ದಿಕ್ಸೂಚಿ | ಇಲ್ಲಿದೆ ವೃತ್ತಿಪರ ಕೋರ್ಸ್‌ಗಳ ಭರಪೂರ ಮಾಹಿತಿ

Student 2

ಎಸ್ಸೆಸ್ಸೆಲ್ಸಿ ಮುಗಿದ ತಕ್ಷಣ ಪಿಯುಸಿ ಕುರಿತು ಯೋಚಿಸುವುದು ಸಹಜ. ಆದರೆ, ಈಗ ಪಿಯುಸಿ ತತ್ಸಮಾನ ಪಠ್ಯಕ್ರಮದಲ್ಲೇ ವೃತ್ತಿಪರ ಕೋರ್ಸ್‌ಗಳು ಸಾಕಷ್ಟಿವೆ. ಹಾಗಾಗಿ, ವಿದ್ಯಾರ್ಥಿಗಳು ತಮ್ಮ ಉದ್ಯೋಗ ಮತ್ತು 'ಕರಿಯರ್' ಕುರಿತು ಪಿಯುಸಿ ಹಂತದಲ್ಲೇ ಆಲೋಚಿಸಬಹುದಾದ ಆರೋಗ್ಯಕರ ದಾರಿ ತೆರೆದುಕೊಂಡಿದೆ. ಪೋಷಕರೂ ಇದನ್ನು ಗಮನಿಸಬೇಕಾಗಿದೆ

ಕಳೆದ ಅಂಕಣದಲ್ಲಿ ತಿಳಿಸಿರುವಂತೆ, ಹತ್ತನೇ ತರಗತಿಯ ನಂತರ ಸಿಬಿಎಸ್ಇ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್) ಪಠ್ಯಕ್ರಮವನ್ನು ಅಳವಡಿಸಿರುವ ಕಾಲೇಜುಗಳಲ್ಲಿ ಪಿಯುಸಿಗೆ ತತ್ಸಮಾನವಾದ ಎಸ್ಎಸ್ಸಿ (ಸೀನಿಯರ್ ಸ್ಕೂಲ್ ಸರ್ಟಿಫಿಕೇಟ್) ಕಲಿಯಬಹುದಾಗಿದೆ. ಇಲ್ಲಿ ಸಾಮಾನ್ಯ ಎಸ್ಎಸ್ಸಿ ಅಲ್ಲದೆ, ವಿದ್ಯಾರ್ಥಿಗಳ ಆಯ್ಕೆಗೆ ಕರಿಯರ್ ಆಧಾರಿತ ಕೌಶಲ್ಯ ಕೋರ್ಸ್‌ಗಳೂ ಇವೆ. 2022-23ನೇ ಸಾಲಿನಲ್ಲಿ ಲಭ್ಯವಿರುವ ಕೋರ್ಸ್‌ಗಳ ಪಟ್ಟಿಯನ್ನು ಸಿಬಿಎಸ್ಇ ಪ್ರಕಟಿಸಿದ್ದು, ವಿವರ ಮುಂದೆ ನೀಡಲಾಗಿದೆ.

