ಕೂಡಲ ಸಂಗಮದ ದಿನಗಳು | ಈಗಲೂ ಡಬಗೊಳಿ ಹಣ್ಣು ನೋಡಿದರೆ ತಿನ್ನುವ ಆಸೆ, ಆದರೆ ಸುಂಕಿನ ಭಯ

ಮಳಿಹುಳ, ಡ್ರ್ಯಾಗನ್ ಫ್ಲೈ ಹಿಡಿಯುವುದು; ನಂತರ ಅವುಗಳಿಗೆ ದಾರ ಕಟ್ಟಿ ಓಣಿಯಲ್ಲಿ ಹಾರಿಸುವುದು ನಮ್ಮ ನೆಚ್ಚಿನ ಕೆಲಸವಾಗಿತ್ತು. ಆಮೇಲೆ ಅವುಗಳನ್ನು ಖಾಲಿ ಕಡ್ಡಿ ಪಟ್ಟಣದಾಗ ಇಡುತ್ತಿದ್ದೆ. ಎಷ್ಟೋ ಸಾರಿ ಅವ್ವ, “ಪಾಪ... ಅವನ್ಯಾಕ ಸಾಯಸ್ತಿ! ಪಾಪ ಹತ್ತತ, ಬಿಟ್ ಬಿಡು...” ಎಂದಾಗ ಅವುಗಳನ್ನು ಹಾರಿ ಬಿಟ್ಟು, ಸಂಭಾವಿತನಂತೆ ಅಮ್ಮನೆದುರು ನಿಲ್ಲುತ್ತಿದ್ದೆ

ಬಾಲ್ಯವೆಂಬುದು ಸ್ವರ್ಗದಂತೆ ಎಂದಿಗೂ ಬತ್ತದ ನೆನಪುಗಳ ಬುಗ್ಗೆ. ಕೂಡಲ ಸಂಗಮದಲ್ಲಿ ನನ್ನ ಬಾಲ್ಯ ಆಟ, ತುಂಟಾಂಟಗಳ ಸಮ್ಮಿಲನವಾಗಿತ್ತು. ಶಾಲೆಗೆ ಹೋದರೆ ಖೋ ಖೋ, ಕಬಡ್ಡಿ, ಓಟ, ಕಪ್ಪೆ ಜಿಗಿತ ಮಾಮೂಲಿ. ಇದನ್ನು ಹೊರತುಪಡಿಸಿ 'ಡುಬ್ಬ ಚೆಂಡು’ ತುಂಬಾ ಇಷ್ಟದ ಆಟವಾಗಿತ್ತು. ಆಗಿನ್ನೂ ಪ್ಲಾಸ್ಟಿಕ್ ಚೆಂಡುಗಳು ಸಿಗುತ್ತಿರಲಿಲ್ಲ. ಸಿಕ್ಕರೂ ಜಾತ್ರೆ, ದೊಡ್ಡ ಸಂತೆಗಳಲ್ಲಿ ತರಬೇಕಾಗಿತ್ತು. ಹಾಗಾಗಿ, 'ಡುಬ್ಬ ಚೆಂಡು' ತಯಾರಿ ನಡೆಯುತ್ತಿತ್ತು. ಈ ಚೆಂಡನ್ನು ತಯಾರಿಸುವುದೇ ವಿಶಿಷ್ಟ. ಮನೆಯಲ್ಲಿರುವ ಚಿಂದಿ ಬಟ್ಟೆಗಳನ್ನು ಆಯ್ದು ಒಂದರಲ್ಲಿ ಒಂದು ಸೇರಿಸಿ ಗುಂಡಾಗಿ ಮಾಡಿ ಸೆಣಬಿನಿಂದ ಕಟ್ಟಿದರೆ ಒಂದು ರೀತಿಯ ಚೆಂಡು ತಯಾರಾಗುತ್ತಿತ್ತು. ಇದನ್ನು ಬೆನ್ನಿಗೆ ಜೋರಾಗಿ ಹೊಡೆದರೆ ಪೆಟ್ಟಾಗುತ್ತಿತ್ತಾದರೂ, ಸ್ವಲ್ಪ ಕಡಿಮೆ ಉರಿ ಇರುತ್ತಿತ್ತು. ಇನ್ನೊಂದು ಬರೀ ಪ್ಲಾಸ್ಟಿಕ್ ಚೀಲಗಳ ತುಂಡುಗಳನ್ನು ಸೇರಿಸಿ ತಯಾರಿಸಿದ ಚೆಂಡು. ಇದರ ಪೆಟ್ಟು ಮಹಾ ಭಯಂಕರ!

