ಅನುದಿನ ಚರಿತೆ | ಸಾಮಾನ್ಯ ಜ್ಞಾನ; ವೈಚಾರಿಕತೆ ಮತ್ತು ರಾಜಕೀಯ ನಿಲುವುಗಳು

Common Scence

ಒಂದು ವೇಳೆ ನಮ್ಮ ಸಾಮಾನ್ಯ ಜ್ಞಾನ ಮತ್ತು ನಮ್ಮ ಸಾಮಾಜಿಕ ವ್ಯವಹಾರಗಳ ನಡುವಣ ಸಂಬಂಧ ನಿರ್ದಿಷ್ಟವಾದದ್ದೇ ಆಗಿದ್ದರೆ, ನಮ್ಮ ಸಾಮಾಜಿಕ ಪರಿಸ್ಥಿತಿ ಹೇಗಿರುತ್ತಿತ್ತು? ಹೆಣ್ಣುಮಕ್ಕಳ ಕುರಿತಾದ ಗ್ರಹಿಕೆ, ಗೋಮಾಂಸ, ಅಸ್ಪೃಶ್ಯತೆ, ಧರ್ಮಗಳ ಕಲ್ಪನೆ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕುರಿತ ನಮ್ಮ ನಿಲುವು ಇವತ್ತು ಏನಾಗಿರುತ್ತಿತ್ತು?

ಸಾಮಾನ್ಯ ಜ್ಞಾನದ (ಕಾಮನ್ ಸೆನ್ಸ್) ಕುರಿತ ಶೈಕ್ಷಣಿಕ ಇಲ್ಲವೇ ವಿದ್ವತ್ಪೂರ್ಣ ಚರ್ಚೆಗಳು ಕನ್ನಡದ ಸನ್ನಿವೇಶದಲ್ಲಿ ಅತ್ಯಂತ ವಿರಳ. ಹಾಗಂತ ಈ ಪರಿಕಲ್ಪನೆಯನ್ನೇ ಕನ್ನಡಿಗರು ಬಳಸುವುದಿಲ್ಲ ಎಂದರ್ಥವಲ್ಲ. ನಮ್ಮ ದೈನಂದಿನ ಮಾತುಕತೆಗಳಲ್ಲಿ ಯಥೇಚ್ಛವಾಗಿ ಈ ಪರಿಕಲ್ಪನೆ ಬಳಕೆಯಾಗುತ್ತದೆ. ಇದನ್ನು ಇಂತಹದೇ ಸನ್ನಿವೇಶದಲ್ಲಿ ಬಳಸಬೇಕು ಅಥವಾ ಬಳಸಕೂಡದು ಎನ್ನುವ ಯಾವುದೆ ನಿರ್ಬಂಧಗಳನ್ನು ಹೇರಲಾಗಿಲ್ಲ. ಹಾಗಾಗಿ, ಯಾವ್ಯಾವುದೋ ಸಂದರ್ಭದಲ್ಲಿ ಏನೇನೋ ವಿಷಯಗಳಿಗೆ ಸಂಬಂಧಿಸಿ ಸಾಮಾನ್ಯ ಜ್ಞಾನದ ಬಗೆಗೆ ಮಾತನಾಡಲಾಗುತ್ತದೆ.

ಸಾಮಾನ್ಯ ಜ್ಞಾನ ಎನ್ನುವುದು ಜನ್ಮದತ್ತವಾಗಿ ನಮ್ಮಲ್ಲಿ ಅಂತಸ್ಥವಾಗಿರುತ್ತದೆ, ಎನ್ನುವ ಪ್ರಮೇಯಗಳೂ ಹುಟ್ಟಿಕೊಂಡಿರುತ್ತವೆ. ಲೋಕದ ಪ್ರತಿಯೊಂದು ವ್ಯವಹಾರವನ್ನು ಗ್ರಹಿಸುವ, ಯೋಚಿಸುವ ಹಾಗೂ ವಿಮರ್ಶಿಸುವ ಇಲ್ಲವೆ ವಿಶ್ಲೇಷಿಸುವ ಸಹಜ ವಿವೇಕವೊಂದು ಮನುಷ್ಯರಲ್ಲಿ ಪ್ರಾಪ್ತವಾಗಿರುತ್ತದೆ. ಹೀಗೆ ಪ್ರಾಪ್ತವಾಗಿರುವ ವಿವೇಚನೆಯನ್ನೇ ಬಹುತೇಕರು ಸಾಮಾನ್ಯ ಜ್ಞಾನವೆಂದು ಭಾವಿಸುತ್ತಾರೆ. ದಿಟದಲ್ಲಿ, ಇಂತಹದೊಂದು ವಿವೇಚನೆ ನಮ್ಮಲ್ಲಿ ಹೇಗೆ ನೆಲೆಗೊಳ್ಳುತ್ತದೇ? ಈ ವಿವೇಚನೆಗು ಹಾಗೂ ನಾವು ಬದುಕು ನಡೆಸುವ ವಾತಾವರಣದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ರಾಜಕೀಯ ನಿಲುವುಗಳಿಗೂ ಏನಾದರೂ ನಂಟಸ್ತಿಕೆ ಇರಲು ಸಾಧ್ಯವೇ? ಒಂದುಪಕ್ಷ ನಮ್ಮ ಸಾಮಾನ್ಯ ಜ್ಞಾನಕ್ಕೂ ಮತ್ತು ನಮ್ಮ ಸಾಮಾಜಿಕ ವ್ಯವಹಾರಗಳ ನಡುವಣ ಸಂಬಂಧ ನಿರ್ದಿಷ್ಟವಾದದ್ದು ಆಗಿದ್ದರೆ, ನಮ್ಮ ಸಾಮಾಜಿಕ ಪರಿಸ್ಥಿತಿ ಹೇಗಿರುತ್ತಿತ್ತು?