ಔದ್ಯೋಗಿಕ ಕೌಶಲ (ಎಂಪ್ಲಾಯಿಬ್ಲಿಟಿ ಸ್ಕಿಲ್ಸ್), ರಿಟೇಲ್, ಮಾಹಿತಿ ತಂತ್ರಜ್ಞಾನ (ಇನ್ಫರ್ಮೇಶನ್ ಟೆಕ್ನಾಲಜಿ), ವೆಬ್ ಅಪ್ಲಿಕೇಶನ್ಸ್, ವಾಹನ ತಂತ್ರಜ್ಞಾನ (ಆಟೋಮೊಟಿವ್), ಹಣಕಾಸು ಮಾರುಕಟ್ಟೆ ನಿರ್ವಹಣೆ (ಫೈನಾನ್ಶಿಯಲ್ ಮಾರ್ಕೆಟ್ಸ್ ಮ್ಯಾನೇಜ್ಮೆಂಟ್), ಪ್ರವಾಸೋದ್ಯಮ (ಟೂರಿಸಂ) ಸೌಂದರ್ಯ ಮತ್ತು ಕ್ಷೇಮ (ಬ್ಯೂಟಿ ಆಂಡ್ ವೆಲ್ನೆಸ್), ಕೃಷಿ, ಆಹಾರ ಉತ್ಪಾದನೆ (ಫುಡ್ ಪ್ರೊಡಕ್ಷನ್), ಕಚೇರಿ ನಿರ್ವಹಣೆ (ಫ್ರಂಟ್ ಆಫೀಸ್ ಆಪರೇಶನ್ಸ್), ಬ್ಯಾಂಕಿಂಗ್, ಮಾರ್ಕೆಟಿಂಗ್, ಆರೋಗ್ಯ ರಕ್ಷಣೆ (ಹೆಲ್ತ್ ಕೇರ್), ಇನ್ಶೂರೆನ್ಸ್, ತೋಟಗಾರಿಕೆ, ಎಲೆಕ್ಟ್ರಿಕಲ್ ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ ಟೆಕ್ನಾಲಜಿ, ಮಲ್ಟಿ ಮೀಡಿಯಾ, ಕಾಸ್ಟ್ ಅಕೌಂಟಿಂಗ್, ಶೀಘ್ರಲಿಪಿ (ಶಾರ್ಟ್ ಹ್ಯಾಂಡ್-ಇಂಗ್ಲಿಷ್, ಹಿಂದಿ) ಏರ್ ಕಂಡೀಶನಿಂಗ್ ಆಂಡ್ ರೆಫ್ರಿಜರೇಟರ್, ಮೆಡಿಕಲ್ ಡಯಾಗ್ನಾಸ್ಟಿಕ್ಸ್, ಬಿಸ್ನೆಸ್ ಅಡ್ಮಿನಿಸ್ಟ್ರೇಶನ್, ಸಮೂಹ ಮಾಧ್ಯಮ ಅಧ್ಯಯನ (ಮಾಸ್ ಮೀಡಿಯಾ ಸ್ಟಡೀಸ್), ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ (ಲೈಬ್ರರಿ ಆಂಡ್ ಇನ್ಫರ್ಮೇಶನ್ ಸೈನ್ಸ್), ವಸ್ತ್ರ ವಿನ್ಯಾಸ ಅಧ್ಯಯನ (ಫ್ಯಾಶನ್ ಸ್ಟಡೀಸ್), ಯೋಗ, ಡಾಟಾ ಸೈನ್ಸ್, ಅರ್ಲಿ ಚೈಲ್ಡ್‌ಹುಡ್ ಕೇರ್ ಆಂಡ್ ಎಜುಕೇಶನ್ ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ - ಇವು ಎಸ್ಎಸ್ಸಿನಲ್ಲಿ ಲಭ್ಯವಿರುವ ಕೌಶಲ್ಯ ಕೋರ್ಸ್‌ಗಳು.

