
ತೋಟವೆಂದರೆ ಹಲವು ಜೀವಿಗಳ ಆವಾಸಸ್ಥಾನ. ಹಾವುಗಳು, ಮರಗಳು, ನಾನಾ ತರಹದ ಬೆಳೆಗಳು ಮತ್ತು ಕಳೆಗಳು, ಬೆಳೆಗಳಿಗೆ ಬರುವ ಕೀಟಗಳು, ಕೀಟಗಳನ್ನು ಹಿಡಿದು ತಮ್ಮ ಮರಿಗಳನ್ನು ಸಾಕುವ ಪಕ್ಷಿಗಳು... ಹೀಗೆ ಒಂದಕ್ಕೊಂದು ಸಂಬಂಧ ಬೆಳೆದು, ಬಿಡಿಸಲಾಗದ ನಂಟೊಂದು ಬೆಳೆದಿರುತ್ತದೆ. ನಾವು ಈ ನಂಟಿನ ಚಂದವನ್ನು ಮನಗಂಡರೆ ಸಂಘರ್ಷ ತಪ್ಪೀತು
ನಮ್ಮೆಲ್ಲರ ರಾತ್ರಿ ಹಲವು ಜೀವಿಗಳ ಬೆಳಗೂ ಹೌದು. ಅಂದರೆ, ನಾವು ಮಲಗಿದಾಗ ಅವು ಎಚ್ಚರವಾಗಿ ತಮ್ಮ ಬದುಕು ನಡೆಸುತ್ತವೆ.
ಮೊನ್ನೆ ಹೀಗಾಯಿತು... ಬೇಸಿಗೆ ಕಾಲ ಬಂದರೆ ತೋಟಗಳಿಗೆ ನೀರಿನ ವ್ಯವಸ್ಥೆ ಮಾಡುವಷ್ಟರಲ್ಲಿ ಕೆಲಸಗಳು ರೈತರನ್ನು ಹೈರಾಣಾಗಿಸುತ್ತವೆ. ಸಂಜೆಯಾಗುತ್ತಿದ್ದಂತೆ ಬೆಳಗಿನ ಉತ್ಸಾಹ ಕಡಿಮೆಯಾಗಿ ಆಯಾಸ ಉಕ್ಕಿ ಬಂದಿರುತ್ತದೆ. ತೀಕ್ಷ್ಣ ಸ್ವಭಾವ ಹೋಗಿ, ಕೆಲಸ ಮಂದಗತಿಯಲ್ಲಿ ಸಾಗುತ್ತದೆ. ಆಗ ನಮ್ಮ ಯೋಚನೆಗಳು ಮತ್ತು ದೇಹ ಸ್ಪಂದನೆಯು ನಿಧಾನವಾಗಿರುತ್ತದೆ.
ನಾವು ಕೂಡ ರಸ್ತೆ ಬದಿಯ ತೋಟದಿಂದ ಮನೆಯ ತೋಟಕ್ಕೆ ನೀರಿನ ವ್ಯವಸ್ಥೆ ಮಾಡಲು ಗುಂಡಿ ತೆಗೆಸಿದ್ದೆವು. ಕೆಲಸ ಸಾಗಿ ಅದಾಗಲೇ ಸಂಜೆಯಾಗುತ್ತ ಬಂದಿತ್ತು. ಸಹಾಯಕ್ಕೆ ಬಂದಿದ್ದ ಶಶಣ್ಣ ಗುಂಡಿಯಲ್ಲಿ ಇಳಿದು, ಇನ್ನೇನು ಕೊನೆಯ ಪೈಪು ಜೋಡಿಸಲು ಕೈ ಇಡಬೇಕು... “ಅಯ್ಯೋ ಹಾವು...” ಎಂದು ಕೂಗಿದ್ದೇ, ಗುಂಡಿಯ ಮೇಲಕ್ಕೆ ಹಾರಿದರು. ಅಲ್ಲಿ ನಿಂತಿದ್ದ ನಮ್ಮೆಲ್ಲರ ಎದೆ ಝಲ್ ಎಂದಿತು. ನಾನು ತಕ್ಷಣ ಬಗ್ಗಿ ಎಂತಹ ಹಾವೆಂದು ನೋಡುವಲ್ಲಿ ನಿರತನಾದೆ. ಅತ್ತ ಶಶಣ್ಣ ಗಾಬರಿಯಾದರೂ, "ಕಡಿಯಲಿಲ್ಲ," ಎಂದು ಹೇಳಿದರು.