ನಾವು ಯೋಚಿಸುವ ವಿಧಾನಗಳ ಸ್ವರೂಪದಲ್ಲಿ ಒಂದು ಸಾಮಾನ್ಯ ನಿಲುವು ಇದ್ದಿದ್ದರೆ ಏನಾಗುತ್ತಿತ್ತು? ಅಂದರೆ, ಸಮೂಹದ ಎಲ್ಲ ವಿದ್ಯಮಾನಗಳನ್ನೂ ಎಲ್ಲರೂ ಒಂದೇ ರೀತಿಯಲ್ಲಿ ಪರಿಭಾವಿಸುವುದು, ಅರ್ಥೈಸುವುದು, ವರ್ತಿಸುವುದು ಇಲ್ಲವೇ ವ್ಯಾಖ್ಯಾನಿಸುವುದು ರೂಢಿಯಲ್ಲಿರುತ್ತಿತ್ತೇ? ಉದಾಹರಣೆಗೆ ಹೆಣ್ಣು ಮಕ್ಕಳ ಕುರಿತಾದ ಗ್ರಹಿಕೆ, ಆಹಾರ ಪದ್ಧತಿ, ಗೋವು ಮಾಂಸದಂತಹ ವಿಚಾರಗಳು, ಅಸ್ಪೃಶ್ಯತೆಯ ಆಚರಣೆ, ಧರ್ಮಗಳ ಕಲ್ಪನೆ ಹಾಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕುರಿತ ನಮ್ಮ ನಿಲುವು ಇವತ್ತು ಏನಾಗಿರುತ್ತಿತ್ತು ಅನ್ನುವುದನ್ನು ನೆನಪಿಸಿಕೊಂಡರೆ ಮೈಜುಮ್ ಅನ್ನುತ್ತದೆ. ಏಕೆಂದರೆ, ವೈಚಾರಿಕ ವೈವಿಧ್ಯತೆಯನ್ನು ಒಪ್ಪಿ ನಡೆಯುವ ಸನ್ನಿವೇಶದಲ್ಲಿಯೂ ಇಂತಹದೇ ಆಚರಣೆ ಹಾಗೂ ವಿಚಾರವನ್ನು ಪಾಲಿಸಬೇಕು ಎನ್ನುವ ಒತ್ತಾಯವನ್ನು ನೋಡುತ್ತಿದ್ದೇವೆ.

