ದಿಕ್ಸೂಚಿ | ಕರಿಯರ್ ಪ್ಲಾನಿಂಗ್ ಮಾಡುವುದು ಹೇಗೆ?

Career Planning

ಕಳೆದ ವಾರ ಇದೇ ಸರಣಿಯಲ್ಲಿ ಪ್ರಕಟವಾದ ಬರಹದಲ್ಲಿ ಕರಿಯರ್ ಪ್ಲಾನಿಂಗ್‍ನ ಐದು ಹಂತಗಳ ವಿವರಣೆ ಆರಂಭಿಸಲಾಗಿದ್ದು, ಮೊದಲ ಹಂತದ ‘ಸ್ವಯಂ ಅವಲೋಕನ'ವನ್ನು (ನಾನು ಮತ್ತು ನನ್ನ ಕನಸು) ವಿದ್ಯಾರ್ಥಿಗಳು ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ವಿಸ್ತಾರವಾಗಿ ತಿಳಿಸಲಾಗಿದೆ. ಉಳಿದ ನಾಲ್ಕು ಹಂತಗಳನ್ನು ಮುಂದೆ ವಿವರಿಸಲಾಗಿದೆ

ಹಂತ 2: ಸಾಮರ್ಥ್ಯ ಮತ್ತು ಆಸಕ್ತಿ

ಕರಿಯರ್ ಪ್ಲಾನಿಂಗ್‍ನ ಮೊದಲ ಹಂತದ ‘ಸ್ವಯಂ ಅವಲೋಕನ’ದಲ್ಲಿ ಸಾಮರ್ಥ್ಯ ಮತ್ತು ಆಸಕ್ತಿಯ ಬಗೆಗಿನ ಚರ್ಚೆ ನಡೆದಿದ್ದರೂ, ವಿದ್ಯಾರ್ಥಿಗಳ ಸಾಮರ್ಥ್ಯ ಮತ್ತು ಆಸಕ್ತಿಯು ಕರಿಯರ್ ಪ್ಲಾನಿಂಗ್‍ನಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದರಿಂದ, ಎರಡನೇ ಹಂತದಲ್ಲಿ ಇದು ಪ್ರತ್ಯೇಕವಾಗಿ ಅವಲೋಕಿಸಲ್ಪಡಬೇಕು. ಬಹುತೇಕ ವಿದ್ಯಾರ್ಥಿಗಳಿಗೆ ಸಾಮರ್ಥ್ಯದ ಬಗೆಗಿನ ಗೊಂದಲ ಇಲ್ಲದಿದ್ದರೂ, ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ನಮ್ಮಲ್ಲಿದ್ದಾರೆ. ಈ ಕಾರಣಕ್ಕಾಗಿಯೇ ಬಹುಪಾಲು ವಿದ್ಯಾರ್ಥಿಗಳು/ ಪಾಲಕರು ಹವ್ಯಾಸಗಳನ್ನು ಆಸಕ್ತಿ ಎಂದು ತಪ್ಪಾಗಿ ಅರ್ಥ ಮಾಡಿಕೊಳ್ಳುವುದಿದೆ.

ಆದ್ದರಿಂದ, ವಿದ್ಯಾರ್ಥಿಗಳು ಯಾವುದೇ ಪೂರ್ವಗ್ರಹಗಳಿಗೆ ಒಳಗಾಗದೆ ತಮ್ಮ ಸಾಮರ್ಥ್ಯ ಮತ್ತು ನಿಜವಾದ ಆಸಕ್ತಿ ಏನು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ತಮ್ಮ ಮಕ್ಕಳನ್ನು ಬಹುಕಾಲ ಗಮನಿಸುತ್ತ ಬಂದಿರುವ ಪಾಲಕರು/ ಶಿಕ್ಷಕರು ಈ ಹಂತದಲ್ಲಿ ವಿದ್ಯಾರ್ಥಿಗಳಿಗೆ ಸಲಹೆಗಳನ್ನು ನೀಡಿ ನೆರವಾಗಬಹುದು. ‘ಆಸಕ್ತಿ’ ಮತ್ತು ‘ಇಷ್ಟ’ ಇವೆರಡರ ನಡುವೆ ವ್ಯತ್ಯಾಸವಿದೆ ಎಂಬುದನ್ನೂ ಹಾಗೂ ನಮ್ಮ ಎಲ್ಲ ಆಸಕ್ತಿಗಳು ಇಷ್ಟಗಳಾಗಿರುತ್ತವೆ, ಆದರೆ ಎಲ್ಲ ಇಷ್ಟಗಳೂ ಆಸಕ್ತಿಗಳಾಗಿರುವುದಿಲ್ಲ ಎಂಬ ಸತ್ಯವನ್ನೂ ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡಿರಬೇಕು.