ಐಸಿಎಸ್ಇ ನಂತರ ಐಎಸ್ಸಿ

ಇಂಡಿಯನ್ ಸ್ಕೂಲ್ ಸರ್ಟಿಫಿಕೆಟ್ (ಐಎಸ್ಸಿ) ಎಂಬುದು ಪಿಯುಸಿಗೆ ತತ್ಸಮಾನವಾದ ಎರಡು ವರ್ಷದ ಕೋರ್ಸ್. ಸಿಐಎಸ್ಸಿಇ (ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೆಟ್ ಎಕ್ಸಾಮಿನೇಶನ್ಸ್) ಪಠ್ಯಕ್ರಮವನ್ನು ಅಳವಡಿಸಿರುವ ಕಾಲೇಜುಗಳಲ್ಲಿ ಈ ಕೋರ್ಸ್ ಕಲಿಯಬಹುದು. ರಾಜ್ಯ, ಹೊರ ರಾಜ್ಯ ಅಥವಾ ವಿದೇಶಗಳಲ್ಲಿ ಪ್ರೌಢ ಶಿಕ್ಷಣವನ್ನು ಸಿಐಎಸ್ಸಿಇ ಪಠ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿಗೆ ತತ್ಸಮಾನವಾದ ಐಸಿಎಸ್ಇ ತರಗತಿ ಮುಗಿಸಿರುವ ವಿದ್ಯಾರ್ಥಿಗಳೇ ಹೆಚ್ಚಾಗಿ ಇಂತಹ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡುತ್ತಾರೆ. ಸಾಮಾನ್ಯ ಐಎಸ್ಸಿ ಕೋರ್ಸ್ ಅಲ್ಲದೆ ಐಎಸ್ಸಿ ಒಕೇಶನಲ್ (ವೃತ್ತಿಪರ) ಕೋರ್ಸ್‌ಗಳೂ ಐಸಿಎಸ್ ಪಠ್ಯಕ್ರಮದ ಆಯ್ದ ಕಾಲೇಜುಗಳಲ್ಲಿವೆ.

ಈ ಲೇಖನ ಓದಿದ್ದೀರಾ?: ದಿಕ್ಸೂಚಿ | ವೃತ್ತಿಪರ ಕೋರ್ಸ್‌ಗಳಿಂದ ಬದುಕು ಕಟ್ಟಿಕೊಳ್ಳಲು ಇಲ್ಲಿದೆ ದಾರಿ

ಸಾಮಾನ್ಯ ಐಸಿಎಸ್‌ನಲ್ಲಿ ಕನಿಷ್ಠ ನಾಲ್ಕು, ಗರಿಷ್ಠ ಆರು ವಿಷಯಗಳನ್ನು ಕಲಿಯಬಹುದು. ಇಂಗ್ಲಿಷ್ ಭಾಷಾ ಕಲಿಕೆ ಕಡ್ಡಾಯವಾಗಿದ್ದು, ಭಾಷಾ ವಿಷಯ ಮತ್ತು ಐಚ್ಛಿಕ ವಿಷಯಗಳ ಪೈಕಿ ಮೂರು, ನಾಲ್ಕು ಅಥವಾ ಐದು ವಿಷಯಗಳನ್ನು ಆಯ್ಕೆ ಮಾಡಬಹುದು. ಜೊತೆಗೆ, ಕೌನ್ಸಿಲ್‌ನ ನಿಯಮದಂತೆ ‘ಸಮಕಾಲೀನ ಶಿಕ್ಷಣ’ದ ಭಾಗವಾದ ಸಮುದಾಯ ಸೇವಾ ವಿಷಯ SUPW (Socially Useful Prodective Work & Community Service) ಕಲಿಕೆ ಕೂಡ ಐಸಿಎಸ್‌ನಲ್ಲಿ ಕಡ್ಡಾಯ.
 
ಐಎಸ್ಸಿ ಭಾಷಾ ವಿಷಯಗಳು

ಇಲ್ಲಿ ಭಾರತೀಯ ಭಾಷೆಗಳು, ಆಧುನಿಕ ವಿದೇಶಿ ಭಾಷೆಗಳು ಹಾಗೂ ಶಾಸ್ತ್ರೀಯ ಭಾಷೆಗಳೆಂಬ ಮೂರು ಭಾಷಾ ವಿಭಾಗಗಳಿವೆ. ಅಸ್ಸಾಮಿ, ಬೆಂಗಾಲಿ, ಡೆಝೋಂಗಾ, ಗುಜರಾತಿ, ಹಿಂದಿ, ಕನ್ನಡ, ಖಾಸಿ, ಮಿಝೊ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಲಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಉರ್ದು, ಲೆಪ್ಚಾ - ಇವು ಕಲಿಕೆಗೆ ಲಭ್ಯವಿರುವ ಭಾರತೀಯ ಭಾಷೆಗಳು. ಚೈನೀಸ್, ಫ್ರೆಂಚ್, ಟಿಬೆಟಿಯನ್, ಸ್ಪಾನಿಶ್ ಹಾಗೂ ಜರ್ಮನ್ ಆಧುನಿಕ ವಿದೇಶಿ ಭಾಷಾ ವಿಷಯಗಳು. ಅರಬಿಕ್, ಸಂಸ್ಕೃತ ಹಾಗೂ ಪರ್ಶಿಯನ್ ಶಾಸ್ತ್ರೀಯ ಭಾಷೆಗಳು.

