ ಆಗುವಂಥ ಕೆಲವು ಪ್ರಸಂಗಗಳು ನಡೆಯುತ್ತವೆ.

AV Eye Hospital ad
Jaagara
 ಕಲಾಕೃತಿ ಕೃಪೆ: ಕಿಶೋರ್ ನಾದವಾಡೇಕರ್

ಬೋಬಣ್ಣ ಅಬಚೂರೆಂಬ ಕೊಂಪೆಯಂಥ ಊರಿಗೆ ಪೋಸ್ಟ್ ಮಾಸ್ತರನಾಗುತ್ತಾನೆ. ಹೊಸ ಪೋಸ್ಟ್ ಆಫೀಸು ತೆಗೆದಾಗ, ಆ ಕೊಂಪೆಯಲ್ಲಿ ಇಂಗ್ಲಿಷ್ ಅಕ್ಷರ ಜ್ಞಾನ ಇರುವ ಇನ್ನೊಬ್ಬ ವ್ಯಕ್ತಿ ಇಲ್ಲದಿದ್ದರಿಂದ ಬೋಬಣ್ಣನನ್ನು ಒಪ್ಪಿಸಿ ಮಾಚಮ್ಮನ ಮನೆಯನ್ನೇ ಹಂಗಾಮಿಯಾಗಿ ಪೋಸ್ಟಾಫೀಸು ಮಾಡಲಾಯಿತು. ಅವನು ಪೋಸ್ಟ್ ಮಾಸ್ತರನಾದುದು ಸುತ್ತಮುತ್ತಲ ಜನರಲ್ಲಿ ಒಂದು ಸ್ಥಾನಮಾನ ಗಿಟ್ಟಿಸಿಕೊಟ್ಟಿತು. ಅವನಿಗೆ ತಾನೊಬ್ಬ ದಿಲ್ಲಿಯೊಡನೆ ಸಂಪರ್ಕ ಹೊಂದಿರುವ ಭಾರತದ ಪ್ರಜೆ ಎಂಬ ಹೆಮ್ಮೆಯಾಗಿತ್ತು. ಅವರುಗಳಿಗೆ ಬರುವ ಕಾಗದಗಳನ್ನು ಓದಿ ಹೇಳುವುದಲ್ಲದೆ, ಅವರುಗಳ ನೆಂಟರಿಷ್ಟರಿಗೆ ಕಳಿಸಲು ಇವನೇ ಕಾಗದ ಬರೆದುಕೊಡುತ್ತಿದ್ದ.

"ಈ ದೆಸೆಯಿಂದ ಅವನಿಗೆ ಸುತ್ತಮುತ್ತಲವರ ಎಲ್ಲ ವ್ಯವಹಾರ ಹಾಗೂ ಒಳ ವ್ಯವಹಾರಗಳ ಪರಿಚಯ, ಅರಿವು ಆಗತೊಡಗಿತು. ಕಾಗದ ಬರೆಯುವಾಗ ಮತ್ತು ಅದನ್ನು ಅರ್ಥೈಸುವಾಗ ಎಷ್ಟೋ ಸಾರಿ ಅವನು ಸುತ್ತಮುತ್ತಲ ವ್ಯವಹಾರವನ್ನ ನಿಯಂತ್ರಿಸುತ್ತಲೂ ಇದ್ದನು."