Eedina App

ಒಮ್ಮೆ ಹೀಗೆ 'ಡುಬ್ಬ ಚೆಂಡು' ಆಡುವಾಗ ಕೈಯಲ್ಲಿರುವ ಚೆಂಡು ಎದುರಿಗೆ ಸಿಕ್ಕ ಗೆಳೆಯನ ಬೆನ್ನಿಗೆ ಬೀಳುವ ಬದಲೂ ಕಣ್ಣಿಗೆ ಬಿದ್ದಿತ್ತು. ಮೊದಲೇ ಪ್ಲಾಸ್ಟಿಕ್ ಹಾಳೆಗಳಿಂದ ತಯಾರಿಸಿದ ಚೆಂಡು ಅದು, ಅದರ ಹೊಡೆತಕ್ಕೆ ಆತನ ಕಣ್ಣು ಪುರ್ರನೆ ಊದಿಕೊಂಡು, "ಯವ್ವಾ ಬೇ...” ಅಂತ ಜೋರಾಗಿ ಅಳತೊಡಗಿದ. ಜೊತೆಗಿದ್ದವರು ಅವರ ಮನೆಗೆ ಓಡಿ ಹೋಗಿ, "ರೀ... ಮುನ್ಯಾ ಪರಸ್ಯಾನ ಕಣ್ಣಿಗೆ ಚೆಂಡ ಒಗದಾನ್ರಿ," ಅಂತ ಸುದ್ದಿ ಮುಟ್ಟಿಯಾಗಿತ್ತು. ಇನ್ನು ಮನೆಯಲ್ಲಿ ಒದೆ ಬೀಳುವುದು ಗ್ಯಾರಂಟಿ ಎಂದು ನಾನು ಓಡಿಹೋಗಿದ್ದೆ.

ಕದ್ದುಮುಚ್ಚಿ ರಾತ್ರಿ ಮನೆಗೆ ಬಂದಾಗ ಗೊತ್ತಾಯಿತು - ಪರಸ್ಯಾನ ಅವ್ವ ನಮ್ಮ ಮನೆಗೆ ಬಂದು ಜೋರಾಗಿ ಕಲ ಕಲ ಬಾಯಿ ಮಾಡಿ, "ನಿನ್ ಮಗನ ಸಲುವಾಗಿ ಸಾಕಾಗೈತಿ... ಸ್ವಲ್ಪರ ಕೈಯಾಗಿಲ್ಲ ಹುಡುಗ..." ಅಂತ ಓಣಿ ತುಂಬಾ ಜನ ಕೇಳುವಂಗ ಒದರಾಡಿ ರಂಪಾ ಮಾಡಿದ್ದರು. "ಕಣ್ ಹೋದ್ರ ಏನ್ ಮಾಡಬೇಕು?" ಎಂದು ಉಬ್ಬಿದ ಕಣ್ಣನ್ನು ಓಣಿ ಜನಕ್ಕೆ ತೋರಿಸಿದ್ರು. ರಾತ್ರಿ ಮನೆಗೆ ಬಂದ ನನಗೆ ಅವ್ವ ಕಸಬರಿಗೆಯಿಂದ ಮೈತುಂಬಾ ಬಾಸುಂಡೆ ಬರುವ ಹಾಗೆ ಹೊಡೆದಿದ್ದಳು. ನನ್ನ ಉಡಾಳತನಕ್ಕ ಇಂತಹ ಏಟುಗಳ ದಡ್ಡು ಬಿದ್ದಿದ್ದವು. "ಹೊಡದ್ರ ಮೈ ಉಬ್ಬತಾವಂದು ಅದಕ್ಕೆ ಕಣ್ಣಾಗ ಖಾರಪುಡಿ ತುಂಬಬೆ," ಎಂಬ ಮಲ್ಲವ್ವನ ಮಾತು ಕೇಳಿ, ಒಂದೆರಡು ಬಾರಿ ಕೈ-ಕಾಲ ಕಟ್ಟಿ ಖಾರಪುಡಿ ತುಂಬಿ ಅವ್ವ ಅತ್ತಿದ್ದೂ ಉಂಟು. ಹೀಗೆ, ಆಕಸ್ಮಿಕವಾದ ಆಟದ ಏಟುಗಳ ನೋವಿನೊಂದಿಗೆ ಓಣಿಯಲ್ಲಿ ಜಗಳ, ಮುನಿಸು ತಂದದ್ದು ಲೆಕ್ಕವಿಲ್ಲ.