ಉದಾಹರಣೆಗೆ, ನನಗೆ ಕಾರು ಎಂದರೆ ಇಷ್ಟ ಎಂದಿಟ್ಟುಕೊಳ್ಳೋಣ. ವಿವಿಧ ಬ್ರಾಂಡ್‍ನ ಕಾರು ಮತ್ತು ಅವುಗಳನ್ನು ತಯಾರಿಸುವ ಕಂಪನಿಗಳ ಹೆಸರುಗಳನ್ನು ನಾನು ಸಲೀಸಾಗಿ ಹೇಳಬಹುದು. ಅವುಗಳ ಚಿತ್ರಗಳೂ ನನ್ನ ಬಳಿ ಇರಬಹುದು. ಕಾರನ್ನು ಪಡೆಯುವಷ್ಟು ದುಡ್ಡಿದ್ದರೆ ಅದನ್ನು ನನ್ನದಾಗಿಸಿಕೊಳ್ಳಲೂಬಹುದು ಮತ್ತು ಆ ಕಾರಿನಲ್ಲಿ ಪ್ರಯಾಣಿಸಿ ಆನಂದಿಸಬಹುದು. ಆದರೆ, ಇದನ್ನು 'ಆಸಕ್ತಿ' ಎನ್ನಲಾಗದು. ನನಗೆ ಇಷ್ಟವಾದ ಕಾರನ್ನು ಹೇಗೆ ತಯಾರಿಸುತ್ತಾರೆ? ಮಾರುಕಟ್ಟೆಗೆ ದಿನಕ್ಕೊಂದರಂತೆ ಬರುತ್ತಿರುವ ಹೊಸ-ಹೊಸ ಕಾರುಗಳನ್ನು ವಿನ್ಯಾಸ ಮಾಡುವವರ್ಯಾರು? ಕೆಲವು ಕಾರುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರಲು ಕಾರಣವೇನು? ಅವುಗಳ ವಿಶೇಷತೆಯೇನು? ಎಂಬುದನ್ನು ಆಲೋಚಿಸಲು/ ತಿಳಿಯಲು ಮುಂದಾಗುವುದು 'ಆಸಕ್ತಿ.' ಈ ರೀತಿ ‘ಇಷ್ಟ’ ಮತ್ತು ‘ಆಸಕ್ತಿ’ಗಳ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ನನ್ನ ಆಸಕ್ತಿಯೇನು? ಎಂಬುದನ್ನು ತಿಳಿಯುವುದು ಸುಲಭವಾಗಬಹುದು.

Image
woman

ಸಾಮರ್ಥ್ಯ ಮತ್ತು ಆಸಕ್ತಿಗೆ ಪೂರಕವಾದ ಕರಿಯರ್ ಪ್ಲಾನ್ ಮಾಡಿಕೊಂಡಾಗ, ವಿದ್ಯಾರ್ಥಿಗಳ ಮುಂದಿನ ವಿಧ್ಯಾಬ್ಯಾಸವು ಒತ್ತಡರಹಿತವಾಗಿ, ಕಲಿಕೆಯನ್ನು ಆನಂದಿಸಲು ಸಹಕಾರಿ ಆಗಬಹುದು. ಶಿಕ್ಷಣವನ್ನು ಸುಲಭಗೊಳಿಸಬಹುದು ಮತ್ತು ಗುರಿ ತಲುಪುವ ದಾರಿ ಕೂಡ ಸುಗಮವಾಗಬಹುದು. ವಿದ್ಯಾರ್ಥಿಗಳನ್ನು ಸದಾ ಕ್ರಿಯಾಶೀಲರನ್ನಾಗಿ ಇರಿಸಬಹುದು ಮತ್ತು ಕರಿಯರ್ ಪ್ಲಾನಿಂಗ್‍ನಲ್ಲಿ ಆಯ್ಕೆ ಮಾಡಲಾಗುವ ವೃತ್ತಿಯನ್ನೂ ಖುಷಿಯಾಗಿ ಮಾಡಲು ಸಾಧ್ಯವಾಗಬಹುದು.

