ಪಾಟಿ ಚೀಲ | ಆಗ ಒಂದು ಪದ್ಯವನ್ನೂ ಬಾಯಿಪಾಠ ಮಾಡದಿದ್ದವ ಈಗ ಪ್ರಸಂಗ ಪುಸ್ತಕ ನೋಡದೆ ಭಾಗವತಿಕೆ ಮಾಡುತ್ತಿದ್ದ!

school

ಶಾಲೆ ಅವನನ್ನು ಮರೆತಿದ್ದರೂ ಆತ ಶಾಲೆಯನ್ನು ಮರೆತಿರಲಿಲ್ಲ. ಮೂರೇ ವರ್ಷದಲ್ಲಿ ವಾಪಸು ಬಂದಾಗ, ಯಕ್ಷಗಾನ ಮೇಳವೊಂದರಲ್ಲಿ ಭಾಗವತನಾಗಿದ್ದ. ಅದೇ ದಿನ ನಡೆಯಲಿರುವ ಆಟದಲ್ಲಿ ತನ್ನದೇ ಭಾಗವತಿಕೆಯೆಂದೂ, ಎಲ್ಲರೂ ಬರಬೇಕೆಂದೂ ಹೇಳಿಹೋದ. ಶಿಷ್ಯ ಭಾಗವತನಾಗಿರುವುದು ಹೆಮ್ಮೆ ಅಲ್ಲವೇ? ನಾವೆಲ್ಲ ಆ ರಾತ್ರಿ ಯಕ್ಷಗಾನ ನೋಡಲು ಹೋದೆವು

ಆ ಹುಡುಗ ಈಗ ಮೂವತ್ತೈದರ ಹಿರಿಯ. ವೃತ್ತಿ ಆರಂಭದಲ್ಲಿ ನನ್ನ ವಿದ್ಯಾರ್ಥಿ. ಇತ್ತೀಚೆಗೆ, ಒಮ್ಮೆ ಯಾವುದೋ ಕಾರ್ಯಕ್ರಮದಲ್ಲಿ ಸಿಕ್ಕಿದ್ದ. "ನಮಸ್ಕಾರ ಸರ್..." ಎಂದ. ಮೇಷ್ಟ್ರಿಗೆ ಸಿಕ್ಕಷ್ಟು ನಮಸ್ಕಾರಗಳು ಬೇರೆ ಯಾರಿಗೆ ಸಿಗುತ್ತದೆ ಹೇಳಿ...? ಆತ ಶಾಲಾ ದಿನಗಳನ್ನು ನೆನಪಿಸಿಕೊಂಡ. ಬೇರೇನೋ ಮಾತಾಡಿದ. ಊರಿನ ಬದಲಾವಣೆಗಳ ಬಗ್ಗೆ ಹೇಳಿದ. ಇನ್ನೇನನ್ನೋ ಹೇಳಲು ಇಚ್ಛಿಸುತ್ತಿದ್ದಾನೆಂದು ಆತನ ಮುಖ ನೋಡಿದಾಗ ಎನಿಸುತಿತ್ತು.

Eedina App

ಪುಟ್ಟ ಮೌನದ ನಂತರ... "ಸರ್..." ಎಂದ.

ನಾನು ತಿರುಗಿದೆ.

AV Eye Hospital ad

"ನೀವು ಎಲ್ಲೋ ಮಾತನಾಡುವಾಗ ನನ್ನ ಹೆಸರು ಹೇಳಿದ್ದೀರಂತೆ..." ಎಂದ.

"ಓ, ಅದಾ...?"