Image
Common Scence

ಇಲ್ಲಿ ಕೇವಲ ಪಾಲಿಸುವವರು ಮಾತ್ರ ಇರುವಂತಾಗಿದ್ದರೆ, ದಾಸ್ಯತನದ ಕೂಪವೊಂದು ನಿರ್ಮಾಣವಾಗಿರುತ್ತಿತ್ತು. ಈಗಲೂ ಇದಕ್ಕೇನೂ ಅಭಾವವಿಲ್ಲ. ವೈಚಾರಿಕ ಗುಲಾಮಗಿರಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಇದು ಹೀಗೆ ಮುಂದುವರಿದರೆ, ಎಂತಹದೇ ಅನಾಚಾರ ಅಥವಾ ಅನಿಷ್ಠವನ್ನು ಒಪ್ಪಿ ನಡೆಯುವ ಸಮೂಹ ಮಾತ್ರ ಇರುತ್ತದೆ. ಈ ಯಥಾಸ್ಥಿತಿಯನ್ನು ಎಂದಿನಂತೆ ಮುಂದುವರಿಸಿಕೊಂಡು ಹೋಗುವ ಪುರೋಹಿತಶಾಹಿ ಎಂಬ ವರ್ಗವೊಂದು ತನ್ನದೇ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಬೌದ್ಧಿಕ ಚಹರೆಗಳನ್ನು ಪಡೆದುಕೊಂಡು ಮತ್ತಷ್ಟು ತನ್ನ ಪ್ರಾಬಲ್ಯವನ್ನು ಮೆರೆಯುವಂತಾಗುತ್ತದೆ. ಈ ಹಿಂದೆ ನೆಲೆಗೊಂಡಿದ್ದ ಇಂತಹ ಏಕಮೇವ ಚಕ್ರಾಧಿಪತ್ಯವನ್ನು ಭಗ್ನಗೊಳಿಸಲು ಸಾಧ್ಯವಾದದ್ದು ವಿಚಾರ ಕ್ರಾಂತಿಯಿಂದಲೇ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇಂತಹ ವಿಚಾರ ಕ್ರಾಂತಿಯ ಮೂಲಚೂಲವೇ ಸಾಮಾನ್ಯ ಜ್ಞಾನ ಅನ್ನುವುದು ಗಮನಾರ್ಹ. ಹಾಗಂತ, ವೈಚಾರಿಕ ವೈವಿಧ್ಯತೆ, ವಿಚಾರ ಭೇದ, ಸೈದ್ಧಾಂತಿಕ ತಿಕ್ಕಾಟಗಳ ಪಾತಳಿಯೇ ಈ ಸಾಮಾನ್ಯ ಜ್ಞಾನವೆಂದು ಹೇಳಲು ಆಗುವುದಿಲ್ಲ. ಅದೇಕೆಂದರೆ, ಸಾಮಾನ್ಯ ಜ್ಞಾನ ಎನ್ನುವುದು ಬಹುತೇಕವಾಗಿ ಇವತ್ತು ಪ್ರಶ್ನಾತೀತವೂ ಹಾಗೂ ವಿವೇಚನಾರಹಿತವೂ ಆಗಿರುವ ವಿದ್ಯಮಾನವಾಗಿದೆ. ಆದ್ದರಿಂದ ಸಾಮಾನ್ಯ ಜ್ಞಾನವನ್ನು ಕೇವಲ ರೂಢಿಗತ ಆಚರಣೆಯನ್ನಾಗಿ ರೂಪಿಸಲಾಗಿದೆ. ಬದುಕಿನ ಯಾವ ವಿಷಯವನ್ನು, ಸಮಾಜದ ಯಾರನ್ನು ಹಾಗೂ ಸಂಸ್ಕೃತಿಯ ಏನೆಲ್ಲ ವಿಷಯಗಳನ್ನು ಹೇಗೆ ನೋಡಬೇಕು ಎಂಬ ರೂಢಿಗತ ಆಚರಣೆಯೊಂದು ಈಗ ಪ್ರಧಾನವಾಗಿ ಬೇರೂರಿದೆ. ಪರಿಣಾಮವಾಗಿ ಬದುಕಿನ ಛಿದ್ರ ಛಿದ್ರ ನೋಟಗಳು ಮಾತ್ರ ನಮ್ಮ ಬದುಕಿನ ಅಖಂಡತೆಯ ಸಂಕೇತಗಳಾಗಿ ನೆಲೆಗೊಂಡಿವೆ. ಬದುಕಿನ ಸ್ವಯಂಪೂರ್ಣತೆಯ ಕಡೆಗೆ ಚಲಿಸುವ ಬದಲಾಗಿ ಬದುಕನ್ನು ಇನ್ನಷ್ಟೂ ಛಿದ್ರಗೊಳಿಸುವ ಗುರಿ ಹೊಂದಲಾಗಿದೆ.

ಒಂದು ಕಾಲದಲ್ಲಿ ಸಮುದಾಯಗಳು ಜಾತಿ ಮತ್ತು ಧರ್ಮದ ಕೂಪದಲ್ಲಿ ಬಿದ್ದು ನರಳುತ್ತಿದ್ದಾಗಲೂ ಸಾಮಾಜಿಕ ಕ್ರಾಂತಿಗಳು ಏಕೆ ನಡೆಯಲಿಲ್ಲ?ಎಂಬ ಪ್ರಶ್ನೆಯನ್ನು ಕೇಳಬಹುದು.ಏಕೆಂದರೆ ಚಾತುರ್ವರ್ಣ್ಯದ ಪದ್ಧತಿಯ ಹಿಂದೂ ಸಮಾಜದಲ್ಲಿ ಕೆಳವರ್ಗಗಳು ತಮ್ಮ ಬಿಡುಗಡೆಗಾಗಿ ಯಾವುದೇ ಹೋರಾಟವನ್ನೂ ಮಾಡಲಾರದಷ್ಟು ಅವಜ್ಞೆಗೆ ಈಡಾಗಿದ್ದವು ಹಾಗೂ ಅಂತಹದೊಂದು ಸಾಮಾಜಿಕ ದರ್ಬಲತೆಯಿಂದ ಬಳಲುತ್ತಿದ್ದವು. ಬದುಕಿನ ಸ್ವಾಯತ್ತತೆಯ ಬಗ್ಗೆ ಯೋಚಿಸುವಷ್ಟೂ ವಿವೇಚನೆಯನ್ನು ಹೊಂದಿರಲಿಲ್ಲವೇ? ಎಂಬ ಮಾತನ್ನು ಯಾರಾದರೂ ಕೇಳಬಹುದು. ಸಮೂಹಗಳ ಒಡಲಲ್ಲಿ ನೆಲೆನಿಂತಿದ್ದ ಈ ಬಿಕ್ಕಟ್ಟಿಗೂ ಹಾಗೂ ಸಾಮಾನ್ಯ ಜ್ಞಾನವನ್ನೂ ಅಳವಡಿಸಿಕೊಳ್ಳದಷ್ಟು ಸಾಮಾಜಿಕ ಅವಿವೇಕಕ್ಕೆ ನಮ್ಮ ಸಮೂಹಗಳು ಬಲಿಯಾಗಿವೆ.

