ದಿಕ್ಸೂಚಿ | ವೃತ್ತಿಪರ ಕೋರ್ಸ್‌ಗಳಿಂದ ಬದುಕು ಕಟ್ಟಿಕೊಳ್ಳಲು ಇಲ್ಲಿದೆ ದಾರಿ

ಎಸ್ಸೆಸ್ಸೆಲ್ಸಿ ನಂತರ ಮುಂದೇನು ಅಂದರೆ, ಪಿಯುಸಿಯ ಸೈನ್ಸ್‌, ಆರ್ಟ್‌, ಕಾಮರ್ಸ್‌ ಮಾತ್ರವೇ ತಕ್ಷಣ ಹೊಳೆಯುತ್ತವೆ. ಕೆಲವರು ಪಿಯುಸಿ ತತ್ಸಮಾನವಾದ ಐಟಿಐ, ಡಿಪ್ಲಮೊ ಇತ್ಯಾದಿ ಕೋರ್ಸ್‌ಗಳತ್ತ ಹೊರಡುತ್ತಾರೆ. ಇದಲ್ಲದೆ, 12ನೇ ತರಗತಿಗೆ ಸರಿಸಮನಾದ ಸೀನಿಯರ್ ಸ್ಕೂಲ್ ಸರ್ಟಿಫಿಕೇಟ್ (ಎಸ್ಎಸ್‌ಸಿ) ಕೋರ್ಸ್‌ ಕೂಡ ಉಂಟು. ಈ ಕುರಿತು ಇಲ್ಲಿದೆ ಅಗತ್ಯ ಮಾಹಿತಿ

ಎಸ್ಎಸ್‌ಸಿ, ವೃತ್ತಿಪರ ಮತ್ತು ಕರಿಯರ್ ಆಧಾರಿತ ಕೋರ್ಸುಗಳು

ಸಿಬಿಎಸ್‌ಇ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್) ಪಠ್ಯಕ್ರಮವನ್ನು ಅಳವಡಿಸಿರುವ ಕಾಲೇಜುಗಳಲ್ಲಿ 10ನೇ ತರಗತಿಯ ನಂತರ ಪಿಯುಸಿಗೆ ತತ್ಸಮಾನವಾದ ಎರಡು ವರ್ಷಗಳ 11 ಮತ್ತು 12ನೇ ತರಗತಿ ಕಲಿಯಬಹುದು. ಪಿಯುಸಿಯನ್ನು ಇಲ್ಲಿ ಎಸ್ಎಸ್‌ಸಿ (ಸೀನಿಯರ್ ಸ್ಕೂಲ್ ಸರ್ಟಿಫಿಕೆಟ್) ಎನ್ನಲಾಗುತ್ತದೆ.

ರಾಜ್ಯ, ಹೊರ ರಾಜ್ಯ ಅಥವಾ ವಿದೇಶಗಳಲ್ಲಿ ಪ್ರೌಢ ಶಿಕ್ಷಣವನ್ನು ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಮುಗಿಸಿರುವ ವಿದ್ಯಾರ್ಥಿಗಳೇ ಸಾಮಾನ್ಯವಾಗಿ ಎಸ್ಎಸ್‌ಸಿ ವ್ಯಾಸಂಗ ಮಾಡುತ್ತಾರೆ. ಸಾಮಾನ್ಯ ಎಸ್ಎಸ್‌ಸಿ ಕೋರ್ಸ್ ಅಲ್ಲದೆ, ಎಸ್ಎಸ್‌ಸಿ ಒಕೇಶನಲ್ (ವೃತ್ತಿಪರ) ಹಾಗೂ ಎಸ್ಎಸ್‌ಸಿ ಕರಿಯರ್ ಆಧಾರಿತ ಕೋರ್ಸ್‌ಗಳು, ಸಿಬಿಎಸ್‌ಇ ಪಠ್ಯಕ್ರಮ ಆಯ್ದ ಕಾಲೇಜುಗಳಲ್ಲಿವೆ. ಸಾಮಾನ್ಯ ಎಸ್ಎಸ್‌ಸಿಯಲ್ಲಿ ಕನಿಷ್ಠ ಐದು ವಿಷಯಗಳನ್ನು (ಎರಡು ಭಾಷಾ ವಿಷಯ ಮತ್ತು ಮೂರು ಐಚ್ಛಿಕ ವಿಷಯಗಳು) ಕಲಿಯಬೇಕು. ಐಚ್ಛಿಕ ವಿಷಯಗಳ ಪೈಕಿ ಒಂದು ವಿಷಯವನ್ನು ಹೆಚ್ಚುವರಿಯಾಗಿ ಕಲಿಯಲೂ ಇಲ್ಲಿ ಅವಕಾಶವಿದೆ.