ಇವನ ಮನೆಯೇ ಪೋಸ್ಟಾಫೀಸೂ ಆಗಿದ್ದರಿಂದ ಒಂದು ದೊಡ್ಡ ಜಾಯಿಕಾಯಿ ಪೆಟ್ಟಿಗೆಯನ್ನಿಟ್ಟು, ಬಂದ ಪತ್ರಗಳನ್ನೆಲ್ಲ ಅದರೊಳಕ್ಕೆ ಹಾಕಿಬಿಡುತ್ತಿದ್ದನು. ವಾರಸುದಾರರು ತಮಗೆ ವಿರಾಮವಾದಾಗ ಹುಡುಕಿ, ಅದರೊಳಗಿಂದ ತಮ್ಮ ಪತ್ರಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲೇ ವಿಳಾಸ ನೋಡುವ ನೆವದಲ್ಲಿ ಇತರರ ಕಾಗದಗಳನ್ನೂ ಓದುತ್ತಿದ್ದರು. ಕೆಲವರಂತೂ ತಮಗೆ ಬಂದ ಪತ್ರಗಳಲ್ಲಿ ಹೆಮ್ಮೆ ತರಬಹುದಾದಂಥದು ಏನಾದರೂ ಇದ್ದರೆ, ಅದು ಆದಷ್ಟು ಇತರರಿಗೆ ಪ್ರಚಾರವಾಗಲೆಂದು ಓದಿ ಅಲ್ಲಿಯೇ ಬಿಟ್ಟು ಹೋಗುತ್ತಿದ್ದರು.

ಈ ಲೇಖನ ಓದಿದ್ದೀರಾ?: ಜಾಗರ | ತುಕ್ಕೋಜಿಯ ನೈಪುಣ್ಯ ತುಕ್ಕು ಹಿಡಿಯುವುದನ್ನು ತೇಜಸ್ವಿ ಕಾಣಿಸುವ ಬಗೆ

ಆ ಹಂಗಾಮಿ ಪೋಸ್ಟಾಫೀಸು ತಾನಾಗಿಯೇ ಬೋಬಣ್ಣನಿಗೆ ಏನೂ ಕೆಡುಕು ಮಾಡಲಿಲ್ಲ. ಆದರೆ, ಬೋಬಣ್ಣನ ಅನಗತ್ಯ ಕುತೂಹಲ ಪ್ರೇರಿತ ತಪ್ಪು ನಡವಳಿಕೆಗಳು, ಅವನ ಅಮಾಯಕತೆ, ಊರವರ ಸಣ್ಣತನಗಳು ಹಾಗೂ ಮುಖ್ಯವಾಗಿ, ಅವನ ಅತ್ತೆ ಮಾಚಮ್ಮನ ಅಸುರಕ್ಷತಾ ಮನೋಭಾವ ಬೋಪಣ್ಣನ ದುರಂತಕ್ಕೆ ಕಾರಣವಾಗುತ್ತವೆ. 

ಯಾವಾಗ ತೋಟದ ಮಾಲೀಕ ಅಲ್ಲೀಜಾನ್ ಅವರ ಮಗ ಅಜೀಜನಿಗೆ ಬಂದಿದ್ದ ಕವರನ್ನು ಡೆಲಿವರಿ ಕೊಡದೆ ಕದ್ದು ಜೇಬಿಗೆ ಇಳಿಬಿಟ್ಟುಕೊಂಡನೋ ಅಲ್ಲಿಂದ ಅವನ ಮನಃಸ್ವಾಸ್ಥ್ಯ ಕೆಡಲಾರಂಭಿಸುತ್ತದೆ. ಕವರಿನೊಳಗೆ ಪ್ರೇಮ ಪತ್ರವಿರಬಹುದೆಂಬ ಸಂಶಯದಲ್ಲಿ ಕುತೂಹಲ ತಲೆಗೇರಿ ಜೇಬಿಗೆ ಇಳಿಬಿಡುತ್ತಾನೆ. ತೋಟದಲ್ಲಿ ಆಳುಗಳಿಗೆ ಕಾಣದಂಥ ಸ್ಥಳದಲ್ಲಿ ಒಂದು ಮರೆಯಲ್ಲಿ ಕವರ್ ಬಿಚ್ಚುತ್ತಾನೆ. ಒಳಗಿದ್ದ ಕಾರ್ಡಿನ ಒಂದು ಬದಿಯಲ್ಲಿ, ಸೊಂಟದವರೆಗೆ ನಗ್ನವಾಗಿರುವ ಹೆಂಗಸಿನ ಚಿತ್ರ ನೋಡುತ್ತಾನೆ. ಅಲ್ಲಿಂದ ಅವನ ದಾಂಪತ್ಯ ಮತ್ತು ವೈಯಕ್ತಿಕ ಬದುಕಿನಲ್ಲಿ ಬದಲಾವಣೆಯಾಗುತ್ತದೆ.