ಹಂತ 3: ವೃತ್ತಿ ಪ್ರಪಂಚದ ತಿಳಿವಳಿಕೆ

ವೃತ್ತಿ ಪ್ರಪಂಚದ ತಿಳಿವಳಿಕೆ ಕರಿಯರ್ ಪ್ಲಾನಿಂಗ್‍ನ ಮೂರನೇ ಹಂತ. ಇಂದು ಸಮಾಜದಲ್ಲೊಮ್ಮೆ ಕಣ್ಣಾಡಿಸಿದರೆ, ಸಾವಿರಾರು ವೃತ್ತಿಗಳಿರುವುದನ್ನು ನೋಡಬಹುದು. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತವೆ ಮತ್ತು ಅದರ ಸ್ವರೂಪಗಳೂ ಬದಲಾಗುತ್ತಿರುತ್ತವೆ. ಕರಿಯರ್ ಪ್ಲಾನಿಂಗ್ ಮಾಡಿಕೊಳ್ಳುವಾಗ ವೃತ್ತಿ ಪ್ರಪಂಚದ ಅರಿವಿರಬೇಕು. ಜೊತೆಗೆ, ಪ್ರತಿಯೊಂದು ವೃತ್ತಿಯ ಸ್ವರೂಪ, ಅಲ್ಲಿ ಬೆಳವಣಿಗೆಗಿರುವ ಅವಕಾಶ ಹಾಗೂ ಅದು ಬಯಸುವ ಬುದ್ಧಿ ಸಾಮರ್ಥ್ಯ, ಕೌಶಲ, ವ್ಯಕ್ತಿತ್ವ, ಮನೋಭಾವಗಳ ಪ್ರಾಥಮಿಕ ಜ್ಞಾನವಿರಬೇಕು. ಅದಕ್ಕೆ ಪೂರಕವಾದ ಕಲಿಕೆ/ ಕೋರ್ಸುಗಳ ತಿಳಿವಳಿಕೆ ಕೂಡ ಬೇಕು.

ಈ ಲೇಖನ ಓದಿದ್ದೀರಾ?: ದಿಕ್ಸೂಚಿ | ಗೊಂದಲ ಬೇಡ - ಕರಿಯರ್ ಬೇರೆ, ವೃತ್ತಿಯೇ ಬೇರೆ

ಈ ಅಂಕಣದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ಬಳಿಕ ಕಲಿಕೆಗಿರುವ ಅವಕಾಶಗಳು ಮತ್ತು ಕೋರ್ಸ್‍ಗಳ ವಿವರಗಳನ್ನು ಮುಂದಕ್ಕೆ ನೀಡಲಾಗುವುದು. ಇದರ ಹೊರತಾಗಿಯೂ ಲಭ್ಯವಿರುವ ಇತರ ಮೂಲಗಳಿಂದ ವಿದ್ಯಾರ್ಥಿಗಳು/ ಪಾಲಕರು ವೃತ್ತಿ ಪ್ರಪಂಚವನ್ನು ತಿಳಿಯಲು ಪ್ರಯತ್ನಿಸಬಹುದು. ಗೂಗಲ್ ಅಥವಾ ಯೂಟ್ಯೂಬ್‍ನಲ್ಲಿ ಕೋರ್ಸ್‍ಗಳ ಬಗೆಗಿನ ಮಾಹಿತಿ ಪಡೆಯಬಹುದು. ಸ್ವಯಂ ಅವಲೋಕನ ಮತ್ತು ತನ್ನ ಸಾಮರ್ಥ್ಯ, ಆಸಕ್ತಿಗಳಿಗೆ ಪೂರಕವಾದ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು, ತನ್ಮೂಲಕ ಕರಿಯರ್ ಪ್ಲಾನಿಂಗ್‍ ರೂಪಿಸಲು ಈ ಹಂತ ಸಹಕಾರಿ ಆಗಬಹುದು.

