ಪಾಟಿ ಚೀಲ | ನಾನೆಂದೂ ಕಂಡಿರದ ಆ ಹುಡುಗ ಆಗಾಗ ನನ್ನ ಕ್ಲಾಸಿಗೆ ಬರುತ್ತಾನೆ

primary-schools

ಆತನ ಹಳೆಯ ನೋಟ್ ಪುಸ್ತಕ ನೋಡಬೇಕೆನಿಸಿ ತರಲು ಹೇಳಿದೆವು. ಮುದ್ದಾದ ಕೈಬರಹ ಆತನದು. ಅಲ್ಲಲ್ಲಿ ವಿಷಯಕ್ಕೆ ಸಂಬಂಧವೇ ಇರದ ಚೆಂದದ ಚಿತ್ರಗಳು. ಆತ ಶಾಲೆಗೆ ಬರಲಿಲ್ಲ. ಒಂದೇ ಒಂದು ದಿನವೂ ನನ್ನ ವಿದ್ಯಾರ್ಥಿಯಾಗಿರದ, ನಾನೆಂದೂ ನೋಡಿರದ ಆ ಹುಡುಗ ಆಗಾಗ ನನ್ನ ಯೋಚನೆಗಳನ್ನು ಕತ್ತರಿಸಿ ಒಳ ಬರುತ್ತಾನೆ ಹೇಳದೆ, ಕೇಳದೆ

ನಮ್ಮ  ಶಾಲೆ ಪಶ್ಚಿಮ ಘಟ್ಟದ ದಟ್ಟ ಕಾಡುಗಳಿಂದ ಸುತ್ತುವರಿದಿದೆ. ಸುತ್ತೆಲ್ಲ ಕಾಡೇ ಆದರೂ, ಈ ಊರು ಸುತ್ತಲಿನ ಜನರಿಗೆ ಪೇಟೆಯೇ! ಜನರು ಒಂದು ಊರನ್ನು ಪೇಟೆ ಎಂದು ಭಾವಿಸುತ್ತಾರೆಂದರೆ, ಅಲ್ಲಿ ಕಾಡಿಲ್ಲ ಎನ್ನುವುದೇ ಆಗಿದೆ. ಸುತ್ತಲಿನ ಆರೇಳು ಗ್ರಾಮ ಪಂಚಾಯತಿ ವ್ಯಾಪ್ತಿಯ, 45ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳಿಂದ ಮಕ್ಕಳು ಇಲ್ಲಿಗೆ ಬರುತ್ತಾರೆ. ಪಕ್ಕದ ಶಿವಮೊಗ್ಗೆ ಜಿಲ್ಲೆಯಿಂದ ಬಾಳೆಬರೆ ಘಾಟಿಯನ್ನಿಳಿದು ಬರುವ ಮಕ್ಕಳೂ ಇದ್ದಾರೆ. 25 ಕಿಲೋಮೀಟರ್‌ಗಳ ಆಚೆಯಿಂದ ಕೂಡಾ ಮಕ್ಕಳು ಬರುತ್ತಾರೆ ಎಂದರೆ, ಮೂಡುವ ಚಿತ್ರಣ ಬೇರೆ, ಇಪ್ಪತೈದು ಕಿಲೋಮೀಟರ್‌ಗಳಾಚೆ ಆ ಊರುಗಳನ್ನು ನೋಡಿದರೆ ಮೂಡುವ ಚಿತ್ರವೇ ಬೇರೆ.