ಬೋಬಣ್ಣನಿಗೆ ತನ್ನ ಹೆಂಡತಿಯ ನಗ್ನತೆಯ ಸ್ಪರ್ಶದ ಅರಿವಿತ್ತೇ ಹೊರತು ಯಾವತ್ತೂ ಬೆಳಕಿನಲ್ಲಿ ಕಂಡೇ ಇರದಿದ್ದವನು, ನಂತರದಲ್ಲಿ ಕಾವೇರಿಯನ್ನು ನೋಡಿದಾಗಲೆಲ್ಲ, "ಸ್ತ್ರೀಯ ನಗ್ನ ಸ್ವರೂಪದ ಅನಂತ ಸಾಧ್ಯತೆಗಳನ್ನು ಆಕೆಯ ವದನದ ಅಡಿ ರಚಿಸುತ್ತಿದ್ದನು." ಎರಡು ಮಕ್ಕಳ ತಾಯಾಗಿದ್ದ ಕಾವೇರಿಯೊಡನೆ ಬೋಬಣ್ಣನ ಹಗಲು-ಇರುಳೆನ್ನದ ಕಾಮಚೇಷ್ಟೆಗಳು ಮಾಚಮ್ಮನ ಗಮನಕ್ಕೂ ಬರುತ್ತವೆ. ಬೋಬಣ್ಣನ ಚೇಷ್ಟೆ, ಅವನ ಕಾಮುಕತೆಗಳು ಮಾಚಮ್ಮನಿಗೆ ಭಯಂಕರ ಅಧಿಕ ಪ್ರಸಂಗಗಳಾಗಿ ಕಂಡುಬರುತ್ತವೆ. ಇದು ಹೀಗೇ ಮುಂದುವರಿದರೆ, ಮನೆಯಲ್ಲಿ ತನ್ನ ಯಜಮಾನಿಕೆಗೆ ಸಂಚಕಾರ ಬರುತ್ತದೆ ಅಥವಾ ಬೋಬಣ್ಣ ಕಾವೇರಿಯನ್ನು ಕರೆದೊಯ್ದು ತನ್ನನ್ನು ಅನಾಥೆಯನ್ನಾಗಿ ಮಾಡುತ್ತಾನೆ ಎನಿಸಿ, ಮಗಳಿಗೆ ತಾನು ಒಬ್ಬಂಟಿಯಾಗಿ ಅವಳನ್ನು ಬೆಳಸಿ ದೊಡ್ಡವಳನ್ನಾಗಿ ಮಾಡಿ ಮದುವೆ ಮಾಡಿದ್ದನ್ನು ನೆನಪಿಸಿ, “ಹಾಗೆಲ್ಲಾ, ಮೈಯಲ್ಲಿ ಸೊಕ್ಕು ಬಂದಾಗ ನಾವು ಯಾರೂ ಎದುರಿಲ್ಲ ಎಂಬಂತೆ ಆಡಬಾರದು,” ಎಂದು ತಾಕೀತು ಮಾಡುತ್ತಾಳೆ.

