ಹೆಣ್ಣೆಂದರೆ... | ಸಿನಿಮಾ ಸಂಭಾಷಣೆ ಬರೆಯುವ ಅರಳು ಮಲ್ಲಿಗೆ ಶ್ರೀದೇವಿ ಮಂಜುನಾಥ

ಪಿಯುಸಿಯನ್ನು ಅರ್ಧಕ್ಕೆ ನಿಲ್ಲಿಸಿ ಸಂಗಾತಿಯ ಕೈ ಹಿಡಿದ ಶ್ರೀದೇವಿ ಅವರ ಬರಹಗಳು ಡೈರಿಗೆ ಸೀಮಿತವಾಗಿದ್ದವು. ನಂತರ ಫೇಸ್ಬುಕ್ ಅವರ ಬರಹದ ಮೊದಲ ವೇದಿಕೆಯಾಯಿತು. ಗಂಡನ ಸ್ನೇಹಿತನ ನಿರ್ಮಾಣದ ಸಿನಿಮಾ ಚಿತ್ರೀಕರಣ ನಡೆಯುವ ಸ್ಥಳಕ್ಕೊಮ್ಮೆ ಭೇಟಿ ನೀಡಿದಾಗ, ಸಿನಿಮಾ ಕೆಲಸ ಅವರಲ್ಲಿ ಆಸಕ್ತಿ ಹುಟ್ಟಿಸಿತು. ಮುಂದಿನದೆಲ್ಲ ಕನಸು-ನನಸು

ಬದುಕಿನ ಒಂದು ಮಗ್ಗುಲು ಮುಗಿಸಿ ಮತ್ತೊಂದು ಮಗ್ಗುಲಿಗೆ ಹೊರಳುವ ಹೊತ್ತಲ್ಲಿ ಕನಸುಗಳನ್ನು ಚಿಗುರಿಸಿಕೊಂಡವರು ಶ್ರೀದೇವಿ ಮಂಜುನಾಥ. "ನಗಬೇಕು, ನಗಿಸಬೇಕು," ಎನ್ನುವ ಈ ಅರಳು ಮಲ್ಲಿಗೆ, ನಿರ್ದೇಶನ, ಬರವಣಿಗೆ, ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 'ಇಬ್ಬನಿ' ಕವನ ಸಂಕಲನ, 'ಟರ್ನಿಂಗ್ ಪಾಯಿಂಟ್' ಪುಸ್ತಕ ಈಗಾಗಲೇ ಬಿಡುಗಡೆ ಆಗಿವೆ.

ಶಾಲೆಯಲ್ಲಿರುವಾಗಲೇ ಕವನ, ಕತೆ ಬರೆಯುವುದು, ಆಶುಭಾಷಣದಲ್ಲಿ ಮುಂದು. ಒಂದು ವಿಷಯಕ್ಕೆ ಹಲವು ಮುಖಗಳು ಎಂಬ ನಿಲುವನ್ನು ಬಾಲ್ಯದಲ್ಲೇ ಹೊಂದಿದ್ದರಿಂದ ಭಾಷಣದಲ್ಲಿ ಒಂದು ವಿಷಯದ ಪರ ಮತ್ತು ವಿರೋಧ ಎರಡನ್ನೂ ಮಾತನಾಡುತ್ತಿದ್ದರು. ಶ್ರೀದೇವಿಯವರಿಗೆ ಒಮ್ಮೆ ತಾವು ಹತ್ತಾರು ಪಾತ್ರಗಳಾಗಿ ನಿಂತು ಕ್ರಿಯೆಗೆ ಪ್ರತಿಕ್ರಿಯೆ ಕೊಡುತ್ತ ಸಂಭಾಷಣೆ ಕಟ್ಟುವುದು ಸುಲಭವಂತೆ. ಬಾಲ್ಯದಿಂದಲೇ ಪೋಷಿಸಿಕೊಂಡು ಬಂದ ಬಹುಮುಖ ಆಲೋಚನೆಯಿಂದಲೇ ಇರಬೇಕು, ಸಂಭಾಷಣಾಕಾರರಾಗಿ ಗುರುತಿಸಿಕೊಂಡ ಕೆಲ ಸಮಯದಲ್ಲೇ ಒಂದಾದ ಮೇಲೆ ಒಂದು ಪ್ರಾಜೆಕ್ಟ್‌ಗಳು ಅವರ ಕೈ ಹಿಡಿದಿವೆ.

