ಮೊಗೆದಷ್ಟೂ ಮಾತು | ಅವತ್ತು ಕಾಣೆಯಾಗಿದ್ದವಳು ಅಕ್ಕ ಅಲ್ಲ, ನಾನೇ!

Trupthi 1

ಟಿ ಎನ್ ಸೀತಾರಾಂ, ಸುನೀಲ್ ಕುಮಾರ್ ದೇಸಾಯಿ, ಬಿ ಎಂ ಗಿರಿರಾಜ್ ಮೊದಲಾದವರ ಧಾರಾವಾಹಿ, ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕಿ, ಸ್ಕ್ರಿಪ್ಟ್ ರೈಟರ್, ಅಸಿಸ್ಟೆಂಟ್ ಕ್ಯಾಮೆರಾ ವುಮನ್ ಆಗಿದ್ದವರು ತೃಪ್ತಿ ಅಭಿಕರ್. ಈಗ 'ನಲ್ಕೆ' ಚಿತ್ರದ ನಿರ್ದೇಶಕಿ. ಕಿರುತೆರೆ, ಹಿರಿತೆರೆ ಜೊತೆ 11 ವರ್ಷದ ನಂಟಿರುವ ಇವರು, ತಮ್ಮ ಸಿನಿಮಾ ಬದುಕಿನ ಕುರಿತು ಬರೆಯುವ ಅಂಕಣವಿದು

ಇಲ್ಲಿ ಹಾದುಹೋಗುವ ಯಾವ ಪಾತ್ರಗಳೂ ಕಾಲ್ಪನಿಕವಲ್ಲ. ನನ್ನ ಜೀವಕೆ ಜೊತೆಯಾದವರು, ಜೀವನ ಕಲಿಸಿದವರು, ಪ್ರಭಾವ ಬೀರಿದವರು, ಸದಾ ಸ್ಮರಿಸಿಕೊಳ್ಳುವ ಎಲ್ಲರೂ ಮುಖ್ಯರು. ದಾಖಲಾಗಿಲ್ಲದವರು ನನ್ನ ಜೀವನದಲ್ಲಿ ಅಮುಖ್ಯರೆಂದೇ ನನ್ನ ಭಾವನೆ.

ಪ್ರತಿಯೊಬ್ಬ ವ್ಯಕ್ತಿಯ ಬೆಳವಣಿಗೆಯಲ್ಲಿ ಹುಟ್ಟಿ, ಬೆಳೆದ ಊರು ಪ್ರಮುಖ ಪಾತ್ರ ವಹಿಸುವುದಾದರೆ, ನಾ ಬಾಲ್ಯ ಕಳೆದ ಊರಿನಲ್ಲಿ ಭಾಂದವ್ಯವಿತ್ತು, ಸಂತೋಷವಿತ್ತು, ನೋವಿತ್ತು, ಅನ್ಯೊನ್ಯತೆ ಇತ್ತು, ಮಾನವೀಯತೆಯ ಬದುಕಿತ್ತು. ಜನರು ಜೀವನವನ್ನು ಪ್ರತೀ ಕ್ಷಣವೂ ಜೀವಿಸುತ್ತಿದ್ದರು. ಎಲ್ಲಕ್ಕಿಂತ ಮಿಗಿಲಾಗಿ, ಆ ಊರಿನಲ್ಲಿ ಮೊಗೆದಷ್ಟೂ ಕತೆಯಿತ್ತು. ಎಲ್ಲರೂ, ಎಲ್ಲವೂ ನನ್ನ ಮೇಲೆ ಗಾಢ ಪ್ರಭಾವ ಬೀರಿದವು.