ಪರಿಣಾಮವಾಗಿ ಶೂದ್ರರಿಗೂ ತಮ್ಮ ವಿಮೋಚನೆಯ ದಾರಿ ಮತ್ತು ಗುರಿಗಳು ಯಾವವು? ಎನ್ನುವ ಪ್ರಶ್ನೆಗೆ ನಮ್ಮ ಚರಿತ್ರೆಯಲ್ಲಿ ಏನೆಲ್ಲ ಸುಳಿವುಗಳು ದೊರೆಯುತ್ತವೆ ಎಂಬುದನ್ನು ಗಮನಿಸಿದಾಗ, ಶೂದ್ರರು ತಮ್ಮ ವಿಮೋಚನೆಯ ಹಾದಿಯೇನೆಂದು ವಿಚಾರ ಮಾಡುವ ಶಕ್ತಿಯಿರಲಿಲ್ಲ ಅನ್ನುವ ವಾಸ್ತವ ಸಂಗತಿ ಗೋಚರಿಸುತ್ತದೆ. ಅಧಮ ಸ್ಥಾನವೇ ಅವರಿಗೆ ಸ್ಥಿರವಾಯಿತು. ಪರಿಣಾಮವಾಗಿ ಇವರು ನಿರಂತರವಾದ ಸಾಮಾಜಿಕ ದಾಸ್ಯಕ್ಕೆ ಒಳಗಾದರು.ಈ ದಾಸ್ಯವನ್ನೇ ತಮ್ಮ ಬದುಕಿನ ಗುರಿ ಮತ್ತು ದಾರಿಯನ್ನಾಗಿ ಇವರು ಪರಿಭಾವಿಸಿದ್ದರು. ಕಾಲಾನಂತರದಲ್ಲಿ ವಿಚಾರ ಕ್ರಾಂತಿಗೆ ನಾಂದಿ ಹಾಡಿದ ವಿಚಾರ ಪುರುಷರು, ಸಂತರು, ಚಿಂತಕರ ಒತ್ತಾಸೆಯಿಂದ ನಮ್ಮ ಸಮೂಹಗಳು ಬಿಡುಗಡೆಯ ಭರವಸೆಯನ್ನು ಪಡೆದುಕೊಳ್ಳಲಾರಂಭಿಸಿದವು.

ಈ ಲೇಖನ ಓದಿದ್ದೀರಾ?: ಅನುದಿನ ಚರಿತೆ | ತರಗತಿಯಿಂದ ದೂರವೇ ಉಳಿಯುವ ಆದರ್ಶಗಳು

ವಿಚಾರ ಕ್ರಾಂತಿ ಇಲ್ಲವೇ ವೈಚಾರಿಕ ನಿಲುವುಗಳ ಬಗೆಗೆ ನಾವು ಸಹಜವಾಗಿಯೇ ಅತ್ಯಂತ ಕುತೂಹಲದಿಂದ ಮಾತನಾಡುತ್ತೇವೆ. ವೈಚಾರಿಕತೆಯನ್ನು ಪಾಲಿಸುವಲ್ಲಿ ಅಥವಾ ಅಂತಹದೊಂದು ತಾತ್ವಿಕತೆಯನ್ನು ನಮ್ಮ ಬದುಕಿನಲ್ಲಿ ಅನುಸರಿಸುವಾಗ ಏನಾಗುತ್ತದೆ ಅನ್ನುವುದು ಗಮನಾರ್ಹ. ನಾನು ಹೇಳುತ್ತಿರುವುದೇನೆಂದರೆ, ನಮ್ಮ ದೈನಂದಿನ ಬದುಕಿನಲ್ಲಿ ಮೈದೋರುವ ಪ್ರತಿಯೊಂದು ನಿಲುವು, ತನ್ನಷ್ಟಕ್ಕೆ ತಾನು ಸ್ವಯಂಪೂರ್ಣವಾಗಲಿ ಇಲ್ಲವೆ ಸ್ವಾಯತ್ತ ನೆಲೆಯನ್ನು ಪಡೆದುಕೊಳ್ಳುವುದಾಲಿ ಸಾಧ್ಯವಿಲ್ಲ. ಅಂದರೆ, ನಮ್ಮ ಚಿಂತನೆ, ನಡೆ ಹಾಗೂ ಬದುಕಿನ ಒಂದೊಂದು ಆಚರಣೆಯೂ ಸಾಮಾಜಿಕ ಹಾಗೂ ರಾಜಕೀಯ ಬಿಕ್ಕಟ್ಟಿನ ಪರಿಣಾಮದಿಂದ ಹೊರಹೊಮ್ಮುತ್ತವೆ. ಇಲ್ಲವಾದರೆ ಯಾವುದೇ ಸಾಮಾಜಿಕ ಹಿತಾಸಕ್ತಿಗೆ ಅನುಗುಣವಾಗಿ ಏರ್ಪಡುತ್ತವೆ.

