ಮೈಕ್ರೋಸ್ಕೋಪು | ಹವಾಮಾನ ಬದಲಾವಣೆ - ಬಾಗಿದ ಹೆಣ್ಣಿನ ಬೆನ್ನಿಗೆ ಬೀಸುವ ಬಡಿಗೆ

Women flood2

ಹವಾಮಾನ ಬದಲಾವಣೆಯು ನಿಧಾನಗತಿಯಲ್ಲಿ ಕೊಲ್ಲುವ ವಿಷದಂತೆ ಭೂಮಂಡಲವನ್ನು ಆವರಿಸುತ್ತಿದೆ. ಈ ಬದಲಾವಣೆ ಪುರುಷರಿಗಿಂತ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ ಎಂಬ ವರದಿಗಳಿವೆ. ಮೊದಲೇ ಸಮಾಜದ ಹಲವು ಕಟ್ಟಳೆಗಳಿಂದ ಬಳಲುವ ಮಹಿಳೆಯರಿಗೆ ಹವಾಮಾನ ಬದಲಾವಣೆ ಯಾವ ಬಗೆಯಲ್ಲಿ ಕಾಡಬಲ್ಲದು? ಇಲ್ಲಿದೆ ವಿವರ 

ನಮ್ಮ ಮನೆಯಲ್ಲಿ ಬೇಸಿಗೆಯಲ್ಲಿ ಒಂದು ರಾಮಾಯಣ ನಿತ್ಯವೂ ನಡೆಯುತ್ತದೆ. ಬೇಸಗೆಯ ಬೇಗೆ ತಣ್ಣಗಾಗಲಿ ಎಂದು ನಾನು ಫ್ಯಾನು ಚಾಲೂ ಮಾಡಿದರೆ, ನನ್ನವಳು ಫ್ಯಾನಿನಿಂದಾಗಿ ಚಳಿ ಆಗುತ್ತಿದೆ ಎಂದು ಗೊಣಗುತ್ತಾಳೆ. ಫಲವಾಗಿ, ನಾನು ಸ್ವಿಚ್ ಆನ್ ಮಾಡುವುದು, ಮಡದಿ ಅದನ್ನು ಆರಿಸುವುದು ನಡೆಯುತ್ತಿರುತ್ತದೆ. ಬೇಗೆಗೆ ನಮ್ಮಿಬ್ಬರ ಪ್ರತಿಕ್ರಿಯೆ ಇಷ್ಟೊಂದು ಭಿನ್ನವಾಗಿರುವುದು ತಮಾಷೆ ಆಗಿರುವಂತೆಯೇ, ಹವಾಮಾನದಲ್ಲಿನ ಬದಲಾವಣೆಗಳಿಗೆ ಪುರುಷರು ಮತ್ತು ಮಹಿಳೆಯರ ಪ್ರತಿಕ್ರಿಯೆಗಳು ಭಿನ್ನವಾಗಿರಬಹುದು. ಅದರಿಂದಾಗಿ ಪುರುಷರಿಗಿಂತಲೂ ಮಹಿಳೆಯರಿಗೇ ಹೆಚ್ಚಿನ ಹಾನಿ ಆಗುವ ಸಾಧ್ಯತೆಗಳಿವೆ. ಹೀಗಾಗಿ, ಹವಾಮಾನ ಬದಲಾವಣೆ ಕುರಿತಂತೆ ನಾವು ಕೈಗೊಳ್ಳುವ ಕ್ರಮಗಳು ಪುರುಷರು ಮತ್ತು ಮಹಿಳೆಯರ ಈ ಭಿನ್ನವಾದ ಪ್ರತಿಕ್ರಿಯೆಯನ್ನು ಪರಿಗಣಿಸಬೇಕು ಎನ್ನುವುದು ವಿಜ್ಞಾನಿಗಳ ಕಾಳಜಿ.