ಎಸ್ಎಸ್‌ಸಿನಲ್ಲಿ ಆಯ್ಕೆಗಿರುವ ಭಾಷಾ ವಿಷಯಗಳು

ಹಿಂದಿ, ಇಂಗ್ಲಿಷ್, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕಾಶ್ಮೀರಿ, ಕನ್ನಡ, ಮರಾಠಿ, ಮಲಯಾಳಂ, ಮಣಿಪುರಿ, ಒರಿಯಾ, ಪಂಜಾಬಿ, ಸಿಂಧಿ, ತಮಿಳು, ತೆಲುಗು, ಉರ್ದು, ಸಂಸ್ಕೃತ, ಅರಬಿಕ್, ಪರ್ಶಿಯನ್, ಲಿಂಬೊ, ಲೆಪ್ಚಾ, ಭುಟಿಯಾ, ಮಿಝೋ, ತಂಘುಲ್, ಬೊಡೊ, ನೆಪಾಲಿ, ಟಿಬೆಟಿಯನ್, ಫ್ರೆಂಚ್, ಜರ್ಮನ್, ರಷ್ಯನ್ ಮತ್ತು ಸ್ಪಾನಿಶ್. ಇವುಗಳ ಪೈಕಿ ಎರಡು ಭಾಷಾ ವಿಷಯಗಳನ್ನು ಕಡ್ಡಾಯವಾಗಿ ಆಯ್ಕೆ ಮಾಡಬೇಕು. ಆಯ್ಕೆ ಮಾಡುವ ಎರಡು ಭಾಷಾ ವಿಷಯಗಳ ಪೈಕಿ ಒಂದು ಭಾಷೆ ಹಿಂದಿ ಅಥವಾ ಇಂಗ್ಲಿಷ್ ಆಗಿರಬೇಕು. ಎರಡು ಭಾಷೆಗಳಾಗಿ ಹಿಂದಿ ಮತ್ತು ಇಂಗ್ಲಿಷನ್ನೂ ಆಯ್ಕೆ ಮಾಡಬಹುದು.

ಎಸ್ಎಸ್‌ಸಿನ ಐಚ್ಛಿಕ ವಿಷಯಗಳು

Image

ಗಣಿತ, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ, ಜೈವಿಕ ತಂತ್ರಜ್ಞಾನ, ಎಂಜಿನಿಯರಿಂಗ್ ಗ್ರಾಫಿಕ್ಸ್, ಗೃಹ ವಿಜ್ಞಾನ, ಅರ್ಥಶಾಸ್ತ್ರ, ರಾಜಕೀಯ ವಿಜ್ಞಾನ, ಇತಿಹಾಸ, ಭೂಗೋಳ ಶಾಸ್ತ್ರ, ವ್ಯಾಪಾರ ಅಧ್ಯಯನ, ಲೆಕ್ಕಪತ್ರ ನಿರ್ವಹಣೆ, ಲಲಿತ ಕಲೆ, ಕೃಷಿ, ಗಣಕಯಂತ್ರ ವಿಜ್ಞಾನ (ಕಂಪ್ಯೂಟರ್ ಸೈನ್ಸ್), ಮಾಹಿತಿಯುಕ್ತ ಅಭ್ಯಾಸ (ಇನ್ಫೋರ್ಮೆಟಿಕ್ ಪ್ರಾಕ್ಟೀಸಸ್), ಮಲ್ಟಿ ಮೀಡಿಯಾ ಅಂಡ್ ವೆಬ್ ಟೆಕ್ನಾಲಜಿ, ಸಮಾಜಶಾಸ್ತ್ರ, ಮನೋವಿಜ್ಞಾನ, ದೈಹಿಕ ಶಿಕ್ಷಣ, ಸಂಗೀತ ಮತ್ತು ನೃತ್ಯ, ಉದ್ಯಮಶೀಲತೆ, ಪ್ಯಾಶನ್ ಅಧ್ಯಯನ, ಸಮೂಹ ಮಾಧ್ಯಮ ಅಧ್ಯಯನ, ಭಾರತದ ಜ್ಞಾನ ಸಂಪ್ರದಾಯ ಮತ್ತು ಆಚರಣೆ, ಕಾನೂನು ಅಧ್ಯಯನ ಮತ್ತು ಎನ್‌ಸಿಸಿ ಇವುಗಳ ಪೈಕಿ ಕನಿಷ್ಠ ಮೂರು - ಗರಿಷ್ಠ ನಾಲ್ಕು ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಬೇಕು.