ಐಚ್ಛಿಕ ವಿಷಯಗಳು: ಎಲೆಕ್ಟಿವ್ ಇಂಗ್ಲಿಷ್, ಇತಿಹಾಸ, ರಾಜಕೀಯ ವಿಜ್ಞಾನ, ಭೂಗೋಳಶಾಸ್ತ್ರ, ಸಮಾಜಶಾಸ್ತ್ರ, ಮನಶ್ಶಾಸ್ತ್ರ, ಅರ್ಥಶಾಸ್ತ್ರ, ವಾಣಿಜ್ಯ, ಲೆಕ್ಕಪತ್ರ, ಬಿಸ್ನೆಸ್ ಸ್ಟಡೀಸ್, ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗೃಹ ವಿಜ್ಞಾನ, ವಸ್ತ್ರ ವಿನ್ಯಾಸ, ಎಲೆಕ್ಟ್ರಿಸಿಟಿ ಆಂಡ್ ಎಲೆಕ್ಟ್ರಾನಿಕ್ಸ್, ಎಂಜಿನಿಯರಿಂಗ್ ಸೈನ್ಸ್, ಕಂಪ್ಯೂಟರ್ ಸೈನ್ಸ್, ಜಿಯೊಮೆಟ್ರಿಕಲ್ ಆಂಡ್ ಮೆಕ್ಯಾನಿಕಲ್ ಡ್ರಾಯಿಂಗ್, ಜಿಯೊಮೆಟ್ರಿಕಲ್ ಆಂಡ್ ಬಿಲ್ಡಿಂಗ್ ಡ್ರಾವಿಂಗ್, ಕಲೆ, ಸಂಗೀತ (ಭಾರತೀಯ – ಹಿಂದೂಸ್ತಾನಿ, ಕರ್ನಾಟಿಕ್ ಅಥವಾ ಪಾಶ್ಚಿಮಾತ್ಯ), ದೈಹಿಕ ಶಿಕ್ಷಣ, ಪರಿಸರ ವಿಜ್ಞಾನ, ಬಯೋಟೆಕ್ನಾಲಜಿ, ಮಾಸ್ ಮೀಡಿಯಾ ಆಂಡ್ ಕಮ್ಯುನಿಕೇಶನ್, ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ಮತ್ತು ಲೀಗಲ್ ಸ್ಟಡೀಸ್. ಇವು ಐಸಿಎಸ್‌ನಲ್ಲಿ ಲಭ್ಯವಿರುವ ಐಚ್ಚಿಕ ವಿಷಯಗಳು.     
     
ಸೂಚನೆ: ಐಚ್ಛಿಕ ವಿಷಯಗಳ ಪೈಕಿ ಭೌತಶಾಸ್ತ್ರದ ಜೊತೆಗೆ ಎಂಜಿನಿಯರಿಂಗ್ ಸೈನ್ಸ್ ಹಾಗೂ ಜಿಯೊಮೆಟ್ರಿಕಲ್ ಆಂಡ್ ಮೆಕ್ಯಾನಿಕಲ್ ಡ್ರಾಯಿಂಗ್ ಜೊತೆಗೆ ಜಿಯೊಮೆಟ್ರಿಕಲ್ ಆಂಡ್ ಬಿಲ್ಡಿಂಗ್ ಡ್ರಾಯಿಂಗ್ ವಿಷಯವನ್ನು ವಿದ್ಯಾರ್ಥಿಗಳು ಆಯ್ಕೆ ಮಾಡುವಂತಿಲ್ಲ.  