ಯಾವುದನ್ನು ನಾವು ಸಾಮಾನ್ಯ ಜ್ಞಾನ (ಕಾಮನ್ ಸೆನ್ಸ್) ಎಂದು ಗುರುತಿಸುತ್ತೆವೆಯೋ, ಅದು ನಮ್ಮೊಳಗಿನ ವಿವೇಕದ ಪರಿಣಾಮದಿಂದ ಮಾತ್ರ ಉಂಟಾಗುವ ವಿದ್ಯಮಾನವಲ್ಲ. ಅದೊಂದು ಸಾಮಾಜಿಕ ರಚನೆಯೇ ಆಗಿರುತ್ತದೆ. ಅದಕ್ಕಾಗಿಯೇ ನಾವು ನಮ್ಮ ಬದುಕಿನ ಹಲವು ಸಂಗತಿಗಳನ್ನು ಬಹುತೇಕವಾಗಿ ಪ್ರಶ್ನಾತೀತವಾಗಿ ಒಪ್ಪುತ್ತೇವೆ. ಪ್ರಶ್ನಾತೀತವಾಗಿ ಸಮ್ಮತಿಸುವ (uncontestedacceptance) ಈ ನಿಲುವುಗಳನ್ನೆ ಗ್ರಾಮ್ಸಿ ಸಾಮಾನ್ಯ ಜ್ಞಾನ ಎನ್ನುತ್ತಾನೆ. ದಿಟ, ಇದು ಹೆಚ್ಚಿನ ಚರ್ಚೆಯನ್ನು ಬಯಸುವ ವಿಚಾರವೇ ಸರಿ.

ಭಾಷೆಯನ್ನು ಒಂದು ಸಾಮಾಜಿಕ ಆಚರಣೆಯ ನೆಲೆಯನ್ನಾಗಿ ಪರಿಗಣಿಸಲಾಗಿದೆ. ಅಂತೆಯೇ ಅದರ ಅರ್ಥವನ್ನು ಸಾಮಾಜಿಕವಾಗಿ ರೂಪಿಸಲ್ಪಟ್ಟ ನಿಲುವನ್ನಾಗಿ ಅರ್ಥೈಸಲಾಗುತ್ತದೆ. ಈ ವಿನ್ಯಾಸವು ಸಮಾಜದ ಬಹು ಮುಖ್ಯವಾದ ಎರಡು ಆಯಾಮಗಳನ್ನು ಸೂಚಿಸುತ್ತದೆ. ಇವುಗಳನ್ನು ಸಮೂಹದ ನಡೆ (ಅರ್ಥ) ಮತ್ತು ನುಡಿ (ಆಚರಣೆ) ಎಂದು ಪರಿಗಣಿಸಿದರೆ, ಸಮೂಹಗಳ ಅಂತರಂಗ ಮತ್ತು ಬಹಿರಂಗದ ಚಹರೆಗಳು ಮೈದೋರುವುದನ್ನು ಮನಗಾಣಬಹುದು. ಈ ಇಡೀ ಚರ್ಚೆಯನ್ನು ವಚನಕಾರರು ಒಪ್ಪಿ ನಡೆದಂತಹ ʼಅರಿವೇ ಗುರುʼ ಹಾಗೂ ʼಅಂತರಂಗ ಮತ್ತು ಬಹಿರಂಗ ಶುದ್ಧಿʼ ಎಂಬ ತಾತ್ವಿಕ ಇಲ್ಲವೇ ವೈಚಾರಿಕ ವಿನ್ಯಾಸವನ್ನಾಗಿ ಪರಿಗಣಿಸುವುದು ಸೂಕ್ತವೂ ಹಾಗೂ ವಿವೇಕವೂ ಆಗಿರುತ್ತದೆ.

ಏಕಂದರೆ, ಒಂದು ಕಾಲ ದೇಶದಲ್ಲಿ ಬದುಕಿ ಬಾಳಿದ ಶರಣ ತತ್ವಕ್ಕೆ ಸೀಮಿತಗೊಳಿಸಿ, ಈ ಮಾತುಗಳನ್ನು ಹೇಳುತ್ತಿಲ್ಲ. ಬದಲಾಗಿ ಕಾಲದ ಮನೋಧರ್ಮ ಎಂಬ ಸಾಮಾನ್ಯ ಜ್ಞಾನವನ್ನು ರೂಪಿಸುವ ಹಾಗೂ ಅದನ್ನು ತಲೆಮಾರಿನಿಂದ ತಲೆಮಾರಿಗೆ ಅಣಿಗೊಳಿಸುವ ಬಗೆಯಾಗಿದೆ. ಹೀಗೆ, ಹೇಳಿದ ತಕ್ಷಣಕ್ಕೆ ಶರಣರ ಬದುಕಿನ ದರ್ಶನವನ್ನು ಒಂದು ಸನಾತನ ಮೌಲ್ಯವನ್ನಾಗಿ ರೂಪಿಸುವ ಇರಾದೆಯನ್ನು ಹುಡುಕುವ ಪ್ರಯತ್ನವನ್ನು ಮಾಡಲಾಗುತ್ತದೆ ಎಂದು ಆರೋಪಿಸಬಹುದು. ಆದರೆ, ಮನೋಧರ್ಮ ಎನ್ನುವುದು ಸಮೂಹಗಳ ಬದುಕಿನ ಏಳಿಗೆಗೆ ಪೂರಕವೂ ಹಾಗೂ ನಿರಂತರ ಪರಿವರ್ತನಶೀಲವೂ ಆಗಿರುತ್ತದೆ. ಅಂದರೆ, ಯಾವ ಮೌಲ್ಯವು ಬದುಕಿನ ಘನತೆಗೆ ಅಡ್ಡಿಯನ್ನುಂಟು ಮಾಡುತ್ತದೆಯೋ, ಅಂತಹದನ್ನು ಎಗ್ಗಿಲ್ಲದೇ ಪರಿವರ್ತಿಸುವ ವಿನ್ಯಾಸವೂ ಈ ಮನೋಧರ್ಮದೊಳಗೆ ಅಡಕವಾಗಿರುತ್ತದೆ.