ಮೇಷ್ಟ್ರು ತನ್ನ ಉದಾಹರಣೆಯನ್ನು ಬೇರೆಲ್ಲೋ ನೀಡಿದ್ದಾರೆಂಬ ಖುಷಿ ಶಾಲೆ ಮುಗಿಸಿ ದಶಕಗಳೇ ಕಳೆದ ಮೇಲೂ ಒಬ್ಬ ವಿದ್ಯಾರ್ಥಿಗೆ ಉಂಟಾಗುವುದಾದರೆ, ಆ ವಯಸ್ಸಿನಲ್ಲಿ ಎಂತಹ ರೋಮಾಂಚನವಾಗಬಹುದಲ್ಲ ಎನಿಸಿತು. ಆತನಿಗೆ ನಾನು ಯಾವ ಕಾರಣಕ್ಕಾಗಿ ಆತನ ಹೆಸರು ಹೇಳಿದ್ದೇನೆಂದು ತಿಳಿಯುವ ಕುತೂಹಲವಿತ್ತು. ಬಹುಶಃ ಈಗ ನಿಮಗೂ ಅಂತಹದ್ದೇ ಕುತೂಹಲ ಉಂಟಾಗಿರಬಹುದು. ಹೇಳುತ್ತೇನೆ ಕೇಳಿ.

ಆ ಹುಡುಗ ಈಗ ಯಕ್ಷಗಾನ ಮೇಳವೊಂದರಲ್ಲಿ ಭಾಗವತ. ತುಂಬಾ ಹೆಸರನ್ನೂ ಮಾಡಿದ್ದಾನೆ. ಇತ್ತೀಚೆಗೆ ಅವನ ಅಭಿಮಾನಿಗಳ ವಾಟ್ಸಾಪ್ ಗುಂಪಿಗೆ ಸೇರಿಕೊಳ್ಳುವಂತೆ ಕೋರಿಕೆ (ಜಾಯಿನಿಂಗ್‌ ರಿಕ್ವೆಸ್ಟ್) ಬಂದಿತ್ತು. ಖುಷಿಯಿಂದ ಸೇರಿಕೊಂಡಿದ್ದೆ. ತಮ್ಮ ನೆಚ್ಚಿನ ಭಾಗವತರಿಗೆ ದೊರೆತ ಸನ್ಮಾನ, ಬಿರುದು ಇತ್ಯಾದಿಗಳ ವಿವರಗಳೆಲ್ಲವನ್ನು ಅಲ್ಲಿ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದರು. ಯಾವುದೋ ಪ್ರಸಂಗದ ಭಾಗವತಿಕೆಯ ಕ್ಷಣಗಳನ್ನು ಧ್ವನಿ ಸಂದೇಶದ ರೂಪದಲ್ಲಿ ಹಂಚಿಕೊಳ್ಳುತ್ತಿದ್ದರು. ನನಗಂತೂ ಬಹಳ ಖುಷಿ. ನನ್ನ ವಿದ್ಯಾರ್ಥಿಯ ಸಾಧನೆ ಖುಷಿ ಕೊಡದೆ ಇರುತ್ತದೆಯೇ?

Yakshagana

ನನಗೆ ಈ ಭಾಗವತರ ಬಾಲ್ಯ ನೆನಪಾಯಿತು. ಕಾಡಿನ ಊರಿನಿಂದ ಐದಾರು ಮೈಲಿ ನಡೆದು ಶಾಲೆಗೆ ಬರುತ್ತಿದ್ದ ಹುಡುಗನಿಗೆ ಶಾಲಾ ಕಲಿಕೆಯ ಮೇಲೆ ಯಾವ ಆಸಕ್ತಿಯೂ ಇರಲಿಲ್ಲ. ಎತ್ತರದ ನಿಲುವು. ತುಟಿಯ ಮೇಲೆ ಕಂಡೂ ಕಾಣದಂತಹ ಒಂದು ಮುಗುಳ್ನಗು. ಬೋರ್ಡಿನ ಮೇಲೆ ಬರೆದಿರುವುದು ತನಗೆ ಸಂಬಂಧಿಸಿದ್ದೇ ಅಲ್ಲವೆನ್ನುವಂತೆ ಶೂನ್ಯವನ್ನು ನೋಡುವ ಕಣ್ಣುಗಳು. ನನ್ನ ಅವಧಿಗೂ ಮುಂಚೆ ಕನ್ನಡ ಮೇಷ್ಟ್ರ ಅವಧಿ ಇರುತಿತ್ತು. ಬಾಯಿಪಾಠ ಮಾಡಬೇಕಿದ್ದ ಪದ್ಯಭಾಗವನ್ನು ಈ ಹುಡುಗ ಬಾಯಿಪಾಠ ಮಾಡಿ ಬರುತ್ತಿರಲಿಲ್ಲ. ಪದ್ಯ ಬಾಯಿಪಾಠ ಮಾಡದೆ ಅವರು ಕ್ಲಾಸಿನ ಒಳಗೆ ತೆಗೆದುಕೊಳ್ಳುತ್ತಿರಲಿಲ್ಲ. ಆತನ ಹೆಚ್ಚಿನ ತರಗತಿಗಳು ಕೋಣೆಯ ಹೊರಗೇ ಕಳೆದುಹೋಗುತ್ತಿದ್ದವು. ಆತ ಆಗಾಗ ಶಾಲೆಗೆ ಗೈರಾಗುತ್ತಿದ್ದ. ಅದರಲ್ಲೂ, ನಾಳೆ ಇಂಥದ್ದನ್ನು ಬಾಯಿಪಾಠ ಮಾಡಿ ಬರಲೇಬೇಕು ಎಂಬ ಅಪ್ಪಣೆ ಆದರಂತೂ ಆತ ಶಾಲೆ ತಪ್ಪಿಸುವುದು ಖಾತ್ರಿಯಾಗಿತ್ತು.

