ವರ್ತಮಾನ | ಕರ್ನಾಟಕಕ್ಕೆ ಬೇಕಿರುವುದು ಕಟ್ಟುವ ಮಾದರಿಯೋ ಕೆಡಹುವ ಮಾದರಿಯೋ?

Buldozer 4a

ಇತ್ತೀಚೆಗೆ ಬುಲ್ಡೋಜರ್‌ಗಳ ಅಬ್ಬರ ಹೆಚ್ಚಾಗಿದೆ. ಆದರೆ, ಪ್ರಭುತ್ವ ಹೊಸಕುತ್ತಿರುವುದು ನಮ್ಮ ಗೂಡನ್ನಲ್ಲ ಎಂದು ಸುಮ್ಮನಿದ್ದರೆ, ನಾಳಿನ ಸರದಿ ನಮ್ಮದೂ ಆಗಬಹುದು. ತಪ್ಪು ಮಾಡಿದವರಿಗೆ ಬುದ್ಧಿ ಕಲಿಸಲು ಹೊರಟವರು ಕೂಡ ಅವಿವೇಕಿಗಳಂತೆ ವರ್ತಿಸುವುದೇ ಸರಿ ಎಂದು ಸಮಾಜ ಭಾವಿಸತೊಡಗಿದರೆ, ನಾಳೆಗಳು ನೆಮ್ಮದಿ ಕಳೆದುಕೊಳ್ಳುವುದು ನಿಚ್ಚಳ

ನಾವು ವಾಸಿಸುವ ಕಟ್ಟಡದ ಮೊದಲ ಮಹಡಿಯಲ್ಲಿರುವ ಮೂರು ಮನೆಗಳ ಎದುರು ಬಟ್ಟೆ ಒಣಗಿಸಲೆಂದು ಶೀಟು ಹೊದಿಸಿಬಿಟ್ಟಿರುವ ಜಾಗದಲ್ಲಿ ಗೂಡು ಕಟ್ಟಲು ಬುಲ್‍ಬುಲ್ (ಪಿಕಳಾರ) ಹಕ್ಕಿಯೊಂದು ಕಳೆದ ಕೆಲ ದಿನಗಳಿಂದ ಪ್ರಯತ್ನಿಸುತ್ತಲೇ ಇತ್ತು. ಒಂದಿಷ್ಟು ಕಡ್ಡಿಗಳನ್ನು ತಂದು, ಶೀಟು ಮತ್ತು ಕಬ್ಬಿಣದ ಸರಳುಗಳ ನಡುವಿನ ಜಾಗದಲ್ಲಿ ಪೇರಿಸಿಡುತ್ತಿತ್ತು. ಜೋರಾಗಿ ಗಾಳಿ ಬೀಸಿದಾಗ ಅಥವಾ ಬಟ್ಟೆ ಒಣಗಿಸಲೆಂದು ಕಟ್ಟಿರುವ ವೈರುಗಳನ್ನು ಯಾರಾದರೂ ಅಲುಗಾಡಿಸಿದಾಗ, ಅರೆಬರೆ ಕಟ್ಟಲ್ಪಟ್ಟಿದ್ದ ಗೂಡು ಕೆಳಗೆ ಬೀಳುತ್ತಿತ್ತು. ಮೂರ್ನಾಲ್ಕು ಬಾರಿ ಹೀಗಾದರೂ ಹಕ್ಕಿ ಮಾತ್ರ ಅದೇ ಜಾಗದಲ್ಲೇ ಗೂಡು ಕಟ್ಟಲು ಹೊರಡುತ್ತಿತ್ತು.