Eedina App

ಎಂಟು ಕಿಲೋಮೀಟರ್‌ ಕಾಲ್ನಡಿಗೆಯಲ್ಲಿ ದಾರಿ ಸವೆಸಿ, ಶಾಲೆಯ ಸಮಯಕ್ಕೆ ಹೊಂದುವ ಏಕೈಕ ಬಸ್ ಹಿಡಿದು ತರಗತಿಗೆ ಅವರು ಬರುತ್ತಿರುವುದೇ ದೊಡ್ಡ ಸಾಧನೆ. ಎರಡು ಲಾಕ್‌ಡೌನ್‌ಗಳ ನಂತರ ಶಾಲೆ ಶುರುವಾದರೂ ಬಸ್‌ಗಳು ತಮ್ಮ ಸಂಚಾರ ಆರಂಭಿಸಿರಲಿಲ್ಲ. ಯಾರದೋ ಮೋಟಾರ್ ಬೈಕ್ ಮೇಲೆ, ಹಾಲಿನ ವ್ಯಾನು ಹಿಡಿದು, ಐದಾರು ಮಕ್ಕಳು ಸೇರಿ ಆಟೋ ಮಾಡಿಕೊಂಡು ಹೀಗೆ, ಮಕ್ಕಳು ಶಾಲೆಗೆ ಬರಬೇಕಿತ್ತು. ಕೆಲವು ಮಕ್ಕಳು ಒಂದೂವರೆ ವರ್ಷದಿಂದ ಸಂಪರ್ಕಕ್ಕೆ ಸಿಕ್ಕಿರಲೇ ಇಲ್ಲ. ಇಂತಹ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಬೇರೆ ಬೇರೆ ಪ್ರಯತ್ನ ಮಾಡಿದ್ದೆವು.

ಕಾಡಿನ ನಡುವಿರುವ ಅವರ ಊರಿಗೆ ಫೋನ್ ಸಂಪರ್ಕ ಬಿಡಿ, ಬೇರೆ ಊರಿನ ಮನುಷ್ಯರೂ ತಲುಪಿರಲಿಲ್ಲ. ಕೆಲವು ಮಕ್ಕಳ ವಿಳಾಸ ಹುಡುಕುತ್ತಾ ನಾನು ಮತ್ತು ಇನ್ನೇನು ಮೂರೇ ತಿಂಗಳಲ್ಲಿ ನಿವೃತ್ತಿಯಾಗಲಿದ್ದ ನರಸಿಂಹ ಮೇಷ್ಟ್ರು ಬೈಕ್ ತೆಗೆದುಕೊಂಡು ಹೊರೆಟೆವು. ಯಾರನ್ನೋ ಕೇಳಿ, ತಪ್ಪು ವಿಳಾಸ ಹುಡುಕಿ ಬೇರೆ ಊರಿಗೆ ತಲುಪಿದ್ದೂ ಆಯಿತು. ನಾವು ಸರಿಯಾಗಿ ನೋಡಿರದ ಮಕ್ಕಳನ್ನು ಹುಡುಕುವುದು ಅಷ್ಟು ಸುಲಭವೇ? ಈ ನಡುವೆ ನಮ್ಮ ಬೈಕ್ ನಮ್ಮೊಂದಿಗೆ ಪ್ರಯಾಣ ಮುಂದುವರಿಸಲು ಅಸಮ್ಮತಿಸಿತು. ಬೈಕ್ ಕೆಟ್ಟಿರಲಿಲ್ಲ, ರಸ್ತೆಗಳು ಸಂಪೂರ್ಣ ಕೆಟ್ಟು ಹೋಗಿದ್ದವು. ಕೆಲವು ಕಡೆಯ ಕಡಿದಾದ ಗುಡ್ಡದ ಕಾಲುದಾರಿಗಳನ್ನು ಬೈಕ್‌ನಲ್ಲಿಯೂ ಹೋಗಲಾಗುತ್ತಿರಲಿಲ್ಲ.