AV Eye Hospital ad

ಯಾರಾದರೂ ಮನೆಯಲ್ಲಿ ನಾನು ಸಿಗಲಿಲ್ಲವೆಂದರೆ ಬೇರೆ-ಬೇರೆ ಓಣಿಗಳಲ್ಲಿ ಗೋಲಿಯಾಟ ಗುಂಡಾ ಆಡಲು ಹೋಗಿರುವುದಾಗಿಯೇ ತಿಳಿದುಕೊಳ್ಳಬೇಕು. ಸಿಟ್ಟಿಗೆದ್ದ ಅಪ್ಪ, “ಬಸಂದರ ಗುಡಿ ಇಲ್ಲಂದ್ರ ಮುಲ್ಲಾರ ಓಣ್ಯಾಗ ಗುಂಡಾ ಆಡಕ್ ಹೋಗಿರಬೇಕು ನೋಡ್ರೀ,” ಎಂಬುದು ತೀರಾ ಸಾಮಾನ್ಯ ಮಾತಾಗಿತ್ತು. ಗುಂಡಾ ಆಡುವುದರಲ್ಲಿ ನಾನು ಎತ್ತಿದ ಕೈ. ನನ್ನೊಂದಿಗೆ ಪಿಂಕ್ಯಾ, ಪರಸ್ಯಾ, ಜಹಾಂಗೀರ, ಬಂದ್ಯಾ, ರಾಟಿ ಮುತ್ತಾ ಇನ್ನೂ ಹಲವರು ತುಂಬಾ ಗುರಿಯಿರುವ ಆಟಗಾರರು. ಗುರಿಯೆಂದರೆ, ದೂರದಿಂದ ಒಂದು ಗೋಲಿ ಬಳಸಿ ಮತ್ತೊಂದು ಗೋಲಿಗೆ ಹೊಡೆಯುವುದು. ಸೀದಾ ಕಳ್ಳಿಮಟ ಅಜ್ಜರ, ಇಲ್ಲವೇ ಜಾಯವಾಡಗಿ ಸಿದ್ದಣ್ಣ ಇವರ ಅಂಗಡಿಗೆ ಹೋಗಿ ಗೋಲಿ ತರುತ್ತಿದ್ದೆ. ಅದರಲ್ಲಿ ಪಾರದರ್ಶಕವಾಗಿ ಕಾಣುವ ಮತ್ತು ನಡುವೆ ಬಣ್ಣದ ಚುಕ್ಕೆ, ಪಟ್ಟೆಗಳಂತಿರುವ ಕಲೆಗಳನ್ನು ನೋಡುವುದೇ ಚಂದ. ಮಣ್ಣಿನಲ್ಲಿ ಆಡಿದರೆ ಗಲೀಜು ಆಗುವುದೆಂದು ಕೆಲವೊಮ್ಮೆ ಹಾಗೇ ಶೇಖರಿಸಿಡುತ್ತಿದ್ದೆ. ಗುಂಡಾ ಆಡುವುದರಲ್ಲಿ ಎರಡು ಆಟಗಳು ಫೇಮಸ್ ಆಗಿದ್ದವು. ಒಂದು ಬಿಂದು, ಇನ್ನೊಂದು ಕುಬುಸ.