ಇದನ್ನೆಲ್ಲ ಗಮನಿಸಿದ್ದ ಆ ಮೂರು ಮನೆಗಳ ಮಹಿಳೆಯರು, ಏನು ಮಾಡುವುದೆಂದು ಯೋಚಿಸತೊಡಗಿದರು. "ಇಲ್ಲಿ ಗೂಡು ಕಟ್ಟಿ ಮರಿ ಮಾಡಲು ಸಾಧ್ಯವೇ ಇಲ್ಲ. ನಾವು ಬಟ್ಟೆ ಒಣಹಾಕಲು ಮುಂದಾದರೆ ಸಾಕು, ಗೂಡು ಕೆಳಗೆ ಬೀಳುತ್ತದೆ. ಈ ಸಲ ಅದಾಗೇ ಬೀಳಲಿ ಅಂತ ಕಾಯುವ ಬದಲು ನಾವೇ ಕಿತ್ತು ಬಿಸಾಕೋಣ. ಗೂಡು ಕಟ್ಟಿದ್ರೆ ಇಲ್ಲೆಲ್ಲ ಗಲೀಜಾಗುತ್ತೆ," ಎಂದರೊಬ್ಬರು. ಇವರ ಮಾತಿಗೆ ಅಸಮ್ಮತಿ ಸೂಚಿಸಿದ ಮತ್ತೊಬ್ಬರು, "ಹಕ್ಕಿಗಳು ಕೂಡ ನಮ್ಮ ಹಾಗೇ ಅಲ್ವಾ? ನಮ್ಮ ಮನೆಯನ್ನು ಯಾರಾದರೂ ಇದ್ದಕ್ಕಿದ್ದಂತೆ ಬಂದು ಕೆಡವಿ ಹಾಕಿದರೆ ನಮಗೆ ಹೇಗೆ ನೋವಾಗುತ್ತೋ ಹಾಗೆ ಹಕ್ಕಿಗೂ ನೋವಾಗಲ್ವಾ?" ಅಂತ ತಮ್ಮ ಅಭಿಪ್ರಾಯ ಮಂಡಿಸಿದರು. ಇವರಿಬ್ಬರ ವಾದ ಆಲಿಸುತ್ತಿದ್ದ ಇನ್ನೊಬ್ಬರು, "ಹಾಗಾದ್ರೆ ಒಂದು ಕೆಲ್ಸ ಮಾಡೋಣ. ಈಗ ಕಟ್ತಾ ಇರೋ ಗೂಡು ಬೀಳದ ಹಾಗೆ ಏನಾದರೂ ಮಾಡೋಣ," ಅಂತ ಸಲಹೆ ನೀಡಿದ್ದಲ್ಲದೆ, ಗೂಡು ಬೀಳಿಸುವುದು ಬೇಡವೆಂದು ವಾದಿಸಿದವರೊಂದಿಗೆ ಸೇರಿ ಅದನ್ನು ಕಾರ್ಯಗತಗೊಳಿಸಿದರು.

Image
Buldozer 2

ಅದಾದ ನಂತರ ಹಕ್ಕಿ ಗೂಡು ಕಟ್ಟಿ, ಅದರಲ್ಲಿ ಮೊಟ್ಟೆಗಳನ್ನೂ ಇಡಲಾರಂಭಿಸಿದ್ದನ್ನು ಅವರು ಗಮನಿಸುತ್ತಿದ್ದರು. ಕೆಲ ದಿನಗಳು ಕಳೆದ ನಂತರ ಒಂದೆರಡು ದಿನ ಹಕ್ಕಿ ಗೂಡಿನತ್ತ ಬಾರದಿರುವುದನ್ನು ಕಂಡು, ಗೂಡಿನಲ್ಲಿರುವ ಮರಿಗಳೇನಾದರೂ ಸತ್ತುಹೋದವೋ ಎನ್ನುವ ಆತಂಕದಲ್ಲಿ ಪರಿಶೀಲಿಸಿದಾಗ, ಹಕ್ಕಿಯು ಮರಿಗಳೊಂದಿಗೆ ಗೂಡು ಖಾಲಿ ಮಾಡಿರುವುದು ಅವರಿಗೆ ಮನದಟ್ಟಾಯಿತು. ಮೂವರೂ ನಿಟ್ಟುಸಿರು ಬಿಟ್ಟು ಖಾಲಿ ಗೂಡು ತೆರವುಗೊಳಿಸಿದರು.