ಹವಾಮಾನ ಬದಲಾವಣೆಯಿಂದಾಗಿ ಗಂಡು-ಹೆಣ್ಣುಗಳ ಮೇಲೆ ವಿಭಿನ್ನ ಪರಿಣಾಮಗಳಾಗಬಹುದು ಎನ್ನುವುದಕ್ಕೆ ಒಂದು ಉದಾಹರಣೆಯನ್ನು 'ರಾಯಿಟರ್ಸ್' ಇತ್ತೀಚೆಗೆ ಪ್ರಕಟಿಸಿತ್ತು. ನೆರೆಯ ಪಾಕಿಸ್ತಾನದಲ್ಲಿರುವ ಜಕೋಬಾಬಾದ್ ಎನ್ನುವ ಪಟ್ಟಣದಲ್ಲಿನ ಮಹಿಳೆಯರ ಸಂಕಟವನ್ನು ಕುರಿತ ವರದಿ ಅದು. ಬೇಸಿಗೆಯಲ್ಲಿ ಪಶ್ಚಿಮ ಏಷ್ಯಾದಲ್ಲಿಯೇ ಅತಿ ಹೆಚ್ಚು ಬಿಸಿಯೇರುವ ಪಟ್ಟಣ ಜಕೋಬಾಬಾದ್. ದಕ್ಷಿಣ ಪಾಕಿಸ್ತಾನದಲ್ಲಿರುವ ಈ ಪಟ್ಟಣದಲ್ಲಿ ಇದೇ ಜೂನ್ ಮೊದಲ ವಾರದ ಉಷ್ಣತೆ ಐವತ್ತೊಂದು ಡಿಗ್ರಿ ಸೆಲ್ಸಿಯಸ್ ಮುಟ್ಟಿತ್ತು. ಬೆಂಗಳೂರಿನಲ್ಲಿ ಮೂವತ್ತೈದು ಡಿಗ್ರಿ ಸೆಲ್ಸಿಯಸ್ ಮುಟ್ಟಿದ ಕೂಡಲೇ, ಊರು ಕುಲುಮೆ ಆಗಿಹೋಯಿತು ಎಂದು ತಕತಕನೆ ಕುಣಿಯುತ್ತೇವಷ್ಟೆ. ಆಫ್ರಿಕಾದ ಸಹಾರ, ಪಶ್ಚಿಮ ಏಷ್ಯಾದ ಅರೇಬಿಯನ್ ಮರುಭೂಮಿ ಅಥವಾ ನಮ್ಮದೇ ಪಶ್ಚಿಮ ಭಾರತದಲ್ಲಿರುವ ಥಾರ್ ಮರುಭೂಮಿಯ ಬೇರೆ ಯಾವ ಪ್ರದೇಶವೂ ಇಷ್ಟು ಬಿಸಿಯಾಗುವುದಿಲ್ಲ. ದುರದೃಷ್ಟವೆಂದರೆ, ಕಳೆದ ಕೆಲವು ವರ್ಷಗಳಲ್ಲಿ ಜಕೋಬಾಬಾದಿನ ಉಷ್ಣಾಂಶ ಹಿಂದೆಂದೂ ಕಾಣದಷ್ಟು ಉಷ್ಣತೆಯನ್ನು ಮೂರ್ನಾಲ್ಕು ಬಾರಿ ಅನುಭವಿಸಿತ್ತು ಎಂದು ವರದಿ ಹೇಳಿತ್ತು.