ಪಿಯುಸಿಯನ್ನು ಅರ್ಧಕ್ಕೆ ನಿಲ್ಲಿಸಿ ಸಂಗಾತಿಯ ಕೈ ಹಿಡಿದ ಶ್ರೀದೇವಿ ಅವರ ಬರಹಗಳು ಡೈರಿಗೆ ಸೀಮಿತವಾಗಿದ್ದವು. "ಕೆಲ ವರ್ಷಗಳ ಹಿಂದೆ ಫೇಸ್ಬುಕ್ ತೆರೆದು, ಅದನ್ನು ಬರಹದ ಮತ್ತು ಸಮಾನಮನಸ್ಕರನ್ನು ಪಡೆಯುವ ವೇದಿಕೆಯಾಗಿ ಬಳಸಿಕೊಂಡೆ. ನನ್ನ ಬರಹಗಳನ್ನು ಮೆಚ್ಚಿ ಗಂಡ ಪತ್ರಿಕೆಗೆ ಕಳುಹಿಸುತ್ತಿದ್ದದ್ದು, ಬಂದವರಿಗೆಲ್ಲ ಹೆಮ್ಮೆಯಿಂದ ತೋರಿಸುತ್ತಿದ್ದು ಒಂದೆಡೆಯಾದರೆ, ಇನ್ನೊಂದೆಡೆ ನಾನು ಬರೆಯಬಲ್ಲೆ ಎಂಬ ಆತ್ಮಬಲ ತುಂಬಿದ್ದು ಫೇಸ್ಬುಕ್ ಬಳಗ," ಎಂದು ಆರಂಭದ ಬರವಣಿಗೆ ಕುರಿತು ಹೇಳುತ್ತಾರೆ.

ಶ್ರೀದೇವಿಯವರು ಅವರ ಗಂಡನ ಸ್ನೇಹಿತನ ನಿರ್ಮಾಣದ ಸಿನಿಮಾ ಚಿತ್ರೀಕರಣ ನಡೆಯುವ ಸ್ಥಳಕ್ಕೊಮ್ಮೆ ಭೇಟಿ ನೀಡಿದಾಗ, ಸಿನಿಮಾ ಕೆಲಸ ಅವರಲ್ಲಿ ಆಸಕ್ತಿ ಹುಟ್ಟಿಸಿತು. "ಪಾತ್ರದ ಸಂಭಾಷಣೆಯನ್ನು ನೋಡಿದಾಗ, ನಾನು ಕೂಡ ಬರೆಯಬಹುದು ಅನ್ನಿಸಿತು. ಆ ಹುರುಪು ಎಷ್ಟಿತ್ತೆಂದರೆ, ಕೆಲ ತಿಂಗಳಲ್ಲೇ 'ನಿಮ್ಮದೇ ಕಥೆ' ಎಂಬ ಕಿರುಚಿತ್ರವೊಂದನ್ನು ಸ್ವತಃ ತಾನೇ ಕತೆ ಬರೆದು, ನಿರ್ದೇಶಿಸಿ, ನಿರ್ಮಾಣ ಮಾಡಿದರು.