ಈ ಹಕ್ಕಿಯಂತೆ ಸ್ವಂತದ್ದೊಂದು ಸೂರಿಲ್ಲದ, ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಅವಕಾಶ ಸಿಕ್ಕ ಕಡೆ ಜೋಪಡಿ ಕಟ್ಟಿಕೊಂಡು ಬದುಕು ದೂಡಲು ಹೊರಡುವ ಜನರನ್ನು ಪ್ರಭುತ್ವ ನಡೆಸಿಕೊಳ್ಳಬೇಕಿರುವುದು ಹೇಗೆ? ಬುಲ್ಡೋಜರ್‌ಗಳ ಮೂಲಕ ಜನರ ಬದುಕನ್ನೇ ನೆಲಸಮಗೊಳಿಸುವ ಪ್ರಭುತ್ವದ ಅಮಾನವೀಯ ಆರ್ಭಟವನ್ನೇ ಮಾದರಿ ನಡೆಯಾಗಿ ಸಮಾಜ ಒಪ್ಪಿಕೊಳ್ಳುವುದೆಂದರೆ, ಹಕ್ಕಿಗೂಡನ್ನು ಕಿತ್ತು ಎಸೆಯೋಣವೆಂದು ವಾದಿಸಿದವರ ಪರ ನಿಲ್ಲುವುದೆಂದು ಅರ್ಥವಲ್ಲವೇ? ಕಾನೂನುಗಳನ್ನು ಗಾಳಿಗೆ ತೂರಿ ಬಲಾಢ್ಯರು ನಡೆಸಿರುವ ಒತ್ತುವರಿ ತೆರವುಗೊಳಿಸುವ ಚೈತನ್ಯವಿಲ್ಲದ ಪ್ರಭುತ್ವದ ಬುಲ್ಡೋಜರ್‌ಗಳು ಅನಾಯಾಸವಾಗಿ ಸಾಗುವುದು ಅಲಕ್ಷಿತ ಸಮುದಾಯಗಳು ಬೀಡು ಬಿಟ್ಟಿರುವ ಬೀದಿ - ಮತ್ತದರ ಬದಿಗಳಿಗೆ ಎಂಬುದು ಕಣ್ಣೆದುರಿನ ವಾಸ್ತವವಲ್ಲವೇ?

ಈ ಲೇಖನ ಓದಿದ್ದೀರಾ?: ತರ್ಕ | ಹಿಂದೂಗಳು 'ಹಿಂದುತ್ವ'ದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬಲ್ಲರೇ?

ಕಟ್ಟುವ ಕ್ರಿಯೆಯೆಡೆಗೆ ಹೆಚ್ಚು ಸಮಯ ಮತ್ತು ಸಂಪನ್ಮೂಲಗಳನ್ನು ವಿನಿಯೋಗಿಸಬೇಕಿದ್ದ ನೀತಿ ನಿರೂಪಕರ ಗಮನವೆಲ್ಲ ನೆಲಸಮಗೊಳಿಸುವುದರೆಡೆಗೆ ತಿರುಗಿರುವುದು ಏನನ್ನು ಸೂಚಿಸುತ್ತದೆ? ನಾವು ರೂಪಿಸಿಕೊಂಡಿರುವ ವ್ಯವಸ್ಥೆಯು ತಲುಪಬೇಕಾದವರನ್ನು ತಲುಪಿ, ಅವರಿಗೂ ಒಂದಿಷ್ಟು ಶಿಕ್ಷಣ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಪದೇಪದೆ ವಿಫಲವಾಗುತ್ತಿದ್ದರೆ, ಅದರ ಹೊಣೆ ಯಾರು ಹೊರಬೇಕು? ವ್ಯವಸ್ಥೆಯೋ ಅಥವಾ ಅವಕಾಶ ವಂಚಿತರೋ? ಆಡಳಿತ ಕ್ರಮಗಳ ಮೂಲಕ ಯಾರ ಬದುಕಿಗೆ ಚೈತನ್ಯ ತುಂಬಲು ತನ್ನಿಂದ ಇದುವರೆಗೂ ಸಾಧ್ಯವಾಗಿಲ್ಲವೋ ಅಂತಹವರು, ಹೊಟ್ಟೆಪಾಡಿಗಾಗಿ ದಾಖಲೆಗಳ ಪ್ರಕಾರ ತಮ್ಮದಲ್ಲದ ಜಾಗದಲ್ಲಿ ಬದುಕು ರೂಪಿಸಿಕೊಂಡರೆ, ಆ ಬದುಕನ್ನೂ ನಿರ್ನಾಮಗೊಳಿಸುವ ಪ್ರಭುತ್ವದ ಅಟ್ಟಹಾಸವೇ ನಮ್ಮ ಕಣ್ಣಿಗೆ ಮಹಾಸಾಧನೆಯಾಗಿ ತೋರುವುದು ನಮ್ಮೊಳಗಿನ ಕ್ರೌರ್ಯಕ್ಕೆ ಹಿಡಿದ ಕನ್ನಡಿಯಂತೆ ಭಾಸವಾಗುವುದಿಲ್ಲವೇ? ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ಹೊತ್ತಿರುವವರೇ, ನಾವು ರೂಪಿಸಿಕೊಂಡಿರುವ ನ್ಯಾಯದಾನ ವ್ಯವಸ್ಥೆಯ ಆಶಯಕ್ಕೆ ವಿರುದ್ಧವಾಗಿ ವರ್ತಿಸಿದರೆ ಅದನ್ನು ಮಾದರಿ ಆಡಳಿತವೆಂದು ಕರೆಯಬಹುದೇ? ಇಂತಹ ಮಾದರಿಗಳನ್ನು ಅಳವಡಿಸಿಕೊಳ್ಳುವ ಉತ್ಸಾಹವನ್ನು ನಮ್ಮದೇ ರಾಜ್ಯದ ಸಚಿವರೂ ತೋರುತ್ತಿರುವುದೇಕೆ? ಕಟ್ಟುವ ಮಾದರಿ ಅಳವಡಿಸಿಕೊಂಡು ಮುನ್ನುಗ್ಗುತ್ತಿದ್ದ ಕರ್ನಾಟಕಕ್ಕೆ ನೆಲಸಮಗೊಳಿಸಿ ವಿಕೃತಿ ಮೆರೆಯುವ ಅನಾಗರಿಕ ಮಾದರಿ ಬೇಕೆ?