ಕನ್ನಡ ಭಾಷೆಯ ಪದ್ಯಭಾಗವಷ್ಟೇ ಆತನ ಸಮಸ್ಯೆ ಆಗಿರಲಿಲ್ಲ. ಆತನಿಗೆ ಸ್ವತಃ ಕಲಿಯಲು ಬೇಕಿದ್ದ ಓದು, ಬರಹ, ಅಂಕಗಣಿತ ದಕ್ಕಿರಲಿಲ್ಲ. ಈ ಕೌಶಲಗಳಿಲ್ಲದೆ ಸ್ವಕಲಿಕೆ ಸಿದ್ಧಿಸುವುದಿಲ್ಲ. ಇದರಿಂದಾಗಿ, ಶಾಲೆಗೆ ಬರುವುದರಲ್ಲಿ ಆತನಿಗೆ ಯಾವ ಅರ್ಥವೂ ಉಳಿದಿರಲಿಲ್ಲ ಅನ್ನಿಸುತ್ತದೆ. ಶಾಲೆಯಲ್ಲಿ ಆತನಿಗೆ ಕಲಿಯಲು ಪ್ರೇರಣೆ ದೊರೆಯುತ್ತಿರಲಿಲ್ಲ. ಪ್ರೇರಣೆ ಇಲ್ಲದ ಮೇಲೆ ಯಾವ ಚಲನೆಯೂ ಸಾಧ್ಯವಿಲ್ಲ. ಕೊನೆಗೊಂದು ದಿನ ಆತ ಶಾಲೆಗೊಂದು ದೊಡ್ಡ ನಮಸ್ಕಾರ ಹಾಕಲು ನಿರ್ಧರಿಸಿದ. ನಮಗದು ಅಷ್ಟು ತಕ್ಷಣಕ್ಕೆ ತಿಳಿದಿರಲಿಲ್ಲ. ಬರಬಹುದು ಇಂದಲ್ಲ ನಾಳೆ ಅಂದುಕೊಂಡೆವು. ಆಗಾಗ ಹೀಗೆ ರಜೆ ಮಾಡುವವನಾಗಿದ್ದರಿಂದ ನಾವು ಆತನ ಅನುಪಸ್ಥಿತಿಯನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.

ಈ ಲೇಖನ ಓದಿದ್ದೀರಾ?: ಪಾಟಿ ಚೀಲ | ಮೊಟ್ಟೆಯೊಂದು ತಟ್ಟೆಯ ಮೇಲೆ ಬಿದ್ದಾಗ...