"ಜಕೋಬಾಬಾದ್ ಒಂದೇ ಏಕೆ, ದೆಹಲಿಯಲ್ಲಿಯೂ ಉಷ್ಣಾಂಶ ಈ ಹಿಂದಿನ ನೂರ ಇಪ್ಪತ್ತು ವರ್ಷಗಳಲ್ಲಿ ಕಾಣದಷ್ಟು ಹೆಚ್ಚಿತ್ತಲ್ಲ..." ಎಂದಿರಾ? ನಿಜವೇ. ಆದರೆ, ಜಕೋಬಾಬಾದಿನ ಸಂಸ್ಕೃತಿ, ಅಲ್ಲಿನ ಜನರ ಉದ್ಯೋಗಗಳಿಂದಾಗಿ ಈ ಉಷ್ಣತೆ ಜಕೋಬಾಬಾದಿನ ಮಹಿಳೆಯರನ್ನು ಅತಿಯಾಗಿ ಕಾಡಿಸಿದೆ. ಈ ವರ್ಷ ಅಲ್ಲಿ ಬಿಸಿಲಿನ ಬೇಗೆಯಿಂದಾಗಿ ಸನ್ ಸ್ಟ್ರೋಕ್ ಆಗಿ ಸತ್ತ 90 ಮಂದಿಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚು. ಇದಕ್ಕೆ ಕಾರಣವಿಷ್ಟೆ; ಜಕೋಬಾಬಾದ್ ಬೆಂಗಾಡಿನಲ್ಲಿರುವ ಪ್ರದೇಶ. ನೀರು ಕಡಿಮೆ ಬಯಸುವ ಕಲ್ಲಂಗಡಿ, ಮಿಣಿಕೆಯಂತಹ ಹಣ್ಣುಗಳೇ ಅಲ್ಲಿನ ಪ್ರಮುಖ ಬೆಳೆ. ಇವುಗಳನ್ನು ಬೆಳೆಯುವ ತೋಟದಲ್ಲಿ ಕೂಲಿ ಮಾಡುವವರಲ್ಲಿ ಮಹಿಳೆಯರೇ ಹೆಚ್ಚು. ಈ ಮಹಿಳೆಯರು ಬೆಳಗಿನಿಂದ ಮಧ್ಯಾಹ್ನದವರೆಗೂ ಬಿಸಿಲಿನಲ್ಲಿ ದುಡಿಯಬೇಕು. ಅಲ್ಲಿಂದ ಮರಳಿದ ಮೇಲೆ ಮನೆಯಲ್ಲಿ ಸೌದೆ ಒಲೆಯ ಮುಂದೆ ಅಡುಗೆ ಮಾಡಬೇಕು. ಹೀಗೆ ಮನೆಯ ಹೊರಗೂ, ಒಳಗೂ ಬೇಗೆಯನ್ನು ಅನುಭವಿಸುವ ಇವರ ದಿರಿಸುಗಳೂ ಕೂಡ ಬೇಗೆಗೆ ಒತ್ತು ನೀಡುತ್ತವೆ. ಪುರುಷರಾದರೆ ಬೇಗೆ ಹೆಚ್ಚಾದಾಗ ಅಂಗಿ ತೆಗೆದು ಗಾಳಿಗೆ ಮೈ ತೆರೆದು ಕೂರಬಹುದಷ್ಟೆ.

Image
women 5

ಆದರೆ, ಹವಾಮಾನ ಬದಲಾವಣೆಯನ್ನು ತಡೆಯುವುದಕ್ಕೆಂದು ರೂಪಿಸುವ ಕ್ರಮಗಳು ಮಹಿಳೆಯರ ಮೇಲಾಗುವ ಪ್ರಭಾವವನ್ನು ಪರಿಗಣಿಸುವುದಿಲ್ಲ ಎಂದು ದೂರುತ್ತದೆ ಗ್ಲೋಬಲ್ ಜೆಂಡರ್ ಅಂಡ್ ಕ್ಲೈಮೇಟ್ ಅಲಯನ್ಸ್ ಎನ್ನುವ ಸಂಸ್ಥೆ. 2007ನೇ ಇಸವಿಯಲ್ಲಿ, ಹವಾಮಾನ ಬದಲಾವಣೆ ಬಗ್ಗೆ ಚರ್ಚಿಸುವಾಗ ಅದರಲ್ಲಿ ಲಿಂಗ ಮತ್ತಿತರೆ ಅಸಮಾನತೆಗಳನ್ನು ಪರಿಗಣಿಸಬೇಕೆಂದು ಒತ್ತಾಯಿಸಲು ಹಲವು ಸಂಘ, ಸಂಸ್ಥೆಗಳು ಸೇರಿ ಈ ಸಂಘಟನೆಯನ್ನು ಹುಟ್ಟುಹಾಕಿದ್ದವು. ಗ್ಲೋಬಲ್ ಜೆಂಡರ್ ಅಂಡ್ ಕ್ಲೈಮೇಟ್ ಅಲಯನ್ಸ್ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯೊಂದರಲ್ಲಿ, ಹವಾಮಾನ ಬದಲಾವಣೆಯಿಂದ ಪುರುಷ ಮತ್ತು ಸ್ತ್ರೀಯರ ನಡುವೆ ಅಸಮಾನತೆಯನ್ನು ಹೆಚ್ಚಿಸುವಂತಹ ಸಂದರ್ಭಗಳನ್ನು ಪಟ್ಟಿ ಮಾಡಿದೆ.