ಸೂಚನೆ: ಐಚ್ಛಿಕ ವಿಷಯಗಳಲ್ಲಿ ವಿವಿಧ ವಿಭಾಗದ (ಕಲೆ, ವಾಣಿಜ್ಯ ಮತ್ತು ವಿಜ್ಞಾನ) ವಿಷಯಗಳಿದ್ದು, ವಿದ್ಯಾರ್ಥಿಗಳ ಕರಿಯರ್ ಪ್ಲಾನಿಂಗ್‌ನಂತೆ ವಿಷಯಗಳ ಆಯ್ಕೆ ನಡೆಯಬೇಕು. ಐಚ್ಛಿಕ ಆಯ್ಕೆಗಳ ಪೈಕಿ, ಮಾಹಿತಿ ತಂತ್ರಜ್ಞಾನ ವಿಭಾಗದ ವಿಷಯಗಳಾದ ಗಣಕಯಂತ್ರ ವಿಜ್ಞಾನ (ಕಂಪ್ಯೂಟರ್ ಸೈನ್ಸ್), ಮಾಹಿತಿಯುಕ್ತ ಅಭ್ಯಾಸ (ಇನ್ಫೋರ್ಮೆಟಿಕ್ ಪ್ರಾಕ್ಟೀಸಸ್) ಮತ್ತು ಮಲ್ಟಿಮೀಡಿಯಾ ಅಂಡ್ ವೆಬ್ ಟೆಕ್ನಾಲಜಿ ವಿಷಯಗಳ ಪೈಕಿ ಯಾವುದಾದರೂ ಎರಡು ವಿಷಯಗಳ ಆಯ್ಕೆಗೆ ಮಾತ್ರ ಇಲ್ಲಿ ಅವಕಾಶವಿರುವುದು.

ಎಸ್‌ಎಸ್‌ಸಿನ ವೃತ್ತಿಪರ ಕೋರ್ಸ್‌ಗಳು

ಕಚೇರಿ ಕಾರ್ಯವಿಧಾನಗಳು ಮತ್ತು ಅಭ್ಯಾಸ (ಆಫೀಸ್ ಪ್ರೊಸಿಜರ್ಸ್ ಅಂಡ್ ಪ್ರಾಕ್ಟೀಸಸ್), ಮುದ್ರಣಕಲೆ ಮತ್ತು ಕಂಪ್ಯೂಟರ್ ಅಪ್ಲಿಕೇಶನ್ (ಟೈಪೊಗ್ರಾಫಿ ಆಂಡ್ ಕಂಪ್ಯೂಟರ್ ಅಪ್ಲಿಕೇಶನ್ ಇಂಗ್ಲಿಷ್/ಹಿಂದಿ), ಅನ್ವಯಿಕ ಭೌತಶಾಸ್ತ್ರ (ಅಪ್ಲೈಡ್ ಫಿಸಿಕ್ಸ್), ಅನ್ವಯಿಕ ಯಂತ್ರಶಾಸ್ತ್ರ (ಅಪ್ಲೈಡ್ ಮೆಕಾನಿಕ್ಸ್), ಮೆಕಾನಿಕಲ್ ಇಂಜಿನಿಯರಿಂಗ್ (XII), ಆಟೋಶಾಪ್ ದುರಸ್ತಿ ಮತ್ತು ಅಭ್ಯಾಸ (ಆಟೊಶಾಪ್ ರಿಪೇರ್ ಅಂಡ್ ಪ್ರಾಕ್ಟಿಸ್), ಆಹಾರ ಪೋಷಣೆ ಮತ್ತು ಆಹಾರ ಪದ್ಧತಿ (ಫುಡ್ ನ್ಯೂಟ್ರಿಶನ್ ಅಂಡ್ ಡಯಾಬೆಟಿಕ್ಸ್) ಬಗ್ಗೆ ಕಲಿಯಬಹುದು.