AV Eye Hospital ad
narrow road
ಸಾಂದರ್ಭಿಕ ಚಿತ್ರ

ಹೀಗೆ, ಗುಡ್ಡವೊಂದನ್ನು ಏರುತ್ತಾ ನಿರ್ಜನ ಕಾಡಿನಲ್ಲಿ ಹೋಗುತ್ತಿರುವಾಗ ವ್ಯಕ್ತಿಯೊಬ್ಬರು ಎದುರಾದರು. ಶಾಲೆಗೆ ಬರದ ಆ ವಿದ್ಯಾರ್ಥಿ ಹೆಸರು ಹೇಳಿ ಆತನ ಮನೆ ಎಲ್ಲಿದೆ ಎಂದು ಕೇಳಿದಾಗ, “ಅವನು ನನ್ನ ಮಗ, ಈಗ ಮನೆಯಲ್ಲಿಲ್ಲ” ಎಂದರು. “ಎಲ್ಲಿಗೆ ಹೋಗಿದ್ದಾನೆ?,” ಎಂದು ಕೇಳಿದೆ. ”ಹದಿನೈದು ದಿನವಾಯ್ತು ಚಿಕ್ಕಮ್ಮನ ಮಗಳ ಮದುವೆಗೆಂದು ಹೋದವನು ವಾಪಸು ಬರಲು ಯಾರೂ ಜೊತೆಗಾರರಿಲ್ಲದೆ ಅಲ್ಲೇ ಇದ್ದಾನೆ,” ಎಂದರು. “ಯಾವಾಗ ಬರ್ತಾನಂತೆ?” ಎಂದರೆ “ನನಗೇನು ಗೊತ್ತು? ಅವನು ಬಂದ ಮೇಲೇ ಬಂದ ಎನ್ನಬೇಕು,” ಎಂದರು. ಇಷ್ಟು ಪ್ರಯತ್ನಪಟ್ಟು ಇಲ್ಲಿಗೆ ಬಂದ ಮೇಲೆ ಅವರ ಮನೆ ನೋಡದೆ ಹೋಗುವುದೇಕೆ ಎನ್ನಿಸಿ, "ಮನೆವರೆಗೂ ಹೋಗಿ ಬರೋಣವೇ?” ಎಂದು ಕೇಳಿದೆ. “ಮನೆಗೆ ಇನ್ನೂ ಒಂದು ಮೈಲು ನಡೆಯಬೇಕು, ನಾನು ನಿಮ್ಮ ಜೊತೆ ವಾಪಸ್ಸು ಬಂದರೆ ಹಳ್ಳಿ ಹೊಳೆಗೆ ಹೋಗುವ ಬಸ್ ತಪ್ಪುತ್ತದೆ ನನಗೆ,” ಎಂದು ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಅವರನ್ನು ಬಲವಂತ ಪಡಿಸಲು ಮನಸ್ಸಾಗದೇ ಸರಿಯಾದ ದಾರಿ ಕೇಳಿಕೊಂಡು, ನಾವೇ ಅವರ ಮನೆಯ ಕಡೆ ಹೆಜ್ಜೆ ಹಾಕಿದೆವು.