ಹವಾಮಾನ ಬದಲಾವಣೆಯ ಬಗ್ಗೆ ಸ್ಥಾಪಿಸಲಾದ ಅಂತಾರಾಷ್ಟ್ರೀಯ ಸಮಿತಿ ಹಲವು ವರ್ಷಗಳಿಗೊಮ್ಮೆ ಒಂದು ವರದಿಯನ್ನು ಪ್ರಕಟಿಸುತ್ತದೆ. ಈ ವರದಿಯಲ್ಲಿ, ಹವಾಮಾನ ಬದಲಾಗುವುದರಿಂದ, ಅದರಲ್ಲಿಯೂ ಮುಖ್ಯವಾಗಿ ಭೂಮಿಯ ವಾತಾವರಣ ಬಿಸಿಯೇರುವುದರಿಂದ ಬರಬಹುದಾದ ವಿಕೋಪಗಳ ಬಗ್ಗೆ ಚರ್ಚೆಯಾಗುತ್ತದೆ. ಉದಾಹರಣೆಗೆ, ಈಗಾಗಲೇ ಬೇಗೆಯನ್ನು ಎದುರಿಸುತ್ತಿರುವ ಜಕೋಬಾಬಾದಿನಂತಹ ಪ್ರದೇಶಗಳಲ್ಲಿ ಬೇಗೆ ಇನ್ನಷ್ಟು ಹೆಚ್ಚಾಗಬಹುದು. ಕಡಿಮೆ ಅವಧಿಯಲ್ಲಿ ಮರುಕಳಿಸಬಹುದು. ಹಾಗೆಯೇ, ಮಳೆ ಇಲ್ಲದ ಪ್ರದೇಶಗಳಲ್ಲಿ ಮಳೆ, ಅತಿಯಾದ ಮಳೆ ಮೊದಲಾದ ಘಟನೆಗಳು ಸಂಭವಿಸಬಹುದು. ಈ ಎಲ್ಲವನ್ನೂ ನೈಸರ್ಗಿಕ ವಿಕೋಪಗಳೆಂದರೂ, ಪುರುಷರು ಮತ್ತು ಮಹಿಳೆಯರ ಮೇಲೆ ಇದರಿಂದಾಗುವ ಪರಿಣಾಮ ಒಂದೇ ತೆರನಾಗಿರುವುದಿಲ್ಲ.

ಉದಾಹರಣೆಗೆ, ಇಪ್ಪತ್ತು ವರ್ಷಗಳ ಹಿಂದೆ 'ಕಟ್ರಿನಾ' ಎನ್ನುವ ಚಂಡಮಾರುತ ಅಮೆರಿಕದ ಪೂರ್ವ ಕರಾವಳಿಯ ಮೇಲೆ ಬೀಸಿತ್ತು. ಆಗ ಉಂಟಾದ ಕಷ್ಟ, ನಷ್ಟಗಳು ಬಹಳಷ್ಟು. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅಭಿವೃದ್ಧಿ ಸಾಧಿಸಿದ ಅಮೆರಿಕ, ಈ ಚಂಡಮಾರುತ ಬರಬಹುದಾದ ಮುನ್ಸೂಚನೆಯನ್ನು ಗಮನಿಸಿ ಅದರಿಂದಾಗುವ ಹಾನಿಯನ್ನು ತಗ್ಗಿಸಲು ಸಾಕಷ್ಟು ತಯಾರಿ ನಡೆಸಿತ್ತು. ಹಾಗಿದ್ದರೂ, ಇದರ ಪ್ರಭಾವದಿಂದ ನರಳಿದವರಲ್ಲಿ ಬಡ ಮಹಿಳೆಯರೇ ಹೆಚ್ಚು ಎನ್ನುತ್ತದೆ ಒಂದು ಅಧ್ಯಯನ. ಆರ್ಥಿಕ ಅನನುಕೂಲತೆಯಿಂದಾಗಿ ಈ ಮಹಿಳೆಯರು ತಕ್ಕ ಸಮಯದಲ್ಲಿ, ಸೂಕ್ತ ಜಾಗಕ್ಕೆ ವಲಸೆ ಹೋಗಲು ಆಗಲಿಲ್ಲ. ಹೀಗಾಗಿ ಚಂಡಮಾರುತದಿಂದಾದ ನಷ್ಟವನ್ನು ಭರಿಸಬೇಕಾಯಿತು.