Image
Trupthi 3

ಬಾಲ್ಯದಿಂದಲೂ ಕತೆ, ಕವನ ಓದೋ ಹುಚ್ಚು. ಬಿಡುವಿದ್ದಾಗೆಲ್ಲ ಪುಸ್ತಕಗಳೊಂದಿಗೆ ನಂಟು. ರಜೇಲಿ ನೆಂಟರ ಮನೆಗೆ ಹೋದರೆ, ಯಾವುದಾದರೊಂದು ಪುಸ್ತಕ ಹಿಡಿದುಕೊಂಡು ಮೂಲೆಯಲ್ಲಿ ಕುಳಿತುಕೊಳ್ಳುತ್ತಿದ್ದೆ. ನನ್ನದೇ ವಯಸ್ಸಿನ ಮಕ್ಕಳೊಂದಿಗೆ ಆಟವಾಡಿದ್ದು ಕಡಿಮೆ. ನಾಟಕ, ಹರಿಕತೆ, ಯಕ್ಷಗಾನಕ್ಕೆ ಅಂತಾದರೆ ಎಲ್ಲಿದ್ದರೂ ಹಾಜರ್. ಕರಾವಳಿಯವರಿಗೆ ಯಕ್ಷಗಾನ ಜೀವನದ ಅವಿಭಾಜ್ಯ ಅಂಗ. ಊರಿಗೆ ಬರುತ್ತಿದ್ದ ಯಾವ ಮೇಳದ ಪ್ರಸಂಗ ಕೂಡ ತಪ್ಪಿಸಿಕೊಳ್ಳುತ್ತಿರಲಿಲ್ಲ. ಆದರೆ, ಮರುದಿನ ಶಾಲೆಗೆ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬಾರದೆಂಬ ಕಂಡೀಶನ್ ಹಾಕಿಯೇ ಮನೆಯವರು ಯಕ್ಷಗಾನ ನೋಡಲು ಅನುಮತಿ ಕೊಡುತ್ತಿದ್ದರು. ಮುಂಜಾನೆ ಮೂರು-ನಾಲ್ಕರವರೆಗೂ ಕಣ್ಣು ಮಿಟುಕಿಸದೆ ಆಟ ನೋಡುತ್ತ ಕುಳಿತುಕೊಳ್ಳುತ್ತಿದ್ದೆ. ನಿದ್ರೆ ತಪ್ಪಿಸೋಕೆ ಆಗದೆ  ಹೋದಾಗ, ಕಾಲಿನ ಚಪ್ಪಲಿಯನ್ನೇ ತಲೆದಿಂಬು ಮಾಡಿಕೊಂಡು ನಕ್ಷತ್ರ ಎಣಿಸುತ್ತ ಮಲಗೋದು. ಆದರೂ, ಸುಪ್ತ ಮನಸ್ಸು ದೂರದಲ್ಲೆಲ್ಲೋ ಚಂಡೆಯ ಲಯಕ್ಕೆ ಕುಣಿಯೋದು ನಿಲ್ಲಿಸುತ್ತಿರಲಿಲ್ಲ.  ಮರುದಿನ ಮೇಷ್ಟ್ರು ಸಮಾಜ ಪಾಠ ಮಾಡುವಾಗ, ಮಹಮ್ಮದ್ ಘಜನಿಯ ದಂಡಯಾತ್ರೆಯಲ್ಲಿ ಚಂಡೆಯ ಹಿನ್ನಲೆ ಧ್ವನಿ ಕೇಳಿಸೋದು!

ನಂಗೆ ಆಗ ಏಳು ವರ್ಷ ವಯಸ್ಸು. ಆ ದಿನ ಶನಿವಾರ. ಅರ್ಧ ದಿನದ ತರಗತಿ. ಶಾಲೆಯಿಂದ ಮನೆಗೆ ಅರ್ಧ ಗಂಟೆಯ ಬಸ್ ಪ್ರಯಾಣ. ಅಕ್ಕನೊಂದಿಗೆ ಬಸ್‌ಗೆ ಕಾಯುತ್ತಿದ್ದೆ. ದೂರದಲ್ಲಿ ಹುಲಿವೇಷ ಕುಣಿತದ ಸದ್ದು ಕೇಳಿಸಿತ್ತು. ಅಷ್ಟೇ... ಕ್ಷಣಮಾತ್ರದಲ್ಲಿ ಹುಲಿ ತಂಡದ ಜೊತೆಗಿದ್ದೆ. ಗಂಡು ಹುಲಿಗಳೊಂದಿಗೆ ಸಣ್ಣ ಹೆಣ್ಣು ಹುಲಿ. ಒಂದು ಅಂಗಡಿಯಿಂದ ಮತ್ತೊಂದು ಅಂಗಡಿಗೆ ಹುಲಿವೇಷ ಸಾಗಿತ್ತು. ಒಬ್ಬರನ್ನೊಬ್ಬರು ಮೀರಿಸುವಂತೆ ಕುಣಿತ... ಅದೆಷ್ಟೋ ಹೊತ್ತು ಸಮಯದ ಪರಿವೇ ಇಲ್ಲ. ಇನ್ನೇನು ಸೂರ್ಯ ಮುಳುಗುವ ಹೊತ್ತಾದಾಗ ಹಸಿವು. ಮನೆ, ಮನೆಯವರ ನೆನಪಾಯಿತು.