ಈ ಲೇಖನ ಓದಿದ್ದೀರಾ?: ಪಾಟಿ ಚೀಲ | ಪರೀಕ್ಷೆಯ ಮೌಲ್ಯಮಾಪನ ನಡೆಸಿದ ಬಚ್ಚಲುಮನೆ ಪ್ರಕರಣ

ನಡೆದ ಸುಸ್ತೆಲ್ಲ ಹೊರಟು ಹೋದದ್ದು ಆ ಮನೆಯನ್ನು ನೋಡಿದಾಗ. ಪರ್ವತ ಶೃಂಗದ ಮೇಲೆ ಇರುವ ಮಳಿ ಹುಲ್ಲಿನ ಹೊದಿಕೆ ಇರುವ ಚೆಂದದ ಮನೆ ಅದು. ಮನೆಯ ಎದುರು ಪುಟ್ಟ ಅಂಗಳ. ಅಂಗಳದಾಚೆ ಬಾಳೆ, ತೆಂಗು, ಅಡಿಕೆಯಿರುವ ಪುಟ್ಟ ತೋಟ. ಆ ಸ್ಥಳಕ್ಕೆ ಏನೇನೂ ಹೊಂದಿಕೊಳ್ಳದಂತೆ ಅಂಗಳದ ಒಂದು ಭಾಗದಲ್ಲಿ ಮೆಕ್ಸಿಕನ್ ಹುಲ್ಲುಹಾಸು ಆಶ್ಚರ್ಯಕರವಾಗಿತ್ತು. ಮನೆಯೊಳಗಿಂದ ಹದಿನೇಳು-ಹದಿನೆಂಟರ ಹುಡುಗಿಯೊಬ್ಬಳು ಹೊರಬಂದಳು. ಬಂದ ವಿಷಯ ತಿಳಿಸಿ “ಅಮ್ಮ ಎಲ್ಲಿದ್ದಾರೆ?” ಎಂದು ನರಸಿಂಹ ಮೇಷ್ಟ್ರು ಕೇಳಿದರು. “ಅವರು ಮತ್ತು ತಮ್ಮ ಇಬ್ಬರೂ ಚಿಕ್ಕಮ್ಮನ ಮನೆಗೆ ಹೋಗಿ ಹದಿನೈದು ದಿನವಾಯ್ತು, ಅಮ್ಮ ಸ್ವಲ್ಪ ದಿನ ಅಲ್ಲೇ ಇರ್ತಾರೆ. ತಮ್ಮನಿಗೆ ವಾಪಸ್ಸು ಬರಲು ಯಾರೂ ಜೊತೆ ಸಿಕ್ಕಿಲ್ಲ,” ಎಂದಳು.

ಮಗಳನ್ನೊಬ್ಬಳನ್ನೇ ಹೇಗೆ ಬಿಟ್ಟು ಹೋದರು ಆ ಅಪ್ಪ, ಎಂಬ ಆಶ್ಚರ್ಯ ನಮಗುಂಟಾಗಲು ಬಹುಶಃ ನಮ್ಮ ಪೇಟೆಯ ಅನುಭವಗಳೇ ಕಾರಣವಿರಬಹುದು. ಮಗಳು ಒಬ್ಬಳೇ ಇದ್ದಾಳೆ ಎಂಬ ಸತ್ಯವನ್ನೋ ಅಥವಾ ಮನೆಯಲ್ಲಿ ಯಾರೂ ಇಲ್ಲ ಎಂಬ ಸುಳ್ಳನ್ನೋ ದಾರಿಯಲ್ಲಿ ಸಿಕ್ಕಿದ ಆ ಅಪ್ಪ ಹೇಳಿದಿದ್ದರೆ, ನಾವು ಮನೆಗೆ ಹೋಗುತ್ತಿರಲಿಲ್ಲ. ಆದರೆ, ಹಾಗೆ ಹೇಳಲು ಅವರು 'ಕಲಿತʼವರಾಗಿರಲಿಲ್ಲವಲ್ಲ.

house
ಸಾಂದರ್ಭಿಕ ಚಿತ್ರ

ಕುಡಿಯಲು ನೀರು ತಂದುಕೊಟ್ಟಳು. ಆಕೆ ಇಲ್ಲಿಂದ 60 ಕಿಲೋಮೀಟರುಗಳಾಚೆ ಕುಂದಾಪುರದ ವಸತಿ ನಿಲಯದಲ್ಲಿದ್ದು, ಪಿಯುಸಿ ಓದುತ್ತಿದ್ದಾಳೆ ಎಂಬುದು ತಿಳಿಯಿತು. ಲಾಕ್‌ಡೌನ್‌ ನಂತರ ಕಾಲೇಜು ಆರಂಭವಾದರೂ ವಸತಿ ನಿಲಯಗಳು ಆರಂಭವಾಗಿರಲಿಲ್ಲ. ಆದ್ದರಿಂದ ಕಾಲೇಜಿಗೆ ಹೋಗಲು ಆಗಿರಲಿಲ್ಲ. ಈಗ ಹಾಸ್ಟೆಲ್ ಆರಂಭವಾಗಿತ್ತು. ದ್ವಿತೀಯ ಪಿಯು ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳುವ ಕೊನೆಯ ದಿನಾಂಕವೂ ಬಂದಿತ್ತು.