ಈ ಲೇಖನ ಓದಿದ್ದೀರಾ? ದಿಕ್ಸೂಚಿ | ಕರಿಯರ್ ಪ್ಲಾನಿಂಗ್ ಮಾಡುವುದು ಹೇಗೆ?

ಆರೋಗ್ಯದ ಮೂಲ ಪರಿಕಲ್ಪನೆ, ರೋಗ ಮತ್ತು ವೈದ್ಯಕೀಯ ಪರಿಭಾಷೆ (ಬೇಸಿಕ್ ಕಾನ್ಸೆಪ್ಟ್ಸ್ ಆಫ್ ಹೆಲ್ತ್, ಡಿಸೀಸ್ ಅಂಡ್ ಮೆಡಿಕಲ್ ಟರ್ಮಿನಾಲಜಿ (XII), ಭೌಗೋಳಿಕ ತಂತ್ರಜ್ಞಾನ (ಜಿಯೊಸ್ಪಾಶಿಯಲ್ ಟೆಕ್ನಾಲಜಿ), ಚಿಲ್ಲರೆ ವಹಿವಾಟು ನಿರ್ವಹಣೆ (ರಿಟೇಲ್ ಆಪರೇಶನ್ಸ್), ಸಮಗ್ರ ಆರೋಗ್ಯ (ಹೋಲಿಸ್ಟಿಕ್ ಹೆಲ್ತ್), ಗ್ರಂಥಾಲಯ ಮಾಹಿತಿ ಮತ್ತು ಸಮಾಜ (ಲೈಬ್ರೆರಿ ಇನ್ಫರ್ಮೇಶನ್ ಆಂಡ್ ಸೊಸೈಟಿ), ಗ್ರಂಥಾಲಯ ವ್ಯವಸ್ಥೆ ಮತ್ತು ಸಂಪನ್ಮೂಲ ನಿರ್ವಹಣೆ (ಲೈಬ್ರೆರಿ ಸಿಸ್ಟಮ್ ಆಂಡ್ ರಿಸೋರ್ಸ್ ಮ್ಯಾನೇಜ್ಮೆಂಟ್) XII, ಲಾಜಿಸ್ಟಿಕ್ಸ್ ಆಪರೇಶನ್ಸ್ ಆಂಡ್ ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ವಿಷಯಗಳನ್ನು ಕಲಿಯುವುದರಿಂದಲೂ ಬದುಕು ರೂಪಿಸಿಕೊಳ್ಳಬಹುದು.