Image
Shridevi Manjunatha 2

ಸಿನಿಮಾ ಮಾಡುವಾಗ ಹೆಣ್ಣೆಂಬ ಕಾರಣಕ್ಕೆ ಹೆಣ್ಣಿಗೆ ಎದುರಾಗುವ ಸಮಸ್ಯೆಗಳು ಅವರಿಗೆ ಅರ್ಥವಾಗಿದ್ದು ಇದೇ ಸಮಯದಲ್ಲಿ. "ಚಿತ್ರೀಕರಣದಲ್ಲಿ ಕೆಲಸ ಮಾಡುವ ಅನೇಕ ಗಂಡಸರಿಗೆ ನಮ್ಮ ಕೆಲಸದ ಮೇಲೆ ಎಷ್ಟು ಅಪನಂಬಿಕೆ ಎಂದರೆ, ನಾವು ಹೇಳಿದ ಕೆಲಸದಲ್ಲಿ ಹೀಗಲ್ಲ ಹಾಗೆ ಎಂದು ಸುಖಾಸುಮ್ಮನೆ ವಾದಿಸುತ್ತಲೇ ಇರುತ್ತಾರೆ. ಇವಳಿಗೇನು ಗೊತ್ತು ಎಂಬ ಮನೋಭಾವವಂತೂ ಹೆಜ್ಜೆ-ಹೆಜ್ಜೆಗೂ ಇರುತ್ತದೆ," ಎನ್ನುತ್ತಾರೆ.

ಅದಾದ ನಂತರ 'ಉಡುಂಬ' ಹೆಸರಿನ ಸಿನಿಮಾಗೆ ಸಂಭಾಷಣಾಕಾರರಾಗಿ, ಸಹ ನಿರ್ದೇಶಕಿಯಾಗಿ ಕೆಲಸ ಮಾಡುತ್ತಾರೆ. 'ಬಣ್ಣವಿಲ್ಲದ ಸೆರಗು,' 'ವಾಸಂತಿ ನಲಿದಾಗ,' 'ಬ್ಯಾಂಕ್ ಲೋನ್' ಇನ್ನಿತರ ಸಿನೆಮಾಗೆ ಸಂಭಾಷಣಾಕಾರರಾಗಿ ಕೆಲಸ ಮಾಡಿದ್ದಾರೆ. ಹಾಗೆಯೇ, ಸ್ಟಾರ್ ಸುವರ್ಣದ 'ಜೀವ ಹೂವಾಗಿದೆ' ಧಾರಾವಾಹಿಗೆ ಮೂರು ವರ್ಷಗಳ ಕಾಲ ಸಂಭಾಷಣಾಕಾರರಾಗಿದ್ದರು. ಈಗ ಉದಯ ವಾಹಿನಿಯಲ್ಲಿ ಸದ್ಯದಲ್ಲೇ ತೆರೆಕಾಣಲಿರುವ ಧಾರಾವಾಹಿಗೆ ಸಂಭಾಷಣಾಕಾರರಾಗಿ ಕೆಲಸ ಮಾಡುತ್ತಿದ್ದಾರೆ. ತಮಿಳು ಮತ್ತು ಕನ್ನಡ ಎರಡೂ ಬರುವುದರಿಂದ ಸಿನಿಮಾ ಸಂಭಾಷಣೆ, ಅನುವಾದ, ಧಾರಾವಾಹಿ ಸಂಭಾಷಣೆ, ಹಾಡುಗಳ ಅನುವಾದ, ಜಾಹೀರಾತುಗಳನ್ನು ಸಹ ಮಾಡಿದ್ದಾರೆ.