ಈ ಲೇಖನ ಓದಿದ್ದೀರಾ?: ಮೈಕ್ರೋಸ್ಕೋಪು | ಹೆಚ್ಚುತ್ತಲೇ ಇದೆ ದರೋಡೆಕೋರ ವಿಜ್ಞಾನ ಪತ್ರಿಕೆಗಳ ದರ್ಬಾರು

ಅಭಿವೃದ್ಧಿ ರಾಷ್ಟ್ರಗಳ ಪಾಡೇ ಹೀಗಾದರೆ, ಬಡ ರಾಷ್ಟ್ರಗಳ ಮಹಿಳೆಯರ ಕತೆ ಏನಾಗಬೇಡ? ಜೊತೆಗೆ ಹವಾಮಾನ ಬದಲಾವಣೆಯಿಂದಾಗುವ ಅತಿಯಾದ ಮಳೆ, ಅತಿಯಾದ ಬೇಗೆ ಮೊದಲಾದ ಪರಿಣಾಮಗಳು ಉತ್ತರಾರ್ಧ ಗೋಲಕ್ಕಿಂತಲೂ ದಕ್ಷಿಣಾರ್ಧ ಗೋಲದ ಮೇಲೆಯೇ ಆಗುವುದು ಹೆಚ್ಚು. ಈಗಿನ್ನೂ ಅಭಿವೃದ್ಧಿಯಾಗುತ್ತಿರುವ ಆಫ್ರಿಕಾ, ದಕ್ಷಿಣ ಅಮೆರಿಕ, ಭಾರತ ಮೊದಲಾದ ರಾಷ್ಟ್ರಗಳು ಈ ಭಾಗದಲ್ಲಿಯೇ ಇವೆ.

ಬರ ಮತ್ತು ಕ್ಷಾಮದಿಂದಾಗಿ ಸದಾ ಸುದ್ದಿಯಲ್ಲಿರುವ ಇಥಿಯೋಪಿಯಾದ್ದೂ ಇದೇ ಕತೆ. ಅಲ್ಲಿ ಬರಗಾಲ ಬಂದಾಗ ಜನ ಗುಳೆ ಹೋಗುತ್ತಾರೆ. ನಮ್ಮಲ್ಲಿ ಉತ್ತರ ಕರ್ನಾಟಕದಿಂದ ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶದಿಂದ ದೇಶದ ವಿವಿಧೆಡೆಗೆ ಕೂಲಿಗೆ ಗುಳೆ ಹೋಗುವ ಹಾಗೆಯೇ ಅಲ್ಲಿಯೂ ಜನ ಗುಳೆ ಹೋಗುತ್ತಾರೆ. ಗುಳೆ ಹೋಗುವವರಲ್ಲಿ ಗಂಡಸರೇ ಹೆಚ್ಚು. ಹೆಣ್ಣುಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಉಳಿದವರು ಗುಳೆ ಹೋಗುತ್ತಾರೆ. ಇದಕ್ಕೆ ಕಾರಣ, ಹೆಣ್ಣುಮಕ್ಕಳು ಹೊರೆ ಎಂಬ ಸಾಮಾಜಿಕ ನಿಲುವು. ಇದರ ಫಲವಾಗಿ ಬರಗಾಲದ ದುರ್ದೆಸೆಯನ್ನು ಹೆಣ್ಣುಮಕ್ಕಳೇ ಹೆಚ್ಚು ಅನುಭವಿಸಬೇಕಾಗುತ್ತದೆ. ಇದೇ ಬಗೆಯ ವ್ಯತ್ಯಾಸವನ್ನು ನೈಜೀರಿಯಾ, ಬುರ್ಕಿನಾ ಫಾಸೋ ಹಾಗೂ ಕೀನ್ಯಾದಲ್ಲಿಯೂ ಕಾಣಬಹುದು. ಈ ದೇಶಗಳಲ್ಲಿ ಮಹಿಳೆಯರು ಕಡಿಮೆ ಗುಳೆ ಹೋಗುವುದಕ್ಕೆ ಇರುವ ಕಾರಣಗಳು ಬೇರೆ ಅಷ್ಟೆ.