ಈ ಲೇಖನ ಓದಿದ್ದೀರಾ?: ಕೂಡಲ ಸಂಗಮದ ದಿನಗಳು | 'ತಮ್ಮಾ, ಮುಂದ ಹೇಳಲೇ... ಬರೀ ಹೇಳಿದ್ದ ಹೇಳ್ತಿಯಲ್ಲಾ, ಹುಚ್ಚಪ್ಯಾಲಿ'

'ಬಿಂದು' ಎಂದರೆ ಇಬ್ಬರು-ಮೂವರು ಆಟಗಾರರು ಸೇರಿ ತಲಾ ಎರಡು-ಮೂರು ಗೋಲಿಗಳನ್ನು ಹಾಕಿ, ಒಟ್ಟಿಗೇ ಐದು ಅಥವಾ ಆರು ಅಡಿ ಮುಂದೆ ಇಡುತ್ತಿದ್ದೆವು. ಯಾರು ಮೊದಲು ಹೊಡೆಯಬೇಕೆಂಬುದನ್ನು ಅವರಿಂದ ಒಂದೊಂದು ಗೋಲಿ ತೆಗೆದುಕೊಂಡು ಟಾಸ್ ಮಾಡಿ ಆಡುತ್ತಿದ್ದೆವು. 'ಬಿಂದು'ವಿನಲ್ಲಿ ಹೆಬ್ಬೆರಳು ಮತ್ತು ತೋರುಬೆರಳಿನಿಂದ ಗೋಲಿಯನ್ನು ಜೋರಾಗಿ ಹೊಡೆಯುವುದಾಗಿತ್ತು.

ಇನ್ನು, ನನಗೆ ಅಚ್ಚುಮೆಚ್ಚಿನ ಆಟವೆಂದರೆ 'ಕುಬುಸದಾಟ.' 'ಬಿಂದು'ವಿನಂತೆಯೇ ಆಟದ ರೀತಿಯಾದರೂ, ಇಲ್ಲಿ ತ್ರಿಭುಜಾಕಾರದಲ್ಲಿ ಗೋಲಿಗಳನ್ನು ಹೊಂದಿಸುತ್ತಿದ್ದೆವು. ಟಾಸ್ ಮಾಡಿದಾಗ ಹೆಬ್ಬೆರಳು, ತೋರುಬೆರಳಿನಿಂದ ಬಿಲ್ಲಿನಿಂದ ಬಾಣ ದಾಟಿಸಿದಂತೆ ಗೋಲಿಯನ್ನು ಬೆರಳ ತುದಿಯಲ್ಲಿ ಸಿಲುಕಿಸಿ ಹೊಡೆಯುತ್ತಿದ್ದೆವು. ಅದೆಷ್ಟೇ ದೂರ ಇದ್ದರೂ ನಾನು ಒಂದೇ ಏಟಿಗೆ ಹೊಡೆಯುತ್ತಿದ್ದೆ. ನನ್ನೊಂದಿಗೆ ಪಿಂಕ್ಯಾ ಕೂಡ ನುರಿತ ಆಟಗಾರನಾಗಿದ್ದ.

ಇವೆರಡೂ ಆಟಗಳಿಂದ ಗೆದ್ದ ಗೋಲಿಗಳು ನಮ್ಮ ಮನೆಯ ಕಿಟಕಿಯಲ್ಲಿ, ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಅಲಂಕೃತವಾಗಿದ್ದವು. ಅವುಗಳನ್ನು ನೋಡಿದಾಗ ಅದೆಂಥದೋ ವಿಶೇಷ ಸಾಧನೆ ಮಾಡಿದಂತೆ ಅನಿಸುತ್ತಿತ್ತು. ಜಾಸ್ತಿ ಇರುವ ಗೋಲಿಗಳನ್ನು ಒಂದೆರಡು ರೂಪಾಯಿಗಳಿಗೆ ಮಾರಾಟ ಮಾಡಿ ಪಾಪಡಿ, ಶೇಂಗಾವಡಿ ಕೊಂಡು ಗೆಳೆಯರಿಗೆ ಹಂಚಿ ಮಜಾ ಮಾಡುತ್ತಿದ್ದೆ.