ಸಿನಿಮಾ ರಂಗದಲ್ಲಿ ಮಹಿಳಾ ಬರಹಗಾರರು ಯಾಕೆ ಬೇಕು ಎಂಬ ವಿಷಯದ ಕುರಿತು ಅವರು ಹೇಳುವುದು ಹೀಗೆ: "ಜನರಿಗೆ ದೊಡ್ಡ ಮಟ್ಟದಲ್ಲಿ ತಲುಪುವ ಮಾಧ್ಯಮ ಸಿನಿಮಾ. ಸಿನಿಮಾ ಮೂಲಕವೇ ತಪ್ಪು ಸಂದೇಶಗಳನ್ನು ನೀಡಿದರೆ ಸಮಾಜಕ್ಕೆ ಬಹಳ ದೊಡ್ಡ ಹಾನಿಯಾಗುತ್ತದೆ. ಸಾಮಾಜಿಕ ಸಂವೇದನೆ, ಸಮ ಸಮಾಜದ ಸಂವೇದನೆ ಮಹಿಳೆಯರಲ್ಲಿ ಹೆಚ್ಚಾಗಿ ಇರುವುದರಿಂದ ಸಿನಿಮಾ ಬರವಣಿಗೆಯಲ್ಲಿ ಮಹಿಳೆಯರು ಹೆಚ್ಚೆಚ್ಚು ತೊಡಗಿಕೊಂಡರೆ ಒಂದಷ್ಟು ಬದಲಾವಣೆ ಸಾಧ್ಯ."

ಈ ಲೇಖನ ಓದಿದ್ದೀರಾ?: ಹೆಣ್ಣೆಂದರೆ... | ಸಾಮಾನ್ಯ ಸಂಗತಿಗಳಲ್ಲೂ ಬೆರಗನ್ನು ಅರಸುವ ಯುವ ನಿರ್ದೇಶಕಿ

"ಕಣ್ಣೀರಿನ ಕತೆಗಳಿಗೆ, ಮಹಿಳಾ ಪ್ರಧಾನ ಚಿತ್ರಕ್ಕೆ, ಸಾಮಾಜಿಕ ಸಂದೇಶ ನೀಡುವ ಸಿನಿಮಾಗಳಿಗೆ ಮಾತ್ರ ಮಹಿಳಾ ಸಂಭಾಷಣೆಕಾರರು ಬೇಕು ಎಂಬ ಮನೋಭಾವ ಅನೇಕ ನಿರ್ದೇಶಕರಲ್ಲಿದೆ. ಅದು ಬದಲಾಗಬೇಕು. ನನಗೆ ಇದರಾಚೆಗೆ ಕಾಮಿಡಿ, ಮಾಸ್ ಚಿತ್ರಗಳಿಗೇ ಬರೆಯಬೇಕು ಎಂಬ ಆಸೆ. 'ವಾಸಂತಿ ನಲಿದಾಗ' ಸಿನಿಮಾದಲ್ಲಿ ಅದು ಸಾಧ್ಯವಾಯಿತು ಎಂಬುದಕ್ಕೆ ಖುಷಿಯಿದೆ," ಎಂದು ಕಣ್ಣರಳಿಸಿದರು.

"ಢಾಳಾಗಿ ಕಾಣಿಸುವ ಸ್ತ್ರೀಯರ ಮೇಲಿನ ಬೈಗುಳಗಳನ್ನು ಪುರುಷ ಸಂಭಾಷಣೆಕಾರರು ಲೀಲಾಜಾಲವಾಗಿ ಬರೆಯುತ್ತಾರೆ. ಪುರುಷ ನಿರ್ದೇಶಕನು ಅದನ್ನು ಒಪ್ಪುತ್ತಾನೆ. ನಟ ಕೂಡ ಒಪ್ಪುತ್ತಾನೆ. ಎಡಿಟ್ ಮಾಡುವವರು ಒಪ್ಪುತ್ತಾರೆ. ಅದೇ ಜಾಗದಲ್ಲಿ ಮಹಿಳೆಯೊಬ್ಬಳು ಇದ್ದರೆ? ಮಹಿಳೆಯರು ಬರೆಯುವಾಗ ತರುವ ಇಂತಹ ಚಿಕ್ಕ-ಪುಟ್ಟ ಬದಲಾವಣೆ ನನಗೆ ಮುಖ್ಯ ಎನಿಸುತ್ತದೆ. ಡಬಲ್ ಮೀನಿಂಗ್ ಇಲ್ಲದೆ ಹಾಸ್ಯ ಮಾಡಬಹುದು. ಅಪಾರ್ಥ ಸೃಷ್ಟಿಸಿ ನಗಿಸುವುದಕ್ಕಿಂತ ಅಪಾರ ಅರ್ಥಗಳನ್ನು ಸೃಷ್ಟಿಸಿ ಹಾಸ್ಯ ಮಾಡಬೇಕು," ಎಂಬುದು ಅವರ ನಿಲುವು.