ನೈಸರ್ಗಿಕ ವಿಕೋಪಕ್ಕೆ ಈಡಾದ ಪ್ರದೇಶಗಳಿಗೆ ಪರಿಹಾರ ಒದಗಿಸಿದಾಗಲೂ ಈ ಲಿಂಗ ತಾರತಮ್ಯ ಕಾಡದೆ ಬಿಡುವುದಿಲ್ಲ. ಮಳೆ ಕಡಿಮೆಯಾಗಿದ್ದರಿಂದಲೂ, ಅಂತರ್ಜಲ ಕಡಿಮೆ ಆಗಿದ್ದರಿಂದಲೂ ಇತ್ತೀಚೆಗೆ ಉತ್ತರ ಭಾರತದ ಕೆಲವು ಪಟ್ಟಣಗಳಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ಏರುಪೇರಾಗಿತ್ತು. ಈ ಸಂದರ್ಭದಲ್ಲಿ ಮನೆಮನೆಗೆ ನೀರನ್ನು ಸರಬರಾಜು ಮಾಡಲು ವ್ಯವಸ್ಥೆ ಆಗಿತ್ತು. ಆದರೆ, ಈ ನೀರು ಬಂದಾಗ ಅದನ್ನು ಹಿಡಿದಿಟ್ಟುಕೊಳ್ಳುವುದಕ್ಕೆಂದು ಅಲ್ಲಿನ ಹಲವು ಹೆಣ್ಣುಮಕ್ಕಳು ಶಾಲೆಯನ್ನೇ ಬಿಟ್ಟು ಮನೆಯಲ್ಲಿ ನಿಂತರು. ನೀರಿನ ಕೊರತೆಯಿಂದಾಗಿ ಮನೆಯಲ್ಲೇ ಇರುವ ಹೆಣ್ಣುಮಕ್ಕಳು ಸ್ನಾನ ಮಾಡುವುದೂ ಕಡಿಮೆ ಮಾಡಿದರಂತೆ. ಹೀಗೆ, ನಾವು ನಿರೀಕ್ಷೆಯನ್ನೂ ಮಾಡದ ರೀತಿಯಲ್ಲಿ ಈ ಬದಲಾವಣೆಗಳು ಹೆಂಗಳೆಯರನ್ನು ಹೆಚ್ಚೆಚ್ಚು ಕಾಡುತ್ತವೆ.

Image
Odisha women

ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಆಂಧ್ರ ಪ್ರದೇಶದ ಕರಾವಳಿ ಪ್ರದೇಶದಲ್ಲಿ ಚಂಡಮಾರುತದ ಹಾವಳಿ ಆಗಾಗ್ಗೆ ವರದಿಯಾಗುತ್ತದಷ್ಟೆ. ಈ ಬಗ್ಗೆ ಈಗ ಮುನ್ಸೂಚನೆ ಸುಲಭವಾಗಿ ದೊರಕುವುದರಿಂದ ಸಾವಿಗೀಡಾಗುವವರ ಸಂಖ್ಯೆ ಕಡಿಮೆ. ಆದರೆ, ಈ ಸಂದರ್ಭದಲ್ಲಿ ಹಳ್ಳಿಗಳ ಜನರನ್ನು ಗುಳೆ ಎಬ್ಬಿಸಿ ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ಯಲಾಗುತ್ತದೆ. ಇಂತಹ ನಿರಾಶ್ರಿತ ವಸತಿಗಳಲ್ಲಿಯೂ ಊಟ, ತಿಂಡಿಯ ಹೊರತಾಗಿ ಉಳಿದ ವ್ಯವಸ್ಥೆಗಳಲ್ಲಿ ಮಹಿಳೆಯರು ತೊಂದರೆಗೀಡಾಗಬಹುದು. ಉದಾಹರಣೆಗೆ, ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲದ್ದರಿಂದ ಹರೆಯದ ಹೆಣ್ಣುಮಕ್ಕಳು ಮುಟ್ಟಿನಿಂದಾಗಿ ಸಂಕಟಕ್ಕೀಡಾಗುತ್ತಾರೆ. ಶುಚಿಯಾದ ಬಟ್ಟೆ, ನ್ಯಾಪ್ಕಿನ್ ಸೌಲಭ್ಯವಿಲ್ಲದೆ ಆರೋಗ್ಯಕ್ಕೂ ಹಾನಿಯುಂಟಾಗುತ್ತದೆ. ಪುರುಷರಿಗೆ ಈ ಸಮಸ್ಯೆ ಇಲ್ಲ.