ಐಎಸ್ಸಿನಲ್ಲಿರುವ ವೃತ್ತಿಪರ ಕೋರ್ಸ್‌ಗಳು

Image
Student 3

ಐಎಸ್ಸಿ ವೃತ್ತಿಪರ ಕೋರ್ಸ್ ಕಲಿಯುವ ವಿದ್ಯಾರ್ಥಿಗಳು ಇಂಗ್ಲಿಷ್ ಪೇಪರ್ ಒಂದು ಮತ್ತು ಪೇಪರ್ ಎರಡು ಹಾಗೂ ಜನರಲ್ ಫೌಂಡೇಶನ್ ಇಂಡಸ್ಟ್ರಿಯಲ್ ಸೋಸಿಯಾಲಜಿ ಆಂಡ್ ಎಂಟರ್ಪ್ರೆನರ್ಶಿಪ್ ವಿಷಯಗಳನ್ನು ಕಡ್ಡಾಯವಾಗಿ ಆಯ್ಕೆ ಮಾಡಿಕೊಳ್ಳಬೇಕು.

ಮೆಕ್ಯಾನಿಕಲ್ ಎಂಜಿನಿಯರಿಂಗ್ ಟೆಕ್ನಿಶಿಯನ್, ಸಿವಿಲ್ ಇಂಜಿನಿಯರಿಂಗ್ ಟೆಕ್ನಿಶಿಯನ್, ಟೆಲಿಕಮ್ಯುನಿಕೇಶನ್ ಎಂಜಿನಿಯರಿಂಗ್ ಟೆಕ್ನಿಶಿಯನ್, ಕಂಪ್ಯೂಟರ್ ಥಿಯರಿ ಆಂಡ್ ಸಿಸ್ಟಂ ಅನಲೈಸಿಸ್ಟ್, ಬಿಸ್ನೆಸ್ ಸ್ಟಡೀಸ್, ಏರ್ ಕಂಡೀಶನಿಂಗ್ ಆಂಡ್ ರೆಫ್ರಿಜರೇಟರ್, ಆಫ್ಸೆಟ್ ಪ್ರಿಂಟಿಂಗ್ ಟೆಕ್ನಿಶಿಯನ್, ಗ್ರಾಫಿಕ್ ಡಿಸೈನಿಂಗ್ ಟೆಕ್ನಿಶಿಯನ್, ದೈಹಿಕ ಶಿಕ್ಷಣ, ಕ್ರಿಚೆ ಆಂಡ್ ಪ್ರೀ ಪೈಮರಿ ಎಜುಕೇಶನ್ ಮ್ಯಾನೇಜ್ಮೆಂಟ್, ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್, ಎಕ್ಸಿಟೀರಿಯರ್ ಆಂಡ್ ಇಂಟೀರಿಯರ್ ಡಿಸೈನಿಂಗ್ ಮತ್ತು ಆಫೀಸ್ ಅಸಿಸ್ಟೆಂಟ್ - ಇವು ವೃತ್ತಿಪರ ಕೋರ್ಸ್‌ಗಳ ಆಯ್ಕೆಗಿರುವ ಐಚ್ಛಿಕ ವಿಷಯಗಳು