ತಕ್ಕಮಟ್ಟಿಗೆ ವ್ಯವಸ್ಥಿತವಾಗಿ ಅಭಿವೃದ್ಧಿಗೊಳಿಸಿರುವ ಬಡಾವಣೆಗಳಲ್ಲಿ ನೆಲೆಸಿರುವವರಿಗೆ ಕೊಳಚೆ ಪ್ರದೇಶ ಅಥವಾ ಸ್ಲಮ್ಮುಗಳೆಂದರೆ ಏನೋ ಅಸಡ್ಡೆ. ಸ್ಥಳೀಯ ಆಡಳಿತ ಸ್ಲಮ್ಮುಗಳಲ್ಲಿ ತೆರವು ಕಾರ್ಯಾಚರಣೆ ನಡೆಸಿದಾಗ, ತಮಗೂ ಇದಕ್ಕೂ ಸಂಬಂಧವೇ ಇಲ್ಲವೇನೋ ಎನ್ನುವ ನಿಲುವು ಬಹುತೇಕರದ್ದು. ಆದರೆ, ಮಹಾನಗರಗಳ ಸರ್ವತೋಮುಖ ಬೆಳವಣಿಗೆಗೆ ಸ್ಲಮ್ಮುಗಳು ಹೇಗೆ ಕೊಡುಗೆ ನೀಡುತ್ತವೆ ಎಂದು ನಾವು ಎಂದಾದರೂ ಚಿಂತಿಸಿದ್ದೇವೆಯೇ? ಸ್ಲಮ್ಮುಗಳು ಇರುವ ಕಾರಣಕ್ಕಾಗಿಯೇ ಬೆಂಗಳೂರಿನಂತಹ ಮಹಾನಗರಕ್ಕೆ ಮತ್ತೆಲ್ಲಿಂದಲೋ ಬರಿಗೈ ಅಥವಾ ಬಿಡಿಗಾಸಿನೊಂದಿಗೆ ಬರುವ ಅದೆಷ್ಟೋ ಜನ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದು ಯಾರಾದರೂ ನಮಗೆ ತಿಳಿವಳಿಕೆ ಮೂಡಿಸುವ ಪ್ರಯತ್ನ ಮಾಡಿದರೆ, ಈ ವಾಸ್ತವ ಅರಗಿಸಿಕೊಳ್ಳುವ ಸಂಯಮ ನಮಗಿದೆಯೇ? ಅಮಿತ್ ವರ್ಮಾ ತಮ್ಮ ‘ದಿ ಸೀನ್ ಅಂಡ್ ದಿ ಅನ್‍ಸೀನ್' ಪಾಡ್‍ಕಾಸ್ಟ್‌ನಲ್ಲಿ ಪವನ್ ಶ್ರೀನಾಥ್ ಅವರೊಂದಿಗೆ ನಡೆಸಿರುವ ಸ್ಲಮ್‍ಗಳ ಕುರಿತ ಮಾತುಕತೆ ಆಲಿಸುವ ಯಾರಿಗೇ ಆದರೂ, ಸ್ಲಮ್‍ಗಳ ಕುರಿತು ನಮ್ಮಲ್ಲಿ ಬೇರೂರಿರುವ ನಿಲುವು ಅದೆಷ್ಟು ಅಪಕ್ವವಾದುದು ಎಂಬುದು ಮನದಟ್ಟಾಗಲಿದೆ.