ಸ್ವಲ್ಪ ದೂರ ಹರಿದ ಹಾವು, ಒಂದೆಡೆ ನಿಂತು ಯೋಚಿಸತೊಡಗಿತು. ಇದೇ ಸಮಯದಲ್ಲಿ, ಇದು ಹುಲ್ಲುಹಾವೆಂದು ಗುರುತಿಗೆ ಸಿಕ್ಕಿತು. ಇಂಗ್ಲೀಷಿನಲ್ಲಿ 'ಬಫ್ ಸ್ಟ್ರೈಪ್ಡ್ ಕೀಲ್ ಬ್ಯಾಕ್' ಎಂದು ಕರೆಯುತ್ತಾರೆ. ತಕ್ಷಣಕ್ಕೆ ಇದು ಅಪಾಯಕಾರಿ ಹಾವಲ್ಲವೆಂದೂ, ಸೌಮ್ಯ ಸ್ವಭಾವದ ಹಾವೆಂದೂ, ಜೊತೆಗೆ, ನಮ್ಮ ಪರಿಸರಕ್ಕೆ ಅತೀ ಮುಖ್ಯ ಹಾವೆಂದೂ ಹೇಳಿದ್ದಕ್ಕೆ, ಸುತ್ತಮುತ್ತ ಇದ್ದ ರೈತರು ಹಾವನ್ನು ಸಾಯಿಸದೆ ಬಿಟ್ಟದ್ದು ಸಂತಸವಾಯಿತು.

ಸಂಜೆಯಾದರೆ ಸಾಕು, ಹಲವು ಹಾವುಗಳು ಕ್ರಿಯಾಶೀಲರಾಗುತ್ತವೆ. ಆದ್ದರಿಂದ ರಾತ್ರಿಯ ಹುಷಾರು ನಮ್ಮ ಕೈನಲ್ಲಿರಬೇಕು. ಅರಿವಿಲ್ಲದೆ ಹೋದರೆ, ಯಾವ ಹಾವು ಕಂಡರೂ ಮೊದಲಿಗೆ ಅದನ್ನು ಸಾಯಿಸುವ ಯೋಚನೆ ಬಂದುಬಿಡುತ್ತದೆ. ಆದರೆ, ಹಾವುಗಳು ನಮ್ಮ ಪರಿಸರದ ಅತೀ ಮುಖ್ಯ ಭಾಗ. ಹಾಗಾಗಿ, ಇವುಗಳ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡಾಗ ಸಂಘರ್ಷ ಕಡಿಮೆಯಾಗುತ್ತದೆ. ಕತ್ತಲಿನಲ್ಲಿ ಕೆಲಸ ಮಾಡುವಾಗ ಸಾಧ್ಯವಾದಷ್ಟೂ ಎಚ್ಚರದಿಂದಿದ್ದು, ಕಾಲಿಗೆ ಉದ್ದ ಬೂಟು ಧರಿಸಿ, ಟಾರ್ಚ್ ಬೆಳಕಿನ ಸಹಾಯವಿದ್ದರೆ ಹಾವಿಗೂ ಒಳ್ಳೆಯದು, ನಮಗೂ ಒಳ್ಳೆಯದು.
ಒಂದು ತೋಟವೆಂದರೆ ಅಲ್ಲಿ ಹಲವು ಜೀವಿಗಳು ಬದುಕುತ್ತವೆ. ಹಾವುಗಳು, ಮರಗಳು, ನಾನಾ ತರಹದ ಬೆಳೆಗಳು ಮತ್ತು ಕಳೆಗಳು, ಬೆಳೆಗಳಿಗೆ ಬರುವ ಕೀಟಗಳು, ಕೀಟಗಳನ್ನು ಹಿಡಿದು ತಮ್ಮ ಮರಿಗಳನ್ನು ಸಾಕುವ ಪಕ್ಷಿಗಳು... ಹೀಗೆ ಒಂದಕ್ಕೊಂದು ಸಂಬಂಧ ಬೆಳೆದು ಬಿಡಿಸಲಾಗದ ನಂಟೊಂದು ಬೆಳೆದಿರುತ್ತದೆ.