"ಡಬಲ್ ಮೀನಿಂಗನ್ನು ಸೃಜನಶೀಲತೆ ಎಂದುಕೊಂಡ ಹಳಸಲು ಯೋಚನೆಗಳನ್ನು ಮುರಿಯುವ ಕೆಲಸ ನಮ್ಮಿಂದಾಗಬೇಕು. ಹೆಣ್ಣಿನ ಸೌಂದರ್ಯವನ್ನು ತೆಳ್ಳಗೆ-ಬೆಳ್ಳಗೆ ಎಂದು ಸಮಾಜವನ್ನು ನಂಬಿಸುವಲ್ಲಿ ಸಿನಿಮಾ ಪಾತ್ರ ದೊಡ್ಡದಿದೆ. ಹೆಣ್ಣಿನ ಸೌಂದರ್ಯಕ್ಕೆ ಪುರುಷರು ಕೊಡುವ ವ್ಯಾಖ್ಯಾನವನ್ನು ನಾವು ಒಪ್ಪಿಕೊಳ್ಳದೆ, ಅದನ್ನು ಹೊಸ ಕತೆ ಮತ್ತು ಬರವಣಿಗೆ ಮೂಲಕ ಬದಲಿಸಬೇಕು. ಮಹಿಳೆಯರನ್ನು ಕೀಳರಿಮೆಗೆ ತಳ್ಳಿ ಬ್ಯೂಟಿ ಪಾರ್ಲರ್‌ಗೆ ಓಡಿಸುವ ಬದಲು ಅವರು ಇರುವಂತೆಯೇ ಅವರನ್ನು ಒಪ್ಪಿಕೊಳ್ಳುವಂತೆ ಸಿನಿಮಾ ಮೂಲಕ ಮಾಡಬೇಕು," ಎಂಬ ಆಶಯ ಹಂಚಿಕೊಂಡರು.

Image
Shridevi Manjunatha 6

ಸಿನಿಮಾ ಸಂಭಾಷಣೆಕಾರರಾಗಿ ಎದುರಿಸುವ ಸಮಸ್ಯೆಗಳ ಕುರಿತು ಮಾತನಾಡುತ್ತ,
"15 ಎಪಿಸೋಡ್‌ವರೆಗೆ ಬರೆದರೂ ಪೇಮೆಂಟ್ ಬಂದಿಲ್ಲದ ಅನುಭವಗಳಾಗಿವೆ. ಧ್ವನಿ ಎತ್ತಿದರೆ, ಗಂಡಸರ ಬಾಯಿಗೆ ಹೆಣ್ಣಿನ ಚಾರಿತ್ರ್ಯ ಕೆಡಿಸುವ ಮಾರ್ಗ ಎಲ್ಲ ಕಡೆ ಸುಲಭ ಆಗಿರುವುದರಿಂದ ಎಚ್ಚರದಿಂದ ಇರಬೇಕು. ಇಂಥವರನ್ನು ಸಮರ್ಥವಾಗಿ ಎದುರಿಸುವ ಮಾರ್ಗವನ್ನು ಹೆಣ್ಣುಮಕ್ಕಳು ಕಂಡುಕೊಳ್ಳಬೇಕು," ಎಂದು ಸಲಹೆ ನೀಡುತ್ತಾರೆ.