Image
Common Scence

ಸತ್ಯದ ಸಾಕ್ಷಾತ್ಕಾರವನ್ನು ಬಯಸುವ ಪ್ರತಿಯೊಬ್ಬ ಚಿಂತಕ ಇಲ್ಲವೆ ಸಂತ ಅಥವಾ ಸಾಮಾನ್ಯ ಮನುಷ್ಯ ಯಾರೇ ಆಗಲಿ, ಇವರು ಇಂತಹ ಪರಿವರ್ತನಶೀಲ ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ದಾರಿ ಯಾವುದೇ ಬಗೆಯ ವೈರುಧ್ಯ ಹಾಗೂ ವಿರೋಧಾಭಾಸದಿಂದ ಕೂಡಿರುವುದಿಲ್ಲ. ಇದಕ್ಕೆ ಪ್ರಮುಖ ಕಾರಣವೇನೆಂದರೆ ಸಮೂಹಗಳ ಬದುಕಿನ ಹಿತಾಸಕ್ತಿ. ಇದು ಇಂತಹ ಪರಿವರ್ತನಾಶೀಲ ದಾರಿಯ ಗುರಿಯಾಗಿರುತ್ತದೆ. ಯಾವ ಕಾಲದ ಮನೋಧರ್ಮ ಪರಿವರ್ತನಶೀಲತೆಯನ್ನು ನಿರಾಕರಿಸಿ ಸನಾತನವಾಗುವ ಇರಾದೆಯನ್ನು ಹೊಂದಿರುತ್ತದೆಯೋ, ಅದು ಕರ್ಮಠವೂ, ಸನಾತನವೂ ಹಾಗೂ ಕಂದಾಚಾರವನ್ನೇ ಮೈಗೂಡಿಸಿಕೊಂಡು, ಸಮೂಹಗಳನ್ನು ಹಿಂಸಿಸುವ, ಶೋಷಿಸುವ ಆಯುಧವಾಗಿ ತಲೆಯೆತ್ತುತ್ತದೆ. ಪರಿಣಾಮವಾಗಿ ಕೋಮುದ್ವೇಷ, ಧಾರ್ಮಿಕ ಅಸಹನೆ, ಸಾಮಾಜಿಕ ಅಶಾಂತಿಗೆ ಸಮುದಾಯಗಳನ್ನು ಈಡು ಮಾಡುತ್ತದೆ. ಇಂತಹ ತ್ರಿಶಂಕು ಸ್ಥಿತಿಯಲ್ಲಿ ನಮ್ಮ ಹಿಂದೂ ಧರ್ಮವು ಸಿಲುಕಿಕೊಂಡಿದೆ. ಹಾಗಾಗಿಯೇ, ಈ ಧರ್ಮ ಹಾಗೂ ಇಂತಹದೇ ಸ್ಥಿತಿಯಲ್ಲಿ ಸಿಕ್ಕು ನಲುಗುತ್ತಿರುವ ಪ್ರತಿಯೊಂದು ಧರ್ಮವೂ ತಾನು ಪ್ರತಿಪಾದಿಸುವ ಮೌಲ್ಯಗಳು ಸಾರ್ವತ್ರಿಕ ಮತ್ತು ಸನಾತನ ಅನ್ನುವ ಹಠಮಾರಿ ಧೋರಣೆಯನ್ನು ಅನುಸರಿಸುತ್ತವೆ. ಹಸನಾದ ಬದುಕಿನ ದಾರಿಯೂ ಮತ್ತು ಗುರಿಯೂ ಆಗಬೇಕಾದ ಧರ್ಮ, ಯಾವುದೇ ಕಾಲ, ದೇಶದ ಷಡ್ಯಂತ್ರದಿಂದ ಪ್ರೇರೇಪಿತಗೊಂಡ ಒಂದು ಮತ ಅಥವಾ ವರ್ಗ ಮನೋಧರ್ಮದ ನಿಲುವುಗಳನ್ನೇ ಸರ್ವಕಾಲಿಕ ಮೌಲ್ಯಗಳು ಎಂದು ಪ್ರತಿಪಾದಿಸುವುದಷ್ಟೆ ಅಲ್ಲದೇ, ಈ ಸನಾತನ ಮೌಲ್ಯಗಳ ಲಯಕ್ಕೆ  ಸಮೂಹಗಳು ಒಗ್ಗಿಕೊಂಡು, ಪರಸ್ಪರ ದ್ವೇಷ, ಅಸೂಯೆ ಹಾಗೂ ಮೌಢ್ಯಗಳನ್ನು ಅನುಸರಿಸುವ ನಿರ್ದಯಿ ಸಮಾಜಗಳಾಗಿ ನೆಲೆಗೊಳ್ಳಬೇಕು ಎನ್ನುವುದು ಇಲ್ಲಿಯ ಉದ್ದೇಶವಾಗಿರುತ್ತದೆ.