ಇದನ್ನು ಓದಿದ್ದೀರಾ?: ನುಡಿಚಿತ್ರ | ದಿಲ್ಲಿಯ ರಾಜಕುಮಾರಿ ನಾಚ್ಚಿಯಾರ್ ಮತ್ತು ಮೇಲುಕೋಟೆಯ ಚೆಲುವನಾರಾಯಣ
ಚಿಕ್ಕನಾಯಕನಹಳ್ಳಿಯ ತೋಟವೊಂದರಲ್ಲಿ ಪರಿಚಯದ ರೈತರ ಕೃಷಿ ಹೊಲದಲ್ಲಿ ಸಹಾಯಕನಾಗಿ ಹಲವು ಬಾರಿ ತಂಗುತ್ತಿರುತ್ತೇನೆ. ಸಂಜೆಯಾದರೆ ಮನೆಯ ಬಯಲಿನಲ್ಲಿ ಕೂತು ಹಲವು ಪಕ್ಷಿಗಳನ್ನು ಗಮನಿಸುತ್ತ, ಮನೆಯ ಮಾಲೀಕರ ಜೊತೆ ಮಾತು ನಡೆಸುತ್ತಿರುತ್ತೇನೆ. ಕಳೆದ ತಿಂಗಳಿಂದ ಇದೇ ತೋಟದಲ್ಲಿ ಎರಡು ಮಡಿವಾಳ ಹಕ್ಕಿಗಳು ಸರಸ-ಸಲ್ಲಾಪ ಮಾಡುತ್ತ, ಕೂಗಿ ಕುಣಿಯುತ್ತ ಹಾಡುತ್ತಿದುದು ಕಂಡಿದ್ದೆವು. ಅಂದರೆ, ನಮ್ಮಲ್ಲಿ ಈಗ ಅನೇಕ ಹಕ್ಕಿಗಳ ವಂಶಾಭಿವೃದ್ಧಿ ನಡೆಯುವ ಕಾಲ. ಆದ್ದರಿಂದ ಗಂಡು ಹಕ್ಕಿಗಳು ಹೆಣ್ಣು ಹಕ್ಕಿಗಳ ಮುಂದೆ ತಮ್ಮೆಲ್ಲ ಶಕ್ತಿ, ಕುಶಲತೆ, ಬಣ್ಣಗಳನ್ನು ಪ್ರದರ್ಶಿಸಿ ಹೆಣ್ಣನ್ನು ಒಲಿಸಿಕೊಳ್ಳಬೇಕಾಗುತ್ತದೆ. ಒಂದು ಹೆಣ್ಣು ಗಂಡನ್ನು ಒಪ್ಪಬೇಕೆಂದರೆ, ತಾನು ಕೂಡಿದ ಗಂಡಿನಿಂದ ತನ್ನ ಮರಿಗಳು ಆರೋಗ್ಯಕರವಾಗಿದ್ದು ಮುಂದಿನ ಪೀಳಿಗೆ ಸುಭದ್ರವಾಗಿ ಇರಬೇಕಾಗುತ್ತದೆ. ಆದ್ದರಿಂದ ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು, ಹೆಣ್ಣು ತನ್ನ ಗಂಡು ಜೋಡಿಯನ್ನು ಆರಿಸಿಕೊಳ್ಳುತ್ತವೆ.
ತೋಟದಲ್ಲಿ ರೈತರಾದ ಬೊಮ್ಮಣ್ಣನವರು ಒಣಗಿದ ತೆಂಗಿನ ಸಸಿಗಳನ್ನು ಕಿತ್ತು ಹೊಸ ಹೋಗುಣಿ ಮಾಡುವಾಗ, ಹಕ್ಕಿಯೊಂದು ಗೂಡು ಮಾಡಿ ಮರಿ ಮಾಡಿದ್ದನ್ನು ಕಂಡು ತಕ್ಷಣ ವಿಷಯ ತಿಳಿಸಿದರು. ಹೋಗಿ ನೋಡಿದರೆ, ಒಂದು ಸುಂದರ ಮರಿಯ ಜೊತೆ ಇನ್ನೊಂದು ಮೊಟ್ಟೆ ಗೂಡಿನಲ್ಲಿ ಇರುವುದು ಕಂಡಿತು. ಸ್ವಲ್ಪ ಹೊತ್ತು ಮರೆಯಲ್ಲಿ ನಿಂತು ಗಮನಿಸಿದಾಗ, ಈ ಮೊದಲು ನಾವು ಕಂಡಿದ್ದ ಅದೇ ಮಡಿವಾಳ ಹಕ್ಕಿಗಳು ಇಲ್ಲಿ ಸಂಸಾರ ಹೂಡಿ ಮರಿ ಮಾಡಿದ್ದವು. ಸಾಮಾನ್ಯವಾಗಿ ರೈತರು ತಮ್ಮ ದಿನನಿತ್ಯದ ಕೃಷಿ ಕೆಲಸಗಳಲ್ಲಿ ತಮ್ಮ ತೋಟದ ಜೀವ ಪರಿಸರ ಗಮನಿಸಿರುವುದಿಲ್ಲ. ಆದರೆ, ನಾನು ಅದೇ ತೋಟದಲ್ಲಿ ತಂಗುವುದರಿಂದ ರೈತರಿಗೂ ನನಗೂ ಹಲವು ಬಾರಿ ಈ ಹಕ್ಕಿ ವಿಚಾರವಾಗಿ ಚರ್ಚೆಗಳು ನಡೆಯುತ್ತಿರುತ್ತವೆ. ಪರಿಣಾಮವಾಗಿ ರೈತ ಬೊಮ್ಮಣ್ಣನವರು ತಮ್ಮ ತೋಟದಲ್ಲಿ ಕಂಡ ಮಡಿವಾಳ ಹಕ್ಕಿಯ ಗೂಡು ಗಮನಿಸಿ, ಹೋಗಿರುವ ಸಸಿಯನ್ನು ಕೀಳದೆ, ಅವುಗಳ ಪಾಡಿಗೆ ಅವನ್ನು ಬಿಟ್ಟು ಬಂದದ್ದು ನಮ್ಮ ಚರ್ಚೆಗೆ ಒಂದು ಸಾರ್ಥಕತೆ ಒದಗಿಸಿದಂತಾಯಿತು.