ನಮ್ಮೂರಿನಲ್ಲಿ ಟಿ.ವಿ ಇದ್ದದ್ದು ಕೇವಲ ಕೆಲವರ ಮನೆಯಲ್ಲಿ. ಅದರಲ್ಲಿ ನಮ್ಮ ಓಣಿಯಲ್ಲಿ ಮೇಲಮಳಗಿ ಮಲ್ಲಯ್ಯನವರ ಮನೆಯಲ್ಲಿ ಕಲರ್ ಟಿ.ವಿ ಇತ್ತು. ಆಗ ದೂರದರ್ಶನ ಮಾತ್ರ ಪ್ರಸಾರವಾಗುತ್ತಿತ್ತು. ರವಿವಾರವೆಂದರೆ ನಮಗೆ ತುಂಬಾ ಕುತೂಹಲ. ಕಾರಣ, 'ಜಂಗಲ್, ಜಂಗಲ್ ಪಥಾ ಚಲಾ ಹೈ' ಎಂಬ 'ಮೋಗ್ಲಿ' ಕಾಮಿಕ್ ಸಂಚಿಕೆ. ಮತ್ತೊಂದು 'ಮಹಾಭಾರತ' ಸಂಚಿಕೆ. ವಾರಕ್ಕೊಮ್ಮೆ ಪ್ರಸಾರವಾಗುತ್ತಿದ್ದ ಸಂಚಿಕೆಗಳನ್ನು ಕಳೆದುಕೊಂಡರೆ ವಾರ ಪೂರ್ತಿ ಬೇಸರ. ಆ ಬೇಸರ ಬಹಳ ಸಾರಿ ಆಗಿರುವುದುಂಟು. ಕೆ.ಇ.ಬಿ.ಯವರು ಸರಿಯಾಗಿ ಹತ್ತು ಗಂಟೆಗೆ ಕರೆಂಟು ತೆಗೆದು, ಇಡೀ ದಿನ ಕರೆಂಟು ಹಾಕದಿರುವುದು ಅದಕ್ಕೆ ಕಾರಣ. ಅಂದಂತೂ, ದೊಡ್ಡವರಿಂದ ಹಿಡಿದು ಸಣ್ಣವರವರೆಗೂ ಕೆ.ಇ.ಬಿ.ಯವರ ಮೇಲೆ ಬೈಗುಳಗಳ ಸುರಿಮಳೆಯೇ! "ಅವನ್ ಹೆಣಾ ಎತ್ಲಿ... ಎಂಥಾ ಚೆಂದ ಅರ್ಧ ತಾಸ 'ಮಹಾಭಾರತ' ನೋಡಾಕ ಮಣ್ಣ ಹಾಕಿದ. ಏನ್ ಗಾಳಿ, ಮಳಿ ಜೋರಾಗಿ ಹೊಡೆದ ವಾಯರ್ ಹರದಂಗ ಮುಂಜ ಮುಂಜಾಲಿ ಕರೆಂಟ್ ತಗದಾನ,” ಎಂಬ ಬೈಗುಳ ಬಿರುಮಳೆ ಸಾಮಾನ್ಯವಾಗಿತ್ತು.