ಇನ್ನು ಕೃಷಿಯನ್ನೇ ನಂಬಿಕೊಂಡು ಬಾಳುವ ಮಹಿಳೆಯರ ಕತೆ ಇನ್ನೂ ಸಂಕಟದ್ದು. ಹವಾಮಾನ ಬದಲಾವಣೆಯಿಂದಾಗಿ ಕೃಷಿ ಇಳುವರಿ ಕಡಿಮೆಯಾದಲ್ಲಿ, ನೀರಾವರಿಗೋ, ಬೀಜಕ್ಕೋ, ಗೊಬ್ಬರಕ್ಕೋ ಅಥವಾ ಕೂಲಿಗೋ ಹೆಚ್ಚಿನ ಬಂಡವಾಳವನ್ನು ಒದಗಿಸಬೇಕಾಗುತ್ತದೆ. ಇದು ಗಂಡಸರಿಗೆ ಸುಲಭವಾದಷ್ಟು ಹೆಂಗಸರಿಗೆ ಅಲ್ಲ. ಇಂದಿಗೂ ಸಮಾನತೆಯನ್ನು ಸಾರುವ ಭಾರತದಲ್ಲಿಯೂ ಸಾಲಕ್ಕೆಂದು ಬ್ಯಾಂಕಿಗೆ ಹೋಗುವುದು ಗಂಡಸರೇ ಹೊರತು ಹೆಂಗಸರಲ್ಲ. ಹೀಗೆ ಸ್ತ್ರೀಯೇ ಯಜಮಾನಿಯಾಗಿರುವ ಕುಟುಂಬಗಳಲ್ಲಿ ಕೃಷಿ ಚಟುವಟಿಕೆಗಳಿಗೂ ಬಾಧೆ ಉಂಟಾಗುತ್ತದೆ ಎನ್ನುವ ವಾದವೂ ಇದೆ. ಇಂತಹ ವ್ಯವಸ್ಥೆ ಇರುವ ಮೊಜಾಂಬಿಕ್ ಮತ್ತು ಮಾಲಾವಿ ದೇಶಗಳ ಮೀನುಗಾರರ ಸಮಾಜಗಳಲ್ಲಿ, ಮೀನಿನ ಇಳುವರಿ ಕಡಿಮೆಯಾದಾಗ ಮಹಿಳೆಯರ ಆದಾಯ ಕಡಿಮೆಯಾಗಿತ್ತು. ಅದೇ ಸಮಾಜದ ಪುರುಷರ ಆದಾಯದಲ್ಲಿ ಯಾವುದೇ ವ್ಯತ್ಯಾಸ ಕಾಣಲಿಲ್ಲ.

ಒಟ್ಟಾರೆ, ಹವಾಮಾನ ಬದಲಾವಣೆಗೆ ಕಾರಣ ತಾವಲ್ಲದಿದ್ದರೂ, ಅದರಿಂದಾಗುವ ಹಾನಿಯನ್ನು ಬಡರಾಷ್ಟ್ರಗಳ ಬಡ ಮಹಿಳೆಯರೇ ಹೆಚ್ಚು ಹೊರಬೇಕಾಗಬಹುದು ಎಂಬುದು ಈ ಎಲ್ಲ ಉದಾಹರಣೆ, ನಿದರ್ಶನಗಳ ಸಾರ.

ನಿಮಗೆ ಏನು ಅನ್ನಿಸ್ತು?
2 ವೋಟ್