Jaagara

"ಇಂಥ ಸಂದರ್ಭದಲ್ಲಿ ಎಲ್ಲಿಂದಲೋ ಒಂದು ಕಾರ್ಡು ಬೇಲಾಯುದ ಎನ್ನುವ ಒಬ್ಬನ ವಿಳಾಸಕ್ಕೆ ಬಂದಿತು. ಬೇಲಾಯುದನ ಮಗಳು ಪದ್ಮಿ ವಿಪರೀತ ಹಾದಿ ತಪ್ಪಿ ಹೋಗುತ್ತಿದ್ದಾಳೆಂದೂ, ಬೇಲಾಯುದನು ಈ ಕೂಡಲೆ ಬಂದು ಪದ್ಮಿಯನ್ನು ಬಂದೋಬಸ್ತು ಮಾಡಬೇಕೆಂದೂ, ಮೂಗೂರಿನ ಸಾಹುಕಾರರ ತೋಟದ ಮೇಸ್ತ್ರಿ ಪದ್ಮಿಯನ್ನ ಒಂದು ತಿಂಗಳು ತನ್ನ ಮನೆಯಲ್ಲಿ ಬಿಡಬೇಕೆಂದು ಪದ್ಮಿಯ ತಾಯಿಗೆ ನೂರು ರೂಪಾಯಿ ಕೊಟ್ಟಿದ್ದಾನೆಂದು ಬರೆದಿತ್ತು." ಅದನ್ನು ಯಥಾಪ್ರಕಾರ ನಿರ್ವಿಕಾರ ಚಿತ್ತದಿಂದ ಓದಿದ ಬೋಬಣ್ಣ, ದೊಡ್ಡ ಜಾಯಿಕಾಯಿ ಪೆಟ್ಟಿಗೆಗೆ ಹಾಕುತ್ತಾನೆ. ಊರ ಸಾರ್ವಜನಿಕ ಕ್ಷೇತ್ರದಂತಿರುವ ಆ ಜಾಯಿಕಾಯಿ ಪೆಟ್ಟಿಗೆಯೊಳಗಿನ ಈ ಪತ್ರ, "ಆ ಪೋಸ್ಟಾಫೀಸು ಪೇಟೆಯಲ್ಲಿ ಕ್ಯಾಬರೆ ಹೋಟೆಲು ಮಾಡುವಂಥ ಗೊಂದಲ ಉಂಟುಮಾಡಿತು." 

ಬೇಲಾಯುದ ಆ ಕಾಗದ ತೆಗೆದುಕೊಳ್ಳಲು ಬರಲೇ ಇಲ್ಲ. ಊರ ಜನರ ಬಾಯಲ್ಲಿ ಅವನ ಮಗಳು ಊಟಕ್ಕೆ ಉಪ್ಪಿನಕಾಯಂತೆ ನಂಜಿಕೆಯಾದಳು. ಎಲೆ-ಅಡಿಕೆಯಂತೆ ಚರ್ವಿತ ಚರ್ವಣ ಆದಳು. ಆ ಕಾಗದ, ಜಾಯಿಕಾಯಿ ಪೆಟ್ಟಿಗೆಯೊಳಗೆ ಜೂಲುಜೂಲಾಗಿ ಕೊಳೆಯಾಗಿ ಅದರ ಅಕ್ಷರಗಳೆಲ್ಲ ಅಳಿಸಿಹೋಗುವ ಸ್ಥಿತಿಗೆ ಬಂದಿತ್ತು. ಒಂದಿನ ಪೋಸ್ಟಾಫೀಸಿನ ಅಡ್ಡೆಯಲ್ಲಿ ಆ ಜೂಲುಜೂಲಾಗಿರುವ ಪತ್ರದ ವಿಲೇವಾರಿಯ ಕುರಿತಂತೆ ಸಾರ್ವಜನಿಕ ಚರ್ಚೆ ನಡೆದು, ತನ್ನ ಪೋಸ್ಟ್ ಮಾಸ್ತರನ ಜವಾಬ್ದಾರಿ ಎಂಬ ಅಮಾಯಕ ಹುಂಬತನದಲ್ಲಿ ಆವತ್ತು ಬೋಬಣ್ಣ, ಬೇಲಾಯುದನ ಕಾಗದವನ್ನು ಇನ್ನೊಂದು ಕಾಗದಕ್ಕೆ ನಕಲು ಮಾಡಿ ಬೇಲಾಯುದನ ಉಜಿರೆ ವಿಳಾಸ ತಂದು ಅದನ್ನು ಪೋಸ್ಟ್ ಮಾಡಿದನು.