ನಾವು ಯಾವ ಹುಡುಗನನ್ನು ಹುಡುಕುತ್ತಾ ಬಂದಿದ್ದೆವೋ, ಅವನನ್ನು ಆ ಕ್ಷಣ ಮರೆತು ಆತನ ಅಕ್ಕನನ್ನು ಮತ್ತೊಮ್ಮೆ ಕಾಲೇಜಿಗೆ ಬರುವಂತೆ ಮನವೊಲಿಸತೊಡಗಿದೆವು. ಹಾಸ್ಟೆಲ್‌ನಲ್ಲಿ ಏನಾದರೂ ಕಿರಿಕಿರಿ ಅನುಭವಿಸಿರಬಹುದಾ ಎಂದು ಪರಿಪರಿಯಾಗಿ ವಿಚಾರಿಸಿದೆವು. ಕೊನೆಗೂ, ಆಕೆ ತಾನು ಕಾಲೇಜಿಗೆ ಹೋಗದಿರಲು ಕಾರಣ ತಿಳಿಸಿದಳು. ಹಾಸ್ಟೆಲ್‌ಗೆ ಸೇರಲು ಕೋವಿಡ್ ಟೆಸ್ಟ್ ಅನಿವಾರ್ಯವಾಗಿತ್ತು. ಆಕೆಗೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಒಪ್ಪಿಗೆ ಇರಲಿಲ್ಲ!

ನಮ್ಮ ಪ್ರಯತ್ನಗಳೆಲ್ಲ ವಿಫಲವಾಗಿ ಹೊರಡುವಾಗ, “ಈ ಹುಲ್ಲು ಹಾಸು ಮಾಡಿದವರು ಯಾರು?” ಎಂದು ಕೇಳಿದೆ. “ಅದು ನನ್ನ ತಮ್ಮ” ಎಂದಳಾಕೆ. ತಾನು ಹೋಗುತ್ತಿದ್ದ ಪ್ರಾಥಮಿಕ ಶಾಲೆಯಲ್ಲಿದ್ದ ಮೆಕ್ಸಿಕನ್ ಹುಲ್ಲನ್ನು ದಿನವೂ ಸ್ವಲ್ಪ ಸ್ವಲ್ಪವೇ ತಂದು ಚೆಂದದ ಲಾನ್ ಮಾಡಿದ್ದ. ಬಗೆ ಬಗೆಯ ಹೂವಿನ ಗಿಡಗಳನ್ನೂ ನೆಟ್ಟಿದ್ದ. ಆಕೆಯೇ ಮುಂದುವರಿದು, ಮನೆಯ ಗೋಡೆಗಳ ಮೇಲೆ ಆತ ಬಿಡಿಸಿದ ಚೆಂದದ ಚಿತ್ತಾರಗಳನ್ನು ಅಭಿಮಾನದಿಂದ ತೋರಿಸಿದಳು. ಆತನ ಹಳೆಯ ನೋಟ್ ಪುಸ್ತಕ ನೋಡಬೇಕೆನಿಸಿ ತರಲು ಹೇಳಿದೆವು. ಮುದ್ದಾದ ಕೈ ಬರಹ ಆತನದ್ದು. ಅಲ್ಲಲ್ಲಿ ವಿಷಯಕ್ಕೆ ಸಂಬಂಧವೇ ಇರದ ಚೆಂದದ ಚಿತ್ರಗಳು. ಆತ ಶಾಲೆಗೆ ಬರಲಿಲ್ಲ.

ಒಂದೇ ಒಂದು ದಿನವೂ ನನ್ನ ವಿದ್ಯಾರ್ಥಿಯಾಗಿರದ, ನಾನೆಂದೂ ನೋಡಿರದ ಆ ಹುಡುಗ ಆಗಾಗ ನನ್ನ ಯೋಚನೆಗಳನ್ನು ಕತ್ತರಿಸಿ ಒಳ ಬರುತ್ತಾನೆ ಹೇಳದೆ, ಕೇಳದೆ.

ನಿಮಗೆ ಏನು ಅನ್ನಿಸ್ತು?
9 ವೋಟ್
eedina app