ಈ ಲೇಖನ ಓದಿದ್ದೀರಾ?: ಹೆಣ್ಣೆಂದರೆ... | ಆ್ಯಕ್ಷನ್-ಕಟ್ ಹೇಳುವ ಕನಸು ಮತ್ತು ತೃಪ್ತಿ

ಸುತ್ತಮುತ್ತ ನೋಡಿದರೆ, ಅಕ್ಕ ಜೊತೆಗಿಲ್ಲ. ಪರಿಚಯದವರೊಬ್ಬರ ಅಂಗಡಿಯಿಂದ ಮನೆಗೆ ಫೋನ್ ಮಾಡಿಸಿದೆ. ಆ ಕಡೆಯಿಂದ ಮಾವನ ಧ್ವನಿ. ಅಳು ಒತ್ತರಿಸಿ ಬಂದಿತ್ತು. “ಅಕ್ಕ ಕಾಣೆಯಾಗಿದ್ದಾಳೆ,” ಅಂದೆ. “ನೀ ಅಲ್ಲೇ ಇರು, ಬಂದೆ..." ಹೇಳಿದ ಮಾವ, ನನ್ನನ್ನು ಕರೆದುಕೊಂಡು ಹೋಗಲು ಬಂದರು. ಗಾಡಿಯಲ್ಲಿ ಹೋಗುತ್ತ ನೀರವ ಮೌನ. ದಾರಿಯುದ್ದಕ್ಕೂ ಕಾಣೆಯಾಗಿದ್ದ ಅಕ್ಕನ ಬಗ್ಗೆ ಯೋಚಿಸುತ್ತ, ಅವಳನ್ನು ಕಾಪಾಡಿಕೊಳ್ಳದ ನನ್ನ ಬಗ್ಗೆ ಅಸಹ್ಯ ಅನ್ನಿಸಿತ್ತು. ಮನೆಗೆ ಹೋಗಿ ನೋಡಿದರೆ, ಅಕ್ಕ ಹಪ್ಪಳ ತಿನ್ನುತ್ತ ಕೂತಿದ್ದಳು.

ಅಸಲಿಗೆ, ಕಾಣೆಯಾದವಳು ನಾನಾಗಿದ್ದೆ! ಇನ್ನು ಅರ್ಧ ಗಂಟೆ ತಡ ಆಗಿದ್ದಿದ್ದರೆ ಪೋಲಿಸ್ ಕಂಪ್ಲೇಂಟ್ ಆಗಿರೋದು. ಆ ದಿನ ಅಜ್ಜಿ, ಅಜ್ಜನ ಕೈಯಿಂದ ಸ್ವಲ್ಪ ಜಾಸ್ತಿನೇ ಸಹಸ್ರ ನಾಮಾರ್ಚನೆ ಆಯಿತು. ಅಜ್ಜಿಯ ಪ್ರಕಾರ, ಮಕ್ಕಳ ಕಳ್ಳರ ಗುಂಪೊಂದು ನನ್ನನ್ನು ಅಪಹರಿಸಿ, ಕಣ್ಣು ಕಿತ್ತು ಬಸ್ ಸ್ಟ್ಯಾಂಡ್‌ನಲ್ಲಿ ಭಿಕ್ಷೆ ಬೇಡುವುದರಿಂದ ಜಸ್ಟ್ ಮಿಸ್ ಆಗಿದ್ದೆ. ಸುಬ್ರಹ್ಮಣ್ಯ ಸುಬ್ಬಪ್ಪ ಕಾಪಾಡಿದ್ದ. ಸಾಹಿತ್ಯ, ಸಂಗೀತ ಕಲೆಯ ಮೇಲಿನ ಒಲವುಗಳಿಗೆ ಈ ರೀತಿಯ ಹಲವು ಘಟನೆಗಳು ಸಾಕ್ಷಿಯಷ್ಟೇ.