Image
Buldozer 1

ಬಡತನದಿಂದ ಎಲ್ಲರನ್ನೂ ಮೇಲೆತ್ತುವ ಪ್ರಭುತ್ವದ ಆಶಯ ಇನ್ನೂ ಆಶಯವಾಗಿಯೇ ಉಳಿದಿರುವ ಹೊತ್ತಿನಲ್ಲಿ ಆರ್ಭಟಿಸತೊಡಗಿರುವ ಬುಲ್ಡೋಜರ್‌ಗಳಿಗೆ ಇಂಧನ ತುಂಬಲು ಸಮಾಜವೇ ಮುನ್ನುಗ್ಗಬಹುದೇ? ಪ್ರತಿಭಟನೆಗಳ ಹೆಸರಿನಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟುಮಾಡಿದರೆಂಬ ನೆಪ ಮುಂದೊಡ್ಡಿ ನೆಲಸಮಗೊಳಿಸಲಾಗುತ್ತಿರುವ ಬಹುತೇಕ ಮನೆಗಳು ನಿರ್ದಿಷ್ಟ ಧರ್ಮದವರಿಗೆ ಮಾತ್ರ ಸೇರಿರುವುದು ಕಾಕತಾಳೀಯವೇ? ‘ಅಗ್ನಿಪಥ' ಸ್ಕೀಮು ವಿರೋಧಿಸಿ ಸಾರ್ವಜನಿಕ ಆಸ್ತಿಗೆ ನಷ್ಟ ಉಂಟುಮಾಡಿದವರ ಮನೆಗಳತ್ತಲೂ ಬುಲ್ಡೋಜರ್‌ಗಳು ನುಗ್ಗಲಿವೆಯೇ? ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ಹೊತ್ತವರೇ ದಿಢೀರ್ ನ್ಯಾಯದಾನದ ಹೆಸರಿನಲ್ಲಿ ಅರಾಜಕ ಪರಿಸ್ಥಿತಿ ಸೃಷ್ಟಿಸಲು ಹವಣಿಸುತ್ತಿರುವಂತೆ ಭಾಸವಾಗುತ್ತಿಲ್ಲವೇ? ಅಪರಾಧ ಎಸಗುವವರ ಅವಿವೇಕಕ್ಕೆ ಪ್ರಭುತ್ವದ ಅವಿವೇಕ ಮದ್ದಾಗಲು ಸಾಧ್ಯವೇ?

ಮೊದಲಿಗೆ ಹೇಳಿದ ಪ್ರಸಂಗದಲ್ಲಿ ಹಕ್ಕಿಯ ನೋವಿಗೆ ಮಿಡಿಯುವ ಮಹಿಳೆಯರ ಹಾಗೆ ಪ್ರಭುತ್ವವೂ ಯೋಚಿಸಬೇಕಲ್ಲವೇ? ಪ್ರಭುತ್ವ ಹೊಸಕಿ ಹಾಕುತ್ತಿರುವುದು ನಮ್ಮ ಗೂಡನ್ನಲ್ಲ ಎಂದು ಸುಮ್ಮನಿದ್ದರೆ, ನಾಳಿನ ಸರದಿ ನಮ್ಮದೂ ಆಗಬಹುದು. ತಪ್ಪು ಮಾಡಿದವರಿಗೆ ಬುದ್ಧಿ ಕಲಿಸಲು ಹೊರಟವರು ಕೂಡ ಅವಿವೇಕಿಗಳಂತೆ ವರ್ತಿಸುವುದೇ ಸರಿ ಎಂದು ಸಮಾಜ ಭಾವಿಸತೊಡಗಿದರೆ ನೆಮ್ಮದಿಯ ನಾಳೆಗಳು ಮರೀಚಿಕೆಯಾಗುವುದರಲ್ಲಿ ಅನುಮಾನವಿಲ್ಲ.

ನಿಮಗೆ ಏನು ಅನ್ನಿಸ್ತು?
1 ವೋಟ್