ಕಾಡುಗಳು, ಹುಲ್ಲುಗಾವಲುಗಳು ಸೇರಿದಂತೆ ಅನೇಕ ಹಕ್ಕಿ-ಪಕ್ಷಿಗಳ ಆವಾಸ ಸ್ಥಾನ ಕಡಿಮೆಯಾಗಿದ್ದರಿಂದ, ಈ ಜೀವಿಗಳು ನಮ್ಮ ಕೃಷಿ ಹೊಲಗಳನ್ನೇ ತಮ್ಮ ಆವಾಸ ಸ್ಥಾನ ಮಾಡಿಕೊಂಡಿವೆ. ಇದನ್ನೆಲ್ಲ ನಮ್ಮ ರೈತರು ಅರಿತು ಕೃಷಿ ಮಾಡಿದಾಗ ತಮ್ಮ ತೋಟಗಳಿಗೆ ಮತ್ತು ಪರಿಸರಕ್ಕೂ ಅನೇಕ ಲಾಭಗಳಿವೆ. ಒಂದು ಪಕ್ಷಿ ನಿಮ್ಮ ತೋಟದಲ್ಲಿ ಗೂಡು ಮಾಡಿದೆಯೆಂದರೆ, ನಿಮ್ಮ ತೋಟದಲ್ಲಿ ಇರುವ ಸಾವಿರಾರು ಕೀಟಗಳನ್ನು ಹಿಡಿದು ತಿನ್ನುವುದರ ಜೊತೆಗೆ, ತಮ್ಮ ಮರಿಗಳಿಗೂ ಹಿಡಿದು ತಿನ್ನಿಸುತ್ತವೆ. ನಂತರ ಅದೇ ತೋಟದಲ್ಲಿ ಪಿಕ್ಕೆ ಹಾಕುವುದರಿಂದ ನಮ್ಮ ತೋಟದ ಫಲವತ್ತತೆ ಕೂಡ ಹೆಚ್ಚಾಗುತ್ತದೆ.
ರಾಸಾಯನಿಕ ಬಳಕೆ ಮಾಡದ, ಹೆಚ್ಚು ಅಡಚಣೆ ಇಲ್ಲದ ತೋಟಗಳಲ್ಲಿ ಎಕರೆ ಜಾಗದಲ್ಲಿ ಹತ್ತಾರು ಪಕ್ಷಿಗಳು ಸುಲಭವಾಗಿ ಗೂಡು ಮಾಡಿಕೊಂಡು ಸಂಸಾರ ನಡೆಸುತ್ತಿರುತ್ತವೆ. ಅಂದ ಮೇಲೆ, ನಿಮ್ಮ ತೋಟದಲ್ಲಿ ಅದೆಷ್ಟು ಕೀಟಗಳು ನಾಶವಾಗಬಹುದು, ನಿಮ್ಮ ತೋಟಕ್ಕೆ ಅದೆಷ್ಟು ಗೊಬ್ಬರ ಬೀಳಬಹದು, ನಿಮ್ಮ ತೋಟದಲ್ಲಿ ಎಷ್ಟೆಲ್ಲ ಬೀಜ ಪ್ರಸರಣ ಆಗಬಹುದು...? ಯೋಚಿಸಿ. ಆದ್ದರಿಂದ, ರೈತರಾದ ನಾವು ನಮ್ಮ ತೋಟಗಳಲ್ಲಿ ರಾಸಾಯನಿಕ ಬಳಕೆ ಕಡಿಮೆ ಮಾಡಿ ಪರಿಸರಕ್ಕೆ ಹತ್ತಿರವಾದ ಕೃಷಿ ಮಾಡೋಣ. ಹಕ್ಕಿಗಳ ಗೂಡುಗಳು ಮತ್ತು ಇರುವಿಕೆ ಗಮನಿಸಿ ಅವುಗಳ ಜೊತೆಯೇ ಬದುಕೋಣ.