ಅತ್ತೆ ಮತ್ತು ಹೆಂಡತಿಯು ತನ್ನನ್ನು ಕಡೆಗಣಿಸುತ್ತಿರುವುದರಿಂದ ಒಂದು ಸಂಜೆ ವ್ಯಾಕುಲನಾಗಿ ಬೋಬಣ್ಣನು ಯಾರಿಗೋ ಯಾಂತ್ರಿಕವಾಗಿ ಕಾಗದ ಬರೆದು ಕೊಟ್ಟು ಮನೆಯೊಳಕ್ಕೆ ಹೋಗಬಹುದೋ ಬೇಡವೋ ಎಂದು ಧೇನಿಸುತ್ತಿರುವಾಗ, ಸಾಯಂಕಾಲ ಕಳೆದು ಕತ್ತಲಾಗುತ್ತಿರುವಾಗ, ಹತ್ತು ಹದಿನೈದು ಜನರ ಗುಂಪೊಂದು ಅಳುತ್ತಿರುವ ಹೆಣ್ಣುಮಗಳೊಂದಿಗೆ ಬರುತ್ತದೆ. “ನೀನು ಅಪ್ಪಂತ ಮನುಷಾ ಆಗಿದ್ರೆ ಈ ಕಾಗದ ಬರೆದು ಹೆಣ್ಣಿನ ಮರ್ಯಾದೆ ತೆಗೆಯೋ ಕೆಲಸಕ್ಕೆ ಯಾಕೋ ಹೋದೆ?” ಎಂದು - ಬೋಬಣ್ಣನು ನಕಲು ಮಾಡಿದ್ದ ಕಾಗದವನ್ನು ತೋರಿಸಿ ಕೇಳುತ್ತಾರೆ. ಅದು ತಾನು ಮಾಡಿದ ನಕಲು ಪ್ರತಿ ಎಂದು ಬೋಬಣ್ಣ ಎಷ್ಟೇ ಹೇಳಿದರೂ ಯಾರೂ ಕೇಳಲು ಸಿದ್ಧರಿರಲಿಲ್ಲ. "ಬೋಬಣ್ಣನ ಪರವಾಗಿ ಮಾತನಾಡುವವರು ಕಾಣಲೇ ಇಲ್ಲ. ವಾಗ್ಯುದ್ಧದ ಒಂದು ಸಮಯದಲ್ಲಿ ಮೇಸ್ತ್ರಿಯು, 'ಹೌದೌದು ನೀನೊಬ್ಬ ಅಪ್ಪಂತವ. ಊರವರೆಲ್ಲ ಪೋಲಿಗಳು. ನಿನ್ನ ಮನೆ, ನಿನ್ನ ಹೆಣ್ತಿ ಬಂದೋಬಸ್ತು ಮಾಡಿಕೊಂಡು ಊರವರ ಮಾತಾಡು. ನಿನ್ನ ಕೈ ಹಿಡಿದೋಳು ಎಷ್ಟು ಜನರ ಮನೇಲಿದ್ದು ಬಂದವಳೋ ನೋಡಿಕೋ,” ಎಂದು ನೋಯಿಸಲೆಂದೇ ನುಡಿಯುತ್ತಾನೆ.