ಹಾಗೆ ನೋಡಿದರೆ, ಆತ ಬರದೆ ಇರುವುದು ಕ್ಲಾಸಿನ ಒಳಗೆ ಅಂತಹ ವ್ಯತ್ಯಾಸವನ್ನು ಮಾಡಿರಲಿಲ್ಲ. ಆದರೆ, ಪದ್ಯ ಬಾಯಿಪಾಠ ಮಾಡದೆ ತರಗತಿಯ ಹೊರಗೆ ನಿಂತಿರುತ್ತಿದ್ದನಲ್ಲ, ಅಲ್ಲಿ ವ್ಯತ್ಯಾಸ ಎದ್ದು ಕಾಣಿಸುತಿತ್ತು. ಒಂದು ದಿನ ಆ ಹುಡುಗನ ತಂದೆ ಶಾಲೆಗೆ ಬಂದರು. ತಮ್ಮ ಮಗ ಇನ್ನು ಶಾಲೆಗೆ ಬರುವುದಿಲ್ಲ ಎಂಬ ತೀರ್ಮಾನವನ್ನು ತಿಳಿಸಿದರು. ಬಹುಶಃ ಆತ ಶಾಲೆಗೆ ಬರದೆ ಇರಲು ನಿರ್ಧರಿಸಿರುವುದನ್ನು ಎಲ್ಲರೂ ವಿರೋಧಿಸುತ್ತಾರೆಂದೂ ಮತ್ತು ಆತನ ಮನವೊಲಿಸಲು ಆತನ ಮನೆಗೆ ಬರುವುದಾಗಿ ಹೇಳುವರೆಂದೂ ಆತನ ತಂದೆ ಊಹಿಸಿದ್ದರೆಂದು ಕಾಣುತ್ತದೆ. ಅದಕ್ಕಾಗಿ ಅವರು ಆತನ ತೀರ್ಮಾನವನ್ನು ಶಿಕ್ಷಕರು ಒಪ್ಪಿಕೊಳ್ಳುವಂತೆ ಮಾಡಲು ಸಿದ್ಧತೆಯೊಂದಿಗೆ ಬಂದಿದ್ದರು. ಆದರೆ, ಅವರು ನಿರೀಕ್ಷಿಸಿದ ಪ್ರತಿಕ್ರಿಯೆ ಅಲ್ಲಿ ಸಿಗಲಿಲ್ಲ.

ಆದರೂ ಅವರು ಯೋಜಿಸಿದಂತೆ ತಮ್ಮ ಮಾತುಗಳನ್ನು ಆಡಿದರು: "ನನ್ನ ಮಗನಿಗೆ ಪಾಠ ತಲೆಗೆ ಹತ್ತುವುದಿಲ್ಲ. ಮೈ ಬಗ್ಗಿಸಿ ದುಡಿಯುವುದೂ ಅವನಿಂದ ಸಾಧ್ಯವಿಲ್ಲ. ಅದಾಗಿದ್ದರೆ, ಅಡಿಕೆ ಮರದ ಕೆಲಸ ಮಾಡಿಕೊಂಡು ಇದ್ದರೂ ಸಾಲುತಿತ್ತು. ನಿಮಗೆ ಗೊತ್ತಿದೆಯೋ ಇಲ್ಲವೋ, ಅವನಿಗೆ ಯಕ್ಷಗಾನವೆಂದರೆ ಪ್ರಾಣ...” ಎಂದರು. ಅವನನ್ನು ಉಡುಪಿಯ ಯಕ್ಷಗಾನ ಕಲಾಕೇಂದ್ರಕ್ಕೆ ಸೇರಿಸುವ ತಮ್ಮ ತೀರ್ಮಾನವನ್ನು ತಿಳಿಸಿದರು. ಶಾಲೆಯಿಂದ ಅವನ ಕಲಿಕಾ ಧೃಢೀಕರಣ ಪತ್ರವನ್ನು ತೆಗೆದುಕೊಂಡು ಹೋದರು.