ಹಂತ 4: ಕ್ಷೇತ್ರ ಮತ್ತು ವೃತ್ತಿಯ ನಿರ್ಧಾರ

ವೃತ್ತಿ ಪ್ರಪಂಚ ಕುರಿತ ತಿಳಿವಳಿಕೆ ಕಲೆಹಾಕಿದ ಬಳಿಕ ತೀರ್ಮಾನ ಕೈಗೊಳ್ಳಬೇಕಾಗಿರುವುದು ಕ್ಷೇತ್ರ ನಿರ್ಧಾರ ಮತ್ತು ವೃತ್ತಿಯ ಆಯ್ಕೆ. ಲಭ್ಯವಿರುವ ಪ್ರಮುಖವಾದ ಕ್ಷೇತ್ರಗಳು ಮೂರು. ಸ್ವ ಉದ್ಯೋಗ, ಖಾಸಗಿ ಉದ್ಯೋಗ ಹಾಗೂ ಸರಕಾರಿ ಉದ್ಯೋಗ. ಈ ಮೂರರಲ್ಲಿ ಯಾವ ಕ್ಷೇತ್ರವನ್ನು ಆಯ್ಕೆ ಮಾಡುತ್ತೀರಿ ಎಂಬುದು ಕರಿಯರ್ ಪ್ಲಾನಿಂಗ್‍ನ ನಾಲ್ಕನೇ ಹಂತ. ಪ್ರತಿಯೊಂದು ಕ್ಷೇತ್ರದಲ್ಲೂ ಸಾವಿರಾರು ವೃತ್ತಿಗಳಿವೆ ನಿಜ. ವಿದ್ಯಾರ್ಥಿಗಳ ಕನಸು, ಆಸಕ್ತಿ, ಸಾಮರ್ಥ್ಯಕ್ಕೆ ಪೂರಕವಾಗಿರುವ ಪ್ರಾಯೋಗಿಕ ಕರಿಯರ್‌ ಆಯ್ಕೆಯು ಕ್ಷೇತ್ರ ನಿರ್ಧಾರದೊಂದಿಗೆ ಸರಳಗೊಳ್ಳುತ್ತದೆ. ಬಳಿಕ ತೀರ್ಮಾನ ಕೈಗೊಳ್ಳಬೇಕಾಗಿರುವುದು ಆ ಕ್ಷೇತ್ರದಲ್ಲಿ ಯಾವ ವೃತ್ತಿಯೊಂದಿಗೆ ಕರಿಯರ್ ಆರಂಭಿಸಬಹುದು ಎಂಬ ವಿಷಯ. ಒಂದರಿಂದ ನಾಲ್ಕರ ತನಕದ ಎಲ್ಲ ಹಂತಗಳ ಒಟ್ಟು ಸಮೀಕರಣ ಮಾಡಿಕೊಳ್ಳಲು ಸಾಧ್ಯವಾದರೆ ಕರಿಯರ್ ಪ್ಲಾನಿಂಗ್ ಬಹುಪಾಲು ಮುಗಿದಂತೆ.

ಸೂಚನೆ: ಕ್ಷೇತ್ರ ನಿರ್ಧಾರ ಮತ್ತು ವೃತ್ತಿಯ ಆಯ್ಕೆ ಸಮಯದಲ್ಲಿ ತಾವು ಆಯ್ಕೆ ಮಾಡುವ ಕೆಲವು ವೃತ್ತಿಗಳ ಸ್ವರೂಪ, ಪ್ರತಿದಿನದ ಕೆಲಸದ ಸಮಯ, ವೇತನ ಶ್ರೇಣಿ, ಭದ್ರತೆ, ಬಡ್ತಿಗಿರುವ ಅವಕಾಶಗಳು, ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಆ ವೃತ್ತಿಗೆ ಬೇಡಿಕೆಗಳಿವೆಯೇ? ವೃತ್ತಿಯಲ್ಲಿರುವಾಗ ದೂರದ ಊರುಗಳಿಗೆ ಪ್ರಯಾಣಿಸಬೇಕಾಗಿದೆಯೇ? ಬೇರೆ ಊರುಗಳಿಗೆ ವರ್ಗಾವಣೆಯಾಗುವ ಸಾಧ್ಯತೆಗಳಿವೆಯೇ? ನನ್ನ ಕ್ರಿಯಾಶೀಲತೆಯ ಬೆಳವಣೆಗೆಗೆ ಅವಕಾಶಗಳಿವೆಯೇ? ಎಂಬುದನ್ನೆಲ್ಲ ಅರಿತುಕೊಳ್ಳುವುದು ಮುಖ್ಯ.