Jaagara
 ಕಲಾಕೃತಿ ಕೃಪೆ: ಈವ್ಜಿನ್ ಮೊನಹೊವ್

ಮಾಚಮ್ಮ ಅಳಿಯನ ವಿರುದ್ಧ ಹಗೆತನ ಸಾಧಿಸಿದರೆ, ಕಾವೇರಿ ದಿಗ್ಮೂಢತೆಯಲ್ಲಿ ಏನೂ ಪ್ರತಿಕ್ರಿಯಿಸುವುದಿಲ್ಲ. ಅವರಿಬ್ಬರೂ ತನ್ನ ಮೇಲಿನ ತಿರಸ್ಕಾರದಿಂದ ಆ ಆಪಾದನೆಯನ್ನು ಹೊರಲೂ ಸಿದ್ಧರಾದುದನ್ನು ಕಂಡು ಬೋಬಣ್ಣನಿಗೆ ಕಣ್ಣು ಕೆಂಡವಾಯಿತು. ಮುಷ್ಟಿ ಕಟ್ಟಿ ಬಲವಾಗಿ ಮೂಗೂರಿನ ಮೇಸ್ತ್ರಿಯ ಮುಸುಡಿಗೆ ಗುದ್ದುತ್ತಾನೆ. ಮೇಸ್ತ್ರಿ ವಿಕಾರವಾಗಿ ತೊದಲಿ ಧುಪ್ಪನೆ ನೆಲಕ್ಕೆ ಬೀಳುತ್ತಾನೆ. ಪರಿಸ್ಥಿತಿ ವಿಕೋಪಕ್ಕೆ ಸರಿಯುತ್ತಿದ್ದಂತೆ ಬೋಪಣ್ಣ ಕಂಡ ಎಲ್ಲರನ್ನು ದೂಡಿಕೊಂಡು ಅಲ್ಲಿಂದ ಹೊರಡುತ್ತಾನೆ. ಅಡ್ಡ ಬಂದ ಒಬ್ಬನ ಹೊಟ್ಟೆಗೆ ಝಾಡಿಸಿ ಒದ್ದು ಮುಷ್ಟಿಯಿಂದ ಮೋರೆಗೆ ಅಪ್ಪಳಿಸುತ್ತಾನೆ. ಅವನು ಹೆಚ್ಚುಕಡಿಮೆ ಉಸಿರೆತ್ತದೆ ನೆಲಕ್ಕೆ ಬೀಳುತ್ತಾನೆ. ಕೋಪದಿಂದ ಕೆಂಡವಾಗಿದ್ದ ಬೋಬಣ್ಣ ನಂತರ ಅಡ್ಡ ಬಂದ ನೊಗ ಹೊತ್ತಿದ್ದ ಎರಡೆತ್ತುಗಳಲ್ಲಿ ಒಂದಕ್ಕೆ ಹೊಟ್ಟೆಯಲ್ಲಿದ್ದುದೆಲ್ಲ ಕಕ್ಕಿಕೊಳ್ಳುವಂತೆ ಒದೆಯುತ್ತಾನೆ. ಹಿಂದಿರುಗಿ ನೋಡದೆ ಓಡಿ-ಓಡಿ ಕತ್ತಲಲ್ಲಿ ಕರಗಿಹೋಗುತ್ತಾನೆ.

"ಮಾರನೆಯ ದಿನ ಪೋಸ್ಟಾಫೀಸನ್ನು ವಿದ್ಯುಕ್ತವಾಗಿ ಮುಚ್ಚಲಾಯ್ತು. ಕಾವೇರಿ ಮಾಚಮ್ಮನೊಂದಿಗೆ ತೋಟದ ಕೆಲಸಕ್ಕೆ ಹೋಗತೊಡಗಿದಳು" - ಈ ಕೊನೆಯ ವಾಕ್ಯದಲ್ಲಿ ತೇಜಸ್ವಿಯವರು ಸೂಚ್ಯವಾಗಿ ಎಷ್ಟೊಂದು ವಿಷಯಗಳನ್ನು ಹೇಳಿದ್ದಾರೆ. ಈ ಕಥಾ ಸಂಕಲನದ ಮೂರು ಪಾತ್ರಗಳಾದ ಸೂರಾಚಾರಿ, ತುಕ್ಕೋಜಿ ಮತ್ತು ಬೋಬಣ್ಣರ ಅವನತಿ ಮತ್ತು ದುರಂತಗಳನ್ನು ಎಷ್ಟೊಂದು ಸರಳ ಮಾತುಗಳಲ್ಲಿ ಕಟ್ಟಿಕೊಡುತ್ತಾರೆ ಎಂಬುದು ಯಾವತ್ತಿಗೂ ಸೋಜಿಗ.

ಮುಖ್ಯ ಕಲಾಕೃತಿ ಕೃಪೆ: ರಜನಿ ಎ
ನಿಮಗೆ ಏನು ಅನ್ನಿಸ್ತು?
1 ವೋಟ್
eedina app