ಈ ನಿರೂಪಣೆಗೆ ಸಾಕ್ಷಿಯಾಗಿ ಇವತ್ತು ಭಾರತದಲ್ಲಿ ಧರ್ಮಗಳು ಅಧರ್ಮವನ್ನೇ ಮೈವೆತ್ತಂತೆ ರೂಪುಗೊಂಡಿವೆ. ಇಡೀ ಸಮೂಹಗಳೆ ಈ ಅಮಾನುಷ ಅಧರ್ಮ ಕೃತ್ಯಗಳಿಗೆ ಬಲಿಯಾಗುತ್ತಿವೆ. ಇಂತಹ ಅಧರ್ಮ ಮಾರ್ಗವೇ ರಾಜಕೀಯ ವಿನ್ಯಾಸವಾಗಿ ಮೈದೋರಿದೆ. ಮಾತಿನಲ್ಲಿ ವ್ಯಕ್ತವಾಗುವ ಆದರ್ಶಗಳು, ಆಚರಣೆಯಲ್ಲಿ ಅನಾಚಾರದ ನೆಲೆಗಳಾಗಿ ಏರ್ಪಡುತ್ತಿವೆ. ಯಾವ ನಡೆ (ಅರ್ಥ), ನುಡಿಗಳ (ಆಚರಣೆ) ನಡುವೆ ಸಾಮಾಜಿಕ ಸಮ್ಮತಿ ಹಾಗೂ ಅನುಸಂಧಾನದ ವಿನ್ಯಾಸಗಳು ಇರಬೇಕಾಗಿತ್ತೋ, ಅಲ್ಲಿಯೇ ಅಪಚಾರಗಳು ಒಡಮೂಡುತ್ತಿವೆ. ಹಾಗಾಗಿ, ಭಾಷೆ ಸಾಮಾಜಿಕ ಆಚರಣೆಯೂ ಆಗಿ ಉಳಿದಿಲ್ಲ ಮತ್ತು ಅರ್ಥ ಸಾಮಾಜಿಕ ವಿವೇಕದ ರೂಪಕವಾಗಿ ನೆಲೆಗೊಳ್ಳಲು ಸಾಧ್ಯವಾಗಿಲ್ಲ.

ಯಾವಾಗ ಭಾಷೆ ಮತ್ತು ಅರ್ಥಗಳು ಸಮಾಜದ ಅಂತರಂಗ ಮತ್ತು ಬಹಿರಂಗದ ರೂಪಕಗಳಾಗಿ ನೆಲೆಗೊಳ್ಳುವ ತುಡಿತವನ್ನು ಹೊಂದಿದ್ದವೋ, ಆವಾಗ ಧರ್ಮದ ಮೂಲಗುಣ ದಯವೇ ಆಗಿರುತ್ತಿತ್ತು ಮತ್ತು ಅರಿವು ಗುರುವಾಗಿ ನಮ್ಮನ್ನು ಎಚ್ಚರಿಸುತ್ತಿತ್ತು. ಧರ್ಮವೆಂದರೆ ದಯವೂ ಹೌದು ಮತ್ತು ಅರಿವೂ ಹೌದು ಎಂಬುದನ್ನು ಸಾಬೀತುಪಡಿಸಿದ ಲಿಂಗಾಯತ ಧರ್ಮವೂ ಇವತ್ತು ಸನಾತ ಭಾವಿಯಲ್ಲಿ ಬಿದ್ದು ಕೊಳೆಯುತ್ತಿದೆ. ಸನಾತನ ಭಾವಿಯ ಕೊಳೆತ ನಾತವನ್ನೇ ತನ್ನ ಪರಿಮಳವೆಂದು ತಪ್ಪು ಭಾವಿಸಿರುವುದು ಲಿಂಗಾಯತ ಧರ್ಮದ ದುರಂತವೇ ಸರಿ.ದಯವಿರಬೇಕು ಸಕಲ ಪ್ರಾಣಿಗಳಲ್ಲಿ, ದಯವೇ ಧರ್ಮದ ಮೂಲವೆಂದು ಸಾರಿದ ಧರ್ಮದ ವಾರಸುದಾರರು ಅದು ತಪ್ಪು ಎಂದು ಗಟ್ಟಿಯಾಗಿ ಭಂಡತನದಿಂದ ಹೇಳುತ್ತಿದ್ದಾರೆ.