ಈ ಲೇಖನ ಓದಿದ್ದೀರಾ?: ಕೂಡಲ ಸಂಗಮದ ದಿನಗಳು | ತುಂಬಿ ಹರಿಯುವ ಹೊಳೆ ತಂದ ನೆನಪುಗಳು... ಅವ್ವ, ಕಾಸು, ಮೀನು

ಅದಿರಲಿ, 'ಮಹಾಭಾರತ'ದಲ್ಲಿ ನಡೆಯುತ್ತಿದ್ದ ಯುದ್ಧದ ಘಟನೆಗಳು, ಬಿಲ್ಲು-ಬಾಣಗಳ ದೃಶ್ಯ ನನ್ನನ್ನು ತುಂಬಾ ಸೆಳೆಯುತ್ತಿದ್ದವು. ಅವರು ಬಳಸುತ್ತಿದ್ದ ಬಿಲ್ಲು ಮತ್ತು ಬಾಣವನ್ನು ನಾನು ಮತ್ತು ನನ್ನ ಗೆಳೆಯರು ಸೇರಿ ತಯಾರಿಸುತ್ತಿದ್ದೆವು. ಊರ ಹೊರಗಿರುವ ಕೇರಿಗೆ ಹೋದರೆ ಸಿಕ್ಕಾಪಟ್ಟೆ ಹುಲುಸಾಗಿ ಬೆಳೆದಿರುವ ಜಬ್ಬಲ (ಕಳ್ಳಿ ಕಟ್ಟಿಗೆ) ಮುರಿದುಕೊಂಡು, ಎರಡೂ ಬದಿ ತೂತು ಹಾಕಿ, ರೇಷ್ಮೆ ದಾರ ಕಟ್ಟುತ್ತಿದ್ದೆವು. ಅದರಲ್ಲಿಯೇ ನೆಟ್ಟಗಿರುವ ಕಟ್ಟಿಗೆಗಳನ್ನು ಬಾಣದಂತೆ ಮಾಡಿ, ಮುಂದೆ ಸ್ಪಲ್ಪ ಡಾಂಬರು ಸವರಿ ಮುಳ್ಳು ಚುಚ್ಚುತ್ತಿದ್ದೆವು. ಹೆಗಲಿಗೆ ಬಾಣವನ್ನು ಹಾಕಿಕೊಂಡು ಬಾಣಗಳನ್ನು ಹಿಡಿದು ಯುದ್ಧಕ್ಕೆ ಹೊರಟಂತೆ ನಟಿಸುತ್ತಿದ್ದೆವು. ಮರದ ಮೇಲಿನ ಹಕ್ಕಿಗಳಿಗೆ, ಬೆರಕಿ ನಾಯಿಗಳಿಗೆ ನಮ್ಮ ಬಾಣಗಳನ್ನು ಬಿಡುತ್ತಿದ್ದೆವು. ಬಹಳಷ್ಟು ಬಾರಿ ನಾಯಿಗೆ ಬಾಣ ಬಿಟ್ಟು ಓಣಿಯಲ್ಲಿ ಹೊಡೆಸಿಕೊಂಡದ್ದೂ ಉಂಟು. ಹೀಗೆಯೇ ಒಮ್ಮೆ ನಾಯಿಗೆ ಹೊಡೆಯಲು ಹೋಗಿ ಅನಗವಾಡಿ ಮಲ್ಲಮಮ್ಮನ ಎಮ್ಮೆ ಕಾಲಿಗೆ ಬಾಣ ನೆಟ್ಟು ಸ್ವಲ್ಪ ರಕ್ತ ಬಂತು. ನಾವೆಲ್ಲ ಕಾಲಿಗೆ ಬುದ್ಧಿ ಹೇಳಿದ್ದೆವು. ಆದರೆ, ಮಲ್ಲಮಮ್ಮ ರಂಪಾಟ ಮಾಡಿ ಮನೆಯಲ್ಲಿ ನನ್ನ ಮೈ ಮೆತ್ತಗೆ ಮಾಡಿಸಿದ್ದಳು.