School Students

ಶಾಲೆ ಅವನನ್ನು ಹೆಚ್ಚೂಕಡಿಮೆ ಮರೆತೇಬಿಟ್ಟಿತ್ತು. ಆದರೆ, ಆತ ಶಾಲೆಯನ್ನು ಮರೆತಿರಲಿಲ್ಲ. ಇದಾಗಿ ಮೂರೇ ವರ್ಷಗಳಲ್ಲಿ ಆತ ಶಾಲೆಗೆ ಬಂದ. ಆತನ ಕಂಠದಲ್ಲಿದ್ದ ಮಾಧುರ್ಯ, ಯಕ್ಷಗಾನದ ಭಾಗವತಿಕೆಯ ಕುರಿತಾದ ಒಲವು ಎಲ್ಲವನ್ನೂ ತಿಳಿದುಕೊಂಡ ಯಕ್ಷಗಾನ ಗುರುಗಳು ಆತನಿಗೆ ಭಾಗವತಿಕೆಯ ತರಬೇತಿ ನೀಡಿದ್ದರು. ಆ ಹುಡುಗ ಈಗ ಯಕ್ಷಗಾನ ಮೇಳವೊಂದರಲ್ಲಿ ಭಾಗವತರಾಗಿದ್ದನು. ಅದೇ ದಿನ ಶಾಲೆಯ ಮೈದಾನದಲ್ಲಿ ನಡೆಯಲಿರುವ ಆಟದಲ್ಲಿ ತನ್ನದೇ ಭಾಗವತಿಕೆಯೆಂದೂ, ತಾವೆಲ್ಲರೂ ಬರಬೇಕೆಂದೂ ಸ್ವತಃ ಬಂದು ಹೇಳಿಹೋದನು. ಶಿಷ್ಯ ಈಗ ಭಾಗವತರಾಗಿರುವುದು ಹೆಮ್ಮೆಯ ವಿಷಯವಲ್ಲವೇ? ನಾವೆಲ್ಲ ಆ ರಾತ್ರಿಯ ಯಕ್ಷಗಾನ ನೋಡಲು ಹೋದೆವು. ಒಂದೇ ಒಂದು ಪದ್ಯವನ್ನು ಬಾಯಿಪಾಠ ಮಾಡದಿದ್ದ ಆ ಹುಡುಗ, ಈಗ ಪ್ರಸಂಗ ಪುಸ್ತಕ ನೋಡದೆ ಇಡೀ ಆಟದ ಭಾಗವತಿಕೆ ಮಾಡಬಲ್ಲವನಾಗಿದ್ದನು! ಆ ಹುಡುಗನಿಗೆ ನಾವು ಒದಗಿಸಲಾಗದೆ ಇದ್ದದ್ದು ಯಾವುದು? ಅಕ್ಷರವೇ ಅಥವಾ ಪ್ರೇರಣೆಯೇ? ರಾತ್ರಿಯಿಡೀ ಈ ಪ್ರಶ್ನೆ ಚಂಡೆ ಮದ್ದಳೆಗಳ ಸದ್ದಿನಲ್ಲಿ ಕುಣಿಯುತ್ತಿತ್ತು.

ಈ ಕತೆಯನ್ನು ಯಾವುದೋ ಒಂದು ಕಾರ್ಯಾಗಾರದಲ್ಲಿ ಹಂಚಿಕೊಂಡಿದ್ದು ಹೇಗೋ ಆತನಿಗೆ ತಲುಪಿತ್ತು. ಆತ ರೋಮಾಂಚಿತನಾಗಿದ್ದ. ಮೇಷ್ಟ್ರ ಬಾಯಿಂದ ತನ್ನ ಬಗ್ಗೆ ಎಂಥದ್ದೋ ಮೆಚ್ಚುಗೆಯ ಮಾತು ಬಂದಿದೆಯೆಂಬ ಪುಟ್ಟ ಸುಳಿವೇ ಆತನನ್ನು ಪುಳಕಿತಗೊಳಿಸಿತ್ತು. "ಛೇ! ಶಾಲೆಯಲ್ಲಿದ್ದಾಗ ಆತನನ್ನು ಹೊಗಳಲು ನಮಗೆ ಯಾವ ಕಾರಣವೂ ಸಿಗಲಿಲ್ಲವೇ...” ಎಂಬ ಪ್ರಶ್ನೆ ನನ್ನನ್ನು ಅಸ್ವಸ್ಥನನ್ನಾಗಿಸಿತು.

ನಿಮಗೆ ಏನು ಅನ್ನಿಸ್ತು?
26 ವೋಟ್
eedina app