ಭಾರತದಲ್ಲಿ ಪ್ರವಾಸೋದ್ಯಮ ಸಂಪನ್ಮೂಲಗಳು (ಟೂರಿಸಂ ರಿಸೋರ್ಸಸ್ ಇನ್ ಇಂಡಿಯಾ), ಆತಿಥ್ಯ ನಿರ್ವಹಣೆಯ ಪರಿಚಯ (ಇಂಟ್ರೊಡಕ್ಶನ್ ಟು ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್) XII, ಮೂಲ ತೋಟಗಾರಿಕೆ (ಬೇಸಿಕ್ ಹಾರ್ಟಿಕಲ್ಚರ್), ವ್ಯಾಪಾರ ಮತ್ತು ಆಡಳಿತ ನಿರ್ವಹಣೆ (ಬ್ಯುಸಿನೆಸ್‌ ಆಪರೇಶನ್ಸ್ ಅಂಡ್ ಅಡ್ಮಿನಿಸ್ಟ್ರೇಶನ್), ವಿನ್ಯಾಸ ಮತ್ತು ನಾವೀನ್ಯತೆ (ಡಿಸೈನ್ ಅಂಡ್ ಇನ್ನೊವೇಶನ್), ಉಡುಪು ನಿರ್ಮಾಣ (ಗಾರ್ಮೆಂಟ್ ಕನ್ಸ್ಟ್ರಕ್ಷನ್‌), ಜವಳಿ ವಿನ್ಯಾಸದ ಅಂಶಗಳು (ಎಲಿಮೆಂಟ್ಸ್ ಆಫ್ ಟೆಕ್ಸ್‌ಟೈಲ್ ಡಿಸೈನ್), ಸಾಂಪ್ರದಾಯಿಕ ಭಾರತೀಯ ಜವಳಿ (ಟ್ರೆಡಿಶನಲ್ ಇಂಡಿಯನ್ ಟೆಕ್ಸ್‌ಟೈಲ್) XII ಕಲಿಕೆ ಮೂಲಕವೂ ಲಾಭದಾಯಕ ಹುದ್ದೆ ಮತ್ತು ಉದ್ಯಮಗಳನ್ನು ಕಂಡುಕೊಳ್ಳಬಹುದು.

ಹಣಕಾಸು ಲೆಕ್ಕಪತ್ರ (ಫೈನಾಶಿಯಲ್ ಅಕೌಂಟಿಂಗ್), ತೆರಿಗೆ (ಟ್ಯಾಕ್ಶೇಶನ್), ಮಾರ್ಕೆಟಿಂಗ್, ಮಾರಾಟಗಾರಿಕೆ (ಸೇಲ್ಸ್ಮ್ಯಾನ್ಶಿಪ್), ಬ್ಯಾಂಕಿಂಗ್, ಮೂಲ ವಿದ್ಯುತ್ (ಬೇಸಿಕ್ ಎಲೆಕ್ಟ್ರಿಸಿಟಿ), ವಿದ್ಯುತ್ ಯಂತ್ರಗಳು (ಎಲೆಕ್ಟ್ರಿಕಲ್ ಮೆಶಿನ್ಸ್) XII, ವಿಮೆ (ಇನ್ಶೂರೆನ್ಸ್), ಬೇಸಿಕ್ ಎಲೆಕ್ಟ್ರಾನಿಕ್ಸ್, ಆಪರೇಶನ್ ಅಂಡ್ ಮೈನ್ಟೆನೆನ್ಸ್ ಆಫ್ ಕಮ್ಯುನಿಕೇಶನ್ ಡಿವೈಸಸ್, ಫೌಂಡೇಶನ್ ಆಫ್ ಪೈನಾನ್ಶಿಯಲ್ ಮಾರ್ಕೆಟ್, ಕ್ಯಾಪಿಟಲ್ ಮಾರ್ಕೆಟ್ ಆಪರೇಶನ್ಸ್ (XII), ವೆಬ್ ಅಪ್ಲಿಕೇಶನ್ಸ್, ಎಲಿಮೆಂಟ್ ಆಫ್ ಸಿವಿಲ್ ಎಂಜಿನಿಯರಿಂಗ್, ಕನ್ಸ್‌ಟ್ರಕ್ಶನ್ ಟೆಕ್ನಾಲಜಿ (XII) ಮತ್ತು ಸೆಕ್ಯೂರಿಟಿ. ಇವು ಎಸ್‌ಎಸ್‌ಸಿನಲ್ಲಿರುವ ವೃತ್ತಿಪರ ಕೋರ್ಸ್‌ಗಳು.