Image
Common Scence

ಧರ್ಮದ ಮನೋಧರ್ಮ ಹಾಗೂ ಸ್ಥಾಯಿಭಾವ ದಯವೂ ಅಲ್ಲ ಮತ್ತು ಅರಿವೂ ಅಲ್ಲ ಅನ್ನುವುದಾಗಿದ್ದರೆ, ಪಂಪನು ಏಕೆ ʼಅರಿವಂ ಪೊಸಯಿಸುವುದುಧರ್ಮಮಂʼ ಎಂದು ಹೇಳುತ್ತಿದ್ದ ಮತ್ತು ಬಸವಣ್ಣನು ಯಾಕೆ ʼದಯವೇ ಧರ್ಮದ ಮೂಲʼವೆಂದು ಸಾರುತ್ತಿದ್ದ ಅನ್ನುವ ಪ್ರಶ್ನೆಗಳು ನಮ್ಮನ್ನು ಘಾಸಿಗೊಳಿಸದಿದ್ದರೆ, ನಾವು ಅಧರ್ಮವನ್ನು ಸಂಭ್ರಮಿಸುತ್ತೇವೆ ಹಾಗೂ ಅನೈತಿಕತೆಯನ್ನು ಕೊಂಡಾಡುತ್ತೇವೆ. ಇದಕ್ಕೆ ಸಾಕಷ್ಟು ನಿದರ್ಶನಗಳು ಇಲ್ಲಿ ಭಾರತದಲ್ಲಿ ಯಥೇಚ್ಛವಾಗಿ ನಡೆಯುತ್ತಿವೆ. ಇಂತಹದೊಂದು ಸಾಮಾಜಿಕ, ಧಾರ್ಮಿಕ, ರಾಜಕೀಯ ವಿದ್ಯಮಾನ ತಲೆಯೆತ್ತಲು ಹಾಗೂ ಕೋಮುವಾದವೆ ಅತ್ಯಂತ ಸಾಂದ್ರಗೊಂಡ ಸಾಮಾಜಿಕ-ರಾಜಕೀಯ ಚಿಂತನೆಯಾಗಿ ಬೇರೂರಲು ನಾವು ಧರ್ಮವನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಂಡು ಬಂದಿರುವುದೆ ಕಾರಣವಾಗಿದೆ.

ಸಮಾಜಗಳ ನಡುವಣ ನಂಟನ್ನು ರೂಪಿಸುವ ಮಾಧ್ಯಮವಾಗಿ ಧರ್ಮವೂ ನೆಲೆಗೊಳ್ಳಲಿಲ್ಲ. ಬದಲಾಗಿ ಸಮೂಹಗಳ ಒಡಲಲ್ಲಿ ಪ್ರೀತಿ, ಕರುಣೆ, ಮೈತ್ರಿಯನ್ನು ನೆಲೆಗೊಳಿಸುವ ಧರ್ಮಗಳ ಅಸ್ತಿತ್ವವನ್ನೇ ನಾಶಪಡಿಸುವ ಹುನ್ನಾರಗಳು ನಡೆದವು. ಪರಧರ್ಮಗಳ ಅಸ್ತಿತ್ವಕ್ಕೆ ಘಾಸಿ ಮಾಡುವ ಮನಸ್ಥಿತಿಯನ್ನು ಒಂದು ಆದರ್ಶವನ್ನಾಗಿ ನಂಬಿಸಲಾಗಿದೆ. ನಮ್ಮ ಯುವಜನತೆ ಇಂತಹ ಅಪನಂಬಿಕೆಗೆ ಬಲಿಪಶುಗಳಾಗಿ ಬದುಕಿನ ಮಹೋನ್ನತಿಯನ್ನು ಕಡೆಗಣಿಸಿ, ಬದುಕಿನ ಅಧಪತನದ ದಾರಿಯಲ್ಲಿ ಪಯಣಿಸುತ್ತಿದ್ದಾರೆ.

ಧರ್ಮದ ವೈಚಾರಿಕತೆಯು ಸಾಮಾಜಿಕ ಏಳಿಗೆಗಾಗಿ ಮಾತ್ರವಷ್ಟೇ ಅಲ್ಲ. ಬದಲಾಗಿ ಬದುಕಿನ ದೃಷ್ಟಿಕೋನ ಹಾಗೂ ಮುನ್ನೋಟವನ್ನು ನೆಲೆಗೊಳಿಸುವ ವಿವೇಕವಾಗಿದೆ. ಧರ್ಮ ಎನ್ನುವುದು ಸಮೂಹಗಳಲ್ಲಿ ಜಾತಿ, ಮತ ಪ್ರಜ್ಞೆ ಮತ್ತು ಅಂಧಶ್ರದ್ಧೆಯನ್ನು ಪ್ರೇರೇಪಿಸುವುದಲ್ಲ. ಸರ್ವೋದಯ, ಸಮನ್ವಯ ಹಾಗೂ ಪೂರ್ಣದೃಷ್ಟಿ ಇವು ಧರ್ಮದ ಲಕ್ಷಣಗಳಾಗಬೇಕು. ಈ ತಾತ್ವಿಕ ಹಾದಿಯಲ್ಲಿ ನಮ್ಮ ಸಮೂಹಗಳು ನಡೆಯುವುದಾದರೆ, ಯುವಜನತೆಯೂ ಇದೆ ದಾರಿಯನ್ನು ಅನುಸರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಾಮಾನ್ಯ ಜ್ಞಾನ ಎನ್ನುವುದು ಸಾಮಾಜಿಕ ವಿವೇಕವೂ ಹಾಗೂ ಸಾಂಸ್ಕೃತಿಕ ಅನುಸಂಧಾನದ ಮಾದರಿಯೂ ಹಾಗೂ ಧಾರ್ಮಿಕ ಸಹನೆಯ ನೆಲೆಯೂ ಆಗಿ ರೂಪುಗೊಳ್ಳುತ್ತದೆ.

ನಿಮಗೆ ಏನು ಅನ್ನಿಸ್ತು?
0 ವೋಟ್