ಡಬಗೊಳ್ಳಿ ಹಣ್ಣೆಂದರೆ ನನಗೆ ತುಂಬಾ ಇಷ್ಟ. ನನ್ನ ಓರಗೆಯ ಸ್ನೇಹಿತರು ಎಮ್ಮೆ ಕಾಯಲು ಹೋದಾಗ ತರುತ್ತಿದ್ದರು. ಹೀಗೆ ಒಂದೆರಡು ಸಾರಿ ಅನಗವಾಡಿ ಮಲ್ಲಪ್ಪ ಒಂಚೂರು ಕೊಟ್ಟ ಹಣ್ಣಿನ ರುಚಿ ಇನ್ನೂ ತಿನ್ನಬೇಕೆನ್ನುವಂತಿತ್ತು. ಒಮ್ಮೆ ಚವಡಕಮಲದಿನ್ನಿ ಹೋಗುವ ದಾರಿಯಲ್ಲಿ ಮೂರು-ನಾಲ್ಕು ಡಬಗೋಳಿ ಹಣ್ಣಿರುವುದನ್ನು ನೋಡಿ ಖುಷಿಪಟ್ಟೆ. ಒಬ್ಬನೇ ಬೇರೆ, ಎಲ್ಲ ಹಣ್ಣು ನನಗೇ ಎಂಬ ಖುಷಿ. ಸೀದಾ ಹೋದವನೇ ಹಣ್ಣುಗಳಿಗೆ ಕೈ ಹಾಕಿದೆ. ಬೆರಳುಗಳಿಗೆ ಪಿನ್ನು ಚುಚ್ಚಿದಂತಾಗಿ, "ಎಪ್ಪೋ..." ಎಂದು ಕೈ ಜಾಡಿಸಿದೆ. ಹಣ್ಣು ಬರುವುದಿರಲಿ, ಕೈ ತುಂಬಾ ಅದರ ಸುಂಕು ಸೇರಿಕೊಂಡು ಕಣ್ಣಲ್ಲಿ ನೀರು ಬಂತು. ಅಳುತ್ತ ಮನೆಗೆ ಬಂದಾಗ ಗಾಯದ ಮೇಲೆ ಬರೆ ಎಂಬಂತೆ ನನ್ನಪ್ಪನಿಂದಲೂ ಕೆನ್ನೆಗೆರಡು ಹೊಡೆತ. "ದೊಡ್ಡ ಧಿಮಾಕ ಮಾಡಾಕ್ ಹೋಗ್ತಾನ ಮಗಾ..." ಎಂದು ಸಿಟ್ಟಿನಲ್ಲೇ ಒಂದು ಪುಟ್ಟಿಯಲ್ಲಿ ನೀರು, ಉಪ್ಪು ಹಾಕಿ ಎರಡು ಕೈ ಅದರಲ್ಲಿ ಇಡಲು ಹೇಳಿದರು. ಒಂದಿಪ್ಪತ್ತು ನಿಮಿಷದ ನಂತರ ಏನೋ ಸ್ವಲ್ಪ ಸಮಾಧಾನ, ಉರಿ ಕಡಿಮೆಯಾಗಿತ್ತು. ನಂತರ ಸುಂಕು ಕೂಡ ತೆಗೆದು ಬುದ್ಧಿ ಹೇಳಿದರು. ಈಗಲೂ ಪಾಪಸಕಳ್ಳಿ/ ಡಬಗೊಳಿ ಹಣ್ಣು ನೋಡಿದರೆ ತಿನ್ನುವ ಆಸೆ! ಸುಂಕಿನ ಭಯ, ಅಪ್ಪನ ಹೊಡೆತ ಧುತ್ತೆಂದು ಕಣ್ಮುಂದೆ ಬರುತ್ತೆ.