ಸೂಚನೆ: ಮೇಲೆ ವಿವರಿಸಲಾದ ಕೆಲವು ಕೋರ್ಸ್‌ಗಳ ಮುಂದೆ ʼXIIʼ ಎಂದು ನಮೂದಿಸಲಾಗಿದ್ದು, ಅವು 12ನೇ ತರಗತಿಯಲ್ಲಿ ಮಾತ್ರ ಕಲಿಯಬಹುದಾದ ವೃತ್ತಿಪರ ಕೋರ್ಸ್‌ಗಳಾಗಿವೆ. ಉಳಿದ ಕೋರ್ಸ್‌ಗಳೆಲ್ಲವನ್ನೂ 11ನೇ ತರಗತಿಯಿಂದಲೇ ಕಲಿಯಬಹುದಾಗಿದೆ.

ಎಸ್ಎಸ್‌ಸಿ ಕೋರ್ಸ್‌ಗಳ ನಿಯಮಗಳು 

Image

ಎಸ್ಎಸ್‌ಸಿಯಂತೆ ಕರಿಯರ್ ಆಧಾರಿತ ಅಥವಾ ವೃತ್ತಿಪರ ಕೋರ್ಸ್‌ಗಳ ಕಲಿಕೆಗೆ ಐದು ವಿಷಯಗಳ ಆಯ್ಕೆ ಕಡ್ಡಾಯ. ಒಂದು ವಿಷಯವನ್ನು ಹೆಚ್ಚುವರಿಯಾಗಿ ಕಲಿಯಲು ಇಲ್ಲೂ ಅವಕಾಶವಿದೆ.

ವಿಷಯ 1: ಕಡ್ಡಾಯ ಭಾಷಾ ವಿಷಯ (ಹಿಂದಿ ಅಥವಾ ಇಂಗ್ಲಿಷ್)

ವಿಷಯ 2: ಹಿಂದಿ ಮತ್ತು ಇಂಗ್ಲಿಷ್ ಹೊರತುಪಡಿಸಿ ಭಾಷಾ ವಿಷಯಗಳ ಪಟ್ಟಿಯಲ್ಲಿರುವ ಒಂದು ಭಾಷೆ ಅಥವಾ ಐಚ್ಛಿಕ ವಿಷಯಗಳ ಪಟ್ಟಿಯಲ್ಲಿರುವ ಒಂದು ವಿಷಯ.

ವಿಷಯ 3, 4 ಮತ್ತು 5: ಐಚ್ಛಿಕ ವಿಷಯಗಳ ಪಟ್ಟಿಯಲ್ಲಿರುವ ಎರಡು ವಿಷಯಗಳು ಮತ್ತು ಒಂದು ವೃತ್ತಿಪರ ಕೋರ್ಸ್‌ನ ಪಟ್ಟಿಯಲ್ಲಿರುವ ವಿಷಯ ಅಥವಾ ಒಂದು ಐಚ್ಚಿಕ ವಿಷಯಗಳ ಪಟ್ಟಿಯಲ್ಲಿರುವ ವಿಷಯ ಮತ್ತು ವೃತ್ತಿಪರ ಕೋರ್ಸ್‌ನ ಪಟ್ಟಿಯಲ್ಲಿರುವ ಎರಡು ವಿಷಯಗಳು ಅಥವಾ ವೃತ್ತಿಪರ ಕೋರ್ಸ್‌ನ ಪಟ್ಟಿಯಲ್ಲಿರುವ ಮೂರು ವಿಷಯಗಳು.

ಹೆಚ್ಚುವರಿ ವಿಷಯ 6: ಒಂದು ಭಾಷಾ ವಿಷಯ ಅಥವಾ ಒಂದು ಐಚ್ಛಿಕ ವಿಷಯ ಅಥವಾ ಒಂದು ವೃತ್ತಿಪರ ಕೋರ್ಸ್‌ನ ವಿಷಯ. 

ಎಸ್‌ಎಸ್‌ಸಿನಲ್ಲಿ ನೂರಾರು ಕರಿಯರ್ ಆಧಾರಿತ ವೃತ್ತಿಪರ ಕೋರ್ಸ್‌ಗಳಿದ್ದು, ಅವುಗಳ ವಿವರಗಳನ್ನು ಮುಂದಿನ ಅಂಕಣದಲ್ಲಿ ತಿಳಿಯೋಣ.

ನಿಮಗೆ ಏನು ಅನ್ನಿಸ್ತು?
2 ವೋಟ್