ಹಂತ 5: ಕೋರ್ಸ್ ಮತ್ತು ಸಂಸ್ಥೆಯ ಆಯ್ಕೆ

Image
danica tanjutco photo

ಕೊನೆಯದಾಗಿ, ಕರಿಯರ್ ಪ್ಲಾನಿಂಗ್ ಮತ್ತು ವೃತ್ತಿಗೆ ಪೂರಕವಾದ ಕೋರ್ಸ್ ಹಾಗೂ ಶಿಕ್ಷಣ ಸಂಸ್ಥೆಯ ಆಯ್ಕೆ. ಕರಿಯರ್ ಪ್ಲಾನಿಂಗ್‍ನಲ್ಲಿ ಆಯ್ಕೆ ಮಾಡಲಾದ ಕ್ಷೇತ್ರ ಮತ್ತು ವೃತ್ತಿಗೆ ಸರಿಹೊಂದುವ ಹಲವು ಕೋರ್ಸ್‍ಗಳು ಶಿಕ್ಷಣ ಸಂಸ್ಥೆಗಳಲ್ಲಿರಬಹುದು. ಆದರೆ, ತಾನು ಆಯ್ಕೆ ಮಾಡಿಕೊಂಡಿರುವ ವೃತ್ತಿ ಮತ್ತು ತನ್ನ ಗುರಿ ತಲುಪಲು ಬೇಕಾದ ಅತ್ಯುತ್ತಮ ಕೋರ್ಸ್ ಯಾವುದು ಎಂಬುದನ್ನು ತೀರ್ಮಾನಿಸಿ, ಆ ಕೋರ್ಸನ್ನೇ ಆಯ್ಕೆ ಮಾಡುವುದು ಜಾಣತನ. ಶಿಕ್ಷಣ ಸಂಸ್ಥೆಗಳ ವಿಚಾರಕ್ಕೆ ಬಂದರೂ ಅಷ್ಟೇ: ನಾವು ಆಯ್ಕೆ ಮಾಡಿರುವ ಕೋರ್ಸ್ ಅನ್ನು ಕಲಿಸುವ ಶಿಕ್ಷಣ ಸಂಸ್ಥೆಗಳು ಧಾರಾಳವಾಗಿರಬಹುದು. ಅವು ತಾವೇ ‘ಅತ್ಯುತ್ತಮ’ ಎಂದು ಜಂಭ ಕೊಚ್ಚಿಕೊಳ್ಳಬಹುದು. ಆದರೆ, ತಾನು ಕಲಿಯಬಯಸುವ ಕೋರ್ಸ್ ಅನ್ನು ಅಲ್ಲಿ ಪರಿಣಾಮಕಾರಿಯಾಗಿ ಕಲಿಸಲಾಗುತ್ತದೆಯೇ ಮತ್ತು ಆ ಸಂಸ್ಥೆಯ ಶಿಕ್ಷಣದ ಗುಣಮಟ್ಟ ಹಾಗೂ ವ್ಯವಸ್ಥೆ ಚೆನ್ನಾಗಿದೆಯೇ ಎಂಬುದನ್ನು ತಿಳಿದು, ನಂಬಿಕೆಗೆ ಅರ್ಹವಾದ ವಿದ್ಯಾಸಂಸ್ಥೆಯನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕು.

ಸೂಚನೆ: ಎಲ್ಲ ಊರುಗಳಲ್ಲಿ ಕರಿಯರ್ ಕೌನ್ಸಿಲರ್‌ಗಳು ಸಿಗಲಿಕ್ಕಿಲ್ಲ ಅಥವಾ ಇರುವ ಕೌನ್ಸಿಲರ್‌ಗಳನ್ನು ಭೇಟಿಯಾಗಿ ಕೌನ್ಸಿಲಿಂಗ್ ಮಾಡಿಸಿಕೊಳ್ಳಲು ಅಸಾಧ್ಯವಾಗಬಹುದು. ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಕರಿಯರ್ ಪ್ಲಾನಿಂಗ್‍ನ ಸರಳ ಹಾಗೂ ಸಂಕ್ಷಿಪ್ತ ಹಂತಗಳನ್ನು ಇಲ್ಲಿ ವಿವರಿಸಲಾಗಿದೆ. ಈ ಎಲ್ಲ ಹಂತಗಳಲ್ಲಿ ಬರುವ ಪ್ರತಿಯೊಂದು ವಿಷಯಗಳನ್ನೂ ಕೂಲಂಕಶವಾಗಿ ಪರಿಗಣಿಸಿ, ತಾರ್ತಿಕ ಚರ್ಚೆ ಮತ್ತು ಅವಲೋಕನ ನಡೆಸಬೇಕು. ಕರಿಯರ್ ಪ್ಲಾನಿಂಗ್‍ನ ಹಂತಗಳಲ್ಲಿ ಆಯ್ಕೆ ಮಾಡುವ ಯಾವುದೇ ಕರಿಯರ್‌ನ ಸಾಧಕ-ಬಾಧಕಗಳ ಅರಿವು ವಿದ್ಯಾರ್ಥಿಗಳಿಗಿರಬೇಕು. ಕರಿಯರ್‌ನ ಆಯ್ಕೆಯು ವಾಸ್ತವಿಕ ಸಾಧ್ಯತೆಗಳಿಗೆ ನಿಕಟವಾಗಿರಬೇಕು. ಆಗಲೇ, ವಿದ್ಯಾರ್ಥಿಗಳ ಅತ್ತ್ಯುತ್ತಮ ಭವಿಷ್ಯ ರೂಪಿಸಲು ಇವು ಸಹಕಾರಿಯಾಗಬಹುದು.

ನಿಮಗೆ ಏನು ಅನ್ನಿಸ್ತು?
2 ವೋಟ್