ಬಾಲ್ಯದಲ್ಲಿ ಆಡದ ಆಟಗಳಿಲ್ಲ, ಮಾಡದ ತುಂಟಾಟಗಳಿಲ್ಲ. ಇದಕ್ಕೆಲ್ಲ ಸಾಥ್ ನೀಡುವ ಗೆಳೆಯರ ದಂಡು ನಮ್ಮೂರಲ್ಲಿತ್ತು. ಪ್ರಾಣಿ, ಪಕ್ಷಿಗಳಿಗೆ ಕಲ್ಲು ಒಗೆಯಬಾರದೆಂಬುದು ಗೊತ್ತಿದ್ದರೂ ಅರಿವಿನ ಪರಿಧಿ ಅಷ್ಟು ವಿಸ್ತಾರವಾಗಿರಲಿಲ್ಲ. ನಾವು ಸಂಡಾಸಿಗೆ ಹೋಗುವುದು 3-4 ಜನ ಜೊತೆಯಾಗಿಯೇ. ಅಲ್ಲಿ ಮಾಡುವ ತುಂಟಾಟ ನೆನೆದರೆ ತುಟಿಯ ಮೇಲೆ ನಗು ಮೂಡುತ್ತದೆ. ನಮ್ಮಲ್ಲೇ ಕೆಲವರು ತಮ್ಮ ಕೆಲಸ ಮುಗಿದ ತಕ್ಷಣ ಎದ್ದವರೇ, “ಯಪ್ಪೋ... ದೆವ್ವ ಬಂತಲೇ,” ಎಂದು ಓಡುತ್ತಿದ್ದರು. ಇನ್ನು, ಕೆಳಗಡೆ ಕೂತವರ ಪರಿಸ್ಥಿತಿ ಹೇಳತೀರದು. ನೀವೇ ಊಹಿಸಿ! ಸಂಡಾಸಿಗೆಂದು ಹೋದಾಗ ನಮ್ಮ ನೆಚ್ಚಿನ ಕೆಲಸವೆಂದರೆ, ಮಳಿಹುಳ, ಡ್ರ್ಯಾಗನ್ ಫ್ಲೈ ಹಿಡಿಯುವುದು. ಅವುಗಳು ಗಿಡಗಳ ಮೇಲೆ ಕುಳಿತಾಗ ಮೆಲ್ಲಗೆ ಕೈ ಹಾಕಿ ಹಿಡಿಯುತ್ತಿದ್ದೆವು. ನಂತರ ಅವುಗಳಿಗೆ ದಾರ ಕಟ್ಟಿ ಓಣಿಯಲ್ಲಿ ಹಾರಿಸುತ್ತಿದ್ದೆವು. ಆಮೇಲೆ ಬೋರಂಗಿ ಕಡ್ಡಿ ಪಟ್ಟಣದಲ್ಲಿ ಸೇರಿಸುತ್ತಿದ್ದಂತೆ ಅವುಗಳನ್ನು ಖಾಲಿ ಕಡ್ಡಿ ಪಟ್ಟಣದಾಗ ಇಡುತ್ತಿದ್ದೆ. ಎಷ್ಟೋ ಸಾರಿ ಅವ್ವ, “ಪಾಪ ಅವನ್ಯಾಕ ಸಾಯಸ್ತಿ, ಪಾಪ ಹತ್ತತ, ಬಿಟ್ ಬಿಡು...” ಎಂದಾಗ ಅವುಗಳನ್ನು ಪುರ್ರನೆ ಹಾರಿ ಬಿಟ್ಟು, ಸಂಭಾವಿತನಂತೆ ಅಮ್ಮನೆದುರು ನಿಲ್ಲುತ್ತಿದ್ದೆ.

ಕಾಲಿಗೆ ಚುಚ್ಚಿದ ಮುಳ್ಳು, ಕೆನ್ನೆಗೆ ಬಿದ್ದ ಏಟು, ಆಟ ಗೆದ್ದು ಹಾಕಿದ ಕೇಕೆ, ಅಮ್ಮ ಕೊಟ್ಟ ತುತ್ತು, ಗೆಳೆಯರೊಡನೆ ಮುನಿಸು... ಅಬ್ಬಾ! ಅದೆಷ್ಟೋ ಸುಂದರ ಅನುಭವಗಳ ಸಂಗಮ ನನ್ನ ಕೂಡಲ ಸಂಗಮದ ದಿನಗಳು. ಇದು ಎಲ್ಲರ ಬದುಕಲ್ಲೂ ಬಾಲ್ಯದ ದಿನಗಳನ್ನು ನೆನಪಿಸಬಹುದು. ಮತ್ತೆ-ಮತ್ತೆ ನಮ್ಮನ್ನು ಅರೆ ಗಳಿಗೆ ಬಾಲ್ಯಕ್ಕೆ ಜಾರಿಸಬಹುದು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app