Image
Trupthi 2

ಯಾವುದೇ ಸಿನಿಮಾ ಹಿನ್ನಲೆಯಿಂದ ಬಂದವಳಲ್ಲ ನಾನು. ಆದರೆ, ಸಿನಿಮಾದಲ್ಲಿನ ಮಾಂತ್ರಿಕ  ಸೆಳೆತಕ್ಕೆ ಬಾಲ್ಯದಿಂದಲೇ ಸಿಲುಕಿದ್ದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾವನ ಒಡೆತನದ ಮಿನಿ ಥಿಯೇಟರ್ ಇತ್ತು. ಅನಿವಾರ್ಯ ಕಾರಣಗಳಿಂದ ಅದನ್ನು ಮುಚ್ಚಲಾಯಿತು. ಆಮೇಲೆ, ಊರಲ್ಲೇ ಮಾವನಿಗೆ ಸೇರಿದ ಜಾಗವೊಂದಕ್ಕೆ ಮಿನಿ ಥಿಯೇಟರ್ ಬಂತು. 1988-89ರ ಕಾಲ; ವಿಸಿಪಿ, ಕ್ಯಾಸೆಟ್ ಯುಗ.  ಎಲ್ಲ ಮನೆಯಲ್ಲೂ ಟಿ.ವಿ ಇರುತ್ತಿರಲಿಲ್ಲ. ಹಗಲೆಲ್ಲ ಕೆಲಸ ಮಾಡಿ ಸಾಯಂಕಾಲ ಊರ ಜನ ಸಿನಿಮಾ ನೋಡಲು ಬರುತ್ತಿದ್ದರು. ಅಜ್ಜ, ನಾನು ಹಾಗು ನಮ್ಮ ಮನೆ ನಾಯಿ ರಾಣಿ ಗಾಂಧಿ ಕ್ಲಾಸ್ ಪ್ರೇಕ್ಷಕರು. ಇದೇ ಕಾರಣಕ್ಕೆ ನನಗೆ ಗಾಂಧಿ ಕ್ಲಾಸ್‌ನಲ್ಲಿ ನೋಡೋ ಸಿನಿಮಾಗಳು ಈಗಲೂ ವಿಶೇಷ ಅನುಭವ ಕೊಡೋದು.

'ಸಾಂಗ್ಲಿಯಾನ,' 'ಶೃತಿ,' 'ಡ್ಯಾನ್ಸ್ ರಾಜಾ ಡ್ಯಾನ್ಸ್,' 'ಯುಗ ಪುರುಷ,' 'ಯುದ್ಧ ಕಾಂಡ,' 'ರಾಮಾಚಾರಿ,' 'ಹೃದಯ ಪಲ್ಲವಿ,' 'ಒಲವಿನ ಉಡುಗೊರೆ,' ಹೀಗೆ ಹಲವು ಚಿತ್ರಗಳು ನೆನಪಿನಂಗಳದಲ್ಲಿ ಶಾಶ್ವತವಾಗಿ ಉಳಿದವು. ನಿತ್ಯವೂ ಸಿನಿಮಾ, ಸಿನಿಮಾ, ಸಿನಿಮಾ. ಹಗಲೆಲ್ಲ ಶಾಲೆಯಲ್ಲಿ ಸಾಮಾನ್ಯ ಜ್ಞಾನ, ರಾತ್ರಿ ಸಿನಿಮಾ ಧ್ಯಾನ. ಎಷ್ಟೋ ಸಿನಿಮಾಗಳ ಪಾತ್ರಗಳು ನನ್ನನ್ನು ಸರಿ, ತಪ್ಪುಗಳ ಒರೆಗೆ ಹಚ್ಚಿ, ಯೋಚಿಸುವಂತೆ ಮಾಡಿ, ವ್ಯಕ್ತಿತ್ವ ಬೆಳವಣಿಗೆಗೂ ಸಹಾಯ ಮಾಡಿವೆ. ನಾ ಅತೀ ಹೆಚ್ಚು ಸಲ ನೋಡಿದ ಸಿನಿಮಾ 'ಶೃತಿ.' ರಾಜ್ ಕುಮಾರ್, ಶಂಕರ್ ನಾಗ್, ಅಂಬರೀಷ್, ವಿಷ್ಣುವರ್ಧನ್ ಪ್ರಭಾಕರ್, ದೇವರಾಜ್, ಶಶಿ ಕುಮಾರ್, ಮಾಲಾಶ್ರೀ ಹಾಗೂ ಭವ್ಯ... ಪ್ರತೀ ಕಲಾವಿದರಿಗೂ ನಾ ಅಭಿಮಾನಿ.

ನಿಮಗೆ ಏನು ಅನ್ನಿಸ್ತು?
2 ವೋಟ್