ಪಿಯುಸಿಯಲ್ಲಿ ವೃತ್ತಿಪರ ಕೋರ್ಸ್‌ಗಳು

ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ನೋಂದಣಿಯಾಗಿರುವ ರಾಜ್ಯದ ಹಲವು ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಹಿಂದೆ ಜೆಒಸಿ (ಜಾಬ್ ಓರಿಯಂಟೆಡ್ ಕೋರ್ಸ್) ವಿಭಾಗಗಳಿದ್ದು, ಹಲವು ವೃತ್ತಿಪರ ಕೋರ್ಸ್‌ಗಳನ್ನು ಕಲಿಸಲಾಗುತ್ತಿತ್ತು. ಆದರೆ, ಕೆಲವು ವರ್ಷಗಳ ಹಿಂದೆ ಜೆಒಸಿಯನ್ನು ರದ್ದುಪಡಿಸಲಾಗಿದ್ದು, ಇದೀಗ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಯೋಜನೆ ಎನ್ಎಸ್‌ಕ್ಯೂಎಫ್ (ನ್ಯಾಶನಲ್ ಸ್ಕಿಲ್ಸ್ ಕ್ವಾಲಿಫಿಕೇಶನ್ ಫ್ರೇಮ್ವರ್ಕ್) ಭಾಗವಾಗಿ, ರಾಜ್ಯದ ಆಯ್ದ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕೆಲವು ವೃತ್ತಿಪರ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಇನ್ಫರ್ಮೇಶನ್ ಆಂಡ್ ಟೆಕ್ನಾಲಜಿ, ರಿಟೇಲ್, ಆಟೋಮೊಬೈಲ್, ಹೆಲ್ತ್‌ ಕೇರ್ ಹಾಗೂ ಬ್ಯೂಟಿ ಆಂಡ್ ವೆಲ್ನೆಸ್ - ಇವು ಪಿಯುಸಿ ಜೊತೆಗೆ ಕಲಿಯಬಹುದಾದ ಕೋರ್ಸ್‌ಗಳಾಗಿವೆ.

ನೇರವಾಗಿ ದ್ವಿತೀಯ ಪಿಯುಸಿ

ಅನಿವಾರ್ಯ ಕಾರಣಗಳಿಂದಾಗಿ ಪ್ರತೀ ದಿನ ಕಾಲೇಜಿಗೆ ಹೋಗಿ ವ್ಯಾಸಾಂಗ ಮಾಡಲು ಸಾಧ್ಯವಾಗದವರು ನೇರವಾಗಿ (ಖಾಸಗಿ ಅಭ್ಯರ್ಥಿಯಾಗಿ) ಪಿಯುಸಿ ಪರೀಕ್ಷೆ ಬರೆಯಲು ಅವಕಾಶವಿದೆ. ಈ ರೀತಿ ಖಾಸಗಿಯಾಗಿ ಪಿಯುಸಿ ಕಲಿಯಲು ಬಯಸುವವರು ಯಾವುದಾದರೂ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ನಿಗದಿತ ಅರ್ಜಿ ನಮೂನೆ ತುಂಬಿಸಿ, ಶುಲ್ಕ ಪಾವತಿಸಿ, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಕಲೆ ಮತ್ತು ವಾಣಿಜ್ಯ ವಿಭಾಗದ ಸಂಯೋಜನೆಗಳ ಕಲಿಕೆಗೆ ಮಾತ್ರ ಇಲ್ಲಿ ಅವಕಾಶವಿದ್ದು, ವಿಜ್ಞಾನ ವಿಷಯಗಳ ಕಲಿಕೆಗೆ ಅವಕಾಶವಿಲ್ಲ. ಆದರೆ, ವಿಜ್ಞಾನ ವಿಷಯಗಳನ್ನೂ ಒಳಗೊಂಡಂತೆ ಕಲೆ ಮತ್ತು ವಾಣಿಜ್ಯ ವಿಭಾಗದ ಕಲಿಕೆಯನ್ನು ನೇರವಾಗಿ ಎನ್ಐಒಎಸ್ (ನ್ಯಾಶನಲ್ ಸ್ಕೂಲ್ ಆಫ್ ಓಪನ್ ಸ್ಕೂಲಿಂಗ್) ಮೂಲಕ ಕಲಿಯಬಹುದಾಗಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್