"ನಾನು ನಿರ್ಮಾಪಕರನ್ನು ಹುಡುಕುವಾಗ 'ನೀವ್ ಲೇಡಿಸ್ ಅಲ್ವಾ... ಹಾಗಾಗಿ ಪ್ರೊಡ್ಯೂಸರ್ ಬೇಗ ಸಿಕ್ತಾರೆ ಬಿಡಿ' ಎಂದು ಕೀಳು ಮಾತನಾಡಿ ಮನನೋಯಿಸಿದ ಅನೇಕರಿದ್ದಾರೆ. ಇದೆಲ್ಲ ಪರೀಕ್ಷೆಯ ಹಂತ ಎಂದು ದಾಟುತ್ತಾ ಹೋಗಬೇಕು. ಸಿನಿಮಾ ಡಿಸ್ಕಷನ್‌ಗೆ ಹೋದಾಗ ನೂರಕ್ಕೆ 99ರಷ್ಟು ಗಂಡಸರೇ ಇರುತ್ತಾರೆ. ಮಧ್ಯದಲ್ಲಿ ನಾವು ಏನಾದರೂ ಸಲಹೆ ಕೊಟ್ಟಾಗ, ಅರ್ಧ ಜನ ಒಪ್ಪಿದರೆ ಇನ್ನರ್ಧ ಜನ ಅದನ್ನು ವಿರೋಧಿಸಲು ಸಿದ್ಧರಾಗಿರುತ್ತಾರೆ. ಅದಕ್ಕೆ ಮುಖ್ಯ ಕಾರಣ - 'ಹೆಣ್ಣು ಏನು ಮಾಡಬಲ್ಲಳು? ಇವಳಿಗೇನು ಗೊತ್ತು? ಇವಳೇನು ಮಾಡಬಲ್ಲಳು?' ಎಂಬುದರ ಸುತ್ತಲೇ ಇರುತ್ತದೆ. ಹೆಣ್ಣುಮಕ್ಕಳು ಅಂಜದೆ ಮಾತನಾಡುವುದು ಕಲಿಯಬೇಕು," ಎನ್ನುತ್ತಾರವರು.

ದೈಹಿಕವಾಗಿ ತಮಗಿಂತ ಎತ್ತರ ಬೆಳೆದ ಮಕ್ಕಳ ಜೊತೆ ಅಮ್ಮನೂ ಕನಸುಗಳ ಬೆಳೆಸುತ್ತ ಬೆಳೆಯುತ್ತಿದ್ದಾಳೆ. ಡೆಡ್‌ಲೈನ್‌ಗಳನ್ನು ತಪ್ಪಿಸದೆ ಕೆಲಸ ಮಾಡುತ್ತಾಳೆ. ಅಪಾರವಾಗಿ ತನ್ನನ್ನು ಪ್ರೀತಿಸುವ ಕುಟುಂಬವನ್ನು ಸಲಹುತ್ತ ತನ್ನ ಕನಸನ್ನು ಸಾಕುತ್ತಿದ್ದಾಳೆ. ನಮ್ಮನ್ನು ನಗಿಸುವ ಅಪಾರಾರ್ಥದ ಹಾಸ್ಯದ ಸಿನಿಮಾ ಶ್ರೀದೇವಿಯವರಿಂದ ಬರಲಿ. "ತುಂಬಾ ಟ್ಯಾಟೆಂಟೇನೋ ಇದೆ; ಆದ್ರೆ, ಇನ್ನೊಂದ್ 15 ವರ್ಷ ಮುಂಚೆ ಇಂಡಸ್ಟ್ರಿಗೆ ಬರಬೇಕಿತ್ತು," ಎಂದ ಗಂಡಸರ ಆಲೋಚನೆ ಪುಡಿಯಾಗುವಷ್ಟು ಕೆಲಸ ಸಾಧ್ಯವಾಗಲಿ.

ನಿಮಗೆ ಏನು ಅನ್ನಿಸ್ತು?
8 ವೋಟ್